ಸೋಮವಾರ, ಏಪ್ರಿಲ್ 23, 2012

ಖಾಸಗಿ ಶಾಲೆಗಳಿಗೆ ಮೂಗುದಾರ - ಸರ್ಕಾರದ ಒಳ್ಳೆಯ ನಿರ್ಧಾರ

ಉಳ್ಳವರ ಮತ್ತು ಇಲ್ಲದವರ ನಡುವೆ ಒಂದು ದೊಡ್ಡ ಕಂದರವನ್ನೇ ಹುಟ್ಟು ಹಾಕುವಂತೆ ಶಿಕ್ಷಣ ಕ್ಷೇತ್ರದಲ್ಲಿ ಯಾರ ಲಂಗು ಲಗಾಮು ಇಲ್ಲದೇ ನಡೆದಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಸುಪ್ರೀ ಕೋರ್ಟ್ ಎತ್ತಿ ಹಿಡಿದ ಬೆನ್ನಿಗೆ ಇನ್ನೆರಡು ಒಳ್ಳೆಯ ಸುದ್ದಿಗಳನ್ನು ಇಂದಿನ ಪತ್ರಿಕೆಗಳು ವರದಿ ಮಾಡಿವೆ. ಮೊದಲನೆಯದಾಗಿ, ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡದ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡುವುದಾಗಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಹೇಳಿರುವುದು ಇಂದಿನ ಡೆಕ್ಕನ್ ಹೆರಾಲ್ಡ್  ಅಲ್ಲಿ ವರದಿಯಾಗಿದೆ. ಎರಡನೆಯ ಸುದ್ದಿಯೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸ್ಸಿಗೆ ಬಂದ ಹಾಗೆ ಶುಲ್ಕ ಏರಿಸದಂತೆ ತಡೆದ ರಾಜ್ಯ ಸರ್ಕಾರದ ಕಾಯ್ದೆಯನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದ ಖಾಸಗಿ ಅನುದಾನರಹಿತ ಶಾಲೆಗಳ ವಾದಕ್ಕೆ ಕೋರ್ಟಿನಲ್ಲಿ ಸೋಲಾಗಿದೆ. ಒಂದು ನಾಡಿನ ಏಳಿಗೆಗೆ ಉಸಿರು ತುಂಬುವ ಶಕ್ತಿ ಇರುವ ಮಹತ್ವದ ಕ್ಷೇತ್ರ ಕಲಿಕೆ ಆದರೆ ಅಲ್ಲಿ ಯಾವ ಅಂಕೆಯೂ ಇಲ್ಲದೇ ಸರ್ಕಾರ, ಕಾನೂನುಗಳನ್ನು ಅಣಕಿಸುವಂತೆ ಮೆರೆಯುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಕೆಲಸಕ್ಕೆ ಕೊನೆಗೂ ಸರ್ಕಾರ ಮುಂದಾಗಿರುವುದು ನಿಜಕ್ಕೂ ಬಹುದಿನದಿಂದ ಆಗಬೇಕಾಗಿದ್ದ ಕೆಲಸವೇ ಸರಿ.

ಕಂದರದ ಸಮಾಜ ಕಟ್ಟುವ ಶಾಲೆಗಳನ್ನು ನಿಯಂತ್ರಿಸಬೇಕು
ನಾವೆಲ್ಲ ಚಿಕ್ಕ ಪುಟ್ಟ ಊರುಗಳಲ್ಲಿ, ಹಳ್ಳಿಗಳಲ್ಲಿ ಶಾಲೆ ಕಲಿತದ್ದನ್ನು ಒಮ್ಮೆ ನೆನೆಸಿಕೊಳ್ಳಿ. ಅಲ್ಲಿ ಎಲ್ಲ ಜಾತಿ, ಧರ್ಮ, ಆರ್ಥಿಕ ಹಿನ್ನೆಲೆಯವರೆಲ್ಲ ಒಟ್ಟಾಗಿ ಕಲೆತು ಕಲಿಯುತ್ತಿದ್ದೇವು. ಉಳ್ಳವನು ಇಲ್ಲದಿರುವವನ ಜೀವನವನ್ನು ಹತ್ತಿರದಿಂದ ನೋಡುತ್ತ  ಒಂದಳತೆಯಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳಲಾಗುತ್ತಿದ್ದದ್ದೇ ಅಂತಹ ಶಾಲೆಗಳಲ್ಲಿ. ಉಳ್ಳವರಿಗೆ ಮಾತ್ರ ಒಳ ಬಿಟ್ಟುಕೊಂಡು, ಉಳಿದವರನ್ನು ಆಚೆ ಇಟ್ಟು ಒಂದರ್ಥದಲ್ಲಿ ಒಂದೇ ಆರ್ಥಿಕ ಹಿನ್ನೆಲೆಯ, ಒಂದೇ ವರ್ಗದ, ಒಂದೇ ರೀತಿ ಯೋಚಿಸುವಂತಹ ರೋಬಾಟ್ಸ್ ಗಳನ್ನು ತಯಾರಿಸುವ concentration camps ಅನ್ನುವಂತೆ ಈ ಹೊಸ ಖಾಸಗಿ ಇಂಗ್ಲಿಷ್ ಶಾಲೆಗಳು ತಲೆ ಎತ್ತಿವೆ. ಇಲ್ಲಿ ಕಲಿಯುವ ಮಕ್ಕಳಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತೆ, ಆದರೆ ಜೀವನವನ್ನು ಎದುರಿಸುವ ಕಾಮನ್ ಸೆನ್ಸ್ ಆಗಲಿ, ಸಮಾಜವನ್ನು ಅದರ ಎಲ್ಲ ಮೇಲು-ಕೀಳು, ಬಡತನ-ಸಿರಿತನದ ಪದರಗಳ ನಡುವೆ ಅರ್ಥ ಮಾಡಿಕೊಳ್ಳುವ ಕಣ್ಣಾಗಲಿ ಕಾಣಿಸದು. ಇಂದು ಇಂಗ್ಲಿಷ್ ನ ಸುತ್ತಲಿನ ಉಳ್ಳವರ ಪ್ರಪಂಚಕ್ಕೂ, ಅದರಾಚೆಗಿನ ಕನ್ನಡ ಪ್ರಪಂಚಕ್ಕೂ ಯಾವ ನಂಟೂ ಇಲ್ಲ ಅನ್ನುವಂತಹ ಒಂದು ಶ್ರೇಣಿಕೃತ ವ್ಯವಸ್ಥೆಯನ್ನು ಈ ಶಾಲೆಗಳು ಹುಟ್ಟು ಹಾಕಿವೆ. ಈಗ ಇಂತಹ ಶಾಲೆಗಳಲ್ಲಿ ಬಡ ಮಕ್ಕಳಿಗೂ ಅವಕಾಶ ಕಲ್ಪಿಸಲೇಬೇಕು ಅನ್ನುವ ಮೂಲಕ ಇಂತಹ ಪೋಲರೈಸ್ಡ್ ಸಮಾಜವನ್ನು ಕಟ್ಟುವ ಶಾಲೆಗಳಿಗೆ ಕೊಂಚ ಮೂಗುದಾರ ಹಾಕುವ ಕೆಲಸವಾಗಿರುವುದು ಒಳ್ಳೆಯ ಬೆಳವಣಿಗೆ ಅನ್ನಬಹುದು.

ಸಿ.ಬಿ.ಎಸ್.ಈ ಶಾಲೆಗಳನ್ನು ನಿಯಂತ್ರಿಸುವ ಹಕ್ಕು ರಾಜ್ಯಕ್ಕಿರಲಿ
ಆರ್.ಟಿ.ಈ ಅನುಷ್ಟಾನಕ್ಕೆ ಒಪ್ಪಬೇಕು, ಬೇಕಾಬಿಟ್ಟಿ ಶುಲ್ಕ ಏರಿಸಬಾರದು ಅನ್ನುವುದಕ್ಕಷ್ಟೇ ಸರ್ಕಾರ ನಿಲ್ಲಬಾರದು. ಇವತ್ತು ಸಿ.ಬಿ.ಎಸ್.ಈ/ಐ.ಸಿ.ಎಸ್.ಈ  ಶಾಲೆಗಳು ನಾಯಿಕೊಡೆಗಳಂತೆ ಕರ್ನಾಟಕದ ದೊಡ್ಡ ದೊಡ್ಡ ಊರುಗಳಲ್ಲಿ ಹರಡುತ್ತಿದೆ. ಇಂತಹ ಶಾಲೆಗಳನ್ನು ಸೇರುವುದು ಒಂದು ರೀತಿಯಲ್ಲಿ ಪ್ರತಿಷ್ಟೆಯ ಸಂಕೇತ ಅನ್ನುವ ಪ್ರಚಾರ ಒಂದೆಡೆಯಾದರೆ ಅಲ್ಲಿ ಹೆಚ್ಚಿನ ಶುಲ್ಕ ಪಡೆಯಬಹುದು ಮತ್ತು ಅಂತಹ ಶಾಲೆಗಳ ಮೇಲೆ ರಾಜ್ಯ ಸರ್ಕಾರದ ಯಾವುದೇ ಅಂಕೆಯೂ ಇಲ್ಲ ಅನ್ನುವ ಕಾರಣದಿಂದ ಹಾದಿಗೊಂದು ಬೀದಿಗೊಂದು ಅನ್ನುವಂತೆ ಇವು ತಲೆ ಎತ್ತುತ್ತಿವೆ. ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳಿಗಾಗಿ ಎಂದು ಶುರುವಾದ ಸಿ.ಬಿ.ಎಸ್.ಈ ಶಾಲೆಗಳು ಇಂದು ಅಂತಹ ಯಾವುದೇ ನಿಯಮಗಳಿಗೆ ಒಳಪಡದೇ ಶುರುವಾಗುತ್ತಿವೆ ಮತ್ತು ಅಂತಹದೊಂದು ಕೆಟ್ಟ ಬೆಳವಣಿಗೆಗೆ  ಹಿಂದೆ ಮುಂದೆ ಯೋಚಿಸದೇ No Objection Certificate ಕೊಡುತ್ತಿರುವ ಸರ್ಕಾರದ ಧೋರಣೆಯೇ ಕಾರಣವಾಗಿದೆ. ಇಂತಹ ಹೆಚ್ಚಿನ ಶಾಲೆಗಳ ಹಿಂದೆ ಪ್ರಭಾವಿಗಳು, ರಾಜಕಾರಣಿಗಳೇ ಇದ್ದಾರೆ ಅಂದ ಮೇಲೆ ಸರ್ಕಾರದ ನಡೆಯ ಹಿಂದಿನ ರಹಸ್ಯ ಏನು ಎಂದು ಹೆಚ್ಚೇನು ಯೋಚಿಸಬೇಕಿಲ್ಲ. ಅಲ್ಲದೇ, ಈ ಶಾಲೆಗಳಲ್ಲಿ (ಹೆಚ್ಚಿನ ಶಾಲೆಗಳಲ್ಲಿ) ಕನ್ನಡ ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯವೂ ಇಲ್ಲ ಮತ್ತು ಇಲ್ಲಿ ಕಲಿಸುವ ಸಮಾಜ ವಿಜ್ಞಾನದಲ್ಲಿ ಕನ್ನಡ, ಕನ್ನಡನಾಡಿನ ಇತಿಹಾಸ, ಸಂಸ್ಕೃತಿ, ಆಚರಣೆ, ಸಮಾಜದ ಬಗ್ಗೆ ಯಾವ ಮಾಹಿತಿಯೂ ಮಕ್ಕಳಿಗೆ ಹೇಳಿಕೊಡುವುದಿಲ್ಲ.  ನೀವೇ ಯೋಚಿಸಿ ಇಂತಹ ಶಾಲೆಗಳಲ್ಲಿ ಕಲಿಯುವ ಕನ್ನಡದ ಮಕ್ಕಳು ನಾಳೆ ದಿನ ಕನ್ನಡ, ಕನ್ನಡ ನಾಡಿನ ಬಗ್ಗೆ ಹೇಗೆ ಅಭಿಮಾನ, ಪ್ರೀತಿ ತಳೆದಾರು? ಡಾ. ರಾಜ್ ಕುಮಾರ್ ಅಂತಹ ಕನ್ನಡದ ಕಣ್ಮಣಿ ತೀರಿದಾಗ ಕಟ್ಟೆಯೊಡೆದ ಕನ್ನಡಿಗರ ದುಃಖದ ಜೊತೆ ಇವರು ಎಂದಿಗಾದರೂ ಗುರುತಿಸಿಕೊಂಡಾರೆಯೇ? ಇಂತಹ ಶಾಲೆಗಳಿಂದ ಹೊರ ಬಂದವರು ನಾಳೆ ದಿನ ಐ.ಎ.ಎಸ್/ಐ.ಪಿ.ಎಸ್/ಕೆ.ಎಸ್.ಎ ನಂತಹ ಪದವಿಗಳನ್ನು ಪಡೆದು ಕರ್ನಾಟಕದ ಆಡಳಿತ ವರ್ಗವನ್ನು ಸೇರಿಕೊಂಡರೆ ಜನರ ನುಡಿಯಾದ ಕನ್ನಡದಲ್ಲಿ ಎಲ್ಲ ಸೇವೆಗಳನ್ನು ಕೊಡಬೇಕು ಅನ್ನುವ ಸಾಮಾನ್ಯ ಪ್ರಜ್ಞೆ ಇವರಿಂದ ಎದುರು ನೋಡಬಹುದಾ? ಆದ್ದರಿಂದ ಕರ್ನಾಟಕದಲ್ಲಿರುವ ಯಾವುದೇ ಶಾಲೆಯಾಗಿರಲಿ ಅಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕು, ಅಲ್ಲಿ ಕಲಿಸುವ ಸಮಾಜ ವಿಜ್ಞಾನದಲ್ಲಿ ಕರ್ನಾಟಕದ ಇತಿಹಾಸ ಕಡ್ಡಾಯವಿರುವಂತೆ ನೀತಿ ನಿಯಮ ರೂಪಿಸುವ ಕೆಲಸಕ್ಕೆ ಕರ್ನಾಟಕ ಸರ್ಕಾರ ಮುಂದಾಗಲಿ ಮತ್ತು ಕನ್ನಡ ಪರ ಚಿಂತಕರು, ಸಾಹಿತಿಗಳು, ಮಾಧ್ಯಮದವರು ಈ ನಿಟ್ಟಿನಲ್ಲಿ ಸರ್ಕಾರದ ಒತ್ತಡ ತರುವ ಕೆಲಸಕ್ಕೆ ಮುಂದಾಗಲಿ.

ಕೊನೆ ಹನಿ:  ಒಳ್ಳೆಯ ಗುಣಮಟ್ಟದ ಖಾಸಗಿ ಶಾಲೆಗಳನ್ನು ತೆಗೆದು ಲಾಭ ಮಾಡಿಕೊಳ್ಳುವುದು ತಪ್ಪೇ? ಎಂದು ಪ್ರಶ್ನಿಸುವವರಿಗೆ ನನ್ನ ಉತ್ತರ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ, ಖಾಸಗಿಯವರು ಎಲ್ಲರೂ ಬರಲಿ. ಸರ್ಕಾರಿ ಶಾಲೆಗಳಲ್ಲಿ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಬೇಕು ಅನ್ನುವುದು ಎಷ್ಟು ಮುಖ್ಯವೋ ಅಂಕೆಯಿಲ್ಲದೇ ನಡೆಯುತ್ತಿರುವ ಖಾಸಗಿ ಶಾಲೆಗಳಿಗೆ ಮೂಗು ದಾರ ಹಾಕುವುದು ಅಷ್ಟೇ ಮುಖ್ಯ. ಸಂವಿಧಾನದ ಆಶಯದಂತೆ ಎಲ್ಲರಿಗೂ ಅವಕಾಶ ಕಲ್ಪಿಸುವ, ಪೋಷಕರನ್ನು, ಮಕ್ಕಳನ್ನು ಶೋಷಿಸದಂತಹ, ಸರ್ಕಾರದ ನೀತಿ ನಿಯಮಗಳನ್ನು ಒಪ್ಪಿ ನಡೆಯುವಂತಹ ಖಾಸಗಿ ಶಾಲೆಗಳು ಬರಲಿ. ಅಚ್ಚುಕಟ್ಟಾಗಿ ಶಾಲೆ ನಡೆಸಿ ಲಾಭ ಮಾಡಿಕೊಳ್ಳುವುದಾದರೆ ಮಾಡಲಿ. ತೊಂದರೆಯಿಲ್ಲ.  ಆದರೆ  ಸಮಾಜ ಕಟ್ಟುವ ಒಂದು ಭಾಗವಾದ ಶಾಲೆಗಳನ್ನು ಒಂದು ರೀತಿಯಲ್ಲಿ ಉಳ್ಳವರಿಗಾಗಿಯೇ ಮೀಸಲಿಟ್ಟ gated communities ಮಾಡ್ತಿನಿ ಮತ್ತು ಅದಾವುದಕ್ಕೂ ಸರ್ಕಾರ ಅಡ್ಡ ಬರಬಾರದು ಅನ್ನುವಂತಾದರೆ ಅದನ್ನು ಲಾಭವೊಂದನ್ನೇ ಗುರಿಯಾಗಿಸಿಕೊಂಡ ವ್ಯಾಪಾರ ಎಂದು ಕರೆಯಬಹುದೇ ಹೊರತು ಮಕ್ಕಳ ನಾಳೆಯ ಭವಿಷ್ಯ ಕಟ್ಟುವ ದೇಗುಲ ಅನ್ನಲಾಗದು. ಸಮಾನತೆಯ ಆಧಾರದ ಕಲಿಕೆ ರೂಪಿಸುವತ್ತ ಸರ್ಕಾರದ ಈ ನಡೆಯನ್ನು ನಾನು ಬರಮಾಡಿಕೊಳ್ಳುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !