ಗುರುವಾರ, ಮಾರ್ಚ್ 24, 2011

ದೇಶದ ಟಿವಿ ಮಾರುಕಟ್ಟೆ ಹೇಳ್ತಿರೊ ಕತೆ ಏನು ?

ಭಾರತದಾದ್ಯಂತ ಪತ್ರಿಕೆ, ಟಿವಿ, ಇಂಟರ್ ನೆಟ್, ರೇಡಿಯೊ, ಸಿನೆಮಾ ಮಾಧ್ಯಮಗಳ ಜಾಹೀರಾತಿನ ಮುನ್ನೋಟ, ಹಿನ್ನೋಟ ನೀಡುವ ಪಿಚ್ ಮ್ಯಾಡಿಸನ್ ಮೀಡಿಯಾ ಅಡ್ವಟೈಸಿಂಗ್ ಔಟಲುಕ್ ಸರ್ವೆ ಮಾಹಿತಿ ಗಮನಿಸುತ್ತಿದ್ದೆ, ಅದರಲ್ಲೂ ವಿಶೇಷವಾಗಿ ಸಮಾಜದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುವ ಟಿವಿ ಮಾಧ್ಯಮ ಯಾವ ರೀತಿ ಸಾಗುತ್ತಿದೆ, ಯಾವ ಭಾಷೆಗೆ ಎಷ್ಟು ಮಾರುಕಟ್ಟೆ ಇದೆ ಎಂದು ತಿಳಿಯುವ ಕುತೂಹಲ ನನಗಿತ್ತು. ಆ ಮಾಹಿತಿ ಗಮನಿಸುವಾಗ ಕಣ್ಣಿಗೆ ಬಿದ್ದ ಒಂದು ಮಾಹಿತಿ ನಿಮ್ಮ ಜೊತೆ ಹಂಚಿಕೊಳ್ಳೊಣ ಅನ್ನಿಸ್ತು.

ಹೇಗಿದೆ ಟಿವಿ ಮಾರುಕಟ್ಟೆ ಭಾಷೆಯಾಧಾರದ ಮೇಲೆ ?

2010ರಲ್ಲಿ ಟಿವಿ ಮಾರುಕಟ್ಟೆಯನ್ನು ಭಾಷೆಯಾಧಾರದ ಮೇಲೆ ನೋಡಿದರೆ ಕಾಣೋದು ಇಂತಿದೆ. (ಮಾಹಿತಿ ಮೂಲಕ್ಕೆ ಇಲ್ಲಿ ನೋಡಿ) 
ಇಲ್ಲಿ ಗಮನಿಸಬೇಕಾದ ಅಂಶವೆಂದರೆ  ಹಿಂದಿ ಹೇರಿಕೆಗೆ ತುತ್ತಾಗಿ ಟಿವಿ ಮಾರುಕಟ್ಟೆಯಲ್ಲಿ ಕೆಲವು ಭಾಷೆಗಳು ತಲುಪಿರುವ ಕೆಟ್ಟ ಗತಿಯನ್ನು. ಇಲ್ಲಿ ಬೆಂಗಾಲಿ, ಗುಜರಾತಿ, ಪಂಜಾಬಿ, ಮರಾಠಿ, ಒರಿಯಾ, ಅಸ್ಸಾಮಿಸ್ ನಂತಹ ನುಡಿಗಳ ಮಾರುಕಟ್ಟೆ ಸ್ಥಿತಿಯನ್ನು ಗಮನಿಸಿ. ಈ ನುಡಿಗಳನ್ನಾಡುವ ಜನರ ಸಂಖ್ಯೆಯ ಜೊತೆಗೆ ಈ ನುಡಿಗಳ ಟಿವಿ ಮಾಧ್ಯಮದ ಮಾರುಕಟ್ಟೆ ಪಾಲು ಹೋಲಿಸಿ ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಈ ನುಡಿಗಳನ್ನಾಡುವ ಜನರಿದ್ದರೂ ತಮ್ಮ ನುಡಿಯಲ್ಲಿ ಸುದ್ದಿ, ಮನರಂಜನೆಯಂತಹ ಮೂಲಭೂತ ಅಗತ್ಯಗಳನ್ನು ಪೂರ್ತಿಯಾಗಿ ಪೂರೈಸಿಕೊಳ್ಳಲಾಗದ, ಅದಕ್ಕೂ ಹಿಂದಿಯನ್ನೇ ನೆಚ್ಚಿಕೊಳ್ಳುವಂತಹ ಸ್ಥಿತಿ ಈ ಭಾಷೆಗಳಿಗೆ ಬಂದೊದಗಿದೆ (ಹಾಗೇ ಮಾಡಲಾಗಿದೆ ಅನ್ನಬಹುದು) ಅನ್ನುವುದು ವೈವಿಧ್ಯತೆಯನ್ನು ಎತ್ತಿ ಹಿಡಿಯಬೇಕಾದ ಭಾರತದ ಒಕ್ಕೂಟ ವ್ಯವಸ್ಥೆ ಹಿಂದಿ ಹೇರಿಕೆಯ ಮೂಲಕ ಮಾಡಿರುವ ತಪ್ಪು ಎಂತಹುದು ಅನ್ನುವುದನ್ನು ಎತ್ತಿ ತೋರಿಸುತ್ತೆ. ಸಹಜವಾಗಿ ಎಲ್ಲೆಲ್ಲಿ ಯಾವ ನುಡಿಯಲ್ಲಿ ಅಲ್ಲಿನ ವ್ಯವಸ್ಥೆಗಳಿರಬೇಕಿತ್ತೋ ಅಲ್ಲೆಲ್ಲ ಹಿಂದಿಗೆ ನೆಲೆ ಕಲ್ಪಿಸಿ, ಆ ನಾಡಿನ ನುಡಿಯನ್ನು ಮೂಲೆಗುಂಪು ಮಾಡುತ್ತಿರುವುದಕ್ಕೆ ಇದು ಇನ್ನೊಂದು ಉದಾಹರಣೆಯಷ್ಟೇ.

