ಗುರುವಾರ, ಡಿಸೆಂಬರ್ 29, 2011

ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?

ಭಾರತ ಅನ್ನುವುದು ಒಂದು ಒಕ್ಕೂಟ. ಭಾಷೆ, ಸಂಸ್ಕೃತಿ, ಆಚರಣೆ ಹೀಗೆ ಎಲ್ಲದರಲ್ಲೂ ಇಷ್ಟೊಂದು ವೈವಿಧ್ಯತೆಯ ನೆಲೆಯಾಗಿರುವ ಕಾರಣದಿಂದಲೇ ಇಲ್ಲಿ ಆಡಳಿತ ಅನ್ನುವುದು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಒಕ್ಕೂಟ ಮಾದರಿಯ ಆಡಳಿತ ವ್ಯವಸ್ಥೆ ಸರಿ ಅನ್ನುವ ನಿಲುವಿಗೆ ಸಂವಿಧಾನ ಬರೆದವರು ಬಂದಿದ್ದರಾದರೂ ಬ್ರಿಟಿಷರ ಬಳುವಳಿಯಾದ ಸಂವಿಧಾನವನ್ನೇ ಇಟ್ಟುಕೊಂಡ ಕಟ್ಟಿಕೊಂಡ ಭಾರತದ ಸಂವಿಧಾನದಲ್ಲಿ ಬ್ರಿಟಿಷರ ಕಾಲದಲ್ಲಿದ್ದಂತೆಯೇ ಕೇಂದ್ರ ಸರ್ಕಾರಕ್ಕೆ ಹೆಚ್ಚು ಹೆಚ್ಚು ಅಧಿಕಾರ ಕೊಡುವ, ಕೇಂದ್ರಿಕೃತ ವ್ಯವಸ್ಥೆ ಕಲ್ಪಿಸುವ, ರಾಜ್ಯಗಳನ್ನು ಕೇಂದ್ರದ ಅಡಿಯಾಳಾಗಿಸುವ ಹಲವು ಅವಕಾಶಗಳನ್ನು ಸಂವಿಧಾನದಲ್ಲಿ ಕೇಂದ್ರಕ್ಕೆ ಕೊಡಲಾಗಿದೆ. ಆದರೆ ಇಂದು ಆಡಳಿತವನ್ನು ನಿಜಕ್ಕೂ ಪರಿಣಾಮಕಾರಿಯಾಗಿಸಲು ಹೆಚ್ಚೆಚ್ಚು ಅಧಿಕಾರವನ್ನು ವಿಕೇಂದ್ರಿಕರಣಗೊಳಿಸುವ ಅಗತ್ಯ, ರಾಜ್ಯಗಳಿಗೆ ಇನ್ನಷ್ಟು ಅಧಿಕಾರ, ಸ್ವಾಯತ್ತತೆ ಕೊಡಬೇಕಾದ ಬಗ್ಗೆ ಚರ್ಚೆ ನಡೆಯಬೇಕಾದ ಕಾಲ ಬಂದಿದೆ ಅನ್ನಬಹುದು. ಅಗತ್ಯ ಹೀಗಿರುವಾಗ, ರಾಜ್ಯಗಳ ಕೈಯಲ್ಲಿ ಇರುವ ಕೆಲವೇ ಕೆಲವು ಅಧಿಕಾರವನ್ನು ಕೂಡಾ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೇಂದ್ರ ನಿರಂತರವಾಗಿ ಮುಂದಾಗುತ್ತಿದೆ. ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೆಲೆ ಅದರ ಪರಿಣಾಮಗಳ ಬಗ್ಗೆ ಕೆಲ ರಾಜ್ಯಗಳು ಎತ್ತಿರುವ ಪ್ರಶ್ನೆಯ ಬಗ್ಗೆ ಉತ್ತರಿಸುತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಒಕ್ಕೂಟ ವ್ಯವಸ್ಥೆ ಅಡ್ಡಿಯಾಗಬಾರದು ಅನ್ನುವ ಹೇಳಿಕೆ ನೀಡಿದರು. ಅವರ ಹೇಳಿಕೆ ಮತ್ತು ಅದರ ಹಿಂದಿನ ಮನಸ್ಥಿತಿಯ ಬಗ್ಗೆ ನಾವು ಯೋಚಿಸಬೇಕಾಗಿದೆ.

Good government is no substitute for self-government - Gandhi
ಪ್ರಧಾನಿಯವರ ಹೇಳಿಕೆಯಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದರೂ ಪರವಾಗಿಲ್ಲ ಅನ್ನುವ ಅರ್ಥ ಇಣುಕುತ್ತೆ. ಅಸಲಿಗೆ, ಭ್ರಷ್ಟಾಚಾರದ ನಿಗ್ರಹಕ್ಕೆ ಬೇಕಾಗಿರುವ ಹೊಸ ನೀತಿ ನಿಯಮಗಳು, ಕಾನೂನು ಸುಧಾರಣೆ ಮುಂತಾದವುಗಳ ಅಗತ್ಯದ ಬಗ್ಗೆ ಯಾರಿಗೂ ಗೊಂದಲವಿಲ್ಲ, ಆದರೆ ಅದನ್ನು ಸಾಧಿಸಲು ಒಕ್ಕೂಟದಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವುದರಲ್ಲಿ ಏನು ತಪ್ಪಿಲ್ಲ ಅನ್ನುವುದು ರಾಜ್ಯಗಳ ಸ್ವಾಯತ್ತತೆ, ಅಸ್ತಿತ್ವ, ಅಧಿಕಾರದ ವ್ಯಾಪ್ತಿಯ ಬಗ್ಗೆ ಕೇಂದ್ರಕ್ಕಿರುವ ಬದ್ದತೆ ಏನು, ಎಷ್ಟು ಅನ್ನುವ ಪ್ರಶ್ನೆ ಎತ್ತುವುದಿಲ್ಲವೇ?  ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದು ಯಾವುದು ಇಲ್ಲ ಅನ್ನುವ ಮಾತಗಳನ್ನು ಗಾಂಧಿ ಹೇಳಿದ್ದರು." ’good government is no substitute for self-government’. It means a continuous effort to be independent of government control, whether it is foreign government or whether it is national." ಅನ್ನುವ ಮಾತನ್ನು ಮಹಾತ್ಮ ಗಾಂಧಿಯವರು ಹೇಳಿದ್ದರು. ಅಮೇರಿಕದವರು ಇನ್ನೂ ಚೆನ್ನಾಗಿ ಆಳುತ್ತಾರೆ ಎಂದು ನಮ್ಮನ್ನು ನಾವು ಆಳಿಕೊಳ್ಳುವ ಹಕ್ಕನ್ನು ಅವರ ಕೈಗೆ ಕೊಡಲಾಗುವುದೇ? ಇಲ್ಲ ತಾನೇ? ಹಾಗಿದ್ದಲ್ಲಿ ಒಳ್ಳೆಯ ಆಡಳಿತಕ್ಕೆ ಹೊಸ ಕಾನೂನಿನ ನೆಪದಲ್ಲಿ ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸುವ, ಇನ್ನಷ್ಟು ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ, ರಾಜ್ಯಗಳನ್ನು ಹೆಚ್ಚು ಕಡಿಮೆ ತನ್ನ ಅಡಿಯಾಳಾಗಿಸುವಂತಹ ಕೇಂದ್ರದ ಪ್ರಯತ್ನವನ್ನು ಒಪ್ಪಲಾದೀತೆ? ಪ್ರಧಾನಿಯವರ ಮಾತಲ್ಲಿ ಒಕ್ಕೂಟದ ಪಾಲುದಾರರ ಅಭಿಪ್ರಾಯವನ್ನು ಪರಿಗಣಿಸುವ, ಗೌರವಿಸುವ ಧೋರಣೆಗಿಂತಲೂ ಕೇಂದ್ರ ಹೇಳಿದ್ದನ್ನು ರಾಜ್ಯಗಳು ಸುಮ್ಮನೆ ಒಪ್ಪಲಿ ಅನ್ನುವ ನಿಲುವಿದ್ದಂತೆ ಅನ್ನಿಸುವುದಿಲ್ಲವೇ?  

ಸಮ ಗೌರವದ ಒಕ್ಕೂಟ ಎಲ್ಲ ರಾಜ್ಯಗಳ ಹಕ್ಕಲ್ಲವೇ?
ಕಳೆದ ೬೪ ವರ್ಷದ ಆಡಳಿತವನ್ನು ಗಮನಿಸಿದರೆ ಎಲ್ಲ ಕಾಲದಲ್ಲೂ ರಾಜ್ಯಗಳನ್ನು ತನ್ನ ಮೂಗಿನ ನೇರಕ್ಕೆ ನಡೆಸಿಕೊಂಡ ಇತಿಹಾಸ ಕೇಂದ್ರಕ್ಕಿದೆ. ರಾಜ್ಯದ ಪಟ್ಟಿಯಲ್ಲಿದ್ದ ಕಲಿಕೆಯನ್ನು ತನ್ನ ತೆಕ್ಕೆಗೂ ಬರುವಂತೆ ಕಂಕರೆಂಟ್ ಪಟ್ಟಿಗೆ ಸೇರಿಸಿದ್ದಾಗಿರಬಹುದು, ರಾಜ್ಯಗಳ ಆರ್ಥಿಕತೆಯ ಮೇಲಿನ ಪರಿಣಾಮಗಳೇನು, ರಾಜ್ಯಗಳಿಗೆ ಸರಿಯಾಗಿ ಅನುಷ್ಟಾನ ಮಾಡುವ ವ್ಯವಸ್ಥೆ ಇಂದಿದೆಯೇ? ಅನ್ನುವುದನ್ನು ಎಣಿಸದೇ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಯನ್ನು ರಾಜ್ಯಗಳ ಮೇಲೆ ಹೊರಿಸಿದ್ದಾಗಿರಬಹುದು,  ಇಲ್ಲವೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪಾಲು ಕೊಟ್ಟು ಲಾಭ ಬಂದರೆ ನಮಗೆ ಪಾಲು ಕೊಡಿ, ನಷ್ಟ ಆದರೆ ನೀವೇ ತುಂಬಿ ಅನ್ನುವಂತಹ ಒಪ್ಪಂದವನ್ನು ಕರ್ನಾಟಕ ಸರ್ಕಾರದ ಜೊತೆ ಮಾಡಿಕೊಂಡಿದ್ದಾಗಿರಬಹುದು, ಒಕ್ಕೂಟದ ಪಾಲುದಾರ ರಾಜ್ಯಗಳ ಜೊತೆ ಸಮ ಗೌರವದ ಚರ್ಚೆಗೆ ಮುಂದಾಗದೇ ತನ್ನ ನಿಲುವನ್ನು ಎಲ್ಲ ರಾಜ್ಯಗಳು ಒಪ್ಪಲಿ ಅನ್ನುವ ನಿಲುವು ಕೇಂದ್ರದ್ದು ಅನ್ನಲು ಸಾಕಷ್ಟು ಉದಾಹರಣೆಗಳಿವೆ. ಸಮ ಗೌರವದ ಮೇಲೆ ಒಕ್ಕೂಟದ ಪಾಲುದಾರರಾಗಿರುವ ರಾಜ್ಯಗಳು ಇದನ್ನು ಪ್ರಶ್ನಿಸಬೇಕಾಗಿರುವುದು ನ್ಯಾಯವಲ್ಲವೇ?

