ಶುಕ್ರವಾರ, ಸೆಪ್ಟೆಂಬರ್ 7, 2012

ಹಿಂದಿ ಪಾಕ್ಷಿಕ ಯಾಕೆ ವಿರೋಧಿಸಬೇಕು ಗೊತ್ತೇ?

ಸೆಪ್ಟೆಂಬರ್ ಮತ್ತೆ ಬಂದಿದೆ. ಸೆಪ್ಟೆಂಬರ್ ಅಂದರೆ  ಮೊದಲು ನೆನಪಾಗ್ತಾ ಇದ್ದಿದ್ದು ಅಕ್ಷರ ಕಲಿಸಿದ ಗುರುವನ್ನು ನೆನೆಯುವ ಶಿಕ್ಷಕರ ದಿನಾಚರಣೆ. ಅದೊಂದು ಸಿಹಿ ನೆನಪು. ಆದರೆ ಇಂದು ಅದರ ಜೊತೆ ನೆನಪಾಗುವ ಇನ್ನೊಂದು ಕಹಿ ವಿಷಯವೆಂದರೆ  ಕೇಂದ್ರ  ಸರ್ಕಾರವೇ ಮುಂದೆ ನಿಂತು ಬ್ಯಾಂಕು,ವಿಮೆ, ಅಂಚೆ,ತೆರಿಗೆ, ರೈಲ್ವೆ, ವಿಮಾನ ನಿಲ್ದಾಣ, ಪಿಂಚಣಿ ಸೇರಿದಂತೆ ದೇಶಾದ್ಯಂತ ಇರುವ ತನ್ನೆಲ್ಲ ಕಚೇರಿಗಳಲ್ಲಿ  ನಡೆಸುವ "ಹಿಂದಿ ಪಾಕ್ಷಿಕ" ಅನ್ನುವ ಭಾರತದ ಭಾಷಾ ವೈವಿಧ್ಯತೆಗೆ ಮಸಿ ಬಳಿಯುವ  ಆಚರಣೆ.  ಪ್ರಜಾತಂತ್ರ, ಸಮಾನತೆಯ ಕಲ್ಪನೆಗೆ ಒಂದು ಕಪ್ಪು ಚುಕ್ಕೆಯಾಗಿರುವ ಈ ಆಚರಣೆ ಮತ್ತು ಅಂತಹದೊಂದು ಆಚರಣೆಗೆ ಇಂಬು ಕೊಡುವ ಭಾಷಾ ನೀತಿ ಬದಲಾಗಬೇಕು ಮತ್ತು ಅದರ ಜಾಗರಲ್ಲಿ  ಎಲ್ಲ ನುಡಿಗಳನ್ನು ಸಮಾನವೆಂದು ಕಾಣುವ ಹೊಸ ಭಾಷಾ ನೀತಿ ರೂಪುಗೊಳ್ಳಬೇಕು. ಅದಾಗುತ್ತಾ ಅನ್ನುವ ಚಿಂತೆ ಬೇಡ, ಹಿಂದಿಯೇತರ ನುಡಿಯಾಡುವ ಭಾರತದ ಬಹುಸಂಖ್ಯಾತ ಜನರಲ್ಲಿ ತಮ್ಮ ನುಡಿಗೆ ಸಿಗಬೇಕಾದ ಸಮಾನ ಸ್ಥಾನಮಾನದ ಬಗೆಗಿನ ಹೆಚ್ಚುತ್ತಿರುವ ಜಾಗೃತಿ ಭಾರತದ ಎಲ್ಲ ನುಡಿಗಳಿಗೂ ತಕ್ಕ ಸ್ಥಾನ ಮಾನ ಕಲ್ಪಿಸುವ ಭಾಷಾ ನೀತಿಯೊಂದನ್ನು ಇಂದಲ್ಲದಿದ್ದರೂ ನಾಳೆ ತರುವುದು ಖಂಡಿತ.

ಹಿಂದಿ ಪಾಕ್ಷಿಕ ಮಾಡಿದ್ರೆ ತಪ್ಪಾ?
ನೀವು ಕೇಳಬಹುದು. ಒಂದು 15 ದಿನ ಹಿಂದಿ ಪಾಕ್ಷಿಕ ಅಂತ ಆಚರಿಸಿದರೆ ಏನ್ ತಪ್ಪು ಅಂತ. ಪ್ರಶ್ನೆ ಯಾವುದೋ ಒಂದು 15 ದಿನದ ಆಚರಣೆಯದ್ದಲ್ಲ. ಪ್ರಶ್ನೆ ಅದರ ಹಿಂದಿನ ಮನಸ್ಥಿತಿಯದ್ದು. ನೀವೇ ಹೇಳಿ ಕರ್ನಾಟಕದ ರೈಲ್ವೇ ನಿಲ್ದಾಣಗಳನ್ನು, ಹತ್ತಾರು ಬ್ಯಾಂಕುಗಳನ್ನು, ಜೀವ ವಿಮೆಯ ಕಚೇರಿಗಳನ್ನು, ಹಳ್ಳಿ ಹಳ್ಳಿಗೂ ತಲುಪಿರುವ ಅಂಚೆ ಕಚೇರಿಗಳನ್ನು, ದೆಹಲಿಗೆ ಸಾವಿರಾರು ಕೋಟಿ ಕಪ್ಪದಂತೆ ನಮ್ಮಿಂದ ಕಳಿಸುವ ತೆರಿಗೆ ಇಲಾಖೆಗಳನ್ನು ಬಳಸುವವರು ಯಾರು? ಕರ್ನಾಟಕದ ಬಹುಸಂಖ್ಯಾತ ಕನ್ನಡಿಗರಲ್ಲವೇ? ಹಾಗಿದ್ದಾಗ ಈ ಎಲ್ಲ ಕಚೇರಿಗಳ ಆಡಳಿತ ಯಾವ ನುಡಿಯಲ್ಲಿರಬೇಕಿತ್ತು? ಕನ್ನಡದಲ್ಲಲ್ಲವೇ? ಹಾಗಿದ್ರೆ ನಿಜವಾಗಿ ಆಗಬೇಕಿದ್ದದ್ದು ಕನ್ನಡದಲ್ಲಿ ಆಡಳಿತ ನಡೆಸುವಂತೆ ಈ ಎಲ್ಲ ಇಲಾಖೆಗಳ ಉದ್ಯೋಗಿಗಳಿಗೆ ಕನ್ನಡ ತರಬೇತಿ ನೀಡುವ "ಕನ್ನಡ ಪಾಕ್ಷಿಕ"ವೋ, "ಕನ್ನಡ ಮಾಸಿಕ"ವೋ ಅಲ್ಲವೇ? ಹಾಗಿದ್ರೆ ಅದನ್ನು ಮಾಡದೇ ಇಲ್ಲಿನ ಜನರ ನುಡಿಯೇ ಅಲ್ಲದ ಹಿಂದಿಯನ್ನು ಎಲ್ಲ ಉದ್ಯೋಗಿಗಳಿಗೂ ಕಲಿಸಿ, ಕಲಿತವರಿಗೆ, ಬಳಸಿದವರಿಗೆ  ಬಹುಮಾನ, ಬೆಂಡು ಬತ್ತಾಸು ಅಂತ ಕೊಡುವುದು ಯಾವ ಮನಸ್ಥಿತಿಯನ್ನು ತೋರಿಸುತ್ತೆ? ಕನ್ನಡದ ನೆಲದಲ್ಲಿ ಕನ್ನಡಿಗರನ್ನು ಕನ್ನಡದಲ್ಲಿ ತಲುಪಿ ಅವರ ಜೀವನಕ್ಕೆ ಬೇಕಿರುವ ಈ ಎಲ್ಲ ಇಲಾಖೆಗಳ ಸೇವೆಗಳನ್ನು ಅವರಿಗೆ ತಲುಪಿಸಬೇಕು ಅನ್ನುವ ಸೇವಾ ಮನೋಭಾವನೆಯೋ ಇಲ್ಲ ಜನರ ಪಾಡು ಕಟ್ಟಿಕೊಂಡು ನಮಗೇನಾಗಬೇಕು, ಒಟ್ನಲ್ಲಿ ಎಲ್ಲ ಹಿಂದಿಯಲ್ಲೇ ನಡೆಯಬೇಕು ಅನ್ನುವ ಹಿಂದಿ ಸಾಮ್ರಾಜ್ಯಶಾಹಿ ಮನಸ್ಥಿತಿಯೋ? "ಹಿಂದಿ ಬೇಕೇ ಬೇಕು" ಅನ್ನುವ ನೀತಿಯಿರುವುದರಿಂದಲೇ ಅಲ್ಲವೇ ಕರ್ನಾಟಕದ ಯಾವುದೋ ಬ್ಯಾಂಕಿನ ಒಂದು ಗುಮಾಸ್ತನ ಹುದ್ದೆಗೂ ಹಿಂದಿಯಲ್ಲೇ ಅರ್ಜಿ ಬರೆಯಬೇಕು, ಹಿಂದಿಯಲ್ಲೇ ಇಂಟರ್ ವ್ಯೂ ತೆಗೆದುಕೊಳ್ಳಬೇಕು ಅನ್ನುವ ನೀತಿ ನಿಯಮ ರೂಪುಗೊಂಡಿರುವುದು? ಅಂತಹ ನೀತಿಗಳಿಂದಲೇ ಅಲ್ಲವೇ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ "ಹಿಂದಿ ಬಾರದ" ಕನ್ನಡಿಗರು ಉದ್ಯೋಗ ವಂಚಿರಾಗುತ್ತಿರುವುದು? ರಾಜಭಾಷಾ ಆಯೋಗ ಅನ್ನುವ ಸಂಸ್ಥೆ ರೂಪಿಸಿಕೊಂಡು ದೇಶವನ್ನೇ ಮೂರು ವಲಯದಲ್ಲಿ ಹಂಚಿ, ಪ್ರತಿ ವಲಯಕ್ಕೂ ವರ್ಷಕ್ಕಿಷ್ಟು ಹಿಂದಿ ಬಳಸಲೇಬೇಕು ಅನ್ನುವ ಗುರಿ ಕೊಟ್ಟು, ವರ್ಷಕ್ಕೊಮ್ಮೆ ಹಿಂದಿ ಪಾಕ್ಷಿಕ ಅನ್ನುವ ಹೆಸರಲ್ಲಿ ಅದನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಭಾಷಾ ಸಮಾನತೆ ಬಯಸುವ ಯಾರಾದರೂ ಒಪ್ಪಲಾದಿತೇ? ಈಗ ಹೇಳಿ, ಹಿಂದಿ ಪಾಕ್ಷಿಕವನ್ನು ವಿರೋಧಿಸುವುದು ಸರಿಯೋ ತಪ್ಪೋ?

ಇದು ಹಿಂದಿ, ಹಿಂದಿ ಭಾಷಿಕರ ವಿರೋಧವಲ್ಲ
ನನಗೆ ಗೊತ್ತು ನಾನು ಹೀಗೆ ಬರೆದ ಕೂಡಲೇ "ಹಿಂದಿ ಜನರ ದ್ವೇಷಿ, ಹಿಂದಿ ದ್ವೇಷಿ" ಎಂದೆಲ್ಲ ಕೆಲವರು ದೂಷಿಸುತ್ತಾರೆಂದು. ಅವರಿಗೆ ನಾನು ಹೇಳುವುದು ಇಷ್ಟೇ. ಇದು ಹೇರಿಕೆಯ ವಿರುದ್ಧದ ನೋವಿನ ಕೂಗೇ ಹೊರತು ಹಿಂದಿ ನುಡಿಯಾಗಲಿ, ಇಲ್ಲವೇ ಹಿಂದಿಯಾಡುವ ಜನರ ಬಗೆಗಿನ ವಿರೋಧವಲ್ಲ. ಎಲ್ಲ ವೈವಿಧ್ಯತೆಯೂ ಉಳಿಯಬೇಕು ಅನ್ನುವಾಗ ಹಿಂದಿಯೂ ಉಳಿಯಬೇಕು, ಹಿಂದಿ ಜನರು ಏಳಿಗೆಯಾಗಬೇಕು,, ಆದರೆ ಇದು ನನ್ನ ನುಡಿ, ನನ್ನ ಜನರನ್ನು ನನ್ನ ನೆಲದಲ್ಲೇ ಎರಡನೆಯ ದರ್ಜೆಯ ಪ್ರಜೆಯಾಗಿಸುವ ಹೇರಿಕೆಯ ರೂಪದಲ್ಲಿ ಬಂದಾಗ ಅಂತಹ ಹೇರಿಕೆಯನ್ನು ಎಂದಿಗೂ ಒಪ್ಪಲಾಗದು. ಸಮಾನತೆಯ ತತ್ವದ ಮೇಲೆ ಕಟ್ಟಲಾದ ಭಾರತ ಒಕ್ಕೂಟದಲ್ಲಿ ಯಾವುದೋ ಒಂದು ನುಡಿಗೆ ಎಲ್ಲಕ್ಕಿಂತ ಹೆಚ್ಚಿನ ಅಧಿಕಾರ, ಸ್ಥಾನಮಾನ, ಹಣ ಎಲ್ಲವೂ ಕೊಟ್ಟು, ಅದಕ್ಕಿಂತಲೂ ಹಳೆಯ ಶ್ರೀಮಂತ ಭಾಷೆಗಳನ್ನು ಅವುಗಳನ್ನಾಡುವ ಜಾಗದಲ್ಲೇ ಮೂಲೆಗುಂಪಾಗಿಸುವ ಇಂತಹ  ಭಾಷಾ ನೀತಿ ಬದಲಾಗಬೇಕಲ್ಲವೇ?

ಬದಲಾವಣೆಯ ದಾರಿ ಯಾವುದು?
ಈ ಬದಲಾವಣೆ ಹೇಗೆ ಮಾಡುವುದು ಅನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೆ ನನ್ನ ಉತ್ತರ" ಯಾವುದೇ ಸಾಮಾಜಿಕ ಬದಲಾವಣೆ ನಿರಂತರ ಪ್ರಯತ್ನ, ಜಾಗೃತಿಯ ಫಲದಿಂದಲೇ ಆಗುವುದು." ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಪರದೆ ಆಗಲೇ ಸರಿದಾಗಿದೆ. ಹಲವು ಭಾಷಿಕರಲ್ಲಿ ಈ ಬಗ್ಗೆ ಜಾಗೃತಿಯಾಗಿದೆ.  ಇದೇ ರೀತಿ ಮುಂದುವರೆದು ಬೇರೆ ಬೇರೆ ಜನರ ಕೂಗು ಅವರನ್ನು ಆಳುವ ರಾಜಕೀಯ ಪಕ್ಷಗಳ ಮುಖಂಡರ ಕಿವಿಗೆ ದೊಡ್ಡ ಮಟ್ಟದಲ್ಲಿ ಬೀಳುವ ದಿನ ಬಂದಾಗ ಭಾರತದ ಸಂಸತ್ತಿನಲ್ಲಿ ಭಾರತದ ಭಾಷಾ ನೀತಿ ಬದಲಾಯಿಸಿ, ಸಂವಿಧಾನದ ೮ನೇ ಪರಿಚೇದದಲ್ಲಿರುವ ಎಲ್ಲ 22 ಭಾಷೆಗಳನ್ನು ಭಾರತದ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆ ಎಂದು ಘೋಷಿಸುವ ಕಾನೂನು ಬರುವ ದಿನ ಬಂದೇ ಬರುತ್ತೆ. ಅಲ್ಲಿಯವರೆಗೂ ನಾವು ನಮಗೆ ಲಭ್ಯವಿರುವ ಎಲ್ಲ ಅವಕಾಶಗಳನ್ನು, ಮಾಧ್ಯಮಗಳನ್ನು ಬಳಸಿಕೊಂಡು ಸರಿಯಾದ ಭಾಷಾ ನೀತಿಗಾಗಿ ಧ್ವನಿ ಎತ್ತುತ್ತಲೇ ಇರಬೇಕು. ಅದರಂತೆ ಈ  ಬಾರಿಯ "ಹಿಂದಿ ಪಾಕ್ಷಿಕ" ಆಚರಣೆಯ ಸಮಯದಲ್ಲಿ  ಭಾರತದ ಭಾಷಾ ನೀತಿ ಬದಲಾಗಬೇಕು ಎಂದು ಭಾರತ ಸರ್ಕಾರಕ್ಕೆ ಕರ್ನಾಟಕದಲ್ಲಿ ಅದರ ಪ್ರತಿನಿಧಿಯಾಗಿರುವ ರಾಜ್ಯಪಾಲರ ಮೂಲಕ ಹಿಂದಿಯೇತರ ನುಡಿಯಾಡುವ ಜನರ ಪರವಾಗಿ ಆನ್ ಲೈನ್ ಪಿಟಿಶನ್ ಒಂದನ್ನು ಶುರು ಮಾಡಿರುವೆ. ಈಗಾಗಲೇ ದೇಶ ವಿದೇಶದ ಹಲವು ನುಡಿಯಾಡುವ 870ಕ್ಕೂ ಹೆಚ್ಚು ಜನರು ( ಈ ಬ್ಲಾಗ್ ಬರೆಯುವ ಹೊತ್ತಿಗೆ) ಈ ಪಿಟಿಶನ್ನಿಗೆ ಸಹಿ ಹಾಕುವ ಮೂಲಕ ಭಾಷಾ ನೀತಿ ಬದಲಾಗಲಿ ಅನ್ನುವ ಕೂಗಿಗೆ ಧ್ವನಿಯಾಗಿದ್ದಾರೆ. ಒಂದು ಆನ್ ಲೈನ್ ಪಿಟಿಶನ್ ಮಾಡಿದ ಕೂಡಲೇ ಮಿರಾಕಲ್ ಆಗಿ ಬಿಡುತ್ತಾ? ಖಂಡಿತ ಇಲ್ಲ. ಆದರೆ ಇಂತಹ ಪ್ರತಿಭಟನೆಯ ಇಂತಹ ಚಿಕ್ಕ ಚಿಕ್ಕ ಹೆಜ್ಜೆಗಳೇ ನಾಳಿನ ಬದಲಾವಣೆಗೆ ಮುನ್ನುಡಿ ಬರೆಯುವಂತಹವು. ಇದೇ ಸೆಪ್ಟೆಂಬರ್ 14 ಪಾಕ್ಷಿಕದ ಕೊನೆ ದಿನ ಹಿಂದಿ ದಿವಸ್ ಆಚರಿಸುವ ಹೊತ್ತಿನಲ್ಲಿ ಈ ಪಿಟಿಶನ್ ಅನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಪ್ರಜಾಸತ್ತಾತ್ಮಕ ಹಾದಿಯಲ್ಲೇ ಜನರ ಕೂಗನ್ನು ಆಳುವವರಿಗೆ ತಲುಪಿಸಬೇಕು. ಆ ಕೆಲಸಕ್ಕೆ ನಾವೆಲ್ಲರೂ ಮುಂದಾಗೋಣ. ಪಿಟಿಶನ್ನಿಗೆ ನೀವು ಸಹಿ ಹಾಕಿ, ನಿಮ್ಮ ಕಮ್ಮಿ ಅಂದ್ರೂ ಹತ್ತು ಗೆಳೆಯರಿಗೆ ಮನವರಿಕೆ ಮಾಡಿ ಅವರ ಕೈಯಲ್ಲೂ ಸಹಿ ಹಾಕಿಸಿ. ಒಟ್ಟಾಗಿ ಸೇರಿ ಅತ್ಯಂತ ಪ್ರಜಾಸತ್ತಾತ್ಮಕ ಹಾದಿಯಲ್ಲಿ ನಮ್ಮ ಮನದಾಳದ ಮಾತನ್ನು ಕೇಂದ್ರಕ್ಕೆ ತಲುಪಿಸೋಣ ಮತ್ತು ನಮಗೆ ಬೇಕಿರುವ ಬದಲಾವಣೆ ತಂದುಕೊಳ್ಳುವತ್ತ ಮುಂದಾಗೋಣ.ಮತ್ಯಾಕೆ ತಡ, ಬನ್ನಿ ಕೈ ಜೋಡಿಸಿ.

ಪಿಟಿಶನ್ ಕೊಂಡಿ: http://www.change.org/en-IN/petitions/government-of-india-through-honourable-governor-of-karnataka-declare-all-scheduled-languages-of-india-as-official-languages


೯ನೇ ಸೆಪ್ಟೆಂಬರ್ ಸಂಜೆ ಹೊತ್ತಿಗೆ  ಕನ್ನಡದ ಹಲವು ಚಿಂತಕರು, ಸಾಹಿತಿಗಳು ಕೂಡ ಸಮಾನತೆಯ ಈ ಕೂಗಿಗೆ ಸಹಿ ಹಾಕುವ ಮೂಲಕ ಧ್ವನಿಗೂಡಿಸಿದ್ದಾರೆ. ಈ ಹೊತ್ತಿಗೆ ಬೆಂಬಲ ಸೂಚಿಸಿದ ಹಿರಿಯರ ಪಟ್ಟಿ ಇಂತಿದೆ:
೧> ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರ‍ೀ ನಲ್ಲೂರು ಪ್ರಸಾದ್ ಅವರು
೨> ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಖ್ಯಾತ ಚಿಂತಕರು ಆದ ಶ್ರೀ ಚಂದ್ರಶೇಖರ ಪಾಟೀಲ್ (ಚಂಪಾ) ಅವರು
೩> ಶಿಕ್ಷಣ ತಜ್ಞರಾದ ಶ್ರೀ ನಿರಂಜನಾರಾಧ್ಯ ಅವರು
೪> ಖ್ಯಾತ ಚಿಂತಕರಾದ ಶ್ರೀ ಪಿ.ವಿ.ನಾರಾಯಣ ಅವರು
೫> ಖ್ಯಾತ ಇತಿಹಾಸ ತಜ್ಞ ಮತ್ತು ಸಾಹಿತಿಗಳಾದ ಶ್ರ‍ೀ ಚಿದಾನಂದ ಮೂರ್ತಿಯವರು
೬> ಹಿರಿಯ ಸಾಹಿತಿಗಳಾದ ಶ್ರ‍ೀ ಎಲ್.ಎಸ್. ಶೇಷಗಿರಿರಾವ್ ಅವರು