ಗುರುವಾರ, ಡಿಸೆಂಬರ್ 29, 2011

ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?

ಭಾರತ ಅನ್ನುವುದು ಒಂದು ಒಕ್ಕೂಟ. ಭಾಷೆ, ಸಂಸ್ಕೃತಿ, ಆಚರಣೆ ಹೀಗೆ ಎಲ್ಲದರಲ್ಲೂ ಇಷ್ಟೊಂದು ವೈವಿಧ್ಯತೆಯ ನೆಲೆಯಾಗಿರುವ ಕಾರಣದಿಂದಲೇ ಇಲ್ಲಿ ಆಡಳಿತ ಅನ್ನುವುದು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಒಕ್ಕೂಟ ಮಾದರಿಯ ಆಡಳಿತ ವ್ಯವಸ್ಥೆ ಸರಿ ಅನ್ನುವ ನಿಲುವಿಗೆ ಸಂವಿಧಾನ ಬರೆದವರು ಬಂದಿದ್ದರಾದರೂ ಬ್ರಿಟಿಷರ ಬಳುವಳಿಯಾದ ಸಂವಿಧಾನವನ್ನೇ ಇಟ್ಟುಕೊಂಡ ಕಟ್ಟಿಕೊಂಡ ಭಾರತದ ಸಂವಿಧಾನದಲ್ಲಿ ಬ್ರಿಟಿಷರ ಕಾಲದಲ್ಲಿದ್ದಂತೆಯೇ ಕೇಂದ್ರ ಸರ್ಕಾರಕ್ಕೆ ಹೆಚ್ಚು ಹೆಚ್ಚು ಅಧಿಕಾರ ಕೊಡುವ, ಕೇಂದ್ರಿಕೃತ ವ್ಯವಸ್ಥೆ ಕಲ್ಪಿಸುವ, ರಾಜ್ಯಗಳನ್ನು ಕೇಂದ್ರದ ಅಡಿಯಾಳಾಗಿಸುವ ಹಲವು ಅವಕಾಶಗಳನ್ನು ಸಂವಿಧಾನದಲ್ಲಿ ಕೇಂದ್ರಕ್ಕೆ ಕೊಡಲಾಗಿದೆ. ಆದರೆ ಇಂದು ಆಡಳಿತವನ್ನು ನಿಜಕ್ಕೂ ಪರಿಣಾಮಕಾರಿಯಾಗಿಸಲು ಹೆಚ್ಚೆಚ್ಚು ಅಧಿಕಾರವನ್ನು ವಿಕೇಂದ್ರಿಕರಣಗೊಳಿಸುವ ಅಗತ್ಯ, ರಾಜ್ಯಗಳಿಗೆ ಇನ್ನಷ್ಟು ಅಧಿಕಾರ, ಸ್ವಾಯತ್ತತೆ ಕೊಡಬೇಕಾದ ಬಗ್ಗೆ ಚರ್ಚೆ ನಡೆಯಬೇಕಾದ ಕಾಲ ಬಂದಿದೆ ಅನ್ನಬಹುದು. ಅಗತ್ಯ ಹೀಗಿರುವಾಗ, ರಾಜ್ಯಗಳ ಕೈಯಲ್ಲಿ ಇರುವ ಕೆಲವೇ ಕೆಲವು ಅಧಿಕಾರವನ್ನು ಕೂಡಾ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೇಂದ್ರ ನಿರಂತರವಾಗಿ ಮುಂದಾಗುತ್ತಿದೆ. ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೆಲೆ ಅದರ ಪರಿಣಾಮಗಳ ಬಗ್ಗೆ ಕೆಲ ರಾಜ್ಯಗಳು ಎತ್ತಿರುವ ಪ್ರಶ್ನೆಯ ಬಗ್ಗೆ ಉತ್ತರಿಸುತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಒಕ್ಕೂಟ ವ್ಯವಸ್ಥೆ ಅಡ್ಡಿಯಾಗಬಾರದು ಅನ್ನುವ ಹೇಳಿಕೆ ನೀಡಿದರು. ಅವರ ಹೇಳಿಕೆ ಮತ್ತು ಅದರ ಹಿಂದಿನ ಮನಸ್ಥಿತಿಯ ಬಗ್ಗೆ ನಾವು ಯೋಚಿಸಬೇಕಾಗಿದೆ.

Good government is no substitute for self-government - Gandhi
ಪ್ರಧಾನಿಯವರ ಹೇಳಿಕೆಯಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದರೂ ಪರವಾಗಿಲ್ಲ ಅನ್ನುವ ಅರ್ಥ ಇಣುಕುತ್ತೆ. ಅಸಲಿಗೆ, ಭ್ರಷ್ಟಾಚಾರದ ನಿಗ್ರಹಕ್ಕೆ ಬೇಕಾಗಿರುವ ಹೊಸ ನೀತಿ ನಿಯಮಗಳು, ಕಾನೂನು ಸುಧಾರಣೆ ಮುಂತಾದವುಗಳ ಅಗತ್ಯದ ಬಗ್ಗೆ ಯಾರಿಗೂ ಗೊಂದಲವಿಲ್ಲ, ಆದರೆ ಅದನ್ನು ಸಾಧಿಸಲು ಒಕ್ಕೂಟದಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವುದರಲ್ಲಿ ಏನು ತಪ್ಪಿಲ್ಲ ಅನ್ನುವುದು ರಾಜ್ಯಗಳ ಸ್ವಾಯತ್ತತೆ, ಅಸ್ತಿತ್ವ, ಅಧಿಕಾರದ ವ್ಯಾಪ್ತಿಯ ಬಗ್ಗೆ ಕೇಂದ್ರಕ್ಕಿರುವ ಬದ್ದತೆ ಏನು, ಎಷ್ಟು ಅನ್ನುವ ಪ್ರಶ್ನೆ ಎತ್ತುವುದಿಲ್ಲವೇ?  ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದು ಯಾವುದು ಇಲ್ಲ ಅನ್ನುವ ಮಾತಗಳನ್ನು ಗಾಂಧಿ ಹೇಳಿದ್ದರು." ’good government is no substitute for self-government’. It means a continuous effort to be independent of government control, whether it is foreign government or whether it is national." ಅನ್ನುವ ಮಾತನ್ನು ಮಹಾತ್ಮ ಗಾಂಧಿಯವರು ಹೇಳಿದ್ದರು. ಅಮೇರಿಕದವರು ಇನ್ನೂ ಚೆನ್ನಾಗಿ ಆಳುತ್ತಾರೆ ಎಂದು ನಮ್ಮನ್ನು ನಾವು ಆಳಿಕೊಳ್ಳುವ ಹಕ್ಕನ್ನು ಅವರ ಕೈಗೆ ಕೊಡಲಾಗುವುದೇ? ಇಲ್ಲ ತಾನೇ? ಹಾಗಿದ್ದಲ್ಲಿ ಒಳ್ಳೆಯ ಆಡಳಿತಕ್ಕೆ ಹೊಸ ಕಾನೂನಿನ ನೆಪದಲ್ಲಿ ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸುವ, ಇನ್ನಷ್ಟು ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ, ರಾಜ್ಯಗಳನ್ನು ಹೆಚ್ಚು ಕಡಿಮೆ ತನ್ನ ಅಡಿಯಾಳಾಗಿಸುವಂತಹ ಕೇಂದ್ರದ ಪ್ರಯತ್ನವನ್ನು ಒಪ್ಪಲಾದೀತೆ? ಪ್ರಧಾನಿಯವರ ಮಾತಲ್ಲಿ ಒಕ್ಕೂಟದ ಪಾಲುದಾರರ ಅಭಿಪ್ರಾಯವನ್ನು ಪರಿಗಣಿಸುವ, ಗೌರವಿಸುವ ಧೋರಣೆಗಿಂತಲೂ ಕೇಂದ್ರ ಹೇಳಿದ್ದನ್ನು ರಾಜ್ಯಗಳು ಸುಮ್ಮನೆ ಒಪ್ಪಲಿ ಅನ್ನುವ ನಿಲುವಿದ್ದಂತೆ ಅನ್ನಿಸುವುದಿಲ್ಲವೇ?  

ಸಮ ಗೌರವದ ಒಕ್ಕೂಟ ಎಲ್ಲ ರಾಜ್ಯಗಳ ಹಕ್ಕಲ್ಲವೇ?
ಕಳೆದ ೬೪ ವರ್ಷದ ಆಡಳಿತವನ್ನು ಗಮನಿಸಿದರೆ ಎಲ್ಲ ಕಾಲದಲ್ಲೂ ರಾಜ್ಯಗಳನ್ನು ತನ್ನ ಮೂಗಿನ ನೇರಕ್ಕೆ ನಡೆಸಿಕೊಂಡ ಇತಿಹಾಸ ಕೇಂದ್ರಕ್ಕಿದೆ. ರಾಜ್ಯದ ಪಟ್ಟಿಯಲ್ಲಿದ್ದ ಕಲಿಕೆಯನ್ನು ತನ್ನ ತೆಕ್ಕೆಗೂ ಬರುವಂತೆ ಕಂಕರೆಂಟ್ ಪಟ್ಟಿಗೆ ಸೇರಿಸಿದ್ದಾಗಿರಬಹುದು, ರಾಜ್ಯಗಳ ಆರ್ಥಿಕತೆಯ ಮೇಲಿನ ಪರಿಣಾಮಗಳೇನು, ರಾಜ್ಯಗಳಿಗೆ ಸರಿಯಾಗಿ ಅನುಷ್ಟಾನ ಮಾಡುವ ವ್ಯವಸ್ಥೆ ಇಂದಿದೆಯೇ? ಅನ್ನುವುದನ್ನು ಎಣಿಸದೇ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಯನ್ನು ರಾಜ್ಯಗಳ ಮೇಲೆ ಹೊರಿಸಿದ್ದಾಗಿರಬಹುದು,  ಇಲ್ಲವೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪಾಲು ಕೊಟ್ಟು ಲಾಭ ಬಂದರೆ ನಮಗೆ ಪಾಲು ಕೊಡಿ, ನಷ್ಟ ಆದರೆ ನೀವೇ ತುಂಬಿ ಅನ್ನುವಂತಹ ಒಪ್ಪಂದವನ್ನು ಕರ್ನಾಟಕ ಸರ್ಕಾರದ ಜೊತೆ ಮಾಡಿಕೊಂಡಿದ್ದಾಗಿರಬಹುದು, ಒಕ್ಕೂಟದ ಪಾಲುದಾರ ರಾಜ್ಯಗಳ ಜೊತೆ ಸಮ ಗೌರವದ ಚರ್ಚೆಗೆ ಮುಂದಾಗದೇ ತನ್ನ ನಿಲುವನ್ನು ಎಲ್ಲ ರಾಜ್ಯಗಳು ಒಪ್ಪಲಿ ಅನ್ನುವ ನಿಲುವು ಕೇಂದ್ರದ್ದು ಅನ್ನಲು ಸಾಕಷ್ಟು ಉದಾಹರಣೆಗಳಿವೆ. ಸಮ ಗೌರವದ ಮೇಲೆ ಒಕ್ಕೂಟದ ಪಾಲುದಾರರಾಗಿರುವ ರಾಜ್ಯಗಳು ಇದನ್ನು ಪ್ರಶ್ನಿಸಬೇಕಾಗಿರುವುದು ನ್ಯಾಯವಲ್ಲವೇ?

ಫೆಡರಲ್ ಅಲಾಯನ್ಸ್ ಗೆ ಸಕಾಲ !
ಇರಲಿ, ಕೇಂದ್ರದಲ್ಲಿ ಆಳುವ ರಾಷ್ಟ್ರೀಯ ಪಕ್ಷಗಳಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಇರುವ ಗೌರವ ಎಂತದ್ದು ಅನ್ನುವುದನ್ನು ನೋಡುತ್ತಲೇ ಇದ್ದೇವೆ. ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದಲ್ಲಿರುವಾಗ ಒಕ್ಕೂಟದ ಬಗ್ಗೆ ಮಾತನಾಡುವ ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿವೆ ಎಂಬುದು ಕೂಡಾ ನಮ್ಮ ಕಣ್ಣ ಮುಂದಿದೆ. ಹೀಗಿರುವಾಗ ಇಂತಹ ರಾಜ್ಯಗಳನ್ನು ಹಿಂತಳ್ಳುವ ಕೇಂದ್ರದ ವಿರುದ್ದ ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಧ್ವನಿ ಎತ್ತುತ್ತಿರುವುದು ಒಳ್ಳೆಯ ಸೂಚನೆಯೇ ಸರಿ. ಪ್ರಾದೇಶಿಕ ಪಕ್ಷಗಳೆಲ್ಲವೂ ಸೇರಿ ಫೆಡರಲ್ ಅಲಾಯನ್ಸ್ ತರಹದ ಒಕ್ಕೂಟ ಪರವಾದ ಇನ್ನೊಂದು ಅಲ್ಟರನೇಟಿವ್ ಹುಟ್ಟು ಹಾಕಲು ಇದು ಸಕಾಲ ಅನ್ನಿಸುತ್ತೆ. ಕರ್ನಾಟಕದಲ್ಲೂ ಕೇಂದ್ರದ ದೊರೆಸಾನಿಗಳತ್ತ ಮುಖ ಮಾಡಿಕೊಂಡು ಮಾತೆತ್ತಿದರೆ ದೆಹಲಿಗೆ ಹೋಗಿ ಹೈಕಮಾಂಡ್ ಮುಂದೆ ಮಂಡಿಯೂರುವ, ಅವರ ಕೈಯಲ್ಲಿ ಮೂಗಿಗೆ ತುಪ್ಪ ಸವರಿಸಿಕೊಂಡು ಬರುವ ಕರ್ನಾಟಕದ ಕೆಲ ರಾಜಕಾರಣಿಗಳು ಒಟ್ಟಾಗಿ ಮನಸ್ಸು ಮಾಡಿ ಸರಿಯಾದ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕಲು ಯತ್ನಿಸಿದರೆ ಮತ್ತು ಅಂತಹ ಹೊಸ ಶಕ್ತಿ ದೇಶದಲ್ಲಿರುವ ಇತರ ಸಮಾನ ಮನಸ್ಕ ಪಕ್ಷಗಳೊಡನೆ ಬೆರೆತು ಒಕ್ಕೂಟ ವ್ಯವಸ್ಥೆಯ ಸಬಲೀಕರಣಕ್ಕೆ ಧ್ವನಿ ಎತ್ತಿದರೆ ಖಂಡಿತವಾಗಿಯೂ ಕೇಂದ್ರದ ಈ ಪಾಳೇಗಾರಿಕೆ ಮನಸ್ಥಿತಿಯ ಧೋರಣೆ ಬದಲಾದೀತು.

ಚಿತ್ರ ಕೃಪೆ: indiawires.com

ಗುರುವಾರ, ನವೆಂಬರ್ 24, 2011

ರಾಹುಲ್ ಗಾಂಧಿ ಹೇಳಿಕೆ, ಅಂತರ್-ರಾಜ್ಯ ವಲಸೆ ಮತ್ತು ಕೆಲ ಇಂಗ್ಲಿಷ್ ಮಾಧ್ಯಮಗಳ ಇಬ್ಬಂದಿತನವೂ...

ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುಪಿಯಲ್ಲಿ ಮಾತನಾಡುತ್ತ "ಇನ್ನೆಷ್ಟು ದಿನ ಇದೇ ರೀತಿ ಉತ್ತರಪ್ರದೇಶದ ಯುವಕರು ಭಿಕ್ಷೆ ಕೇಳಿ ಮುಂಬೈನಂತಹ ಊರಿಗೆ ವಲಸೆ ಹೋಗುತ್ತಿರಿ?" ಅಂದರು. ಅಭಿವೃದ್ದಿಯಲ್ಲಿ ಉತ್ತರಪ್ರದೇಶ ಎಷ್ಟು ಹಿಂದೆ ಬಿದ್ದಿದೆ, ಅಲ್ಲಿನ ಯುವಕರಿಗೆ ಒಳ್ಳೆ ಜೀವನ, ದುಡಿಮೆ ಕಲ್ಪಿಸುವಲ್ಲಿ ಅದೆಷ್ಟು ಎಡವಿದೆ, ಅಲ್ಲಿನ ಯುವಕರೆಲ್ಲ ಅನ್ನ ಅರಸಿ ಮುಂಬೈ, ದೆಹಲಿ, ಬೆಂಗಳೂರಿನಂತಹ ಹಸಿರು ಹುಲ್ಲುಗಾವಲಿಗೆ ವಲಸೆ ಹೋಗದೇ ವಿಧಿಯಿಲ್ಲ ಅನ್ನುವಂತೆ ಅಲ್ಲಿನ ಆಡಳಿತ ಹೇಗೆ ಮಾಡಿದೆ ಅನ್ನುವುದನ್ನು ಒಂದು ರೀತಿಯಲ್ಲಿ ಎಲ್ಲರ ಎದುರಿಟ್ಟರು. ಅಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಈ ಮಾತನ್ನು ಅವರು ಹೇಳಿದ್ದರೂ, ಅವರು ಎತ್ತಿರುವ ಪ್ರಶ್ನೆ ಮಾತ್ರ ಎಲ್ಲರೂ ಯೋಚಿಸಬೇಕಾದಂತದ್ದೇ. ಅವರ ಮಾತನ್ನು ಸಹಜವಾಗಿಯೇ ಕೆಲವು ವಲಸೆ ಪರವಾಗಿರುವವರು ವಿರೋಧಿಸಿದರು. ಮೈಸೂರಿನ ಒಂದು ಪ್ರಖ್ಯಾತ ಇಂಗ್ಲಿಷ್ ಬ್ಲಾಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ ಈ ಮಾತಿನ ಮೂಲಕ ಅವರಿಗೂ ಮರಾಠಿಗರ ಹಿತಕ್ಕಾಗಿ ಧ್ವನಿ ಎತ್ತುವ ಎಮ್.ಎನ್.ಎಸ್ ಮತ್ತು ಕನ್ನಡಿಗರ ಹಿತಕ್ಕಾಗಿ ಹೋರಾಡುವ ಕರವೇಗೂ ಯಾವುದೇ ಅಂತರವಿಲ್ಲ ಎಂದು ತೋರಿಸಿದ್ದಾರೆ ಎಂದು ಪ್ರತಿಪಾದಿಸುವ ಅಂಕಣವೊಂದನ್ನು ಪ್ರಕಟಿಸಿತು ಮತ್ತು ಆ ಬಗ್ಗೆ ಚರ್ಚೆಯಾಗಲಿ ಎಂದು ತಮ್ಮ ಅನಿಸಿಕೆ ಬರೆದ ಅನೇಕ ಗೆಳೆಯರ ಅನಿಸಿಕೆಯನ್ನು ಪ್ರಕಟಿಸಲೂ ಇಲ್ಲ. ಇರಲಿ, ಪ್ರಜಾತಂತ್ರದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ತಿಳಿಸುವ ಎಲ್ಲ ಆಯ್ಕೆಯಿದೆ. ಆದರೆ ತಮ್ಮ ಅನ್ನ, ಕಲಿಕೆ, ದುಡಿಮೆ, ಬಾಳುವೆಗಾಗಿ ಧ್ವನಿ ಎತ್ತುವ ಯಾವುದೇ ಸಂಸ್ಥೆ, ಸಂಘಟನೆಯನ್ನು ಈ ಹೊತ್ತಿನ ಹಲ ಮಾಧ್ಯಮಗಳು, ಬುದ್ದಿಜೀವಿಗಳು ನೋಡುವ ರೀತಿ, ಸಂಕುಚಿತ, ಮೂಲಭೂತವಾದಿಗಳು ಎಂದೆಲ್ಲ ಮಾಡಲಾಗುವ ಟೀಕೆಗಳು, ತಮ್ಮ ಹಕ್ಕಿಗಾಗಿ ನಡೆಯುವ ಹೋರಾಟವನ್ನು ಟ್ರಿವಿಯಲೈಸ್ ಮಾಡುವುದನ್ನು ಗಮನಿಸಿದಾಗ ಅನಿಯಂತ್ರಿತ ವಲಸೆ, ಅದರಿಂದಾಗುವ ಡೆಮಾಗ್ರಾಫಿಕ್ ಬದಲಾವಣೆಗಳು, ವಲಸೆಗೆ ಪ್ರೋತ್ಸಾಹ ನೀಡುವ ಭಾಷಾ ನೀತಿ, ತಪ್ಪು ಜನಸಂಖ್ಯಾ ನೀತಿ, ಇವೆಲ್ಲದರಿಂದ ದೇಶದ ವೈವಿಧ್ಯತೆಗೆ ತಗಲುತ್ತಿರುವ ಅಪಾಯ ಮತ್ತು ಅದರಿಂದ ಮುಂದಾಗಬಹುದಾದ ಪರಿಣಾಮಗಳನ್ನು ಈ ಜನರು ಯೋಚಿಸುತ್ತಿಲ್ಲವೆನೋ ಎಂದು ನನ್ನ ಅನಿಸಿಕೆ. ನನ್ನ ಮಾತುಗಳಿಗೆ ಕೆಲವು ಸಮರ್ಥನೆಯನ್ನು ಈ ಕೆಳಗೆ ನೀಡಲು ಬಯಸುತ್ತೇನೆ.

ಉತ್ತರ ಪ್ರದೇಶದ ಯುವಕರಿಗೆ ಕೆಲಸ ಕೊಡಬೇಕಾದದ್ದು ಯಾರು? ಉತ್ತರ ಪ್ರದೇಶವೋ, ಇಲ್ಲ ಮಹಾರಾಷ್ಟ್ರ, ಕರ್ನಾಟಕವೋ?
ಉತ್ತರ ಪ್ರದೇಶದ ಸರ್ಕಾರವಿರುವುದು ಯಾರ ಏಳಿಗೆಗಾಗಿ? ಅಲ್ಲಿನ ಸಂಪತ್ತು, ಸಂಪನ್ಮೂಲ ಬಳಸಿ ಅಲ್ಲಿನ ಜನರಿಗೆ ದುಡಿಮೆ, ಬದುಕಿನ ಅವಕಾಶಗಳನ್ನು ಕಲ್ಪಿಸಲೆಂದೇ ಅಲ್ಲಿನ ಸರ್ಕಾರವಿರುವುದಲ್ಲವೇ? ಜನರಿಗೆ ಒಳ್ಳೆಯ ಆಡಳಿತ ನೀಡದೇ ಜನರು ವಲಸೆ ಹೋಗಲು ಅನುಕೂಲವಾಗುವಂತೆ ರೈಲಿನ ಮೇಲೆ ರೈಲು ಬಿಟ್ಟು ಜನರನ್ನು ಹೊರ ರಾಜ್ಯಕ್ಕೆ ತಳ್ಳುವಂತದ್ದನ್ನೇ ಆಡಳಿತ ಎಂಬಂತೆ ನಡೆದುಕೊಂಡರೆ ಅಂತಹ ವೈಫಲ್ಯತೆಯನ್ನು ಪ್ರಶ್ನಿಸುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ಇದು ಭಾರತ, ಯಾರು ಎಲ್ಲಿ ಬೇಕಾದರೂ ವಲಸೆ ಹೋಗಬಹುದು ಅನ್ನುವ ಮಾತನ್ನೇ ಆಡಿಕೊಂಡು ಎಲ್ಲೆಂದರಲ್ಲಿ ವಲಸೆ ಹೋಗಿ ಅಲ್ಲಿನ ಸ್ಥಳೀಯರ ಉದ್ಯೋಗ, ಬದುಕು, ಸ್ಥಳೀಯತೆಯ  ಹಕ್ಕುಗಳಿಗೆ ತೊಂದರೆ ಆದಾಗ ಅಲ್ಲಿ ನೂರಾರು ಕಾಲದಿಂದ ನೆಲೆಸಿರುವ ಸ್ಥಳೀಯ ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ವಿವಿಧತೆಯಲ್ಲಿ ಏಕತೆ ಎಂದು ಕಟ್ಟಿರುವ ಈ ದೇಶದಲ್ಲಿ ಎಲ್ಲ ಭಾಷಿಕರು ಈ ಒಕ್ಕೂಟವನ್ನು ಸೇರಿದ್ದು ಎಲ್ಲರಿಗೂ ಸಮ ಬಾಳು, ಸಮ ಪಾಲು ದೊರಕಲಿ ಅನ್ನುವ ಕಾರಣಕ್ಕಲ್ಲವೇ? ಹಾಗಿದ್ದಲ್ಲಿ, ಆ ನಂಬಿಕೆಗೆ ತೊಂದರೆ ಆದಾಗ ಅದನ್ನು ಪ್ರಶ್ನಿಸಿದರೆ ಅದನ್ನು ಸಂಕುಚಿತ, ಮೂಲಭೂತವಾದ ಅನ್ನುವ ಹಲವು ಬುದ್ದಿಜೀವಿಗಳಿಗೆ ನನ್ನದೊಂದು ಸರಳ ಉದಾಹರಣೆ ಸಮೇತ ಪ್ರಶ್ನೆ. ಎರಡು ವರ್ಷದ ಹಿಂದೆ ರೈಲ್ವೆ ಇಲಾಖೆಯ ಗ್ರೂಪ್ ಡಿ ಹಂತದ ೪೭೦೦ ಹುದ್ದೆಗಳನ್ನು ಕನ್ನಡಿಗರಿಗೆ ಗೊತ್ತೂ ಆಗದಂತೆ ಬಿಹಾರಿಗಳ ಪಾಲಾಗಿಸುವ ಯತ್ನ ನಡೆದಾಗ ಅದನ್ನು ತಡೆದು ನ್ಯಾಯ ಸಿಗುವಂತೆ ಮಾಡಿದ್ದು ಯಾರು? ಕನ್ನಡ ಪರ ಸಂಘಟನೆಗಳೋ ಇಲ್ಲ ಕೂತು ತೋಚಿದ್ದು ಬರೆಯುವ  ಇಂತಹ ಮಾಧ್ಯಮಗಳೋ? ಸಹಜವಾಗಿ ಜನರ ಬದುಕಿನ ಈ ಪ್ರಶ್ನೆಯನ್ನು ಎತ್ತಿಕೊಂಡು ಅವರಿಗೆ ನ್ಯಾಯ ದೊರಕಿಸುವ ಕೆಲಸ ಈ ಮಾಧ್ಯಮಗಳು ಯಾಕೆ ಮಾಡಲಿಲ್ಲ? ಯಾಕೆ ಕನ್ನಡ ಪರ ಸಂಘಟನೆಗಳು ಬೇಕಾದವು?

ಅನಿಯಂತ್ರಿತ ವಲಸೆಗೆ ಇಂಬು ಕೊಡುತ್ತಿರುವ ಹುಳುಕಿನ ಭಾಷಾ ನೀತಿ
ಇವತ್ತು ಅನಿಯಂತ್ರಿತ ವಲಸೆ ಮುಂಬೈ, ಬೆಂಗಳೂರಿನಂತಹ ಊರಿಗಾಗುತ್ತಿದ್ದಲ್ಲಿ ಅದಕ್ಕೆ ಬಹು ದೊಡ್ಡ ಕಾರಣ ಭಾರತದ ಹುಳುಕಿನ ಭಾಷಾ ನೀತಿ. ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳಿನಡಿ ಕಲಿಕೆ, ಮನರಂಜನೆ, ಆಡಳಿತ,ಉದ್ಯೋಗ ಹೀಗೆ ಎಲ್ಲ ರೂಪದಲ್ಲೂ ಹಿಂದಿಯನ್ನು ಹೇರಿ ಎಲ್ಲೆಡೆ ಹಿಂದಿಗೆ ಮಾನ್ಯತೆ ದೊರಕಿಸುವಂತಹ ಭಾಷಾ ನೀತಿಯಿಂದಾಗಿಯೇ ಇಂದು ಎಲ್ಲೆಡೆ ಹಿಂದಿ ಭಾಷಿಕರ ವಲಸೆ ಅಂಕೆಯಿಲ್ಲದೇ ನಡೆಯುತ್ತಿದೆ. ನೀವೇ ಗಮನಿಸಿ, ಬೆಂಗಳೂರು ಇಲ್ಲ ಮುಂಬೈಗೆ ಬರುವ ಹಿಂದಿ ಭಾಷಿಕನಿಗೆ ಇವತ್ತು ಒಂದಿನಿತಾದರೂ ತೊಡಕಾಗುತ್ತಿದೆಯೇ? ಸ್ಥಳೀಯ ನುಡಿಯ ಒಂದೇ ಒಂದು ಪದ ಕಲಿಯದೇ ಬದುಕಿ, ಬಾಳುವಂತಹ ವ್ಯವಸ್ಥೆ ಕಲ್ಪಿಸಿರುವುದರಿಂದಲೇ ಇವತ್ತು ಈ ಪಾಟಿ ವಲಸೆಯಾಗುತ್ತಿದೆಯಲ್ಲವೇ? ಇಂತಹ ವಲಸೆಯಿಂದಲೇ ಬೆಂಗಳೂರಿನ ಸರ್ಜಾಪುರ, ಮಾರ್ತಹಳ್ಳಿಯಂತಹ ಕೇವಲ ೨೦ ವರ್ಷಗಳ ಹಿಂದೆ ಅಪ್ಪಟ ಕನ್ನಡದವಾಗಿದ್ದ ಹಳ್ಳಿಗಳಲ್ಲಿ ಇವತ್ತು ಕನ್ನಡದ ಧ್ವನಿ ಉಡುಗಿ ಹೋಗುವ ಹಂತ ತಲುಪಿರುವುದು? ಯಾವ ವಲಸೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಅಳಿಸುವಂತದ್ದೋ ಅಂತಹ ವಲಸೆ, ಅದಕ್ಕೆ ಇಂಬು ಕೊಡುವ ಭಾಷಾ ನೀತಿಯ ಬಗ್ಗೆ ಯಾರು ಧ್ವನಿ ಎತ್ತಬೇಕಿತ್ತು? ಇಂತಹ ಮಾಧ್ಯಮಗಳೇ ಅಲ್ಲವೇ? ಆದರೆ ಅಲ್ಲಿನ ಕೆಲ ಜನರಿಗೆ ಇವತ್ತು ಅದಾವುದು ಮುಖ್ಯವಲ್ಲ. ಜನಸಾಮಾನ್ಯರಿಂದ, ಅವರ ನಾಡಿಮಿಡಿತದಿಂದ ಬೇರ್ಪಟ್ಟಿರುವ ಈ ಜನರು, ಸಂಸ್ಥೆಗಳು ಈ ಜನರ ಪರವಾಗಿ ಧ್ವನಿ ಎತ್ತುವವರನ್ನು ಸಂಕುಚಿತ ಮನಸ್ಸಿನ ಮೂಲಭೂತವಾದಿಗಳು ಎಂದು ಟೀಕಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಮತ್ತು ಆ ಮೂಲಕ ತಾವು ಒಂದು ರೀತಿ ತೂಗು ಕುರ್ಚಿಯ ಬುದ್ದಿಜೀವಿಗಳೆಂದು ತೋರಿಸಿಕೊಂಡಿದ್ದಾರೆನ್ನಬಹುದು. ಧರ್ಮದ ವೈವಿಧ್ಯತೆಗೆ ಯಾವುದೇ ತೊಡಕಾಗುವುದನ್ನು ಉಗ್ರವಾಗಿ ಖಂಡಿಸುವ ಈ ಮಾಧ್ಯಮಗಳು ಭಾಷಾ ವೈವಿಧ್ಯತೆಯ ವಿಷಯಕ್ಕೆ ಬಂದಾಗ ಮಾತ್ರ ಯಾಕೆ ಸಂಕುಚಿತತೆಯ ರಾಗ ಎಳೆಯುವುದು? ವೈವಿಧ್ಯತೆ ಯಾವುದಿದ್ದರೂ ಅದು ವೈವಿಧ್ಯತೆಯೇ ಅಲ್ಲವೇ? ಯಾಕೀ ಈ ಇಬ್ಬಂದಿತನ ಹಾಗಿದ್ದರೆ?

ಜನಸಂಖ್ಯಾ ನೀತಿ ತರುತ್ತಿರುವ ಆತಂಕ !
ಮೇಲಿನ ಮಾತೆಲ್ಲ ಒಂದು ತೂಕವಾದರೆ, ಇವತ್ತು ಭಾರತ ಅನುಸರಿಸುತ್ತಿರುವ ಜನಸಂಖ್ಯಾ ನೀತಿ ತಂದಿರುವ ಆತಂಕ ಇನ್ನೊಂದು ತೂಕದ್ದು. ನಮ್ಮ ಕರ್ನಾಟಕದ ಜನಸಂಖ್ಯೆ ಇಂದು ಸುಮಾರು ೬ ಕೋಟಿಯ ಆಸುಪಾಸಿನಲ್ಲಿದೆ. ಆದರೆ ಕರ್ನಾಟಕದಲ್ಲಿ ಇನ್ನು ಮುಂದೆ ಮಕ್ಕಳ, ಯುವಕರ ಸಂಖ್ಯೆಯ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ೨೦೧೧ರ ಜನಸಂಖ್ಯೆಯ ಆಧಾರದಲ್ಲಿ ಕರ್ನಾಟಕ ಈಗಾಗಲೇ ತನ್ನ ರಿಪ್ಲೇಸ್-ಮೆಂಟ್ ಅನುಪಾತವಾದ TFR=2.0 ಅನ್ನು ತಲುಪಿದೆ. (TFR ಅಂದರೆ Total Fertility Rate- ಯಾವುದೇ ಜನಾಂಗ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ). ಆದರೆ 11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ಈಗ ತಲುಪಿರುವ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟದಿಂದಲೂ ಕೆಳಗಿಳಿದು ಕುಸಿಯುತ್ತ ಸಾಗುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುತ್ತ ಹೋಗುವುದು. ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖ ! ಪರಿಣಾಮ? ತಗ್ಗಿರುವ ಜಾಗಕ್ಕೆ ನೀರು ಹರಿವಂತೆ ನಿರಂತರವಾಗಿ ವಲಸೆ ಹೆಚ್ಚುವುದು. ಅಂತಹ ವಲಸೆಗೆ ಇಂಬು ಕೊಡುವ ಭಾಷಾ ನೀತಿಯೂ ಈಗಾಗಲೇ ಇಲ್ಲಿದೆ ಅಂದ ಮೇಲೆ ಪರಿಣಾಮ ಊಹಿಸುವುದು ಕಷ್ಟವೇ? ಇಂತಹ ಕಟ್ಟೆಯೊಡೆದ ವಲಸೆಯ ಪ್ರವಾಹಕ್ಕೆ ಸಿಕ್ಕುವ ಕನ್ನಡ, ಕನ್ನಡಿಗನಿಗೆ ಕೊನೆಗೇನು ಉಳಿವುದು? ಒಂದು ಭಾಷಾ ಸಮೂಹದ ಅಸ್ತಿತ್ವವನ್ನೇ ಕಿತ್ತು ಹಾಕಬಹುದಾದ ಇಂತಹ ತೊಂದರೆಗಳ ಬಗ್ಗೆ ಮಾತನಾಡಬೇಕಾದದ್ದು ಯಾರು? ಇದೇ ಮಾಧ್ಯಮವಲ್ಲವೇ? ಆದರೆ ಅವರಿಗೆ ಇಂತಹ ಶ್ರಮದ ಕೆಲಸವಾವುದು ಬೇಡ. ತುರಿಕೆ ಆದಾಗ ಕೆರೆದುಕೊಳ್ಳುವಂತೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರು parochial, fanatic, fringe elements ಎಂದು ಜರಿದು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ. 
ಜನರಿಗೋಸ್ಕರ ಸಂವಿಧಾನವಿರುವುದು
ಸಂವಿಧಾನದಲ್ಲಿ ಅಂತರ್-ರಾಜ್ಯ ವಲಸೆಯ ಬಗ್ಗೆ ಏನು ಹೇಳಿಲ್ಲ. ಯಾರೂ ಎಲ್ಲಿಗೆ ಬೇಕಾದರೂ ಹೋಗಬಹುದು ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ಒಂದಿದೆ. ಸಂವಿಧಾನವೆನ್ನುವುದು ಇರುವುದು ಜನರಿಗಾಗಿ. ಜನರ (ಯಾರೋ ಒಂದು ಭಾಷಿಕ ಜನರಲ್ಲ, ಎಲ್ಲ ಭಾಷಿಕರು) ಒಳಿತಿಗಾಗಿ ಸಂವಿಧಾನವನ್ನು ತಿದ್ದುವ ಕೆಲಸ ಮಾಡಿದರೆ ತಪ್ಪಿಲ್ಲ. ಮಿತಿ ಮೀರಿದ ವಲಸೆಯಿಂದ ಮುಂಬೈ ಅನ್ನುವುದು ಕೊಳಗೇರಿಯ ನಗರವಾಗಿದೆ ಅಲ್ಲಿನ ಮೂಲಭೂತ ಸೌಕರ್ಯವೆಲ್ಲವೂ ಹಳಿತಪ್ಪಿವೆ ಅನ್ನುವುದು ಅಲ್ಲಿಯ ಜನರ ಅನಿಸಿಕೆ. ಬೆಂಗಳೂರಿನಂತಹ ಊರಲ್ಲೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ದೊಡ್ಡ ಮಟ್ಟದಲ್ಲೇ ಎಲ್ಲರನ್ನೂ ಕಾಡುತ್ತಿವೆ. ವಲಸೆಯನ್ನು ನಿಯಂತ್ರಿಸುವ, ಆಯಾ ನಾಡಿನ ಸ್ಥಳೀಯತೆ, ಬದುಕು, ಸಂಸ್ಕೃತಿ ಮೂರಾಬಟ್ಟೆ ಮಾಡುವಂತಹ ವಲಸೆಯನ್ನು ನಿಯಂತ್ರಿಸುವ ಹಕ್ಕು ಪ್ರತಿ ರಾಜ್ಯಕ್ಕೂ ಕೊಡುವ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯಲು ಇದು ಸಕಾಲ. ಅದು ಬಿಟ್ಟು ಮಾತೆತ್ತಿದರೆ ಸಂವಿಧಾನದ ಹೆಸರು ಹೇಳಿ ಏನು ಮಾಡೋಕಾಗಲ್ಲ ಎಂದು ಕೈ ಚೆಲ್ಲುವ ಧೋರಣೆ ಬಿಡಲು ವಲಸೆಯಿಂದ ತತ್ತರಿಸಿರುವ ರಾಜ್ಯಗಳೆಲ್ಲ ಮುಂದಾಗಬೇಕಿದೆ.

ಕೊನೆಹನಿ: ಸರಿಯಾದ ಮಾಧ್ಯಮವಾಗಿದ್ದರೆ " ಹೌದು, ರಾಹುಲ್ ಗಾಂಧಿ ಹೇಳಿದ್ದು ಸರಿಯಿದೆ.ಪ್ರತಿ ರಾಜ್ಯವೂ ತನ್ನ ಏಳಿಗೆಗೆ ದುಡಿಯಬೇಕು. ಪ್ರತಿ ರಾಜ್ಯದ ಸರ್ಕಾರವೂ ಅಲ್ಲಿನ ಜನರ ಹಿತ ಕಾಯಲೆಂದೇ ಅಧಿಕಾರಕ್ಕೆ ಬಂದಿರುವುದು, ಅಲ್ಲಿನ ಜನರಿಗೆ ದುಡಿಮೆ, ಬದುಕು ರೂಪಿಸುವ ಕೆಲಸ ಮಾಡಬೇಕು. ಪ್ರತಿ ರಾಜ್ಯದ ಅನನ್ಯತೆ, ಸಂಸ್ಕೃತಿ, ನುಡಿ, ಬದುಕು ಎಲ್ಲವೂ ಉಳಿಯಬೇಕು, ಅದಕ್ಕೆ ಮಾರಕವಾಗುವ ವಲಸೆಗೆ ನಿಯಂತ್ರಣವಿರಬೇಕು" ಎಂದು ಮಾತಾಡುತ್ತಿದ್ದರೋ ಇಲ್ಲವೇ "ಇಂತಹ ಹೇಳಿಕೆ ಮೂಲಕ ಮೂಲಭೂತವಾದಿಗಳಿಗೂ ಇವರಿಗೂ ಯಾವ ಅಂತರವೂ ಇಲ್ಲ" ಅನ್ನುವ ಬಾಲಿಶವಾದ ಮಾತಾಡುತ್ತಿದ್ದರೋ ನೀವೇ ಊಹಿಸಿ.

ಮಂಗಳವಾರ, ನವೆಂಬರ್ 8, 2011

ದೆಹಲಿ, ಚೆನ್ನೈ ಮೆಟ್ರೊಗೂ ಬೆಂಗಳೂರಿನ ನಮ್ಮ ಮೆಟ್ರೊಗೂ ಏನ್ ವ್ಯತ್ಯಾಸ ಗೊತ್ತಾ? ..

(ದೆಹಲಿಯ ಮೆಟ್ರೋದಲ್ಲಿ ಭಾಷಾ ಆಯ್ಕೆ ಹಿಂದೀ/ ಇಂಗ್ಲೀಷ್)
ನಮ್ಮ ಮೆಟ್ರೋ ಮಿಂಬಲೆಗೆ ಯಾವಾಗಾದ್ರೂ ಭೇಟಿ ನೀಡಿದ್ದೀರಾ? ಅದಕ್ಕಿಂತ ಮೊದಲು ಭಾರತದ ರಾಜಧಾನಿ ದೆಹಲಿಯ ಮೆಟ್ರೋ ಮಿಂಬಲೆಯನ್ನು ತೆರೆದು ನೋಡಿ. ಇದರ ಮುಖಪುಟ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ದೆಹಲಿ ಮೆಟ್ರೋದ ಹೆಸರು "ದೆಹಲಿ ಮೆಟ್ರೋ" ಅಂತಾ. ಇದರ ಮಿಂಬಲೆಯಲ್ಲಿ ಹಿಂದೀ ಭಾಷೆಯ ಆಯ್ಕೆಯೂ ಇದೆ. ದೆಹಲಿ ಮೆಟ್ರೋದ ಅಧಿಕಾರಿಗಳ ಈ ಪಟ್ಟಿಯನ್ನೊಮ್ಮೆ ನೋಡಿ ಬಿಡಿ. ಎಷ್ಟು ಜನ ಹಿಂದೀ ಅಧಿಕಾರಿಗಳಿದ್ದಾರೆ ಅಂತಾ ಹಾಗೇ ಲೆಕ್ಕ ಹಾಕ್ಕೊಂಡ್ಬುಡಿ.
ಈಗ ಇಲ್ಲಿ ಬನ್ನಿ... ಇನ್ನೂ ಯೋಜನಾ ಹಂತದಲ್ಲಿರೋ ಚೆನ್ನೈ ಮೆಟ್ರೋ ಮಿಂಬಲೆಯನ್ನು ಈಗ ತೆರೆಯೋಣ. 
(ಚೆನ್ನೈ ಮೆಟ್ರೋದಲ್ಲಿ ಭಾಷಾ ಆಯ್ಕೆ ಇಂಗ್ಲೀಷ್/ ತಮಿಳು)
ಚೆನ್ನೈ ಮೆಟ್ರೋದ ಹೆಸರು "ಚೆನ್ನೈ ಮೆಟ್ರೋ ರೈಲ್" ಅಂತಾ. ಇದರ ಮಿಂಬಲೆ ತೆರೆದು ಕೊಳ್ಳುವುದು ಇಂಗ್ಲೀಷಿನಲ್ಲೇ... ಇದರಲ್ಲಿ ತಮಿಳು ಭಾಷೆಯ ಆಯ್ಕೆಯ ಅವಕಾಶವೂ ಇದೆ. ಇದರ ಅಧಿಕಾರಿಗಳ ಪಟ್ಟಿಯನ್ನೂ ನೋಡಿ. ಇದರಲ್ಲಿ ಎಷ್ಟು ಜನ ತಮಿಳು ಭಾಷಿಕರಿದ್ದಾರೆ ಅನ್ನೋದನ್ನೊಂದು ಸಲ ಗುರುತಿಟ್ಟುಕೊಂಡುಬಿಡಿ. 

ಈಗ ಬನ್ನಿ, ಬೆಂಗಳೂರಿನ ನಮ್ಮ ಮೆಟ್ರೋ ಮಿಂಬಲೆಗೆ. ಏನು ಕಾಣುಸ್ತಿದೆ? ಇಂಗ್ಲೀಷಿನ ಮುಖಪುಟವಾ? ದಿಲ್ಲೀಲೂ ಚೆನ್ನೈಲೂ ಅದೇ ಕಾಣೋದಲ್ವಾ? ಮತ್ತೇನು ಹುಡುಕ್ತಿದೀರಾ? ಭಾಷಾ ಆಯ್ಕೆ? ಕನ್ನಡ ಇಲ್ಲಾ ಅಂತಾ ಬೇಸರಾನಾ? ಸ್ವಾಮಿ ಹಾಗೆಲ್ಲಾ ಹುಡುಕಕ್ಕೆ ಹೋಗಿ ಬೇಸರವಾಗಿ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಪತ್ರ ಗಿತ್ರಾ ಬರೆದೀರಾ ಜೋಕೆ! 

(ಬೆಂಗಳೂರಿನ ನಮ್ಮ ಮೆಟ್ರೋಲಿ ಭಾಷಾ ಆಯ್ಕೆಯೇ ಇಲ್ಲ...)
ಅದರ ಮುಖ್ಯಸ್ಥರೇ ನಿಮಗೆ ಖುದ್ದಾಗಿ ಉತ್ತರ ಬರೆದು "ಕನ್ನಡಿಗರು ಸಹನಶೀಲರು. ದಯವಿಟ್ಟು ನೀವು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಭಾಷಾ ದುರಭಿಮಾನ ಸಲ್ಲದು. ಈ ತಾಣಕ್ಕೆ ಪರಭಾಷಿಕರು ಬರುತ್ತಾರೆ ಹಾಗಾಗಿ ಇಂಗ್ಲೀಷು ಹಾಕಿದ್ದೀವಿ..ನೀವು ಹೀಗೆ ಆಕ್ಷೇಪಿಸುವುದು ನಿಮ್ಮ ಪರಭಾಷಾ ದ್ವೇಷದ ಮನಸ್ಥಿತಿ ತೋರಿಸುತ್ತದೆ..." ಎಂದಾರು!

ನಮ್ಮ ಮೆಟ್ರೋಲಿ ಮಾತ್ರಾ ಯಾಕೆ ಕನ್ನಡ ಆಯ್ಕೆ ಇಲ್ಲಾ ಅಂತಾ ಯೋಚಿಸೋ ಮೊದಲು ಇದರ ಅಧಿಕಾರಿಗಳ ಹೆಸರಿನ ಪಟ್ಟಿಯನ್ನೊಮ್ಮೆ ನೋಡಿ. ಎಷ್ಟು ಜನ ಕನ್ನಡದವರಿದ್ದಾರೆ ಹುಡುಕ್ಕೊಳ್ಳಿ. ಏನು? ದುರ್ಬೀನು ಬೇಕಾ?

ಸೋಮವಾರ, ಅಕ್ಟೋಬರ್ 31, 2011

ರಾಜ್ಯೋತ್ಸವಕ್ಕೆ ಸರ್ಕಾರದ ಉಡುಗೊರೆ - 3 ಸಾವಿರ ಶಾಲೆಗಳಿಗೆ ಬೀಗ !

ಇವತ್ತು ಭಾರತ ಒಕ್ಕೂಟದಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನ. ಸರಿಯಾಗಿ 55 ವರ್ಷದ ಹಿಂದೆ ಇದೇ ದಿನದಂದು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಹಲವು ಭಾಗಗಳು ಆಲೂರು ವೆಂಕಟರಾಯರ ಮುಂದಾಳತ್ವದಲ್ಲಿ ನಡೆದ ದಶಕಗಳ ಕಾಲದ ಹೋರಾಟದ ಫಲವಾಗಿ ಒಂದಾದ ಸುದಿನ. ಇಂತಹ ದಿನವೊಂದನ್ನು ನೆನೆಯಲು ನಮ್ಮ ರಾಜ್ಯ ಸರ್ಕಾರ ಎಲ್ಲ ಕನ್ನಡಿಗರಿಗೆ ಒಂದು ಭರ್ಜರಿ ಉಡುಗೊರೆ ಕೊಡುತ್ತಿದೆ. ಏನು ಗೊತ್ತೇ? ಮಕ್ಕಳ ಸಂಖ್ಯೆ ಕಡಿಮೆಯಿದೆ ಅನ್ನುವ ನೆಪವೊಡ್ಡಿ ಸರಿ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚುವ ನಿರ್ಧಾರ ! ಕನ್ನಡದ ಮಕ್ಕಳ ಏಳಿಗೆಗೆ ಬುನಾದಿ ಹಾಕಬೇಕಾದ ಶಾಲೆಗಳನ್ನು ಒಳ್ಳೆ ಅವೆನ್ಯೂ ರಸ್ತೆಯಲ್ಲಿ ಅಂಗಡಿ ಇಟ್ಟಿರೋ ವ್ಯಾಪಾರಿ ರೀತಿಯಲ್ಲಿ ಲಾಭ-ನಷ್ಟದ ಕಣ್ಣಿಂದ ಅಳೆದು ಮುಚ್ಚುವ ನಿಲುವಿಗೆ ಬಂದಿರುವ ಸರ್ಕಾರ "ಸರಿಯಾದ ಕಲಿಕೆ ರೂಪಿಸುವುದು" ನಾಡಿನ ಮಕ್ಕಳ ಬಗ್ಗೆ ತನಗಿರುವ ಕರ್ತವ್ಯದಂತೆ ಕಾಣದೇ ವ್ಯಾಪಾರವೆಂಬಂತೆ ಕಾಣುತ್ತಿರುವುದು ಬರಲಿರುವ ದಿನಗಳ ದಿಕ್ಸೂಚಿಯೇನೊ ಅನ್ನಿಸುವಂತಿದೆ.

ಮೂರು ಸಾವಿರ ಶಾಲೆಗಳಿಗೆ ಬೀಗ
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಕಾರಣ? ಆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ಕ್ಕಿಂತ ಕಡಿಮೆ ಇದೆ ಅನ್ನುವುದು. ಅಲ್ಲದೇ ಇತ್ತಿಚೆಗೆ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಶಿಕ್ಷಣ ಮಂತ್ರಿ ಕಾಗೇರಿಯವರು ಹೇಳಿದ ಇನ್ನೂ ಕೆಲವು ಮಾತುಗಳೆಂದರೆ "ಕೇಂದ್ರ ಸರ್ಕಾರ 20 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕೆಂದು ಆದೇಶಿಸಿದೆ", "ಕೇಂದ್ರದಿಂದಲೇ ಆದೇಶ ಬಂದಿರುವಾಗ ನಾನೇನು ಮಾಡಲು ಸಾಧ್ಯ?", "ಇಂದು ಹಳ್ಳಿಗಳಲ್ಲಿ ಬಹಳಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿಲ್ಲ. ಖಾಸಗಿ ಶಾಲೆಗಳ ಕಡೆ ಹೊರಳುತ್ತಿದ್ದಾರೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಶಿಕ್ಷಣ ಪೂರೈಸುವುದು ಸಾಧ್ಯವಾಗುತಿಲ್ಲ" ನೀವೇ ಯೋಚನೆ ಮಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಅನ್ನುವುದು ಮೂಲಭೂತ ಹಕ್ಕು ಅನ್ನುವ ಕಾನೂನು ತರುತ್ತಿರುವ ಈ ದಿನಗಳಲ್ಲಿ ಇಲ್ಲಿ ಕಡಿಮೆ ಮಕ್ಕಳಿದ್ದಾರೆ, ಅದಕ್ಕೆ ನಷ್ಟ ಆಗುತ್ತೆ ಅದಕ್ಕೆ ಮುಚ್ಚಿ ಇನ್ನೊಂದು ಕಡೆ ಹಾಕ್ತೀವಿ ಅನ್ನಲು ಶಿಕ್ಷಣ ಅನ್ನುವುದು ಲಾಭ-ನಷ್ಟದ ವ್ಯಾಪಾರವೇ? ಕಲಿಕೆ ಅನ್ನುವುದು ಸಂವಿಧಾನದ ಜಂಟಿ ಪಟ್ಟಿಯಲ್ಲಿದ್ದರೂ  (ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಕೈಯಲ್ಲಿರಬೇಕಿತ್ತು !) ಅದರ ಹೆಚ್ಚಿನ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಹೀಗಿರುವಾಗ ಕರ್ನಾಟಕದ ಮಕ್ಕಳ ಕಲಿಕೆಯ ಅಗತ್ಯಗಳ ಬಗ್ಗೆ ಏನೇನು ತಿಳಿಯದ ಯಾರೋ ದೆಹಲಿಯ ಯಜಮಾನರು ಆಜ್ಞೆ ಮಾಡಿದ್ದಾರೆ, ಅದಕ್ಕೆ ಮುಚ್ಚುತ್ತೀವಿ ಅನ್ನುವುದು ಮೈಗೆ ಎಣ್ಣೆ ಸವರಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸವಲ್ಲವೇ?  ಇನ್ನೂ ಮುಂದೆವರೆದು, ಸ್ಪರ್ಧಾತ್ಮಕ ಶಿಕ್ಷಣದ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ ಅನ್ನುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಅಂತಹದೊಂದು ಶಿಕ್ಷಣ ಕೊಡಲಾಗುವುದಿಲ್ಲ, ಅಂತಹ ಶಿಕ್ಷಣ ಬೇಕಿದ್ದರೆ ಖಾಸಗಿ ಶಾಲೆಗಳಿಗೆ ಹೋಗಿ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿರುವುದು ಎಲ್ಲ ವರ್ಗದ ಕನ್ನಡಿಗರ ಕಲಿಕೆಯ ಅಗತ್ಯಗಳನ್ನು ಪೂರೈಸುವ ಬಗ್ಗೆ ಈ ಸರ್ಕಾರಕ್ಕೆ ಎಷ್ಟರ ಮಟ್ಟಿಗಿನ ಬದ್ಧತೆ, ಯೋಗ್ಯತೆ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ? ಸರ್ಕಾರಿ ಶಿಕ್ಷಣ ಕಳಪೆ, ಖಾಸಗಿ ಇಂಗ್ಲಿಷ್ ಶಿಕ್ಷಣವೇ ಶ್ರೇಷ್ಟ ಅನ್ನುವ ಕೆಲವು ಖಾಸಗಿ ಮಾರುಕಟ್ಟೆ ಶಕ್ತಿಗಳ ನಿಲುವನ್ನೇ ಸರ್ಕಾರ ಪ್ರತಿಪಾದಿಸುವುದು ಕನ್ನಡ ಮಾಧ್ಯಮ ಶಿಕ್ಷಣದ ಸಮಾಧಿಯನ್ನೇ ಕಟ್ಟುವ ದಿನಗಳನ್ನು ತಂದೀತು. ಇದೇ ರೀತಿ ಸರ್ಕಾರಿ ಶಾಲೆಗಳನ್ನು ಬೇಕಾಬಿಟ್ಟಿ ಅಂಬಂತೆ ನಡೆಸುತ್ತ ಹೋದಲ್ಲಿ ಇವತ್ತು ಮೂರು ಸಾವಿರ ಮುಚ್ಚಿದವರೂ ನಾಳೆ ಎಲ್ಲ ಶಾಲೆಗಳನ್ನು ಮುಚ್ಚಿ ಬೇಕಾದ್ರೆ ಖಾಸಗಿ ಶಾಲೆಗೆ ಹೋಗಿ, ಇಲ್ಲ ಮನೇಲಿ ಬೆಚ್ಚಗೆ ಮಲ್ಕೊಳ್ಳಿ, ನಾವೇನು ಮಾಡೋಕಾಗಲ್ಲ ಅನ್ನುವ ಉಡಾಫೆಯ ನಿಲುವು ತಳೆದರೂ ಅಚ್ಚರಿಯಿಲ್ಲ.

ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ
ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಇರುವ ಶಾಲೆಗಳನ್ನು ಮುಚ್ಚಿ ಹೋಬಳಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ ಮಾಡ್ತೀವಿ ಅನ್ನುವುದು, ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ದೂಡಿ ಧನ್ಯತಾ ಭಾವ ಅನುಭವಿಸುವುದು, ತಮ್ಮ ಸಿದ್ಧಾಂತವನ್ನು ಯಾವ ಯಾವುದೋ ರೂಪದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತೂರಿಸುವ ಪ್ರಯತ್ನ ಮಾಡುವುದು ಹೀಗೆ ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿರುವ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಒಂದೆಡೆ  ಶಾಲೆ ಮುಚ್ಚಿ, ಹಳ್ಳಿಗಾಡಿನ ಮಕ್ಕಳ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಕಲಿಕೆಯ ಹಕ್ಕನ್ನೇ ಕಸಿದುಕೊಳ್ಳುವ ತೊಂದರೆ ಇದ್ದರೆ, ಇನ್ನೊಂದೆಡೆ ಒಳ್ಳೆಯ ಶಿಕ್ಷಣ ಬೇಕಾ ಖಾಸಗಿ ಶಾಲೆಗೆ ಹೋಗಿ, ಸರ್ಕಾರಿ ಶಾಲೆಯಲ್ಲಿ ಅದನ್ನು ಕೊಡಲಾಗದು ಅನ್ನುವ ಸಂದೇಶದ ಮೂಲಕ ಜನರು ಖಾಸಗಿ ಇಂಗ್ಲಿಷ್ ಶಾಲೆಗಳತ್ತ ಹೋಗುವಂತೆ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮ ತಿಳಿಯಬೇಕೇ? ಸುಮ್ಮನೆ ಬೆಂಗಳೂರನ್ನು ಗಮನಿಸಿ. ಖಾಸಗಿ ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ  ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಮಿತಿ ಮೀರಿ ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ನಾಳೆ ಇದು ಇಡೀ ಕರ್ನಾಟಕವನ್ನು ವ್ಯಾಪಿಸಿದರೂ ಅಚ್ಚರಿಯಿಲ್ಲ. ಇಡೀ ಕರ್ನಾಟಕಕ್ಕೆ ಸಮಗ್ರವಾದ, ಅತ್ಯುತ್ತಮ ಗುಣಮಟ್ಟದ, ಎಲ್ಲ ಹಂತದ ಒಳ್ಳೆಯ ಕಲಿಕೆಯನ್ನು ಕನ್ನಡದಲ್ಲೇ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊರದೇ ಹೋದರೆ ಆಗುವ ಕೆಟ್ಟ ಬದಲಾವಣೆಗಳು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಗಳಾಗಲಿವೆ.

ಒಂದಿಷ್ಟು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು, ಮಾಣೇಕ್ ಶಾ ಮೈದಾನದಲ್ಲಿ ಒಂದು ಕಾರ್ಯಕ್ರಮ ಮಾಡಿ ಸಿಹಿ ತಿನ್ನುವುದು, ಆಮೇಲೆ ಕನ್ನಡ, ಕನ್ನಡಿಗರ ಉಳಿವಿಗೆ ತಾವೆಷ್ಟು ಬದ್ಧ ಎಂದು ಭಾಷಣ ಕೊರೆಯುವುದು, ಕಲೆ, ಸಾಹಿತ್ಯ, ಸಿನೆಮಾ ಅಂತ ಬೊಕ್ಕಸದಿಂದ ಒಂದಿಷ್ಟು ಹಣ ಕೊಡುವುದೇ ಕನ್ನಡದ ಕೆಲಸ ಅಂದುಕೊಂಡಿರುವ ಈ ಸರ್ಕಾರ ನಾಡಿನ ನಾಳೆಯನ್ನು ರೂಪಿಸಬೇಕಾದ ಕಲಿಕಾ ವ್ಯವಸ್ಥೆಗಳತ್ತ ಇದೇ ಕಡೆಗಣನೆ ಮುಂದುವರೆಸಿದರೆ ಕನ್ನಡ, ಕನ್ನಡಿಗನಿಗೆ ಉಳಿಗಾಲವಿಲ್ಲ.