ಫೆಡರಲ್ ಅಲಾಯನ್ಸ್ ಗೆ ಸಕಾಲ !
ಇರಲಿ, ಕೇಂದ್ರದಲ್ಲಿ ಆಳುವ ರಾಷ್ಟ್ರೀಯ ಪಕ್ಷಗಳಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಇರುವ ಗೌರವ ಎಂತದ್ದು ಅನ್ನುವುದನ್ನು ನೋಡುತ್ತಲೇ ಇದ್ದೇವೆ. ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದಲ್ಲಿರುವಾಗ ಒಕ್ಕೂಟದ ಬಗ್ಗೆ ಮಾತನಾಡುವ ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿವೆ ಎಂಬುದು ಕೂಡಾ ನಮ್ಮ ಕಣ್ಣ ಮುಂದಿದೆ. ಹೀಗಿರುವಾಗ ಇಂತಹ ರಾಜ್ಯಗಳನ್ನು ಹಿಂತಳ್ಳುವ ಕೇಂದ್ರದ ವಿರುದ್ದ ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಧ್ವನಿ ಎತ್ತುತ್ತಿರುವುದು ಒಳ್ಳೆಯ ಸೂಚನೆಯೇ ಸರಿ. ಪ್ರಾದೇಶಿಕ ಪಕ್ಷಗಳೆಲ್ಲವೂ ಸೇರಿ ಫೆಡರಲ್ ಅಲಾಯನ್ಸ್ ತರಹದ ಒಕ್ಕೂಟ ಪರವಾದ ಇನ್ನೊಂದು ಅಲ್ಟರನೇಟಿವ್ ಹುಟ್ಟು ಹಾಕಲು ಇದು ಸಕಾಲ ಅನ್ನಿಸುತ್ತೆ. ಕರ್ನಾಟಕದಲ್ಲೂ ಕೇಂದ್ರದ ದೊರೆಸಾನಿಗಳತ್ತ ಮುಖ ಮಾಡಿಕೊಂಡು ಮಾತೆತ್ತಿದರೆ ದೆಹಲಿಗೆ ಹೋಗಿ ಹೈಕಮಾಂಡ್ ಮುಂದೆ ಮಂಡಿಯೂರುವ, ಅವರ ಕೈಯಲ್ಲಿ ಮೂಗಿಗೆ ತುಪ್ಪ ಸವರಿಸಿಕೊಂಡು ಬರುವ ಕರ್ನಾಟಕದ ಕೆಲ ರಾಜಕಾರಣಿಗಳು ಒಟ್ಟಾಗಿ ಮನಸ್ಸು ಮಾಡಿ ಸರಿಯಾದ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕಲು ಯತ್ನಿಸಿದರೆ ಮತ್ತು ಅಂತಹ ಹೊಸ ಶಕ್ತಿ ದೇಶದಲ್ಲಿರುವ ಇತರ ಸಮಾನ ಮನಸ್ಕ ಪಕ್ಷಗಳೊಡನೆ ಬೆರೆತು ಒಕ್ಕೂಟ ವ್ಯವಸ್ಥೆಯ ಸಬಲೀಕರಣಕ್ಕೆ ಧ್ವನಿ ಎತ್ತಿದರೆ ಖಂಡಿತವಾಗಿಯೂ ಕೇಂದ್ರದ ಈ ಪಾಳೇಗಾರಿಕೆ ಮನಸ್ಥಿತಿಯ ಧೋರಣೆ ಬದಲಾದೀತು.

ಚಿತ್ರ ಕೃಪೆ: indiawires.com

4 ಕಾಮೆಂಟ್‌ಗಳು:

  1. ನಿಮ್ಮ ಈ ಲೇಖನದ ಟೈಟಲ್ "ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?" ಬಹಳ ಇಷ್ಟವಾಯಿತು.

    ಪ್ರತ್ಯುತ್ತರಅಳಿಸಿ
  2. ee vyavasteyinda ondu tuttu anna tinnalu kendra sarkaaravannu keluva sthitige talupiddeve.

