ಗುರುವಾರ, ಡಿಸೆಂಬರ್ 31, 2009

ಮುತ್ತಿನ ಹಾರದ ನೂರೊಂದು ನೆನಪು

ನಿನ್ನೆ ಬೆಳಿಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಸಾವನ್ನಪ್ಪಿದ ಸುದ್ಧಿ ಕೇಳಿ ಕೆಲ ಕಾಲ ತಲೆನೇ ಓಡಲಿಲ್ಲ. ಟಿ.ವಿಯಲ್ಲಿ ಸುದ್ಧಿ ನೋಡುತ್ತಾ "ಛೇ, ಇಷ್ಟು ಬೇಗ ಹೀಗಾಗಬಾರದಿತ್ತು" ಅಂದುಕೊಂಡೆ. ಹಾಗೆಯೇ ಮನಸ್ಸು ನೆನಪಿನಾಳಕ್ಕೆ ಇಳಿದು ನಾನು ಓದಿ, ಬೆಳೆದ ಧಾರವಾಡ ಜಿಲ್ಲೆಯ ಕಲಘಟಗಿ ಅನ್ನುವ ಊರಿನಲ್ಲಿ ವಿಷ್ಣು ಸಿನೆಮಾ ನೋಡಲು ಪಟ್ಟ ಹರಸಾಹಸಗಳನ್ನು ನೆನಪಿಗೆ ತಂದಿತು.

