ಇತ್ತಿಚೆಗೆ ಎಲ್.ಐ.ಸಿ ಕಚೇರಿಯಿಂದ ಪಾಲಿಸಿಯೊಂದರ ಬಗ್ಗೆ ಪತ್ರವೊಂದು ನನ್ನ ಹತ್ತಿರದ ಸಂಬಂಧಿಯೊಬ್ಬರಿಗೆ ಬಂದಿತ್ತು. ಅವರ ಮನೆಗೆ ಹೋದಾಗ ಅವರು ಅದನ್ನು ನನಗೆ ನೀಡಿ, ಏನಂತ ಬರೆದಿದ್ದಾರೆ ಅಂತ ಕೇಳಿದರು. ಆ ಪತ್ರ ನೋಡಿದರೆ ಕೇವಲ ಇಂಗ್ಲಿಷ್ ಮತ್ತು ಹಿಂದೀಯಲ್ಲಿ ಮಾಹಿತಿ ಹೊಂದಿತ್ತು. ಪತ್ರ ಓದಿ, ಅವರಿಗೆ ಏನು ಮಾಡಬೇಕು ಅನ್ನುವುದನ್ನೆನೋ ಹೇಳಿದೆ, ಆದರೆ ಅಚ್ಚರಿ ಅನಿಸಿದ್ದು, ಬೆಂಗಳೂರಿನ ಸ್ಥಳೀಯ ಎಲ್.ಐ.ಸಿ ಕಚೇರಿಯಿಂದ ಬಂದ ಪತ್ರ ಯಾಕೆ ಕನ್ನಡದಲ್ಲಿಲ್ಲ ಅನ್ನುವುದು. "ಭಾರತೀಯ ಜೀವ ವಿಮಾ ನಿಗಮ, ಬೆಂಗಳೂರು ವಿಭಾಗ" ಅನ್ನುವ ನಾಲ್ಕು ಪದ ಕನ್ನಡದಲ್ಲಿದ್ದದ್ದು ಬಿಟ್ಟರೆ ಇನ್ನೆಲ್ಲ ಮಾಹಿತಿ ಹಿಂದೀ ಮತ್ತು ಇಂಗ್ಲಿಷಿನಲ್ಲಿತ್ತು. ನಾಲ್ಕು ಪದ ಕನ್ನಡ ಬರೆಯುವವರಿಗೆ ಅದ್ಯಾಕೆ ಇಡೀ ಪತ್ರವನ್ನೇ ಕನ್ನಡದಲ್ಲಿ ಕೊಡಲಾಗುತ್ತಿಲ್ಲ, ಇದರ ಹಿಂದಿರುವ ಕಾರಣವಾದರೂ ಏನು ಅನ್ನುವುದನ್ನು ತಿಳಿಯಬೇಕು ಅನ್ನಿಸಿ ಎಲ್.ಐ.ಸಿಯ ವೆಬ್ ಸೈಟ್ ಮತ್ತಿತರ ಸರ್ಕಾರಿ ತಾಣಗಳನ್ನು ಜಾಲಾಡುವಾಗ ಗೊತ್ತಾದದ್ದು, ಇದು ಕಣ್ ತಪ್ಪಿನಿಂದ ಆದ ತಪ್ಪಾಗಿರದೇ, ಬೇಕು ಅಂತಲೇ ಕನ್ನಡ ಕೈಬಿಟ್ಟು ಹಿಂದಿಯಲ್ಲಿ ಎಲ್ಲ ಮಾಹಿತಿ ಕೊಡುವ ಕೆಲಸ ಎಲ್.ಐ.ಸಿ ಮಾಡುತ್ತಿದೆ ಅನ್ನುವುದು ಮತ್ತು ಅಂತಹದೊಂದು ತಪ್ಪನ್ನು ಎಲ್.ಐ.ಸಿ ಕೈಯಲ್ಲಿ ಮಾಡಿಸುತ್ತಿರುವುದು ಕೇಂದ್ರ ಸರ್ಕಾರದ ರಾಜಭಾಷಾ ಆಯೋಗ ಅನ್ನುವ "ಯಾವುದೇ ಹಾದಿಯಲ್ಲಾದರೂ ಸರಿ ಆಡಳಿತದಲ್ಲಿ ಹಿಂದೀ ಬಳಸುವಂತೆ ಮಾಡಬೇಕು" ಅನ್ನುವ ವೈವಿಧ್ಯತೆ ವಿರೋಧಿ, ಹೇರಿಕೆ ಮನಸ್ಥಿತಿಯ ಸಂಸ್ಥೆ ಅನ್ನುವುದು.
ಯಾವ ಹಾದಿಯಾದರೂ ಸರಿ, ಹಿಂದಿ ಒಪ್ಪಿಕೊಳ್ಳುವಂತೆ ಮಾಡಿ !ಕರ್ನಾಟಕದಲ್ಲಿ ವ್ಯಾಪಾರ ಮಾಡುವ ಯಾವುದೇ ಸಂಸ್ಥೆ ಸಹಜವಾಗಿ ಇಲ್ಲಿನ ಸ್ಥಳೀಯ, ಅಧಿಕೃತ ಮತ್ತು ಜನರ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸುವುದು ಕಾಮನ್ ಸೆನ್ಸ್. ಆದರೆ ಅದ್ಯಾಕೆ ಕೇಂದ್ರ ಸರ್ಕಾರಿ ಕಚೇರಿಗಳಾದ ಬ್ಯಾಂಕು, ತೆರಿಗೆ, ರೈಲ್ವೆ, ಅಂಚೆ ಹೀಗೆ ಜನಸಾಮಾನ್ಯರು ಬಳಸುವ ಹೆಚ್ಚಿನ ಇಲಾಖೆಗಳ ಕಚೇರಿಗಳಲ್ಲಿ ಕನ್ನಡ ಕೈ ಬಿಟ್ಟು, ಇಲ್ಲವೇ ಕಾಟಾಚಾರಕ್ಕೆ ಅನ್ನುವಂತೆ ಎರಡು ಅಕ್ಷರ ಬಳಸಿ, ಎಲ್ಲೆಡೆ ಹಿಂದೀಯನ್ನೇ ಬಳಸಬೇಕು ಅನ್ನುವ ನಿಲುವು ಯಾಕಿದೆ ಎಂದು ಹುಡುಕಿದರೆ ಕಾಣಿಸುವುದು ರಾಜಭಾಷಾ ಆಯೋಗ ಅನ್ನುವ ಪ್ರಜಾಪ್ರಭುತ್ವ ವಿರೋಧಿ,ವೈವಿಧ್ಯತೆಯನ್ನು ಶಾಪದಂತೆ ಕಾಣುವ, ಒಗ್ಗಟ್ಟಿನ ಹೆಸರಲ್ಲಿ ಒಂದು ಪ್ರದೇಶದ ಭಾಷೆಯಾದ ಹಿಂದೀಯನ್ನು ಎಲ್ಲರ ಮೇಲೂ ಹೇರಬೇಕು ಅನ್ನುವ ಮನಸ್ಥಿತಿಯ ಸಂಸ್ಥೆ. ಒತ್ತಾಯ, ಆಮಿಷ, ವಿಶ್ವಾಸ ಹೀಗೆ ಯಾವ ಹಾದಿಯಲ್ಲಾದರೂ ಸರಿ, ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದೀಯನ್ನು ಆಡಳಿತದ ಭಾಷೆಯಾಗಿಸಬೇಕು ಅನ್ನುವುದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾದ ಭಾರತಕ್ಕೆ ಬಗೆಯುತ್ತಿರುವ ದ್ರೋಹವೆನ್ನಿಸುವುದಿಲ್ಲವೇ?
ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿಇವರೆನೋ ಹಿಂದೀಯನ್ನು ಅಧಿಕೃತ ಭಾಷೆ ಎಂದು ಘೋಷಿಸಿಕೊಂಡು ಅದನ್ನು ಎಲ್ಲೆಡೆ ಹೇರಲು ನೂರಾರು ತಂತ್ರಗಳನ್ನು ಹೊಸೆದುಕೊಂಡು ಯುದ್ಧಕ್ಕೆ ಹೊರಟಂತೆ ಹೊರಟು ಎಲ್ಲೆಡೆ ಹಿಂದೀ ಹೇರಲು ಶುರು ಹಚ್ಚಿಕೊಂಡರು, ಆದರೆ ಬಹುಸಂಖ್ಯಾತ ಜನರ ನುಡಿಯಾಗಿರದ ಹಿಂದೀಗೆ ಯಾವಾಗ ಇವರು ಅಂದುಕೊಂಡ ಮಟ್ಟದಲ್ಲಿ ಮನ್ನಣೆ, ಒಪ್ಪಿಗೆ ಸಿಗಲಿಲ್ಲವೋ ಆಗ ಶುರುವಾಗಿದ್ದೇ "ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿ" ಅನ್ನುವ ಇನ್ನೊಂದು ಪ್ರಜಾಪ್ರಭುತ್ವ ವಿರೋಧಿ ಸಮಿತಿ. ಈ ಸಮಿತಿಯಲ್ಲಿರುವ ಹಿಂದೀ ಪ್ರೇಮಿ ಸಂಸದರೆಲ್ಲ ಸೇರಿ ರೈಲ್ವೆ, ವಿಮೆ, ಆದಾಯ ತೆರಿಗೆ, ಬ್ಯಾಂಕು, ಅಂಚೆ, ಸಾರ್ವಜನಿಕ ಸ್ವಾಮ್ಯದ ಹತ್ತಾರು ಸಂಸ್ಥೆಗಳು ಹೀಗೆ ದೇಶಾದ್ಯಂತ ಸಾವಿರಾರು ಕಚೇರಿಗಳನ್ನು ಸಮೀಕ್ಷೆ ಮಾಡಿ ಆಡಳಿತ, ತರಬೇತಿ, ಉದ್ಯೋಗ, ಶಿಕ್ಷಣ, ಜಾಹೀರಾತು ಹೀಗೆ ಎಲ್ಲ ಹಂತದಲ್ಲೂ ಹಿಂದೀಯ ಬಳಕೆಯನ್ನು ಹೆಚ್ಚಿಸಲು ಏನೇನು ಮಾಡಬೇಕು ಅನ್ನುವ ಶಿಫಾರಸ್ಸುಗಳನ್ನು ರಾಷ್ಟ್ರಪತಿಗಳಿಗೆ ಕಳಿಸುವ ಮತ್ತು ರಾಷ್ಟ್ರಪತಿಗಳು ಅದನ್ನು ಕಾನೂನಾಗಿಸುವಂತೆ ಸರ್ಕಾರಕ್ಕೆ ಕಳಿಸುವ ಮಟ್ಟಿಗೆ "ಹಿಂದೀ"ಯನ್ನು ಶತಾಯ ಗತಾಯ ಹೇರಲೇಬೇಕು ಎಂದು ಪಣ ತೊಟ್ಟಿರುವ ವ್ಯವಸ್ಥೆ ಇಂದು ನಮ್ಮ ನಡುವೆ ಇದೆ.
ಹಿಂದಿ ಸಪ್ತಾಹವೆನ್ನುವ ಗಾಯದ ಮೇಲೆ ಉಪ್ಪು ಸವರುವ ಹೀನ ಕೆಲಸಅದು ಸಾಲದು ಎಂಬಂತೆ ಪ್ರತಿ ವರ್ಷ ಸೆಪ್ಟೆಂಬರ್ 7ರಿಂದ 14ರವರೆಗೆ ಹಿಂದೀ ಸಪ್ತಾಹ ಅನ್ನುವ ಹೆಸರಿನಲ್ಲಿ ಒಂದು ವಾರ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದೀ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು, ಹಿಂದೀಯನ್ನು ಹೆಚ್ಚೆಚ್ಚು ಬಳಸುವ ಹಿಂದೀ ಮತ್ತು ಹಿಂದೀಯೇತರರಿಗೆ ಬಹುಮಾನ, ಬಡ್ತಿ, ಪ್ರಶಸ್ತಿ ಕೊಡುವ, ಆ ಮೂಲಕ ಹಿಂದೀಯನ್ನು ಇನ್ನಷ್ಟು ವ್ಯಾಪಕಗೊಳಿಸುವ ಸಂಚು ನಮ್ಮದೇ ತೆರಿಗೆ ಹಣದಲ್ಲಿ ನಡೆಯುತ್ತಿರುವ ಅನ್ಯಾಯ ನಮ್ಮೆಲ್ಲರ ಕಣ್ಣ ಮುಂದಿದೆ. ಎಲ್ಲ ಭಾಷೆಗಳೂ ಸಮಾನ, ಎಲ್ಲ ಜನರು ಸಮಾನ ಅನ್ನುವ ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಭಾರತವೆಂಬ ಭಾಷಾವಾರು ಪ್ರಾಂತ್ಯಗಳ ಒಕ್ಕೂಟ ಈ ರೀತಿ ಒಂದು ನುಡಿಯ ಬೆನ್ನ ಹಿಂದೆ ನಿಂತು, ಎಲ್ಲೆಲ್ಲಿ ಯಾವ ಯಾವ ನುಡಿಗಳು ಸಹಜವಾಗಿ ಉದ್ಯೋಗದ, ವ್ಯವಹಾರದ, ಆಡಳಿತದ ಭಾಷೆಯಾಗಿರಬೇಕಿತ್ತೋ ಅಲ್ಲಿಂದ ಅವೆಲ್ಲವನ್ನು ಬುಡಸಮೇತ ಕಿತ್ತು, ಹಿಂದೀಯನ್ನು ಸ್ಥಾಪಿಸುತ್ತಿರುವುದನ್ನು ಸಮಾನತೆ ಎಂದು ಕರೆಯಲಾದೀತೆ? ನ್ಯಾಯವೆಂದು ಕರೆಯಲಾದೀತೆ?
ಯಾವ ಹಾದಿಯಾದರೂ ಸರಿ, ಹಿಂದಿ ಒಪ್ಪಿಕೊಳ್ಳುವಂತೆ ಮಾಡಿ !
ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿ
ಹಿಂದಿ ಸಪ್ತಾಹವೆನ್ನುವ ಗಾಯದ ಮೇಲೆ ಉಪ್ಪು ಸವರುವ ಹೀನ ಕೆಲಸ
ಈಗ ಮಾಡದಿದ್ದರೆ ಇನ್ನೆಂದೂ ಮಾಡಲಾಗದು !
ಭ್ರಷ್ಟಾಚಾರದಿಂದ ಬೇಸತ್ತ ಜನರು ಇತ್ತಿಚೆಗೆ ಪ್ರತಿಭಟಿಸಿದಂತೆ ವೈವಿಧ್ಯತೆಯನ್ನು ಶಾಪದಂತೆ ಕಾಣುತ್ತ, ಒಂದು ದೇಶ- ಒಂದು ಭಾಷೆ ಒಗ್ಗಟ್ಟಿಗೆ ದಾರಿ ಅನ್ನುತ್ತ ಈ ದೇಶದ ಒಗ್ಗಟ್ಟನ್ನು ಒಡೆಯುತ್ತಿರುವ ಇಂತಹ ಜನ ವಿರೋಧಿ ನೀತಿಗಳನ್ನು ಅದೇ ರೀತಿ ಪ್ರತಿಭಟಿಸಬೇಕಾದ ಅಗತ್ಯ ಇಂದು ಎಲ್ಲ ಹಿಂದೀಯೇತರ ಭಾರತೀಯರ ಮೇಲಿದೆ. ಹಿಂದೀ ಸಪ್ತಾಹ ನಡೆಯುವ ಇದೇ ಸಮಯದಲ್ಲಿ ಹಿಂದೀ ಹೇರಿಕೆಯಿಂದಾಗುತ್ತಿರುವ ಕೆಡುಕುಗಳನ್ನು ಮನಗಾಣುವ, ಇತರರಿಗೆ ಮನವರಿಕೆ ಮಾಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ನಿಮ್ಮ ಸಾಮಾಜಿಕ ಸಂಪರ್ಕ ತಾಣವಿರಲಿ, ಅಂತರ್ಜಾಲ ತಾಣವಿರಲಿ, ಗುಂಪಿರಲಿ, ಅಲ್ಲೆಲ್ಲ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಎಲ್ಲ ಸಾಧನಗಳ ಮೂಲಕ ಹಿಂದೀ ಹೇರಿಕೆಗೆ (ಹಿಂದೀ ಭಾಷೆ ಅಥವಾ ಭಾಷಿಕರ ಬಗ್ಗೆಯಲ್ಲ) ಇರುವ ನಿಮ್ಮ ವಿರೋಧವನ್ನು ದಾಖಲಿಸಿ. ಹೆಚ್ಚೆಚ್ಚು ಜನರಲ್ಲಿ ಈ ತಪ್ಪು ಭಾಷಾ ನೀತಿಯ ಬಗ್ಗೆ ಅರಿವು ಮೂಡಿದಲ್ಲಿ ಮಾತ್ರ ಇಂತಹ ಹೇರಿಕೆಯ ನೀತಿಗಳು ರದ್ದಾಗಿ, ಎಲ್ಲ ಭಾಷೆಗಳಿಗೂ ಸಮಾನ ಗೌರವ ಕೊಡುವ ವ್ಯವಸ್ಥೆ ಮುಂದೊಂದು ದಿನ ಬರಬಹುದು. ಈಗ ಎಚ್ಚರ ತಪ್ಪಿದರೆ ಮುಂದೆಂದೂ ಇದನ್ನು ಸರಿಪಡಿಸಿಕೊಳ್ಳಲಾಗದು ಅನ್ನುವುದನ್ನು ಮರೆಯದಿರೋಣ ಗೆಳೆಯರೆ..
ಹಿಂದೀ ಹೇರಿಕೆಯಿಂದ ಬೇಸತ್ತಿರುವವರಲ್ಲಿ ನಾನು ಒಬ್ಬ, ಇದನ್ನು ಬೇರು ಸಮೇತ ಕಿತ್ತೊಗೆಯಲು ನಿಮ್ಮ ಜೊತೆಗೂಡಲು ನಾನು ಸಿದ್ದ.
ಪ್ರತ್ಯುತ್ತರಅಳಿಸಿಜಗದೀಶ.
hindi herike nillali
ಪ್ರತ್ಯುತ್ತರಅಳಿಸಿ