ಇಂತಹ ಒಂದೊಳ್ಳೆ ಸ್ವಮೇಕ್ ಕಥೆಯ ಮೂಲಕ, ಬರೀ ರಿಮೇಕ್, ಅಲ್ಲೊಂಚೂರು ಇಲ್ಲೊಂಚೂರು ಕದಿಯೋದು, ವೃತ್ತಿ ಪರತೆಯಿಲ್ಲದೇ ಕಿತ್ತೋಗಿರೊ ಸಿನೆಮಾ ಮಾಡಿ ಕನ್ನಡದ ಪ್ರೇಕ್ಷಕನನ್ನ ಚಿತ್ರ ಮಂದಿರದಿಂದ ದೂರ ಮಾಡ್ತಾ ಇದ್ದ ಕೆಲವು ಕನ್ನಡ ಚಿತ್ರೋದ್ಯಮಿಗಳಿಗೆ ಚಿತ್ರ ರಂಗದಲ್ಲಿ ಗೆಲುವಿಗೆ ಬೇಕಿರುವುದು ವೃತ್ತಿಪರತೆ, ಚಿತ್ರ ನಿರ್ಮಾಣದ ಬಗ್ಗೆ ಪ್ರೀತಿ, ಯಾವ ಚಿತ್ರ ರಂಗಕ್ಕೂ ಕಮ್ಮಿ ಇಲ್ಲದಂತೆ ಕನ್ನಡ ಸಿನೆಮಾವನ್ನು ಮಾಡಿ ತೋರಿಸಬಹುದು ಅನ್ನುವ ಸ್ವಾಭಿಮಾನ ಅನ್ನುವ ಸಂದೇಶವನ್ನು ಯೋಗಿ ಸರಿಯಾಗಿ ಕಳಿಸಿದ್ದಾರೆ !
ಚಿತ್ರದ ವಿಶೇಷತೆಗಳು
- ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ. ಅಂಬಾರಿ, ಇಂತಿ ನಿನ್ನ ಪ್ರೀತಿಯ ನಂತರ ಸತ್ಯಾ ಅವರ ಕ್ಯಾಮರಾ ಕೈ ಚಳಕ ಇಲ್ಲಿ ಎದ್ದು ಕಾಣುತ್ತೆ. "ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ", " ನಾ ನಗುವ ಮೊದಲೇನೇ" ಹಾಡುಗಳ ಒಂದೊಂದು ಫ್ರೇಮ್ ಅಲ್ಲೂ ಅವರ ಪ್ರತಿಭೆ ಎದ್ದು ಕಾಣುತ್ತೆ
- ಅಯ್ಯೋ ಬಿಡಪ್ಪ ಮನೋ ಮೂರ್ತಿಯವರ ಸಂಗೀತದಲ್ಲಿ ಹೊಸತೆನಿಲ್ಲ, ಅದೇ ರಾಗ, ಅದೇ ಟ್ಯೂನ್ ಅನ್ನೋ ಆಪಾದನೆಯನ್ನು ಹೋಗಲಾಡಿಸುವಂತೆ, "ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ", " ನಾ ನಗುವ ಮೊದಲೇನೇ" ಹಾಡುಗಳು ಬಂದಿವೆ. ಚಿತ್ರ ಮಂದಿರದಿಂದ ಆಚೆ ಬಂದ ಮೇಲೆ ಈ ಹಾಡುಗಳನ್ನು ಪದೇ ಪದೇ ಗುನುಗುವಂತಾಗದಿದ್ದರೆ ಹೇಳಿ. ಮುಂಗಾರು ಮಳೆ, ಮಿಲನದ ನಂತರ ಮನೋ ಅವರ ಬೆಸ್ಟ್ ಕಂಪೋಸಿಶನ್ಸ್ ಈ ಚಿತ್ರದಲ್ಲಿವೆ.
- ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ದಿಗಂತ್-ಐಂದ್ರಿತಾ ಜೋಡಿ ಭಟ್ಟರ ಆಯ್ಕೆಯನ್ನು ಸಮರ್ಥಿಸುವಂತೆ ನಟಿಸಿದ್ದಾರೆ. ದಿಗಂತ್ ಸೊಲೊ ಹೀರೊ ಆಗಿ ಗೆದ್ದಿದ್ದಾರೆ ಎಂದೇ ಹೇಳಬಹುದು. ಇಂಟರವಲ್ ಆದ ಮೇಲೆ, ಅವರ ಕೆಲವು ಡಯಲಾಗ್ ಗಳಲ್ಲಿ ಮುಂಗಾರು ಮಳೆ ವಾಸನೆ ಬಡಿದರೂ ಅದು Enjoyable !. ಇನ್ನೂ ಐಂದ್ರಿತಾ " ನೀವು ಮೋಸ ಮಾಡಲ್ಲಾ ತಾನೇ? " ಅನ್ನೋ ದೃಶ್ಯದಲ್ಲಿ ನಿಮ್ಮ ಮನಸ್ಸಿಗೆ ಹತ್ರ ಆಗ್ತಾಳೆ :) ಇಂಟರವಲ್ ಆದ ಮೇಲಿನ ಭಾಗ ಒಂಚೂರು ಸ್ಲೋ, ಆದ್ರೆ ನಿಮಗೆ ಹಾಗನ್ನಿಸುವ ಮುನ್ನವೇ ಭಟ್ರ ಕಥೆಗೊಂದು ಟ್ವಿಸ್ಟ್ ಕೊಟ್ಟು ಬಿಡ್ತಾರೆ ಅನ್ನೋದು ವಿಶೇಷ.