ಕೊನೆ ಹನಿ: ಉದ್ಯಮಿ ಅಜೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ ಮೂಲಕ ಎಲ್ಲ ರೀತಿಯ ವ್ಯವಸ್ಥೆಯುಳ್ಳ ಎರಡೆರಡು ಶಾಲೆಯನ್ನು ಎಲ್ಲ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತೆಗೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಈ ಶಾಲೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲೇ ಕಲಿಕಾ ವ್ಯವಸ್ಥೆ ರೂಪಿಸುವುದು ಮತ್ತು ಅದನ್ನು ರಾಜ್ಯದ ಬೋರ್ಡ್ ನೊಂದಿಗೆ ನೊಂದಾಯಿಸಿಕೊಳ್ಳುವ ಅತ್ಯಂತ ಸಂತೋಷದ ನಿಲುವು ಪ್ರಕಟಿಸಿದ್ದಾರೆ. ನಮ್ಮ ನಾರಾಯಣ ಮೂರ್ತಿ, ಕ್ಯಾ.ಗೋಪಿನಾಥ್ ಅವರು ಇದನ್ನು ಗಮನಿಸುತ್ತಿದ್ದಾರೆ ಅಂದುಕೊಳ್ಳುವೆ. ಇಂತಹ ಕ್ರಮಗಳು ಹೊಳಪು ಕಳೆದುಕೊಳ್ಳುತ್ತಿರುವ ತಾಯ್ನುಡಿ ಶಿಕ್ಷಣದತ್ತ ಎಲ್ಲರೂ ದೊಡ್ಡ ಮಟ್ಟದಲ್ಲಿ ತಿರುಗಿ ನೋಡುವಂತೆ ಮಾಡಲಿ ಆಗಲಾದರೂ ಸರ್ಕಾರಕ್ಕೆ ತನ್ನ ಹೊಣೆಗಾರಿಕೆ ನೆನಪಾಗುವುದಾ ನೋಡೊಣ.

ಭಾನುವಾರ, ಅಕ್ಟೋಬರ್ 23, 2011

ನಮ್ಮ ಮೆಟ್ರೋ ನಿಜಕ್ಕೂ ನಮ್ಮದೇನಾ ?

ಯಾವುದೇ ಊರಿನ ಸಾರಿಗೆ ವ್ಯವಸ್ಥೆ ಒಂದು ರೀತಿಯಲ್ಲಿ ಆ ಊರಿನ ಮುಖವಾಣಿಯಂತೆ ಇರುತ್ತೆ. ಅಲ್ಲಿಗೆ ಬರುವ ಪ್ರಯಾಣಿಕನಿಗೆ, ಪ್ರವಾಸಿಗನಿಗೆ ಆ ಊರು, ಅಲ್ಲಿನ ಜನರ ಭಾಷೆ, ಅಲ್ಲಿನ ಜನ ಜೀವನ ಎಲ್ಲವನ್ನು ಒಂದು ರೀತಿಯಲ್ಲಿ ಪರಿಚಯಿಸುವ ಕನ್ನಡಿಯಾಗಿರುತ್ತೆ. ಬಿ.ಎಂ.ಟಿ.ಸಿಯ ನಂತರ ಈಗ ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯದ ಚಹರೆಯನ್ನೇ ಬದಲಾಯಿಸುವ ಹೊಸ ವ್ಯವಸ್ಥೆಯಾಗಿ ನಮ್ಮ ಮೆಟ್ರೋ ನಗರ ರೈಲು ಸಾರಿಗೆ ಕಳೆದ ಗುರುವಾರದಿಂದ ಶುರುವಾಗಿದೆ. ಹೆಚ್ಚು ಕಡಿಮೆ ೩೦ ವರ್ಷಗಳ ಕಾಲದಿಂದ ಇಂತಹದೊಂದು ವ್ಯವಸ್ಥೆಯ ಬಗ್ಗೆ ಹಲವಾರು ನಾಯಕರು, ಸರ್ಕಾರಗಳು, ನಟ ಶಂಕರ್ ನಾಗ್ ನಂತಹ ಕನಸುಗಾರ ಕನ್ನಡಿಗರು ಕಂಡ ಕನಸು ನನಸಾಗುವ ಮೊದಲ ಹಂತವಾಗಿ ಇದು ಬಂದಿದೆ. ತುಂಬಾ ಸಂತಸದ ವಿಚಾರವೇ ಸರಿ. ನಮ್ಮ ಮೆಟ್ರೋದಲ್ಲಿ ನಮ್ಮತನದ ಅಚ್ಚು ಒತ್ತಿರಬೇಕು ಎಂದುಕೊಂಡು ನೋಡಲು ಹೋದರೆ ಅಚ್ಚರಿ ಕಾದಿದೆ. ಅಲ್ಲಿನ ನಾಮ ಫಲಕ, ಘೋಷಣೆ, ಸುರಕ್ಷೆಯ ಸಂದೇಶ, ಹೀಗೆ ಎಲ್ಲ ವ್ಯವಸ್ಥೆಯಲ್ಲೂ ಯಾರದೋ ಒತ್ತಾಯಕ್ಕೆ ಸಿಲುಕಿಯೋ ಅಥವಾ ಯಾರನ್ನೋ ಒಲೈಸಲೋ ಎಂಬಂತೆ ಕನ್ನಡ, ಇಂಗ್ಲಿಶ್ ಜೊತೆ ಅನಾವಶ್ಯಕವಾಗಿ ಹಿಂದಿಯನ್ನೂ ಬಳಸಿರುವುದು ಕಂಡಾಗ ಹಿಂದಿ ಮೂಲಭೂತವಾದಿಗಳ ಕೈಗೆ ಹಿಂದಿ ಹೇರಿಕೆಯ ಹೊಸ ಅಸ್ತ್ರವಾಗಿ ನಮ್ಮ ಮೆಟ್ರೋ ಕಂಡಿದೆ ಅಂದರೆ ತಪ್ಪಾಗದು.


ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ? 

ನಮ್ಮ ಮೆಟ್ರೋ ರೈಲಿನ ಎಲ್ಲ ಸೂಚನೆ, ನಾಮ ಫಲಕ, ನಿಲ್ದಾಣದ ಎಲ್ಲ ಕಡೆಯಲ್ಲೂ ತ್ರಿ ಭಾಷಾ ಸೂತ್ರ ಅನ್ನುವ ಪೊಳ್ಳು ನೆಪವೊಡ್ಡಿ ಹಿಂದಿ ಬಳಸಿರುವುದು ಯಾಕೆ? ಇಡೀ ಬೆಂಗಳೂರಿನ ಜೀವನಾಡಿಯಾಗಿರುವ  ಬಿ.ಎಂ.ಟಿ.ಸಿ ಕನ್ನವೊಂದನ್ನೇ ಬಳಸಿ ಎಲ್ಲ ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪುತ್ತಿರುವಾಗ ಇಲ್ಲಿ ಮಾತ್ರ ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ?  ಕೇಂದ್ರ ಸರ್ಕಾರ ಈ ಯೋಜನೆಗೆ ಕೊಟ್ಟ ಹಣ ಕೇವಲ ೨೫%. ರಾಜ್ಯದ ಪಾಲು ೩೦% ಜೊತೆಗೆ ಮೆಟ್ರೋ ಆಸ್ತಿ-ಪಾಸ್ತಿಯನ್ನೇ ಆಧಾರವಾಗಿಟ್ಟುಕೊಂಡು ಪಡೆದ ಸಾಲ ಖಾಸಗಿ ಸಾಲ ೪೫% ಇದೆ. ಕೇಂದ್ರ ಕೊಟ್ಟಿರುವ ೨೫% ಹಣ ಕೂಡ ಅವರದ್ದಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಹೋಗೋ ಸಾವಿರಾರು ಕೋಟಿಯ ತೆರಿಗೆ ಹಣದಲ್ಲಿ ನಮಗೆ ಮರಳಿ ಕೊಟ್ಟ ಪುಡಿಗಾಸಷ್ಟೇ. ಹೀಗಿರುವಾಗ ಕೊಟ್ಟಿರುವ ೨೫% ನಮ್ಮದೇ ಹಣಕ್ಕೆ ಎಲ್ಲೆಡೆ ಹಿಂದಿ ಬಳಸಬೇಕು ಎಂದು ಕೇಂದ್ರ ಅಂದರೆ ಅದು ಹಿಂದಿ ಹೇರಿಕೆಯಲ್ಲದೆ ಇನ್ನೇನು?  ಅಷ್ಟಕ್ಕೂ ಹಿಂದಿಯಲ್ಲೇ ಆಡಳಿತ ಮಾಡಬೇಕು ಅನ್ನಲು ಕೇಂದ್ರ ಸರ್ಕಾರ ಅನ್ನುವುದು ಕೇವಲ ಹಿಂದಿ ಭಾಷಿಕರ ಸರ್ಕಾರವೇ? ಭಾರತದ ೨೨ ಭಾಷೆಯವರು ಸೇರಿ ತಾನೇ ಕೇಂದ್ರ ಆಗಿರುವುದು? ಹಾಗಿದ್ದಾಗ ನಿಮ್ಮೂರಲ್ಲೇ ನಿಮ್ಮ ನಿಮ್ಮ ಭಾಷೆ ಏನಾದ್ರೂ ಮಾಡ್ಕೊಳ್ಳಿ ( ಮನೇಲಿ ಇದ್ರೆ ಒಳ್ಳೆಯದು ಅಂತ ಓದಿಕೊಳ್ಳಿ) ಹಿಂದಿ ಮಾತ್ರ ಬಳಸಲೇಬೇಕು ಅಂತ ಕೇಂದ್ರ ಹೇಳುವುದು ಹಿಂದಿಯೇತರ ನುಡಿಗಳ ಬಗ್ಗೆ ಅದಕ್ಕೆಷ್ಟು ಕಾಳಜಿ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ ? ಇರಲಿ ಕೇಂದ್ರ ತನ್ನ ವ್ಯಾಪ್ತಿಯಲ್ಲಿರುವ ಕಛೇರಿಗಳಲ್ಲಿ ಪ್ರಜಾತಂತ್ರ ವಿರೋಧಿಯಾಗಿ  ಹಿಂದಿ ಹೇರುವುದೇ ಗೊತ್ತೇ ಇದೆ, ಒಂದಲ್ಲ ಒಂದು ದಿನ ಅದು ಅಂತ್ಯ ಕಾಣಲು ಬೇಕು. ಆದ್ರೆ ಒಂದು ಊರಿನ ಸ್ಥಳೀಯ ಸಾರಿಗೆಯಲ್ಲೂ ಹಿಂದಿ ಹೇರಬೇಕು ಎಂದು ಅದು ಹೊರಟಿತ್ತೆ ಎಂದು ನೋಡಲು ಹೊರಟರೆ ಕಾಣುವುದು ಇನ್ನೂ ಅಚ್ಚರಿಯ ಸಂಗತಿ. ಅದೇನು ಗೊತ್ತೇ? ನಮ್ಮ ಮೆಟ್ರೋದಲ್ಲಿ ಕಡ್ಡಾಯವಾಗಿ ಹಿಂದಿ ಬಳಸಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಎಂದು ಮೆಟ್ರೋ ಎಂ.ಡಿ ಶ್ರೀ ಶೈಲಂ ಅವರಿಗೆ ಈ ಹಿಂದೆ ಗೆಳೆಯರೊಬ್ಬರು ಮಿಂಚೆ ಕಳಿಸಿ ಕೇಳಿದ್ದಾಗ ಅವರು ಕೊಟ್ಟ ಸ್ಪಷ್ಟ ಉತ್ತರ "ಇಲ್ಲ" ಅನ್ನುವುದಾಗಿತ್ತು. ಆ ಮಿಂಚೆಯಲ್ಲಿ ಏನಿತ್ತು ಎಂದು ಕೆಳಗೆ ನೋಡಿ:
ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?
ಹಾಗಿದ್ದಲ್ಲಿ ಇವತ್ತು ನಮ್ಮ ಮೆಟ್ರೋ ದಲ್ಲಿ ಎಲ್ಲ ಸೂಚನೆ, ಸುರಕ್ಷೆ, ಘೋಷಣೆಗಳಲ್ಲಿ ಹಿಂದಿ ಬಳಸುತ್ತಿರುವುದು ಯಾತಕ್ಕೆ? ಕನ್ನಡವೇ ಬಾರದ ರಕ್ಷಣಾ ಸಿಬ್ಬಂದಿ ಕಾಣಿಸಿಕೊಳ್ಳುತ್ತಿರುವುದು ಯಾಕೆ? ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?  ಇವತ್ತು ಮೊದಲ ಹಂತದಲ್ಲಿ ಮಾಡಿರುವ ಈ ಹೇರಿಕೆ ನಾಳೆ ಎಲ್ಲ ಹಂತದಲ್ಲೂ ಕಾಣುತ್ತೆ.. ಮುಂದೆ? ಬಿ.ಎಂ.ಟಿ.ಸಿ ಯಲ್ಲೂ ತ್ರಿಭಾಷ ಸೂತ್ರ? ಆಮೇಲೆ ಕೆಸ್ಸಾರ್ಟಿಸಿ ? ನಂತರ ಸಾರಿಗೆ ಇಲಾಖೆ? ಎಲ್ಲಿದೆ ಇದಕ್ಕೆ ಕೊನೆ? ಮೊದಲು  ಕನ್ನಡದ ಜೊತೆಗೆ ಹಿಂದಿ ಹಾಕ್ತಿವಿ ಅಂತಾರೆ, ಆಮೇಲೆ ಹಿಂದಿ ಕಲಿತಾಗಿದೆಯಲ್ಲ, ಇನ್ಯಾಕೆ ಕನ್ನಡ, ಸುಮ್ನೆ ದುಡ್ಡು ದಂಡ ಅಂತಾರೆ. ಅಲ್ಲಿಗೆ ಕನ್ನಡದ ತಿಥಿ. ಈ ರೀತಿಯ ನೂರೆಂಟು ವಲಸಿಗರಿಗಾಗಿನ  ಅನುಕೂಲಗಳು ಕರ್ನಾಟಕಕ್ಕೆ ಇನ್ನಷ್ಟು ಪರಭಾಷಿಕರ ವಲಸೆ ಹೆಚ್ಚಿಸಿ, ಸ್ಥಳೀಯ ಡೆಮಾಗ್ರಫಿಯನ್ನು ಬದಲಾಯಿಸಿ, ಅವರೆಂದು ಕನ್ನಡ ಕಲಿತು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡಿ  ಸ್ಥಳೀಯರ ಜೀವನವನ್ನು ಇನ್ನಷ್ಟು ಅಸಹನೀಯ ಮಾಡಬಲ್ಲದೇ  ಹೊರತು ಇನ್ನಾವ ದೊಡ್ಡ ಲಾಭವು ನಮಗೆ ಸಿಗದು. ಈ ಹಿಂದಿ ಹೇರಿಕೆಯನ್ನು ನಾವೆಲ್ಲರೂ ವಿರೋಧಿಸಬೇಕು. ನಮ್ಮ ಮೆಟ್ರೋಗೆ ಹೋದಾಗಲೆಲ್ಲ ನಿಮ್ಮ ಅನಿಸಿಕೆ ಬರೆಯಿರಿ, ಮೆಟ್ರೋ ಅಧಿಕಾರಿಗಳಿಗೆ ಪತ್ರ, ಮಿಂಚೆ, ಕರೆಗಳ ಮೂಲಕ ಈ ಮೂರ್ಖತನವನ್ನು ಕೈ ಬಿಡುವಂತೆ ಒತ್ತಾಯಿಸಿ.  ಇಲ್ಲದಿದ್ದಲ್ಲಿ ಇವತ್ತು ಶುರುವಾದ ಈ ಹೊರ ಬಗೆಯ ಹೇರಿಕೆ ಮುಂದೆ ದೊಡ್ಡ ಅನಾಹುತವನ್ನೇ ತಂದೀತು!
ನೀವು ಬರೆಯಬೇಕಾದ ಮೆಟ್ರೋ ಅಧಿಕಾರಿಗಳ ವಿಳಾಸ: sivasailam@bmrc.co.insudhirchandra@bmrc.co.invasanthrao@bmrc.co.inbmrcl@dataone.in

ಮಂಗಳವಾರ, ಅಕ್ಟೋಬರ್ 11, 2011

ಬಾರದ ಕರೆಂಟು - ಎತ್ತಿರೋ ಪ್ರಶ್ನೆ ನೂರೆಂಟು !


ಮಳೆಗಾಲ ಇನ್ನೇನು ಮುಗೀತು ಅನ್ನೋ ಹೊತ್ತಿಗಾಗಲೇ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ದಿನವೊಂದಕ್ಕೆ 160 ಮಿಲಿಯನ್ ಯುನಿಟ್ ವಿದ್ಯುತ್ತಿಗೆ ಬೇಡಿಕೆ ಇದ್ದರೆ ಕೇವಲ 136 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಿದ್ದು, ಸುಮಾರು 24 ಮಿಲಿಯನ್ ಯುನಿಟ್ ವಿದ್ಯುತ್ತಿನ ಕೊರತೆ ಕರ್ನಾಟಕಕ್ಕೆ ಎದುರಾಗಿದೆ.  ಕಲ್ಲಿದ್ದಲ್ಲಿನ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಅನ್ನುವುದು ಮಾಧ್ಯಮದಲ್ಲಿ ಕಂಡು ಬರುತ್ತಿರುವ ವರದಿಯಾಗಿದೆ.  ಅದೇನೇ ಇದ್ದರೂ ಜನರ ಜೀವನಾಡಿಯಾದ ವಿದ್ಯುತ್ ಪೂರೈಕೆಯ ಈ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿರುವ ರೀತಿ ನೋಡಿದರೆ  ಸಮಸ್ಯೆ ಬಗೆಹರಿಸುವುದಕ್ಕಿಂತ  ಪರಸ್ಪರ ದೋಷಾರೋಪ, ಕೆಸೆರೆರೆಚಾಟಕ್ಕೆ ಹೆಚ್ಚು ಗಮನ ಕೊಟ್ಟಂತಿದೆ ! 
ಯಾವ ಯಾವ ಮೂಲದಿಂದ ಎಷ್ಟೆಷ್ಟು ವಿದ್ಯುತ್ ?
ಕರ್ನಾಟಕದ ವಿದ್ಯುತ್ ಬೇಡಿಕೆ 160 ಮಿಲಿಯನ್ ಯುನಿಟ್ ಗಳಾಗಿದ್ದರೆ ಲಭ್ಯವಿರುವ ವಿದ್ಯುತ್ ಸುಮಾರು 136 ಮಿಲಿಯನ್ ಯುನಿಟ್ ಅನ್ನುತ್ತೆ ಕನ್ನಡಪ್ರಭ ವರದಿ. ಈ 136 ಮಿಲಿಯನ್ ಯುನಿಟ್ ಅಲ್ಲಿ 50 ಮಿಲಿಯನ್ ಯುನಿಟ್ ಜಲ ವಿದ್ಯುತ್ ಮೂಲದಿಂದ ಬಂದರೆ, ಸುಮಾರು 26 ಮಿಲಿಯನ್ ಯುನಿಟ್ ಉಷ್ಣ ವಿದ್ಯುತ್ ಮೂಲದಿಂದಲೂ, ಬಾಕಿ 60 ಮಿಲಿಯನ್ ಯುನಿಟ್ ಹೊರ ರಾಜ್ಯ ಮತ್ತು ಕೇಂದ್ರ ಗ್ರಿಡ್ ನಿಂದ ರಾಜ್ಯ ಖರೀದಿಸುತ್ತೆ.  ಆಂಧ್ರಪ್ರದೇಶದಲ್ಲಿ  ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಿಂದಾಗಿ ಅಲ್ಲಿನ ತೆಲಂಗಾಣ ಪ್ರಾಂತ್ಯದಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆಯಾಗದ ಹಿನ್ನೆಲೆಯಲ್ಲಿ ನಮ್ಮಲ್ಲೇ ಉತ್ಪಾದನೆಯಾಗುವ ಮತ್ತು ಕೇಂದ್ರ ಗ್ರಿಡ್ ನಿಂದ ದೊರಕುವ ಉಷ್ಣ ವಿದ್ಯುತ್ತಿನಲ್ಲಾಗಿರುವ ಕೊರತೆಯಿಂದಾಗಿ ಇವತ್ತು ಕತ್ತಲಲ್ಲಿ ಕೈ ತೊಳೆಯುವಂತಾಗಿದೆ ಅಂಬುದು ಮಾದ್ಯಮಗಳ ವರದಿ. 
ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಹೋಗದೇ ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಮ್ಮ ಮಂತ್ರಿಗಳ ಹೇಳಿಕೆ ನೋಡಿದರೆ ಸಮಸ್ಯೆಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ಯಾರ ತಪ್ಪಿನಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಆರೋಪಿಸುವುದರಲ್ಲೇ ಇಬ್ಬರಿಗೂ ಹೆಚ್ಚು ಸಮಾಧಾನವಾದಂತಿದೆ. ಈ ಸಮಯದಲ್ಲಿ ಇಬ್ಬರಿಗೂ ನಾನು ಕೇಳುವ ಕೆಲವು ಪ್ರಶ್ನೆಗಳೆಂದರೆ 
ರಾಜ್ಯದ ಅಧಿನಾಯಕರಿಗೆ:
  • ಕೇಂದ್ರವನ್ನು ದೂರುತ್ತ ಕೂರುವ ಬದಲು ತಮ್ಮ ಆಳ್ವಿಕೆಯ ಕಳೆದ ಮೂರು ವರ್ಷದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವತ್ತ ತಾವೇನು ಮಾಡಿದ್ದೀರಿ? ತಮ್ಮ ಆಳ್ವಿಕೆಯಲ್ಲಿ ವಿದ್ಯುತ್ ಉತ್ಪಾದನೆ ಎಷ್ಟರ ಮಟ್ಟಿಗೆ ಹೆಚ್ಚಿದೆ? 
  • ಎಸ್ಕಾಮ್ ಕಂಪನಿಗೆ ರಾಜ್ಯ ಸರ್ಕಾರ ಕೊಡಬೇಕಿರುವ ಬಾಕಿ 12,000 ಕೋಟಿ ರೂಪಾಯಿಗಳು ಅನ್ನುತ್ತೆ ಮಾಧ್ಯಮ ವರದಿ. ವಿದ್ಯುತ್ ವ್ಯವಸ್ಥೆಯೇ ಕುಸಿದು ಬೀಳುವ ಹಂತದಲ್ಲಿರುವಾಗಲೂ ರೈತರಿಗೆ ಉಚಿತ ವಿದ್ಯುತ್ ಅನ್ನುವ ಪಾಪುಲಿಸ್ಟ್ ಕ್ರಮಗಳಿಗೆ ಜೋತು ಬಿದ್ದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದು ಯಾಕೆ? ಹೋಗಲಿ,  ಆಗಾಗ ವಿದ್ಯುತ್ ದರ ಏರಿಸುವುದನ್ನು ಬಿಟ್ಟು ಈ ಬಾಕಿ ತೀರಿಸಲು ಇನ್ಯಾವ ಕ್ರಮ ಕೈಗೊಂಡಿದ್ದೀರಿ?
  • ತೆಲಂಗಾಣ ಹೋರಾಟದ ಸಕಲ ಜನುಲಾ ಸಮ್ಮೆ ಹೋರಾಟ ಶುರುವಾಗಿ 29 ದಿನಗಳಾದವು. ಈ ಸಮಸ್ಯೆ ಇಂತಹದೊಂದು ವಿಪರೀತಕ್ಕೆ ಹೋಗಬಹುದು ಅನ್ನುವ ಕೊಂಚ ಮುಂದಾಲೋಚನೆಯೂ ತಮಗೆ ಇಲ್ಲದಾಯಿತೇ? ಕಳೆದ 29 ದಿನಗಳಲ್ಲಿ ಸರ್ವ ಪಕ್ಷದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ಕಲ್ಲಿದ್ದಲ್ಲಿನ ವ್ಯವಸ್ಥೆ  ಕಲ್ಪಿಸಿಕೊಳ್ಳಲು ಯಾಕೆ ಮುಂದಾಗಲಿಲ್ಲ? 
  • ಹೋಗಲಿ, ಸರ್ವ ಪಕ್ಷ ಸಭೆಗೆ ಪ್ರತಿಪಕ್ಷಗಳು ತಯಾರಿಲ್ಲ ಅಂದುಕೊಳ್ಳೊಣ, ತಮ್ಮ ಪಕ್ಷದ 19 ಜನ ಸಂಸತ್ ಸದಸ್ಯರಿದ್ದಾಗಲೂ ಅವರನ್ನೆಲ್ಲ ಸೇರಿಸಿ ದೆಹಲಿಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಯಾಕೆ ಮುಂದಾಗಿಲ್ಲ? ಕೇಂದ್ರವನ್ನು ದೂರುವುದು ಹೆಚ್ಚು ಸುಲಭ ಅನ್ನುವ ಕಾರಣಕ್ಕೊ?
ಕೇಂದ್ರದಲ್ಲಿ ಮಂತ್ರಿಗಳಾಗಿರುವ  ನಮ್ಮ ನಾಡಿನ  ದೊರೆಸಾನಿಗಳಿಗೆ:
  • ಕೇಂದ್ರ ಮತ್ತು ಆಂಧ್ರ ಪ್ರದೇಶ ಸರ್ಕಾರದ ಜಂಟಿ ಒಡೆತನದಲ್ಲಿರುವ ಸಿಂಗರೇಣಿ ಗಣಿಯಿಂದ ಕಲ್ಲಿದ್ದಲು ತರಿಸಿಕೊಳ್ಳಲು ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆ ಗಣಿಯ ಕಲ್ಲಿದ್ದಲ್ಲಿನ ಮೇಲೆ ನಮಗೆ ಇಂತಹದೊಂದು ಅವಲಂಬನೆ ಇರುವಾಗ ಒಪ್ಪಂದ ಮಾಡಿಕೊಂಡ ರಾಜ್ಯಗಳಿಗೆ ಒಪ್ಪಂದದನ್ವಯ ಸಮರ್ಪಕ ಕಲ್ಲಿದ್ದಲು ಪೂರೈಸಲು ಯಾವ ಕ್ರಮವನ್ನು ಯಾಕೆ ಕೈಗೊಂಡಿಲ್ಲ? ಒಂದು ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡುವಂತಹ ಇಂತಹ ಗಂಭೀರ ಸಮಸ್ಯೆ ಬಂದಾಗಲೂ ಮಧ್ಯ ಪ್ರವೇಶಿಸಿ ಪರಿಹಾರ ನೀಡುವಂತೆ ತಾವುಗಳು ಯಾಕೆ ಮನವಿ ಮಾಡಿಲ್ಲ? 
  • ಪಡೆದ  ಕಲ್ಲಿದ್ದಲಿಗೆ ಹಣ ಪಾವತಿಸುವಾಗ ಕರ್ನಾಟಕವೂ ಹೀಗೆ ಬೇಕಾಬಿಟ್ಟಿ ವರ್ತಿಸಿದರೆ ನಿಮ್ಮ ಕೇಂದ್ರ ಸರ್ಕಾರ ಕೇಳುವುದೇ?
  • ಆಂಧ್ರದ ಮುಖ್ಯಮಂತ್ರಿ ಮನವಿ ಮಾಡಿದ ತಕ್ಷಣ ಅಲ್ಲಿಗೆ ಪೂರ್ವ ಗ್ರಿಡ್ ನಿಂದ 800 ಮೆಗಾ ವ್ಯಾಟ್ ವಿದ್ಯುತ್ ಪೂರೈಸಲು ಮುಂದಾಗುವ ಕೇಂದ್ರ ಕರ್ನಾಟಕದ ಮನವಿಗೆ ಸ್ಪಂದಿಸದಿರುವುದು ಏನು ತೋರಿಸುತ್ತೆ? ಒಕ್ಕೂಟದಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾದವರು ತಮ್ಮ  ಪಕ್ಷದ ಆಡಳಿತ ಇರುವ ರಾಜ್ಯದ ನೋವಿಗೆ ಮಾತ್ರ ಸ್ಪಂದಿಸುವುದು ಒಕ್ಕೂಟಕ್ಕೆ ಬಗೆಯುತ್ತಿರುವ ಅಪಚಾರವಲ್ಲವೇ? ಇದರ ಬಗ್ಗೆ ತಮ್ಮ ಸರ್ಕಾರದ ಗಮನ ತಾವುಗಳು ಯಾಕೆ ಸೆಳೆದಿಲ್ಲ?
  • ಓರಿಸ್ಸಾ, ಮಹಾರಾಷ್ಟ್ರಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳೊಣವೆಂದರೆ ಸರಿಯಾದ ರೈಲ್ವೇ ಮಾರ್ಗಗಳು ಇಲ್ಲದಿರುವುದೇ ಸಮಸ್ಯೆಯಾಗಿದೆ ಅನ್ನುವುದು ಶೋಭಾ ಕರಂದ್ಲಾಜೆಯವರ ಹೇಳಿಕೆ. ಹಾಗಿದ್ದಲ್ಲಿ, ರಾಜ್ಯದ ರೈಲ್ವೇ ಯೋಜನೆಗಳ ತ್ವರಿತ ಅನುಷ್ಟಾನಕ್ಕಾಗಿ ನಿಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇದಕ್ಕಿಂತ ಒಳ್ಳೆಯ ಸಂದರ್ಭವುಂಟೇ?  
ಪರಸ್ಪರ ಕೆಸರೆರಚಾಟ, ರಾಜಕೀಯ ಮೇಲಾಟ ಬಿಟ್ಟು ಇನ್ನಾದರೂ ಒಂದು ಧ್ವನಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ರೆ  ಕತ್ತಲಲ್ಲಿ ಕೈ ತೊಳೆಯುತ್ತಿರುವ ನಮ್ಮ ಜನರು, ಉದ್ದಿಮೆಗಳು, ರೈತರು, ವಿಧ್ಯಾರ್ಥಿಗಳು ಎಲ್ಲರೂ ನಿಟ್ಟುಸಿರು ಬಿಟ್ಟಾರು.  ಮಾಡ್ತಿರಾ ಅಧಿನಾಯಕರೇ, ದೊರೆಸಾನಿಗಳೇ? 

