ಸೋಮವಾರ, ಆಗಸ್ಟ್ 1, 2011

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !

ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ನಡೆದಿರೋ ರಾಜಕೀಯ ಬಿಕ್ಕಟ್ಟು ಇನ್ನೇನು ಮುಗಿಬಹುದು ಅನ್ನೋ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ನಡೆದಿರೋ ವಿದ್ಯಮಾನವನ್ನು ಗಮನಿಸಿದರೆ ಕರ್ನಾಟಕದ ರಾಜಕೀಯ ಒಂದು ದೊಡ್ಡ ಬದಲಾವಣೆಯ ಘಟ್ಟದಲ್ಲಿದೆ ಅನ್ನಬಹುದು. ಯಾಕೆ ಹಾಗಂದೆ ಅಂತ ಕೇಳಿದ್ರೆ ನನ್ನ ಅನಿಸಿಕೆ ಇಂತಿದೆ:

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !
ಕಳೆದ 60 ವರ್ಷದಿಂದಲೂ ನಾವು ನೋಡಿರುವುದು ಏನೆಂದರೆ ಕರ್ನಾಟಕದ ರಾಜಕೀಯ ನಾಯಕರು ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ಅಲ್ಲಿನ ದೊರೆಗಳ ಮುಂದೆ ಕೈ ಕಟ್ಟಿಕೊಂಡು ನಿಂತು, "ಅಪ್ಪಣೆ ಮಹಾಪ್ರಭು" ಅಂತ ನಿಂತುಕೊಳ್ಳೊರು. ಅವರು ಕೊಟ್ಟ ಆಜ್ಞೆನಾ ಪ್ರಸಾದ ಅಂಬಂತೆ ಕಣ್ಣಿಗೊತ್ತಿಕೊಂಡು ವಾಪಸ್ ಬರೋರು. "ನಮ್ದು ನ್ಯಾಶನಲ್ ಪಾರ್ಟಿ ರೀ, ನಾವು ಶಿಸ್ತಿನ ಸಿಪಾಯಿಗಳು ರೀ,,ಹೈಕಮಾಂಡ್ ಮಾಡಿದ ಆಜ್ಞೆ ನಾವ್ ಮೀರುವುದುಂಟೇನು" ಎಂದು ತಮ್ಮ ಗುಲಾಮಗಿರಿಯನ್ನೇ ಖುಷಿಯಾಗಿ ಸಮರ್ಥಿಸಿಕೊಳ್ಳೊರು. ಆದರೆ ಮೊಟ್ಟ ಮೊದಲ ಬಾರಿಗೆ ದೆಹಲಿಯ ಮೂರು ಮತ್ತೊಂದು ನಿವೃತ್ತ ನಾಯಕರಿಗೆ ಸೆಡ್ಡು ಹೊಡೆದು ದೆಹಲಿಯೇ ಬೆಂಗಳೂರಿಗೆ ಬರುವಂತೆ ಮಾಡಿದ್ದು, ಎರಡು ದಿನವಾದರೂ ಅವರಿಗೆ toughest ಫೈಟ್ ಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಿಂದ ಕೇಂದ್ರವಿರಬೇಕು, ಬಾಟಮ್ ಅಪ್ ಆಪ್ರೋಚ್ ಇರಬೇಕು ಅನ್ನುವ ಸಂದೇಶವನ್ನು ಕೊಟ್ಟ ಕಾರಣಕ್ಕೆ ಯಡಿಯೂರಪ್ಪನವರನ್ನು ಮೆಚ್ಚದಿರಲು ಆಗದು.

