ಇಂಗ್ಲಿಷ್ ಮಾಧ್ಯಮ ಬಡವರ ಪಾಲಿನ ಕಾಮಧೇನು ಅನ್ನುವ ರೀತಿಯ ವಾದವನ್ನು ವೈಜ್ಞಾನಿಕವಾದ
ಕಾರಣಗಳಿಂದ ನಾನು ಒಪ್ಪುವುದಿಲ್ಲ. ಅದನ್ನು ಒಪ್ಪದಿರಲು ಇರುವ ಕಾರಣಗಳು ಇಂತಿವೆ:
- ಜಗತ್ತಿನ ಅಭಿವೃದ್ಧಿ ಹೊಂದಿರುವ ಎಲ್ಲ ದೇಶಗಳು ತಾಯ್ನುಡಿಯ ಸುತ್ತಲೇ ತಮ್ಮ ಕಲಿಕೆಯನ್ನು ರೂಪಿಸಿಕೊಂಡಿದ್ದು, ಆ ಗಟ್ಟಿ ತಳಹದಿಯ ಮೇಲೆ ಕಟ್ಟಿಕೊಂಡಿರುವ ಆರ್ಥಿಕ ವ್ಯವಸ್ಥೆಯಿಂದಲೇ ಆ ದೇಶಗಳು ಅಭಿವೃದ್ಧಿ ಹೊಂದಿವೆ. ತನ್ನ ತಾಯ್ನುಡಿ ಬಿಟ್ಟು ಇನ್ನೊಂದು ನುಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಒಂದೇ ಒಂದು ದೇಶವೂ ಜಗತ್ತಿನಲ್ಲಿ ಏಳಿಗೆ ಹೊಂದಿದ ದೇಶವಾಗಿಲ್ಲ ಅನ್ನುವುದನ್ನು ಗಮನಿಸಬೇಕಿದೆ.
- ತಾಯ್ನುಡಿಯಲ್ಲಿ ಕಲಿಕೆ ಮಕ್ಕಳಲ್ಲಿ ಕಾನ್-ಸೆಪ್ಚುವಲ್ ಥಿಂಕಿಂಗ್ (ತಿರುಳು
ತಿಳುವಳಿಕೆ) ಬೆಳೆಸುತ್ತೆ ಅನ್ನುವುದು ಜಗತ್ತಿನ ನೂರಾರು ವಿಜ್ಞಾನಿಗಳು,
ಮನಶಾಸ್ತ್ರಜ್ಞರು, ಚಿಂತಕರು ಸಾರಿ ಸಾರಿ ಹೇಳಿರುವ ಸತ್ಯವಾಗಿದೆ. ವಿಶ್ವಸಂಸ್ಥೆ ಕೂಡಾ
ಇದರ ಮಹತ್ವವನ್ನು ಸಾರುವ ಹಲವಾರು ಸಂಶೋಧನೆಗಳನ್ನು ಪ್ರಕಟಿಸಿದೆ.
- ಕರ್ನಾಟಕದ ೮೩% ಶಾಲೆಗಳು ಸರ್ಕಾರಿ+ಸರ್ಕಾರಿ ಅನುದಾನಿತ ಶಾಲೆಗಳಾಗಿವೆ. ಇವೆಲ್ಲವೂ ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿವೆ. ಇಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಈ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಯಿಸಲು ಪ್ರತಿ ೩೦ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಸುಮಾರು ೩-೩.೫ ಲಕ್ಷ ಇಂಗ್ಲಿಷ್ ಅನ್ನು ಚೆನ್ನಾಗಿ ಅರೆದು ಕುಡಿದಿರುವ ಶಿಕ್ಷಕರು ಬೇಕು. ಅವರನ್ನು ಎಲ್ಲಿಂದ ತರೋಣ? ಇಂಗ್ಲಿಶ್ ಇಲ್ಲಿನ ಮಕ್ಕಳ, ಹೆತ್ತವರ, ಈಗಿರುವ ಶಿಕ್ಷಕರ ಪರಿಸರದಲ್ಲಿಲ್ಲ. ಅಲ್ಲಿರುವುದು ಕನ್ನಡ. ಹೀಗಿರುವಾಗ ಪರಿಸರದ ನುಡಿಯಲ್ಲಿ ಕಲಿಸುವ ವ್ಯವಸ್ಥೆ ಚೆನ್ನಾಗಿ ರೂಪಿಸುವುದು ಸರಿಯಾದದ್ದೋ ಇಲ್ಲ ಅಲ್ಲೆಲ್ಲೂ ಇಲ್ಲದ ನುಡಿಯಲ್ಲಿ ಇದನ್ನು ಮಾಡಲು ಹೊರಡುವುದು ಸರಿಯಾದದ್ದೋ?
- ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ನುಡಿಯಾಗಿ ಒಂದನೇ ತರಗತಿಯಿಂದ ಕಲಿಸಲು ೨೦೦೭-೦೮ರಿಂದಲೇ ಸರ್ಕಾರ ಶುರು ಮಾಡಿದೆ. ಆದರೆ ಆ ಪ್ರಯತ್ನ ಸಂಪೂರ್ಣವಾಗಿ ಸೋತಿದೆ ಅನ್ನುವ ವರದಿಗಳು ಬಂದಿವೆ. ರೀಜನಲ್ ಇನ್-ಸ್ಟಿಟ್ಯೂಟ್ ಆಫ್ ಇಂಗ್ಲಿಷ್, ದಕ್ಷಿಣಭಾರತದಲ್ಲಿ ಪ್ರಾಧ್ಯಾಪಕರಾಗಿರುವ ರವಿನಾರಾಯಣ್ ಚಕ್ರಕೋಡಿ ಅವರು ಈ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಇಂಗ್ಲಿಷ್ ಒಂದು ನುಡಿಯಾಗಿ ಕಲಿಸುವ ಸಾಮರ್ಥ್ಯದ ಕೊರತೆ ಶಿಕ್ಷಕರಲ್ಲಿರುವುದೇ ಈ ವೈಫಲ್ಯಕ್ಕೆ ಮುಖ್ಯ ಕಾರಣ ಅನ್ನುವುದನ್ನು ಗುರುತಿಸಿದ್ದಾರೆ. ಹೀಗಿರುವಾಗ ಇದೇ ಶಿಕ್ಷಕರನ್ನು ಇಟ್ಟುಕೊಂಡು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸಲು ಮುಂದಾಗುತ್ತೇವೆ ಅನ್ನುವುದು ಮಕ್ಕಳ ಕಲಿಕೆಯ ಮೇಲೆ ಬೀರುವ ಪರಿಣಾಮಗಳನ್ನು ಊಹಿಸಿದ್ದಾರಾ? ಈಗ ತಕ್ಕ ಮಟ್ಟಿಗೆ ಕನ್ನಡದಲ್ಲಿ ಚೆನ್ನಾಗಿ ಕಲಿಯುತ್ತಿರುವ ಮಕ್ಕಳು ನಾಳೆ ಇಂಗ್ಲಿಶ್ ಬಾರದ ಈ ಶಿಕ್ಷಕರ ಕೈಯಲ್ಲಿ ಅತ್ತ ಕನ್ನಡವೂ ಬಾರದ ಇತ್ತ ಇಂಗ್ಲಿಶು ಬರದ ಎಡಬಿಡಂಗಿಗಳಾಗುವ ಸಾಧ್ಯತೆಯೇ ಹೆಚ್ಚು.
- ಕಳೆದ ೨೫ ವರ್ಷದಿಂದ ಹೆಚ್ಚಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಬೆಂಗಳೂರಿನಂತಹ ಊರಿನಲ್ಲಿ ಏನಾಗಿದೆ? ಮಾತನಾಡುವಾಗ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಓದಲು ಬಾರದಿರುವುದು, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ ಅನ್ನುವಂತಹ ಕೀಳರಿಮೆ ಇಲ್ಲಿನ ಕನ್ನಡಿಗರಲ್ಲಿ ಹುಟ್ಟು ಹಾಕಿರುವುದು ಬಿಟ್ಟರೆ ಜಗತ್ತೇ ನಿಬ್ಬೆರಗಾಗುವಂತಹ ಸಾಧನೆಗಳು, ಪೇಟೆಂಟ್ ಗಳು ಒಂದಾದರೂ ಬೆಂಗಳೂರಿನಿಂದ ಬಂದಿವೆಯೇ? ಮೈಕ್ರೊಸಾಫ್ಟ್, ಆಪಲ್, ಮರ್ಸಿಡೀಸ್, ಸ್ಯಾಮ್ಸಂಗ್, ನೋಕಿಯಾದಂತಹ ಒಂದಾದರೂ ಕಂಪನಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಬೆಂಗಳೂರಿನ ಕನ್ನಡಿಗರಿಂದ ಬಂದಿದೆಯೇ? ನಿಜ ಹೇಳಬೇಕು ಅಂದರೆ ಕನ್ನಡ ಮಾಧ್ಯಮದಲ್ಲೇ ಕಲಿತ ನಾರಾಯಣ ಮೂರ್ತಿ ಅವರಿಂದ ಇನ್-ಫೋಸಿಸ್, ಕ್ಯಾಪ್ಟನ್ ಗೋಪಿನಾಥ್ ಅವರಿಂದ ಏರ್ ಡೆಕ್ಕನ್ ತರಹದ ಸಂಸ್ಥೆಗಳನ್ನು ಹುಟ್ಟಿಸಲು ಆಗಿದೆ ಅನ್ನುವುದು ಸಾಧಕರಾಗಲು ತಾಯ್ನುಡಿ ಶಿಕ್ಷಣದ ತಳಹದಿ ಎಷ್ಟು ಮುಖ್ಯ ಅನ್ನುವುದನ್ನು ಸಾರುತ್ತಿವೆ.
- ಇನ್ನೊಂದೆಡೆ
ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತೇವೆ ಅನ್ನುವ ಸರ್ಕಾರದ ನಿಲುವಿನ ಹಿಂದೆ
ಮಕ್ಕಳ ಏಳಿಗೆಯ ಕಾಳಜಿ ಇರದೇ ಸರ್ಕಾರಿ ಶಾಲೆಗಳನ್ನು ಖಾಸಗಿಯವರ ತೆಕ್ಕೆಗೆ ಕೊಡುವ
ಹುನ್ನಾರವೇ ಕಾಣುತ್ತಿದೆ. ಬಿ.ಬಿ.ಎಮ್.ಪಿ ವ್ಯಾಪ್ತಿಯ ಪಾಲಿಕೆಯ ಶಾಲೆಗಳನ್ನು ಇಂಗ್ಲಿಷ್
ಮಾಧ್ಯಮಕ್ಕೆ ಬದಲಾಯಿಸಿ ಭಾರತೀಯ ವಿದ್ಯಾ ಭವನ ಅನ್ನುವ ಖಾಸಗಿ ಸಂಸ್ಥೆಯ ಆಧೀನಕ್ಕೆ
ಕೊಟ್ಟ ಉದಾಹರಣೆಯನ್ನು ಇಲ್ಲಿ ನೆನೆಯಬಹುದು. ಸರ್ಕಾರಕ್ಕೆ ಕಲಿಕೆಯ ಬಗ್ಗೆ ಯಾವುದೇ
ಚಿಂತನೆ ಇಲ್ಲ, ಇದ್ದಿದ್ದರೆ ಸುಪ್ರಿಂ ಕೋರ್ಟಿನಲ್ಲಿ ನಡೆಯುತ್ತಿರುವ ಭಾಷಾ ಮಾಧ್ಯಮ
ವಿವಾದಕ್ಕೆ ಎರಡು ವರ್ಷದಿಂದ ಸರ್ಕಾರದ ಪರ ವಾದ ಮಾಡಲು ವಕೀಲರೇ ಇಲ್ಲ ಅನ್ನುವ
ಪರಿಸ್ಥಿತಿ ಇರುತ್ತಿತ್ತೇ?