ಬುಧವಾರ, ಜುಲೈ 10, 2013

ಆಹಾರ ಭದ್ರತೆ ಕಾಯ್ದೆ ಅನ್ನುವ ಹಸಿವಿನಾಟ !

ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆ ಸಾಕಷ್ಟು ವಸ್ತುನಿಷ್ಟವಾಗಿ ತನ್ನ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲೊಂದು. ಅಲ್ಲಿ ಹಿರಿಯ ಫೆಲೊ ಆಗಿರುವ ರಾಜೀವ್ ಕುಮಾರ್ ಅವರು ದಿ ಫೈನಾನ್ಶಿಯಲ್ ಎಕ್ಸ್-ಪ್ರೆಸ್ ಪತ್ರಿಕೆಯಲ್ಲಿ ಆಹಾರ ಭದ್ರತಾ ಕಾಯ್ದೆಯ ಬಗ್ಗೆ ಬರೆದಿದ್ದ ಒಂದು ಅಂಕಣ ಕನ್ನಡಕ್ಕೆ ಅನುವಾದ ಮಾಡಿ ನಿಮ್ಮೆದುರು ಇಡುತ್ತಿರುವೆ.
ಮೂಲ ಅಂಕಣ ಇಲ್ಲಿದೆ: Column: Hunger games
   
ಸುದ್ದಿವಾಹಿನಿಯೊಂದರ ನೇರಪ್ರಸಾರದಲ್ಲಿ ಕಾಂಗ್ರೆಸಿನ ಮುಖ್ಯ ವಕ್ತಾರ ಅಜಯ್ ಮಾಕೇನ್ ಬಡವರ ಬಗ್ಗೆ ಕಾಂಗ್ರೆಸಿಗಿರುವ ಕಾಳಜಿಯ ಬಗ್ಗೆ ಪ್ರಸ್ತಾಪಿಸುತ್ತ  2004ರಲ್ಲಿ ಆಹಾರ ಸಬ್ಸಿಡಿಯ ಗಾತ್ರ ಕೇವಲ 25,000 ಕೋಟಿ ರೂಪಾಯಿಯಾಗಿದ್ದರೆ ಯುಪಿಎ ಸರ್ಕಾರದ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಾಗ ಅದು 1,25,000 ಕೋಟಿ ರೂಪಾಯಿಗೆ ಏರಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಆಹಾರ ಸಬ್ಸಿಡಿಯ ಗಾತ್ರವನ್ನು ಐದು ಪಟ್ಟು ಹೆಚ್ಚಿಸುವುದರ ಮೂಲಕ ಬಡವರ ಬಗ್ಗೆಯಿರುವ ಕಾಳಜಿಯನ್ನು ಕಾಂಗ್ರೆಸ್ ಪಕ್ಷ ನಿಸ್ಸಂದೇಹವಾಗಿ ಸಾಬೀತು ಮಾಡಿದೆ ಅನ್ನುವುದು ಅವರ ವಾದವಾಗಿತ್ತು. ಇವತ್ತು ಭಾರತದ ರಾಜಕೀಯದಲ್ಲಿ, ಆರ್ಥಿಕ ಅಶಿಸ್ತು ಒಂದು ಮುಚ್ಚಿಡಬೇಕಾದ ವಿಷಯವಾಗಿರದೇ ಎದೆ ತಟ್ಟಿ ಹೊಗಳಿಕೊಳ್ಳುವ ವಿಷಯವಾಗಿದೆ. ಇದು ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು. ಅದಿರಲಿ, ಈ ಹೊತ್ತಲ್ಲಿ ಕೇಳಿಕೊಳ್ಳಬೇಕಿರುವ ಪ್ರಶ್ನೆ ಒಂದೇ. ಆಹಾರ ಭದ್ರತೆ ಕಾಯ್ದೆ ನಿಜಕ್ಕೂ ಬಡವರ ಸಹಾಯಕ್ಕೆ ಬರಲಿದೆಯೋ ಅಥವಾ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಲಿದೆಯೋ ಅನ್ನುವುದು. 

ಇವತ್ತು ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೂ ಆಹಾರದ ಕೊರತೆಯಿಂದ ಭಾರತೀಯರು ಹಸಿವಿನಿಂದ ಒದ್ದಾಡಿ ಸಾಯುವ ಸ್ಥಿತಿಯಲ್ಲಿಲ್ಲ ಅನ್ನುವುದು ಸಾಮಾನ್ಯ ಜ್ಞಾನ. ಹಾಗೆಂದ ಮಾತ್ರಕ್ಕೆ ಕೊರತೆಯೇ ಇಲ್ಲವೇ? ಇದೆ, ಖಂಡಿತ ಇದೆ. ಆದರೆ ಕೊರತೆ ಇರುವುದು ಹಸಿವು ಇಂಗಿಸಿಕೊಳ್ಳುವಲ್ಲಲ್ಲ, ಕೊರತೆ ಇರುವುದು ಪೌಷ್ಟಿಕಾಂಶ, ತರಕಾರಿ, ಹಣ್ಣು, ಮೊಟ್ಟೆ,ಮಾಂಸದಂತಹ ವಿಷಯದಲ್ಲಿ. ಯಾಕೆಂದರೆ ಅವುಗಳ ಬೆಲೆ ಬಡವರ ಕೈಗೆಟುಕದಷ್ಟು ಮೇಲಿದೆ. ಈ ಕೊರತೆಗೆ ಕಾರಣ ಭಾರತದಲ್ಲೆಲ್ಲೂ ಬಡವರಿಗೆ ಅಕ್ಕಿ-ಗೋಧಿಯಂತಹ ಕಾಳು ಸಿಗದಿರುವುದರಿಂದಂತೂ ಖಂಡಿತ ಅಲ್ಲ. ಹಾಗೇನಾದರೂ ಅಕ್ಕಿ-ಗೋಧಿಯಂತಹ ಆಹಾರದ ಕೊರತೆಯೇ ಇದ್ದಿದ್ದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಲಕ್ಷಾಂತರ ಟನ್ ಆಹಾರಧಾನ್ಯಗಳು ಹಾಳಾಗಿ ಹೋಗುತ್ತಿರುವ ಕಾರಣಕ್ಕೆ ಜನಪ್ರತಿನಿಧಿಗಳು ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದರು. ಆಹಾರ ನಿಗಮ ಹೆಚ್ಚಿನ ಬೆಲೆಗೆ ರೈತರಿಂದ ಧಾನ್ಯ ಕೊಳ್ಳುವ ಆಯ್ಕೆ ಕಣ್ಣೆದುರು ಇರುವಾಗ ಆಹಾರ ಧಾನ್ಯವೊಂದನ್ನು ಬಿಟ್ಟು ಇನ್ನಾವುದನ್ನು ಬೆಳೆಯುವ ಗೋಜಿಗೆ ರೈತರು ಹೋಗದಿರುವ ವಾತಾವರಣ ಹುಟ್ಟಲಿದೆ. ಈಗಾಗಲೇ ಕೃಷಿ ಕ್ಷೇತ್ರದ ಪೂರೈಕೆಯ ಕೊಂಡಿಯಲ್ಲಿರುವ ಏರುಪೇರು ಇನ್ನು ಹೆಚ್ಚುವ ಮತ್ತು  ಹೆಚ್ಚಿನ ಬೇಡಿಕೆಯಿರುವ ಆಹಾರ ಧಾನ್ಯವಲ್ಲದ ಇತರೇ ಆಹಾರಗಳ ಮೇಲಿನ ಹಣದುಬ್ಬರ ಕೈಮೀರುವ ಎಲ್ಲ ಅಪಾಯಗಳು ನಮ್ಮ ಕಣ್ಣ ಮುಂದಿವೆ. ಇದರ ನೇರ ಪರಿಣಾಮವಾಗಿ ಪೌಷ್ಟಿಕಾಂಶ, ತರಕಾರಿ, ಹಣ್ಣು, ಮೊಟ್ಟೆ,ಮಾಂಸದಂತಹ ಯಾವ ಆಹಾರಗಳ ಕೊರತೆ ಬಡವರು ಅನುಭವಿಸುತ್ತಿದ್ದರೋ ಅವರಿಗೆ ಈ ವಸ್ತುಗಳು ಇನ್ನಷ್ಟು ದುರ್ಲಭವಾಗುವುದರ ಜೊತೆ ಅಪೌಷ್ಟಿಕತೆಯ ಸಮಸ್ಯೆ ಎದುರಿಸಬೇಕಾಗಿ ಬರಬಹುದು ಮತ್ತು ಅದಕ್ಕೆ ನೇರ ಹೊಣೆ ಆಹಾರ ಭದ್ರತೆ ಕಾಯ್ದೆಯೇ ಆಗಲಿದೆ.