ಹಿಂದಿ ಭಾಷಿಕರೆಷ್ಟು ?
ಅಷ್ಟೇ ಅಲ್ಲ, 2001ರ ಜನಗಣತಿ ಪ್ರಕಾರ ಹಿಂದಿ ಭಾಷಿಕರ ಸಂಖ್ಯೆ 41.03% ಅಂತೆ. ಆದ್ದರಿಂದ ಟಿವಿ ಮಾರುಕಟ್ಟೆಯಲ್ಲಿ 51% ಮಾರುಕಟ್ಟೆ ಇರುವುದು ಸಹಜ ಅನ್ನಿಸಬಹುದು. ಆದರೆ ದಿಟ ಏನೆಂದರೆ, ಹಿಂದಿಗೆ ಅಲ್ಪ ಸ್ವಲ್ಪ ಹೋಲುವ ಎಲ್ಲ ಭಾಷೆಗಳನ್ನು ಹಿಂದಿಯ ಉಪಭಾಷೆಗಳೆಂದು ಕರೆದು ಅವುಗಳನ್ನ ಸಾರಾಸಗಟಾಗಿ appropriate ಮಾಡಿಕೊಂಡಿದ್ದಾರೆ ಅನ್ನುವುದು. ಉದಾಹರಣೆಗೆ, ಹಿಂದಿಯ ಉಪಭಾಷೆಗಳೆಂದು ಕರೆಯುವ ಅವಧಿ, ಹರ್ಯಾಣ್ವಿ, ಬುಂಧೇಲಿ, ಕನೌಜಿ, ಬ್ರಜ್, ಭೋಜಪುರಿ, ಮೈಥಿಲಿ, ಮಾರ್ವಾಡಿ, ಬಗೇಲಿ, ಚತ್ತಿಸ್-ಗರಿ, ಧನ್ವಾರ್, ಖರಿಬೋಲಿ ಮುಂತಾದ ನುಡಿಗಳಿಗೆ ಹಲವು ನೂರು ವರ್ಷಗಳ ತಮ್ಮದೇ ಆದ ಇತಿಹಾಸವಿದೆ. ಆದರೆ ಈ ಎಲ್ಲ ವಿಶಿಷ್ಟ ನುಡಿಗಳನ್ನು ಹಿಂದಿ ಅನ್ನುವ ಹೊದಿಕೆಯಡಿ ತಂದು ಆ ಎಲ್ಲ ವೈವಿಧ್ಯತೆಯನ್ನು ಅಳಿಸಿ, ಅಲ್ಲೆಲ್ಲ ಹಿಂದಿಯನ್ನು ಸ್ಥಾಪಿಸಿರುವುದು ಸ್ವಲ್ಪ ಗಮನಿಸಿದರೂ ಕಂಡೀತು. ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸುವ, ವೈವಿಧ್ಯತೆಯನ್ನು ಅಳಿಸಿವುದೇ ಒಗ್ಗಟ್ಟು ಸಾಧಿಸುವ ವಿಧಾನವೆನ್ನುವ ಮನಸ್ಥಿತಿ ಇರುವವರೆಗೆ ಈ ರೀತಿಯ ಅಧರ್ಮದ ಹಾದಿಯ ಕೆಲಸಗಳಿಗೆ ಕೊನೆಯಿಲ್ಲ ಅನ್ನಬಹುದು.

ಭಾರತಕ್ಕೆ ಬೇಕು ಹೊಸ ಭಾಷಾ ನೀತಿ.
ಭಾರತಕ್ಕೆ ಟಿವಿ ಬಂದ ಹೊಸತರಲ್ಲಿ ಹೇಗಿತ್ತು ಒಮ್ಮೆ ನೆನೆಸಿಕೊಳ್ಳಿ. 1982ರಲ್ಲಿ ಶುರುವಾದ ಕೇಂದ್ರ ಸರ್ಕಾರಿ ಪ್ರಾಯೋಜಿತ ದೂರದರ್ಶನವೆಂಬ ಹಿಂದಿ ಹೇರಿಕೆಯ ಸಾಧನ ನಿರಾಂತಕವಾಗಿ 1991ರವರೆಗೆ ನಡೆದಿತ್ತು. ದೇಶದ ಬೇರೆಲ್ಲ ಭಾಷೆಗಳಿಗೆ ವಾರಕ್ಕೊಮ್ಮೆ ಭಿಕ್ಷೆಯಂತೆ 2-3ಗಂಟೆಯ ಅವಕಾಶ ಕೊಟ್ಟು ಬೇರೆಲ್ಲ ಸಮಯದಲ್ಲಿ ಹಿಂದಿ ಮಾತ್ರ ಪ್ರಸಾರ ಮಾಡಿ ಹಿಂದಿಯನ್ನು ವ್ಯವಸ್ಥಿತವಾಗಿ ಜನರ ಮೇಲೆ ಹೇರುವ ಮತ್ತು ಆ ಮೂಲಕ ಅದಕ್ಕೆ ಜನರ ಮನವೊಲಿಸುವ ಕೆಲಸ ನಡೆದಿತ್ತು. 1991ರಲ್ಲಿ ಒಮ್ಮೆ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಹಿಂದಿಯೇತರ ನುಡಿಯಲ್ಲೂ ಖಾಸಗಿ ವಾಹಿನಿಗಳು ಶುರುವಾಗುವ ಮೂಲಕ ಹಿಂದಿ ಹೇರಿಕೆಯೆಂಬ ಅಮಾನವೀಯ, ಸಂವಿಧಾನ ವಿರೋಧಿ ನಡೆಯಿಂದ ಹಿಂದಿಯೇತರರಿಗೆ ಬಿಡುಗಡೆ ದೊರಕಿದ್ದು. ಗಟ್ಟಿಯಾಗಿರುವ ತನ್ನತನ, ಸಬಲವಾದ ಸಿನೆಮಾ ಉದ್ಯಮ ಕಟ್ಟಿಕೊಂಡಿರುವ ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ ಭಾಷೆಗಳೇ ತಕ್ಕ ಮಟ್ಟಿಗೆ  ಹಿಂದಿಯ ಸಾಂಸ್ಕೃತಿಕ ದಾಳಿಗೆ ತುತ್ತಾಗದೇ ತಮ್ಮ ತಮ್ಮ ಭಾಷೆಗಳ ಮಾರುಕಟ್ಟೆಯನ್ನು ಉಳಿಸಿಕೊಂಡಿವೆ ಎನ್ನಬಹುದು. ಇವತ್ತು ಅಸ್ಸಾಮಿಸ್, ಬೆಂಗಾಳಿ, ಮರಾಠಿ, ಒರಿಯಾ, ಗುಜರಾತಿ ನುಡಿಗಳಿಗೆ ಬಂದೊದಗಿರುವ ಕುತ್ತು ನಾಳೆ ನಮಗೂ ಬರಬಹುದು ಅನ್ನಿಸಲ್ವಾ? ವೈವಿಧ್ಯತೆ ಅಳಿಸುವ ಯಾವ ಹೇರಿಕೆಯೂ ಸಲ್ಲದು ಅನ್ನಿಸಲ್ವಾ? ಭಾರತದ ಎಲ್ಲ ಭಾಷೆಗಳನ್ನೂ ಭಾಷಿಕರನ್ನೂ ಸಮಾನವೆಂದು ಕಾಣುವ ಭಾಷಾ ನೀತಿಯೊಂದೇ ವೈವಿಧ್ಯತೆಯನ್ನು ಕಾಪಾಡುವ ಆ ಮೂಲಕ ಭಾಷಿಕರ ನಡುವೆ ಒಗ್ಗಟ್ಟು ಹೆಚ್ಚಿಸುವ ಸಾಧನವಾಗಬಹುದೇ ಹೊರತು ಈ ರೀತಿ "ಒಂದು ದೇಶ - ಒಂದು ಭಾಷೆ" ಅನ್ನುವ ಮನಸ್ಥಿತಿಯಿಂದಲ್ಲ ಅನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಗುರುವಾರ, ಮಾರ್ಚ್ 10, 2011

ವಿಶ್ವ ಕನ್ನಡ ಸಮ್ಮೇಳನ - ಏನಿದೆ, ಏನಿರಬೇಕಾಗಿತ್ತು?

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೇನು ಹೊತ್ತು ಎಣಿಕೆ ಶುರುವಾಗಿದೆ. ನಾಟಕ, ಕವನ ವಾಚನ, ಗಮಕ ವಾಚನ, ಕುಣಿತ, ಹಾಡುಗಾರಿಕೆ ಸೇರಿದಂತೆ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅನ್ನುತ್ತೆ ಸಮ್ಮೇಳನದ ವೆಬ್ ಸೈಟ್ ಅಲ್ಲಿರೋ ಕರೆಯೋಲೆ. ಇದಲ್ಲದೇ, ಕೆಲವು ಒಳ್ಳೆಯ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿದೆ ಅಂತಲೂ ಕಂಡೆ. ಕನ್ನಡ, ಕನ್ನಡಿಗ, ಕರ್ನಾಟಕ ಇತಿಹಾಸದಲ್ಲೆಂದೂ ಕಂಡಿರದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಾಗತೀಕರಣದ ನಂತರದ ಈ ದಿನಗಳಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಿನ ಮಹತ್ವ ಪಡೆದಿವೆ ಕೂಡಾ. ಈ ಸಮ್ಮೇಳನ ಕರ್ನಾಟಕದ, ಕನ್ನಡಿಗರ ನಾಳೆಗಳನ್ನು ಕಟ್ಟಲು ಆಗಬೇಕಾದ ಕೆಲಸಗಳ ಬಗ್ಗೆ, ಇವತ್ತು ನಾವೆಲ್ಲಿದೀವಿ, ಈ ದಿನ ನಮ್ಮೆದುರು ಇರುವ ಸವಾಲುಗಳೇನು, ನಾವು ಸಾಗಬೇಕಾದ ದಾರಿ ಯಾವುದು, ಎಂತದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ, ಹೊಸ ದಿಕ್ಕು,ದೆಸೆ ನೀಡುವ ವೇದಿಕೆಯಾಗುತ್ತೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು, ಆದರೆ ಕಾರ್ಯಕ್ರಮದ ಪಟ್ಟಿ ನೋಡಿದಾಗ ಕೆಲ ಮಟ್ಟಿಗೆ ನಿರಾಸೆಯಾಗಿದೆ ಅಂತಲೇ ಹೇಳಬೇಕು. ಜ್ಞಾನಾಧಾರಿತ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಕನ್ನಡಿಗರ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಚೆನ್ನಾಗಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಆದರೆ ಕಾರ್ಯಕ್ರಮದ ಪಟ್ಟಿ ನೋಡಿದ್ರೆ, ಈ ಸಮ್ಮೇಳನ ಹೊಟ್ಟೆಗೆ ಹಿಟ್ಟಿನ ವಿಷಯಗಳಿಗಿಂತ ಹೆಚ್ಚು ಜುಟ್ಟಿನ ಮಲ್ಲಿಗೆಯ ವಿಷಯಗಳತ್ತಲೇ ಗಮನ ಹರಿಸಿದೆಯೆನೋ ಅನ್ನುವಂತಿದೆ !

ಏನಿದೆ?

ಹಾಗಂತ, ಸಮ್ಮೇಳನದಲ್ಲಿ ಪ್ರಯೋಜನವಾಗುವಂತಹ ವಿಷಯಗಳೇ ಇಲ್ಲ ಅಂತಿಲ್ಲ. ಜಾಗತೀಕರಣ, ಮಾರುಕಟ್ಟೆ ಮತ್ತು ಯುವಕರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಜಾಗತೀಕರಣ ಕರ್ನಾಟಕ ಅನ್ನುವ ಗೋಷ್ಟಿ, ಗಡಿನಾಡಲ್ಲಿರುವ ಕನ್ನಡಿಗರ ಶಿಕ್ಷಣ ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಗಡಿನಾಡ ಕನ್ನಡಿಗರು ಅನ್ನುವ ಗೋಷ್ಟಿ, ಕನ್ನಡ ತಂತ್ರಾಂಶ, ವಿಜ್ಞಾನ ಶಿಕ್ಷಣದಂತಹ ವಿಷಯಗಳ ಬಗೆಗಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ-ಕರ್ನಾಟಕ ಅನ್ನುವ ಗೋಷ್ಟಿ, ಆಡಳಿತದಲ್ಲಿ ಕನ್ನಡ ಬಳಕೆ ಬಗೆಗಿನ ಕನ್ನಡ ಭಾಷಾ ಬಳಕೆ ಅನ್ನುವ ಗೋಷ್ಟಿ, ಕೃಷಿ ರಂಗ ಎದುರಿಸುತ್ತಿರುವ ಸವಾಲುಗಳ ಬಗೆಗಿನ ಕೃಷಿ-ಸಾಧನೆ ಸವಾಲು ಗೋಷ್ಟಿಗಳು ಈ ಕಾಲಮಾನಕ್ಕೆ ಪ್ರಸ್ತುತವೆನ್ನಿಸುವಂತಹ ಗೋಷ್ಟಿಗಳಾಗಿವೆ. ಇಲ್ಲಿ ಪಾಲ್ಗೊಳ್ಳುತ್ತಿರುವವರು ಅಷ್ಟೇ ಯೋಗ್ಯರು ಅನ್ನುವುದು ಕೂಡಾ ಗಮನಿಸಬೇಕಾದದ್ದು.