    ಪ್ರತ್ಯುತ್ತರಅಳಿಸಿ
  3. ಒಕ್ಕೂಟ ವ್ಯವಸ್ತೆಯಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾಗಿರುವುದು ನಮ್ಮ ಕೇಂದ್ರ ಸರ್ಕಾರದ ಹೊಣೆ. ಕಳೆದ ೩೦ ವರ್ಷಗಳಿಂದ ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಯಾಗುತ್ತಿದ್ದು, ಕೆಲವೆ ಪಕ್ಷಗಳು ಮಾತ್ರ ತನ್ನ ಅಸ್ಥಿತ್ವವನ್ನು ಇಂದಿಗೂ ಸಹ ಉಳಿಸಿಕೊಂಡಿದೆ. ಭಾರತದಲ್ಲಿ ಸರಿ ಸುಮಾರು ೨೦ ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿದೆ. ೧೯೯೦ ರಿಂದ ಕೇಂದ್ರದಲ್ಲಿ ಸರ್ಕಾರ ನಡೆಸಿದ ಯಾವುದೇ ಪಕ್ಷಗಳಿಗೆ ಬಹುಮತ ಸಿಗದಿರುವುದೇ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಲು ಸಾಧ್ಯವಾಗುತ್ತಿಲ್ಲ. ಕಾರಣ ತಮಗ ಸಹಕಾರ ನೀಡುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಅನುದಾನಗಳನ್ನು ಬಿಡುಗಡೆ ಮಾಡುವುದು ಮತ್ತು ಆ ರಾಜ್ಯಗಳಿಗೆ ಹೆಚ್ಚು ಮಹತ್ವ ನೀಡುವುದು. ಈ ರೀತಿಯ ತಾರತಮ್ಯಗಳು ಹೆಚ್ಚಲು ಪ್ರಾದೇಶಿಕ ಪಕ್ಷಗಳ ಕೊಡುಗೆ ಮಹತ್ವದನ್ನಿಸಿದರು, ಕರ್ನಾಟಕದಂತ ರಾಜ್ಯಗಳಿಗೆ ಪ್ರಾದೇಶಿಕ ಪಕ್ಷದ ಅತ್ಯವಶಕವಾಗಿದೆ, ಕಾರಣ ರಾಜ್ಯ ಸರ್ಕಾರದಲ್ಲಿರುವ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ್ದು ಕಳೆದ ಎರಡು ದಶಕಗಳಿಂದ ತೀರಾ ವಿರಳ. ಹೀಗಾದಾಗ ಕೇಂದ್ರ ಮತ್ತು ರಾಜ್ಯಗಳ ಜೊತೆಗಿನ ಸಮನ್ವಯದ ಕೊರತೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಒಕ್ಕೂಟ ವ್ಯವಸ್ಠೆಯಲ್ಲಿ ಇದೆಲ್ಲಾ ಸರ್ವೆಸಾಮನ್ಯವಾದರು ಎಲ್ಲ ರಾಜ್ಯಗಳನ್ನು ಒಟ್ಟಿಗೆ ಕೊಂಡುಯುವ್ವ ಮಹತ್ವದ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಕೆಲವು ಪ್ರಾದೇಶಿಕ ಪಕ್ಷಗಳನ್ನು ಓಲೈಸುವ ಕಾರಣದಿಂದಾಗಿ ಒಕ್ಕೂಟ ವ್ಯವಸ್ಠೆಯ ಬೇರುಗಳು ಸಡಿಲವಾಗುತ್ತಿರುವುದು ಇತ್ತೀಚಿನ ದಿನಗಳಲ್ಲ್ಲಿ ಕಾಣುತ್ತಿದ್ದೇವೆ. ಕರ್ನಾಟಕದ ಜನತೆಗೆ ಪ್ರಾದೇಶಿಕ ಪಕ್ಷವನ್ನು ಇಲ್ಲಿಯವರೆಗೂ ಬೆಂಬಲಿಸದಿರುವುದು ಆಶ್ಚರ್ಯಕರವಾಗಿದೆ. ದಕ್ಷಿಣ ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಈಗಾಗಲೇ ಆಡಳಿತ ನಡೆಸಿರುತ್ತದೆ.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !