ಗುಜರಾತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಹಲವು ಚುನಾವಣಾ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಅಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮೂರನೆ ಬಾರಿ ಅಧಿಕಾರ ನಡೆಸಲು ಜನರಿಂದ ಬಹುಮತ ದೊರೆತಿದೆ. ಇತ್ತಿಚಿನ ದಿನಗಳಲ್ಲೇ ರಾಜ್ಯವೊಂದರ ಚುನಾವಣೆ ಇಷ್ಟರ ಮಟ್ಟಿಗೆ ಚರ್ಚೆಗೆ ಕಾರಣವಾಗಿದ್ದು ಒಂದರ್ಥದಲ್ಲಿ ವಿಶೇಷವೇ ಅನ್ನಬಹುದು. ಕರ್ನಾಟಕದಲ್ಲೂ ಕನ್ನಡದ ಹೆಚ್ಚಿನ ವಾಹಿನಿಗಳು ಹೆಚ್ಚು ಕಡಿಮೆ ಒಂದಿಡಿ ದಿನ ಇನ್ನೊಂದು ರಾಜ್ಯದ ಚುನಾವಣೆಯ ಬಗ್ಗೆ ವಿಶೇಷ ವರದಿ, ಲೈವ್ ಕಾರ್ಯಕ್ರಮಗಳನ್ನು ಮಾಡಿದ್ದು ಇನ್ನೊಂದು ವಿಶೇಷ. ಮೋದಿಯವರ ಗೆಲುವಿನ ಜೊತೆಯಲ್ಲೇ ಎರಡು ಮುಖ್ಯ ವಿಷಯಗಳು ವ್ಯಾಪಕವಾಗಿ ಚರ್ಚೆಗೆ ಬರುತ್ತಿವೆ. ಒಂದು ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ್ದು. ಅವುಗಳ ಬಗ್ಗೆ ನನ್ನ ಅನಿಸಿಕೆ ಗೆಳೆಯರೊಡನೆ ಹಂಚಿಕೊಳ್ಳಲು ಈ ಬರಹ.
ಮೊದಲನೆಯದ್ದು, ಮೋದಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಡಲಿದ್ದಾರೆಯೇ ಅನ್ನುವುದು.
ಸತತ ಸೋಲು, ಅಂತರಿಕ ಕಚ್ಚಾಟ, ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿ ಮುಂದಿನ ಚುನಾವಣೆ ಎದುರಿಸಲು ನರೇಂದ್ರ ಮೋದಿಯವರ ನಾಯಕತ್ವವೇ ಬೇಕು ಅನ್ನುವುದು ಆ ಪಕ್ಷದ ಹಲವರ ಅಭಿಪ್ರಾಯವಾಗಿದೆ. ಯು.ಪಿ.ಎ ಸರ್ಕಾರ ಹತ್ತಾರು ಹಗರಣಗಳಲ್ಲಿ ಸಿಲುಕಿ, ಬೆಲೆ ಏರಿಕೆ, ಆರ್ಥಿಕ ಬೆಳವಣಿಗೆಯ ಕುಸಿತದಂತಹ ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿದ್ದರೂ ಅದನ್ನು ಎನ್.ಡಿ.ಎ ಪರ ಮತವಾಗಿಸುವ ನಾಯಕತ್ವ ಬಿಜೆಪಿಯಲ್ಲೂ ಇಲ್ಲದಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯ ಗುಜರಾತ್ ಫಲಿತಾಂಶ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಅನ್ನುವ ಅವರ ಬೆಂಬಲಿಗರ ಕೂಗಿಗೆ ಇನ್ನಷ್ಟು ಬಲ ತುಂಬಿದೆ. ಮೋದಿಯವರಿಗೆ ಗುಜರಾತಿನಾಚೆಯ ರಾಜಕಾರಣ ಅಷ್ಟು ಸುಲಭದ್ದಲ್ಲ ಅನ್ನುವುದು ನನ್ನ ಅನಿಸಿಕೆ. ಯಾಕೆ ಅಂತೀರಾ?
ಮೋದಿಯವರ ಇಲ್ಲಿಯವರೆಗಿನ ಸಾಧನೆಗಳೆಲ್ಲ ಅವರ ರಾಜ್ಯವಾದ ಗುಜರಾತಿಗೆ ಸೀಮಿತವಾಗಿದೆ. 2002ರ ಕೋಮು ಗಲಬೆಗಳನ್ನು ಹೊರತಾಗಿಸಿ, ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು, ಆಡಳಿತದಲ್ಲಿ ಮೂಡಿಸಿರುವ ಚುರುಕು ಅವರ ಬಗ್ಗೆ ಸಾಕಷ್ಟು ಜನರಲ್ಲಿ ಒಳ್ಳೆಯ ಅಭಿಪ್ರಾಯ ರೂಪಿಸುವ ಕೆಲಸ ಮಾಡಿರಬಹುದು, ಆದರೆ ಐದಾರು ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ ಪ್ರಶ್ನಾತೀತ ನಾಯಕನಾಗಿ ಮೂರನೇ ಎರಡು ಬಹುಮತವಿರುವ ಸರ್ಕಾರದ ಮೂಲಕ ಮಾಡುವ ಕೆಲಸಗಳನ್ನು ಭಾರತ ಒಕ್ಕೂಟದ ಮಟ್ಟದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮಾಡಲು ಸಾಧ್ಯವೇ? ಸಂಸತ್ತಿನಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 272 ಸದಸ್ಯರ ಬಲ. ಬಿಜೆಪಿಗೆ ಕಳೆದ ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಿರುವ ಅರ್ಧದಷ್ಟು ಸ್ಥಾನಗಳು ಸಿಕ್ಕಿರಲಿಲ್ಲ. ಈ ಬಾರಿ ಮೋದಿಯವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಆ ಸಂಖ್ಯೆ ಒಂಚೂರು ಸುಧಾರಿಸಬಹುದೆ ಹೊರತು ಬಹುಮತಕ್ಕೆ ಹತ್ತಿರ ಹೋಗುವಷ್ಟಂತೂ ಸಿಗಲಾರದು. ಅತಿ ಹೆಚ್ಚು ಸದಸ್ಯರು ಆಯ್ಕೆಯಾಗುವ ಉತ್ತರ ಪ್ರದೇಶ, ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಕೇರಳದಂತಹ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಕಮ್ಮಿ ನೆಲೆಯೇ ಇಲ್ಲ. ಕಳೆದ ಬಾರಿ ಅತಿ ಹೆಚ್ಚು ಸ್ಥಾನ ದೊರಕಿಸಿದ್ದ ಕರ್ನಾಟಕದಲ್ಲಿ ಮುಂದಿನ ಬಾರಿ ಯಡಿಯೂರಪ್ಪನವರು ಇಲ್ಲದೇ 10 ಸ್ಥಾನ ಗೆಲ್ಲುವುದು ಕಷ್ಟವೆಂಬಂತಿದೆ. ಈ ಹಿಂದೆ ಗುಜರಾತಿನಾಚೆ ಮೋದಿ ಬಿಜೆಪಿ ಪರ ಪ್ರಚಾರ ಮಾಡಿದಾಗಲೂ ಅಲ್ಲೆಲ್ಲ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಲಾಭವಾದ ಉದಾಹರಣೆಗಳು ಹೆಚ್ಚಿಲ್ಲ. ಇದೆಲ್ಲದರ ನಡುವೆ ಹಾಗೂ ಹೀಗೂ ಒಂದು 150 ಸ್ಥಾನಗಳನ್ನು ಗೆದ್ದರೂ 545 ಸದಸ್ಯರ ಸಂಸತ್ತಿನಲ್ಲಿ 150 ಜನ ಸದಸ್ಯರ ಬೆಂಬಲದೊಂದಿಗೆ ರಚಿಸುವ ಸಮ್ಮಿಶ್ರ ಸರ್ಕಾರದಲ್ಲಿ ಗುಜರಾತ್ ಮಾದರಿಯಲ್ಲಿ ಯಾವುದೇ ಅಡೆತಡೆ ಇರದೇ ಆಡಳಿತ ನಡೆಸಲು ಸಾಧ್ಯವೇ? ಸಮ್ಮಿಶ್ರ ಸರ್ಕಾರಗಳ ಹಾವು ಏಣಿಯಾಟವನ್ನು ತೂಗಿಸಲು ಬೇಕಿರುವ ಸಂಧಾನ, ಮನವೊಲಿಕೆ, ಕೊಟ್ಟು ತೆಗೆದುಕೊಳ್ಳುವ, ಎಲ್ಲರನ್ನೂ ಜೊತೆಗೊಯ್ಯುವ ಡಿಪ್ಲೊಮಟಿಕ್ ಸ್ಕಿಲ್ಸ್, ಆನೆ ನಡೆದಿದ್ದೆ ದಾರಿಯೆಂಬಂತೆ ಗುಜರಾತಿನಲ್ಲಿ ಆಡಳಿತ ನಡೆಸುವ ಮೋದಿಯವರಿಗೆ ಇದೆಯೇ?
ಇನ್ನೊಂದು ಆಯಾಮವೆಂದರೆ ಮೋದಿಯವರು ಪ್ರಧಾನಿಯಾದರೆ ಭಾರತದ ಒಕ್ಕೂಟದಲ್ಲಿರುವ ಹಲವು ಜ್ವಲಂತ ಸಮಸ್ಯೆಗಳತ್ತ ಅವರ ನಿಲುವು ಏನಾಗಿರುತ್ತೆ? ಉದಾಹರಣೆಗೆ, ಕರ್ನಾಟಕವನ್ನೇ ತೆಗೆದುಕೊಳ್ಳೊಣ. ಕಾವೇರಿ ನದಿ ವಿವಾದವನ್ನೇ ತೆಗೆದುಕೊಳ್ಳಿ. ತಮಿಳುನಾಡಿಗೆ ಒತ್ತಡದಲ್ಲಿ ನೀರು ಬಿಟ್ಟ ಫಲವಾಗಿ ರಾಜ್ಯದ ಕಾವೇರಿ ಕೊಳ್ಳದ ಹಲವೆಡೆ ಬೆಳೆದು ನಿಂತ ಭತ್ತಕ್ಕೆ ನೀರುಣಿಸಲಾಗದೇ ರೈತರೇ ಮುಂದೆ ನಿಂತು ತಮ್ಮ ಒಣಗಿದ ಬೆಳೆಗೆ ಬೆಂಕಿ ಹಚ್ಚುತ್ತಿರುವ ಘಟನೆಗಳು ಇತ್ತಿಚೆಗೆ ನಡೆದಿವೆ. ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲೇ ಕಾವೇರಿ ನೀರಿನ ವಿವಾದ ಉಂಟಾದರೆ ಅವರು ಯಾವ ನಿಲುವು ಕೈಗೊಳ್ಳಬಹುದು? ಅವರು ಪ್ರಧಾನಿಯಾಗಲು ಸಹಕರಿಸುತ್ತಾರೆ ಅನ್ನಲಾಗಿರುವ ಮಿತ್ರಪಕ್ಷವಾದ ಜಯಲಲಿತಾ ಅವರ ಎ.ಐ.ಡಿ.ಎಮ್.ಕೆಯ ಮಾತು ಮೀರಿ ಕರ್ನಾಟಕದ ಪಾಲಿಗೆ ನ್ಯಾಯ ದೊರಕಿಸಿ ಕೊಡುವ ಶಕ್ತಿ ಮೋದಿಯವರಿಗಿದೆಯಾ? ಅಥವಾ ಬೆಳಗಾವಿಯಲ್ಲಿ ಗಡಿ ತಂಟೆ ಉಂಟಾದರೆ ಅಲ್ಲಿ ಯಾವತ್ತಿಗೂ ಗಡಿ ತಂಟೆಯನ್ನು ಉತ್ತೇಜಿಸುವ ಎನ್.ಡಿ.ಎ ಮಿತ್ರಪಕ್ಷವಾದ ಶಿವಸೇನೆಯ ಮಾತನ್ನು ಮೀರಿ ಅಲ್ಲಿ "ಗಡಿ ವಿವಾದ ಮುಗಿದ ಅಧ್ಯಾಯ" ಅನ್ನುವ ನಿಲುವು ತಳೆಯಲು ಮೋದಿಯವರಿಗೆ ಸಾಧ್ಯವೇ? ಅಥವಾ ಕಳಸಾ ಬಂಡೂರಿ ವಿಷಯದಲ್ಲಿ ತಕರಾರು ತೆಗೆದು ಉತ್ತರ ಕರ್ನಾಟಕದ ಊರುಗಳಿಗೆ ಕುಡಿಯುವ ನೀರಿನ ವಿಷಯದಲ್ಲೂ ರಾಜಕೀಯ ಮಾಡುತ್ತಿರುವ ಗೋವಾದಲ್ಲಿನ ಬಿಜೆಪಿ ಸರ್ಕಾರಕ್ಕೆ ಬುದ್ದಿ ಹೇಳುವ ಶಕ್ತಿ ಮೋದಿಯವರಿಗಿದೆಯೇ? ಈ ಉದಾಹರಣೆಗಳನ್ನು ಯಾಕೆ ಹೇಳಿದೆ ಅಂದರೆ ಇವೆಲ್ಲವೂ ಇವತ್ತು ಜೀವಂತವಾಗಿದ್ದು ಕರ್ನಾಟಕವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳೇ ಆಗಿದ್ದು, ಅವುಗಳ ವಿಷಯದಲ್ಲಿ ಈವರೆಗಿನ ಕೇಂದ್ರ ಸರ್ಕಾರಗಳ ಧೋರಣೆ ಕರ್ನಾಟಕದ ಪಾಲಿಗೆ ಹೇಗೆ ತೊಡಕಾಗಿದೆ ಅನ್ನುವುದನ್ನು ನಾವೆಲ್ಲರೂ ಬಲ್ಲೆವು. ಒಂದು ವೇಳೆ ಮೋದಿಯವರು ಪ್ರಧಾನಿಯಾದರೂ ಈ ವಿಷಯಗಳಲ್ಲಿ ಈ ಹಿಂದಿನವರಿಗಿಂತ ಭಿನ್ನವಾದ ನಿಲುವು ತಳೆಯುವ ಸಾಧ್ಯತೆ ಇದೆಯೇ? ಕೇಂದ್ರದಲ್ಲಿನ ಸಮ್ಮಿಶ್ರ ಸರ್ಕಾರವನ್ನು ತೂಗಿಸಲು ರಾಜಕೀಯ ಒತ್ತಡಗಳೇ ಹೆಚ್ಚು ಕೆಲಸ ಮಾಡುವ ಈ ದಿನಗಳಲ್ಲಿ ಒಕ್ಕೂಟದ ಎಲ್ಲ ರಾಜ್ಯಗಳನ್ನು ಒಂದಾಗಿ ಕಾಣಲು ಆಳ್ವಿಕೆ ಮಾಡುವ ರಾಷ್ಟ್ರೀಯ ಪಕ್ಷಕ್ಕೆ ಎಂದಿಗೂ ಆಗದು ಅನ್ನುವುದು ಬಾರಿ ಬಾರಿ ಕರ್ನಾಟಕದ ವಿಷಯದಲ್ಲಂತೂ ಸಾಬೀತಾಗಿದೆ. ಕರ್ನಾಟಕವೊಂದೇ ಅಲ್ಲ, ದೇಶದ ಹಲವು ರಾಜ್ಯಗಳ ವಿಷಯದಲ್ಲಿ ಇಂತಹುದೇ ಸವಾಲುಗಳು ಮೋದಿಯವರ ಮುಂದೆ ಬರಲಿದೆ ಮತ್ತು ಅವರು ಗುಜರಾತಿನಲ್ಲಿನ ಆಡಳಿತ ಶೈಲಿಯಲ್ಲಿ ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ನೇರ ಮತ್ತು ಸುಲಭವಲ್ಲ ಅನ್ನುವುದು ನನ್ನ ಅನಿಸಿಕೆ.
ಯಾವುದು ನಿಜವಾದ ಪರಿಹಾರ?
ಭಾರತ ಒಕ್ಕೂಟದ ಸವಾಲುಗಳಿಗೆ ನಿಜವಾದ ಪರಿಹಾರ ಯಾವುದೋ ಒಂದು ರಾಜ್ಯದಲ್ಲಿ ಕೆಲಸ ಮಾಡುವ ಮುಖ್ಯಮಂತ್ರಿಯನ್ನು ತಂದು ಪ್ರಧಾನಿಯಾಗಿಸುವುದರಲ್ಲಿಲ್ಲ. ಅದರ ಸವಾಲುಗಳಿಗೆ ಪರಿಹಾರ ಭಾರತದ ರಾಜಕೀಯ ವ್ಯವಸ್ಥೆಯ ಸ್ವರೂಪದಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ತರುವುದರಲ್ಲಿದೆ. ರಾಜಕೀಯದ ಕೆಲ ಅಧಿಕಾರಗಳನ್ನು ರಾಜ್ಯಗಳಿಗೆ ಕೊಟ್ಟಿರುವುದನ್ನು ಬಿಟ್ಟರೆ ಹೆಚ್ಚಿನ ರಾಜಕೀಯ ಮತ್ತು ಆರ್ಥಿಕ ಸಂಪನ್ಮೂಲಗಳೆಲ್ಲವನ್ನು ಇಂದು ಕೇಂದ್ರದಲ್ಲೇ ಉಳಿಸಿಕೊಂಡು ರಾಜ್ಯಗಳನ್ನು ಸಾಮಂತ ರಾಜರಂತೆ ನಡೆಸಿಕೊಳ್ಳುವ ಅಂದಿನ ಬ್ರಿಟಿಷರ ವ್ಯವಸ್ಥೆಯೇ ಇಂದಿಗೂ ಮುಂದುವರೆದಿರುವುದು ಮತ್ತು ಅದರಿಂದ ರಾಜ್ಯಗಳ ಆಡಳಿತವನ್ನು ಪರಿಣಾಮಕಾರಿಯಾಗಿಸುವ, ಭ್ರಷ್ಟಾಚಾರ ಕಡಿಮೆ ಮಾಡಿಸುವ, ಆಳುವವರಿಗೆ ಹೊಣೆಗಾರಿಕೆ ತರುವ ಸರಿಯಾದ ವ್ಯವಸ್ಥೆಯೊಂದು ಇಂದು ಅಸ್ತಿತ್ವದಲ್ಲಿಲ್ಲ. ಇದರ ಫಲವೇ ಎಂಬಂತೆ ಆಯಾ ರಾಜ್ಯಗಳಿಗೆ ಬೇಕಿರುವ ಸಂಪನ್ಮೂಲವನ್ನು ಹೊಂದಿಸಲು ಕೇಂದ್ರದ ಸರ್ಕಾರದಲ್ಲಿ ಪಾಲುದಾರರಾಗಿ ಕೇಂದ್ರದ ಮೂಗು ಹಿಡಿದು ಬಾಯಿ ಬಿಡಿಸಿ ತಮ್ಮ ರಾಜ್ಯದ ಕೆಲಸ ಮಾಡಿಸಿಕೊಳ್ಳಬೇಕು ಅನ್ನುವ ಮನಸ್ಥಿತಿ ಬಹುತೇಕ ರಾಜ್ಯಗಳಲ್ಲಿದೆ. ಈ ವಾಸ್ತವಿಕತೆಯ ಫಲವೇ ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಶಕ್ತಿಗಳ ಹುಟ್ಟಿಗೆ ಕಾರಣವಾಗಿದೆ. ಇವತ್ತಿರುವ ಪಿರಮಿಡ್ ಮಾದರಿಯ ಈ ವ್ಯವಸ್ಥೆ ಬದಲಾಯಿಸಿ, ಅಧಿಕಾರ ವಿಕೇಂದ್ರಿಕರಣಕ್ಕೆ ಮುಂದಾಗಿ ರಾಜ್ಯಗಳಿಗೆ ತಮ್ಮ ಜನರ ಏಳಿಗೆಗೆ ಬೇಕಿರುವ ಯೋಜನೆಗಳನ್ನು ರೂಪಿಸಿಕೊಳ್ಳಲು ಬೇಕಿರುವ ಸ್ವಾಯತ್ತತೆ ಕೊಡುವುದು ನಿಜವಾದ ಅರ್ಥದಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಕೊಡಲಿದೆ. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ರಾಜ್ಯಗಳಿಗೆ ಸ್ವಾಯತ್ತತೆಯ ಜೊತೆ ಹೊಣೆಗಾರಿಕೆಯನ್ನು ಕೊಟ್ಟಲ್ಲಿ ದೆಹಲಿಯಲ್ಲಿ ಇಂದು ಬಹುತೇಕ ಪಾಲಿಸಿ ಮೇಕಿಂಗ್ ವಿಷಯಗಳಲ್ಲಿ ಕಂಡು ಬರುವ ರಾಜಕೀಯ ಅರಾಜಕತೆ ಕೊನೆಗೊಳ್ಳಬಹುದು. ಮೋದಿಯವರೇ ಹಲವು ಬಾರಿ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುವ ಕೇಂದ್ರದ ನಿಲುವನ್ನು ಖಂಡಿಸಿದ್ದರೂ ಅವರು ದೆಹಲಿಗೆ ಹೋದಾಗ ಅಲ್ಲಿ ತಮ್ಮ ಸಿದ್ಧಾಂತದ ಶಾಲೆಯಾದ ಆರ್.ಎಸ್.ಎಸ್ ಅಣತಿಯನ್ನು ಮೀರಿ ಒಕ್ಕೂಟ ವ್ಯವಸ್ಥೆ ಮತ್ತು ರೈಟ್ ವಿಂಗ್ ಎಕನಾಮಿಕ್ಸ್ ಬಗ್ಗೆ ತಾವು ನಂಬಿರುವ ನಿಲುವನ್ನು ಪ್ರತಿಪಾದಿಸಿ ದಕ್ಕಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳ ಸುತ್ತ ಅವರ ರಾಷ್ಟ್ರ ರಾಜಕಾರಣದ ಯೋಜನೆಯ ಬಗ್ಗೆ ಯೋಚಿಸಿದಾಗ ಅವರು ಹೆಚ್ಚು ಕಡಿಮೆ ಒಂದು ದೇಶದ ಗಾತ್ರದಲ್ಲಿರುವ ಗುಜರಾತಿನಲ್ಲಿ ಬಾಕಿಯಿರುವ ಕೆಲಸಗಳನ್ನು ಮುಂದುವರೆಸಿ ಗುಜರಾತ್ ಅನ್ನು ಅಭಿವೃದ್ದಿಯಲ್ಲಿ ಮುಂದೊಯ್ಯುವುದೇ ಅವರ ಪಾಲಿಗೆ ಸರಿಯಾದ ನಿರ್ಧಾರವಾಗಬಹುದು ಅನ್ನುವುದು ನನ್ನ ಅನಿಸಿಕೆ.
ಎರಡನೆಯ ವಿಷಯದ ಬಗ್ಗೆ ಮುಂದಿನ ಅಂಕಣದಲ್ಲಿ ಬರೆಯುವೆ.