ಮಂಗಳವಾರ, ಸೆಪ್ಟೆಂಬರ್ 20, 2011

ಮೋದಿ ಉಪವಾಸವೂ, ಬಿಜೆಪಿಯ ದ್ವಂದ್ವ ನಿಲುವುಗಳೂ..

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಶಾಂತಿ, ಸೌಹಾರ್ದತೆ ಬೆಳೆಯಲಿ ಎಂದು ಸದ್ಭಾವನಾ ಮಿಶನ್ ಹೆಸರಿನಲ್ಲಿ ಉಪವಾಸ ಕೈಗೊಂಡದ್ದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಯಿತು. ಗುಜರಾತಿನ ಮೇಲೆ, ಅದರ ಅಸ್ಮಿತೆಯ ಮೇಲೆ ಕಳೆದ ಹತ್ತು ವರ್ಷಗಳಿಂದಲೂ ಬೇರೆ ಬೇರೆ ಮಾಧ್ಯಮಗಳು, ಬುದ್ದಿಜೀವಿಗಳು, ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೂ ಈ ಉಪವಾಸದ ಮೂಲಕ ಶಾಂತಿಯ ಉತ್ತರ ನೀಡುತ್ತಿದ್ದೇನೆ ಅನ್ನುವುದು ಮೋದಿಯವರ ವಾದವಾಗಿತ್ತು. ರಾಷ್ಟ್ರೀಯ ಪಕ್ಷವೊಂದರ ಪ್ರತಿನಿಧಿಯಾಗಿದ್ದು ಗುಜರಾತಿನ ಅಸ್ಮಿತೆ, ಗುಜರಾತಿನ ಸ್ವಾಭಿಮಾನ, ಗುಜರಾತಿನ ಏಳಿಗೆ ಅಂತ ಸ್ಥಳೀಯತೆಯ ಮಂತ್ರ ಜಪಿಸುತ್ತ ಒಕ್ಕೂಟ ವ್ಯವಸ್ಥೆ(federalism)ಯಲ್ಲಿ ರಾಜ್ಯಗಳ ಏಳಿಗೆಯಿಂದಲೇ ದೇಶದ ಏಳಿಗೆ ಸಾಧ್ಯ ಅನ್ನುವ ಸಂದೇಶ ಕೊಟ್ಟ ಅವರಿಗೆ ಅದೊಂದು ಕಾರಣಕ್ಕೆ ಅಭಿನಂದಿಸುವೆ. ಆದರೆ ಹಲವು ಸಂದರ್ಭಗಳಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರು ಪ್ರತಿನಿಧಿಸುವ ಪಕ್ಷಕ್ಕಿರುವ ದ್ವಂದ್ವದ ನಿಲುವುಗಳಿಂದ ಇವರಿಗಾಗಲಿ, ಇವರ ಪಕ್ಷಕ್ಕಾಗಲಿ ಭಾರತಕ್ಕೆ ಒಕ್ಕೂಟ ವ್ಯವಸ್ಥೆಯೆನ್ನುವ ಆಡಳಿತ ವ್ಯವಸ್ಥೆ ಬೇಕು ಎಂಬ ಬಗ್ಗೆ  ನಿಜಕ್ಕೂ ಪೂರ್ತಿ ಬದ್ಧತೆ ಇದೆಯೇ ಅನ್ನುವ ಬಗ್ಗೆ ನನ್ನಲ್ಲಿ ಅನುಮಾನಗಳಂತೂ ಸಾಕಷ್ಟಿವೆ !

ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆ
ಮೊನ್ನೆ ಮೊನ್ನೆ ಕೇಂದ್ರದ ಸರ್ಕಾರ ಗುಜರಾತಿನಲ್ಲಿ ಹಲವು ವರ್ಷಗಳಿಂದ ಲೋಕಾಯುಕ್ತ ಹುದ್ದೆಗೆ ಗುಜರಾತ್ ಸರ್ಕಾರ ಯಾರನ್ನು ನೇಮಿಸಿಲ್ಲ ಎಂದು ಅಲ್ಲಿನ ರಾಜ್ಯಪಾಲರ ಮೂಲಕ ತಾನೇ ಮುಂದೆ ನಿಂತು ಲೋಕಾಯುಕ್ತರ ನೇಮಕ ಮಾಡಿತು. ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ಒಕ್ಕೂಟ ವಿರೋಧಿ ಧೋರಣೆ ತೋರಿಸಿದ ಕೇಂದ್ರದ ಪ್ರತಿನಿಧಿಯಾದ ರಾಜ್ಯಪಾಲರ ವಿರುದ್ದ ಕೆಂಡಾಮಂಡಲವಾದ ಬಿಜೆಪಿ ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಡೆ ಎಂದು ರಾಷ್ಟ್ರಪತಿಗಳವರೆಗೆ ಹೋಗಿ ಪ್ರತಿಭಟಿಸಿತು. ಆದರೆ ಇದೇ ಬಿಜೆಪಿ ಕರ್ನಾಟಕದಂತಹ ರಾಜ್ಯದಿಂದ ರಾಜ್ಯಸಭೆಗೆ ಸ್ಥಳೀಯರನ್ನು ಆರಿಸಿ ಕಳಿಸಿ ಎಂದಾಗ, ನಮ್ಮದು ರಾಷ್ಟ್ರೀಯ ಪಕ್ಷ, ಹೀಗೆಲ್ಲ ಪ್ರಾಂತೀಯ ವಾದ ಒಪ್ಪುವುದಿಲ್ಲ ಎಂಬಂತೆ ವರ್ತಿಸಿ ಪರ ರಾಜ್ಯದ, ಕರ್ನಾಟಕದ ಬಗ್ಗೆ ನಯಾ ಪೈಸೆ ಕೆಲಸ ಮಾಡದ ನಿವೃತ್ತ ನಟಿಮಣಿಯೊಬ್ಬರನ್ನು, ಆಂಧ್ರದಲ್ಲಿ ಒಂದೇ ಒಂದು ಚುನಾವಣೆ ಗೆಲ್ಲಲಾಗದ ಮಹಾನ್ ರಾಷ್ಟ್ರನಾಯಕರೊಬ್ಬರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ಕಳಿಸಿತು. ಅಷ್ಟೇ ಅಲ್ಲ ರಾಜ್ಯಗಳನ್ನು ಪ್ರತಿನಿಧಿಸಲೆಂದೇ ಇರುವ ರಾಜ್ಯಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರಬೇಕು ಅನ್ನುವ ರಾಜ್ಯದ ಪರವಾಗಿದ್ದ ನಿಯಮವನ್ನು ಸಡಿಲಿಸಿ, ಯಾರೂ ಬೇಕಾದರೂ ಬಂದು ನಿಲ್ಲಬಹುದು ಅನ್ನುವಂತೆ ಬದಲಾಯಿಸಿದ್ದು ಮತ್ತು ಆ ಮೂಲಕ ಕನ್ನಡೇತರರನ್ನು ರಾಜ್ಯಸಭೆಗೆ ಕಳಿಸುವಂತಾಗಿದ್ದು ಇದೇ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಮಾಡಿದ ಕೆಲಸದಿಂದ ಅನ್ನುವುದನ್ನು ನೋಡಿದರೆ ಇವರ ಒಕ್ಕೂಟದ ಪರವಾಗಿನ ಎಲ್ಲ ಮಾತುಗಳು ತಮ್ಮ ಅನುಕೂಲಕ್ಕೆ ತಕ್ಕಾಗ ಮಾತ್ರ ಅನ್ನಿಸುವುದಿಲ್ಲವೇ? 

ದೀನ್ ದಯಾಳ್ ಉಪಾಧ್ಯಾಯ್ ಒಕ್ಕೂಟ ವ್ಯವಸ್ಥೆಯ ಪರವಾಗಿರಲಿಲ್ಲ !
ಹಿಂದೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಾದ ಇಷ್ಟೊಂದು ಭಾಷೆ, ಸಂಸ್ಕೃತಿ, ಆಚರಣೆ, ಜೀವನಶೈಲಿಯ ವೈವಿಧ್ಯತೆ ಇರುವ ದೇಶಕ್ಕೆ ಹೊಂದುವ ವ್ಯವಸ್ಥೆ ಯಾವುದಿರಬೇಕು ಅನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ನಂತರವೇ ಭಾರತಕ್ಕೆ ಒಕ್ಕೂಟ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದ ದೀನ್ ದಯಾಳ್ ಉಪಾಧ್ಯಾಯ್ ಅವರು ಈ ರೀತಿಯ ವ್ಯವಸ್ಥೆಯನ್ನು ಪ್ರತಿಭಟಿಸಿ, ಭಾರತಕ್ಕೆ ಏಕಕೇಂದ್ರ ಪ್ರಭುತ್ವ ಬೇಕೆ ಹೊರತು ಒಕ್ಕೂಟ ವ್ಯವಸ್ಥೆಯಲ್ಲ ಎಂದು ವಾದಿಸಿದ್ದರು. ಏಪ್ರಿಲ್ ೨೨-೨೫, ೧೯೬೫ ರಂದು ಮುಂಬೈನಲ್ಲಿ ಅವರು ನೀಡಿದ 4 ಅಂಶಗಳ ಭಾಷಣದಲ್ಲಿ ಹೇಳಿದ್ದು ಹೀಗಿತ್ತು:
According to the first para of the Constitution, "India that is Bharat will be a federation of States", i.e. Bihar Mata, Banga Mata, Punjab Mata, Kannada Mata, Tamil Mata, all put together make Bharat Mata. This is ridiculous. We have thought of the provinces as limbs of Bharat Mata and not as individual mother. Therefore our constitution should be unitary instead of federal.

ಅದರ ಬಗ್ಗೆ ಹೆಚ್ಚಿನ ಓದಿಗೆ ಕರ್ನಾಟಿಕ್ ಬ್ಲಾಗಿನಲ್ಲಿ ಬಂದಿದ್ದ ಒಂದು ಬರಹದ ಈ ಕೊಂಡಿ ನೋಡಿ.

ಕಾಂಗ್ರೆಸಿನಷ್ಟೇ ಟೊಳ್ಳು !
ಯಾವ ಪಕ್ಷದ ಸ್ಥಾಪಕರಲ್ಲೇ ಭಾರತವೆನ್ನುವುದು ಒಕ್ಕೂಟವಾಗದೇ ದೆಹಲಿಯೆಂಬ ಅಧಿಕಾರ ಕೇಂದ್ರದ ಅಡಿಯಾಳಾಗಿರಬೇಕು ಅನ್ನುವ ನಿಲುವಿತ್ತೋ, ಆ ಪಕ್ಷಕ್ಕೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ನಿಜವಾದ ಕಾಳಜಿ ಇದೆ ಅನ್ನುವುದನ್ನು ನಂಬುವುದು ಕೊಂಚ ಕಷ್ಟವಲ್ಲವೇ? ಕಳೆದ ಹಲ ದಶಕಗಳ ರಾಜಕೀಯದ ಅನುಭವದಿಂದ  ಭಾರತಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯೆಂಬ ನಿಲುವಿಗೆ ಬಿಜೆಪಿ ಬಂದಿದ್ದಲ್ಲಿ ಅದು ಸ್ವಾಗತಾರ್ಹ. ಆದರೆ ಗುಜರಾತಿನಲ್ಲೊಂದು ರೀತಿ, ಕರ್ನಾಟಕದಲ್ಲೊಂದು ರೀತಿ ನಡೆದುಕೊಳ್ಳುವ ಅವರ ನಡವಳಿಕೆ ಗಮನಿಸಿದರೆ ಒಕ್ಕೂಟ ವ್ಯವಸ್ಥೆಯ ಬಗೆಗಿನ ಅವರ ಬದ್ಧತೆ ಕಾಂಗ್ರೆಸಿನಷ್ಟೇ ಟೊಳ್ಳಾಗಿದೆ ಅನ್ನಿಸದೇ ಇರದು.

ಮಂಗಳವಾರ, ಸೆಪ್ಟೆಂಬರ್ 6, 2011

ಯಾಕೆ ಕರ್ನಾಟಕದ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಮಾಯವಾಗುತ್ತಿದೆ?

ಇತ್ತಿಚೆಗೆ ಎಲ್.ಐ.ಸಿ ಕಚೇರಿಯಿಂದ ಪಾಲಿಸಿಯೊಂದರ ಬಗ್ಗೆ ಪತ್ರವೊಂದು ನನ್ನ ಹತ್ತಿರದ ಸಂಬಂಧಿಯೊಬ್ಬರಿಗೆ ಬಂದಿತ್ತು. ಅವರ ಮನೆಗೆ ಹೋದಾಗ ಅವರು ಅದನ್ನು ನನಗೆ ನೀಡಿ, ಏನಂತ ಬರೆದಿದ್ದಾರೆ ಅಂತ ಕೇಳಿದರು. ಆ ಪತ್ರ ನೋಡಿದರೆ ಕೇವಲ ಇಂಗ್ಲಿಷ್ ಮತ್ತು ಹಿಂದೀಯಲ್ಲಿ ಮಾಹಿತಿ ಹೊಂದಿತ್ತು. ಪತ್ರ ಓದಿ, ಅವರಿಗೆ ಏನು ಮಾಡಬೇಕು ಅನ್ನುವುದನ್ನೆನೋ ಹೇಳಿದೆ, ಆದರೆ ಅಚ್ಚರಿ ಅನಿಸಿದ್ದು, ಬೆಂಗಳೂರಿನ ಸ್ಥಳೀಯ ಎಲ್.ಐ.ಸಿ ಕಚೇರಿಯಿಂದ ಬಂದ ಪತ್ರ ಯಾಕೆ ಕನ್ನಡದಲ್ಲಿಲ್ಲ ಅನ್ನುವುದು. "ಭಾರತೀಯ ಜೀವ ವಿಮಾ ನಿಗಮ, ಬೆಂಗಳೂರು ವಿಭಾಗ" ಅನ್ನುವ ನಾಲ್ಕು ಪದ ಕನ್ನಡದಲ್ಲಿದ್ದದ್ದು ಬಿಟ್ಟರೆ ಇನ್ನೆಲ್ಲ ಮಾಹಿತಿ ಹಿಂದೀ ಮತ್ತು ಇಂಗ್ಲಿಷಿನಲ್ಲಿತ್ತು. ನಾಲ್ಕು ಪದ ಕನ್ನಡ ಬರೆಯುವವರಿಗೆ ಅದ್ಯಾಕೆ ಇಡೀ ಪತ್ರವನ್ನೇ ಕನ್ನಡದಲ್ಲಿ ಕೊಡಲಾಗುತ್ತಿಲ್ಲ, ಇದರ ಹಿಂದಿರುವ ಕಾರಣವಾದರೂ ಏನು ಅನ್ನುವುದನ್ನು ತಿಳಿಯಬೇಕು ಅನ್ನಿಸಿ ಎಲ್.ಐ.ಸಿಯ ವೆಬ್ ಸೈಟ್ ಮತ್ತಿತರ ಸರ್ಕಾರಿ ತಾಣಗಳನ್ನು ಜಾಲಾಡುವಾಗ ಗೊತ್ತಾದದ್ದು, ಇದು ಕಣ್ ತಪ್ಪಿನಿಂದ ಆದ ತಪ್ಪಾಗಿರದೇ, ಬೇಕು ಅಂತಲೇ ಕನ್ನಡ ಕೈಬಿಟ್ಟು ಹಿಂದಿಯಲ್ಲಿ ಎಲ್ಲ ಮಾಹಿತಿ ಕೊಡುವ ಕೆಲಸ ಎಲ್.ಐ.ಸಿ ಮಾಡುತ್ತಿದೆ ಅನ್ನುವುದು ಮತ್ತು ಅಂತಹದೊಂದು ತಪ್ಪನ್ನು ಎಲ್.ಐ.ಸಿ ಕೈಯಲ್ಲಿ ಮಾಡಿಸುತ್ತಿರುವುದು ಕೇಂದ್ರ ಸರ್ಕಾರದ ರಾಜಭಾಷಾ ಆಯೋಗ ಅನ್ನುವ "ಯಾವುದೇ ಹಾದಿಯಲ್ಲಾದರೂ ಸರಿ ಆಡಳಿತದಲ್ಲಿ  ಹಿಂದೀ ಬಳಸುವಂತೆ ಮಾಡಬೇಕು" ಅನ್ನುವ ವೈವಿಧ್ಯತೆ ವಿರೋಧಿ, ಹೇರಿಕೆ ಮನಸ್ಥಿತಿಯ ಸಂಸ್ಥೆ ಅನ್ನುವುದು.

ಯಾವ ಹಾದಿಯಾದರೂ ಸರಿ, ಹಿಂದಿ ಒಪ್ಪಿಕೊಳ್ಳುವಂತೆ ಮಾಡಿ !
ಕರ್ನಾಟಕದಲ್ಲಿ ವ್ಯಾಪಾರ ಮಾಡುವ ಯಾವುದೇ ಸಂಸ್ಥೆ ಸಹಜವಾಗಿ ಇಲ್ಲಿನ ಸ್ಥಳೀಯ, ಅಧಿಕೃತ ಮತ್ತು ಜನರ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸುವುದು ಕಾಮನ್ ಸೆನ್ಸ್. ಆದರೆ ಅದ್ಯಾಕೆ ಕೇಂದ್ರ ಸರ್ಕಾರಿ ಕಚೇರಿಗಳಾದ ಬ್ಯಾಂಕು, ತೆರಿಗೆ, ರೈಲ್ವೆ, ಅಂಚೆ ಹೀಗೆ ಜನಸಾಮಾನ್ಯರು ಬಳಸುವ ಹೆಚ್ಚಿನ ಇಲಾಖೆಗಳ ಕಚೇರಿಗಳಲ್ಲಿ ಕನ್ನಡ ಕೈ ಬಿಟ್ಟು, ಇಲ್ಲವೇ ಕಾಟಾಚಾರಕ್ಕೆ ಅನ್ನುವಂತೆ ಎರಡು ಅಕ್ಷರ ಬಳಸಿ, ಎಲ್ಲೆಡೆ ಹಿಂದೀಯನ್ನೇ ಬಳಸಬೇಕು ಅನ್ನುವ ನಿಲುವು ಯಾಕಿದೆ ಎಂದು ಹುಡುಕಿದರೆ ಕಾಣಿಸುವುದು ರಾಜಭಾಷಾ ಆಯೋಗ ಅನ್ನುವ ಪ್ರಜಾಪ್ರಭುತ್ವ ವಿರೋಧಿ,ವೈವಿಧ್ಯತೆಯನ್ನು ಶಾಪದಂತೆ ಕಾಣುವ, ಒಗ್ಗಟ್ಟಿನ ಹೆಸರಲ್ಲಿ ಒಂದು ಪ್ರದೇಶದ ಭಾಷೆಯಾದ ಹಿಂದೀಯನ್ನು ಎಲ್ಲರ ಮೇಲೂ ಹೇರಬೇಕು ಅನ್ನುವ ಮನಸ್ಥಿತಿಯ ಸಂಸ್ಥೆ.  ಒತ್ತಾಯ, ಆಮಿಷ, ವಿಶ್ವಾಸ ಹೀಗೆ ಯಾವ ಹಾದಿಯಲ್ಲಾದರೂ ಸರಿ, ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದೀಯನ್ನು ಆಡಳಿತದ ಭಾಷೆಯಾಗಿಸಬೇಕು ಅನ್ನುವುದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾದ ಭಾರತಕ್ಕೆ ಬಗೆಯುತ್ತಿರುವ ದ್ರೋಹವೆನ್ನಿಸುವುದಿಲ್ಲವೇ?

ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿ
ಇವರೆನೋ ಹಿಂದೀಯನ್ನು ಅಧಿಕೃತ ಭಾಷೆ ಎಂದು ಘೋಷಿಸಿಕೊಂಡು ಅದನ್ನು ಎಲ್ಲೆಡೆ ಹೇರಲು ನೂರಾರು ತಂತ್ರಗಳನ್ನು ಹೊಸೆದುಕೊಂಡು ಯುದ್ಧಕ್ಕೆ ಹೊರಟಂತೆ ಹೊರಟು ಎಲ್ಲೆಡೆ ಹಿಂದೀ ಹೇರಲು ಶುರು ಹಚ್ಚಿಕೊಂಡರು, ಆದರೆ ಬಹುಸಂಖ್ಯಾತ ಜನರ ನುಡಿಯಾಗಿರದ ಹಿಂದೀಗೆ ಯಾವಾಗ ಇವರು ಅಂದುಕೊಂಡ ಮಟ್ಟದಲ್ಲಿ ಮನ್ನಣೆ, ಒಪ್ಪಿಗೆ ಸಿಗಲಿಲ್ಲವೋ ಆಗ ಶುರುವಾಗಿದ್ದೇ "ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿ" ಅನ್ನುವ ಇನ್ನೊಂದು ಪ್ರಜಾಪ್ರಭುತ್ವ ವಿರೋಧಿ ಸಮಿತಿ. ಈ ಸಮಿತಿಯಲ್ಲಿರುವ ಹಿಂದೀ ಪ್ರೇಮಿ ಸಂಸದರೆಲ್ಲ ಸೇರಿ ರೈಲ್ವೆ, ವಿಮೆ, ಆದಾಯ ತೆರಿಗೆ, ಬ್ಯಾಂಕು, ಅಂಚೆ, ಸಾರ್ವಜನಿಕ ಸ್ವಾಮ್ಯದ ಹತ್ತಾರು ಸಂಸ್ಥೆಗಳು ಹೀಗೆ ದೇಶಾದ್ಯಂತ ಸಾವಿರಾರು ಕಚೇರಿಗಳನ್ನು ಸಮೀಕ್ಷೆ ಮಾಡಿ ಆಡಳಿತ, ತರಬೇತಿ, ಉದ್ಯೋಗ, ಶಿಕ್ಷಣ, ಜಾಹೀರಾತು ಹೀಗೆ ಎಲ್ಲ ಹಂತದಲ್ಲೂ ಹಿಂದೀಯ ಬಳಕೆಯನ್ನು ಹೆಚ್ಚಿಸಲು ಏನೇನು ಮಾಡಬೇಕು ಅನ್ನುವ ಶಿಫಾರಸ್ಸುಗಳನ್ನು ರಾಷ್ಟ್ರಪತಿಗಳಿಗೆ ಕಳಿಸುವ ಮತ್ತು ರಾಷ್ಟ್ರಪತಿಗಳು ಅದನ್ನು ಕಾನೂನಾಗಿಸುವಂತೆ ಸರ್ಕಾರಕ್ಕೆ ಕಳಿಸುವ ಮಟ್ಟಿಗೆ "ಹಿಂದೀ"ಯನ್ನು ಶತಾಯ ಗತಾಯ ಹೇರಲೇಬೇಕು ಎಂದು ಪಣ ತೊಟ್ಟಿರುವ ವ್ಯವಸ್ಥೆ ಇಂದು ನಮ್ಮ ನಡುವೆ ಇದೆ.

ಹಿಂದಿ ಸಪ್ತಾಹವೆನ್ನುವ ಗಾಯದ ಮೇಲೆ ಉಪ್ಪು ಸವರುವ ಹೀನ ಕೆಲಸ
ಅದು ಸಾಲದು ಎಂಬಂತೆ ಪ್ರತಿ ವರ್ಷ ಸೆಪ್ಟೆಂಬರ್ 7ರಿಂದ 14ರವರೆಗೆ ಹಿಂದೀ ಸಪ್ತಾಹ ಅನ್ನುವ ಹೆಸರಿನಲ್ಲಿ ಒಂದು ವಾರ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದೀ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು, ಹಿಂದೀಯನ್ನು ಹೆಚ್ಚೆಚ್ಚು ಬಳಸುವ ಹಿಂದೀ ಮತ್ತು ಹಿಂದೀಯೇತರರಿಗೆ ಬಹುಮಾನ, ಬಡ್ತಿ, ಪ್ರಶಸ್ತಿ ಕೊಡುವ, ಆ ಮೂಲಕ ಹಿಂದೀಯನ್ನು ಇನ್ನಷ್ಟು ವ್ಯಾಪಕಗೊಳಿಸುವ ಸಂಚು ನಮ್ಮದೇ ತೆರಿಗೆ ಹಣದಲ್ಲಿ ನಡೆಯುತ್ತಿರುವ ಅನ್ಯಾಯ ನಮ್ಮೆಲ್ಲರ ಕಣ್ಣ ಮುಂದಿದೆ. ಎಲ್ಲ ಭಾಷೆಗಳೂ ಸಮಾನ, ಎಲ್ಲ ಜನರು ಸಮಾನ ಅನ್ನುವ ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಭಾರತವೆಂಬ ಭಾಷಾವಾರು ಪ್ರಾಂತ್ಯಗಳ ಒಕ್ಕೂಟ ಈ ರೀತಿ ಒಂದು ನುಡಿಯ ಬೆನ್ನ ಹಿಂದೆ ನಿಂತು, ಎಲ್ಲೆಲ್ಲಿ ಯಾವ ಯಾವ ನುಡಿಗಳು ಸಹಜವಾಗಿ ಉದ್ಯೋಗದ, ವ್ಯವಹಾರದ, ಆಡಳಿತದ ಭಾಷೆಯಾಗಿರಬೇಕಿತ್ತೋ ಅಲ್ಲಿಂದ ಅವೆಲ್ಲವನ್ನು ಬುಡಸಮೇತ ಕಿತ್ತು, ಹಿಂದೀಯನ್ನು ಸ್ಥಾಪಿಸುತ್ತಿರುವುದನ್ನು ಸಮಾನತೆ ಎಂದು ಕರೆಯಲಾದೀತೆ? ನ್ಯಾಯವೆಂದು ಕರೆಯಲಾದೀತೆ?

ಈಗ ಮಾಡದಿದ್ದರೆ ಇನ್ನೆಂದೂ ಮಾಡಲಾಗದು !
ಭ್ರಷ್ಟಾಚಾರದಿಂದ ಬೇಸತ್ತ ಜನರು ಇತ್ತಿಚೆಗೆ ಪ್ರತಿಭಟಿಸಿದಂತೆ ವೈವಿಧ್ಯತೆಯನ್ನು ಶಾಪದಂತೆ ಕಾಣುತ್ತ, ಒಂದು ದೇಶ- ಒಂದು ಭಾಷೆ ಒಗ್ಗಟ್ಟಿಗೆ ದಾರಿ ಅನ್ನುತ್ತ ಈ ದೇಶದ ಒಗ್ಗಟ್ಟನ್ನು ಒಡೆಯುತ್ತಿರುವ ಇಂತಹ ಜನ ವಿರೋಧಿ ನೀತಿಗಳನ್ನು ಅದೇ ರೀತಿ ಪ್ರತಿಭಟಿಸಬೇಕಾದ ಅಗತ್ಯ ಇಂದು ಎಲ್ಲ ಹಿಂದೀಯೇತರ ಭಾರತೀಯರ ಮೇಲಿದೆ. ಹಿಂದೀ ಸಪ್ತಾಹ ನಡೆಯುವ ಇದೇ ಸಮಯದಲ್ಲಿ ಹಿಂದೀ ಹೇರಿಕೆಯಿಂದಾಗುತ್ತಿರುವ ಕೆಡುಕುಗಳನ್ನು ಮನಗಾಣುವ, ಇತರರಿಗೆ ಮನವರಿಕೆ ಮಾಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ನಿಮ್ಮ ಸಾಮಾಜಿಕ ಸಂಪರ್ಕ ತಾಣವಿರಲಿ, ಅಂತರ್ಜಾಲ ತಾಣವಿರಲಿ, ಗುಂಪಿರಲಿ, ಅಲ್ಲೆಲ್ಲ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಎಲ್ಲ ಸಾಧನಗಳ ಮೂಲಕ ಹಿಂದೀ ಹೇರಿಕೆಗೆ (ಹಿಂದೀ ಭಾಷೆ ಅಥವಾ ಭಾಷಿಕರ ಬಗ್ಗೆಯಲ್ಲ) ಇರುವ ನಿಮ್ಮ ವಿರೋಧವನ್ನು ದಾಖಲಿಸಿ. ಹೆಚ್ಚೆಚ್ಚು ಜನರಲ್ಲಿ ಈ ತಪ್ಪು ಭಾಷಾ ನೀತಿಯ ಬಗ್ಗೆ ಅರಿವು ಮೂಡಿದಲ್ಲಿ ಮಾತ್ರ ಇಂತಹ ಹೇರಿಕೆಯ ನೀತಿಗಳು ರದ್ದಾಗಿ, ಎಲ್ಲ ಭಾಷೆಗಳಿಗೂ ಸಮಾನ ಗೌರವ ಕೊಡುವ ವ್ಯವಸ್ಥೆ ಮುಂದೊಂದು ದಿನ ಬರಬಹುದು. ಈಗ ಎಚ್ಚರ ತಪ್ಪಿದರೆ ಮುಂದೆಂದೂ ಇದನ್ನು ಸರಿಪಡಿಸಿಕೊಳ್ಳಲಾಗದು ಅನ್ನುವುದನ್ನು ಮರೆಯದಿರೋಣ ಗೆಳೆಯರೆ..

ಭಾನುವಾರ, ಆಗಸ್ಟ್ 21, 2011

ನಾನ್ಯಾಕೆ ಜನಲೋಕಪಾಲ್ ಮಸೂದೆಯ ಪರವಾಗಿಲ್ಲ..

ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ದೇಶದಲ್ಲಿ ಅದಕ್ಕೆ ಪರಿಹಾರವಾಗಿ ಜನ್ ಲೋಕ್ ಪಾಲ್ ಅನ್ನುವ ಮಸೂದೆ ಜಾರಿಯಾಗಬೇಕು ಎಂದು ಅಣ್ಣಾ ಹಜಾರೆ ನೇತೃತ್ವದ ತಂಡ ಹೋರಾಟ ಮಾಡುತ್ತಿದೆ. ಕಳೆದ ಹಲವು ತಿಂಗಳಿಂದ ಜನರು ನಿಬ್ಬೆರಗಾಗುವಂತಹ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲಿ ಈ ಹೋರಾಟದಿಂದಲಾದರೂ ಭ್ರಷ್ಟಾಚಾರ ಅಂತ್ಯ ಕಾಣಲಿ ಎಂದು ಜನಸಾಮಾನ್ಯರು ಬಯಸಿದ್ದರಲ್ಲಿ ಅಚ್ಚರಿಯಿಲ್ಲ. ಚುನಾವಣಾ ಸುಧಾರಣೆಗಳ ಮೂಲಕ ಯೋಗ್ಯರು ಆಯ್ಕೆಯಾಗಿ ಬರುವಂತಾಗುವ ಬದಲಾವಣೆ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಸರ್ಕಾರದ ಪಾತ್ರ ಕಡಿಮೆ ಮಾಡಿ ಹೆಚ್ಚು ಪರಿಣಾಮಕಾರಿಯಾದ ಮತ್ತು ಗುಣಮಟ್ಟದ ಸೇವೆಯನ್ನು ಜನರಿಗೆ ನೀಡುವಂತಹ ಬದಲಾವಣೆಗಳು ಬಂದಾಗ ಭ್ರಷ್ಟಾಚಾರ ಕಡಿಮೆಯಾಗುವುದೇ ಹೊರತು ದೆಹಲಿಯಲ್ಲಿ ಒಬ್ಬ ಲೋಕಪಾಲ್ ಅನ್ನುವ ನ್ಯಾಯಾಂಗ, ಸರ್ಕಾರ, ಸಂಸತ್ತು ಎಲ್ಲವನ್ನೂ ಮೀರಿದ ಸರ್ವ ಶಕ್ತನನ್ನು ಕೂರಿಸುವುದರಿಂದಲ್ಲ ಅನ್ನುವುದು ನನ್ನ ಅನಿಸಿಕೆ. ಹಾಗಿದ್ದರೆ ಲೋಕ್ ಪಾಲ್ ಅಲ್ಲಿರುವ ತೊಂದರೆ ಏನು? ಅಣ್ಣ ಹಜಾರೆಯವರ ಹೋರಾಟದಲ್ಲಿ ಏನು ತೊಡಕಿದೆ ಅನ್ನುವುದನ್ನು ತಕ್ಷಶಿಲ ಅನ್ನುವ ಚಿಂತಕರ ಸಂಸ್ಥೆಯನ್ನು ನಡೆಸುವ ಹಾಗೂ ಪ್ರಗತಿ ಅನ್ನುವ ಪತ್ರಿಕೆ ನಡೆಸುವ ಬೆಂಗಳೂರಿನ ನಿತಿನ್ ಪೈ ಬರೆದಿರುವ ಬರಹವೊಂದು ಗಮನ ಸೆಳೆಯುತ್ತೆ. ಪ್ರಶ್ನೋತ್ತರ ಮಾದರಿಯಲ್ಲಿ ಬರೆದಿರುವ ಅವರ ಬರಹವನ್ನು ಕನ್ನಡಕ್ಕೆ ಅನುವಾದಿಸಿ, ಅವರ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಿರುವೆ.

ಭ್ರಷ್ಟಾಚಾರವನ್ನು ಹೊಡೆದೊಡಿಸಲು ಲೋಕಪಾಲ್ ಬೇಕೆ?
ಇಲ್ಲ. ಅದು ಬೇಕಿಲ್ಲ. ಅಷ್ಟೇ ಅಲ್ಲ, ಅದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವುದು. ಅಂಕೆ ಮೀರಿ ಎಲ್ಲ ರಂಗದಲ್ಲೂ ಹೆಚ್ಚೆಚ್ಚು ಸರ್ಕಾರದ ಪಾತ್ರವಿರುವುದು, ಗೊಂದಲಮಯವಾಗಿರುವ, ಸಂಕೀರ್ಣವಾದ  ಬೇಡದ ನೀತಿ ನಿಯಮಗಳೆಲ್ಲವೂ ಭಾರತದಲ್ಲಿ ಭ್ರಷ್ಟಾಚಾರದ ಹೆಚ್ಚಳಕ್ಕೆ ಕಾರಣವಾಗಿವೆ. ಲೋಕಪಾಲ್ ಮೂಲಕ ಈಗಾಗಲೇ ಸಂಕೀರ್ಣವಾಗಿರುವ ಈ ವ್ಯವಸ್ಥೆಗೆ ಇನ್ನೊಂದು ಶಕ್ತಿಶಾಲಿ ಪದರವನ್ನು ಸೇರಿಸುವುದು ವ್ಯವಸ್ಥೆಯನ್ನು ಇನ್ನಷ್ಟು ಗೊಜಲಾಗಿಸುವುದು. ಈ ರೀತಿಯ ಗೊಂದಲಮಯ, ಸಂಕೀರ್ಣವಾದ ಸ್ಥಿತಿಯೇ ಲಂಚ ಕೊಡುವವನಿಗೂ, ಪಡೆಯುವವನಿಗೂ ಪೂರಕವಾಗುವಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ.

ಲೋಕಪಾಲ್ ಯಾಕೆ ಪರಿಹಾರವಲ್ಲ ಅನ್ನುವ ವಿಷಯದಲ್ಲಿ ನಿತೀನ್ ಪೈ ಅವರ ಇನ್ನೊಂದು ಅಂಕಣ ಇಲ್ಲಿದೆ. ಹಾಗೂ ಪ್ರಗತಿಯಲ್ಲಿ ಪ್ರಕಟವಾದ ಅಂಬಾ ಸಲೇಲಕರ್ ಅವರ ಅಂಕಣಕ್ಕೆ ಇಲ್ಲಿ ನೋಡಿ.

1A. ಹಾಗಿದ್ರೆ ಸರ್ಕಾರಿ ಲೋಕಪಾಲ್ ಮಸೂದೆ ಜನಲೋಕಪಾಲ್ ಗಿಂತ ಒಳ್ಳೆಯದೇ?
ಇಲ್ಲ. ನಮಗೆ ಯಾವುದೇ ಲೋಕಪಾಲ್ ಬೇಕಾಗಿಲ್ಲ. ಈಗಾಗಲೇ ಇರುವ ಸಂಸ್ಥೆಗಳಾದ ಸಿಎಜಿ, ಸಿವಿಸಿ, ಸಿಬಿಐ ಮತ್ತು ಚುನಾವಣಾ ಆಯೋಗಗಳಿಗೆ ಇನ್ನಷ್ಟು ಸ್ವತಂತ್ರವಾಗಿ ಕೆಲಸ ಮಾಡಲು ಆಗುವಂತೆ ಸ್ವಾತಂತ್ರ್ಯ ಕೊಟ್ಟರೂ ಸಾಕು, ಅವು ಸಮರ್ಥವಾಗಿ ಭ್ರಷ್ಟಾಚಾರವನ್ನು ಅಂಕೆಯಲ್ಲಿಡಬಲ್ಲವು. ಈಗಿರುವ ಈ ಸಂಸ್ಥೆಗಳಿಗೆ ರಾಜಕೀಯ ಬಣ್ಣ ಬಳಿದು ಅವುಗಳು ಮಹತ್ವ ಕಳೆದುಕೊಳ್ಳುವುದನ್ನು ತಪ್ಪಿಸಲಾಗದ ನಾವು ಲೋಕಪಾಲ್ ಅನ್ನುವ ಸಂಸ್ಥೆಗೆ ರಾಜಕೀಯದ ವಾಸನೆ ತಾಕದೇ, ಅದು ಮಹತ್ವ ಕಳೆದುಕೊಳ್ಳುವುದನ್ನು ಹೇಗೆ ತಡೆಯಬಲ್ಲೇವು? ಲೋಕಪಾಲ್ ರಾಜಕೀಯದ ಬಣ್ಣ ಪಡೆಯದಂತೆ, ಮಹತ್ವ ಕಳೆದುಕೊಳ್ಳದಂತೆ ನೋಡಿಕೊಳ್ಳಬಲ್ಲೆವು ಅನ್ನುವುದೇ ಆದರೆ, ಈಾಗಲೇ ಇರುವ  ಸಿಎಜಿ, ಸಿವಿಸಿ, ಸಿಬಿಐ ಮತ್ತು ಚುನಾವಣಾ ಆಯೋಗಗಳಂತಹ ಸಂಸ್ಥೆಗಳಿಗೆ ಸ್ವಾಯತ್ತತೆ ಕೊಟ್ಟು ಅವುಗಳ ನಂಬಿಕೆಯನ್ನು ಮರಳಿ ಸ್ಥಾಪಿಸಲು ಅದೇಕೆ ಆಗದು?  


2. ಲೋಕಪಾಲ್ ಬೇಡ ಅನ್ನುವುದಾದರೆ ಬೇರಾವ ಹಾದಿಯಿದೆ?
ಇದಕ್ಕುಳಿದಿರುವ ಹಾದಿಯೆಂದರೆ ಅರ್ಥ ವ್ಯವಸ್ಥೆಯ  ಎರಡನೆ ಪೀಳಿಗೆಯ ಸುಧಾರಣೆಗಳೊಂದಿಗೆ ಮುಂದುವರೆಯುವುದು. ವಸ್ತು ಸ್ಥಿತಿ ಏನೆಂದರೆ ಸುಧಾರಣೆ(reforms) ಗಳು ಭ್ರಷ್ಟಾಚಾರವನ್ನು ಒಂದು ಹಂತಕ್ಕೆ ಕಡಿಮೆ ಮಾಡಿವೆಯಾದರೂ ಸರ್ಕಾರದ ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಾಗಿವೆ ಅನ್ನುವುದು ಸುಳ್ಳಲ್ಲ. 1989ರಲ್ಲಿ ಸಾಮಾನ್ಯ ಮನುಷ್ಯನೊಬ್ಬ ಒಂದು ಟೆಲಿಪೋನ್ ಸಂಪರ್ಕ ಪಡೆಯಲು ಲಂಚ ಕೊಡಬೇಕಾದ ಸ್ಥಿತಿ ಇತ್ತು, ಆದರೆ 2005ರ ಹೊತ್ತಿಗೆ ಲಂಚ ಕೊಡದೇ ಫೋನ್ ಸಂಪರ್ಕವನ್ನು ನಿಮಿಷಗಳಲ್ಲಿ ಪಡೆಯುವ ಬದಲಾವಣೆ ಬಂದಿದೆ. 2010ರಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ 2ಜಿ ಯಂತಹ ದೊಡ್ಡ ಹಗರಣವೇ ಬೆಳಕಿಗೆ ಬಂತು, ಆದರೆ ಇದಕ್ಕೆ ಯುಪಿಎ ಸರ್ಕಾರ ಆರ್ಥಿಕ ಸುಧಾರಣೆಗಳಿಗೆ ಎಳ್ಳು-ನೀರು ಬಿಟ್ಟಿದ್ದೇ ಕಾರಣವಾಗಿದೆ. 
ನಿಜ ಹೇಳಬೇಕು ಅಂದರೆ ಅರ್ಥ ವ್ಯವಸ್ಥೆಯ ಯಾವ ಯಾವ ಕ್ಷೇತ್ರಗಳು ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿವೆಯೋ ಅಲ್ಲೆಲ್ಲ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿದೆ ಅನ್ನುವುದಕ್ಕೆ ಮಾಹಿತಿ ಇದೆ.  ಇನ್ನಾವ ಹಾದಿ ಇದೆ ಎಂಬ ಬಗ್ಗೆ ಹೆಚ್ಚು ತಿಳಿಯಲು ಅತನು ಡೇ ಅವರ ಚಿಕ್ಕ ಪುಸ್ತಕ ಟ್ರಾನ್ಸಫಾರ್ಮಿಂಗ್ ಇಂಡಿಯಾವನ್ನೊಮ್ಮೆ ಓದಿ.

3. ಹಾಂಕಾಂಗ್ ನಲ್ಲೂ ಲೋಕಪಾಲ್ ನಂತೆ ಒಬ್ಬ ಒಂಬ್ಡುಸಮನ್ ಇದ್ದಾರೆ, ಅಲ್ಲಿ ಭ್ರಷ್ಟಾಚಾರ ಕಡಿಮೆಯೂ ಇದೆ, ಇದಕ್ಕೇನಂತೀರಿ?
ಇದೊಂದು ಸರಿ ಅನ್ನಿಸೋ ತಪ್ಪು ವಾದ. ಹಾಂಕಾಂಗ್ ನಲ್ಲಿ ಒಬ್ಬ ಒಂಬ್ಡುಸಮನ್ ಇರುವುದರಿಂದಾಗಿ ಅಲ್ಲಿ ಭ್ರಷ್ಟಾಚಾರ ಕಡಿಮೆ ಇದೆ ಅನ್ನಲು ಯಾವ ಆಧಾರವೂ ಇಲ್ಲ. ಹಾಗೇ ನೋಡಿದ್ರೆ, ಮುಕ್ತ ಆರ್ಥಿಕ ನೀತಿ, ಆರ್ಥಿಕ ಸ್ವಾತಂತ್ರ್ಯ ಹೊಂದಿರುವ ದೇಶಗಳಲ್ಲಿ ಭ್ರಷ್ಟಾಚಾರ ಕಡಿಮೆ ಅನ್ನುವ ಮಾತನ್ನು ಸಮರ್ಥಿಸಲು ಜಗತ್ತಿನೆಲ್ಲೆಡೆಯಿಂದ ಸಾಕಷ್ಟು  ಎಂಪಿರಿಕಲ್ ಸಾಕ್ಷಿ ಇದೆ.
ಹಾಂಕಾಂಗ್ ಅತ್ಯಂತ ಮುಕ್ತ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶಗಳಲ್ಲೊಂದಾಗಿದೆ. ಇದರಿಂದಾಗಿಯೇ, ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟರಾಗುವ ಅವಕಾಶಗಳಾಗಲಿ, ಸಾಧ್ಯತೆಗಳಾಗಲಿ, ಪ್ರೋತ್ಸಾಹವಾಗಲಿ ಅತ್ಯಂತ ಕಡಿಮೆಯಿದೆ. ಅರ್ಥ ವ್ಯವಸ್ಥೆಯ ಕೆಲ ಭಾಗಗಳ ಮೇಲೆ ಕಾನೂನಿನ ನೇರ ಹಿಡಿತವಿರುವುದಿಲ್ಲವೋ ಅಂತಲ್ಲಿ ಒಂಬ್ಡುಸಮನ್ ಬೇಕಾಗಬಹುದು.

4. ಭ್ರಷ್ಟ ರಾಜಕಾರಣಿಗಳು ಬಿಡದೇ ಹೇಗೆ ಆರ್ಥಿಕ ಸುಧಾರಣೆಗಳು ಜಾರಿಯಾದಾವು?
ನಿಜ ಹೇಳಬೇಕು ಅಂದರೆ, ನಾವು ಸರಿಯಾಗಿ ಆರ್ಥಿಕ ಸುಧಾರಣೆಗಳಿಗಾಗಿ ಧ್ವನಿಯೇ ಎತ್ತಿಲ್ಲ. ಅದನ್ನು ನಾವು ಮಾಡಿದರೆ, ಖಂಡಿತ ಈ ವಿಷಯಗಳು ರಾಷ್ಟ್ರದ ರಾಜಕೀಯದ ಕಾರ್ಯಸೂಚಿಯಲ್ಲಿ ಸೇರಿಕೊಳ್ಳುತ್ತವೆ. ರಾಜಕೀಯದ ನಾಯಕರಿಗೆ ಅವರ ರಾಜಕೀಯ ಭವಿಷ್ಯವೇ ಈ ಆರ್ಥಿಕ ಸುಧಾರಣೆಗಳ ಮೇಲೆ ಅವಲಂಬಿತವಾಗಿವೆ ಅನ್ನುವಂತ ಬಿಂಬಿಸುವ, ಮನವೊಲಿಸುವ ಕೆಲಸ ನಾವು ಮಾಡಬೇಕಿದೆ.

5. ಹೇಳೊದೇನೊ ಸುಲಭ, ಆದರೆ ಇದನ್ನ ಹೇಗೆ ಮಾಡೋದು ?
ಮತ ಚಲಾಯಿಸುವ ಮೂಲಕ. ಆರ್ಥಿಕ ಸುಧಾರಣೆಗಳ ನೇರ ಲಾಭ ಪಡೆಯುವ ಮಧ್ಯಮ ವರ್ಗ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಬೇಕಿದೆ. ಮಧ್ಯಮ ವರ್ಗದ ಮತ ಬ್ಯಾಂಕ್ ಇಲ್ಲದಿರುವುದರಿಂದಲೇ ಇವತ್ತು ಬೇರೆ ಬೇರೆ ಆಮಿಷವೊಡ್ಡಿ ಬಡವರನ್ನು ಮತ ಬ್ಯಾಂಕಾಗಿಸುವತ್ತ ರಾಜಕಾರಣಿಗಳ ಗಮನ ಹರಿದಿದೆ. ಅಷ್ಟೇ ಅಲ್ಲ, ಅರ್ಧಂಬರ್ಧ ಸುಧಾರಣೆಗೆ ತೆರೆದುಕೊಂಡಿರುವ ಅರ್ಥ ವ್ಯವಸ್ಥೆಯನ್ನು ಅತಿ ಶ್ರೀಮಂತರು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿಯೂ ರಾಜಕಾರಣಿಗಳ ಸಹಾಯಹಸ್ತವಿದೆ. ಈ ವ್ಯವಸ್ಥೆಯನ್ನು  ಬದಲಾಯಿಸುವುದು ಸುಲಭವಲ್ಲ, ಆದರೆ ನಾವು ಹೊಸ ರೀತಿಯಲ್ಲಿ ಯೋಚಿಸಿ ಇದರತ್ತ ಕೆಲಸ ಮಾಡಬೇಕಿದೆ. ಒಳ್ಳೆಯ ಆಡಳಿತಕ್ಕೆ ಅನುವಾಗುವಂತೆ ಮಧ್ಯಮ ವರ್ಗದ ಮತ ಬ್ಯಾಂಕ್ ಕಟ್ಟುವುದು ಹೇಗೆ ಅನ್ನುವ ಬಗ್ಗೆ ಅತನು ದೇವ್ ಅವರ ಕೂತುಹಲ ಕೆರಳಿಸೋ ಐಡಿಯಾ ಬಗ್ಗೆ ಇಲ್ಲಿ ನೋಡಿ.

ಲೋಕಪಾಲ್ ಬೆನ್ನಿಗಿರುವವರು ಏನೇ ಹೇಳಬಹುದು, ಆದರೆ ಅದು ಖಂಡಿತ ಮಂತ್ರದಂಡದಂತೆ ಕೆಲಸ ಮಾಡದು. ಒಂತರ ಕಣ್ ಮುಚ್ಚಿ ಕಣ್ ತೆರೆಯೊದ್ರೊಳಗೆ ತೂಕ ಕಳೆದುಕೊಳ್ಳೊ ಮ್ಯಾಜಿಕ್ ಮಾತ್ರೆಯಂತೆ ಲೋಕಪಾಲ್ ಅನ್ನು ಬಿಂಬಿಸಲಾಗುತ್ತಿದೆ. ಆದರೆ, ಅಂತಹ ಮಾತ್ರೆ ಎಂದಿಗೂ ಕೆಲಸ ಮಾಡಲ್ಲ. ನಿಮ್ಮ ಅರೋಗ್ಯವನ್ನೇ ಅದು ಹಾಳು ಮಾಡಬಹುದು. ಈ ಮಾತ್ರೆ ತೆಗೆದುಕೊಳ್ಳಬೇಡಿ ಅಂದ ತಕ್ಷಣ, " ಹಾಗಿದ್ರೆ ಇನ್ನಾವ ಮ್ಯಾಜಿಕ್ ಮಾತ್ರೆ ತಗೊಬೇಕು" ಅಂತ ಕೇಳಬೇಡಿ. ಇಂತಹ ಸಮಸ್ಯೆಗೆಲ್ಲ ರಾತ್ರೋರಾತ್ರಿ ಯಾವ ಪರಿಹಾರವೂ ಇಲ್ಲ. ಪರಿಹಾರಕ್ಕೆ ಶ್ರಮಪಡಬೇಕು.

6. ಅದೆಲ್ಲ ಸರಿ, ಈಗಿರೋ ಜನ್ ಲೋಕ್ ಪಾಲ್ ಅಲ್ಲಿ ಏನ್ ತೊಂದರೆ ಇದೆ?
ಇದಕ್ಕೆ ಆಗಲೇ ಉತ್ತರಿಸಲಾಗಿದೆ. ಆದರೆ ಅದೇ ಪ್ರಶ್ನೆ ಮತ್ತೆ ಮತ್ತೆ ಬರೋದರಲ್ಲಿ ಅಚ್ಚರಿಯೇನಿಲ್ಲ. ಲೋಕಪಾಲ್ ಅಲ್ಲಿರೋ ಸಮಸ್ಯೆಯೆನೆಂದರೆ ಅದು ಈಗಾಗಲೇ ಇರುವ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುತ್ತೆ. ನಿಮ್ಮಲ್ಲಿ ಯಾರಿಗಾದರೂ ಅನ್ನಿಸುತ್ತಾ ಹತ್ತಾರು ಸಾವಿರ ಪ್ರಾಮಾಣಿಕ ಅಧಿಕಾರಿಗಳನ್ನು ತಂದು ಲೋಕಪಾಲ್ ಮಾಡಬಲ್ಲೆವು ಎಂದು? ಸರಿ ಅವರ ಮೇಲೆ ಯಾರು ನಿಗಾ ಇಡುತ್ತಾರೆ? ಅದಕ್ಕೊಂದು ಸೂಪರ್ ಲೋಕಪಾಲ್ ಮಾಡುವೆವಾ? ಅವರನ್ನು ಗಮನಿಸಲು ಇನ್ನೊಂದು ಹೈಪರ್ ಲೋಕಪಾಲ್? ತಮಾಷೆ ಮಾಡ್ತಿಲ್ಲ. ಲೋಕಪಾಲ್ ಪರವಾಗಿ ವಾದ ಮಂಡಿಸುವವರು ಹೇಳುವುದೇ ಇದನ್ನು ತಾನೇ? ಈಗಿರುವ ವ್ಯವಸ್ಥೆ ಸರಿಯಿಲ್ಲ, ಆದ್ದರಿಂದ ಅವನ್ನು ಗಮನಿಸಲು ಲೋಕಪಾಲ್ ಬೇಕು ಅಂತ ತಾನೇ?

7. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ನಮಗಿಲ್ಲವೇ? "ಜೀವ ಇರುವವರೆಗೂ ಉಪವಾಸ" ಅನ್ನುವುದು ಯಾಕೆ ವಿಶ್ವಾಸಾರ್ಹವಲ್ಲ?
ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಖಂಡಿತ ನಮಗೆಲ್ಲರಿಗೂ ಇದೆ. ನಮಗೆ ಹಕ್ಕಿದೆಯೋ ಇಲ್ಲವೋ ಅನ್ನುವುದಕ್ಕಿಂತ ಇದನ್ನು ನಾವು ಸರಿಯಾಗಿ ಬಳಸುತ್ತಿದ್ದೆವೆಯೋ ಅನ್ನುವುದು ಹೆಚ್ಚು ಮುಖ್ಯವಾಗಿದೆ. (ನಿಮಗೆ ಫ್ರೀಡಂ ಆಫ್ ಸ್ಪೀಚ್ ಇದೆ ಎಂದು ರಾತ್ರಿ ಎರಡು ಗಂಟೆಗೆ ಮನೆಗಳಿರೋ ಜಾಗದಲ್ಲಿ ಎಮಿನೆಮ್ ಹಾಡನ್ನ ಲೌಡ್ ಸ್ಪೀಕರ್ ಅಲ್ಲಿ ಹಾಕ್ತಿನಿ ಅನ್ನೋದು ಅಂತಹ ಒಳ್ಳೆಯ ಐಡಿಯಾ ಏನಲ್ಲ :) )
ಅಂಬೇಡ್ಕರ್ ಸಂವಿಧಾನವನ್ನು ಪರಿಚಯಿಸುತ್ತ ನವೆಂಬರ್ 1949ರಲ್ಲಿ ಒಂದು ಮಾತು ಹೇಳಿದ್ರು. "ಒಮ್ಮೆ ಸಂವಿಧಾನ ಜಾರಿಗೆ ಬಂದ ಮೇಲೆ, ಪ್ರತಿಭಟನೆ, ಸತ್ಯಾಗ್ರಹದಂತ ಅಸಂವಿಧಾನಿಕ ಹಾದಿ ತುಳಿಯುವುದನ್ನು ನಾವು ತಪ್ಪಿಸಬೇಕು. ಅವು ಅರಾಜಕತೆಯ ಮೂಲವಾಗಿವೆ. ಒಂದೊಮ್ಮೆ ಇಬ್ಬರು ವ್ಯಕ್ತಿಗಳು ಎರಡು ಪರಸ್ಪರ ವಿರೋಧಿ ಕಾರಣಗಳಿಗಾಗಿ ಸಾಯುವವರೆಗೂ ಉಪವಾಸ ಅಂತ ಕುಳಿತರೆ ಯಾರು ಮೊದಲು ಸಾಯುತ್ತಾರೋ ಅವರೇ ಗೆದ್ದರು ಎಂದು ನಾವು ತೀರ್ಮಾನಿಸಲಾಗುವುದಿಲ್ಲ.  ಸಾಯುವವರೆಗೂ ಉಪವಾಸ ಅನ್ನುವುದು ರಾಜಕೀಯ ಬ್ಲಾಕ್-ಮೇಲ್. ಇದೊಂದು ರೀತಿಯಲ್ಲಿ ಪ್ರತಿಭಟನೆಕಾರರು ಬಯಸಿದ ಹಾದಿಯನ್ನೇ ಸರ್ಕಾರ ತುಳಿಯುವಂತೆ ಒತ್ತಾಯಿಸುವ ಮಾದರಿಯ ನಾಟಕವೆನ್ನಬಹುದು. ಕಾರಣ ಎಂತಹುದೇ ಇರಬಹುದು, ಆದರೆ ಒಬ್ಬ ವ್ಯಕ್ತಿ ಇಡೀ ದೇಶಕ್ಕೆ ಇಂತಹುದೇ ಕಾನೂನು ಬೇಕು ಎಂದು ಅಪ್ಪಣೆ ಹೊರಡಿಸುವುದನ್ನು ಒಪ್ಪಲಾಗದು.

8. ಅಣ್ಣಾ ಹಜಾರೆಯವರಿಗೆ ಸಾಯುವವರೆಗೂ ಉಪವಾಸ ಮಾಡುವ ಹಕ್ಕಿಲ್ಲವೇ?
ಅಣ್ಣಾ ಹಜಾರೆಯವರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಖಂಡಿತ ಇದೆ. ಅವರ ಪ್ರತಿಭಟನೆ  ಆತ್ಮಹತ್ಯೆಗೆ ಪ್ರಯತ್ನ ಅನ್ನುವಂತ ಹಂತಕ್ಕೆ ಹೋದಲ್ಲಿ ಅದು ಕಾನೂನಿನನ್ವಯ ತಪ್ಪು. ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣಗಳೇನೇ ಇದ್ದರೂ ಅವರು ತಮ್ಮನ್ನು ತಾವೇ ಕೊಂದುಕೊಳ್ಳದಂತೆ ತಡೆಯುವ ಎಲ್ಲ ಅಧಿಕಾರ ಕಾನೂನಿನನ್ವಯ ಸರ್ಕಾರಕ್ಕಿದೆ.

9. ನೀನೊಬ್ಬ ತೋಳುಕುರ್ಚಿ ಬುದ್ದಿಜೀವಿ (armchair intellectual). ನಿನಗಿಂತ ಬೀದಿಯಲ್ಲಿ ಹೋರಾಡುತ್ತಿರುವ ಚಳುವಳಿಗಾರರನ್ನೇ ನಾವು ನಂಬಬಾರದೇಕೆ?
ಪೈಲಟ್ ಗಳು ವಿಮಾನವನ್ನೇನು ವಿನ್ಯಾಸ ಮಾಡುವುದಿಲ್ಲ. ಮದ್ದು ಕೊಡುವ ವೈದ್ಯರು ಹೊಸ ಔಷಧಿಗಳನ್ನೇನು ಕಂಡು ಹಿಡಿಯುವುದಿಲ್ಲ. ಈ ಕೆಲಸ ಮಾಡುವುದು ತೋಳುಕುರ್ಚಿ ಬುದ್ದಿಜೀವಿಗಳಂತಹ ಜನರೇ. ಆದ್ದರಿಂದ ತೋಳುಕುರ್ಚಿ ಬುದ್ದಿಜೀವಿಯಾಗಿರುವುದರಿಂದ ಈ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಅಂತೇನು ಇಲ್ಲ.   
ಅವರು ಏನು ಹೇಳುತ್ತಾ ಇದ್ದಾರೆ ಅನ್ನುವ ಕಾರಣಕ್ಕೆ ನೀವು ಯಾವುದೇ ಬುದ್ದಿಜೀವಿ ಇಲ್ಲವೇ ಕಾರ್ಯಕರ್ತನನ್ನು ನಂಬಬೇಡಿ. ನೀವು ಅವರ ವಾದವನ್ನು ಕೇಳಿ, ಪರಾಮರ್ಷಿಸಿ, ನಿಮ್ಮದೇ ಆದ ತೀರ್ಮಾನ ಕೈಗೊಳ್ಳಿ. ಜನಲೋಕಪಾಲ್ ಬೇಕೆನ್ನುತ್ತಿರುವ ಹೆಚ್ಚಿನ ಜನರಿಗೆ ಆ ಬಿಲ್ ಅಲ್ಲಿ ಏನಿದೆ ಎಂದೂ ತಿಳಿದಿಲ್ಲ, ಅದರ ವಿರುದ್ಧವಾಗಿ ಯಾರು ವಾದ ಮಾಡುತ್ತಿರುವರೋ ಅವರ ವಾದವನ್ನು ಕೇಳಿಲ್ಲ. ಕುರುಡಾಗಿ, ಯಾರೋ ಜನಪ್ರಿಯ ವ್ಯಕ್ತಿ ಹೇಳಿದ್ದಾರೆ ಅನ್ನುವ ಕಾರಣಕ್ಕೆ ಇದೊಂದೇ ಪರಿಹಾರವೆಂಬಂತೆ ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ.

11. ಅಣ್ಣಾ ಹಜಾರೆಯವರ ಹೋರಾಟವನ್ನು ವಿರೋಧಿಸುತ್ತಿರುವವರು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸಿದಂತಲ್ಲವೇ?
ಇಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟ ಹೇಗಿರಬೇಕು ಅನ್ನುವುದು ಕೇವಲ ಅಣ್ಣ ಹಜಾರೆ ಮತ್ತು ಅವರ ಸಂಗಡಿಗರಿಗೆ ಸೇರಿದ ವಿಷಯವಲ್ಲ. ನಿಜ ಜಗತ್ತಿನಲ್ಲಿ, ನೂರಕ್ಕೆ ನೂರು ಶುದ್ಧವಾಗಿರುವ, ಭ್ರಷ್ಟರಲ್ಲದ ರಾಜಕಾರಣಿಗಳಿರಬೇಕು ಎಂದು ಅಪೇಕ್ಷಿಸುವುದು ನಿಜಕ್ಕೂ ಮೂರ್ಖತನವಾದೀತು. ಅಪೂರ್ಣವಾದ ಸಂವಿಧಾನಗಳು, ಅಪೂರ್ಣವಾದ ಸಂಸ್ಥೆಗಳು, ಅಪೂರ್ಣವಾದ ನಾಯಕರು ಮತ್ತು ಅಪೂರ್ಣವಾದ ನಾಗರಿಕರನ್ನು ಇಟ್ಟುಕೊಂಡೇ ಒಳ್ಳೆಯ ಆಡಳಿತ ಪಡೆಯುವುದು ನಿಜ ಜಗತ್ತಿನ ಸವಾಲು. ಲಂಚ ಕೊಡಲು, ಪಡೆಯಲು ಇರುವ ಅವಕಾಶವನ್ನು ಕಡಿಮೆ ಮಾಡಿದಲ್ಲಿ ಭ್ರಷ್ಟಾಚಾರ ಕಡಿಮೆಯಾಗುವುದು. ಇದನ್ನು 1991ರಲ್ಲಿ ಶುರುವಾದ ಆದರೆ 2004ರಿಂದಾಚೆ ನಿಂತು ಹೋಗಿರುವ ಸುಧಾರಣೆಗಳನ್ನು ಮುಂದುವರೆಸುವುದೇ ಇಂತಹದೊಂದು ವಾತಾವರಣ ಕಟ್ಟಲು ಸಹಾಯ ಮಾಡುವುದು.

ಸಂವಿಧಾನದನ್ವಯ ರಚಿತವಾದ ಯುಪಿಎ ಸರ್ಕಾರದ ರಾಜಕೀಯ ಮತ್ತು ನೀತಿನಿಯಮಗಳನ್ನು ವಿರೋಧಿಸಲು ಖಂಡಿತ ಎಲ್ಲರಿಗೂ ಹಕ್ಕಿದೆ. ಕೆಲವು ವ್ಯಕ್ತಿಗಳು, ಪಕ್ಷಗಳು ಕಡು ಭ್ರಷ್ಟಾಚಾರದಿಂದ ನಂಬಿಕೆ ಕಳೆದುಕೊಂಡಿರಬಹುದು, ಆದರೆ ಒಂದು ಸಂವಿಧಾನಿಕ ಸಂಸ್ಥೆಯಾಗಿ ಭಾರತ ಸರ್ಕಾರ ಮಾತ್ರವೇ ದೇಶಕ್ಕೆ ಬೇಕಿರುವ ಕಾಯಿದೆ,ಕಾನೂನು ರೂಪಿಸುವ ಅಧಿಕಾರವಾಗಿದೆ.

12. ಬ್ರಿಟಿಷರ ವಿರುದ್ಧ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯೇ ಉಪವಾಸಕ್ಕೆ ಮುಂದಾಗಿರುವಾಗ, ಈಗ ಉಪವಾಸ ಮಾಡುವುದು ಯಾಕೆ ವಿಶ್ವಾಸಾರ್ಹವಲ್ಲ? 
ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ 26 ಜನವರಿ1950 ಮತ್ತು ಅದಕ್ಕೂ ಮೊದಲಿದ್ದ ದಿನಗಳ ನಡುವಿನ  ಸಂದರ್ಭಗಳ ಮಧ್ಯೆ ಅಗಾಧವಾದ ಅಂತರವಿದೆ. ಬ್ರಿಟಿಷ ಸರ್ಕಾರ ವಿಧಿಸಿದ್ದ ಕಾನೂನುಗಳ ವಿರುದ್ಧ ಮಹಾತ್ಮ ಗಾಂಧಿ ಅಸಹಕಾರದ ಹಾದಿಯನ್ನು ತುಳಿದಿದ್ದರು. ಆಗ ಭಾರತೀಯರಿಗೆ ಕಾನೂನು ರೂಪಿಸುವಲ್ಲಿ ಇಲ್ಲವೇ ಅನುಷ್ಟಾನಕ್ಕೆ ತರುವಲ್ಲಿ ಯಾವುದೇ ರೀತಿಯ ಹಿಡಿತವಿರಲಿಲ್ಲ. ತಮಗೆ ಬೇಡದ ಯಾವುದೇ ಕಾನೂನಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಅವರಿಗಿರಲಿಲ್ಲ. ಈ ಅರ್ಥದಲ್ಲಿ  ಉಪವಾಸದ ಚಳುವಳಿಗೆ ಒಂದು ಸಮರ್ಥನೆ ಇದೆ. 

ಅಂಬೇಡ್ಕರ್ ಸೇರಿದಂತೆ ಹಲವು ಭಾರತದ ನಾಯಕರನ್ನು ತಮ್ಮ ನಿಲುವಿಗೆ ಒಪ್ಪಿಸಲು ಕೂಡಾ ಗಾಂಧಿ ಈ ಮಾರ್ಗವನ್ನು ಬಳಸಿದ್ದರು. ಗಾಂಧಿಯವರ ಉದ್ದೇಶಗಳಲ್ಲಿನ ತಿಳುವಳಿಕೆ ಏನೇ ಇದ್ದರೂ, ಇದು ಅಸಂವಿಧಾನಿಕವೂ, ಒಂದು ರೀತಿಯಲ್ಲಿ "ಹೈಕಮಾಂಡ್" ಸಂಸ್ಕೃತಿಯನ್ನು ಹುಟ್ಟು ಹಾಕಿದ ಮಾರ್ಗವಾಗಿತ್ತು. ಈ ಹೈಕಮಾಂಡ್ ಸಂಸ್ಕೃತಿ ನಮ್ಮಲ್ಲಿ ಇಂದಿಗೂ ಜೀವಂತವಾಗಿದೆ. ಈ ಅರ್ಥದಲ್ಲಿ ಉಪವಾಸವನ್ನು ಸಮರ್ಥಿಸಿಕೊಳ್ಳಲಾಗದು. ಆದರೆ ಭಾರತೀಯ ಇತಿಹಾಸವನ್ನು ವಿವರಿಸುವಾಗ ಗಾಂಧಿ ಬದುಕಿನ ಈ ಭಾಗಕ್ಕೆ ಯಾವುದೇ ಗಮನ ಸಿಕ್ಕಿಲ್ಲ.

26 ಜನವರಿ1950ರಂದು ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬರುವುದರೊಂದಿಗೆ ಒಂದು ದೊಡ್ಡ ಬದಲಾವಣೆ ಆಯಿತು. ಭಾರತೀಯರೆಲ್ಲರಿಗೂ ಹೇಗೆ ಕಾನೂನುಗಳನ್ನು ಮಾಡಲಾಗುತ್ತೆ, ಇಲ್ಲವೇ ಅನುಷ್ಟಾನಗೊಳಿಸಲಾಗುತ್ತೆ ಅನ್ನುವುದರ ಮೇಲೆ ಒಂದು ಹಿಡಿತವಿದೆ. ನಮಗೆ ಬೇಕಿಲ್ಲದ ಕಾನೂನನ್ನು ತೆಗೆದುಹಾಕುವ ಇಲ್ಲವೇ ಬದಲಾಯಿಸುವ ಸಾಧ್ಯತೆ ನಮಗಿದೆ. ಆದರೆ ಇದನ್ನು ಮಾಡಲು ಖಂಡಿತ ಸರಿಯಾದ ಮಾರ್ಗವೊಂದಿದೆ ಮತ್ತು ಅದನ್ನು ಎಲ್ಲರೂ ಪಾಲಿಸಬೇಕಿದೆ. ಈ ಮಾರ್ಗಗಳನ್ನೇ ಅಂಬೇಡ್ಕರ್ ತಮ್ಮ ಗ್ರಾಮರ್ ಆಫ್ ಅನಾರ್ಕಿ ಭಾಷಣದಲ್ಲಿ ಉಲ್ಲೇಖಿಸಿದ್ದು. ಸಂವಿಧಾನಿಕವಾದ ಮಾರ್ಗಗಳು ಲಭ್ಯವಿರುವಾಗ, ಸತ್ಯಾಗ್ರಹ, ಉಪವಾಸದಂತಹ ಅಸಂವಿಧಾನಿಕ ಮಾರ್ಗಗಳಿಗೆ ಅರ್ಥವಿಲ್ಲ. ಆದ್ದರಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಗಾಂಧಿ ಮಾಡಿದ ಸತ್ಯಾಗ್ರಹಕ್ಕೂ, ನಮ್ಮನ್ನು ನಾವೇ ಆಳಿಕೊಳ್ಳುವ ಈ ದಿನದಲ್ಲಿ ಅಣ್ಣಾ ಹಜಾರೆಯವರು ಮಾಡುತ್ತಿರುವ ಉಪವಾಸಕ್ಕೂ ಹೋಲಿಕೆಯಿಲ್ಲ.

ನಿಲ್ಲಿ ನಿಲ್ಲಿ ನಿಲ್ಲಿ ! : ನನಗೆ ಗೊತ್ತು, ಇದನ್ನು ಓದಿದ ಕೂಡಲೇ ಕೆಲವರು "ನಾನು ಭ್ರಷ್ಟಾಚಾರದ ಪರ, ಕಾಂಗ್ರೆಸ್ ಪರ, ಸರ್ಕಾರದ ಪರ" ಅನ್ನುತ್ತ ನನ್ನ ಮೇಲೆ ಹಾರುತ್ತಾರೆ ಎಂದು. ಅವರಿಗೆ ನಾನು ಹೇಳುವುದು ಇಷ್ಟೇ. ಸಮಾಧಾನದಿಂದ ಇನ್ನೊಬ್ಬರ ಅಭಿಪ್ರಾಯ ಕೇಳುವ, ಅದರ ಬಗ್ಗೆ ಚರ್ಚಿಸುವ ವ್ಯವಧಾನ ಬೆಳೆಸಿಕೊಳ್ಳಿ, ಚರ್ಚೆಯ ನಂತರ ನಿಮ್ಮ ಅಭಿಪ್ರಾಯ ಬದಲಾಗಬಹುದು, ಬದಲಾಗದೇ ಇರಬಹುದು. ನಾನಂತೂ ಅದನ್ನು ಗೌರವಿಸುತ್ತೇನೆ. After all, democracy is all about that. Mob frenzy ಮನಸ್ಥಿತಿ ಇಟ್ಟುಕೊಂಡು ಬಂದರೆ ಯಾವ ಚರ್ಚೆಯೂ ಅಸಾಧ್ಯ.

ಸೋಮವಾರ, ಆಗಸ್ಟ್ 1, 2011

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !

ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ನಡೆದಿರೋ ರಾಜಕೀಯ ಬಿಕ್ಕಟ್ಟು ಇನ್ನೇನು ಮುಗಿಬಹುದು ಅನ್ನೋ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ನಡೆದಿರೋ ವಿದ್ಯಮಾನವನ್ನು ಗಮನಿಸಿದರೆ ಕರ್ನಾಟಕದ ರಾಜಕೀಯ ಒಂದು ದೊಡ್ಡ ಬದಲಾವಣೆಯ ಘಟ್ಟದಲ್ಲಿದೆ ಅನ್ನಬಹುದು. ಯಾಕೆ ಹಾಗಂದೆ ಅಂತ ಕೇಳಿದ್ರೆ ನನ್ನ ಅನಿಸಿಕೆ ಇಂತಿದೆ:

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !
ಕಳೆದ 60 ವರ್ಷದಿಂದಲೂ ನಾವು ನೋಡಿರುವುದು ಏನೆಂದರೆ ಕರ್ನಾಟಕದ ರಾಜಕೀಯ ನಾಯಕರು ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ಅಲ್ಲಿನ ದೊರೆಗಳ ಮುಂದೆ ಕೈ ಕಟ್ಟಿಕೊಂಡು ನಿಂತು, "ಅಪ್ಪಣೆ ಮಹಾಪ್ರಭು" ಅಂತ ನಿಂತುಕೊಳ್ಳೊರು. ಅವರು ಕೊಟ್ಟ ಆಜ್ಞೆನಾ ಪ್ರಸಾದ ಅಂಬಂತೆ ಕಣ್ಣಿಗೊತ್ತಿಕೊಂಡು ವಾಪಸ್ ಬರೋರು. "ನಮ್ದು ನ್ಯಾಶನಲ್ ಪಾರ್ಟಿ ರೀ, ನಾವು ಶಿಸ್ತಿನ ಸಿಪಾಯಿಗಳು ರೀ,,ಹೈಕಮಾಂಡ್ ಮಾಡಿದ ಆಜ್ಞೆ ನಾವ್ ಮೀರುವುದುಂಟೇನು" ಎಂದು ತಮ್ಮ ಗುಲಾಮಗಿರಿಯನ್ನೇ ಖುಷಿಯಾಗಿ ಸಮರ್ಥಿಸಿಕೊಳ್ಳೊರು. ಆದರೆ ಮೊಟ್ಟ ಮೊದಲ ಬಾರಿಗೆ ದೆಹಲಿಯ ಮೂರು ಮತ್ತೊಂದು ನಿವೃತ್ತ ನಾಯಕರಿಗೆ ಸೆಡ್ಡು ಹೊಡೆದು ದೆಹಲಿಯೇ ಬೆಂಗಳೂರಿಗೆ ಬರುವಂತೆ ಮಾಡಿದ್ದು, ಎರಡು ದಿನವಾದರೂ ಅವರಿಗೆ toughest ಫೈಟ್ ಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಿಂದ ಕೇಂದ್ರವಿರಬೇಕು, ಬಾಟಮ್ ಅಪ್ ಆಪ್ರೋಚ್ ಇರಬೇಕು ಅನ್ನುವ ಸಂದೇಶವನ್ನು ಕೊಟ್ಟ ಕಾರಣಕ್ಕೆ ಯಡಿಯೂರಪ್ಪನವರನ್ನು ಮೆಚ್ಚದಿರಲು ಆಗದು.

ಪ್ರಜಾತಂತ್ರದಲ್ಲಿ ಹೈಕಮಾಂಡ್ ಅನ್ನೋದೇ ತಪ್ಪು
ಪ್ರಜಾತಂತ್ರವಿರುವುದು ಜನರಿಂದ ಜನರಿಗಾಗಿ. ಜನರು ಆರಿಸಿ ಕಳಿಸಿದ ನಾಯಕರು ರಾಜ್ಯವಾಳಬೇಕು. ಅವರಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳಲಿ. ಇದೇನಿದು ಹೈಕಮಾಂಡ್ ಅನ್ನೋದು? ಅಸಲಿಗೆ, ಕಮಾಂಡ್ ಅನ್ನೋದೆ ಪ್ರಜಾತಂತ್ರದಲ್ಲಿ ತಪ್ಪು. ಪಾಳೆಗಾರನಂತೆ ಕಮಾಂಡ್ ಮಾಡ್ತಿನಿ ಅನ್ನೋದು ಯಾವ ಸೀಮೆ ಜನತಂತ್ರ? ಬಂದ ಸೋ ಕಾಲ್ಡ್ ವರಿಷ್ಟರು facilitators ಆಗಬೇಕು, messengers ಆಗಬೇಕು. ಅದು ಬಿಟ್ಟು ಇಂತವರೇ ಸಿ.ಎಮ್ ಆಗಬೇಕು ಅಂತ ನಿರ್ಧಾರ ಮಾಡ್ಕೊಂಡು ಬಂದು ಇಲ್ಲಿ ಹೇರಲು ಹೊರಟರೆ ಅದು ಪ್ರಜಾತಂತ್ರವಾಗುತ್ತ? ಅಂತಹ ದೊಣ್ಣೆ ನಾಯಕರಿಗೆ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಿಯಾದ್ದೊಂದು ಮುಟ್ಟಿ ನೋಡಿಕೊಳ್ಳುವಂತ ಫೈಟ್ ಕೊಟ್ಟಿದ್ದಾರೆ ಅಂತಲೇ ಅನ್ನಬಹುದು. ಒಂದಿಡಿ ದಿನ ಎಲ್ಲ ನ್ಯಾಶನಲ್ ಮಾಧ್ಯಮದಲ್ಲೂ ಕರ್ನಾಟಕದ ಸುದ್ದಿ ಆವರಿಸಿಕೊಂಡದ್ದು ನೋಡಿದರೆ ಈ ಮಟ್ಟಿಗೆ ಕನ್ನಡಿಗನೊಬ್ಬ ಫೈಟ್ ಕೊಟ್ನಲ್ಲ ಅನ್ನೋದೇ ನನಗೆ ಸಂತಸದ, ಸೋಜಿಗದ ಸಂಗತಿಯಾಗಿ ಕಾಣೋದು.

ನ್ಯಾಶನಲ್ ಲೀಡರ್ಸ್ ಅಂದ್ರೆ ದೇವರಾ?
ನ್ಯಾಶನಲ್ ಲೀಡರ್ಸ್ ಅಂದ ಕೂಡಲೇ "Paragon of Virtue" ಅನ್ನೋ ರೀತಿಯಲ್ಲಿ ನೈತಿಕತೆಯ ಚಾಂಪಿಯನ್ಸ್ ಅನ್ನೋ ರೀತಿಯಲ್ಲಿ ಅವರನ್ನು ಟ್ರೀಟ್ ಮಾಡುವ, ಅವರು ಹೇಳಿದ್ದೆಲ್ಲ ಸರಿ ಅನ್ನುವ ಗುಲಾಮಗಿರಿಯ ಮನಸ್ಥಿತಿ ನಮ್ಮಲ್ಲಿ ಹಲವು ನಾಯಕರಿಗಿದೆ. ಈಗ ನೈತಿಕತೆಯ ಎಳೆ ಹಿಡಿದು ರಾಜಿನಾಮೆ ಕೇಳಲು ಬಂದಿದ್ದಾರೆಂದು ನನಗಂತೂ ಅನ್ನಿಸಿಲ್ಲ. ಸಂಸತ್ತಿನ ಮಾನ್ಸುನ್ ಅಧಿವೇಶನದಲ್ಲಿ ಕಾಂಗ್ರೆಸ್ ಅನ್ನು ಹಣಿಯಲು ಹೊರಡುವ ಮುನ್ನ ಇವರಿಗೆ ತಾವು ಕೊಂಚ ಕ್ಲೀನ್ ಅನ್ನಿಸಿಕೊಳ್ಳಬೇಕಿತ್ತು. ಅದಕ್ಕೆ ಆರೋಪ ಕೇಳಿದ ತಕ್ಷಣ ಮುಖ್ಯಮಂತ್ರಿಗಳ ರಾಜಿನಾಮೆ ತೆಗೆದುಕೊಳ್ಳುವ ನಾಟಕ. ಅದಿಲ್ಲದಿದ್ದರೆ, ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತರು ಈ ಮೊದಲು ಆರೋಪ ಮಾಡಿದ್ದರು, ತಮ್ಮ ಮಧ್ಯಂತರ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ದೂರಿದ್ದರು, ಆಗೆಲ್ಲ ನ್ಯಾಶನಲ್ ಲೀಡರ್ಸ್ ನಿದ್ದೆ ಮಾಡುತ್ತಿದ್ದರೆ? ನ್ಯಾಶನಲ್ ಲೀಡರ್ಸ್ ಅಂದ್ರೆ ಹೆಚ್ಚು ಜವಾಬ್ದಾರಿ ಇರೋರು, ನೈತಿಕತೆ ಉಳ್ಳವರು ಅನ್ನೋದೆಲ್ಲ ಕಟ್ಟು ಕತೆ. ನೈತಿಕತೆ, ಜವಾಬ್ದಾರಿಯುತ ನಡವಳಿಕೆಯಲ್ಲಿ ಪ್ರಾದೇಶಿಕ ಪಕ್ಷಗಳು ಕೆಳಗೆ, ತಾವು ಮೇಲೆ ಅಂತ ತೋರಿಸಲು ಈ ಪೊಳ್ಳು ವಾದ ಬಳಸೋದೇ ಹೊರತು ಇದಕ್ಕೆ ಹೆಚ್ಚಿನ ಬೆಲೆಯೇನು ಕೊಡಬೇಕಿಲ್ಲ.

ಕೊನೆಹನಿ
ಯಡಿಯೂರಪ್ಪನವರು ಈಗ ತೋರಿದ ಧೈರ್ಯವನ್ನೇ ಕಾಂಗ್ರೆಸ್ ಹೈಕಮಾಂಡ್ ನ ಭೇಟಿ ಆಗೋಕೆ ಒಂದು ವಾರ ಕಾಯೋ ನಮ್ಮ ಸಿದ್ಧರಾಮಯ್ಯನಂತವರು ತೋರಿದ್ರೆ, ನಿಧಾನಕ್ಕಾದ್ರೂ ಸರಿ ಈ ಹೈಕಮಾಂಡ್ ನ ಕಮಾಂಡ್ ಸಂಸ್ಕೃತಿಯ ಬಿಗಿ ಪಟ್ಟಿನಿಂದ ಕರ್ನಾಟಕದ ರಾಜಕೀಯ ಆಚೆ ಬರುತ್ತೆನೋ. ಬೆಂಗಳೂರಿಂದ ದೆಹಲಿ ಇರಬೇಕೇ ಹೊರತು ದೆಹಲಿಯಿಂದ ಬೆಂಗಳೂರಲ್ಲ ಅನ್ನೋ ಬದಲಾವಣೆ ಇನ್ನಾದ್ರೂ ಕರ್ನಾಟಕದ ರಾಜಕೀಯದಲ್ಲಿ ಬರಲಿ.

ಶನಿವಾರ, ಜುಲೈ 23, 2011

ಸಿಂಗಂ ವಿವಾದ - ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳು..

ಸಿಂಗಂ ಅನ್ನುವ ನಕಲು ಚಿತ್ರದಲ್ಲಿ ಕನ್ನಡಿಗರನ್ನು ನಾಯಿಗಳೆಂದು ಜರಿಯುವ ಡೈಲಾಗ್ನಿಂದ ಕರ್ನಾಟಕದಲ್ಲಿ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದ್ದು ಕಂಡೆ. ಕರ್ನಾಟಕದಲ್ಲಿ ವ್ಯಕ್ತವಾದ ಭಾರಿ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿಂಗಂನಲ್ಲಿ ನಟಿಸಿರುವ ಕನ್ನಡ ಮೂಲದ ನಟ ಮಹಾಶಯರೊಬ್ಬರು "ಅದೇನು ದೊಡ್ಡ ವಿಷಯವೇ ಅಲ್ಲ. ಇದರ ವಿರೋಧಕ್ಕೆ ಅರ್ಥವಿಲ್ಲ" ಅಂದರು. ಘಟನೆ ಚಿಕ್ಕದೋ, ದೊಡ್ಡದೋ ಅನ್ನುವುದಕ್ಕಿಂತ ಇಂತಹ ಘಟನೆಯ ಹಿಂದೆ ಮನಸ್ಸಲ್ಲಿ ಏಳುವ ಕೆಲವು ಪ್ರಶ್ನೆಗಳು ಹಲವಾರು.
  • ಇದೊಂದು ಚಿಕ್ಕ ಘಟನೆ ಅನ್ನುವ ಪ್ರಕಾಶ ರೈ ಅವರಿಗೆ ಕರ್ನಾಟಕ-ಮಹಾರಾಷ್ಟ್ರದ ನಡುವೆ ದಶಕಗಳಿಂದ ಗಡಿ ವಿವಾದವಿರುವುದು, ಅದು ಎರಡೂ ಕಡೆಯವರಿಗೆ ಭಾವನಾತ್ಮಕ ವಿಷಯವಾಗಿರುವುದರ ಅರಿವಿಲ್ಲವೇ? ಅರಿವಿದ್ದೂ ಇಂತಹದೊಂದು ಡೈಲಾಗ್ ಪ್ರಯೋಗ ಮಾಡಿರುವುದು ಪ್ರಚೋದಿಸಿ ಮರಾಠಿಗರನ್ನು ಈ ಹಿಂದಿ ಚಿತ್ರದತ್ತ ಸೆಳೆಯುವ playing to the gallery ಅನ್ನುವ ಮನಸ್ಥಿತಿಯಲ್ಲವೇ? ಇಲ್ಲದಿದ್ದರೆ ಚಿತ್ರದಲ್ಲಿ ಕರ್ನಾಟಕದಿಂದ ಸಾವಿರ ಜನರನ್ನು ಕರೆ ತರುವೆ ಎಂದು ಇವರು ಅನ್ನುವುದು, ಅದಕ್ಕೆ ಎದೆ ತಟ್ಟಿ ನಾನು ಮರಾಠ, ನಾನು ಮರಾಠ ಎಂದು ಕೂಗುತ್ತ ಕನ್ನಡಿಗರನ್ನು ನಾಯಿಗಳು ಎಂದು ಹೀರೊ ಬೊಬ್ಬಿರಿಯವುದು ಏನನ್ನು ತೋರಿಸುತ್ತದೆ? Artistic freedom ಹೆಸರಿನಲ್ಲಿ ಯಾವ ಅವಮಾನ ಮಾಡಿದರೂ, ಏನು ಮಾತನಾಡಿದರೂ ಸಹಿಸಿಕೊಳ್ಳಬೇಕೆ? ಅದನ್ನು ಪ್ರಶ್ನಿಸಿ ಬೀದಿಗಿಳಿಯುವುದು ಸಣ್ಣತನವೇ? ಸಂಕುಚಿತ ಮನೋಭಾವನೆಯೇ? ಪ್ರಕಾಶ್ ರೈಗೇನು ಬಿಡಿ, ಇವತ್ತು ಇಲ್ಲಿ ಕನ್ನಡಿಗ, ಅಲ್ಲಿ ತಮಿಳಿಗ, ಇನ್ನೆಲ್ಲೋ ತೆಲುಗ, ಮತ್ತೆಲ್ಲೋ ಇಂಡಿಯನ್ ಅಂದುಕೊಂಡು ತಮ್ಮ ಕೆಲಸ ಮಾಡ್ಕೊಂಡು ಮುಂದಕ್ಕೊಗ್ತಾರೆ. ಎಷ್ಟೇ ಅಂದರೂ ಕಲಾವಿದರಿಗ ಭಾಶೆಯ ಹಂಗಿಲ್ಲವಲ್ಲವೇ? :)
  • ಇಂತದೇ ಡೈಲಾಗ್  ಪ್ರಕಾಶ ರೈ ಕೈಯಲ್ಲಿ ಮರಾಠರ ವಿರುದ್ದ ಉದುರಿಸುವ ಧೈರ್ಯ ನಿರ್ದೇಶಕರಿಗೆದೆಯೇ? ಅಂತಹ ಪ್ರಯತ್ನ ಮಾಡಿದ್ದಲ್ಲಿ ಮಹಾರಾಷ್ಟ್ರ ಇಷ್ಟೊತ್ತಿಗೆ ಹೊತ್ತಿ ಉರಿಯುತ್ತಿತ್ತೆನೋ..ಇದು ಕರ್ನಾಟಕ ನೋಡಿ, ಬಿಟ್ಟಿ ಬಿದ್ದಿರುವ ಊರು, ಜನರು. ಈ ರೀತಿ ಬೆಂಕಿ ಹಚ್ಚೋ ಯಾವ ಕೆಲಸ ಮಾಡಿದ್ರೂ ನಡೆಯುತ್ತೆ ಅನ್ನೋದು ಇದರ ಹಿಂದಿನ ನಂಬಿಕೆಯೇ?
  • ಕಂಠಿ ಅನ್ನುವ ಕನ್ನಡ ಚಿತ್ರದಲ್ಲಿ ಮರಾಠಿಗರ ವಿರುದ್ಧ ಡೈಲಾಗ್ ಇದೆ ಅನ್ನುವ ಕಾರಣವೊಡ್ಡಿ ಎರಡೆರಡು ತಿಂಗಳು ಚಿತ್ರದ ಬಿಡುಗಡೆಯೇ ಆಗದಂತೆ ಮುಂದೂಡಿದ ಸೆನ್ಸಾರ್ ಮಂಡಳಿ ಈ ಚಿತ್ರದಲ್ಲಿ ಇಂತಹದೊಂದು ನೇರಾನೇರ ಪ್ರಚೋದನಕಾರಿ ಡೈಲಾಗ್ ಇದ್ದರೂ ಚಿತ್ರವನ್ನು ಸರ್ಟಿಫೈ ಮಾಡಿದ್ದು ಯಾಕೆ? ಹಿಂದಿ ಚಿತ್ರಕ್ಕೊಂದು, ಕನ್ನಡ ಚಿತ್ರಕ್ಕೊಂದು ಅಂತೇನಾದರೂ ನಿಯಮಗಳಿವೆಯಾ?
  • ತಮಿಳಿನಲ್ಲಿ ಮೊದಲು ಬಂದು, ಆಮೇಲೆ ಕನ್ನಡದಲ್ಲಿ ಕೆಂಪೇಗೌಡನಾಗಿ ಬಂದ ಈ ಚಿತ್ರಕ್ಕೆ ಕರ್ನಾಟಕದಲ್ಲಿ ಸಿಕ್ಕಿದ್ದು ಬರೋಬರಿ 27 ಚಿತ್ರಮಂದಿರಗಳು. ನಿಯಮಾನುಸಾರ 21 ಚಿತ್ರಮಂದಿರಗಳಲ್ಲಿ ಮಾತ್ರವೇ ಪರಭಾಷಾ ಚಿತ್ರ ಬಿಡುಗಡೆಯಾಗಬೇಕು. ಇಲ್ಲಿ ಅದನ್ನು ಮೀರಿ ಬಿಡುಗಡೆ ಮಾಡಿದ ರಿಲಾಯನ್ಸ್ ಸಂಸ್ಥೆಯನ್ನು ಪ್ರಶ್ನಿಸಬೇಕಾದ KFCC ಏನ್ ನಿದ್ದೆ ಮಾಡ್ತಿದೆಯೇ? ಉದ್ಯಮದ ಏಳಿಗೆ, ಉಳಿವಿನ ಬಗ್ಗೆ ಕೆಲಸ ಮಾಡಬೇಕಾದ ಇವರ ಗಮನ ಏನಿದ್ದರೂ ರಿಮೇಕ್ ಚಿತ್ರಕ್ಕೂ ಸಬ್ಸಿಡಿ ಕೊಡಿ, ಅಸಂವಿಧಾನಿಕವಾಗಿ ಡಬ್ಬಿಂಗ್ ನಿಷೇಧಿಸಿ ಅನ್ನುವಂತಹ ಕೆಲಸಕ್ಕೆ ಬಾರದ ಬೇಡಿಕೆಗಳ ಬಗ್ಗೆ ಮಾತ್ರವೇನು?
ಇಂತದ್ದೆಲ್ಲ ಆದಾಗ ನಾವು ಸುಮ್ನೆ ಇದ್ರೆ ಇಂತದ್ದಕ್ಕೆಲ್ಲ ಕೊನೆಯೇ ಇರಲ್ಲ. ನಮ್ಮನ್ನೇ ಆಡ್ಕೊಂಡು, ನಮ್ ನಾಡಲ್ಲೇ ದಂಡಿಯಾಗಿ ಚಿತ್ರ ಬಿಡುಗಡೆ ಮಾಡಿ ನಮ್ ಕಾಸೇ ಬಾಚ್ಕೊಂಡು ಹೋಗೊ ಇಂತಹ ಹೇರಿಕೆಯ ಚಿತ್ರಗಳನ್ನು ನಾವೇ ಕೈಯಾರೆ ನೋಡಿ ಬೆಂಬಲಿಸಬೇಕೇ? ಆಯ್ಕೆ ನಮ್ ನಮ್ ಕೈಯಲ್ಲೇ ಇದೆ.

ಮಂಗಳವಾರ, ಜುಲೈ 12, 2011

ಫೀವರ್ ಗೆ ಹಿಂದಿ ಜ್ವರ - ಎಚ್ಚೆತ್ತುಕೊಳ್ಳಲು ಸಕಾಲ !

ಎಂದಿನಂತೆ ಕಚೇರಿಗೆ ಹೋಗ್ತಾ ಎಫ್.ಎಮ್ ಹಾಕಿದ್ರೆ ಅವಕ್ಕಾದೆ. 104% ಬೊಂಬಾಟ್ ಕನ್ನಡ ಹಾಡುಗಳು ಅಂತೆಲ್ಲ ನಮ್ಮ ಮೆಚ್ಚುಗೆ ಗಳಿಸಿದ್ದ ಫೀವರ್ ಎಫ್.ಎಮ್ ಕನ್ನಡ ಹಾಡಿಗೆ ಸೋಡಾ ಚೀಟಿ ಕೊಟ್ಟು ಕೇವಲ ಹಿಂದಿ ಹಾಡುಗಳನ್ನು ಹಾಕೋಕೆ ಶುರು ಮಾಡಿದ್ರು. ಒಂದ್ ಸಲಿ ಹಾಕಿರೋ ಸ್ಟೇಶನ್ ಸರಿಗಿದೆಯಾ ಅಂತ ನೋಡ್ಕೊಂಡೆ. ಸರಿಯಾಗೇ ಇದೆ, ಆದರೆ ಬೊಂಬಾಟ್ ಕನ್ನಡ ವಾಹಿನಿಯಲ್ಲಿ ಹಿಂದಿ ದೇವತೆಯನ್ನು ಪ್ರತಿಷ್ಟಾಪಿಸಿಯಾಗಿತ್ತು. ಸರಿ ಯಾವುದಕ್ಕೂ ಒಂದ್ ಸಲಿ ಫೀವರ್ ಎಫ್.ಎಮ್ ಅನ್ನೇ ಸಂಪರ್ಕಿಸಿ ಯಾಕ್ರಪ್ಪ ಹೀಗೆ ಅಂತ ಕೇಳೊಣ ಅಂತ ಅವರ ಫೇಸ್ ಬುಕ್ ಪುಟದಲ್ಲಿ ಒಬ್ಬ ಕೇಳುಗನಾಗಿ ವಿಚಾರಿಸಿದ್ರೆ ಸಿಕ್ಕ ಉತ್ತರ: "We have changed the sound of the station", "Music has no language" "Hindi is our national language" ಅನ್ನೋ ಹಸಿ ಸುಳ್ಳಿನ ಕಾಗಕ್ಕ-ಗುಬ್ಬಕ್ಕನ ಕತೆಗಳು. ಇದನ್ನು ಪ್ರತಿಭಟಿಸಿ ಗ್ರಾಹಕರಾಗಿ ನಮ್ಮ ಆಯ್ಕೆ ಕನ್ನಡ, ಅದನ್ನು ಕೊಡದ ವಾಹಿನಿಗೆ ಬೆಂಗಳೂರಿನ ಮಾರುಕಟ್ಟೆಯೇ ಬುದ್ದಿ ಕಲಿಸುತ್ತೆ ಅಂತ ಹೇಳಿದೆ. ಅದಿರಲಿ, ಫೀವರ್ ಎಫ್.ಎಮ್ ನದ್ದು ಒಂದು ಉದಾಹರಣೆಯಷ್ಟೇ. ಇವತ್ತು ನಮ್ಮ ನಾಡಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಈ ನೆಲದ ನುಡಿಯನ್ನು ಬದಿಗೊತ್ತಿ ಪ್ರತಿ ಹಂತದಲ್ಲೂ ವಲಸೆ ಬಂದ ಯಾರೋ ನಾಲ್ಕು ಜನರಿಗಾಗಿ ವ್ಯವಸ್ಥೆಯೆಲ್ಲ ಕಟ್ಟಬೇಕು, ವ್ಯವಸ್ಥಯೆಲ್ಲ ಇರಬೇಕು ಅನ್ನುವಂತೆ ವರ್ತಿಸುವ ವಲಸಿಗರಿಗೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಈ ವ್ಯವಸ್ಥೆಗೆ ಏನೆನ್ನಬೇಕು. ಯಾಕೆ ಹಾಗ್ ಹೇಳಿದೆ ಅನ್ನೋದನ್ನ ಒಂದ್ ನಾಲ್ಕು ಉದಾಹರಣೆ ಜೊತೆ ಹೇಳ್ತಿನಿ.
  • ಬೆಂಗಳೂರಿನ ಟ್ರಾಫಿಕ್ ಪೋಲಿಸರಿಗೆ (ಬಿಟಿಪಿ) ಹಿಂದಿ/ಇಂಗ್ಲಿಷ್ ಬರಲ್ಲ. ಅದರಿಂದ ಎಷ್ಟು ತೊಂದರೆಯಾಯ್ತು ಗೊತ್ತಾ ಅಂತ ಒಂದಿಷ್ಟು ಜನ ಬಿಟಿಪಿಯ ಫೇಸ್ ಬುಕ್ ತಾಣದಲ್ಲಿ ಹೋಗಿ ಗೋಳು ತೋಡಿಕೊಳ್ಳುತ್ತಾರೆ. ಯಾರಪ್ಪ ಈ ನಾಲ್ಕು ಜನರು ಅಂದ್ರೆ ಅದೇ ಅನ್ನ ಅರಸಿ ಬೆಂಗಳೂರಿಗೆ ವಲಸೆ ಬಂದ ಮಹನೀಯರು. ವಲಸೆ ಬಂದ ನಾಡಿನ ವ್ಯವಸ್ಥೆ ತನಗೆ ಅನುಕೂಲವಾಗುವಂತಿರಬೇಕು, ತನಗೆ ಚೂರೇ ಚೂರು ಕಷ್ಟವಾದರೂ ಅದನ್ನು ಸಹಿಸಲು ಆಗದು ಅನ್ನುವ ಈ ಜನರ ಮನಸ್ಥಿತಿ ಎಂತದ್ದು? ವಲಸಿಗರಿಗಾಗಿಯೇ ನಾಡಿನ ಎಲ್ಲ ವ್ಯವಸ್ಥೆಗಳನ್ನು ಜಗತ್ತಿನಲ್ಲಿ ಎಲ್ಲಿಯಾದರೂ ಕಟ್ಟಿದ್ದಾರಾ?
  • ಬಿಟಿಪಿ ಸುರಕ್ಷಿತವಾಗಿ ಗಾಡಿ ಓಡಿಸುವ ಬಗ್ಗೆ ಅರಿವು ಮೂಡಿಸುವ ವಿಡಿಯೋ ಒಂದನ್ನು ಮಾಡುತ್ತೆ, ಆದರೆ ಅದರ ಹಿನ್ನೆಲೆಯಲ್ಲಿ ಇಲ್ಲಾರಿಗೂ ತಿಳಿಯದ ಹಿಂದಿ ಹಾಡೊಂದನ್ನು ಬಳಸುತ್ತೆ. ಕೇಳಿದರೆ ಸಂದೇಶ ಮುಖ್ಯ, ಹಾಡಲ್ಲ ಅಂತಾರೆ. ಪ್ರತಿಭಟಿಸಿ ಕೇಳಿದರೆ ನೀವೇ ಕನ್ನಡ ಹಾಡು ಹಾಡೋರನ್ನ ಕರೆದುಕೊಂಡು ಬನ್ನಿ ಅಂತಾರೆ. ಜನರ ಒಳಿತಿಗಾಗಿ ಇಂತಹದೊಂದು ಕಾರ್ಯಕ್ರಮವನ್ನು ನಮ್ಮದೇ ತೆರಿಗೆ ಹಣದಲ್ಲಿ ರೂಪಿಸುವಾಗ ಅದು ಜನರನ್ನು ತಲುಪಲು ಅವರ ನುಡಿಯಲ್ಲಿರಬೇಕು ಅನ್ನುವುದು ಇವರಿಗೆ ತಿಳಿಯದ ವಿಚಾರವೇ ಅಥವಾ ತಿಳಿದರೂ ಅದರ ಬಗ್ಗೆ ಅಸಡ್ಡೆಯೇ ಅಥವಾ ಮತ್ತದೇ ನಾಲ್ಕು ಮತ್ತೊಂದು ವಲಸಿಗರಿಗೆ ತೊಂದರೆಯಾಗದಿರಲಿ ಅನ್ನುವ "ಮನೆಗೆ ಮಾರಿ, ಊರಿಗೆ ಉಪಕಾರಿ" ಮನಸ್ಥಿತಿಯೇ? ಹೇಳಿ, ವಲಸಿಗರಿಗಾಗಿ ನಾಡಿನ ಎಲ್ಲ ವ್ಯವಸ್ಥೆ ಇರಬೇಕಾದದ್ದೇ ಇಲ್ಲ ನೆಲಸಿಗನಿಗಾಗಿಯೇ?
  • ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು ವಲಸಿಗರು ವರ್ಷದೊಳಗೆ ಕನ್ನಡ ಕಲಿಯುವಂತಾಗಬೇಕು ಅನ್ನುವ ಸಲಹೆಯೊಂದನ್ನು ಸರ್ಕಾರಕ್ಕೆ ನೀಡಿದರೆ ಅದರ ಬಗ್ಗೆ ಜಗತ್ತೇ ತಲೆಕೆಳಗಾಗುವಂತೆ ಕೆಲವು ಇಂಗ್ಲಿಷ್ ಪತ್ರಿಕೆಗಳು ಆಡುತ್ತವೆ, ಅವುಗಳನ್ನು ಓದುವ ಅದೇ ವಲಸಿಗರೂ ಮೈ ಮೇಲೆ ದೆವ್ವ  ಬಂದಂತೆ ಪ್ರತಿಕ್ರಿಯಿಸುತ್ತಾರೆ. ಏನು ಅವರ ಅಳಲು ಅಂದರೆ, ವಲಸಿಗರಿಗೆ ಅದೆಷ್ಟು ತೊಂದರೆಯಾಗಲ್ಲ, ಹೀಗೆಲ್ಲ ವಲಸಿಗರ ಮೇಲೆ ಹೇರಿಕೆ ಮಾಡಬಾರದು ಅಂತಾರೆ. ಇದೇ ಜನರು ಬೇರೆ ದೇಶಕ್ಕೆ ವಲಸೆ ಹೋದಾಗ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಅಲ್ಲಿನ ನುಡಿ ಕಲಿಯುವುದಿಲ್ಲವೇ? ಆದರೆ ಅಂತದೊಂದು ಸಲಹೆ ಇಲ್ಲಿ ಕೇಳಿದ ತಕ್ಷಣವೇ ಸಂವಿಧಾನಕ್ಕೆ ಅಪಚಾರವಾಯ್ತು ಈ ದೇಶದ್ರೋಹಿಗಳಿಂದ ಅನ್ನುವಂತೆ ಪ್ರತಿಕ್ರಿಯಿಸುವ ಇವರ ಮನಸ್ಥಿತಿ ಎಂತಹುದು? ಕರ್ನಾಟಕಕ್ಕೂ ಒಂದು ಅಸ್ಮಿತೆಯಿದೆ, ಗುರುತಿದೆ ಅನ್ನುವುದನ್ನು ಎಂದಿಗಾದರೂ ಈ ಜನರು ಗುರುತಿಸಿಯಾರೇ? ವೈವಿಧ್ಯತೆಯನ್ನು ಅಪ್ಪಿಕೊಳ್ಳುವುದಿರಲಿ, ಒಪ್ಪಿಕೊಳ್ಳಲು ಸಿದ್ದವಿರದ ಜನರಿಗೆ ಏನು ಹೇಳುವುದು?
  • ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಜನ ಸಾಮಾನ್ಯನಿಗೂ ದೊರಕಿಸುವುದು ಈ-ಗವರ್ನನ್ಸ್ ನ ಮೂಲ ಉದ್ದೇಶ. ಇರುವ ಎಲ್ಲ ತಾಣಗಳಲ್ಲೂ ಇಂಗ್ಲಿಷ್, ಅಲ್ಲಲ್ಲಿ ಹಿಂದಿ ಬಳಸುತ್ತಾ, ಎಲ್ಲೂ ನೆಟ್ಟಗೆ ಕನ್ನಡ ಬಳಸದ ರಾಜ್ಯ ಸರ್ಕಾರಿ ವ್ಯವಸ್ಥೆ ಯಾರಿಗಾಗಿ ಈ ವ್ಯವಸ್ಥೆ ಮಾಡಿರುವುದು? ವಲಸಿಗರಿಗೆ ತೊಂದರೆಯಾಗಬಾರದು ಅನ್ನುವ ಕಾಳಜಿಯೇ ಇಲ್ಲೂ ಕೆಲಸ ಮಾಡಿರುವುದಾ?
ಒಂದಿಡೀ ನಾಡಿನ ವ್ಯವಸ್ಥೆಯನ್ನು ಆ ಜನರ ನುಡಿಯ ಸುತ್ತ ರೂಪಿಸದೇ ವಲಸೆ ಬರುವ ಮೂರು, ಹನ್ನೊಂದು ಜನರಿಗಾಗಿ, ಅವರ ಅನುಕೂಲಕ್ಕಾಗಿ ರೂಪಿಸುವುದು ಎಂತಹ ಪೆದ್ದುತನವಲ್ಲವೇ? ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಬಗ್ಗೆ ನಮ್ಮೆಲ್ಲ ಗೆಳೆಯರಿಗೂ ಅರಿವು ಮೂಡಿಸಬೇಕಿದೆ. ಆ ಸುಳ್ಳನ್ನು ಒಪ್ಪುವುದು ನಮ್ಮ ಒಗ್ಗಟ್ಟನ್ನು ಇನ್ನಷ್ಟು ಒಡೆಯುವುದು ಅನ್ನುವದನ್ನು ನಾವು ಮನಗಾಣಬೇಕಿದೆ. ನಮ್ಮೆಲ್ಲ ವ್ಯವಸ್ಥೆ ನಮಗಾಗಿ ನಮ್ಮ ನುಡಿಯಲ್ಲಿರಬೇಕು ಎಂದು ಒತ್ತಾಯಿಸಬೇಕಿದೆ. ವ್ಯವಸ್ಥೆಯ ಎಲ್ಲ ಹಂತದಲ್ಲೂ ಎಲ್ಲ ಅನುಕೂಲಗಳನ್ನು ಈ ನಾಡಿನ ಜನ ಪಡೆಯುವಂತಾಗಲು ನಮ್ಮ ನುಡಿಗೆ ತಕ್ಕ ಸ್ಥಾನ ಸಿಗಬೇಕಿದೆ ಮತ್ತು ಅದನ್ನು ಕೊಡಿಸಿಕೊಳ್ಳುವಲ್ಲಿ ನಮ್ಮ ಪಾತ್ರ ದೊಡ್ಡದಿದೆ. ಯಾರೂ ಮುರಿಯದ ನಮ್ಮ ಒಗ್ಗಟೊಂದೇ ಇದನ್ನು ಆಗುಮಾಡಿಸಬಲ್ಲುದು. ಈ ಒಗ್ಗಟ್ಟನ್ನು ಸಾಧಿಸಲು ಇರುವ ಸಾಧನ ನಾವಾಡುವ ಕನ್ನಡ ನುಡಿಯಾಗಿದೆ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.

ಮಂಗಳವಾರ, ಜೂನ್ 28, 2011

ಸರ್ಕಾರಿ ಇಂಗ್ಲಿಶ್ ಶಾಲೆ - ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?

ಜನರ ಅಪೇಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರಿಂದ ಬೇಡಿಕೆ ಬಂದ್ರೆ ಆರನೇ ತರಗತಿಯಿಂದ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರ ತಯಾರಾಗಿದೆ ಅನ್ನುವ ಹೇಳಿಕೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲೆ ಸಚಿವರಾದ ಕಾಗೇರಿಯವರು ಹೇಳಿದ್ದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಕಂಡೆ. ಬೇಲಿಯೇ ಎದ್ದು ಹೊಲವ ಮೇಯೊದು ಅಂದ್ರೆ ಇದೇನಾ ಅನ್ನಿಸ್ತಾ ಇತ್ತು. ಒಂದೆಡೆ ಪಾಲಿಕೆ ವ್ಯಾಪ್ತಿಯ ಕನ್ನಡ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ಕೊಡಿಸಿ ತಮ್ಮ ಜನ್ಮ ಪಾವನವಾಯ್ತು ಅನ್ನುವ ಸಚಿವರೊಬ್ಬರು, ಇನ್ನೊಂದೆಡೆ ಜನರ ಅಪೇಕ್ಷೆ ಈಡೇರಿಸಲು ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಾಗಿ ಹೇಳುವ ಈ ಸಚಿವರು. ಇವರ ಹೊಣೆಗಾರಿಕೆ ಇಲ್ಲದ ಈ ನಡೆಗಳು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗಟ್ಟಿಯಾದ ಸಮಾಧಿಯೊಂದನ್ನು ಸದ್ದಿಲ್ಲದೇ ಕಟ್ಟುತ್ತಿವೆ ಅನ್ನಬಹುದು. 

ಇದೇ ಸಂದರ್ಭದಲ್ಲಿ ತಾಯ್ನುಡಿ ಶಿಕ್ಷಣದ ಬದಲು ಇಂಗ್ಲಿಶ್ ಬೇಕೆನ್ನುವವರ ವಾದವಾದರೂ ಏನು ಅಂದರೆ ನನಗೆ ಕಾಣುವುದು ಕೆಳಗಿನ ಕೆಲವು ಮಾತುಗಳು. ಅವುಗಳಿಗೆ ನನ್ನ ಅನಿಸಿಕೆ ಏನು ಅನ್ನುವುದನ್ನು ಈ ಸಂದರ್ಭದಲ್ಲಿ ಬರೆದಿರುವೆ.

ಕನ್ನಡ ಮಾಧ್ಯಮ ಬೇಕು ಅನ್ನುವವರದ್ದು ಬೂಟಾಟಿಕೆ. ಕನ್ನಡ ಮಾಧ್ಯಮ ಬೇಕು ಅನ್ನುವ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಶ್ ಮಾಧ್ಯಮದ ಸಿ.ಬಿ.ಎಸ್.ಈ/ಐ.ಸಿ.ಎಸ್.ಈ ಶಾಲೆಗಳಿಗೆ, ಆದರೆ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು ಅನ್ನುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಿ.       
ಆರು ಕೋಟಿ ಜನರ ಕಲಿಕೆ, ದುಡಿಮೆ ರೂಪಿಸಬೇಕಾದ ಸರ್ಕಾರ ತನ್ನ ನೀತಿ ನಿಯಮಗಳನ್ನು ಯಾವ ಆಧಾರದ ಮೇಲೆ ರೂಪಿಸಬೇಕು? ಯಾರೋ ನಾಲ್ಕು ಜನ ಸಾಹಿತಿಗಳು, ಚಿಂತಕರು ತಮ್ಮ ಮಕ್ಕಳನ್ನು ಇಂಗ್ಲಿಶ್  ಶಾಲೆಗಳಿಗೆ ಕಳಿಸುವುದರ ಆಧಾರದ ಮೇಲೆ ಒಂದು ಸರ್ಕಾರವೇ ನಾಡಿನ ಜನರ ಕಲಿಕೆ ರೂಪಿಸುವ ತನ್ನ ಹೊಣೆಗಾರಿಕೆಯಿಂದಲೇ ನುಣುಚಿಕೊಂಡು, ಜನರಿಂದ ಬೇಡಿಕೆ ಇದೆ ಅನ್ನುವ ಕಾರಣವೊಡ್ಡಿ ಇಂಗ್ಲಿಶ್ ಶಾಲೆಗಳನ್ನು ತೆರೆಯಲು ಹೊರಡುವುದು ಎಷ್ಟು ಸರಿ? ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೩ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವ ಅನಿಸಿಕೆಯಿದೆ. ಈ ಕಾರಣದಿಂದಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಷ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಷ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಅರಿಯದ ಮುಗ್ಧರು ಜನಸಾಮಾನ್ಯರು. ಹಾಗಾಗಿ ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಷ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ ಎಂಬ ಬಣ್ಣದ ಮಾತಿನ ಆಕರ್ಷಣೆಗೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ, ಹಾಗಾಗಿ ಇಂದು ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಆದರೆ ಸರ್ಕಾರವೊಂದು ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದೇ ಇಲ್ಲಿನ ಮುಖ್ಯಪ್ರಶ್ನೆಯಾಗಿದೆ.

ಅಮೇರಿಕದಂತಹ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಹೊಂದಿರುವ ದೇಶದಲ್ಲೇ ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲಭೂತ ವಿಷಯಗಳು ಈಗಲೂ ಸರ್ಕಾರದ ಕಣ್ಣಂಚಿನಲ್ಲೇ ಇದೆ ಅನ್ನುವುದನ್ನು ಗಮನಿಸಬೇಕಾಗುತ್ತದೆ. ಅಷ್ಟಕ್ಕೂ ಜನ ಮರುಳೋ ಜಾತ್ರೆ ಮರುಳೋ ಅಂಬಂತೆ ಇಂಗ್ಲಿಶ್ ಶಾಲೆಗಳಿಗೆ ಸೇರಿರುವ ಮಕ್ಕಳೆಲ್ಲ ಇಂಗ್ಲಿಶ್ ಕಲಿತು ಜ್ಞಾನ, ವಿಜ್ಞಾನದ ಶಾಖೆಗಳಲ್ಲಿ ಪ್ರಪಂಚವೇ ಬೆರಗಾಗುವಂತಹ ಸಾಧನೆಯೆನಾದರೂ ಮಾಡಿದ್ದಾರಾ? ಕರ್ನಾಟಕದಲ್ಲಿ ಇವತ್ತು ಅನ್ನ ತಿನ್ನುತ್ತಿರುವವರೆಲ್ಲ ಇಂಗ್ಲಿಶಿನಿಂದಲೇ ಅದನ್ನು ಪಡೆಯುತ್ತಿದ್ದಾರಾ? ಎಲ್ಲೋ ಒಂದಿಷ್ಟು ಐಟಿ, ಕಾಲ್ ಸೆಂಟರ್ ನ ಪುಡಿಗಾಸಿನ ಕೆಲವು ಕೆಲಸಗಳ ಲಾಭವಷ್ಟೇ ಆಗುತ್ತಿರುವುದು. ಅಷ್ಟು ಮಾತ್ರದ ಲಾಭಕ್ಕೆ ಎಲ್ಲೆಡೆ ಸರ್ಕಾರವೇ ಮುಂದೆ ನಿಂತು ಇಂಗ್ಲಿಶ್ ಶಾಲೆ ತೆರೆಯುವ ಮಾತು ಸರ್ಕಾರಕ್ಕೆ ಒಂದು ಭಾಶೆಯಾಗಿ ಇಂಗ್ಲಿಶ್ ಕಲಿಸುವುದಕ್ಕೂ, ಇಂಗ್ಲಿಶ್ ಮಾಧ್ಯಮದಲ್ಲೇ ಎಲ್ಲವನ್ನೂ ಮಾಡುತ್ತೇವೆ ಅನ್ನುವುದಕ್ಕೂ ಇರುವ ಅಂತರವಾದರೂ ಅರ್ಥವಾಗಿದೆಯೇ ಅನ್ನುವ ಪ್ರಶ್ನೆ ಹುಟ್ಟು ಹಾಕುತ್ತಿಲ್ವೇ?

ಇಡೀ ರಾಜ್ಯದಲ್ಲಿ ಇಂಗ್ಲಿಶ್ ಮಾದ್ಯಮ ಶಾಲೆ ತೆರೆದರೆ ಕರ್ನಾಟಕ ಖಂಡಿತ ಮುಂದುವರೆಯುತ್ತೆ, ಏಳಿಗೆ ಹೊಂದುತ್ತೆ.
ಕರ್ನಾಟಕದ 83% ಮಕ್ಕಳು  ಇಂದಿಗೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಈ ಶಾಲೆಗಳನ್ನೆಲ್ಲ ಮುಚ್ಚಿ ಇಂಗ್ಲಿಶ್ ಶಾಲೆಗಳಾಗಿಸುವುದು ಸಾಧ್ಯವೇ? ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. 90 ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಶ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಶ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಶ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಶ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನು ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡುವ ಮಾತನ್ನು ಮಾನ್ಯ ಮಂತ್ರಿಗಳು ಆಡಿದ್ದರೆ ಜನರ ಬಗೆಗಿನ ಕಾಳಜಿಯ ಇವರ ಮಾತುಗಳು ನಿಜ ಅನ್ನಿಸುತ್ತಿತ್ತು.

ಕನ್ನಡದಲ್ಲಿ ಎಲ್ಲಿದೆ ವಿಜ್ಞಾನ-ತಂತ್ರಜ್ಞಾನದ ವಿಷ್ಯಗಳ ಪುಸ್ತಕಗಳು. ಉನ್ನತ ಶಿಕ್ಷಣ ಎಲ್ಲಿದೆ?                                
ಇವತ್ತು ಆ ವ್ಯವಸ್ಥೆ ಇಲ್ಲ ಅಂದರೆ ಪರಿಹಾರ, ಅದನ್ನು ಬಿಟ್ಟು ಇನ್ನೊಂದು ವ್ಯವಸ್ಥೆ ಕಟ್ಟುತ್ತೀನಿ ಅಂತ ಹೊರಡೋದಾ ಇಲ್ಲ ಅದರಲ್ಲಿ ಅಂತಹ ಸಾಧ್ಯತೆ ತರುವುದರತ್ತ ಕೆಲಸ ಮಾಡುವುದಾ? ನಿಮ್ಮನೆ ಮಗುವಿಗೆ ಯಾವುದೋ ಒಂದು ಸಾಮರ್ಥ್ಯ ಇವತ್ತಿಲ್ಲ ಅಂದರೆ,ಆ ಮಗುವನ್ನೇ ಕೈ ಬಿಟ್ಟು ಇನ್ನೊಂದು ಮಗುವನ್ನ ಕೊಂಡು ತರ್ತಿರೋ ಇಲ್ಲ ನಿಮ್ಮ ಮಗುವಲ್ಲಿ ಆ ಸಾಮರ್ಥ್ಯ ದೊರಕಿಸಿಕೊಡುವತ್ತ ಕೆಲಸ ಮಾಡುತ್ತಿರೋ? ಒಂದು ಸಮಯಾಧಾರಿತ ಯೋಜನೆ ಹಾಕಿಕೊಂಡು ಜ್ಞಾನ ಶಾಖೆಯ ಎಲ್ಲ ವಿಷಯಗಳನ್ನು ಕನ್ನಡದಲ್ಲಿ ತರುವತ್ತ ಕೆಲಸ ಮಾಡಬೇಕಾದುದು ಇವತ್ತಿನ ಅಗತ್ಯವೇ ಹೊರತು ಕೈ ಚೆಲ್ಲಿ ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಲ್ಲ ಅಲ್ಲವೇ?
    ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ !
    ಇದೆಲ್ಲ ಒಂದು ತೂಕವಾದರೆ, ಸರ್ಕಾರದ ಇಂತಹ ನಿಲುವೊಂದು ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಇವತ್ತು ಎಲ್ಲೆಲ್ಲಿ ಕನ್ನಡದ ಬಳಕೆ ಚೆನ್ನಾಗಿ ಆಗುತ್ತಿದೆಯೋ, ಅಲ್ಲೆಲ್ಲ ಒಂದು ಪೀಳಿಗೆಯ ಅವಧಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಿದ್ದೀರಾ? ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ  ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ಇಡೀ ಕರ್ನಾಟಕಕ್ಕೆ ಇಂಗ್ಲಿಶಿನ ವ್ಯವಸ್ಥೆ ತರುವುದು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಯಾಗಲಿದೆ ಅನ್ನುವುದು ಸರ್ಕಾರದ ಅರಿವಿಗೆ ಬಂದಿದೆಯೇ? ಸಾವಿರಾರು ವರ್ಷಗಳ ಇತಿಹಾಸ, ಹಿರಿಮೆ ಇರುವ ಒಂದು ಜನಜೀವನ ಒಂದೇ ಒಂದು ಪೀಳಿಗೆಯ ಅವಧಿಯಲ್ಲಿ ಹೊಂದಲಿರುವ ಬದಲಾವಣೆ ಎಂತಹುದು ಅನ್ನುವುದರ ಪ್ರಜ್ಞೆ ಸರ್ಕಾರಕ್ಕಿದೆಯೇ?

    ಕನ್ನಡ ಶಾಲೆಗಳ ಯಶಸ್ಸೊಂದೇ ಬದಲಾಯಿಸಬಲ್ಲುದು
    ತಾಯ್ನುಡಿ ಶಿಕ್ಷಣ ಮಕ್ಕಳ ಬುದ್ದಿ ವಿಕಾಸಕ್ಕೆ ದಾರಿಯೆನ್ನುವುದನ್ನು ಜಗತ್ತಿನ ನೂರಾರು ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಸಾರಿ ಸಾರಿ ಹೇಳುತ್ತಿದ್ದರೂ, ತಾಯ್ನುಡಿ ಶಿಕ್ಷಣದ ವ್ಯವಸ್ಥೆಯಿಂದಲೇ ಇಸ್ರೇಲ್, ಜಪಾನ, ಜರ್ಮನಿ, ಅಮೇರಿಕ, ಇಂಗ್ಲಂಡ್, ಫ್ರಾನ್ಸ್ ನಂತಹ ದೇಶಗಳು ಏಳಿಗೆ ಹೊಂದಿರುವ ಎತ್ತುಗೆ ಕಣ್ ಮುಂದಿದ್ದರೂ, ಅಂತಹದೊಂದು ವ್ಯವಸ್ಥೆ ಕಟ್ಟುವೆಡೆ ಪ್ರಾಮಾಣಿಕವಾಗಿ ಕೆಲಸ ಮಾಡದೇ, ಈ ರೀತಿ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವ ಸರ್ಕಾರಗಳ ಕಣ್ ತೆರೆಸಲು ಇರುವ ಹಾದಿಯೊಂದೇ.. ಕನ್ನಡ ಮಾದ್ಯಮದಲ್ಲೇ ಎಲ್ಲ ಸವಲತ್ತು, ಸೌಕರ್ಯ, ಹೊಸ ಮಾದರಿಯ ಕಲಿಕೆ ಇರುವ ಖಾಸಗಿ ಶಾಲೆಗಳನ್ನು ಕನ್ನಡಿಗರು ಕಟ್ಟಿ,  ಅಂತಹ ಶಾಲೆಗಳ ಮಕ್ಕಳು ಅದ್ಭುತ ಯಶಸ್ಸು ಸಾಧಿಸಬೇಕು, ಅಂತಹ ಯಶಸ್ಸಿನ ಅಲೆಯೊಂದೇ ಸರ್ಕಾರವನ್ನು ಮತ್ತೆ ಕನ್ನಡ ಮಾಧ್ಯಮದೆಡೆಗೆ ಗಮನ ಹರಿಸುವಂತೆ ಮಾಡಬಹುದೆನೋ..

    ಮಂಗಳವಾರ, ಮೇ 10, 2011

    ಕಸದಿಂದ ರಸ ತೆಗೆದ ವಿಲಿಯಂನ ಕತೆ !

    ಜಗತ್ತಿನೆಲ್ಲೆಡೆ ಎಲ್ಲೇ ಒಂದೊಳ್ಳೆ ಐಡಿಯಾ ಜನರ ಜೀವನದ ದಿಕ್ಕು ಬದಲಿಸುವಂತದ್ದಾಗಿದ್ದಲ್ಲಿ, ಎಷ್ಟೋ ಕಶ್ಟದ ಸಮಸ್ಯೆಗಳಿಗೆ ತಟ್ ಅಂತ ಪರಿಹಾರ ಕೊಡಿಸುವಂತದ್ದಾಗಿದಲ್ಲಿ ಅಂತಹ  ಐಡಿಯಾ TED.com (Technology, Entertainment and Design) ನಲ್ಲಿ ಕಾಣಿಸಿಕೊಳ್ಳದೇ ಇರುವುದು ವಿರಳ ಅನ್ನಬಹುದು. ಎಲ್ಲೆಡೆ, ಎಲ್ಲರೊಡನೆ ಹಂಚಿಕೊಳ್ಳಬಹುದಾದಂತಹ ಐಡಿಯಾಗಳಿಗೆಂದೇ ಟೆಡ್ ಕಾನ್ಫರೆನ್ಸ್ ಗಳನ್ನು 1984ರಿಂದಲೇ ಸ್ಯಾಪಲಿಂಗ್ ಫೌಂಡೇಶನ್ ಅನ್ನುವ ಸಂಸ್ಥೆ ನಡೆಸಿಕೊಂಡು ಬಂದಿದೆ. 2006ರಿಂದಿಚೆಗೆ ಟೆಡ್.ಕಾಂ ತಾಣದಲ್ಲಿ 700ಕ್ಕೂ ಹೆಚ್ಚು ಇಂತಹ ಚರ್ಚೆಗಳ ವಿಡಿಯೋಗಳನ್ನು ಪುಕ್ಕಟ್ಟೆ ನೋಡಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ 290ಮಿಲಿಯನ್ ಬಾರಿ ಈ ತಾಣದಲ್ಲಿನ ವಿಡಿಯೋಗಳನ್ನು ನೋಡಲಾಗಿದೆ ಅನ್ನುವುದು ಇಲ್ಲಿ ನಡೆಯುವ ಚರ್ಚೆಗಳ ಗುಣಮಟ್ಟ ಮತ್ತು ವಿಷಯದಲ್ಲಿನ ವ್ಯಾಪ್ತಿಯನ್ನು ತೋರಿಸುತ್ತೆ ಅನ್ನಬಹುದು. ಇರಲಿ, ಇವತ್ತು ಟೆಡ್ ಬಗ್ಗೆ ಇಷ್ಟೆಲ್ಲ ಮಾತನಾಡಲು ಕಾರಣ, ಆಕಸ್ಮಿಕವಾಗಿ ಟೆಡ್ ನಲ್ಲಿ ಎಡತಾಕಿದ ಒಂದೊಳ್ಳೆ ವಿಡಿಯೋ !

    ಗಾಳಿ ಗೋಪುರ ಕಟ್ಟಿದ ವಿಲಿಯಂನ ಕತೆ !
    ಇಡೀ ಜಗತ್ತನ್ನೇ ಸಾಕಿ ಸಲುಹಬಲ್ಲ ಪ್ರಕೃತಿ ಸಂಪತ್ತುಳ್ಳ ಆಫ್ರಿಕಾದ ಹೆಚ್ಚಿನ ದೇಶಗಳು ತಮ್ಮ ಒಳಜಗಳ, ಜನಾಂಗೀಯ ಕಲಹಗಳಲ್ಲಿ ಮುಳುಗಿ, ಒಪ್ಪೊತ್ತಿನ ಕೂಳಿಗೂ ಗತಿಯಿಲ್ಲದ, ನಡೆದಾಡುವ ಅಸ್ತಿಪಂಜರವುಳ್ಳ ಜನರೇ ತುಂಬಿರುವ ದೇಶಗಳಿಂದ ತುಂಬಿದೆ. ಮಲಾವಿ ಅನ್ನುವ ಕಡು ಬಡ ದೇಶವೂ ಇದೇ ಆಫ್ರಿಕಾದಲ್ಲಿದೆ. ಭೂಮಿಯನ್ನೇ ನೆಚ್ಚಿಕೊಂಡು ಬದುಕುವ ಬಹು ಪಾಲು ಜನರಲ್ಲಿ ವಿಲಿಯಂ ಕಂಕವಾಂಬಾ ಎಂಬ 14ರ ಪೋರನು ಕೂಡಾ ಒಬ್ಬ. 2001ರಲ್ಲಿ ಬಂದ ಭೀಕರ ಬರಗಾಲ 6 ಜನ ಅಕ್ಕ-ತಂಗಿಯರಿದ್ದ ಅವನ ಕುಟುಂಬವನ್ನು ಹಸಿವಿನಿಂದ ನರಳುವಂತೆ ಮಾಡಿತ್ತು, ಆತನನ್ನು ಶಾಲೆಯಿಂದಲೂ ಬಿಡಿಸಿತ್ತು. Necessity is the mother of all invention ಎಂಬಂತೆ ತನಗೆರಗಿದ ಬರಕ್ಕೆ ಪರಿಹಾರ ಕಂಡುಕೊಳ್ಳಲು ಹೊರಟ ವಿಲಿಯಂನಿಗೆ ಕಂಡಿದ್ದು ತನ್ನೂರಿನಲ್ಲಿ ಬಿರುಸಿನಿಂದ ಬೀಸುತ್ತಿದ್ದ ಗಾಳಿ !. ಹತ್ತಿರದ ಹೊತ್ತಿಗೆಮನೆಯಿಂದ ತಂದ ಫಿಸಿಕ್ಸ್, ವಿಂಡ್ ಎನರ್ಜಿಯ ಹೊತ್ತಿಗೆಗಳನ್ನು ಓದಿ (ಚಿತ್ರ ನೋಡಿ ಅನ್ನುವುದು ಹೆಚ್ಚು ಸೂಕ್ತ), ಮುರಿದೋದ ಸೈಕಲ್ಲು, ಟ್ರಾಕ್ಟರ್ ಫ್ಯಾನ್, ಪಿವಿಸಿ ಪೈಪ್ ಹೀಗೆ ಗುಜರಿಯಲ್ಲಿ ಸಿಕ್ಕ ಹಲವು ವಸ್ತು ಬಳಸಿ ಗಾಳಿ ಯಂತ್ರ ತಯಾರಿಸಿದ ವಿಲಿಯಂ ಅದರಿಂದ ದೊರೆತ ವಿದ್ಯುತ್ ಶಕ್ತಿ ಬಳಸಿ ತನ್ನ ಜಮೀನಿಗೆ ನೀರಾವರಿ, ಮನೆಗೆ ಬಳಸುವಷ್ಟು ವಿದ್ಯುತ್ ಹುಟ್ಟಿಸಿದ ಕತೆಯನ್ನು ಆತನ ಬಾಯಲ್ಲೇ ಈ ವಿಡಿಯೋದಲ್ಲಿ ಕೇಳಬಹುದು.


    ಗುರಿ ಬೆನ್ನತ್ತಿದ್ದ ಹಟಮಾರಿಗೆ ಗೆಲುವು ಕಟ್ಟಿಟ್ಟ ಬುತ್ತಿ !
    ಕೊನೆಯಲ್ಲಿ ವಿಲಿಯಂ ತನಗೆ ತಿಳಿದಷ್ಟು ಇಂಗ್ಲಿಷಿನಲ್ಲಿ ಒಂದು ಮಾತು ಹೇಳುತ್ತಾನೆ.
    I would like to say something to all the people out there like me, to the Africans and the poor who are struggling with your dreams, god bless. May be one day, you watch this on the Internet, I said to you " trust yourself and believe", whatever happen, don't give it up"

    ಗೆಲ್ಲಲೇಬೇಕು ಅನ್ನುವ ಹಟ ತೊಟ್ಟ ಕನಸುಗಾರನಿಗೆ ಬಡತನ,  ಹಸಿವು ಯಾವುದು ಅಡ್ಡಿ ಮಾಡದು ಅನ್ನುವುದಕ್ಕೆ ವಿಲಿಯಂನಿಗಿಂತ ಒಳ್ಳೆಯ ಎತ್ತುಗೆ ಬೇಕಿಲ್ಲ. ಖ್ಯಾತ ಇಂಗ್ಲಿಷ್ ಲೇಖಕ ಪಾಲೊ ಕೊಯಿಲೊ ತನ್ನ "ದಿ ಅಲ್ಕೆಮಿಸ್ಟ್" ನಲ್ಲಿ ಹೇಳುವಂತೆ "When you want something, all the universe conspires in helping you to achieve it." ಗುರಿ ಬೆನ್ನತ್ತಿದ್ದ ಹಟಮಾರಿ ತನ್ನ ಗುರಿ ತಲುಪುವಂತಾಗಲು ಇಡೀ ಜಗತ್ತೇ ಸಂಚು ರೂಪಿಸುತ್ತೆ. ಬಡತನ, ಹಸಿವು, ಅನಕ್ಷರತೆ, ದಾರಿದ್ರ್ಯ ನಮ್ಮ ಕರ್ನಾಟಕದಲ್ಲೂ ಇದೆ. ಇಲ್ಲಿರುವ ಪ್ರತಿ ಮಗುವೂ ಚಿನ್ನ. ಪ್ರತಿ ಮಕ್ಕಳಲ್ಲೂ ಅಡಗಿರುವ ಪ್ರತಿಭೆ ಹೊರ ತರುವಂತಹ ಕಲಿಕೆಯ ಏರ್ಪಾಡುಗಳು ಇಲ್ಲಿ ಹುಟ್ಟಬೇಕಿದೆ. ಸುಮ್ನೆ ಯೋಚ್ನೆ ಮಾಡಿ, ಒಂದು ದಿನ ಟೆಡ್ ಕಾನ್ಫರೆನ್ಸ್ ಅಲ್ಲಿ ನಿಂತು ರಾಯಚೂರಿನ ಬಸವರಾಜನೋ, ಇಲ್ಲ ಮೈಸೂರಿನ ಹನುಮೇಗೌಡನೋ ತನ್ನ ಯಶಸ್ಸಿನ ಕತೆ ಹೇಳಿಕೊಳ್ಳುತ್ತ ಕನ್ನಡಿಗರೆಲ್ಲರಲ್ಲಿ ಹೆಮ್ಮೆ ಹುಟ್ಟುಹಾಕುವಂತ ದಿನಗಳು ಬಂದಲ್ಲಿ ಎಷ್ಟು ಖುಶಿಯಾಗಬಹುದು ಅಲ್ವಾ? ಕನಸು ಕಾಣಬೇಕು, ಬೇತಾಳದಂತೆ ಅದರ ಬೆನ್ನತ್ತಬೇಕು, ಇಂತಹದೊಂದು ಹಟ ಕನ್ನಡಿಗರಲ್ಲಿ ಹುಟ್ಟಿದ ದಿನ ನಮ್ಮನ್ನು ತಡೆಯಲು ಯಾರಿಂದಲೂ ಆಗದು.

    ಕೊನೆ ಹನಿ
    ಟೆಡ್.ಕಾಂ ನಲ್ಲಿನ ವಿಡಿಯೋಗಳಿಗೆ ಜಗತ್ತಿನ 38 ಭಾಷೆಗಳಲ್ಲಿ ಸಬ್ ಟೈಟಲ್ ವ್ಯವಸ್ಥೆಯಿದೆ. ಮರಾಠಿ, ತಮಿಳಿನಂತಹ ನಮ್ಮ ದೇಶದ ನುಡಿಗಳಲ್ಲೂ ಈ ವ್ಯವಸ್ಥೆಯಿದೆ, ಆದರೆ ನಮ್ಮ ನುಡಿ ಕನ್ನಡದಲ್ಲಿ ಇದಾವುದು ಇಲ್ಲ. ಕನ್ನಡಕ್ಕೂ ಜಗತ್ತಿನ ಹಲವು ದೊಡ್ಡ ಭಾಷೆಗಳಿಗೆ ಸಿಗುವ ಎಲ್ಲ ಮರ್ಯಾದೆ ಕೊಡಿಸುವುದು ಕನ್ನಡದ ಹುಡುಗರ ಕೈಯಲ್ಲೇ ಇದೆ. ಇಲ್ಲಿನ ವಿಡಿಯೋಗಳಿಗೆ ಕನ್ನಡ ಸಬ್ ಟೈಟಲ್ ಸೇರಿಸಲು ಈ ಕೊಂಡಿಯನ್ನು ನೋಡಿ.

    ಮಂಗಳವಾರ, ಏಪ್ರಿಲ್ 19, 2011

    ಕನ್ನಡ ಆಡಳಿತ ಭಾಷೆ ಯಾಕಾಗಿಲ್ಲ ಗೊತ್ತೆ!?

    ಕನ್ನಡ ನಾಡು ಏಕೀಕರಣಗೊಂಡು ದಶಕಗಳೇ ಕಳೆದರೂ ಕನ್ನಡ ಎಲ್ಲ ಹಂತದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿಲ್ಲ ಅನ್ನುವ ಕೂಗು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದೂ ಕೇಳಿರುತ್ತೇವೆ. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರ ಕನ್ನಡ ಜಗತ್ತು: ಅರ್ಧ ಶತಮಾನ ಅನ್ನುವ ಹೊತ್ತಗೆ ಓದುತ್ತಾ ಇದ್ದೆ. ಅಲ್ಲಿ ಈ ಬಗ್ಗೆ ಅವರು ಕೊಡುವ ವಿವರಣೆ ಒಂದು ರೀತಿಯಲ್ಲಿ ಬೇರೆಯಾಗಿದೆ ಅನ್ನಬಹುದು. ಸರ್ಕಾರದ ಹೆಚ್ಚಿನ ಪ್ರಯತ್ನ (ಬಾಯಿ ಮಾತಲ್ಲಿ ಅಂತ ಬೇಕಾದ್ರೂ ಅಂದುಕೊಳ್ಳೊಣ :) )ದ ನಂತರವೂ ಆಡಳಿತದಲ್ಲಿ ಕನ್ನಡ ಬಳಕೆ ಒಂದು ರೀತಿಯಲ್ಲಿ ಪಿರಮಿಡ್ ನಂತೆ ನಮಗೆ ಗೋಚರಿಸುತ್ತೆ. ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾದರೆ, ಮೇಲೆ ಮೇಲೆ ಹೋದಂತೆ ಅದರ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಿದ್ದರೆ ಆಡಳಿತದಲ್ಲಿ ಕನ್ನಡದ ಬಳಕೆ ಅಂದುಕೊಂಡ ಮಟ್ಟದಲ್ಲಿ ಗೆಲುವು ಪಡೆಯದಿರಲು ಕಾರಣವೇನು ಎಂದು ಅವರು ಕೊಟ್ಟ ವಿವರಣೆಯನ್ನು ಈ ಕೆಳಗೆ ಕೊಟ್ಟಿರುವೆ.


    ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. ಕಾರ್ಯಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತದೆ. ಅಥವಾ ಅನುಷ್ಠಾನದ ಹಂತದಲ್ಲಿ ಹಲವು ಎಡರು ತೊಡರುಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇದನ್ನು ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.
    ಏಕೆ ಕನ್ನಡ ಆಡಳಿತ ಭಾಷೆಯಾಗಬೇಕು, ಹಾಗೆ ಆಗದಿದ್ದರೆ ಆಗುವ ತೊಂದರೆಗಳೇನು, ಕನ್ನಡ ಬಳಕೆಯಾಗದಿದ್ದಲ್ಲಿ ಅದರ ಪ್ರಯೋಜನಗಳು ಪೂರ್ವನಿರ್ಧಾರಿತ ಯಾರಿಗಾದರೂ ಇರುವುದು ಸಾಧ್ಯವೆ ಎಂಬ ಪ್ರಶ್ನೆಗಳು ಬಲು ಮುಖ್ಯ. ಜನರ ಭಾಷೆ ಆಡಳಿತ ಭಾಷೆಯಾಗಬೇಕು ಎಂಬ ಗ್ರಹಿತ ನೆಲೆಯಲ್ಲಿ ನಾವು ಮಾತನಾಡುತ್ತಿರುತ್ತೇವೆ. ಆದರೆ ಆಡಳಿತ ಯಂತ್ರದಲ್ಲಿ ಜನಸಾಮಾನ್ಯರ ಪಾತ್ರವೇನು ಎಂಬ ಬಗ್ಗೆ ಯೋಚಿಸುವುದಿಲ್ಲ. ಜನರು ಆಡಳಿತದಲ್ಲಿ ಭಾಗಿಯಾಗಬೇಕಾದರೆ ಅಥವಾ ಆಡಳಿತದ ನಿರ್ಧಾರಗಳಲ್ಲಿ ತಮ್ಮ ಪಾಲು ಇದೆ ಎಂದು ತಿಳಿಯಬೇಕಾದರೆ ಮುಖ್ಯವಾಗಿ ಎರಡು ಸಂಗತಿಗಳು ಅಗತ್ಯ. ಒಂದು: ಆಡಳಿತ ಯಂತ್ರದ ಉತ್ತರದಾಯಿತ್ವ; ಎರಡು: ಆಡಳಿತ ಯಂತ್ರದ ಪಾರದರ್ಶಕತೆ. ಕಳೆದ ಐವತ್ತು ವರ್ಷಗಳ ಚರಿತ್ರೆಯಲ್ಲಿ ಈ ಎರಡು ಸಂಗತಿಗಳು ದೃಢಗೊಳ್ಳುತ್ತಾ ಹೋಗುವ ಬದಲು ಸಡಿಲವಾಗುತ್ತ ಬಂದಿವೆ. ಈ ಕಾರಣದಿಂದ ಜನರು ಆಡಳಿತ ಯಂತ್ರದೊಡನೆ ಹೊಂದಿರುವ ಸಂಬಂಧ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಹಾಗೆ ಉಳಿದಿರುವ ಸಂಬಂಧದಲ್ಲೂ ಅವರ ಅಪೇಕ್ಷೆಗಳು, ದೃಷ್ಟಿಕೋನಗಳು ಮಾನ್ಯವಾಗುವುದಿಲ್ಲ. ಹೀಗಾಗಿ ಜನಭಾಷೆಯೂ ಆಡಳಿತದ ಭಾಷೆಯಾಗಿ ನೆಲೆಗೊಳ್ಳುವ ಅವಕಾಶಗಳು ಕಡಿಮೆಯಾಗುತ್ತಿದೆ.

    ಈ ವಿವರಣೆಯನ್ನು ಮತ್ತಷ್ಟು ಪುಷ್ಟಿಗೊಳಿಸುವ ಅಗತ್ಯವಿದೆ. ಆಡಳಿತವು ಒಪ್ಪಿಕೊಂಡ ಕಲ್ಯಾಣ ರಾಜ್ಯದ ಕಲ್ಪನೆಯಲ್ಲಿ ಆಳುವವರು ಕೊಡುವವರಾಗಿದ್ದರೆ ಜನರು ಪಡೆಯುವವರಾಗಿರುತ್ತಾರೆ. ಈ ಅಸಮ ಸಂಬಂಧದಲ್ಲಿ ಕೊಡುವವರ ಕೈ ಮೇಲಾಗುತ್ತದೆ. ಅವರ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಭಾಷಾ ಅಧ್ಯಯನಕಾರರು ಇಂತಹ ಸಂದರ್ಭಗಳನ್ನು ಗಮನಿಸಿದ್ದಾರೆ. ಇಂತಲ್ಲಿ ಯಾವಾಗಲೂ ಮೇಲುಗೈ ಪಡೆದವರ ಭಾಷೆಯನ್ನೇ ಪಡೆಯುವವರು ಒಪ್ಪಿಕೊಳ್ಳಬೇಕಾಗುತ್ತದೆ ಅಥವಾ ಪಡೆಯುವವರಿಗಿಂತ ತಾವು ಭಿನ್ನ ಎಂದು ಸ್ಥಾಪಿಸಲು ಆಳುವವರು ಬೇರೆಯ ಭಾಷೆಯನ್ನೇ ಆಡುತ್ತಿರುತ್ತಾರೆ;ಬಳಸುತ್ತಿರುತ್ತಾರೆ. ಕೊಂಚ ಸಂಕೀರ್ಣವಾದ ಈ ಸಂಬಂಧದಲ್ಲಿ ಕನ್ನಡದ ಸ್ಥಿತಿ ಏನಾಗಿದೆ ಎನ್ನುವದನ್ನು ಪರಿಶೀಲಿಸಬೇಕು. ಮೇಲು ನೋಟಕ್ಕೆ ಜನಪ್ರತಿನಿಧಿಗಳು ಮತ್ತು ನೌಕರಶಾಹಿಯೂ ಜನ ಸಮುದಾಯದಿಂದಲೇ ರೂಪುಗೊಂಡು ಬಂದವರೆಂದು ಅನಿಸುತ್ತದೆ. ಆದರೆ ಅಧಿಕಾರದ ಚೌಕಟ್ಟಿನಲ್ಲಿ ಅವರು ಜನರ ಜೊತೆಗಿನ ಸಂಪರ್ಕದ ಬದಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಲಸಂಪರ್ಕದಲ್ಲಿ ಸೇರುತ್ತಾರೆ. ಇದರಿಂದ ಅಸಮ ನೆಲೆಯ ಸಂಬಂಧ ಏರ್ಪಡುತ್ತದೆ. ತಾವು ಗುರುತಿಸಿಕೊಂಡ ಜಾಲದ ಅಧಿಕೃತ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿ ಆಡಳಿತಗಾರರು ಬಳಸುತ್ತಾರೆ. ನಮ್ಮ ರಾಜಕೀಯ, ಆರ್ಥಿಕ ಪರಿಸ್ಥಿತಿಯ ಈ ವಿನ್ಯಾಸಗಳು ಕನ್ನಡಕ್ಕೆ ಈ ಹೊತ್ತಿಗೆ ಯಾವ ಸ್ಥಾನಮಾನಗಳು ದೊರಕಬೇಕಿತ್ತೋ ಅದು ಲಭ್ಯವಾಗದಂತೆ ಮಾಡಿವೆ.

    ಒಕ್ಕೂಟ ವ್ಯವಸ್ಥೆಯ ಪಾತ್ರ
    ಕೆ.ವಿ.ನಾರಾಯಣ್ ಅವರ ಈ ಮೇಲಿನ ವಿವರಣೆಯಲ್ಲಿ ಆಡಳಿತ ಯಂತ್ರದೊಡನೆ ಜನರ ಒಡನಾಟ ಬಲು ಕಡಿಮೆ, ಮತ್ತು ಅದರಿಂದ ಜನರ ನುಡಿಗೆ ದೊರೆತ ಸ್ಥಾನವೂ ಅಷ್ಟೇ ಕಡಿಮೆ ಅನ್ನುವುದು ನಿಜಕ್ಕೂ ಸರಿಯಾಗಿದೆ. ಈಗಿರುವ centralised ವ್ಯವಸ್ಥೆಯಿಂದ ಆಚೆ ಬಂದು ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು ಹೆಚ್ಚು ಹೆಚ್ಚು ಜನರ ಬಳಿಗೆ ಕೊಂಡೊಯ್ಯುವುದು, ನಿಜವಾದ ಒಕ್ಕೂಟ ರಾಷ್ಟ್ರವಾಗುವುದು ಇದಕ್ಕೆ ಪರಿಹಾರದ ನಿಟ್ಟಿನಲ್ಲಿ ಅತ್ಯಂತ ಮುಖ್ಯ ಹೆಜ್ಜೆ ಅನ್ನಬಹುದು. ಇನ್ನು ಆಡಳಿತ ವರ್ಗದ ಜನರು ಜನರ ಮಧ್ಯದಿಂದಲೇ ಬಂದಿದ್ದರೂ ಅವರು ಅಧಿಕಾರದ ಚೌಕಟ್ಟಿನಲ್ಲಿ ಬೇರೆ ಸಂಪರ್ಕಜಾಲದಲ್ಲಿ ಸಿಕ್ಕು ತಮ್ಮ ನುಡಿಯನ್ನು ಕಡೆಗಣಿಸುತ್ತಾರೆ ಅನ್ನುವುದು ಕೆವಿಎನ್ ಅವರ ಅನಿಸಿಕೆಯಾದರೂ ನನಗನಿಸೋದು ಇಂತಹುದೇ ವ್ಯವಸ್ಥೆಯಲ್ಲಿರುವ ತಮಿಳುನಾಡು, ಬಂಗಾಲ, ಮಹಾರಾಷ್ಟ್ರ, ಆಂಧ್ರದಂತಹ ರಾಜ್ಯದಲ್ಲಿ ಆಡಳಿತದ ನುಡಿಯಾಗಿ ಆಯಾ ರಾಜ್ಯದ ನುಡಿಗಳು ಪಡೆದಿರುವ ಸ್ಥಾನ ಕನ್ನಡ ಕರ್ನಾಟಕದಲ್ಲಿ ಪಡೆದಿರುವ ಸ್ಥಾನಕ್ಕಿಂತ ಎಷ್ಟೋ ಮೇಲಿದೆ. ಅಲ್ಯಾಕೆ ಹಾಗೆ? ಇಲ್ಯಾಕೆ ಹೀಗೆ? ಅಲ್ಲಿ ನುಡಿ ಅಲ್ಲಿನ ನುಡಿಯಾಡುವ ಜನರನ್ನು ಬೆಸೆದಿರುವುದು, ನುಡಿಗಳಿಗೆ ರಾಜಕೀಯದ ಬಲವಿರುವುದು, ಆ ನುಡಿ, ಅಲ್ಲಿನ ಜನರ ಹಿತ ಕಾಯುವ ಸಿದ್ಧಾಂತವಿರುವ ಪಕ್ಷಗಳು ರಾಜಕೀಯದ ವ್ಯವಸ್ಥೆಯಲ್ಲಿರುವುದು ಕೂಡ ಇದಕ್ಕೆ ಕಾರಣ ಅನ್ನಿಸುವುದಿಲ್ಲವೇ? ಅಂತಹುದೇ ಒಂದು ವ್ಯವಸ್ಥೆ, ಸಿದ್ಧಾಂತವಿರುವ ಪಕ್ಷ ಕರ್ನಾಟಕದಲ್ಲಿ ಇಲ್ಲದಿರುವುದು ಕೂಡ ಕರ್ನಾಟಕದಲ್ಲಿನ ಕನ್ನಡದ ಈ ಸ್ಥಿತಿಗೆ ಅಷ್ಟೇ ಮಹತ್ವದ ಕಾರಣ ಎಂದು ಅನ್ನಿಸುವುದಿಲ್ಲವೇ?