- ಚಿತ್ರಕ್ಕೆ ಅದ್ಭುತವಾದ screen play ಹೆಣೆದಿರುವ ಅಪ್ಪಟ ಕನ್ನಡದ ಪ್ರತಿಭೆ ಪವನ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕು. "ಡಾಲರ್ಸ್ ಡೋಂಟ್ ವರ್ಕ್" ಅನ್ನೋ ಹುಚ್ಚು ಟೆಕ್ಕಿ ಪಾತ್ರದಲ್ಲಿ ಅಭಿನಯಿಸಿರುವ ಪವನ್ ಕುಮಾರ್ ತರಹದ ಪ್ರತಿಭೆಗಳು ಇನ್ನಷ್ಟು ಬರಬೇಕು.
- ಈ ಚಿತ್ರದ ಎಲ್ಲಕ್ಕಿಂತ ದೊಡ್ಡ ವಿಶೇಷ ಅಂದರೆ, ಶಂಕರಪ್ಪ ಪಾತ್ರದಲ್ಲಿ ಅಭಿನಯಿಸಿರುವ ಬಾಗಲಕೋಟೆಯ ರಾಜು ತಾಳಿಕೋಟಿ. ಕಲಿಯುಗದ ಕುಡುಕ ಅನ್ನೋ ಹಾಸ್ಯ ನಾಟಕದ ಕ್ಯಾಸೆಟ್ ಮೂಲಕ ಉತ್ತರ ಕರ್ನಾಟಕದ ತುಂಬೆಲ್ಲ ಖ್ಯಾತಿ ಪಡೆದ ಈ ಕಲಾವಿದನನ್ನು ಭಟ್ಟರು ಬಳಸಿದ ಪರಿ ಸಕತ್ !! ಅಚ್ಚ ಧಾರವಾಡ ಕನ್ನಡದಲ್ಲಿ ಇವರು ನೀಡುವ ನಗೆ ಗುಳಿಗೆಗೆ ಚಿತ್ರ ಮಂದಿರದಲ್ಲಿದ್ದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಅವನೌನ್, ಅವರ timing, ಅವರ body language, ಅವರ ಡಯಲಾಗ್ ನಡು ಟಾಯ್ಮ್ ಹೋಗಿದ್ದೇ ಗೊತ್ತಾಗಲಿಲ್ಲ ನೋಡ್ರಿ .. :)
- ಉತ್ತರ ಕರ್ನಾಟಕ ಭಾಗದಲ್ಲಿನ ಕನ್ನಡವನ್ನು ಚಿತ್ರದ ಮೂಲಕ ಇಡೀ ನಾಡಿಗೆ ಪರಿಚಯಿಸುವ ಭಟ್ಟರ ಪ್ರಯತ್ನ ಹೊಗಳಿಕೆಗೆ ಅರ್ಹವಾದದ್ದು. ನಮ್ಮ ನೆಲದ ಚಿತ್ರಗಳಲ್ಲಿ ಕರ್ನಾಟಕದ ಕನ್ನಡದ ಎಲ್ಲ ಸೊಗಡುಗಳ ಬಳಕೆಯೂ ಆಗಬೇಕು, ಆ ಮೂಲಕ ಎಲ್ಲರ ಕನ್ನಡದ ಪರಿಚಯವೂ ನಾಡಿನ ಎಲ್ಲ ಕನ್ನಡಿಗರಿಗೂ ಆಗಬೇಕು. ರಾಷ್ಟ್ರ ಪ್ರಶಸ್ತಿ ವಿಜೇತ ಗುಲಾಬಿ ಟಾಕೀಸ್ ಚಿತ್ರದಲ್ಲಿ ಕುಂದಾಪುರ ಕನ್ನಡದ ಬಳಕೆಯೂ ಹೊಗಳಿಕೆಗೆ ಪಾತ್ರವಾದದ್ದು . ನಾಡಿನ ಎಲ್ಲ ಜನರ ಆಡು ಭಾಷೆಯನ್ನು ಸಿನೆಮಾ ಮೂಲಕ ಎಲ್ಲರಿಗೂ ಪರಿಚಯಿಸುವುದು ನಾಡಿಗರ ನಡುವೆ ಒಗ್ಗಟ್ಟು ಹೆಚ್ಚಲು ಸಹಕಾರಿ ಎನ್ನುವುದು ನನ್ನ ಅನಿಸಿಕೆ.
ಇನ್ನೇನ್ ಯೋಚನೆ ಮಾಡ್ತಾ ಇದ್ದಿರಾ? ಮನೆ ಮಂದಿಯನ್ನೆಲ್ಲ ಕರ್ಕೊಂಡು ಹೋಗಿ ಚಿತ್ರಮಂದಿರದಲ್ಲಿ ಮನಸಾರೆ ಚಿತ್ರವನ್ನು ಮನಸಾರೆ ಆನಂದಿಸಿ. ನಮ್ಮತನ ಹೊಂದಿರುವ ಒಂದೊಳ್ಳೆ ಚಿತ್ರವನ್ನು ಬೆನ್ನು ತಟ್ಟಿ, ಸೋಲಿನಿಂದ ಕಂಗೆಟ್ಟಿರುವ ಕನ್ನಡ ಚಿತ್ರ ರಂಗಕ್ಕೆ ಹೊಸ ಉಸಿರು ತುಂಬೋ ಕೆಲಸ ಮಾಡಿ.
ನನ್ನ ರೇಟಿಂಗ್: 8/10
ಇನ್ನಷ್ಟು ರೆವ್ಯೂಗಳು:
Yogaraj Bhat strikes again with Manasaare
http://movies.rediff.com/review/2009/sep/25/south-kannada-movie-review-manasaare.htm
ಮನಸಿರೋರು ಮನಸಾರೆ ಸವಿಯಿರಿ 'ಮನಸಾರೆ'
http://thatskannada.oneindia.in/movies/review/2009/09/25-manasaare-kannada-movie-review.html