ಮಂಗಳವಾರ, ಏಪ್ರಿಲ್ 19, 2011

ಕನ್ನಡ ಆಡಳಿತ ಭಾಷೆ ಯಾಕಾಗಿಲ್ಲ ಗೊತ್ತೆ!?

ಕನ್ನಡ ನಾಡು ಏಕೀಕರಣಗೊಂಡು ದಶಕಗಳೇ ಕಳೆದರೂ ಕನ್ನಡ ಎಲ್ಲ ಹಂತದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿಲ್ಲ ಅನ್ನುವ ಕೂಗು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದೂ ಕೇಳಿರುತ್ತೇವೆ. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರ ಕನ್ನಡ ಜಗತ್ತು: ಅರ್ಧ ಶತಮಾನ ಅನ್ನುವ ಹೊತ್ತಗೆ ಓದುತ್ತಾ ಇದ್ದೆ. ಅಲ್ಲಿ ಈ ಬಗ್ಗೆ ಅವರು ಕೊಡುವ ವಿವರಣೆ ಒಂದು ರೀತಿಯಲ್ಲಿ ಬೇರೆಯಾಗಿದೆ ಅನ್ನಬಹುದು. ಸರ್ಕಾರದ ಹೆಚ್ಚಿನ ಪ್ರಯತ್ನ (ಬಾಯಿ ಮಾತಲ್ಲಿ ಅಂತ ಬೇಕಾದ್ರೂ ಅಂದುಕೊಳ್ಳೊಣ :) )ದ ನಂತರವೂ ಆಡಳಿತದಲ್ಲಿ ಕನ್ನಡ ಬಳಕೆ ಒಂದು ರೀತಿಯಲ್ಲಿ ಪಿರಮಿಡ್ ನಂತೆ ನಮಗೆ ಗೋಚರಿಸುತ್ತೆ. ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾದರೆ, ಮೇಲೆ ಮೇಲೆ ಹೋದಂತೆ ಅದರ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಿದ್ದರೆ ಆಡಳಿತದಲ್ಲಿ ಕನ್ನಡದ ಬಳಕೆ ಅಂದುಕೊಂಡ ಮಟ್ಟದಲ್ಲಿ ಗೆಲುವು ಪಡೆಯದಿರಲು ಕಾರಣವೇನು ಎಂದು ಅವರು ಕೊಟ್ಟ ವಿವರಣೆಯನ್ನು ಈ ಕೆಳಗೆ ಕೊಟ್ಟಿರುವೆ.


ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. ಕಾರ್ಯಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತದೆ. ಅಥವಾ ಅನುಷ್ಠಾನದ ಹಂತದಲ್ಲಿ ಹಲವು ಎಡರು ತೊಡರುಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇದನ್ನು ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.
ಏಕೆ ಕನ್ನಡ ಆಡಳಿತ ಭಾಷೆಯಾಗಬೇಕು, ಹಾಗೆ ಆಗದಿದ್ದರೆ ಆಗುವ ತೊಂದರೆಗಳೇನು, ಕನ್ನಡ ಬಳಕೆಯಾಗದಿದ್ದಲ್ಲಿ ಅದರ ಪ್ರಯೋಜನಗಳು ಪೂರ್ವನಿರ್ಧಾರಿತ ಯಾರಿಗಾದರೂ ಇರುವುದು ಸಾಧ್ಯವೆ ಎಂಬ ಪ್ರಶ್ನೆಗಳು ಬಲು ಮುಖ್ಯ. ಜನರ ಭಾಷೆ ಆಡಳಿತ ಭಾಷೆಯಾಗಬೇಕು ಎಂಬ ಗ್ರಹಿತ ನೆಲೆಯಲ್ಲಿ ನಾವು ಮಾತನಾಡುತ್ತಿರುತ್ತೇವೆ. ಆದರೆ ಆಡಳಿತ ಯಂತ್ರದಲ್ಲಿ ಜನಸಾಮಾನ್ಯರ ಪಾತ್ರವೇನು ಎಂಬ ಬಗ್ಗೆ ಯೋಚಿಸುವುದಿಲ್ಲ. ಜನರು ಆಡಳಿತದಲ್ಲಿ ಭಾಗಿಯಾಗಬೇಕಾದರೆ ಅಥವಾ ಆಡಳಿತದ ನಿರ್ಧಾರಗಳಲ್ಲಿ ತಮ್ಮ ಪಾಲು ಇದೆ ಎಂದು ತಿಳಿಯಬೇಕಾದರೆ ಮುಖ್ಯವಾಗಿ ಎರಡು ಸಂಗತಿಗಳು ಅಗತ್ಯ. ಒಂದು: ಆಡಳಿತ ಯಂತ್ರದ ಉತ್ತರದಾಯಿತ್ವ; ಎರಡು: ಆಡಳಿತ ಯಂತ್ರದ ಪಾರದರ್ಶಕತೆ. ಕಳೆದ ಐವತ್ತು ವರ್ಷಗಳ ಚರಿತ್ರೆಯಲ್ಲಿ ಈ ಎರಡು ಸಂಗತಿಗಳು ದೃಢಗೊಳ್ಳುತ್ತಾ ಹೋಗುವ ಬದಲು ಸಡಿಲವಾಗುತ್ತ ಬಂದಿವೆ. ಈ ಕಾರಣದಿಂದ ಜನರು ಆಡಳಿತ ಯಂತ್ರದೊಡನೆ ಹೊಂದಿರುವ ಸಂಬಂಧ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಹಾಗೆ ಉಳಿದಿರುವ ಸಂಬಂಧದಲ್ಲೂ ಅವರ ಅಪೇಕ್ಷೆಗಳು, ದೃಷ್ಟಿಕೋನಗಳು ಮಾನ್ಯವಾಗುವುದಿಲ್ಲ. ಹೀಗಾಗಿ ಜನಭಾಷೆಯೂ ಆಡಳಿತದ ಭಾಷೆಯಾಗಿ ನೆಲೆಗೊಳ್ಳುವ ಅವಕಾಶಗಳು ಕಡಿಮೆಯಾಗುತ್ತಿದೆ.