ಪ್ರಜಾತಂತ್ರದಲ್ಲಿ ಹೈಕಮಾಂಡ್ ಅನ್ನೋದೇ ತಪ್ಪು
ಪ್ರಜಾತಂತ್ರವಿರುವುದು ಜನರಿಂದ ಜನರಿಗಾಗಿ. ಜನರು ಆರಿಸಿ ಕಳಿಸಿದ ನಾಯಕರು ರಾಜ್ಯವಾಳಬೇಕು. ಅವರಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳಲಿ. ಇದೇನಿದು ಹೈಕಮಾಂಡ್ ಅನ್ನೋದು? ಅಸಲಿಗೆ, ಕಮಾಂಡ್ ಅನ್ನೋದೆ ಪ್ರಜಾತಂತ್ರದಲ್ಲಿ ತಪ್ಪು. ಪಾಳೆಗಾರನಂತೆ ಕಮಾಂಡ್ ಮಾಡ್ತಿನಿ ಅನ್ನೋದು ಯಾವ ಸೀಮೆ ಜನತಂತ್ರ? ಬಂದ ಸೋ ಕಾಲ್ಡ್ ವರಿಷ್ಟರು facilitators ಆಗಬೇಕು, messengers ಆಗಬೇಕು. ಅದು ಬಿಟ್ಟು ಇಂತವರೇ ಸಿ.ಎಮ್ ಆಗಬೇಕು ಅಂತ ನಿರ್ಧಾರ ಮಾಡ್ಕೊಂಡು ಬಂದು ಇಲ್ಲಿ ಹೇರಲು ಹೊರಟರೆ ಅದು ಪ್ರಜಾತಂತ್ರವಾಗುತ್ತ? ಅಂತಹ ದೊಣ್ಣೆ ನಾಯಕರಿಗೆ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಿಯಾದ್ದೊಂದು ಮುಟ್ಟಿ ನೋಡಿಕೊಳ್ಳುವಂತ ಫೈಟ್ ಕೊಟ್ಟಿದ್ದಾರೆ ಅಂತಲೇ ಅನ್ನಬಹುದು. ಒಂದಿಡಿ ದಿನ ಎಲ್ಲ ನ್ಯಾಶನಲ್ ಮಾಧ್ಯಮದಲ್ಲೂ ಕರ್ನಾಟಕದ ಸುದ್ದಿ ಆವರಿಸಿಕೊಂಡದ್ದು ನೋಡಿದರೆ ಈ ಮಟ್ಟಿಗೆ ಕನ್ನಡಿಗನೊಬ್ಬ ಫೈಟ್ ಕೊಟ್ನಲ್ಲ ಅನ್ನೋದೇ ನನಗೆ ಸಂತಸದ, ಸೋಜಿಗದ ಸಂಗತಿಯಾಗಿ ಕಾಣೋದು.

ನ್ಯಾಶನಲ್ ಲೀಡರ್ಸ್ ಅಂದ್ರೆ ದೇವರಾ?
ನ್ಯಾಶನಲ್ ಲೀಡರ್ಸ್ ಅಂದ ಕೂಡಲೇ "Paragon of Virtue" ಅನ್ನೋ ರೀತಿಯಲ್ಲಿ ನೈತಿಕತೆಯ ಚಾಂಪಿಯನ್ಸ್ ಅನ್ನೋ ರೀತಿಯಲ್ಲಿ ಅವರನ್ನು ಟ್ರೀಟ್ ಮಾಡುವ, ಅವರು ಹೇಳಿದ್ದೆಲ್ಲ ಸರಿ ಅನ್ನುವ ಗುಲಾಮಗಿರಿಯ ಮನಸ್ಥಿತಿ ನಮ್ಮಲ್ಲಿ ಹಲವು ನಾಯಕರಿಗಿದೆ. ಈಗ ನೈತಿಕತೆಯ ಎಳೆ ಹಿಡಿದು ರಾಜಿನಾಮೆ ಕೇಳಲು ಬಂದಿದ್ದಾರೆಂದು ನನಗಂತೂ ಅನ್ನಿಸಿಲ್ಲ. ಸಂಸತ್ತಿನ ಮಾನ್ಸುನ್ ಅಧಿವೇಶನದಲ್ಲಿ ಕಾಂಗ್ರೆಸ್ ಅನ್ನು ಹಣಿಯಲು ಹೊರಡುವ ಮುನ್ನ ಇವರಿಗೆ ತಾವು ಕೊಂಚ ಕ್ಲೀನ್ ಅನ್ನಿಸಿಕೊಳ್ಳಬೇಕಿತ್ತು. ಅದಕ್ಕೆ ಆರೋಪ ಕೇಳಿದ ತಕ್ಷಣ ಮುಖ್ಯಮಂತ್ರಿಗಳ ರಾಜಿನಾಮೆ ತೆಗೆದುಕೊಳ್ಳುವ ನಾಟಕ. ಅದಿಲ್ಲದಿದ್ದರೆ, ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತರು ಈ ಮೊದಲು ಆರೋಪ ಮಾಡಿದ್ದರು, ತಮ್ಮ ಮಧ್ಯಂತರ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ದೂರಿದ್ದರು, ಆಗೆಲ್ಲ ನ್ಯಾಶನಲ್ ಲೀಡರ್ಸ್ ನಿದ್ದೆ ಮಾಡುತ್ತಿದ್ದರೆ? ನ್ಯಾಶನಲ್ ಲೀಡರ್ಸ್ ಅಂದ್ರೆ ಹೆಚ್ಚು ಜವಾಬ್ದಾರಿ ಇರೋರು, ನೈತಿಕತೆ ಉಳ್ಳವರು ಅನ್ನೋದೆಲ್ಲ ಕಟ್ಟು ಕತೆ. ನೈತಿಕತೆ, ಜವಾಬ್ದಾರಿಯುತ ನಡವಳಿಕೆಯಲ್ಲಿ ಪ್ರಾದೇಶಿಕ ಪಕ್ಷಗಳು ಕೆಳಗೆ, ತಾವು ಮೇಲೆ ಅಂತ ತೋರಿಸಲು ಈ ಪೊಳ್ಳು ವಾದ ಬಳಸೋದೇ ಹೊರತು ಇದಕ್ಕೆ ಹೆಚ್ಚಿನ ಬೆಲೆಯೇನು ಕೊಡಬೇಕಿಲ್ಲ.