ಆದರೆ ಇದೊಂದೇ ಕೆಟ್ಟ ಪರಿಣಾಮವಲ್ಲ. ಆಹಾರ ಭದ್ರತೆಯ ಪರ ಇರುವ ಎಲ್ಲರಿಗೂ ತಿಳಿದಿರುವ ಒಂದು ಅಂಶವೆಂದರೆ ಭಾರತದ ಕಡು ಬಡವರು ಸಂಪೂರ್ಣವಾಗಿ ಪಡಿತರ ವ್ಯವಸ್ಥೆಯ ಆಚೆಯೇ ಇದ್ದಾರೆ ಅನ್ನುವುದು. ಹೆಚ್ಚಿನ ಪ್ರಮಾಣದ ಈ ಕಡು ಬಡವರು ಮುಕ್ತ ಮಾರುಕಟ್ಟೆಯಲ್ಲೇ ಆಹಾರ ಕೊಂಡು ತಮ್ಮ ಹೊಟ್ಟೆ ಹೊರೆಯಬೇಕಾದ ಸ್ಥಿತಿಯಲ್ಲಿದ್ದಾರೆ. ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ದಿನಗೂಲಿಗಳು ಸರ್ಕಾರದ ಭ್ರಷ್ಟಾಚಾರ ತುಂಬಿರುವ, ಸೋರಿಕೆಯೇ ತುಂಬಿರುವ ಪಡಿತರ ವ್ಯವಸ್ಥೆಯ ಆಚೆಯೇ ಇದ್ದಾರೆ. ಇಂದಿನ ಪಡಿತರ ವ್ಯವಸ್ಥೆಯು ಅಸಂಘಟಿತ ಜನರಿಗಿಂತ ಸಂಘಟಿತ ಜನರ ಪರವಾಗಿದೆ. ಈ ಕಡುಬಡವರು ತಮ್ಮ ದಿನ ನಿತ್ಯದ ಆಹಾರ ಧಾನ್ಯಗಳ ಅಗತ್ಯ ಈಡೇರಿಸಿಕೊಳ್ಳಲು ಇರುವ ಹಾದಿ ಮುಕ್ತ ಮಾರುಕಟ್ಟೆಯೊಂದೇ ಆಗಿರುವಾಗ ಆಹಾರ ಭದ್ರತೆ ಕಾಯ್ದೆಯಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಳವಾಗುವ ಬೆಲೆಯ ಹೊಡೆತಕ್ಕೆ ಸಿಲುಕಲಿದ್ದಾರೆ. ಯಾಕೆಂದರೆ ಆಹಾರ ನಿಗಮ ಹೆಚ್ಚೆಚ್ಚು ಧಾನ್ಯ ಖರೀದಿಸಿ ಗೋದಾಮಿಗೆ ಸಾಗಿಸುತ್ತಿದ್ದಂತೆಯೇ ಉಂಟಾಗುವ ಪೂರೈಕೆಯ ಕೊರತೆಯಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಯೇರುವುದು ಖಚಿತ. ಇದರಿಂದ ಅತಿ ಹೆಚ್ಚು ತೊಂದರೆಗೊಳಗಾವುದು ಕಡುಬಡವರೇ ಅನ್ನುವುದು ವಾಸ್ತವ. ಪರಿಸ್ಥಿತಿ ಹೀಗಿದ್ದಾಗಲೂ ಬಡವರ ಏಳಿಗೆಗಾಗಿ ದುಡಿದಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಚಾರಕ್ಕಿಳಿಯಲಿದೆ !

ಎಲ್ಲಕ್ಕಿಂತ ಅಚ್ಚರಿಯೆಂದರೆ ಇದೆಲ್ಲ ಮನ್ ಮೋಹನ್ ಸಿಂಗ್, ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಸಿ.ರಂಗರಾಜನ್ ಮತ್ತು ರಘುರಾಮ್ ರಾಜನ್ (ಐ.ಎಮ್.ಎಫ್ ನ ಮಾಜಿ ಮುಖ್ಯ ಆರ್ಥಿಕ ತಜ್ಞ) ರಂತಹ ಆರ್ಥಿಕ ಶಿಸ್ತಿನ ತಿಳುವಳಿಕೆ ಇರುವ ಜನರ ಕಣ್ಣೆದುರಲ್ಲೇ ನಡೆಯುತ್ತಿದೆ ಅನ್ನುವುದು. ಈ ಪಟ್ಟಿಗೆ ನಾನು ಚಿದಂಬರಂರಂತಹ ಅತೀ ಚಾಣಾಕ್ಷ ರಾಜಕಾರಣಿಯನ್ನು ಸೇರಿಸಲ್ಲ. ಯಾಕೆಂದರೆ ಅವರು 2008ರ ಫೆಬ್ರವರಿ ಬಜೆಟಿನಲ್ಲಿ ಸಾರ್ವಜನಿಕ ಖರ್ಚು-ವೆಚ್ಚ ಜಿಡಿಪಿಯ 3.5% ಅಂಶದಷ್ಟು ಹೆಚ್ಚಾಗಲು ಬಿಟ್ಟಿದ್ದರು ಮತ್ತು ಅದು ಅಗಾಧ ಪ್ರಮಾಣದ ವಿತ್ತೀಯ ಕೊರತೆಗೆ ಕಾರಣವಾಯಿತು. ಆದರೆ 2009ರ ಚುನಾವಣೆಯಲ್ಲಿ ಅದೇ ಯು.ಪಿ.ಎ ಕೈ ಹಿಡಿದು ಎರಡನೆಯ ಬಾರಿ ಅಧಿಕಾರದ ಗದ್ದುಗೆಗೆ ತಂದು ನಿಲ್ಲಿಸಿತು. ಆದರೆ ಆ ಆರ್ಥಿಕ ಅಶಿಸ್ತಿನ ಫಲವನ್ನು ನಾವು ಇವತ್ತಿಗೂ ಉಣ್ಣುತ್ತಿದ್ದೇವೆ. ಒಳ್ಳೆಯ ಆರ್ಥಿಕತೆಗೆ ಎಳ್ಳುನೀರು ಬಿಟ್ಟು ರಾಜಕೀಯ ಲಾಭ ಪಡೆಯುವತ್ತಲೇ ಎರಡನೆ ಯುಪಿಎ ಸರ್ಕಾರದ ಮೊದಲ ಮೂರು ವರ್ಷ ಕಳೆದು ಹೋಯಿತು. ಪರಿಣಾಮ? ಹತ್ತು ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿಗೆಯಾಗುತ್ತಿದೆ. 1991ರಿಂದ 1995ರ ನಡುವೆ ಹಣಕಾಸು ಸಚಿವಾಲಯದಲ್ಲಿ ಮನ್ ಮೋಹನ್ ಸಿಂಗ್ ಮತ್ತು ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಜೊತೆ ನಾನು ಕೆಲಸ ಮಾಡಿದ್ದೆ, ಆಗ ಅವರಿಬ್ಬರೂ ಸ್ಪರ್ಧೆಗೆ ಬಿದ್ದಂತೆ ಜನಪ್ರಿಯ ಯೋಜನೆಗಳನ್ನು ಘೋಷಿಸುವುದರಿಂದಾಗುವ ತೊಂದರೆಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ ಎಂಬಂತೆ ಮಾತನಾಡುತ್ತಿದ್ದರು. ಎಲ್ಲ ಬಿಡಿ, ಕಮಿಶನ್ ಆಫ್ ಅಗ್ರಿಕಲ್ಚರ್ ಕಾಸ್ಟ್ ಅಂಡ್ ಪ್ರೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಗುಲಾಟಿಯವರೇ ಆಹಾರ ಭದ್ರತೆ ಕಾಯ್ದೆ ಅರ್ಥ ವ್ಯವಸ್ಥೆಯ ಮೇಲೆ, ತೆರಿಗೆ ಹಣದ ಮೇಲೆ ಉಂಟು ಮಾಡಲಿರುವ ಪರಿಣಾಮಗಳ ಬಗ್ಗೆ ಬಾರಿ ಬಾರಿ ಹೇಳಿದ್ದಾರೆ, ಆದರೆ ಅದೆಲ್ಲವೂ ಬೋರ್ಗಲ್ ಮೇಲೆ ನೀರು ಸುರಿದಂತಾಯಿತೇ ಹೊರತು ಯಾವ ಪ್ರಯೋಜನವೂ ಆಗಲಿಲ್ಲ. ಇಲ್ಲಿ ಆರ್ಥಿಕ ಶಿಸ್ತಿಗಿಂತಲೂ ಕಡುಬಡವರ ಮೇಲೆ ಉಂಟಾಗಲಿರುವ ಕೆಟ್ಟ ಪರಿಣಾಮಗಳು ಆಹಾರ ಭದ್ರತೆ ಕಾಯ್ದೆ ಪರವಾಗಿರುವವರು ಮತ್ತೊಮ್ಮೆ ಯೋಚಿಸುವಂತೆ ಮಾಡಲಿ ಎಂದು ಒತ್ತಿ ಒತ್ತಿ ಹೇಳಲು ಬಯಸುವೆ.

ಆಹಾರ ಭದ್ರತೆಯನ್ನು ಕಾನೂನಿನನ್ವಯ ಒಂದು ಹಕ್ಕಾಗಿಸಿದ ಖ್ಯಾತಿ ತನ್ನದು ಎಂದು ಸರ್ಕಾರ ಕೊಚ್ಚಿಕೊಳ್ಳುವ ಅವಕಾಶವನ್ನು ಆಹಾರ ಭದ್ರತೆ ಕಾಯ್ದೆ ಕಲ್ಪಿಸಿದೆ. ಇದು ನಿಜಕ್ಕೂ ವಿರೋಧಾಭಾಸದ ಪರಮಾವಧಿಯೆನ್ನದೇ ವಿಧಿಯಿಲ್ಲ. ಆಹಾರ ನನ್ನ ಹಕ್ಕು ಎಂದು ಹಕ್ಕು ಚಲಾಯಿಸುವ ಹಂತಕ್ಕೆ ಕಡು ಬಡವರು ಎಂದಿಗಾದರೂ ಹೋಗಬಹುದು ಎಂದು ನಿಜಕ್ಕೂ ನಾವ್ಯಾರಾದರೂ ವಾದ ಮಾಡಬಹುದೇ? ಶಿಕ್ಷಣ ಹಕ್ಕು ಕಾಯ್ದೆ ಬೀದಿ ಬದಿಯಲ್ಲಿರುವ ಮಕ್ಕಳನ್ನು, ಅಪಾಯದ ವಾತಾವರಣದಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕೆಲಸ ಬಿಡಿಸಿ ಶಾಲೆಗೆ ತರುವ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆಯೇ? ಮಾಹಿತಿ ಹಕ್ಕು ಕಾಯ್ದೆ ಸರ್ಕಾರಿ ವ್ಯವಹಾರಗಳನ್ನು ಪಾರದರ್ಶಕವಾಗಿಸುವ, ಹಗರಣ ಮತ್ತು ಕ್ರೋನಿ ಕ್ಯಾಪಿಟಲಿಸಂನಿಂದ ಮುಕ್ತಗೊಳಿಸುವ ಕೆಲಸ ಮಾಡುವಲ್ಲಿ ಗೆಲುವು ಕಂಡಿದೆಯೇ? ಯೋಗ್ಯವಾದ ಕೆಲಸಗಳನ್ನು ಹುಟ್ಟಿಸದೇ ಆರ್ಥಿಕ ಹಕ್ಕು ಕಲ್ಪಿಸುವ ಈ ಆಲೋಚನೆಗಳು ನಿಜಕ್ಕೂ ಹಿಡಿತಕ್ಕೆ ಸಿಗಲಾರದಂತವು. ಇವೆಲ್ಲವೂ ಶ್ರೇಷ್ಟ ಆರ್ಥಿಕ ತಜ್ಞರ ಕಣ್ಣಂಚಿನಲ್ಲೇ ನಡೆಯುತ್ತಿರುವುದು ನಮ್ಮ ಬಾಯಿಯನ್ನು ಕಟ್ಟಿ ಹಾಕಿದೆ.

ಕಾಂಗ್ರೆಸ್ ಪಕ್ಷ ಆಹಾರ ಹಕ್ಕು ಕಲ್ಪಿಸುವ ಈ ಹೊತ್ತಿನಲ್ಲೇ 2013ರ ಕೊನೆಯ ಮೂರು ತಿಂಗಳ ಅರ್ಥ ವ್ಯವಸ್ಥೆಯ ಬೆಳವಣಿಗೆಯ ದರ 4.8%ಕ್ಕೆ ಕುಸಿದಿದೆ. 2004ರಲ್ಲಿ ಯುಪಿಎ ಸರ್ಕಾರ ಬಂದಾಗ ಈ ದರ 8.1% ಇತ್ತು ಅನ್ನುವುದು ಈಗ ನೆನೆಯಲಷ್ಟೇ ಚೆಂದದ ವಿಷಯ. ಖಾಸಗಿ ಬಂಡವಾಳ ಹೂಡಿಕೆ ಹೆಚ್ಚು ಕಡಿಮೆ ನಿಂತು ಹೋಗಿದೆ. ಬಂಡವಾಳ ಒಳ ಹರಿವಿಗಿಂತ ಹೊರ ಹರಿವು ಹೆಚ್ಚಾಗಿದೆ. ಔದ್ಯೋಗಿಕ ಕ್ಷೇತ್ರದ ಬೆಳವಣಿಗೆ 10%ನಿಂದ 2%ಗೆ ಇಳಿದಿದೆ. ಇನ್ನೇನು ಸದ್ಯದಲ್ಲೇ ಸಾಕಷ್ಟು ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಕೆಲಸ ಶುರುವಾಗಲಿದೆ. ಹೊಸ ಉದ್ಯೋಗವಕಾಶಗಳು ಬತ್ತಿ ಹೋಗಿವೆ. 15 ವರ್ಷಗಳ ಆರ್ಥಿಕ ಬೆಳವಣಿಗೆಯ ನಂತರ ಕಡುಬಡವರು ಕೂಡಾ ತಲೆಯೆತ್ತಿ ಬಾಳುವತ್ತ ಹೆಚ್ಚು ಚಿಂತೆ ಮಾಡುತ್ತಿದ್ದಾರೆಯೇ ಹೊರತು ಸರ್ಕಾರ ನೀಡುವ ಪುಕ್ಕಟ್ಟೆ ಸೌಲಭ್ಯಗಳ ಬಗ್ಗೆಯಲ್ಲ ಅನ್ನುವುದು ಇವರಿಗೆ ಅರ್ಥವೇ ಆಗಿಲ್ಲ. ಪ್ರತಿ ತಿಂಗಳು ಹತ್ತು ಲಕ್ಷ ಕೆಲಸಗಳನ್ನು ಮುಂದಿನ ಹತ್ತು ವರ್ಷ ಹುಟ್ಟಿಸಿದಾಗಲಷ್ಟೇ ಅರ್ಥ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿರುವ ಯುವಕರಿಗೆ ಕೆಲಸ ಭದ್ರತೆ ಕಲ್ಪಿಸಬಹುದು ಅನ್ನುವುದು ನಮ್ಮ ನಾಯಕರಿಗೆ ಅರ್ಥವಾಗಬೇಕಿದೆ. ಉದ್ಯೋಗವಕಾಶಗಳು ಬತ್ತುತ್ತಿದ್ದಂತೆಯೇ ಈ ಯುವಕರು ನೇರವಾಗಿ ಉಗ್ರವಾದಿಗಳು, ಮೂಲಭೂತವಾದಿಗಳ ತೆಕ್ಕೆಗೆ ಬಂದು ಬೀಳಬಹುದು. ಭಾರತ ಒಕ್ಕೂಟದ ಸಾಮಾಜಿಕ ಮತ್ತು ಆರ್ಥಿಕ ಆರೋಗ್ಯವನ್ನು ಎಂದಿಗೂ ಸರಿಪಡಿಸಲಾಗದ ಇಂತಹದೊಂದು ಸಾಧ್ಯತೆ ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು.

ಯೋಜನಾ ಆಯೋಗ ಮುಚ್ಚುವುದು ಭಾರತಕ್ಕೆ ಒಳ್ಳೆಯದು

ಜುಲೈ 10ರ ಉದಯವಾಣಿಯಲ್ಲಿ ಬಂದ ಅಂಕಣ