ನನ್ನೂರಿನ ಒಂದೇ ಒಂದು ಥಿಯೇಟರ್ ಶಿವಗಂಗಾ !
ಅದು ಇಸವಿ 1990-91 ಅನ್ನಿಸುತ್ತೆ, ಮುತ್ತಿನ ಹಾರ ಚಿತ್ರ ಬಿಡುಗಡೆಯಾಗಿ ಎಲ್ಲೆಲ್ಲೂ ಅದೇ ಚಿತ್ರದ ಸುದ್ಧಿ. ನನ್ನ ಊರಲ್ಲಿ ಇದ್ದ ಒಂದೇ ಒಂದು ಥಿಯೇಟರ್ ಅಂದ್ರೆ ಶಿವಗಂಗಾ ಚಿತ್ರ ಮಂದಿರ. ಬಾಲ್ಕನಿಯ ಕಲ್ಲಿನ ಸೀಟಿಗೆ ಆಗ 5 ರೂಪಾಯಿ ಚಾರ್ಜ್. ಹೆಚ್ಚಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಬಿಡುಗಡೆಯಾದ ಆರು ತಿಂಗಳು - ಒಂದು ವರ್ಷದ ಮೇಲಷ್ಟೇ ಕನ್ನಡ ಚಿತ್ರಗಳು ನನ್ನೂರಿಗೆ ಬರ್ತಾ ಇದ್ದಿದ್ದು, ಅಂತಾದ್ರಲ್ಲಿ ಮುತ್ತಿನ ಹಾರ ಕೂಡಾ ಬೇರೆಡೆ ಬಿಡುಗಡೆಯಾದ ಆರು ತಿಂಗಳ ನಂತರ ನನ್ನೂರಿನ ಶಿವಗಂಗಾ ಚಿತ್ರ ಮಂದಿರಕ್ಕೆ ಬಂದಿತ್ತು. ಆದ್ರೆ ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ನೋಡಲು 5 ರೂಪಾಯಿ ಅಪ್ಪನ್ನ ಹತ್ತಿರ ಕೇಳಲು ಭಯ. ಆಗಾಗ ಅಮ್ಮನಿಂದ 50 ಪೈಸೆ ಚಿಕ್ಕಿ, ಕಡ್ಲಿ, ಪಾಪಡಿ, ಬೊಂಬಾಯ್ ಮೀಠಾಯಿ ತಿನ್ನಲು ಸಿಗ್ತಾ ಇತ್ತು. ದಿನವೂ 50 ಪೈಸೆ ಇಸ್ಕೊಂಡು 5 ರೂಪಾಯಿ ಒಟ್ಟುಗೂಡಿಸಲು ಕಮ್ಮಿ ಅಂದ್ರೂ 10 ದಿನ ಆದ್ರೂ ಬೇಕು. ಆದ್ರೆ ನಮ್ಮೂರಿನ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಓಡುತ್ತಾ ಇದ್ದದ್ದೇ 1 ವಾರ ಮಾತ್ರ ( ಬರೀ 25,000 ಜನಸಂಖ್ಯೆಯುಳ್ಳ ಚಿಕ್ಕ ಊರು ಅದಾಗಿದ್ದದ್ದು ಇದಕ್ಕೆ ಕಾರಣವಾಗಿತ್ತು). ಈ ಚಾನ್ಸ್ ಮಿಸ್ ಮಾಡ್ಕೊಂಡ್ರೆ ಮುತ್ತಿನ ಹಾರ ನೋಡಲು ಸಾಧ್ಯವೇ ಇಲ್ಲ ಅನ್ನಿಸ್ತಾ ಇತ್ತು. ಆಗಲೇ ಒಂದಿಬ್ರು ಗೆಳೆಯರು ಸಿನೆಮಾ ನೋಡಿ, ಅಲ್ಲಿನ ಯುದ್ಧದ ದೃಶ್ಯ, ಮಾಸ್ಟರ್ ಆನಂದನ ಅಭಿನಯ, ವಿಷ್ಣು ಅವರ ಅಭಿನಯದ ಬಗ್ಗೆ ಹೇಳಿ ನನ್ನಲ್ಲಿ ತಡೆದುಕೊಳ್ಳಲಾಗದ ಕಾತುರವಾಗಿತ್ತು. ಆಗ ನೆನಪಾದವನು ನನ್ನ ಗೆಳೆಯ ದೀಪಕ್ ರೇವಣಕರ್. ಅವ್ರ ತಂದೆ ಅಕ್ಕಸಾಲಿಗರಾಗಿದ್ದರಿಂದ ಅವನ ಹತ್ರ ನನಕ್ಕಿಂತ 4 ಪಟ್ಟು ಹೆಚ್ಚು ಪಾಕೆಟ್ ಮನಿ ಇರ್ತಾ ಇತ್ತು ( ಅಂದ್ರೆ 2 ರೂಪಾಯಿ :) ). ಅವನ ಹತ್ರ ಹೋಗಿ " ಲೇ ದೀಪ್ಯಾ,, ಒಂದು 4 ರೂಪಾಯಿ ಸಾಲ ಕೊಡಲೇ, ಮುಂದಿನ ವಾರ ಅಂದ್ರೆ ತೀರಿಸಿ ಬಿಡ್ತೆನಿ" ಅಂದೆ. ಅವನಿಗೆ ಏನ್ ಅನ್ನಿಸ್ತೋ ಒಂದೇ ಮಾತಿಗೆ ಕೊಟ್ಟು ಬಿಟ್ಟ. ಅದನ್ನೆತ್ತಿಕೊಂಡು ಶನಿವಾರ ಸಂಜೆ ಶೋಗೆ ಮುತ್ತಿನ ಹಾರ ಚಿತ್ರಕ್ಕೆ ಹೋಗೇ ಬಿಟ್ಟೆ. ಚಿತ್ರದಲ್ಲಿ ಮೇಜರ್ ಅಚ್ಚಪ್ಪನ ಮಗನ ಪಾತ್ರದಲ್ಲಿ ಮಾಸ್ಟರ್ ಆನಂದ "ವೀರರಾಜು" ಅನ್ನೋ ಪಾತ್ರ ಮಾಡಿದ್ರು. ಶತ್ರು ದೇಶದ ವಿಮಾನ ನೋಡಿ, ಅಮ್ಮ ಅನ್ನುತ್ತ ಸುಹಾಸಿನಿಯವರ ಹತ್ರ ಬರೋದ್ರೊಳಗೆ ಬಾಂಬ್ ದಾಳಿಗೆ ತುತ್ತಾಗಿ ವೀರರಾಜು ಸತ್ತಾಗ, ಅವನ ಮೃತ ದೇಹವನ್ನು ಉಸುಕಿನಲ್ಲೇ ಮಣ್ಣು ಮಾಡುವ ದೃಶ್ಯ ನೋಡಿ ಕಣ್ತುಂಬಿ ಬಂದಿತ್ತು. ಅದಾದ ಮೇಲೆ, ವಿಷ್ಣು ತನ್ನ ಮಗನ ಸಮಾಧಿಯತ್ತ ಬಂದು "ವೀರರಾಜು" ಅಂತ ಅಳೊ ದೃಶ್ಯ ನೋಡಿ ಇಡೀ ಚಿತ್ರ ಮಂದಿರ ಕಣ್ಣೀರುಗರೆದಿತ್ತು. ಅವರ ಸುಪ್ರಭಾತ, ಬಂಧನ, ಯಜಮಾನ ಮುಂತಾದ ಚಿತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಹಳ್ಳಿಜನರು ಚಕ್ಕಡಿ ಮಾಡಿಕೊಂಡು ಸೆಕೆಂಡ್ ಶೋ ಗೆ ಬರುತ್ತಿದ್ದ ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ಇದೆಲ್ಲ ನಿನ್ನೆ ವಿಷ್ಣು ಸಾವಿನ ಸುದ್ಧಿ ಕೇಳಿದಾಗ ನೆನಪಾಯ್ತು.



ಹಲವಾರು ಬಾರಿ, ನಾಡ ಪರ ಹೋರಾಟಗಳ ವಿಷಯದಲ್ಲಿ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ಸಾಕಷ್ಟು ಅಸಮಾಧಾನವಿದ್ದರೂ, ಒಬ್ಬ ಕಲಾವಿದನಾಗಿ ವಿಷ್ಣು ಯಾವತ್ತು ನಮ್ಮೆಲ್ಲರ ನೆನಪಲ್ಲಿ ಹಚ್ಚ ಹಸಿರಾಗಿರುತ್ತಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ..

ಶನಿವಾರ, ಡಿಸೆಂಬರ್ 19, 2009

ಸ್ಟೀವ್ ಜಾಬ್ಸ್ ನಿಂದ ಕನ್ನಡಿಗರು ಕಲಿಯಬೇಕಾದ ಪಾಠ !

ಆಪಲ್ ಕಂಪನಿಯ ಐ-ಪಾಡ್, ಐ-ಫೋನ್, ಐ-ಮ್ಯಾಕ್ ಗಳ ಮೂಲಕ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅದರ CEO ಸ್ಟೀವ್ ಜಾಬ್ಸ್ ಈ ದಶಕ ಕಂಡ ಅತ್ಯುತ್ತಮ CEO ಅನ್ನುವ ಬಿರುದಿಗೆ ಪಾತ್ರವಾಗಿದ್ದಾರೆ. ಸಂಗೀತ ಕೇಳೊದು, ಫೋನ್ ಬಳಸೋದು, ಕಂಪ್ಯೂಟರ್ ಬಳಸೋದು,, ಹೀಗೆ ಎಲ್ಲ ಕೆಲಸದಲ್ಲೂ The Best  ಅನ್ನುವ ಅನುಭವ ಕೊಡುವಂತಹ ಉಪಕರಣಗಳನ್ನು ರೂಪಿಸಿದ, ಆ ಮೂಲಕ ಆಪಲ್ ಕಂಪನಿಯನ್ನು ಎಂತಹ ರಿಸೆಶನ್ ನ ಅವಧಿಯಲ್ಲೂ ಲಾಭದ ಹಾದಿಯಲ್ಲಿ ನಡೆಯುವಂತೆ ನೋಡಿಕೊಂಡ ಜಾಬ್ಸ್ ಅವರಿಗೆ ಈ ಬಿರುದು ನಿಜಕ್ಕೂ ಸೂಕ್ತ ಅನ್ನಿಸುತ್ತೆ. He deserves every bit of it !.

ಸ್ಟೀವ್ ಜಾಬ್ಸ್ ಅವರಿಂದ ಕನ್ನಡಿಗರೆಲ್ಲರೂ ಕಲಿಲೇಬೇಕಾದ ಒಂದು ಗುಣವಿದೆ ಅಂತ ನನಗನ್ನಿಸೋದು. ಅದೇನಪ್ಪ ಅಂತಾದ್ದು ಅಂತ ಅಚ್ಚರಿ ಪಡಬೇಡಿ.  ಜೀವನದ ಎಂತಹ ಕಷ್ಟದ ಸ್ಥಿತಿಯಲ್ಲೂ ಅಳುಕದೇ, ಛಲದಿಂದ ಮುನ್ನುಗಬೇಕು, ಆ ಮೂಲಕ ಜಗತ್ತು ಬೆರಗಾಗುವಂತಹ ಸಾಧನೆ ಮಾಡಬೇಕು, ಒಟ್ಟಾರೆ, ಛಲ ಬಿಡದವನಿಗೆ ಗೆಲುವು ಕಟ್ಟಿಟ್ಟದ್ದು ಅನ್ನುವುದೇ ಆ ಗುಣ ಅನ್ನೋದು ನನ್ನ ಅನಿಸಿಕೆ. ಜಗತ್ತಿನ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಸ್ಟಾನ್ ಫರ್ಡ್ ಯುನಿವರ್ಸಿಟಿಯ ಕನವೊಕೇಶನ್ ನಲ್ಲಿ ಅವರು ನೀಡಿದ ಒಂದು ಭಾಷಣ ಇಲ್ಲಿದೆ. ಇಲ್ಲಿ ಅವರು ತಮ್ಮ ಜೀವನದಲ್ಲಿ ಬಂದ ಕಷ್ಟ, ಅವಮಾನ, ಅದನ್ನೆದುರಿಸಿದ ರೀತಿ, ಮತ್ತೆ ಗೆಲುವು ಪಡೆದ ಬಗೆ, ಹೀಗೆ ಎಲ್ಲವನ್ನೂ ಮನಸಿಗೆ ಆಪ್ತ ಎನ್ನಿಸುವಂತೆ ವಿವರಿಸಿದ್ದಾರೆ. ಯಾವಾಗ ಕೇಳಿದರೂ, ಮೈ ಮನದಲ್ಲಿ ಹೊಸ ಉತ್ಸಾಹ ಮೂಡುವಂತೆ ಮಾಡುವ ಈ ಭಾಷಣ ನಿಜಕ್ಕೂ ಸಕತ್ inspiring !



ಒಂದು ಜನಾಂಗ ಉದ್ಧಾರ ಆಗುವಲ್ಲಿ ಒಗ್ಗಟ್ಟು ಎಷ್ಟು ಮುಖ್ಯವೋ, ಸಾಧಿಸಬೇಕೆನ್ನುವ ಛಲವು ಅಷ್ಟೇ ಮುಖ್ಯ. ಏನಂತೀರಾ ಗೆಳೆಯರೇ?

ಶನಿವಾರ, ಡಿಸೆಂಬರ್ 12, 2009

ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದ್ರೆ ಉದ್ಧಾರ ಆಗ್ತೀವಾ?

ತೆಲಂಗಾಣ ಬೇರೆ ರಾಜ್ಯ ಆಗುತ್ತೆ ಅನ್ನುವ ಸುದ್ಧಿಯ ಜೊತೆಗೆ, ಇಂತಹುದೇ ಕೂಗು ಕರ್ನಾಟಕದಲ್ಲಿಯೂ ಕೇಳಿ ಬರುವುದು ಎಂದೂ, ಕೊಡಗು, ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾರೆ ಅಂತಲೂ ಕನ್ನಡದ ಕೆಲವು ಮಾಧ್ಯಮಗಳಲ್ಲಿ ವರದಿ ಬರ್ತಾ ಇತ್ತು. ಅಷ್ಟೇ ಅಲ್ಲ, ದೇಶದ ಹಲವೆಡೆ, ಬೇರೆ ಬೇರೆ ದೊಡ್ಡ ರಾಜ್ಯದ ನಾಯಕರುಗಳು, ಚಿಕ್ಕ ರಾಜ್ಯಗಳು ಅಭಿವೃದ್ಧಿಗೆ sure shot ಹಾದಿ, ಜನರ ಅನುಕೂಲ (?) ಕ್ಕಾಗಿ ಇನ್ನಷ್ಟು ಚಿಕ್ಕ ರಾಜ್ಯಗಳಾಗಬೇಕು ಅಂತ ಹೇಳಿಕೆ ಕೊಡ್ತಾ ಇದ್ದಿದ್ದನ್ನು ಕಂಡೆ.  ಯು.ಪಿ/ಬಿಹಾರ್ ದಂತಹ ನೈಸರ್ಗಿಕ ಸಂಪನ್ಮೂಲದಿಂದ ತುಂಬಿರುವ ರಾಜ್ಯಗಳನ್ನು ಅಭಿವೃದ್ಧಿಯಲ್ಲಿ ಶಿಲಾಯುಗಕ್ಕೆ ತಳ್ಳಿದ, ಕೊಲೆ, ಸುಲಿಗೆ, ಭ್ರಷ್ಟಾಚಾರದಲ್ಲಿ ಮಂಚೂಣಿಗೆ ತಂದು ನಿಲ್ಲಿಸಿದ ಕೆಲವು ನಾಯಕರು ಚಿಕ್ಕ ರಾಜ್ಯಗಳ ಬಗ್ಗೆ, ಅದರಿಂದ ಆಗೋ ಲಾಭ (?)ದ ಬಗ್ಗೆ, ಒಟ್ಟಾರೆ, Small is beautiful ಅಂತ ಮಾತಾಡುವುದನ್ನು ನೋಡಿದಾಗ ನಗು ಬರ್ತಾ ಇತ್ತು.

ಹೋಗಲಿ,, ಈಗ ಕರ್ನಾಟಕಕ್ಕೆ ಹಿಂತಿರುಗೋಣ. ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದರೆ ನಿಜಕ್ಕೂ ಎಲ್ಲ ಭಾಗಗಳು ಅಭಿವೃದ್ಧಿ ಹೊಂದುತ್ತಾ? ಎಂಬ ಪ್ರಶ್ನೆ ಇಟ್ಟುಕೊಂಡು ನೋಡಿದ್ರೆ, ಖಂಡಿತವಾಗಿಯೂ ಆಗಲ್ಲ ಅನ್ನೋದೇ ನನ್ನ ಅಭಿಪ್ರಾಯ. ಹೇಗೆ ಅಂತೀರಾ?
  • ಹತ್ತತ್ತು ಬಾರಿ ಆಯ್ಕೆಯಾಗಿ ಬಂದರೂ ಹೈದ್ರಾಬಾದ್ ಕರ್ನಾಟಕಕ್ಕೆ ನಯಾ ಪೈಸೆ ಕೆಲಸ ಮಾಡದ, ಆ ಭಾಗದ ಜನರ ಕುಂದು ಕೊರತೆಗೆ ಸ್ಪಂದಿಸದ ಅಲ್ಲಿನ ಜನ ನಾಯಕರ ಕೈಗೆ ಹೈದ್ರಾಬಾದ್ ಕರ್ನಾಟಕವೆಂಬ ಹೊಸ ರಾಜ್ಯ ಮಾಡಿ ಕೊಟ್ಟರೆ ಏನಾದೀತು? ನಮ್ಮ ಧಾರವಾಡದ ಕಡೆ ಹೇಳುವಂತೆ "ಊದುದ್ ಕೊಟ್ಟು, ಬಾರ್ಸುದ್ ತಗೊಂಡಂತೆ" ಆಗುತ್ತೆ ಅಷ್ಟೇ.
  •  ಅಸ್ಸಾಂ, ಮಣಿಪುರ, ಮೀಜೊರಾಮ್, ನಾಗಾಲ್ಯಾಂಡ್ ನಂತಹ ಚಿಕ್ಕ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ಅಸ್ತಿತ್ವವೂ ಇಲ್ಲ. ದೆಹಲಿಯಲ್ಲಿ ಏನಿದ್ರೂ ದೊಡ್ಡ ರಾಜ್ಯಗಳ ಮಾತೇ ನಡೆಯೋದು. ನಿಮ್ಮ ಬಳಿ 1,2,5 ಇಲ್ಲ 10 ಎಮ್.ಪಿಗಳಿದ್ದರೆ, ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ನೀವು ನಗಣ್ಯ. ಅಂತಾದ್ರಲ್ಲಿ, ಕೊಡಗಿನ ಒಬ್ಬ ಎಮ್.ಪಿ, ಹೈದ್ರಾಬಾದ್ ಕರ್ನಾಟಕದ 5 ಎಮ್.ಪಿಗಳ ಕೂಗು ದೆಹಲಿಯಲ್ಲಿರುವ ದೊರೆಯ ಕಿವಿಗೆ ಎಂದಿಗಾದರೂ ಬಿದ್ದಿತಾ? 
  •  28 ಲೋಕಸಭೆ ಸದಸ್ಯರನ್ನಿಟ್ಟುಕೊಂಡೇ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ಯೋಜನೆಗಳನ್ನು ತಂದುಕೊಳ್ಳಲು ನಾವು ಒದ್ದಾಡುತ್ತಿರುವಾಗ, ಇನ್ನೂ ಈ ಚುಲ್ಟು ರಾಜ್ಯಗಳ ಕಥೆ ಏನಾದೀತು ಅನ್ನುವುದನ್ನು ಊಹಿಸಲು ಅಸಾಧ್ಯವೇ? 
  • ಕಾವೇರಿ ನೀರಿಗಾಗಿ, ಕೊಡಗು-ಕರ್ನಾಟಕ, ಕೃಷ್ಣಾ ನದಿ ನೀರಿಗಾಗಿ ಹೈ.ಕ - ಕರ್ನಾಟಕದ ನಡುವೆ ವಿವಾದಗಳು,ಕಿತ್ತಾಟಗಳು, ಕೋರ್ಟ್ ಮೆಟ್ಟಿಲು ಏರೋ ಪ್ರಸಂಗಗಳು ಬರಲ್ವಾ? ಈಗಲೇ ಇರೋ ವಿವಾದಗಳು ಸಾಕಾಗಿಲ್ವಾ?
  •  ಒಂದು ಭಾಷೆ ಮಾತನಾಡುವ ಜನರ ನಡುವೆ ಒಗ್ಗಟ್ಟಿನ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ.  ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಮುಂದೆ, ಇವತ್ತಿಗೂ ನಮ್ಮ ಭಾಷೆಗಳು ಎರಡನೆ ದರ್ಜೆಯ ಪ್ರಜೆಗಳಂತೆ ನಲುಗುತ್ತಿವೆ. ಅದು ಅಲ್ಲದೇ, ಕಲಿಕೆಯ ಎಲ್ಲ ಹಂತದಲ್ಲೂ ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯೊಂದೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ಪರ್ಧೆಗೆ ಸಜ್ಜುಗೊಳಿಸಲು ಸಾಧ್ಯವಾಗಿಸೋದು. ಕನ್ನಡಿಗರ ಒಗ್ಗಟ್ಟು, ಕನ್ನಡಿಗರ ಒಂದು ರಾಜ್ಯವಿಲ್ಲದೇ, ಭಾಷೆಯ ಮೇಲೆ, ಅದರಿಂದ ಉದ್ಧಾರ ಆಗೋ ಬಗ್ಗೆ ಗಮನ ಕೇಂದ್ರಿಕರಿಸುವುದು ಸಾಧ್ಯವೇ?

ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರ
ಅಷ್ಟೇ ಅಲ್ಲ, ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಲು ಮುಖ್ಯ. ಇಲ್ಲಿ ನಾನೇನು, ಅಮೇರಿಕದಂತಹ ವಲಸಿಗರಿಂದ ಕಟ್ಟಿದ, ಚೌಕಾಕಾರದಲ್ಲಿ ಕತ್ತರಿಸಿ, ಇಂಗ್ಲಿಷ್ ಹೇರಿ ಕಟ್ಟಿದ ದೇಶದ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳುತ್ತಿರುವುದು, ಅನಾದಿ ಕಾಲದಿಂದಲೂ ಇಲ್ಲೇ ನೆಲೆಸಿ, ಇಲ್ಲಿನ ನುಡಿಯಾಡುತ್ತಿರುವ ಕನ್ನಡಿಗರ ಬಗ್ಗೆ, ಅವರ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಿದ್ದೇನೆ. ಒಡೆದು ಚೂರು ಮಾಡಿದ ಕರ್ನಾಟಕದಲ್ಲಿ ಈ ಅಭಿವೃದ್ಧಿ ಎಂದಿಗೂ ಸಾದ್ಯವಿಲ್ಲ.

ಜಗತ್ತಿನ ಒಂದು ಭಾಷೆಯಾಡುತ್ತಿದ್ದ, ಆದರೆ ಕಿತ್ತಾಡಿ ಬೇರೆಯಾಗಿದ್ದ ಜರ್ಮನ್ನರು ಬರ್ಲಿನ್ ಗೋಡೆಯನ್ನು ಒಡೆದು ಮತ್ತೆ ಒಂದಾಗಿ ಮುಂದೆ ಸಾಗುತ್ತಿರುವುದನ್ನು  ನಾವು ಒಂದೆಡೆ ನೋಡುತ್ತಿದ್ದರೆ, ಇಲ್ಲಿ, ಕೆಲವು ಭ್ರಷ್ಟ ರಾಜಕಾರಣಿಗಳ ಸಿ.ಎಮ್ ಆಗುವ ಆಸೆಗೆ, ಅವರ ಉಪವಾಸಕ್ಕೆ ಬೆದರಿ ಒಂದು ಭಾಷೆಯಾಡುವ ಜನರನ್ನು ಒಡೆಯಲು ಹೊರಡುವವರ ಕಣ್ಣಿಗೆ,  ಭಾಷೆ ಅನ್ನುವುದು ಏಳಿಗೆಯ ನಿಜವಾದ ಸಾಧನ ಅನ್ನುವುದನ್ನು ಗುರುತಿಸಲು ಆಗದ ಭೌದ್ದಿಕ ದಾರಿದ್ರ್ಯ ತೋರಿಸುತ್ತೆ.

ಕೊನೆಗೆ, The quality of life of Kannadigas who are having to contend with underdevelopment in Karnataka – whether north or south – can improve only at the dawn of appreciation for the pressing need for the unity of Kannadigas in every walk of life including politics. Any thought process which divides them makes them that much weaker.

ಮಂಗಳವಾರ, ಡಿಸೆಂಬರ್ 1, 2009

ಚಿತ್ರ ರಂಗ ಶುರುವಾಗಿ 75 ವರ್ಷ ಆಯ್ತು..ಇನ್ನೂ ಅಳ್ತಾ ಕೂರೋದ್ರಲ್ಲೇ ಸಮಾಧಾನ ಪಟ್ಕೊಂಡ್ರೆ ಹೇಗೆ ?

ಇವತ್ತು ಡೆಕ್ಕನ್ ಹೆರಾಲ್ಡ್ ಓದ್ತಾ ಇದ್ದೆ. ಒಂದು ಚಿಕ್ಕ ಸುದ್ಧಿ ಕಣ್ಣಿಗೆ ಬಿತ್ತು. ಗದಗನಲ್ಲಿ ಒಬ್ಬ ಚಲನಚಿತ್ರ ಪ್ರದರ್ಶಕರು ಹೇಳಿಕೆ ಒಂದನ್ನು ನೀಡಿ, ಎಲ್ಲ ಪ್ರದರ್ಶಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (KFCC) ಯ ಸದಸ್ಯರಾಗಬೇಕು ಅನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದುದು, ಇದನ್ನ ಈ ಕೂಡಲೇ ಹಿಂಪಡೆಯಬೇಕು ಅಂದರು. ಅದನ್ನ ನೋಡಿದಾಗ ಕರ್ನಾಟಕದ ಒಂದು ಭಾಗದ ಪ್ರದರ್ಶಕರೊಬ್ಬರು, ಕರ್ನಾಟಕದ ಚಿತ್ರಮಂಡಳಿಯ ಸದಸ್ಯತ್ವವೇ ಬೇಡ ಅಂತ ಯಾಕಂತಾರೆ ಅಂತಾ ವಿಚಾರ ಮಾಡ್ತಾ ಇದ್ದೆ.  ಯೋಚನೆ ಮಾಡಿದಾಗ, ಚಿತ್ರ ರಂಗದ ಒಂದಿಬ್ಬರು ಗೆಳೆಯರನ್ನು ಮಾತನಾಡಿಸಿದಾಗ ಕಂಡದ್ದು:


  • ಈ ಎಲ್ಲ ಪ್ರದರ್ಶಕರು  ಉತ್ತರ ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶಕರಾಗಿದ್ದು, ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶನದಿಂದ ಹಣ ಮಾಡುತ್ತಿರುವವರು. ಕನ್ನಡ ಚಿತ್ರರಂಗದ ಉಳಿವು, ಬೆಳೆವಿಗಾಗಿ  KFCC ತೆಗೆದುಕೊಳ್ಳುವ ನೀತಿ ನಿಯಮಗಳು ( ಉದಾ: ಇಷ್ಟೇ ಪ್ರತಿ ಹಿಂದಿ / ತೆಲುಗು ಚಿತ್ರಗಳನ್ನು ಪ್ರದರ್ಶಿಸಬೇಕು ಅನ್ನೋದು ಇರಬಹುದು, ಇಲ್ಲವೇ ಪ್ರದರ್ಶಕರ ಮತ್ತು ನಿರ್ಮಾಪಕರ ಮಧ್ಯ ಆದಾಯ ಹಂಚಿಕೆಗೆ ಇಂತಹದು ಅಂತ ಒಂದು ನಿಯಮದನ್ವಯ ನಡೆಯಬೇಕು ಅನ್ನೋದು ಇರಬಹುದು)  ಇವರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸುವುದರಿಂದ ಇವರು ಈ ರೀತಿ ವರ್ತಿಸುತ್ತಿದ್ದಾರೆ ಅನ್ನಿಸುತ್ತೆ.
  • ಎರಡನೆಯದಾಗಿ, ತೆಲುಗು/ಹಿಂದಿ ಚಿತ್ರರಂಗಕ್ಕೆ ಕರ್ನಾಟಕ ಅನ್ನೋದು ತಮ್ಮ core ಮಾರ್ಕೆಟ್ ಅಲ್ಲ. ಅದೇನಿದ್ದರೂ extra income. ಬಂದಷ್ಟು ಬರಲಿ ಅನ್ನೋ ಭಾವನೆ ಅವರದ್ದು. ಹೀಗಾಗಿಯೇ ತಮ್ಮ ಚಿತ್ರಗಳ ಇಲ್ಲಿನ ಪ್ರದರ್ಶಕರಿಗೆ ಕನ್ನಡ ನಿರ್ಮಾಪಕರಿಗಿಂತ ಹೆಚ್ಚು ಮಾರ್ಜಿನ್ ಕೊಡುತ್ತಾರೆ. ಆ ದುಡ್ಡಿನ ಆಸೆಗೆ ಈ ಪ್ರದರ್ಶಕರು ಈ ರೀತಿ ಈ ನೆಲದ ಕಾನೂನು ತಮಗನ್ವಯವಾಗುವುದು ಬೇಡ ಅನ್ನೋದು.

ಇಂತಹ ವಿರೋಧಕ್ಕೆಲ್ಲ ಸರ್ಕಾರ ತಲೆ ಕೆಡಿಸಿಕೊಳ್ಳಬಾರದು. ಒಂದು ದೊಡ್ಡ ಸಮುದ್ರದಲ್ಲಿ ಒಂದು ಶಾರ್ಕ್ ಮೀನು, ಒಂದು ಚಿಕ್ಕ ಮೀನು ಒಟ್ಟಿಗೆ ಇದ್ದಾಗ, ಎರಡು ಒಂದೇ, ಎರಡು ಸಮುದ್ರದ ಪ್ರಾಣಿಗಳೇ ಅಂತ ಬಿಟ್ರೆ ಏನಾಗುತ್ತೆ? ಶಾರ್ಕ್ ಮೀನು ಚಿಕ್ಕ ಮೀನನ್ನ ತಿಂದೇ ತಿನ್ನುತ್ತೆ. ಇವತ್ತು ಕರ್ನಾಟಕದಲ್ಲೂ ಇದೇ ಸ್ಥಿತಿ ಇದೆ. ಕನ್ನಡ ಚಿತ್ರರಂಗಕ್ಕೆ ತೆಲುಗು/ಹಿಂದಿ/ತಮಿಳಿನಿಂದ ತೀವ್ರ ಮಟ್ಟದ ಸ್ಪರ್ಧೆ ಇದ್ದು, ಇಲ್ಲಿ ಕನ್ನಡ ಚಿತ್ರರಂಗ ಉಳಿದು ಬೆಳೆಯಲು, ಬೇರೆ ಚಿತ್ರಗಳ ಹಾವಳಿಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಲೇಬೇಕು. ಹಾಗಾಗಿ, ಎಲ್ಲ ಪ್ರದರ್ಶಕರು KFCCಯ ವ್ಯಾಪ್ತಿಗೊಳಪಟ್ಟು, ಸರ್ಕಾರದ ನೀತಿ ನಿಯಮಗಳನ್ವಯ ನಡೆಯುವಂತೆ ಸರ್ಕಾರ/ಚಿತ್ರ ಮಂಡಳಿ ಮಾಡಬೇಕು. ಇದೇ ಸಮಯದಲ್ಲಿ KFCC ಕೂಡಾ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೇ, ಕನ್ನಡ ಚಿತ್ರರಂಗದಲ್ಲಿ ಹೊಸತನ ತುಂಬಲು, ತಾಂತ್ರಿಕವಾಗಿ ಇನ್ನಷ್ಟು ಮೇಲಕ್ಕೇರಲು, ಒಳ್ಳೆ ರೀತಿಯಲ್ಲಿ ಮಾರುಕಟ್ಟೆ ಕಲ್ಪಿಸಲು ಏನು ಮಾಡಬೇಕೋ ಅದನ್ನೆಲ್ಲ ಮಾಡಬೇಕು. ಚಿತ್ರ ರಂಗ ಶುರುವಾಗಿ 75 ವರ್ಷ ಆಯ್ತು..ಇನ್ನೂ ಅಳ್ತಾ ಕೂರೋದ್ರಲ್ಲೇ ಸಮಾಧಾನ ಪಟ್ಕೊಂಡ್ರೆ ಹೇಗೆ ? ಅಲ್ವಾ ಗೆಳೆಯರೇ?