ಕೊನೆಹನಿ
ಯಡಿಯೂರಪ್ಪನವರು ಈಗ ತೋರಿದ ಧೈರ್ಯವನ್ನೇ ಕಾಂಗ್ರೆಸ್ ಹೈಕಮಾಂಡ್ ನ ಭೇಟಿ ಆಗೋಕೆ ಒಂದು ವಾರ ಕಾಯೋ ನಮ್ಮ ಸಿದ್ಧರಾಮಯ್ಯನಂತವರು ತೋರಿದ್ರೆ, ನಿಧಾನಕ್ಕಾದ್ರೂ ಸರಿ ಈ ಹೈಕಮಾಂಡ್ ನ ಕಮಾಂಡ್ ಸಂಸ್ಕೃತಿಯ ಬಿಗಿ ಪಟ್ಟಿನಿಂದ ಕರ್ನಾಟಕದ ರಾಜಕೀಯ ಆಚೆ ಬರುತ್ತೆನೋ. ಬೆಂಗಳೂರಿಂದ ದೆಹಲಿ ಇರಬೇಕೇ ಹೊರತು ದೆಹಲಿಯಿಂದ ಬೆಂಗಳೂರಲ್ಲ ಅನ್ನೋ ಬದಲಾವಣೆ ಇನ್ನಾದ್ರೂ ಕರ್ನಾಟಕದ ರಾಜಕೀಯದಲ್ಲಿ ಬರಲಿ.

6 ಕಾಮೆಂಟ್‌ಗಳು:

  1. Nivu bareda lininalli tumba artha ide.Namma yella nayakaru ide rithi varthisidare karnatakakke tumba valle bhavisya ide.

    Anil

    ಪ್ರತ್ಯುತ್ತರಅಳಿಸಿ
  2. ಒಂದು ರೀತಿಯಲ್ಲಿ ಯಡಿಯೂರಪ್ಪನ ಭಂಡತನವನ್ನು ಸಾಧನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿರುವಂತಿದೆ.
    ಕನ್ನಡ, ಕರ್ನಾಟಕಕ್ಕೆ ಮಾನ್ಯತೆ ಸಿಗಬೇಕು ನಿಜ ಆದರೆ ಈಗ ಸಿಕ್ಕಂತಹ ಕುಖ್ಯಾತಿಯಲ್ಲ. ಇದೇ ದೆಹಲಿ ನಾಯಕರನ್ನು ಇಲ್ಲಿ ಒಂದೊಳ್ಳೆ ಕೆಲಸ ಮಾಡಿ ಇದೇ ಯಡಿಯೂರಪ್ಪ ಅಲ್ಲಿಗೆ ಹೋಗಿ ಆಮಂತ್ರಿಸದೆ ಇಲ್ಲಿಗೆ ಬರುವ ಹಾಗೆ ಮಾಡಿದ್ದಿದ್ದರೆ ಅದಕ್ಕೆ ಭೇಷ್ ಎನ್ನಬಹುದಿತ್ತು. ಇಂತಹ ಭಂಡತನವನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲವೇನೋ ಎಂಬುದು ನನ್ನ ಭಾವನೆ.

    ಪ್ರತ್ಯುತ್ತರಅಳಿಸಿ
  3. ಅನಾಮಧೇಯರೇ,
    ನಾನು ಇಲ್ಲೆಲ್ಲೂ ಯಡಿಯೂರಪ್ಪನವರ ಸರಿ ತಪ್ಪಿನ ಬಗ್ಗೆ ಮಾತನಾಡಿಲ್ಲ. ಕಾನೂನು ಪ್ರಕಾರ ತನಿಖೆ ನಡೆದು ಅದರಲ್ಲಿ ಅವರು ತಪ್ಪು ಮಾಡಿದ್ದಾರೆ ಅಂತಾದಾಗ, ಅದಕ್ಕೆ ತಕ್ಕ ಶಿಕ್ಷೆಯಾಗಬೇಕು.
    ಇಲ್ಲಿ ನನ್ನ ಉದ್ದೇಶವಿದ್ದಿದ್ದು ಮೊಟ್ಟ ಮೊದಲ ಬಾರಿಗೆ ಕನ್ನಡಿಗನೊಬ್ಬ ತನ್ನ ಗುಲಾಮಗಿರಿಯ ಧೋರಣೆ ಕೈ ಬಿಟ್ಟು ಕರ್ನಾಟಕದಿಂದ ಭಾರತ ಅನ್ನುವ ಸಂದೇಶ ಕೊಟ್ಟಿದ್ದು ನನಗೆ ಮೆಚ್ಚಿಗೆಯಾಗಿದ್ದು. ನನ್ನ ಬ್ಲಾಗ್ ಅನ್ನು ಅಷ್ಟು ಮಾತ್ರಕ್ಕೆ ಸೀಮಿತಗೊಳಿಸಿ ಓದಿ ಎಂದು ಕೇಳುವೆ.

    ಪ್ರತ್ಯುತ್ತರಅಳಿಸಿ
  4. ಯಾರು ಭಂಡರು ಇಲ್ಲಿ. ಹೋದ ವಾರದವರೆಗೆ Nitin Gadkari & gang ಗಿಗೆ ಬ್ರಶ್ಟಾಚಾರ ಕಾಣಿಸಲಿಲ್ಲವೆ? ಕೋತಿ ಮೊಸರು ತಿಂದು ಮೇಕೆ ಮೂತಿಗೆ ಮೆತ್ತಿದಂತಿದೆ ಕತೆ. ಇಲ್ಲಿ ಮೇಕೆ ಯಾರು, ಕೋತಿ ಯಾರು ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ.

    ಪ್ರತ್ಯುತ್ತರಅಳಿಸಿ
  5. ನೀವು ಹೇಳಿದ್ದು ಸರಿ ಅದರೇ ಈ ಹೈಕಮಾ0ಡ್ 2009 ರಲ್ಲಿ ರೆಡ್ಡಿ ಗಳ ವಿರುದ್ದ ಕ್ರಮ ತಗೋ0ಡಿದ್ದರೇ ಇವತ್ತು ಯಡಿಯ್ಯೂರಪ್ಪ ಈಗಾಗುತ್ತಿರಲಿಲ್ಲ ಅಲ್ಲವಾ????

    ಪ್ರತ್ಯುತ್ತರಅಳಿಸಿ
  6. Hi Vasanth,
    Nivu helodu nija , Adaru ee sannniveshavannu Paramarshi Nodidare .. elli Rajakiya mattu adarinaguttiruva Rajyada Sampattu edakkela yaru Hone. Edella kilu Mattada rajakeeya .. edakella karana Yadiurappa hagu Hana( Money). Here every one got money the central all the politicians got money from state ministry and keep quite , because they corrupted from Yadiurappa. This is the system where no one care about the public and system. Every week Yadiyurappa and his family are facing new issues and cases. Next election if this happens again then its difficult for your karnataka.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !