ಭಾನುವಾರ, ಜನವರಿ 23, 2011

ಕನ್ನಡ ಸಾಹಿತ್ಯ ಸಮ್ಮೇಳನ - ಬಂತು ನಮ್ ಬೆಂಗಳೂರಿಗೆ !


41 ವರ್ಷಗಳ ದೊಡ್ಡ ಅಂತರದ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ರಾಜಧಾನಿ ಬೆಂಗಳೂರಿಗೆ ಬರುತ್ತಿದೆ. 1970ರ ಬೆಂಗಳೂರಿಗೂ, 2011ರ ಬೆಂಗಳೂರಿಗೂ ಆಕಾಶ-ಭೂಮಿಗಿರುವಷ್ಟು ಅಂತರವಿದೆ. ಬೆಂಗಳೂರಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯವಾದ ಬದಲಾವಣೆಯಾಗಿದೆ. ಜಾಗತೀಕರಣದ ನಂತರ ಶುರುವಾದ ಐಟಿ ಕ್ರಾಂತಿ, ತದನಂತರ ಕೋಡಿ ಬಿದ್ದ ಕೆರೆಯಂತೆ ಹರಿದು ಬಂದ ವಲಸಿಗರ ಅಬ್ಬರದಲ್ಲಿ ಬೆಂಗಳೂರು ಖಂಡಿತ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ಬರುತ್ತಿರುವ ಸಮ್ಮೇಳನ ಖಂಡಿತವಾಗಿಯೂ ಪ್ರಮುಖವಾದದ್ದು, ಅಲ್ಲಿ ಆಗಬೇಕಾದ ಚರ್ಚೆ, ನಡೆಯಬೇಕಾದ ವಿಚಾರ-ವಿಮರ್ಷೆ, ತೆಗೆದುಕೊಳ್ಳಬೇಕಾದ ನಿಲುವು ಎಲ್ಲವೂ ಬೆಂಗಳೂರು, ಕರ್ನಾಟಕದ ಮುಂದಿನ ದಾರಿಗೆ ದಿಕ್ಸೂಚಿಯಾಗಬಲ್ಲಂತದ್ದು ಅನ್ನುವುದು ನನ್ನ ಅನಿಸಿಕೆ.
 
ಬೆಂಗಳೂರಿಗೆ ಅಷ್ಟೊಂದು ಮಹತ್ವ ಯಾಕೆ?
ಇದೆಲ್ಲ ಸರಿ, ಆದ್ರೆ ಬೆಂಗಳೂರಲ್ಲಿ ಸಾಹಿತ್ಯ ಸಮ್ಮೇಳನ ಆದ್ರೆ ಅದಕ್ಯಾಕೆ ಅಷ್ಟು ಮಹತ್ವ ಅನ್ನಿಸಬಹುದು. ಬೆಂಗಳೂರು ಅನ್ನುವುದು ಕರ್ನಾಟಕದ ಬೇರೆ ಊರುಗಳಂತಲ್ಲ. ಇಡೀ ಕರ್ನಾಟಕದ, ಕನ್ನಡಿಗರ ಕಲಿಕೆ, ದುಡಿಮೆ, ಬದುಕು ರೂಪಿಸಬೇಕಾದ ವ್ಯವಸ್ಥೆಯಾದ ಸರ್ಕಾರ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಸಾಂಸ್ಕೃತಿಕ ಗುರುತುಗಳಲ್ಲೊಂದಾದ ಕನ್ನಡ ಚಿತ್ರೋದ್ಯಮ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಕಳೆದ 60 ವರ್ಷಗಳ ಇತಿಹಾಸದಲ್ಲಿ ರೂಪುಗೊಂಡ ಹತ್ತು ಹಲವು ನಾಡ ಪರ, ಭಾಷೆ ಪರ ಚಳುವಳಿಗಳಿಗೆ ಹೊಸ ದಿಕ್ಕು ತೋರಿಸಿದ, ಜನಾಭಿಪ್ರಾಯ ರೂಪಿಸುವಲ್ಲಿ ಕೆಲಸ ಮಾಡಿದ ಹತ್ತು ಹಲವು ಕನ್ನಡ ಚಿಂತಕರು, ಸಂಘಟನೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ. ಕರ್ನಾಟಕದ ರಾಜಕೀಯ, ಆಡಳಿತ ವ್ಯವಸ್ಥೆಯನ್ನು ಹದ್ದಿನ ಕಣ್ಣಿನಿಂದ ಬೆನ್ನು ಬಿಡದೇ ಕಾಯುತ್ತಿರುವ ಸುದ್ದಿ, ದೃಶ್ಯ ಮಾಧ್ಯಮಗಳಿಗೂ ಬೆಂಗಳೂರೇ ಕೇಂದ್ರ ಸ್ಥಾನ. ಇವೆಲ್ಲದಕ್ಕೂ ಮಿಗಿಲಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಬಹು ಪಾಲು ನಿಯಂತ್ರಿಸುತ್ತಿರುವುದು  ಬೆಂಗಳೂರೆಂಬ ಕೆಂಪೇಗೌಡರ ಊರು. ಕರ್ನಾಟಕದ ಪಾಲಿನ ಹೆಚ್ಚಿನ ಎಲ್ಲ stakeholders ಇರೋ ಬೆಂಗಳೂರಲ್ಲಿ, ಇವರೆಲ್ಲರ ನಡುವೆ ನಡಿತಿರೋ ಈ ಸಮ್ಮೇಳನ ನಿಜಕ್ಕೂ ಮಹತ್ವದ್ದೇ.

ಕೆಲ ಮುಖ್ಯ ವಿಷಯಗಳು, ಬೇಡಿಕೆಗಳು
ಎಲ್ಲ ಸರಿ, ಆದ್ರೆ ಈ ಸಮ್ಮೇಳನದಲ್ಲಿ ಬರೀ ಲಲಿತ ಸಾಹಿತ್ಯ, ಕವಿ ಗೋಷ್ಟಿ, ಹಾಸ್ಯ ಸಂಜೆ ಅಂತ ವಾಡಿಕೆಯಂತೆ  ಸಮ್ಮೇಳನ ಕಳೆಯದೇ, ಸಮ್ಮೇಳನ ನಿಜವಾದ ಅರ್ಥದಲ್ಲಿ ಸಾರ್ಥಕತೆ ಕಾಣಲು ಕೆಲವು ಮುಖ್ಯವಾದ ವಿಷಯಗಳು, ಬೇಡಿಕೆಗಳ ಬಗ್ಗೆ ಎಲ್ಲ ಪಾಲುದಾರರು ಗಮನ ಹರಿಸಬೇಕು. ನನಗನಿಸಿದ ಕೆಲ ವಿಷಯಗಳು:
  • ವಲಸಿಗರ ಪ್ರವಾಹವನ್ನೇ ಕಾಣುತ್ತಿರುವ ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಕನ್ನಡೇತರರನ್ನು ಕನ್ನಡ ಮುಖ್ಯವಾಹಿನಿಗೆ ತರುವತ್ತ ಎಲ್ಲ ಪ್ರಯತ್ನಗಳಾಗಬೇಕು. ಅಲಾಯನ್ಸ್ ಫ್ರೆಂಚ್, ಮ್ಯಾಕ್ಸ್ ಮ್ಯೂಲರ್ ನಂತಹ ಫ್ರೆಂಚ್, ಜರ್ಮನ್ ಕಲಿಸುವ ಸಂಸ್ಥೆಗಳಂತೆ ಕನ್ನಡ ಕಲಿಸುವ ವಿಶ್ವ ದರ್ಜೆಯ ಸಂಸ್ಥೆಗಳನ್ನು ಹುಟ್ಟು ಹಾಕುವಂತ, ಅದಕ್ಕೆ ಬೇಕಾದ eco-system ಕಟ್ಟುವಂತ ಪ್ರಯತ್ನವನ್ನು ಸಂಬಂಧ ಪಟ್ಟವರು ಮಾಡಬೇಕು.
  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕನ್ನಡ ಅನ್ನುವುದು ಮಾರುಕಟ್ಟೆಯ ಮೊದಲ ಆಯ್ಕೆಯ ಭಾಷೆಯಾಗಿ ಬಳಕೆಯಲ್ಲಿಲ್ಲ. ಕನ್ನಡ ಒಂದು ಬಳಕೆ ಮೌಲ್ಯ ಇರುವ, ಜೀವಂತಿಕೆಯುಳ್ಳ ಮಾರುಕಟ್ಟೆಯ ಭಾಷೆಯಾಗಿ ಬಳಕೆಯಾಗದಿರುವುದು ಕಂಡು ಬರುತ್ತದೆ. ಕನ್ನಡದಲ್ಲಿ ಸೇವೆ ದೊರೆಯದೇ ಗ್ರಾಹಕರಿಗೆ ತೊಂದರೆಗೀಡಾಗಿರುವ ನೂರಾರು ಉದಾಹರಣೆಗಳಿದ್ದರೂ ಗ್ರಾಹಕಸೇವೆಯಲ್ಲಿ ಕನ್ನಡದ ಬಳಕೆಗೆ ಅವಕಾಶ ಕಲ್ಪಿಸುವ ಕಾನೂನು ಇಂದಿಗೂ ಇಲ್ಲ. ಗ್ರಾಹಕಸೇವೆಯ ಕಾನೂನು ಅಂದರೆ ಬರೀ ತೂಕ, ಅಳತೆ ಅನ್ನುವುದಕ್ಕೆ ಸೀಮಿತವಾಗಿರುವಾಗ, ಗ್ರಾಹಕಸೇವೆಯ ಭಾಷಾ ಆಯಾಮಕ್ಕೂ ಕಾನೂನಿನ ಬಲ ನೀಡುವ ಕಾಯ್ದೆ ರೂಪಿಸುವ ದೊಡ್ಡ ಹೊಣೆಗಾರಿಕೆ ಸರ್ಕಾರದ ಮೇಲಿದೆ.
  • ಕನ್ನಡ ಕೆಲ ವಿಷಯಕ್ಕೆ ಮಾತ್ರ ಸೂಕ್ತ. ಕಲಿಕೆ, ತಂತ್ರಜ್ಞಾನದಂತಹ ವಿಷಯಗಳಲ್ಲಿ ಕನ್ನಡಕ್ಕೆ ಯೋಗ್ಯತೆಯೇ ಇಲ್ಲ ಅನ್ನುವ suicidal ಮನಸ್ಥಿತಿ ನಮ್ಮ ಸರ್ಕಾರಕ್ಕೆ ಇದ್ದಂತಿದೆ. ಕನ್ನಡದಲ್ಲಿ ಉನ್ನತ ಶಿಕ್ಷಣ ತರುವ ಯಾವ ಪ್ರಯತ್ನವನ್ನು ಮಾಡದೇ ಸರ್ಕಾರ ಕೈ ಚೆಲ್ಲಿದೆ. ಸಾಲದ್ದಕ್ಕೆ ತನ್ನ ವ್ಯಾಪ್ತಿಯಲ್ಲಿದ್ದ ಪಾಲಿಕೆ ಶಾಲೆಗಳಲ್ಲಿ CBSE ಪಠ್ಯಕ್ರಮ ಜಾರಿ ಮಾಡಿ ಅದನ್ನೇ ಸಾಧನೆ ಎಂದು ಕರೆದುಕೊಳ್ಳುವ ಹುಚ್ಚು ಪ್ರಯತ್ನವನ್ನು ಮಾಡಿತ್ತು. ಸರ್ಕಾರಕ್ಕೆ ಕಲಿಕೆಯಲ್ಲಿ ತಾಯ್ನುಡಿಯ ಪಾತ್ರದ ಮಹತ್ವವೇ ಅರಿವಾದಂತಿಲ್ಲ. ಒಂದು ಸಮಯಾಧಾರಿತ ವ್ಯವಸ್ಥೆ ರೂಪಿಸಿ ಅದರಡಿ ಕಲಿಕೆಯಲ್ಲಿ ಆಗಬೇಕಾದ ಸುಧಾರಣೆ, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ತರಲು ಬೇಕಿರುವ ಕಾರ್ಯ ಯೋಜನೆಯನ್ನು ಪ್ರಕಟಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಒಳ್ಳೆಯ ಬದುಕು ಕೊಡಲು ಕನ್ನಡಕ್ಕೆ ಯೋಗ್ಯತೆ ಇಲ್ಲ ಅನ್ನುವ ಮನಸ್ಥಿತಿಯಿಂದ ಜನಸಾಮಾನ್ಯರು ಇಂಗ್ಲಿಷ್ ಅನ್ನು ಅಪ್ಪಿಕೊಳ್ಳುತ್ತಿದ್ದಾರೆ. ಕನ್ನಡ ಓದಲು, ಬರೆಯಲು ಬಾರದ ಒಂದು ಹೊಸ ಪೀಳಿಗೆಯೇ ಹುಟ್ಟಿಕೊಳ್ಳುತ್ತಿದೆ. ಹೀಗಿರುವಾಗ ಮುಂದೊಂದು ದಿನ ಸಾಹಿತ್ಯ ಸಮ್ಮೇಳನದ ನೂರಾರು ಪುಸ್ತಕ ಮಳಿಗೆಗಳಲ್ಲಿ ಭರ್ಜರಿ ರಿಯಾಯಿತಿ ಕೊಟ್ಟರೂ ಕನ್ನಡ ಪುಸ್ತಕ ಓದುವವರೇ ಇರದಂತಾಗಬಹುದು. ಹೀಗಾಗಿ ಕನ್ನಡದಲ್ಲಿ ಒಳ್ಳೆಯ ಕಲಿಕೆ, ಒಳ್ಳೆಯ ದುಡಿಮೆ ಹುಟ್ಟವಂತ ವ್ಯವಸ್ಥೆ ನಿರ್ಮಿಸುವತ್ತ ಎಲ್ಲ ಪಾಲುದಾರರು ಗಮನಹರಿಸಬೇಕು.
  • ತಂತ್ರಜ್ಞಾನ ಬದಲಾಗುತ್ತಿರುವ ವೇಗಕ್ಕೆ ಕನ್ನಡವೂ technology ready ಆಗಬೇಕಾದ ತುರ್ತು ಅಗತ್ಯವಿದೆ. ಅದು ಕಂಪ್ಯೂಟರ್, ಮೊಬೈಲ್ ನಿಂದ ಹಿಡಿದು ಎ.ಟಿ.ಎಮ್ / ಐವಿಆರ್ ನಂತಹ ಬ್ಯಾಂಕ್ ವ್ಯವಸ್ಥೆಯವರೆಗೆ ಎಲ್ಲ ರೀತಿಯಲ್ಲೂ technology adoptionಗೆ ಸಿದ್ದವಾಗಬೇಕಿದೆ. ಕನ್ನಡಕ್ಕೆ ಇಂತಹ ಯೋಗ್ಯತೆ ಬಂದಾಗಲಷ್ಟೇ ಅದು ಯುವಕರನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ಸಾಧ್ಯ. ಈ ವಿಷಯದ ಬಗ್ಗೆಯೂ ಸಮ್ಮೇಳನದಲ್ಲಿ ಗೋಷ್ಟಿಗಳು ನಡೆಯಬೇಕು.
  • ಜಾಗತೀಕರಣದ ನಂತರದ ದಿನಗಳಲ್ಲಿ ಬೆಂಗಳೂರು ಅತಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ನಗರವಾಗಿ ಪರಿವರ್ತನೆಗೊಂಡಿದೆ. ಆದರೆ ಈ ಬದಲಾವಣೆಯ ಫಲ ಮಾತ್ರ ಕನ್ನಡಿಗರಿಗೆ "ಕನ್ನಡಿಯೊಳಗಿನ ಗಂಟೇ" ಆಗಿದೆ. 41 ವರ್ಷಗಳ ನಂತರ ರಾಜಧಾನಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ಸಂದರ್ಭದಲ್ಲಿ ಸರ್ಕಾರ ಈ ಕಾಲಮಾನಕ್ಕೆ ಹೊಂದುವಂತೆ ಬದಲಾಯಿಸಿದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತಂದು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡುವತ್ತ ಕಾನೂನು ರೂಪಿಸುವ, ಅದನ್ನು ಅನುಷ್ಟಾನಗೊಳಿಸುವ ಇಚ್ಛಾಶಕ್ತಿ ಪ್ರಕಟಿಸಬೇಕಿದೆ. ಈ ಸಮ್ಮೇಳನದ ಎಲ್ಲ ಪಾಲುದಾರರು ಈ ಬಗ್ಗೆಯೂ ಕೊಂಚ ಗಮನ ಹರಿಸಬೇಕು..
  • ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ ೨೪ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಆದರೆ ಈ ಕಾನೂನು ಇಂದಿಗೂ ಅನುಷ್ಟಾನಕ್ಕೆ ಬಂದಿಲ್ಲ. 1985ರಲ್ಲೇ ಈ ಕಾನೂನು ಬಂದಿದೆ. ಕಾನೂನು ಬಂದಾಗ ಇದ್ದದ್ದು 50 ರೂಪಾಯಿ ದಂಡ. ಇವತ್ತು 25 ವರ್ಷದ ನಂತರ ಆ ದಂಡದ ಮೊತ್ತ 10,000 ವರೆಗೂ ಹೋಗಿದೆ. ಒಂದು ಸರಳವಾದ ಕಾನೂನು ಅನುಷ್ಟಾನಕ್ಕೆ 25 ವರ್ಷ ಸಾಕಾಗಲ್ವ? ಈಗಲಾದರೂ ಇದರ ಬಗ್ಗೆ ಗಮನ ಹರಿಸಲಿ.
  • ಬ್ಯಾಂಗಲೋರ್ ಅನ್ನುವ ಬ್ರಿಟಿಷರ ಬಳುವಳಿ ಇನ್ನೂ ಬೆಂಗಳೂರು ಎಂದು ಬದಲಾಗಿಲ್ಲ. 2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಶ್ರೀ. ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು.  2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಸಾಹಿತ್ಯ ಸಮ್ಮೇಳನ ನಡಿತಿರೋ ಈ ಸಂದರ್ಭದಲ್ಲಾದರೂ ಜನರ ಭಾವನೆಗಳನ್ನು ಗೌರವಿಸುವಂತಹ ಇಂತಹ ವಿಷಯಗಳ ಬಗ್ಗೆ ಎಲ್ಲ ಪಾಲುದಾರರು ಗಮನ ಹರಿಸಿದರೆ ಸಮ್ಮೇಳನಕ್ಕೆ ಕಳೆ ಕಟ್ಟುತ್ತೆ.
ಸಾಹಿತ್ಯ ಸಮ್ಮೇಳನ ಒಂದಿಷ್ಟು ಸಾಹಿತ್ಯ ಗೋಷ್ಟಿ, ಸನ್ಮಾನ ಸಮಾರಂಭಗಳಿಗೆ ಮೀಸಲಾಗದೇ ಕನ್ನಡಿಗರ ಬದುಕಿನ, ಸ್ವಾಭಿಮಾನದ ಹಲವು ಪ್ರಶ್ನೆಗಳನ್ನು ಎತ್ತಿಕೊಳ್ಳುವಂತ, ಅವುಗಳಿಗೆ ಉತ್ತರ ಕಂಡುಕೊಳ್ಳುವ ವೇದಿಕೆಯಾದರೆ ಇಂತಹ ಸಮ್ಮೇಳನಗಳಿಗೊಂದು ಅರ್ಥವಿರುತ್ತೆ. ಕರ್ನಾಟಕದ ಏಕೀಕರಣಕ್ಕಾಗೇ ಹುಟ್ಟಿದ, ಕನ್ನಡಿಗರನ್ನು ಒಗ್ಗೂಡಿಸಲು ಸರ್ ಎಮ್.ವಿ ಅವರ ಮುಂದಾಳತ್ವದಲ್ಲಿ ಶುರುವಾದ ಸಂಸ್ಥೆ ನಮ್ಮ ಸಾಹಿತ್ಯ ಪರಿಷತ್ತು. ಈ ಸಂಸ್ಥೆಯಿಂದ ಅಂತದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪೇನು ಅಲ್ಲ ಅಂತ ನನ್ನ ಅನಿಸಿಕೆ. ಏನಂತೀರಾ ಗೆಳೆಯರೇ?

ಸೋಮವಾರ, ಜನವರಿ 10, 2011

ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !

ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ "ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:
The value systems of those with access to power and of those far removed from such access cannot be the same. The viewpoint of the privileged is unlike that of the underprivileged.
ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.
ಹಾಗೇ, ರಾಜಕೀಯವೆಂದರೆ ಕೊಳಕು, ಕೊಳಚೆ ಅನ್ನುವ ಮನಸ್ಥಿತಿಯ ಜನರ ಮನಸ್ಸಿನಲ್ಲಿ ಅವರ ಈ ಮಾತುಗಳು ಕ್ಷಣವೂ ರಿಂಗಣಿಸಬೇಕು:
You can never separate the political system of a country from the way you conduct your daily life.
ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ಅಲ್ಲಿನ ಜನರು ನಿತ್ಯ ಜೀವನದಲ್ಲಿ ತಮ್ಮನ್ನು ತಾವು ನಡೆಸಿಕೊಳ್ಳುವ ರೀತಿಯಿಂದ ಎಂದಿಗೂ ಬೇರೆಗೊಳಿಸಲಾಗದು. 
ಅಲ್ಲದೇ, ಸವಲತ್ತು, ಅವಕಾಶ ವಂಚಿತ ಜನರಿಗೆ ಸೀರೆ ಪಂಚೆ ಹಂಚುವುದರಲ್ಲೇ ತೃಪ್ತಿ ಕಾಣುತ್ತಿರುವ ಕರ್ನಾಟಕದ ರಾಜಕೀಯ ನಾಯಕರ ಮನಸ್ಸಿನಲ್ಲಿ ಅವರ ಈ ಮಾತುಗಳು ದಿನವೂ ರಿಂಗಣಿಸಬೇಕು:
The provision of basic material needs is not sufficient to make minority groups and indigenous peoples feel they are truly part of the greater national entity. For that they have to be confident that they too have an active role to play in shaping the destiny of the state that demands their allegiance.

ಜನರ ಮೂಲಭೂತ ಅವಶ್ಯಕತೆಯನ್ನು ಪೂರೈಸುವುದೊಂದೇ ಅವರನ್ನು ನಿಜವಾದ ಅರ್ಥದಲ್ಲಿ ಆ ದೇಶದ ಭಾಗವಾಗಿಸುವುದಿಲ್ಲ. ಯಾವ ದೇಶ ತನ್ನ ನಿಷ್ಟೆ ಬೇಡುತ್ತೋ, ಆ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ತಮಗೂ ಒಂದು ಮುಖ್ಯವಾದ ಪಾತ್ರವಿದೆ ಅನ್ನುವ ನಂಬಿಕೆ ಮೂಡಿದಾಗಲಷ್ಟೇ ಅದು ಆಗಲು ಸಾಧ್ಯ.
ಕೊನೆಯಲ್ಲಿ ಅವರ ಈ ಮಾತುಗಳು, ಕರ್ನಾಟಕದ ಭವಿಷ್ಯದ ಬಗ್ಗೆ, ಅದರ ನಾಳೆಗಳನ್ನು ಬದಲಾಯಿಸುವತ್ತ ಕನಸು ಕಾಣುವ ಪ್ರತಿಯೊಬ್ಬನ ಮನದಲ್ಲೂ ರಿಂಗಣಿಸಬೇಕು:
The democracy process provides for political and social change without violence.

ಪ್ರಜಾತಂತ್ರ ವ್ಯವಸ್ಥೆ ಹಿಂಸೆಯ ಅಗತ್ಯವಿಲ್ಲದೆಯೇ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆ ತರುವ ಎಲ್ಲ ಅವಕಾಶವನ್ನಿಯುತ್ತದೆ.
ಬರ್ಮಾದಲ್ಲಿರುವ ಮಿಲಿಟರಿ ಆಡಳಿತ ಆದಷ್ಟು ಬೇಗನೇ ಅಂತ್ಯ ಕಂಡು ಜನರಿಂದ, ಜನರಿಗಾಗಿ ಆಯ್ಕೆಯಾದ ಸರ್ಕಾರ ಕಾಣುವ ವ್ಯವಸ್ಥೆ ಆದಷ್ಟು ಬೇಗನೆ ಬರಲಿ ಎಂದು ಹಾರೈಸೋಣ. ತನ್ನ ಜೀವನದ ಬಹು ಪಾಲು ಅಹಿಂಸೆಯ ಮಾರ್ಗದಲ್ಲೇ  ಈ ಹೋರಾಟಕ್ಕೆ ಮೀಸಲಿಟ್ಟ ಆಂಗ್ ಸಾನ್ ಸೂ ಕಿ ಜೀವಂತವಾಗಿರುವಾಗಲೇ ಈ ಬದಲಾವಣೆ ಕಾಣುವ ದಿನ ಬರಲಿ ಎಂದು ಹಾರೈಸೋಣ. 

ಸೂಚನೆ: ಈ ಬರಹದ ಬಹು ಪಾಲು ಕಿರಣ್ ರಾವ್ ಅವರ ಕರ್ನಾಟಿಕ್ ಬ್ಲಾಗ್ ನಲ್ಲಿ ಬಂದ ಒಂದು ಅಂಕಣದ ಅನುವಾದ. ಅದನ್ನು ಓದಿದ ಮೇಲೆ ಅದನ್ನು ಕನ್ನಡದಲ್ಲೂ ಅನುವಾದ ಮಾಡಬೇಕು ಅನ್ನಿಸಿ, ನನ್ನ ಕೆಲವು ಮಾತನ್ನು ಸೇರಿಸಿ ಅನುವಾದಿಸಿದ್ದೇನೆ.

ಶುಕ್ರವಾರ, ಜನವರಿ 7, 2011

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?

ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು.  ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ "ಸಂಸ್ಕೃತ ಭಾರತಿ"  ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು.

ಕನ್ನಡ ಒಂದು ದ್ರಾವಿಡ ನುಡಿ

ಈ ಮೇಳ ಶುರುವಾದ ನಿನ್ನೆ ದಿನ ಶಿಕ್ಷಣ ಮಂತ್ರಿ ಕಾಗೇರಿಯವರು " ಸಂಸ್ಕೃತವೇ ಎಲ್ಲ ಭಾಷೆಗಳ ತಳಹದಿ" ಅನ್ನುವ ಹಸಿ ಸುಳ್ಳೊಂದನ್ನು ಹೇಳಿದ್ದಾರೆ. Linguistics ಅನ್ನುವ ವಿಜ್ಞಾನ ಗೊತ್ತಿರುವ ಯಾರಿಗಾದರೂ ಗೊತ್ತಿರುವ ಅಂಶವೆಂದರೆ ದಕ್ಷಿಣ ಭಾರತದ ಕನ್ನಡ,ತಮಿಳು,ತೆಲುಗು, ಮಲಯಾಳಂಗಳು ದ್ರಾವಿಡ ಭಾಷೆಗಳು ಅನ್ನುವುದು. ಹಾಗೆಯೇ ಸಂಸ್ಕೃತ ಅನ್ನುವುದು ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆ ಅನ್ನುವುದು. ಕನ್ನಡ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದಿದೆ ಎಂದ ಮಾತ್ರಕ್ಕೆ ಸಂಸ್ಕೃತ ಅದರ ತಾಯಿಯಾಗುವುದಿಲ್ಲ.

ಕನ್ನಡಿಗರ ಬದುಕಿನ ಭಾಷೆಯಾದ ಕನ್ನಡ ಅತ್ಯಂತ ತುರ್ತಾಗಿ ಗಮನ ಬೇಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಆದ್ಯತೆ ಕನ್ನಡದ ಉಳಿವು, ಬೆಳೆವಿನತ್ತ ಧಾವಿಸುವುದಾಗಬೇಕೆ ವಿನಹ "ಸಂಸ್ಕೃತ ಎಲ್ಲ ಭಾಷೆಗಳ ತಾಯಿ", "ಸಂಸ್ಕೃತ = ಸಂಸ್ಕೃತಿ" ಅನ್ನುತ್ತ ತನ್ನ ideological pet themesಗಳನ್ನು ಪೋಷಿಸುವ ಕೆಲಸಗಳತ್ತ ಸರ್ಕಾರದ ಸಂಪನ್ಮೂಲವನ್ನು ಪೋಲು ಮಾಡುವುದಕ್ಕಲ್ಲ ಅನ್ನುವುದು ನನ್ನ ಅನಿಸಿಕೆ.