ಏನ್ ಇರಬೇಕಾಗಿತ್ತು ?

ಕವಿ ಗೋಷ್ಟಿ, ಹಾಸ್ಯ, ನಾಟಕ, ಸಂಗೀತದಂತಹ ವಿಷಯಗಳನ್ನು ಬಿಟ್ಟು ಚಿಂತನೆಗೆ ಹಚ್ಚುವ ಚರ್ಚಾ ಗೋಷ್ಟಿಗಳತ್ತ ನೋಡಿದಾಗ ಕಾಣೋದು ಸುಮಾರು 16 ಗೋಷ್ಟಿಗಳು. ಇವುಗಳಲ್ಲಿ ಕನ್ನಡಿಗರ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಕಲಿಕೆಗೆ ಸಂಬಂಧಿಸಿದಂತೆ ಇರೋದು ಒಂದೇ ಒಂದು ಗೋಷ್ಟಿ, ಅದರಲ್ಲೂ ತಾಯ್ನುಡಿ ಶಿಕ್ಷಣದ ಮಹತ್ವ, ಇವತ್ತು ಅದು ಯಾವ ಹಂತದಲ್ಲಿದೆ, ಜಾಗತೀಕರಣದ ಸ್ಪರ್ಧೆಗೆ ಸಜ್ಜುಗೊಳಿಸಲು ಅದರಲ್ಲಿ ಆಗಬೇಕಾದ ಸುಧಾರಣೆಗಳೇನು, ಬದುಕಿನ ಎಲ್ಲ ಹಂತದ ವಿದ್ಯೆಯನ್ನು ಕನ್ನಡದಲ್ಲಿ ತರಲು ಆಗಬೇಕಾದ ಕೆಲಸಗಳೇನು ಅನ್ನುವ ವಿಷಯವೇನೂ ಚರ್ಚೆಯ ಅಜೆಂಡಾದಲ್ಲಿ ಇಲ್ಲ.  ಜಗತ್ತಿನ ಮುಂಚೂಣಿಲ್ಲಿರುವ ಎಲ್ಲ ದೇಶಗಳು ತಮ್ಮ ಏಳಿಗೆಗೆ ಏಣಿಯಾಗಿಸಿಕೊಂಡಿರುವುದು ತಮ್ಮ ತಾಯ್ನುಡಿಯನ್ನು. ಮಕ್ಕಳ ಬುದ್ದಿ ವಿಕಾಸಕ್ಕೆ ತಾಯ್ನುಡಿ ಕಲಿಕೆಗಿಂತ ಒಳ್ಳೆಯ ಹಾದಿಯಿಲ್ಲ ಅನ್ನುವುದನ್ನು ಜಗತ್ತು ಸಾರಿ ಸಾರಿ ಹೇಳಿದೆ. ತಮ್ಮ ತಮ್ಮ ತಾಯ್ನುಡಿಯನ್ನು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಎಲ್ಲ ದೇಶಗಳು ಏಳಿಗೆ ಸಾಧಿಸಿ ಮುನ್ನಡೆದಿದ್ದರೆ, ಅಂತಹದೊಂದು ಕನಸು ಕಾಣುವುದೇ ಅಪರಾಧ, ಅದು ಎಂದಿಗೂ ಸಾಧ್ಯವಿಲ್ಲ ಅನ್ನುವ ಆತ್ಮಹತ್ಯಾ ಭಾವ ಆವರಿಸಿಕೊಂಡಿರುವ ಭಾರತದಂತಹ ದೇಶ, ಏಳಿಗೆ ಹೊಂದಿರುವ ದೇಶದ ಬ್ಯಾಕ್ ಆಫೀಸ್ ನಂತೆ ಕೆಲಸ ಮಾಡುತ್ತ ಒಂದಿಷ್ಟು ಸರ್ವಿಸಸ್ ನ ಪುಡಿಗಾಸು ಸಂಪಾದಿಸಿಕೊಂಡು, ಅದನ್ನೇ ಏಳಿಗೆ ಎಂದು ನಂಬಿ, ಸಮಾಜವನ್ನು ನಂಬಿಸುವಂತಹ ದಡ್ಡತನ ತೋರಿಸುತ್ತಿದೆ. ಹೀಗೆ ಹುಟ್ಟುತ್ತಿರುವ ಪುಡಿಗಾಸಿಗೆ ಕಾರಣವಾಗಿರುವ ಇಂಗ್ಲಿಷ್ ಒಂದೇ ನಮ್ಮನ್ನು ನಮ್ಮ ಬಡತನದಿಂದ, ದಾರಿದ್ರ್ಯದಿಂದ, ಕಷ್ಟದಿಂದ ಪಾರು ಮಾಡುವ ಕಾಮಧೇನು ಅನ್ನುವ ಕೆಲವು ಪ್ರಭಾವಿಗಳ ನಂಬಿಕೆಗಳು ತಾಯ್ನುಡಿ ಶಿಕ್ಷಣವನ್ನು ಮೇಲೆತ್ತುವ, ಅದರಲ್ಲಿ ಅನ್ನದ ವಿದ್ಯೆ ತರುವ, ಆ ಮೂಲಕ ಒಳ್ಳೆಯ ದುಡಿಮೆ ಹುಟ್ಟಿಸುವ ವ್ಯವಸ್ಥೆಗೆ ಅಡಿಪಾಯ ಹಾಕಬೇಕಿದ್ದ ಸರ್ಕಾರದ ದಿಕ್ಕು ತಪ್ಪಿಸುತ್ತಿದೆ ಅಂದರೆ ತಪ್ಪಾಗದು.

ಕನ್ನಡ ನುಡಿಯ ಯೋಗ್ಯತೆ ಹೆಚ್ಚಿಸುವುದು ಯಾವಾಗ?
ಇನ್ನೂ ಕನ್ನಡ ನುಡಿಯಲ್ಲಾಗಬೇಕಾದ ಸುಧಾರಣೆ ಬಗ್ಗೆಯೂ ಯಾವ ಚರ್ಚೆಯೂ ಏರ್ಪಟ್ಟಿಲ್ಲ. ಜ್ಞಾನ-ವಿಜ್ಞಾನದ ಸಾರವನ್ನು ಕನ್ನಡಿಗರಿಗೆ ಕನ್ನಡದಲ್ಲೇ ತರಲು ನಮ್ಮ ನುಡಿ ಸಿದ್ಧವಾಗಿದೆಯೇ? ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತದಲ್ಲೂ ಹಂತ ಹಂತವಾಗಿ ಒಳ್ಳೆಯ ಕಲಿಕೆ ತರಲು ನಮ್ಮ ನುಡಿಯ ಸುತ್ತ ಭಾಷಾ ವಿಜ್ಞಾನದ ಕಣ್ಣಿನಿಂದ ಆಗಬೇಕಾದ ಕೆಲಸಗಳೇನು? ಇಂತಹ ಕೆಲಸಗಳಿಗೆ ಹೆಚ್ಚು ಹೆಚ್ಚು ಪ್ರತಿಭಾವಂತ ಹುಡುಗರನ್ನು ಸೆಳೆಯುವುದು ಹೇಗೆ? ಅಂತಹದೊಂದು ವಾತಾವರಣ (eco-system) ಕಟ್ಟುವುದರಲ್ಲಿ ಸರ್ಕಾರದ, ವಿಶ್ವವಿದ್ಯಾಲಯಗಳ, ಶಿಕ್ಷಣ ತಜ್ಞರ, ಭಾಷಾ ವಿಜ್ಞಾನಿಗಳ ಪಾತ್ರವೇನು ಅನ್ನುವ ಬಗ್ಗೆ ಚರ್ಚೆ ನಡೆದಿದ್ದಲ್ಲಿ, ಕನ್ನಡಕ್ಕೆ ಇವತ್ತು ಇಲ್ಲದಿರುವ ಕೆಲವು ಯೋಗ್ಯತೆ ತಂದು ಕೊಡುವ ಬಗ್ಗೆ ನಿಜವಾದ ಅರ್ಥದಲ್ಲಿ ಕೆಲಸ ಶುರುವಾಗಿದೆ ಅನ್ನಬಹುದಿತ್ತು. ನಮ್ಮ ನುಡಿಗೆ ಯೋಗ್ಯತೆ ತಂದುಕೊಡದೇ ನಮ್ಮ ವೈಫಲ್ಯತೆಗೆ ಜಾಗತೀಕರಣವನ್ನು ಬೈದು ಏನು ಪ್ರಯೋಜನವಾಗದು.

ಉದ್ದಿಮೆಗಾರಿಕೆ ಹೆಚ್ಚಿಸುವುದು ಹೇಗೆ?
ಉದ್ಯಮಿ ನಾರಾಯಣ ಮೂರ್ತಿಯವರನ್ನು ಕರೆಸುತ್ತಿರುವುದದಿಂದ ಚರ್ಚಾ ಗೋಷ್ಟಿಗಳಲ್ಲಿ ಉದ್ದಿಮೆಗಾರಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆನೋ ಅಂದುಕೊಂಡಿದ್ದೆ. ಉದ್ಯಮಿಯೊಬ್ಬರು ಈ ಸಭೆಗೆ ಚಾಲನೆ ನೀಡುತ್ತಿರುವುದದಿಂದ ಉದ್ದಿಮೆಗಾರಿಕೆ, ಉದ್ಯಮಿಗಳಾಗುವುದು, ಉದ್ಯಮಗಳನ್ನು ಕಟ್ಟುವುದು ಹೀಗೆ ಉದ್ದಿಮೆಗಾರಿಕೆಯ ನಾನ ಮಝಲನ್ನು ಮುಟ್ಟುವ, ಕನ್ನಡಿಗರಲ್ಲಿ ಈ ಕೊರತೆಯನ್ನು ನೀಗಿಸುವ ಬಗ್ಗೆ ಚರ್ಚೆ ನಡೆಸುವ ಅವಕಾಶವಿತ್ತು. ಗೋಷ್ಟಿಗಳ ಪಟ್ಟಿ ನೋಡಿದಾಗ ಈ ಬಗ್ಗೆ ಗಮನ ಕೊಟ್ಟ ಹಾಗಿಲ್ಲ.

ನಾಳೆ ನಮ್ಮದಾಗಲಿ
ಕನ್ನಡವೆಂದರೆ ಬರೀ ಸಾಹಿತ್ಯ, ಸಂಗೀತ, ನಾಟಕ,ಸಿನೆಮಾ ಅನ್ನುವ ಜುಟ್ಟಿನ ಮಲ್ಲಿಗೆಗೆ ಸೀಮಿತವಾಗಿರುವಾಗ, ಅದರಲ್ಲೂ ಬದುಕಿನ ವಿದ್ಯೆಗಳನ್ನು ತರಬಹುದು, ಅದರಲ್ಲೂ ಅನ್ನ ಹುಟ್ಟಿಸಬಹುದು ಅನ್ನುವುದನ್ನು ಸಾಧಿಸಿ ತೋರಿಸುವ ಹೊಣೆಗಾರಿಕೆ ಕನ್ನಡದ ಬಗ್ಗೆ ಕನಸು ಕಾಣುವ ಎಲ್ಲ ಕನ್ನಡದ ಯುವಕರ ಮುಂದಿದೆ. ಇವತ್ತಿನ ವ್ಯವಸ್ಥೆಯನ್ನು ಅಲ್ಲಗಳೆಯದೆಲೆ ಇಂದಿನ ವ್ಯವಸ್ಥೆಯ ಸಾರವನ್ನು ಹೀರಿಕೊಂಡೇ ನಾಳೆ ಕನ್ನಡದಲ್ಲೂ ಈಗಿರುವುದಕ್ಕಿಂತಲೂ ಅದ್ಭುತವಾದ ವ್ಯವಸ್ಥೆ ಕಟ್ಟುವ ಕೆಲಸವಾಗಬೇಕಿದೆ. ಇಂದಿರುವ ವ್ಯವಸ್ಥೆಯನ್ನು ಚಿಮ್ಮುಹಲಗೆಯಾಗಿಸಿಕೊಂಡೇ ಆಗಸಕ್ಕೆ ನೆಗೆಯುವ ಕನಸು ಕಾಣಬೇಕಿದೆ. ಅದಾಗದೇ ಎಷ್ಟು ಸಮ್ಮೇಳನ, ಸಭೆ ಮಾಡಿದರೂ ಕನ್ನಡ ಮುಂದಾಗದು.

ಶುಕ್ರವಾರ, ಮಾರ್ಚ್ 4, 2011

ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಇನ್ ಫೋಸಿಸ್ ನ ನಾರಾಯಣ ಮೂರ್ತಿ "ಅವರನ್ನು ಆಯ್ಕೆ ಮಾಡಿದ ಸರ್ಕಾರದ ಕ್ರಮ ತಪ್ಪೆಂದೂ, ಅವರೊಬ್ಬ ಉದ್ಯಮಿಯೇ ಹೊರತು ಕನ್ನಡಕ್ಕೆ ಅವರ ಕೊಡುಗೆ ಶೂನ್ಯ" ಅಂತಲೂ ಅವರ ಆಯ್ಕೆಯ ಬಗ್ಗೆ ಅಪಸ್ವರ ಎದ್ದ ಸುದ್ದಿ ಪತ್ರಿಕೆಗಳಲ್ಲಿ,ಟಿವಿಗಳಲ್ಲಿ ನೋಡಿದೆ. ಅದೇ ಸಮಯಕ್ಕೆ ಕೆಲವು ಪತ್ರಿಕೆಗಳಲ್ಲಿ "ಅವರೊಬ್ಬ ಉದ್ಯಮಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ, ಅವರ ಆಯ್ಕೆಯನ್ನು ವಿರೋಧಿಸಿರುವವರು ಕನ್ನಡಕ್ಕೆ ಏನ್ ಮಾಡಿದ್ದಾರೆ?" ಎಂದು ಮೂರ್ತಿ ಅವರ ಆಯ್ಕೆಯನ್ನು ಸಮರ್ಥಿಸುವ ಸುದ್ದಿಯನ್ನು ಕಂಡೆ. ಕರ್ನಾಟಕದ ಸಮಾಜಕ್ಕೆ ಮೂರ್ತಿ ಅವರ ಕೊಡುಗೆ ಏನೇನು ಇಲ್ಲ ಅನ್ನುವುದು ಎಷ್ಟು ತಪ್ಪೋ, ಮೂರ್ತಿ ಅವರ ಪರವಾಗಿ ಬರೆಯುವ ಆತುರದಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಅವರು ಮಾತಾಡಿದ್ದು, ಮಾಡಿದ್ದೆಲ್ಲ ಸರಿ ಅನ್ನುವ ಧೋರಣೆಯೂ ಅಷ್ಟೇ ತಪ್ಪು.

ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿದ್ದರೂ, ಜಾಗತೀಕರಣದ ನಂತರ ತೆರೆದ ಮಾರುಕಟ್ಟೆ ಕೊಡ ಮಾಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ, ಪ್ರತಿಭೆ, ಪರಿಶ್ರಮಕ್ಕೆ ಬೆಲೆ ಕೊಡುವ ವ್ಯವಸ್ಥೆಯೊಂದನ್ನು ಕಟ್ಟಬಹುದು ಮತ್ತು ಆ ಮೂಲಕ ದೊಡ್ಡ ಮಟ್ಟದಲ್ಲಿ ಕೆಲಸ ಮತ್ತು ಸಂಪತ್ತು ಸೃಷ್ಟಿಸಬಹುದು ಹಾಗೂ ಆ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಜೀವನದ ಆರ್ಥಿಕ ಮಟ್ಟ ಸುಧಾರಿಸಬಹುದು ಅನ್ನುವುದನ್ನು ತೋರಿಸಿಕೊಟ್ಟ ಶ್ರಮಜೀವಿ ಕನಸುಗಾರರಲ್ಲಿ ಇವರೂ ಒಬ್ಬರು. ಉದ್ಯಮಶೀಲತೆಯ ಅಪಾರ ಕೊರತೆ ಅನುಭವಿಸುತ್ತಿರುವ ಕನ್ನಡನಾಡಿನ ಯುವ ಜನತೆಗೆ ದೊಡ್ಡದಾಗಿ ಯೋಚಿಸುವ, ಕನಸು ಕಾಣುವ, ಆ ಕನಸಿನ ಬೆನ್ನತ್ತಿ ಶ್ರಮ ಪಟ್ಟರೆ ಎಂತಹ ಯಶಸ್ಸು ಸಾಧಿಸಬಹುದು ಅನ್ನುವ ನಂಬಿಕೆಯನ್ನು ಇನ್ ಫೋಸಿಸ್ ನ ಯಶಸ್ಸಿನ ಮೂಲಕ ಬಿತ್ತಿದ ಉದ್ಯಮಿ ನಮ್ಮ ನಾರಾಯಣ ಮೂರ್ತಿಯವರು.

ಅವರ ಶ್ರಮ, ಮುಂದಾಲೋಚನೆ ಅವರಿಗಷ್ಟೇ ಗೆಲುವು ತರಲಿಲ್ಲ. ದೊಡ್ಡ ಮಟ್ಟದಲ್ಲಿ ಐಟಿ ಕ್ರಾಂತಿಗೂ ಅದು ಸ್ಪೂರ್ತಿಯಾಯಿತು. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಕಲ್ಪಿಸುವ ಆ ಮೂಲಕ ದೊಡ್ಡ ಮಟ್ಟದಲ್ಲಿ ಅವರ ಆರ್ಥಿಕ ಮಟ್ಟದ ಸುಧಾರಣೆಗೆ ಅದು ಇಂಬು ನೀಡಿತು. ಆದ್ದರಿಂದಲೇ ಇಡೀ ಕನ್ನಡ ಸಮಾಜ ಅವರ ಸಂಸ್ಥೆಗೂ, ಅವರಿಗೂ ಎತ್ತರದ ಸ್ಥಾನಮಾನ, ಗೌರವವನ್ನು ಕಲ್ಪಿಸಿತ್ತೆನ್ನಬಹುದು. ಒಬ್ಬ ಉದ್ಯಮಿಯಾಗಿ ಏನ್ ಮಾಡಬಹುದೋ ಅದನ್ನು ಅವರು ಮಾಡಿದರು ಅನ್ನಲು ಅಡ್ಡಿಯಿಲ್ಲ. ಆ ವಿಷಯದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲೂ ಬೇಕು.

ಮೂರ್ತಿ ಅವರಿಗೆ ಅರ್ಥವಾಗದ ಕನ್ನಡ ಸಮಾಜ !

ಒಬ್ಬ ಸಾಹಿತಿ, ನಟ ಹೇಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಅಂತೆಯೇ ಮೂರ್ತಿಯವರು ತಮ್ಮ ಉದ್ಯಮದಲ್ಲಿ ಕೆಲಸ ಮಾಡಿ ಗುರುತರವಾದದ್ದನ್ನು ಸಾಧಿಸಿದ್ದಾರೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸಿ ನೋಡಬೇಕು. ಆದರೆ ಯಾರಾದ್ರೂ ಗೆಲುವು ಕಂಡ್ರೆ, ಎಲ್ಲದಕ್ಕೂ ಅವರ ಸಲಹೆ ಕೇಳುವುದು ನಮ್ಮ ಸಮಾಜ, ಸರ್ಕಾರಕ್ಕಂಟಿರುವ ಊನವೆನ್ನಬಹುದು. ಅದರಂತೆ ಅವರ ಸಂಸ್ಥೆಯ ಯಶಸ್ಸು ಕಂಡ ನಮ್ಮ ಜನ, ನಮ್ಮ ಮಾಧ್ಯಮದವರು ಕನ್ನಡ ನಾಡಿನ ಏಳಿಗೆ, ಭವಿಷ್ಯದ ಬಗ್ಗೆಯೂ ಅವರ ಅಭಿಪ್ರಾಯ, ಸಲಹೆ ಕೇಳಿದಾಗಲೇ ಕನ್ನಡ ಸಮಾಜವನ್ನು, ಅದರ ಅಗತ್ಯಗಳನ್ನು ಅವರು ಅರ್ಥೈಸಿಕೊಂಡಿರುವ ರೀತಿಯಲ್ಲಿರುವ ತೊಂದರೆ ಎಂತದ್ದು ಅನ್ನುವುದು ಗಮನಕ್ಕೆ ಬಂದಿದ್ದು. ಮೂರ್ತಿಯವರ ಪ್ರಕಾರ ಇಂಗ್ಲಿಷ್ ಒಂದೇ ನಮ್ಮ ನಾಡನ್ನು ಪ್ರಪಂಚದ ಮುಂಚೂಣಿಗೆ ತಂದು ನಿಲ್ಲಿಸಬಲ್ಲಂತದು. ಈ ನಾಡಿಗೆ ಭವಿಷ್ಯ ಬೇಕಾ, ಇಂಗ್ಲಿಷ್ ಅಪ್ಪಿಕೊಳ್ಳಿ ಇಲ್ಲದಿದ್ದರೆ ಉಳಿಗಾಲವಿಲ್ಲ ಅನ್ನುವ ತಪ್ಪು ಧೋರಣೆ ಅವರದ್ದು. "ಕನ್ನಡ ಮಾಧ್ಯಮ ಶಾಲೆಗಳನ್ನೆಲ್ಲ ಮುಚ್ಚಿ, ಇಂಗ್ಲಿಷ್ ಶಾಲೆ ತೆರೆಯಿರಿ" ಜಾಗತೀಕರಣವನ್ನು ಎದುರಿಸಲು ಇಂಗ್ಲಿಷ್ ಒಂದೇ ಸಾಧನ ಅನ್ನುತ್ತ ಜಗತ್ತೇ ಒಪ್ಪಿರುವ ತಾಯ್ನುಡಿ ಶಿಕ್ಷಣದ ಜಾಗದಲ್ಲಿ ಇಂಗ್ಲಿಷ್ ಕಲಿಕಾ ವ್ಯವಸ್ಥೆ ತರುವುದನ್ನು ಬೆಂಬಲಿಸಿ ಕನ್ನಡದ ಮಕ್ಕಳ ಕಲಿಕೆಯ ಈ ದಿನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಕತ್ ಆಗೇ ಎಡವಿದರು.

ಕನ್ನಡ ಸಮಾಜವೊಂದೇ ಅಲ್ಲ, ಭಾರತವೆಂಬ ಒಕ್ಕೂಟವೂ ಅವರಿಗರ್ಥವಾಗಿಲ್ಲ !
  
ಬೆಂಗಳೂರಿನಲ್ಲಿ ಇವರ ಸಂಸ್ಥೆಯ ಏಳಿಗೆಗೆ ಸರ್ಕಾರದ ಕೊಡುಗೆ ಕಡಿಮೆಯೇನಲ್ಲ. ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆದಿದ್ದರೂ (ನೆಲ, ಜಲ, ತೆರಿಗೆ ವಿನಾಯಿತಿ) ನಗರದ ಮೂಲಭೂತ ಸೌಕರ್ಯ ಸರಿಯಿಲ್ಲ, ಅದರಿಂದ ಅನಾನುಕೂಲವಾಗಿದೆ,, ಆದ್ದರಿಂದ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ಹೆಚ್ಚು ಅನುಕೂಲ ಅನ್ನುವ ಧಾಟಿಯಲ್ಲಿ ಮಾತನಾಡಿದ್ದು ಮೂರ್ತಿಯವರೇ. ತಮಗೆ ಒಂದಿಷ್ಟು ಅನಾನುಕೂಲವಾಯಿತು ಎಂದು ಬೆಂಗಳೂರನ್ನು ಕರ್ನಾಟಕದಿಂದ ಬೇರ್ಪಡಿಸಿ ಅನ್ನುವುದು ಭಾರತವೆಂಬ ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು ಆಡುವ ಮಾತೇ? ಬೆಂಗಳೂರನ್ನು ಕೇಂದ್ರಕ್ಕೆ ವರ್ಗಾಯಿಸೋ ಬದಲು ಅಮೇರಿಕಕ್ಕೆ ವರ್ಗಾಯಿಸಿದರೆ ಇನ್ನೂ ಒಳ್ಳೆದಲ್ವಾ? ಎಷ್ಟಂದರೂ ಅವರು ಒಳ್ಳೆ ಮೂಲಭೂತ ಸೌಕರ್ಯ ಕಲ್ಪಿಸುವುದರಲ್ಲಿ ಜಗತ್ತಿಗೆ ದೊಡ್ಡವರಲ್ವಾ. ನಮ್ಮ ಆಡಳಿತದಲ್ಲಿ ಒಂದಿಷ್ಟು ತೊಂದರೆ ಇದೆ ಅಂದಾಕ್ಷಣ ಭಾರತದ ಒಕ್ಕೂಟದ ಸ್ವರೂಪವನ್ನೇ ಬದಲಾಯಿಸಿ ಅನ್ನುವವರಿಗೆ ಭಾರತವೆಂಬ ಒಕ್ಕೂಟ ವ್ಯವಸ್ಥೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಅನ್ನಿಸಲ್ವಾ?  

ಹೋಗಲಿ, ಇವರ ಸಂಸ್ಥೆಯಲ್ಲೇ ಕನ್ನಡದ ಸ್ಥಿತಿ ಹೇಗಿದೆ?

ಇವರ ಸಂಸ್ಥೆಯ ಮಂಗಳೂರು, ಮೈಸೂರು, ಬೆಂಗಳೂರು ಕೇಂದ್ರಗಳಲ್ಲಿ ಕನ್ನಡ, ಕನ್ನಡಿಗರ ಸ್ಥಿತಿ ಹೇಗಿದೆ? ನಿಜಕ್ಕೂ ಅಷ್ಟೇನು ಚೆನ್ನಾಗಿಲ್ಲ ಅಂತಾರೆ ಅಲ್ಲಿ ಕೆಲಸ ಮಾಡುವ ಗೆಳೆಯರು. ಒಂದು ಚಿಕ್ಕ ಕನ್ನಡ ಕಲಿ ಕಾರ್ಯಕ್ರಮ ಮಾಡುವುದಾಗಿರಬಹುದು, ಇಲ್ಲವೇ ಕನ್ನಡ ರಾಜ್ಯೋತ್ಸವ ಆಚರಿಸುವುದಿರಬಹುದು. ಅಲ್ಲಿನ ಕನ್ನಡಿಗರು ಎಷ್ಟು ಕಷ್ಟ ಪಟ್ಟು ದಕ್ಕಿಸಿಕೊಂಡಿದ್ದಾರೆ ಅನ್ನುವುದನ್ನು ಬಲ್ಲವರೇ ಬಲ್ಲರು. ಯಾಕೆ ಹೀಗಿದೆ? ಇದಕ್ಕೆ ಮೂರ್ತಿಯವರ indifference ಕಾರಣ ಅನ್ನಿಸಲ್ವಾ? ಕನ್ನಡ ಪರವಾಗಿರೋದು ಬೇಡ, ಕೊನೆ ಪಕ್ಷ ಇಂತಹದೊಂದು ಲೆಕ್ಕಕ್ಕಿಲ್ಲ ಅನ್ನುವ ಧೋರಣೆಯನ್ನು ಇವರು ತೋರಿಸದೇ ಇದ್ದಿದ್ದರೆ ಆ ಸಂಸ್ಥೆಯಲ್ಲಿ ಹಿರಿಯ ಹುದ್ದೆಯಲ್ಲಿರುವ ಪರಭಾಷಿಕರು ಇಂತಹದೊಂದು ಧೋರಣೆ ತೋರಿಸುತ್ತಿದ್ದರೇ? ಇನ್ಫಿಯ ಮಂಗಳೂರು, ಮೈಸೂರು ಕೇಂದ್ರದಲ್ಲಿ ಮಲಯಾಳಿಗಳದ್ದೇ ಕಾರುಭಾರು ಎಂದು ಕೇಳ್ಪಟ್ಟೆ. ಪ್ರತಿಭೆಯೊಂದೇ ಮಾನದಂಡ ಅಂತ ಇವರೆನೋ ಅನ್ನುತ್ತಾರೆ, ಹಾಗಾದ್ರೆ ಇಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದೆ ಅನ್ನುವುದು ಏನ್ ತೋರಿಸುತ್ತೆ ? ನಮಗೆ ಪ್ರತಿಭೆಯೇ ಇಲ್ಲವೆಂತಲೋ ಇಲ್ಲ ಮಲೆಯಾಳಿಗಳಿಗೆ ಮಾತ್ರ ಪ್ರತಿಭೆ ಇದೆ ಅಂತಲೋ? ಕಾಕತಾಳೀಯವೆಂಬಂತೆ ಈ ಕೇಂದ್ರದ ಹೆಚ್ಚಿನ ಹಿರಿಯ ಅಧಿಕಾರಿಗಳು ಮಲೆಯಾಳಿಗಳು ಅಂತಲೂ ಕೇಳ್ಪಟ್ಟೆ :) .

ನಾರಾಯಣ ಮೂರ್ತಿ ಅವರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಅನ್ನುವುದು ಎಷ್ಟು ಸರಿಯೋ, ಕಣ್ಣು ಮುಚ್ಚಿ ಅವರನ್ನು ರೋಲ್ ಮಾಡೆಲ್ ಅಂತ ಒಪ್ಪಿಕೊಳ್ಳುವುದು, ಸಮಾಜದ ಬಗ್ಗೆ ಅವರು ಕೊಡುವ ಟಿಪ್ಪಣಿಯನ್ನು ಪರಿಶೀಲಿಸದೆ ವೇದ ವಾಕ್ಯವೆಂಬಂತೆ ಕಣ್ಣಿಗೊತ್ತಿಕೊಳ್ಳುವುದು ಅಷ್ಟೇ ತಪ್ಪು.