ಈ ವಿವರಣೆಯನ್ನು ಮತ್ತಷ್ಟು ಪುಷ್ಟಿಗೊಳಿಸುವ ಅಗತ್ಯವಿದೆ. ಆಡಳಿತವು ಒಪ್ಪಿಕೊಂಡ ಕಲ್ಯಾಣ ರಾಜ್ಯದ ಕಲ್ಪನೆಯಲ್ಲಿ ಆಳುವವರು ಕೊಡುವವರಾಗಿದ್ದರೆ ಜನರು ಪಡೆಯುವವರಾಗಿರುತ್ತಾರೆ. ಈ ಅಸಮ ಸಂಬಂಧದಲ್ಲಿ ಕೊಡುವವರ ಕೈ ಮೇಲಾಗುತ್ತದೆ. ಅವರ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಭಾಷಾ ಅಧ್ಯಯನಕಾರರು ಇಂತಹ ಸಂದರ್ಭಗಳನ್ನು ಗಮನಿಸಿದ್ದಾರೆ. ಇಂತಲ್ಲಿ ಯಾವಾಗಲೂ ಮೇಲುಗೈ ಪಡೆದವರ ಭಾಷೆಯನ್ನೇ ಪಡೆಯುವವರು ಒಪ್ಪಿಕೊಳ್ಳಬೇಕಾಗುತ್ತದೆ ಅಥವಾ ಪಡೆಯುವವರಿಗಿಂತ ತಾವು ಭಿನ್ನ ಎಂದು ಸ್ಥಾಪಿಸಲು ಆಳುವವರು ಬೇರೆಯ ಭಾಷೆಯನ್ನೇ ಆಡುತ್ತಿರುತ್ತಾರೆ;ಬಳಸುತ್ತಿರುತ್ತಾರೆ. ಕೊಂಚ ಸಂಕೀರ್ಣವಾದ ಈ ಸಂಬಂಧದಲ್ಲಿ ಕನ್ನಡದ ಸ್ಥಿತಿ ಏನಾಗಿದೆ ಎನ್ನುವದನ್ನು ಪರಿಶೀಲಿಸಬೇಕು. ಮೇಲು ನೋಟಕ್ಕೆ ಜನಪ್ರತಿನಿಧಿಗಳು ಮತ್ತು ನೌಕರಶಾಹಿಯೂ ಜನ ಸಮುದಾಯದಿಂದಲೇ ರೂಪುಗೊಂಡು ಬಂದವರೆಂದು ಅನಿಸುತ್ತದೆ. ಆದರೆ ಅಧಿಕಾರದ ಚೌಕಟ್ಟಿನಲ್ಲಿ ಅವರು ಜನರ ಜೊತೆಗಿನ ಸಂಪರ್ಕದ ಬದಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಲಸಂಪರ್ಕದಲ್ಲಿ ಸೇರುತ್ತಾರೆ. ಇದರಿಂದ ಅಸಮ ನೆಲೆಯ ಸಂಬಂಧ ಏರ್ಪಡುತ್ತದೆ. ತಾವು ಗುರುತಿಸಿಕೊಂಡ ಜಾಲದ ಅಧಿಕೃತ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿ ಆಡಳಿತಗಾರರು ಬಳಸುತ್ತಾರೆ. ನಮ್ಮ ರಾಜಕೀಯ, ಆರ್ಥಿಕ ಪರಿಸ್ಥಿತಿಯ ಈ ವಿನ್ಯಾಸಗಳು ಕನ್ನಡಕ್ಕೆ ಈ ಹೊತ್ತಿಗೆ ಯಾವ ಸ್ಥಾನಮಾನಗಳು ದೊರಕಬೇಕಿತ್ತೋ ಅದು ಲಭ್ಯವಾಗದಂತೆ ಮಾಡಿವೆ.

ಒಕ್ಕೂಟ ವ್ಯವಸ್ಥೆಯ ಪಾತ್ರ
ಕೆ.ವಿ.ನಾರಾಯಣ್ ಅವರ ಈ ಮೇಲಿನ ವಿವರಣೆಯಲ್ಲಿ ಆಡಳಿತ ಯಂತ್ರದೊಡನೆ ಜನರ ಒಡನಾಟ ಬಲು ಕಡಿಮೆ, ಮತ್ತು ಅದರಿಂದ ಜನರ ನುಡಿಗೆ ದೊರೆತ ಸ್ಥಾನವೂ ಅಷ್ಟೇ ಕಡಿಮೆ ಅನ್ನುವುದು ನಿಜಕ್ಕೂ ಸರಿಯಾಗಿದೆ. ಈಗಿರುವ centralised ವ್ಯವಸ್ಥೆಯಿಂದ ಆಚೆ ಬಂದು ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು ಹೆಚ್ಚು ಹೆಚ್ಚು ಜನರ ಬಳಿಗೆ ಕೊಂಡೊಯ್ಯುವುದು, ನಿಜವಾದ ಒಕ್ಕೂಟ ರಾಷ್ಟ್ರವಾಗುವುದು ಇದಕ್ಕೆ ಪರಿಹಾರದ ನಿಟ್ಟಿನಲ್ಲಿ ಅತ್ಯಂತ ಮುಖ್ಯ ಹೆಜ್ಜೆ ಅನ್ನಬಹುದು. ಇನ್ನು ಆಡಳಿತ ವರ್ಗದ ಜನರು ಜನರ ಮಧ್ಯದಿಂದಲೇ ಬಂದಿದ್ದರೂ ಅವರು ಅಧಿಕಾರದ ಚೌಕಟ್ಟಿನಲ್ಲಿ ಬೇರೆ ಸಂಪರ್ಕಜಾಲದಲ್ಲಿ ಸಿಕ್ಕು ತಮ್ಮ ನುಡಿಯನ್ನು ಕಡೆಗಣಿಸುತ್ತಾರೆ ಅನ್ನುವುದು ಕೆವಿಎನ್ ಅವರ ಅನಿಸಿಕೆಯಾದರೂ ನನಗನಿಸೋದು ಇಂತಹುದೇ ವ್ಯವಸ್ಥೆಯಲ್ಲಿರುವ ತಮಿಳುನಾಡು, ಬಂಗಾಲ, ಮಹಾರಾಷ್ಟ್ರ, ಆಂಧ್ರದಂತಹ ರಾಜ್ಯದಲ್ಲಿ ಆಡಳಿತದ ನುಡಿಯಾಗಿ ಆಯಾ ರಾಜ್ಯದ ನುಡಿಗಳು ಪಡೆದಿರುವ ಸ್ಥಾನ ಕನ್ನಡ ಕರ್ನಾಟಕದಲ್ಲಿ ಪಡೆದಿರುವ ಸ್ಥಾನಕ್ಕಿಂತ ಎಷ್ಟೋ ಮೇಲಿದೆ. ಅಲ್ಯಾಕೆ ಹಾಗೆ? ಇಲ್ಯಾಕೆ ಹೀಗೆ? ಅಲ್ಲಿ ನುಡಿ ಅಲ್ಲಿನ ನುಡಿಯಾಡುವ ಜನರನ್ನು ಬೆಸೆದಿರುವುದು, ನುಡಿಗಳಿಗೆ ರಾಜಕೀಯದ ಬಲವಿರುವುದು, ಆ ನುಡಿ, ಅಲ್ಲಿನ ಜನರ ಹಿತ ಕಾಯುವ ಸಿದ್ಧಾಂತವಿರುವ ಪಕ್ಷಗಳು ರಾಜಕೀಯದ ವ್ಯವಸ್ಥೆಯಲ್ಲಿರುವುದು ಕೂಡ ಇದಕ್ಕೆ ಕಾರಣ ಅನ್ನಿಸುವುದಿಲ್ಲವೇ? ಅಂತಹುದೇ ಒಂದು ವ್ಯವಸ್ಥೆ, ಸಿದ್ಧಾಂತವಿರುವ ಪಕ್ಷ ಕರ್ನಾಟಕದಲ್ಲಿ ಇಲ್ಲದಿರುವುದು ಕೂಡ ಕರ್ನಾಟಕದಲ್ಲಿನ ಕನ್ನಡದ ಈ ಸ್ಥಿತಿಗೆ ಅಷ್ಟೇ ಮಹತ್ವದ ಕಾರಣ ಎಂದು ಅನ್ನಿಸುವುದಿಲ್ಲವೇ?

1 ಕಾಮೆಂಟ್‌:

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !