ಬುಧವಾರ, ಡಿಸೆಂಬರ್ 29, 2010

ABVP ಸಮಾವೇಶಕ್ಕೆ ಹಿಂದಿ ಬ್ಯಾನರ್ ಯಾಕೆ?

ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ, ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ.

ಎಲ್ಲ ಓಕೆ, ಹಿಂದಿ ಬ್ಯಾನರ್ ಯಾಕೆ?
ಸಮಾವೇಶ ಮಾಡೋದು, ಜನರನ್ನ ಸೇರಿಸೋದು, ತಮ್ಮ ನಿಲುವನ್ನ ಹೇಳಿಕೊಳ್ಳೊ ಅವಕಾಶ ಎಲ್ಲ ಸಂಘಟನೆಗಳಿಗೂ ಇದೆ. ಅದನ್ನೇ ABVPನೂ ಮಾಡಿದ್ರೆ ತಪ್ಪೇನಿಲ್ಲ, ಆದರೆ ಇದೇ ನೆಪದಲ್ಲಿ ಬೆಂಗಳೂರಲ್ಲಿ ಎಲ್ಲೆಡೆ ಹಿಂದಿ ಬ್ಯಾನರ್ ಹಾಕುವ ಉದ್ದೇಶವೇನು? ’ಹಿಂದಿ’ಗೂ ಬೆಂಗಳೂರಿಗೂ, ಇಲ್ಲವೇ ಕರ್ನಾಟಕಕ್ಕೂ ಏನ್ ಸಂಬಂಧ? ಸಮಾವೇಶಕ್ಕೆ ಬರೋ ಪರಭಾಷಿಕರಿಗಾಗಿ ಇಂಗ್ಲಿಷ್ ಅಲ್ಲಿ ಮಾಹಿತಿ, ಕನ್ನಡಿಗರಿಗಾಗಿ ಕನ್ನಡದಲ್ಲಿ ಮಾಹಿತಿ ಸಾಕಾಗಲ್ವಾ? ಅದ್ಯಾಕೆ ಬೇಡದಿದ್ದರೂ ’ಹಿಂದಿ’ನಾ ಕರ್ನಾಟಕಕ್ಕೆ ತೂರಿಸೋದು? ಇದೇ ಅಲ್ವಾ  ಹಿಂದಿ ಹೇರಿಕೆ ಅಂದರೆ ? ಹಿಂದಿ ರಾಷ್ಟ್ರ ಭಾಷೆ ಅನ್ನೋ ಸುಳ್ಳನ್ನೇ ಸಾವಿರದ ಒಂದನೇ ಸಾರಿ ಕನ್ನಡಿಗರ ತಲೆಗೆ ತುಂಬೋದು ಇದರ ಹಿಂದಿನ ಉದ್ದೇಶವಾ? ಪಾಟ್ನಾದಲ್ಲೋ, ಲಕ್ನೋದಲ್ಲೋ ನಡೆಯುವ ಸಮಾವೇಶದಲ್ಲೂ ಹೀಗೆ ಕನ್ನಡ ಬ್ಯಾನರ್ ಹಾಕ್ತಾರಾ? ನಿಜವಾದ ರಾಷ್ಟ್ರವಾದಿಗಳು ಅನ್ನೋರು ರಾಷ್ಟ್ರದ ಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣಬೇಕಿತ್ತಲ್ವಾ? ಅದ್ಯಾಕೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಅನ್ನೋ ಧೋರಣೆ?   ಭಾರತದ ಭಾಷಾ ವೈವಿಧ್ಯತೆಯೇ ದೇಶದ ಏಕತೆಗೆ ಭಂಗ ತರುತ್ತಿರುವ ಅಂಶ, ಆದ್ದರಿಂದ ಅವೆಲ್ಲವನ್ನು ಗೌಣವಾಗಿಸಿ, ಹಿಂದಿಯೊಂದನ್ನೇ ದೇಶದ ಭಾಷೆ ಆಗಿಸಿ ಬಿಟ್ರೆ ದೇಶದಲ್ಲಿ ಏಕತೆ ತುಂಬಿ ತುಳುಕುತ್ತೆ ಅನ್ನೋ ಭ್ರಮೆಯಲ್ಲಿರುವವರಿಂದ ಇನ್ನೇನು ತಾನೇ ನಿರೀಕ್ಷಿಸಲಾದೀತು ಅನ್ನಿಸುತ್ತೆ.

ಗುರುವಾರ, ಡಿಸೆಂಬರ್ 16, 2010

ಕನ್ನಡ ಮಿಡಿಯಾ - ಎಡವುತ್ತಿರುವುದೆಲ್ಲಿ ?

ನಾವು ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ  ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು
’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಆದರೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಪ್.ಎಮ್ ರೇಡಿಯೊಗಳು ಕೆಲವೇ ಕೆಲವು ವರ್ಷಗಳಲ್ಲಿ ಕನ್ನಡ ಅಪ್ಪಿಕೊಂಡು ಅತಿ ಹೆಚ್ಚು ವ್ಯಾಪಾರ ಮಾಡುವಂತಾದದ್ದು ನಾವೆಲ್ಲರೂ ಕಂಡುಕೊಂಡ ಸತ್ಯ.

ಈಗ ಬೆಂಗಳೂರಿನ ಹಿಂದಿ ಹಾಡು ಹಾಕುವ ಏಕೈಕ ಸ್ಟೇಶನ್ ಆದ ರೇಡಿಯೊ ಒನ್ ವಾಹಿನಿಯ ನ್ಯಾಷನಲ್ ಮಾರ್ಕೆಟಿಂಗ್ ಹೆಡ್ ಶೈಜು ಅವರ ಪ್ರಕಾರವೇ ಬೆಂಗಳೂರಿನ ಎಫ್.ಎಮ್ ಮಾರುಕಟ್ಟೆಯಲ್ಲಿ ’ಹಿಂದಿ’ಗಿರುವ ಪಾಲು ಹೆಚ್ಚೆಂದರೆ 14%. ಕನ್ನಡ ವಾಹಿನಿಗಳನ್ನು ಕೇಳುವವರ ಸಂಖ್ಯೆಯ ಮುಂದೆ ಹಿಂದಿ ಕೇಳುಗರ ಸಂಖ್ಯೆ ನಗಣ್ಯ ಅನ್ನುವ ಮಾತನ್ನು ಅವರು ಆಡಿದ್ದಾರೆ. ಕನ್ನಡ ಮನರಂಜನೆ ಅನ್ನುವುದು ಬೆಂಗಳೂರಿನ, ಕನ್ನಡ ಗ್ರಾಹಕರ ಮೊದಲ ಆಯ್ಕೆ ಅನ್ನುವುದು ನಿಜ ಸ್ಥಿತಿಯಾಗಿರುವಾಗ, ಕನ್ನಡ ಮಾಧ್ಯಮಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ನನ್ನ ಮನಸ್ಸಲ್ಲಿ ಏಳುತ್ತಿರುವ ಹಲವು ಪ್ರಶ್ನೆಗಳು ಇಂತಿವೆ.

  • ಅದ್ಯಾಕೆ ಕನ್ನಡದ ಹೆಸರಾಂತ ಪತ್ರಿಕೆಗಳು ಹಿಂದಿ ಚಿತ್ರರಂಗ, ಚಿತ್ರಗಳು, ಹಿಂದಿ ಸಿನೆಮಾ ತಾರೆಯರನ್ನು ಹೆಗಲ ಮೇಲೆ ಹೊತ್ತು ಮೆರೆಸುವುದು?
  • ಅದ್ಯಾಕೆ ಕನ್ನಡದ 24X7 ಸುದ್ದಿ ವಾಹಿನಿಗಳ ಫಿಲ್ಮಿ ಫಂಡಾ, ರಂಜನೆ ಮನರಂಜನೆಯಂತಹ ಸಿನೆಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಕನ್ನಡಕ್ಕಿಂತ ತುಸು ಹೆಚ್ಚೇ ಹಿಂದಿ ಚಿತ್ರಗಳ ಬಗ್ಗೆ ಮಾಹಿತಿ ನೀಡಲು ತುದಿಗಾಲ ಮೇಲೆ ನಿಂತುಕೊಳ್ಳುವುದು?
  • ಯಾಕೆ ಕನ್ನಡದ ಮನರಂಜನೆ ವಾಹಿನಿಗಳ ಡ್ಯಾನ್ಸ್, ಹಾಡು ಮುಂತಾದ ಕಾರ್ಯಕ್ರಮಗಳಲ್ಲಿ ಸುಖಾಸುಮ್ಮನೆ ಹಿಂದಿ ಹಾಡುಗಳನ್ನು ತೂರಿಸುವುದು?
  • ಕನ್ನಡಿಗರಿಗೆ ಹಿಂದಿ ಮನರಂಜನೆಯೇ ಬೇಕಿದ್ದಲ್ಲಿ, ಅದು ಹೇಗೆ ಬೆಂಗಳೂರಿನ 80% ಕ್ಕೂ ಹೆಚ್ಚು ಜನರು ಕನ್ನಡ ಎಫ್.ಎಮ್ ವಾಹಿನಿಗಳನ್ನು ಕೇಳುತ್ತಿದ್ದಾರೆ ?
  • ಕನ್ನಡಿಗರಿಗೆ ನಿಜಕ್ಕೂ ಅಷ್ಟೇನು ಮಹತ್ವವಿಲ್ಲದ ಹಿಂದಿ,ತಮಿಳು,ತೆಲುಗು ಚಿತ್ರಗಳ ಬಗ್ಗೆ ನೀಡುವ ಪ್ರಚಾರ ನಿಜಕ್ಕೂ disproportionate ಅನ್ನಿಸುವುದಿಲ್ಲವೇ? 
  • ಕನ್ನಡಿಗರ ಮಾರುಕಟ್ಟೆಯನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮಾಡುತ್ತಿರುವ ಈ ರೀತಿಯ ಎಡವಟ್ಟುಗಳು ನಾವೇ ಕೈಯಾರೇ ಇಲ್ಲದಿರುವ ಮಾರುಕಟ್ಟೆಯನ್ನು ಪರಭಾಷಾ ಚಿತ್ರಗಳಿಗೆ ಕಲ್ಪಿಸಿಕೊಡುವಂತೆ ಮಾಡುತ್ತಿಲ್ಲವೇ?
ಕನ್ನಡದ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರು ಈ ಬಗ್ಗೆ ಗಮನ ಹರಿಸಿ, ಬದಲಾವಣೆ ಮಾಡಿಕೊಂಡರೆ ಅವರಿಗೂ ಲಾಭ, ಕನ್ನಡದ ಗ್ರಾಹಕನಿಗೂ ಲಾಭ, ಕನ್ನಡ ಭಾಷೆಯ ಉಳಿವು, ಬೆಳವಿಗೂ ಪೂರಕ ಅನ್ನುವುದು ನನ್ನ ಅನಿಸಿಕೆ.

ಸೋಮವಾರ, ಸೆಪ್ಟೆಂಬರ್ 13, 2010

Language Policy that is apt for India !

ಏನ್ ಗುರು ಬ್ಲಾಗಿನಲ್ಲಿ ಬಂದ "ಭಾರತಕ್ಕೊಪ್ಪೋ ಭಾಷಾನೀತಿ..." ಎಂಬ ಅಂಕಣವನ್ನು ಗೆಳೆಯ ಸಂದೀಪ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ಅತ್ಯಂತ ಸರಳವಾದ ಶೈಲಿಯಲ್ಲಿ ಬರೆದಿರುವ ಅಂಕಣವನ್ನು ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸುತ್ತಿರುವೆ. ನೀವು ಓದಿ, ನಿಮ್ಮ ಕನ್ನಡೇತರ ಗೆಳೆಯರೊಂದಿಗೂ ಹಂಚಿಕೊಳ್ಳಿ..  - ವಸಂತ

India is a vast country of several peoples, cultures, customs, and beliefs. Politically, after having obtained independence in 1947, several prominent challenges that faced us as a nation were: "How to govern this diverse country of ours? How to keep it united?..." etc.

India stumbled in the very first step
Well before independence, the designs for a post-independent India were discussed in the several sessions of the Indian National Congress. The idea of having Hindi as India's national language too was discussed and debated. Post independence, there were also efforts in this direction. But owing to opposition from non-Hindi speaking areas the idea did not see the light of day. A parliamentarian by name Dhulekar even once commented that "people who do not know Hindustani have no right to stay in India". T.T. Krishnamachari, in a bitter response, had said, "it is up to my friends in U.P. to have a whole-India; it is up to them to have a Hindi-India", and had warned of India's division if Hindi was made the sole national language of India. After three years of exhaustive discussions the Indian Constitution was framed, and brought into effect in 1950.


Approval for Hindi propagation in the Constitution
Though it was not declared in the constitution as the sole National Language, Hindi was given a new special status, 'Raj Bhasha', thus declaring it the official language of communication for the Government of India, along with English for the next 15 years. However, those non-Hindi speakers who fought against the National Language tag for Hindi were relieved by the fact that the Indian constitution had not used the word 'National Language', when referring to Hindi. But the fact that Article 351 of the Constitution makes it the duty of the Union Government to promote the spread of Hindi, clearly reflects the character of language policy adopted in India, and in reality the Union Government by then had already laid the foundation stone for the grand establishment of Hindi in every Indian home. So, the relief was only limited to the fact that Hindi was not given the National Language tag.

It was written in the pages of the Constitution that "it shall be the duty of the Union to promote the spread of the Hindi language" (Article 351) throughout India. With the objective of making Hindi the sole official language and help its spread across India, it was mandated that a commission be constituted for the progressive use of Hindi and restrict the use of English (Article 344). And communication between the states and the Union, and among the states was mandated to be in English or Hindi (Article 345).

Programs for the spread of Hindi
Whenever possible, efforts were made to establish the supremacy of Hindi. By appointing a language Committee, in 1963 efforts were made to remove English as an official language and to retain Hindi alone in that position. But when there was wide-spread opposition to such a move in Tamil Nadu, an amendment was made in 1965 to continue to retain English in that position. So what? Hindi was given the special privilege for propagation across India, that was denied for any other language. Several hundred crores are being spent from the taxpayers' money for the spread of Hindi. On the other hand 'Hindi Prachar Sabhas' were established in every nook and corner of the country. Thus it became India's official policy to spread Hindi through persuasion, incentive and goodwill.

Department of Official Language
For the purposes of meeting such an objective the Department of Official Language was opened. Through this department designs for the establishment of Hindi in the institutions under or affiliated to the Central Government were formed and the rules for the use of the official language for communication in India were formulated. The specifications of The Official Languages Rules, that came into effect in 1976, seemed to provide more velocity to the efforts of the establishment of Hindi. But the discriminatory nature of this law was very apparent. Because the very first lines of this law mention that it is not applicable to the state of Tamil Nadu. The fact that this law mandates that any letter written in Hindi in a Central Government office in any corner of the country should be replied to only in Hindi, clearly reflects the Hindi-Colonial mindset.

Recognition for Hindi alone
It is clear that the overall language policy of India is to give exclusive encouragement for the development of Hindi. If this encouragement was limited to the Hindi speaking regions we could have asked for the same kind of encouragement for our languages too. But the Union Government's efforts towards encouragement of Hindi are focused at establishing it in our state. This discriminatory language policy is clearly against the United Nations' language policy. So then, India's language policy should be such that....

Language Policy that is apt for India
The language policy for a pluralistic India should be such that it should help retain and develop plurality and diversity. The language policy should be such that it should provide every language group their rights, that is their linguistic rights as specified in UNESCO's Universal Declaration of Linguistic Rights. Let the status of Official language be given to every language of India. Let the communication among states happen in languages of those states. Let there be a language policy that allows every state to use its language in government, education and for the purposes of building livelihoods of their people. Thus India's language policy needs to be reformulated such that every language, belonging to a particular region, is ensured a supreme status in that region. In effect, all languages defined in the Eighth schedule of the Constitution should be given equal rights and status. India's language policy should be so formulated that it should enable the participation of every person, people and language group in the path towards development, it should not affect linguistic diversity, it should aid in the achievement of effective communication and cohesion, it should help create an environment where it is possible for every language group to conduct itself in a way that complements the all round development of all other language groups, their environments and cultures.

Parting Comments
There is nothing wrong in amending the Constitution so that it facilitates the development of a language policy that is apt for a country like India, which is comprised of linguistically diverse regions.

ಮಂಗಳವಾರ, ಆಗಸ್ಟ್ 24, 2010

ಜನಾ ಜನಾ ಜನಾ ... ಈ ಸಮಸ್ಯೆ ನಿಜಾನಾ?

ಜನಸಂಖ್ಯೆನೇ ನಮ್ಮ ದೇಶದ ಅತಿ ದೊಡ್ಡ ಸಮಸ್ಯೆ, ಜನಸಂಖ್ಯೆ ಕಡಿಮೆ ಮಾಡಿಕೊಳ್ಳದೇ ಹೋದ್ರೆ ನಮ್ಮ ಕತೆ ಅಷ್ಟೇ ಅನ್ನುವ ಮಾತು ನಾನು ಚಿಕ್ಕವನಾಗಿದ್ದಾಗಿನಿಂದಲೂ ಕೇಳುತ್ತಲೇ ಬಂದಿದ್ದೇನೆ. ಆದರೆ overpopulation is a myth ಅನ್ನುವ ಆನ್ ಲೈನ್ ತಾಣದಲ್ಲಿನ ಕೆಲವು ವಿಡಿಯೋಗಳನ್ನು ನೋಡಿದ ಮೇಲೆ ಜನಸಂಖ್ಯೆ ಗುಮ್ಮ ಎಷ್ಟು ನಿಜ ಅನ್ನುವ ಬಗ್ಗೆ ಗುಮಾನಿ ಏಳುತ್ತೆ.

ಆಫ್ರಿಕಾವೊಂದೇ ಸಾಕು !
ಜನಸಂಖ್ಯೆ ಜಾಸ್ತಿ ಆದ್ರೆ ಜಗತ್ತಲ್ಲಿ ಆಹಾರದ ಕೊರತೆಯಾಗಿ ಜನ ನರಳಬಹುದು ಅಂತಾರೆ. ಅದು ನಿಜವಾ? ಇಲ್ಲ ಅನ್ನುತ್ತೆ ಈ ವಿಡಿಯೋ. ಅಷ್ಟೇ ಅಲ್ಲ, ಆಫ್ರಿಕಾ ಖಂಡವೊಂದರಲ್ಲೇ ಸರಿಯಾಗಿ ಕೃಷಿ ಮಾಡಿದರೆ ಇಡೀ ಜಗತ್ತಿನ ಅನ್ನದ ಬೇಡಿಕೆಯನ್ನು ಅದೊಂದೇ ಖಂಡ ಪೂರೈಸಬಲ್ಲುದು ಅನ್ನುತ್ತೆ ಈ ವಿಡಿಯೋ.



ಆಹಾರ ಕೊರತೆ ನೀಗಿಸಬೇಕಾ? ಬಡವರನ್ನ ಕೊಲ್ಲಿ !
ಹಾಗಿದ್ರೆ,, ಈ ಜನಸಂಖ್ಯೆಯ ಗುಮ್ಮ ಹೇಗೆ ಶುರುವಾಯ್ತು? ಅದು ಈ ಶತಮಾನವಲ್ಲ, 18ನೇ ಶತಮಾನದಲ್ಲೇ ಶುರುವಾಗಿದ್ದು ಅನ್ನುತ್ತೆ ಈ ವಿಡಿಯೋ. ಅಷ್ಟೇ ಅಲ್ಲ, ಆಹಾರ ಕೊರತೆ ನೀಗಿಸಲು ಇರುವ ಹಾದಿಯೆಂದರೆ ಬಡವರನ್ನು ಕೊಲ್ಲುವುದು ಎಂದು ಪ್ರತಿಪಾದಿಸಿದ್ದ ಥಾಮಸ್ ಮ್ಯಾಲ್ತಸ್ ಅನ್ನುವವನ ತಲೆಕೆಟ್ಟ ಐಡಿಯಾದ ಬಗ್ಗೆಯೂ ಮಾತಾಡುತ್ತೆ.



TFR = 2.1 ಯಾಕಿರಬೇಕು ?
ಅಷ್ಟೇ ಅಲ್ಲ, ಕೊನೆಯಲ್ಲಿ, ಜಗತ್ತಿನಲ್ಲಿ ಯಾವುದೇ ಜನಾಂಗ ಬೆಳಿದೇ ಹೋದರೂ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ ಏನು? TFR (Total Fertility Rate = Average number of children each women in a society is having) ಪ್ರಮಾಣ 2.1 ಯಾಕಿರಬೇಕು? 2.1ಕ್ಕಿಂತ ಕೆಳಗೆ ಹೋಗಿರುವ ಜಪಾನನಂತಹ ದೇಶದಲ್ಲಿ ಇವತ್ತು ಉಂಟಾಗಿರುವ ಸಾಮಾಜಿಕ ಸಮಸ್ಯೆ ಏನು? ಅನ್ನುವುದನ್ನು ಈ ಕೆಳಗಿನ ವಿಡಿಯೋ ವಿವರಿಸುತ್ತೆ.



ನಮ್ಮ ಪಾಡೇನು?
11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟವಾದ 2.1 ರಿಂದ ಕೆಳಗಿಳಿಯುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುವುದಿಲ್ಲವೇ? ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖವಾದರೆ ಅದು ಇನ್ನೂ ಹೆಚ್ಚಿನ ವೇಗದಲ್ಲಿ ವಲಸೆಗೆ ಅನುವು ಮಾಡಿಕೊಡುವುದಿಲ್ಲವೇ? ಇಡೀ ಭಾರತ TFR = 2.1ಕ್ಕೆ ತಲುಪಿದಾಗಲೂ, ಉತ್ತರದ ಅನೇಕ ರಾಜ್ಯಗಳು ರಿಪ್ಲೇಸ್-ಮೆಂಟ್ ಮಟ್ಟದ ಮೇಲೆಯೇ ಇರುತ್ತವೆ, ಆದರೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಜನಸಂಖ್ಯೆಯೂ ರಿಪ್ಲೇಸ್-ಮೆಂಟ್ ಮಟ್ಟಕ್ಕಿಂತ ಕೆಳಗಿಳಿದು ಜಪಾನ್ ದೇಶದಂತೆ ಸಾಮಾಜಿಕ ಸಮಸ್ಯೆಯೆಡೆಗೆ ಹೆಜ್ಜೆ ಹಾಕಿಯಾವು. ಇದನ್ನೆಲ್ಲ ಗಮನಿಸಿದರೆ ಭಾರತದ ಜನಸಂಖ್ಯೆ ನಿಯಂತ್ರಣದ ಬಗೆಗಿನ ನಿಲುವುಗಳು ನಿಜಕ್ಕೂ ಎಷ್ಟು ಸರಿಯಾಗಿದೆ ಅನ್ನುವ ಮೂಲಭೂತ ಪ್ರಶ್ನೆ ಏಳುತ್ತೆ.

ಶನಿವಾರ, ಆಗಸ್ಟ್ 7, 2010

ಮಗುಗೆ 75 ವರ್ಷ, ಇನ್ನೂ ಅಮ್ಮಾನೇ ತಿಂಡಿ ಕೊಡಬೇಕು !

ಕಳೆದ ವಾರಾಂತ್ಯ "ಅ ಬ್ಯೂಟಿಫುಲ್ ಮೈಂಡ್" ಅನ್ನುವ ಚಿತ್ರ ನೋಡಿದೆ. 2001ರಲ್ಲಿ ಬಿಡುಗಡೆಯಾಗಿ 4 ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಈ ಚಿತ್ರದ ಬಗ್ಗೆ ತುಂಬಾ ಕೇಳಿದ್ದೆ, ಕೊನೆಗೂ ಕಳೆದ ವಾರ ನೋಡಿದೆ. ಚಿತ್ರ ನೋಡಿದ ಮೇಲೆ ಇದನ್ನು ನೋಡಲು ಇಷ್ಟು ತಡ ಮಾಡಿದೆನಲ್ಲ ಅನ್ನಿಸಿತು. ಪ್ರೋಫೆಸರ್ ಜಾನ್ ಫೋರ್ಬ್ಸ್ ನ್ಯಾಶ್ ಅನ್ನುವ ಅಮೇರಿಕದ ಗಣಿತ ತಜ್ಞನ ಜೀವನ ಕತೆಯನ್ನಾಧರಿಸಿದ ಈ ಚಿತ್ರ ನಿಜಕ್ಕೂ ಸಕತ್ motivating ಅನ್ನಬಹುದು!  

ಛಲದಂಕ ಮಲ್ಲ ಈ ನ್ಯಾಶ್ !

ಚಿತ್ರದ ವಿಶೇಷವೇ ಅದರ ನಾಯಕನ ಪಾತ್ರ. ಪ್ರೋಫೆಸರ್ ಜಾನ್ ನ್ಯಾಶ್ ಪಾತ್ರದಲ್ಲಿ ರಸೆಲ್ ಕ್ರೌ, ಅವರ ಜೀವನದ ಅತ್ಯುತ್ತಮ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇಲ್ಲಿ ನಾಯಕ ಎದುರಾಳಿಗಳನ್ನು ಹೊಡೆದುರಿಳಿಸುವ ಜಟ್ಟಿಯೂ ಅಲ್ಲ, ಹುಡುಗಿಯರನ್ನು ಚಾರ್ಮ್ ಮಾಡುವ ರೋಮ್ಯಾಂಟಿಕ್ ಯುವಕನೂ ಅಲ್ಲ, ಬದಲು, ತನಗಿರುವ ಪ್ಯಾರಾನಾಯ್ಡ್ ಸ್ಕಿಝೋಪ್ರೇನಿಯಾ (ಒಂತರಾ ಮಾನಸಿಕ ಅವ್ಯವಸ್ಥೆಯಿಂದ ಉಂಟಾಗೋ ಭ್ರಮೆ) ಕಾಯಿಲೆಯನ್ನು ಎದುರಿಸುತ್ತಲೇ, ಅದು ಉಂಟು ಮಾಡುವ ಭ್ರಮೆಯೊಂದಿಗೆ ಜೀವಿಸುತ್ತಲೇ ಮಾರ್ಕೆಟ್ ಎಕನಾಮಿಕ್ಸ್, ಕಂಪ್ಯೂಟಿಂಗ್, ಎವುಲಷನರಿ ಬೈಲಾಜಿ, ಅಕೌಂಟಿಂಗ್, ಮಿಲಿಟರಿ ಥಿಯೇರಿ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಬಳಸುವಂತ ಅನೇಕ ಸಂಶೋಧನೆಗಳನ್ನು ಮಾಡಿ 1994ರ ಸಾಲಿನ ಎಕಾನಾಮಿಕ್ಸ್ ಗಾಗಿ ಕೊಡ ಮಾಡುವ ನೋಬೆಲ್ ಪ್ರಶಸ್ತಿಯನ್ನು ಗೆದ್ದ ಸಾಧಕ. ಜೀವನದ ಅನೇಕ ಎಡರು-ತೊಡರುಗಳನ್ನು ಛಲದಿಂದ ಮೆಟ್ಟಿ ನಿಂತು ಸಾಧನೆಗೈದ ಈ ಸಾಧಕ ನಡೆದು ಬಂದ ದಾರಿ ಎಂತವರಿಗೂ ಸ್ಪೂರ್ತಿ ಕೊಡುವಂತದ್ದು. 

ಜಗತ್ತಿಡಿ ಹುಚ್ಚ ಎಂದು ಗೇಲಿ ಮಾಡಿದಾಗಲೂ, ಮದುವೆಯಾಗಿ ಕೆಲವೇ ವರ್ಷದಲ್ಲಿ ಮದುವೆ ಜೀವನವೇ ಹಳಿ ತಪ್ಪಿ ಹೋದರೂ, ಪ್ರತಿ ಕ್ಷಣ, ಪ್ರತಿ ದಿನ ಹುಚ್ಚು ಭ್ರಮೆಯ ಕಾಯಿಲೆಗೆ ಸಿಲುಕಿದಾಗಲೂ ಪ್ರೋ ಜಾನ್ ನ್ಯಾಶ್ ಅದೆಲ್ಲವನ್ನೂ ಮೀರಿ ಸಾಧನೆಯ ಮೆಟ್ಟಿಲೇರುವ ಕತೆ ಯಾವ fairy taleಗೂ ಕಡಿಮೆಯಿಲ್ಲ. ನಮ್ಮ ಅದೃಷ್ಟ ಅಂದರೆ 82ರ ವಯಸ್ಸಿನ ಈ ಅಜ್ಜ ಇಂದಿಗೂ ನಮ್ಮೊಂದಿಗಿದ್ದಾರೆ ಅನ್ನುವುದು.

ಈ ಸಿನೆಮಾ ನಮ್ಮ ನುಡಿಯಲ್ಲಿ ನೋಡುವ ಭಾಗ್ಯ ನಮಗಿಲ್ಲ !
ಈ ಸಿನೆಮಾ ನೋಡಿದಾಗ ಅನ್ನಿಸಿದ ಒಂದು ಮಾತೆಂದರೆ, ಸ್ಪೂರ್ತಿ ತುಂಬುವ, ಬದುಕು ಮುಗಿದೇ ಹೋಯಿತು ಎಂದು ಕುಸಿದು ಕೂರೋ ಹೊತ್ತಲ್ಲೂ ಖಾಯಿಲೆಗೆ, ಕಾಲನಿಗೆ ಸೆಡ್ಡು ಹೊಡೆದು ಮತ್ತೆ ಎದ್ದೇಳುವ ಇಂತಹ ಕತೆಗಳು ಶಾಲೆ-ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳನ್ನು ಅವರಿಗರ್ಥವಾಗೋ ನುಡಿಯಲ್ಲಿ ತಲುಪಬೇಕು. ನಮ್ಮ ನಾಡಿನಲ್ಲಿರೋ ಡಬ್ಬಿಂಗ್ ಮೇಲಿನ ನಿಷೇಧ ಇಂತಹ ಯಾವ ಪ್ರಯತ್ನವೂ ನಡೆಯದಂತೆ ಮಾಡಿದೆ ಅನ್ನುವುದು ನನ್ನ ಅನಿಸಿಕೆ. ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲಿರೋ ಮಕ್ಕಳಿಗೆ ಕಾರ್ಟೂನ್ ಕಾರ್ಯಕ್ರಮದಿಂದ ಹಿಡಿದು ಒಳ್ಳೆಯ ವಿಜ್ಞಾನ, ತಂತ್ರಜ್ಞಾನದ ವಿಷಯದವರೆಗೂ, ಒಂದು 3D ಚಿತ್ರದಿಂದ ಹಿಡಿದು ಒಂದು ಸೈನ್ಸ್ ಫಿಕ್ಷನ್ ಚಿತ್ರಗಳವರೆಗೂ ಜಗತ್ತಿನ ಯಾವ ಒಳ್ಳೆ ವಿಷಯವನ್ನು ಅವರ ನುಡಿಯಲ್ಲಿ ನೋಡುವ ಭಾಗ್ಯವಿಲ್ಲ. ಮಕ್ಕಳನ್ನು, ಯುವಕರನ್ನು ಚಿಕ್ಕ ವಯಸ್ಸಿನಲ್ಲೇ ಕನ್ನಡದಿಂದ ಡಿಸ್ ಕನೆಕ್ಟ್ ಮಾಡುವ ಇಂತಹ ಪ್ರಯತ್ನವೂ ಕನ್ನಡದ ಯುವಕರಲ್ಲಿ, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹುಟ್ಟು ಹಾಕುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ.

ಜಗತ್ತಿನ ಎಲ್ಲ ಒಳ್ಳೆಯ ವಿಷಯಗಳು ಕನ್ನಡಿಗರಿಗೆ ಕನ್ನಡದಲ್ಲಿ ಸಿಗಬೇಕು
ಇಡೀ ನಾಡಿನ ಶಾಲೆ-ಕಾಲೇಜುಗಳಲ್ಲಿ ನಡೆಯುವ ಕಲ್ಚರಲ್ ಫೆಸ್ಟ್ ಗಳನ್ನು ಒಮ್ಮೆ ಗಮನಿಸಿದರೆ ಸಾಕು, ಅಲ್ಲೆಲ್ಲ ಕನ್ನಡ ಹೇಗೆ ಮರೆಯಾಗುತ್ತಿದೆ ಅನ್ನುವುದು ಎಂತವರಿಗೂ ಕಂಡೀತು. ಅಲ್ಲೆಲ್ಲ ನೆಲೆ ಕಂಡಿರುವುದು ತೆಲುಗು, ತಮಿಳು, ಹಿಂದಿ, ಇಂಗ್ಲಿಶ್ ಹಾಡುಗಳು. ಕನ್ನಡವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಯುವಕರಲ್ಲೇ ಅದರ ಬಗ್ಗೆ ಅನಾದರ ಹೆಚ್ಚಿದರೆ ಕನ್ನಡಕ್ಕೆ ಭವಿಷ್ಯವುಂಟೇ ಅನ್ನುವ ಆತಂಕ ಖಂಡಿತ ಆಗುತ್ತೆ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡುವುದು, ಒಳ್ಳೆ ಪ್ರಚಾರ ತಂತ್ರ ಅನುಸರಿಸುವುದು, ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳುವುದು ಎಷ್ಟು ಮುಖ್ಯವೋ, ಜಗತ್ತಿನ ಎಲ್ಲ ಒಳ್ಳೆಯ ವಿಷಯಗಳನ್ನು ಕನ್ನಡಿಗರಿಗೆ ಕನ್ನಡದಲ್ಲಿ ಸಿಗುವಂತೆ ಮಾಡುವುದು ಅಷ್ಟೇ ಮುಖ್ಯ. ಈ ವಿಷಯದಲ್ಲಿ ಸಾಹಿತ್ಯ ಅನುವಾದದ ಮಾರುಕಟ್ಟೆ ಒಂದು ಒಳ್ಳೆಯ ಉದಾಹರಣೆ. ಜಗತ್ತಿನ ಎಲ್ಲ ಒಳ್ಳೆ ಸಾಹಿತ್ಯ ಕನ್ನಡಕ್ಕೆ ಅನುವಾದವಾಗುತ್ತಿರುವುದರಿಂದ ಕನ್ನಡ ಶ್ರೀಮಂತಗೊಂಡಿದೆಯೇ ಹೊರತು ಕನ್ನಡ ಸಾಹಿತ್ಯದ ಮಾರುಕಟ್ಟೆ ಬಿದ್ದು ಹೋಗಿಲ್ಲ. ಏನೇ ಆಗಲಿ, ಭಾಷೆ ಉಳಿದರೆ ಭಾಷೆಯ ಸುತ್ತ ಕಟ್ಟಿಕೊಂಡಿರುವ ಎಲ್ಲ ಉದ್ಯಮ  ಉಳಿದೀತು. ಡಬ್ಬಿಂಗ್ ನ ಒಳಿತು-ಕೆಡುಕುಗಳ ಬಗ್ಗೆ ಚರ್ಚಿಸಿ, ನಮ್ಮ ಉದ್ಯಮದ ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತಲೇ ಡಬ್ಬಿಂಗ್ ಅನ್ನು ಹೇಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು, ಹೇಗೆ ನಮ್ಮ ಭಾಷೆಯನ್ನು ಈ ಪೀಳಿಗೆಗೂ relevant ಆಗಿ ಉಳಿಸಿಕೊಳ್ಳುವುದು ಎಂಬತ್ತ ಹಿರಿಯರು ಗಮನ ಹರಿಸಬೇಕಾಗಿದೆ. ಈ ವಿಷಯ ನಮ್ಮ ಚಿತ್ರೋದ್ಯಮದ ಹಿರಿಯರಿಗೆ ಎಷ್ಟು ಬೇಗ ಅರಿವಾಗುತ್ತೋ ಅಷ್ಟು ನಮ್ಮ ಉದ್ಯಮ, ನಮ್ಮ ನುಡಿಯ ಭವಿಷ್ಯಕ್ಕೆ ಒಳ್ಳೆಯದು.

ಕ್ಲೈಮ್ಯಾಕ್ಸ್:
ಒಂದೂರಲ್ಲಿ ಒಂದು ಚಿಕ್ಕ ಮಗು ಇತ್ತಂತೆ. ಆ ಮಗುವಿಗೆ ತಾಯಿ ಹಾಲು ಕೊಟ್ಟು, ಸ್ನಾನ ಮಾಡ್ಸಿ, ಬಟ್ಟೆ ಹಾಕಿ ಒಪ್ಪ ಮಾಡ್ತಾ ಇದ್ದಳಂತೆ. ಆ ಮಗುವಿಗೆ ಈಗ 75 ವರ್ಷ ವಯಸ್ಸು, ಆದರೂ ಆ ಮಗು ಈಗಲೂ ಅಮ್ಮಾನೇ ತಿಂಡಿ ಕೊಡಬೇಕು, ಸ್ನಾನ ಮಾಡಿಸಬೇಕು, ಬಟ್ಟೆ ಹಾಕಬೇಕು ಅಂತ ಹಟ ಮಾಡ್ತಾ ಇತ್ತಂತೆ. Sounds funny right ? ಇವತ್ತು ಕನ್ನಡ ಚಿತ್ರೋದ್ಯಮದಲ್ಲಿ ಡಬ್ಬಿಂಗ್ ಬೇಡ, ಸ್ಪರ್ಧೆ ಬೇಡ ಅನ್ನೋರಿಗೆ ಈ ಉದಾಹರಣೆ ಸರಿ ಹೊಂದುತ್ತೇನೋ!

ಪೂರಕ ಓದಿಗೆ:
ಡಬ್ಬಿಂಗ್ ಯಾಕೆ ಬೇಕು ಎಂಬ ಬಗ್ಗೆ ಖ್ಯಾತ ಸಿನೆಮಾ ಪತ್ರಕರ್ತ ಸದಾಶಿವ ಶೆಣೈ ಬರೆದಿರೋ ಈ ಬರಹವನ್ನು ಓದಿ:
http://www.ourkarnataka.com/kannada/movie/dubbing09.htm

ಸೋಮವಾರ, ಮೇ 17, 2010

ಹಟಕ್ಕೆ ಬಿದ್ದ ಹುಡುಗರೇ ಈ ಜಗತ್ತನ್ನ ಬದಲಾಯಿಸಿದವರು !

ಕನ್ನಡ ಚಿತ್ರೋದ್ಯಮ ಶುರುವಾಗಿ ಬರೋಬರಿ 75 ವರ್ಷ ಆದ ಮೇಲೆ ಕನ್ನಡದಲ್ಲಿ ಮೊಟ್ಟ ಮೊದಲನೆಯ ಅನಿಮೇಷನ್ ಚಿತ್ರ ಬರ್ತಿದೆ. ಮಠ, ಎದ್ದೇಳು ಮಂಜುನಾಥದಂತಹ ಹೊಸ ಬಗೆಯ cult ಚಿತ್ರಗಳನ್ನು ನಿರ್ದೇಶಿಸಿರುವ ಗುರುಪ್ರಸಾದ್ ಇದರ ಹಿಂದಿನ ಸೂತ್ರಧಾರಿ. ಬಂದ ಕೊಡಂಗಿ ಅನ್ನುವ ಕತೆಯನ್ನಾಧರಿಸಿ "ಇದು ಬೊಂಬೆಯಾಟವಯ್ಯ" ಅನ್ನೋ 2D ಚಿತ್ರ ನಿರ್ಮಿಸುವ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಹೊಸತೊಂದು ಅಧ್ಯಾಯ ಶುರು ಮಾಡಿದ ಗುರು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕು.

ಮಿತಿ ಇರೋದು ಭಾಷೆಗಾ? ಭಾಷೆಯಾಡೋ ಜನರಿಗಾ?
ಅನಿಮೇಶನ್, 3ಡಿ, ವಿಜ್ಞಾನ, ತಂತ್ರಜ್ಞಾನ, ಮ್ಯಾನೇಜಮೆಂಟ್‘ನಂತಹ ವಿಷಯಕ್ಕೆ ಕನ್ನಡ ನಾಲಾಯಕ್ಕು, ಅಂತಹ ವಿಷಯಗಳಲ್ಲಿ ಕನ್ನಡಕ್ಕೆ ಯೋಗ್ಯತೆ ಇಲ್ಲ, ಅದಕ್ಕೆಲ್ಲ ಇಂಗ್ಲಿಷೇ ಸರಿ ಅನ್ನುವ ಮನಸ್ಥಿತಿ ಇರೋರಿಗೆ ನನ್ನ ಒಂದೆರಡು ಪ್ರಶ್ನೆಗಳು. ಯಾವುದಾದರೂ ಒಂದು ಭಾಷೆಗೆ ಇಂತದ್ದು ಸಾಧ್ಯ, ಇಂತದ್ದು ಸಾಧ್ಯವಿಲ್ಲ ಅಂತಾ ಇರುತ್ತಾ? ಒಂದು ಭಾಷೆಗೆ ಈ ರೀತಿಯ ಮಿತಿ ಇರುತ್ತಾ? ಅಥವಾ ಆ ಮಿತಿ ಇರುವುದು ಆ ಭಾಷೆಯಾಡುವ ಜನರಲ್ಲಿ, ಅವರ ಯೋಚನೆಯಲ್ಲಿ ತಾನೇ? ಇಂತಿಂತದು ಸಾಧ್ಯವಿಲ್ಲ ಅಂದುಕೊಂಡ್ರೆ ಯಾವತ್ತಿಗೂ ಸಾಧ್ಯವಿಲ್ಲ. ಇಂತಿಂತದು ಸಾಧ್ಯ ಆಗುತ್ತೆ, ಸಾಧ್ಯ ಮಾಡ್ತಿನಿ ಅಂದುಕೊಂಡ್ರೆ ಅದು ಸಾಧ್ಯ ಆಗೇ ಆಗುತ್ತೆ. ಮನುಷ್ಯನ ಇಚ್ಛಾಶಕ್ತಿಯಿಂದಲೇ ತಾನೇ ಇವತ್ತು ಜಗತ್ತು ಈ ರೂಪ ಪಡೆದಿರೋದು? ಅದೇ ತಾನೇ ಮನುಷ್ಯರನ್ನೂ, ಪ್ರಾಣಿಗಳನ್ನು ಪ್ರತ್ಯೇಕಿಸಿರುವುದು? ಹಾಗಿದ್ದಾಗ, ಕನ್ನಡದಲ್ಲಿ ಅನಿಮೇಶನ್ ಸಾಧ್ಯವಿಲ್ಲ ಅಂದವರಿಗೂ, ಅದನ್ನು ಸಾಧ್ಯವಾಗಿಸಿ ತೋರಿಸಿದವರಿಗೂ ಇರುವ ವ್ಯತ್ಯಾಸ ಅವರ ಯೋಚನಾ ರೀತಿಯಲ್ಲೇ ಇದೆಯಲ್ವಾ? ಕನ್ನಡದ ಯುವಕರು ಮನಸ್ಸು ಮಾಡಿದ್ರೆ ಆಗಲ್ಲ ಅನ್ನೋದು ಏನು ಇಲ್ಲ ಅನ್ನೋದು ನನ್ನ ನಂಬಿಕೆ.


ಹಟಕ್ಕೆ ಬಿದ್ದ ಹುಡುಗರೇ ಈ ಜಗತ್ತನ್ನ ಬದಲಾಯಿಸಿದವರು

ಒಂದು ಇಂಗ್ಲಿಷ್ ಸಾಲು ಯಾವತ್ತು ನೆನಪಾಗುತ್ತೆ:  One man with courage is a majority. ಜಗತ್ತಲ್ಲಿ, ಇಂತದ್ದು  ಆಗಬೇಕು ಅಂತ ಹಟಕ್ಕೆ ಬಿದ್ದ ಕೆಲವರೇ ಈ ಜಗತ್ತನ್ನು ಬದಲಾಯಿಸಿದವರು. 1973ರಲ್ಲಿ ಮಾರ್ಟಿನ್ ಕೂಪರ್ ಮೊದಲನೇ ಸಲಿ ಒಂದು ಇಟ್ಟಿಗೆ ಗಾತ್ರದ ಮೊಬೈಲ್ ಫೋನ್ ಹಿಡಿದುಕೊಂಡು ನ್ಯೂಯಾರ್ಕ್ ಸಿಟಿಯ ಬೀದಿಗಳಲ್ಲಿ "ಇದು ಮೊಬೈಲ್ ಫೋನ್, ಇದರಿಂದ ಕರೆ ಮಾಡಬಹುದು" ಅಂದಾಗ ಅಂಡು ಬಡ್ಕೊಂಡು ನಕ್ಕವರೇ ಹೆಚ್ಚು. ಆದ್ರೆ ಇವತ್ತು ನೋಡಿ ಏನಾಗಿದೆ, ಮೊಬೈಲ್ ಫೋನ್ ಅನ್ನೋದು ಜನರು ಸಂಪರ್ಕ ಮಾಡೋ ಶೈಲಿಯನ್ನೇ ಹಿಂದೆಂದೂ ಕಾಣದ ರೀತಿಯಲ್ಲಿ ಬದಲಾಯಿಸಿಬಿಟ್ಟಿದೆ. ಕನಸು ಕಂಡು, ಅದರ ಬೆನ್ನು ಬೀಳೋ ಕನಸುಗಾರರೇ ಈ ಜಗತ್ತನ್ನು  ಬದಲಾಯಿಸೋರು. ನಮ್ಮ ಕನ್ನಡನಾಡಿನ ಏಳಿಗೆಗೂ ಇದೇ ಮಾತು ಅನ್ವಯಿಸುತ್ತೆ. ಕನ್ನಡ ಭಾಷೆಯ ಬಳಕೆಯ ಸಾಧ್ಯತೆಯನ್ನು ಎಲ್ಲ ರಂಗಗಳಲ್ಲಿ, ಎಲ್ಲ ಹಂತಗಳಲ್ಲಿ ವಿಸ್ತರಿಸೋ ಕನಸು ಕಾಣೋ ಹುಡುಗರು ಇವತ್ತು ಈ ನಾಡಿಗೆ ತುರ್ತಾಗಿ ಬೇಕು. ಅಂತಹ ಕನಸು ಕಾಣೋ ಆಸೆ ಕಣ್ಣಿನ ಹುಡುಗರೇ ನಾಳೆ ಕನ್ನಡದಲ್ಲಿ ಹೊಸ ಹೊಸ ಸಾಧನೆ ಮಾಡೋರೇ ಹೊರತು ಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಳ್ಳೊ ಜನರಲ್ಲ. ನೀವೆನ್ ಅಂತೀರಾ ಗೆಳೆಯರೇ?

ಶನಿವಾರ, ಏಪ್ರಿಲ್ 24, 2010

ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ ಸಾಕಾ?

ಒಂದು ನಾಡಿನ ಏಳಿಗೆಯಲ್ಲಿ ಆ ನಾಡಿನ ಜನಾಂಗದ ಕಲಿಕೆ, ದುಡಿಮೆ, ಒಗ್ಗಟ್ಟಿನಷ್ಟೇ ಮಹತ್ವದ ಪಾತ್ರ ಆ ನಾಡಿಗರಲ್ಲಿರುವ ಸಾಧಿಸುವ ಛಲಕ್ಕೂ ಇದೆ ಎಂಬುದು ನನ್ನ ಗಟ್ಟಿ ನಂಬಿಕೆ. ಎರಡನೇ ವಿಶ್ವ ಯುದ್ಧದಲ್ಲಿ ನೆಲಸಮವಾಗಿದ್ದ ಜಪಾನ್ ದೇಶ, ಜಪಾನಿಗರು ಅಮೇರಿಕದ ಮೇಲೆ ಸೇಡು ತೀರಿಸಿಕೊಂಡಿದ್ದು ಅವರ ಮೇಲೆ ಯುದ್ದ ಮಾಡಿಯಲ್ಲ, ಬದಲಿಗೆ ನೆಲಸಮವಾಗಿದ್ದ ಆ ದೇಶವನ್ನು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಕಟ್ಟಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿ. ಛಲ ಅಂದ್ರೆ ಅದು !

ನಮ್ಮ ಯೋಗ್ಯತೆನೆ ಇಷ್ಟಾ?
ಜಗತ್ತಿನ ಯಾವುದೇ ಮುಂದುವರೆದ ದೇಶ ನೋಡಿ. ಆ ನಾಡಲ್ಲಿ, ಆ ಜನರಲ್ಲಿ ಕಲಿಕೆ, ದುಡಿಮೆ, ಛಲ, ಒಗ್ಗಟ್ಟು ಎಂಬ ನಾಲ್ಕು ವಿಷಯಗಳು ಸರಿಯಾಗಿರುತ್ತವೆ. ಇವತ್ತು ಕನ್ನಡ ನಾಡಲ್ಲಿ ಈ ನಾಲ್ಕು ವಿಷಯಗಳಲ್ಲಿ ಸಾಕಷ್ಟು ತೊಡಕುಗಳಿವೆ. ಛಲದ ಕೊರತೆಯಂತೂ ಸಾಕಷ್ಟಿದೆ. ದೊಡ್ಡ ಕನಸು ಕಾಣ್ತಿನಿ,ಮುನ್ನುಗ್ಗಿ ಸವಾಲು ಎದುರಿಸಿ ದೊಡ್ಡ ಗುರಿ ತಲುಪ್ತಿನಿ ಅನ್ನೋ ಛಲ ಕನ್ನಡಿಗರಲ್ಲಿ ತುಂಬಾ ಕಡಿಮೆ. ಎಲ್ಲೋ ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ, ಒಬ್ಬ ಸಿದ್ಧಾರ್ಥ ರಂತಹ ಉದ್ಯಮಿಗಳನ್ನು ಬಿಟ್ರೆ ದೊಡ್ಡ ಉದ್ಯಮ ಸ್ಥಾಪಿಸಿ ಎತ್ತರಕ್ಕೆ ಬೆಳೆದಿರುವ ಕನ್ನಡಿಗರೆಲ್ಲಿ? ಉಳಿದವರೆಲ್ಲ ಚಿಕ್ಕ ಪುಟ್ಟ ಕಂಪನಿಗಳಲ್ಲಿ ಪುಡಿಗಾಸಲ್ಲೇ ಜೀವನ ಕಳೆಯೋದಕಷ್ಟೇ ಯೋಗ್ಯರಾ? ಇತಿಹಾಸದಲ್ಲಿ ಛಲಕ್ಕೆ ಇನ್ನೊಂದು ಹೆಸರೇ ಕನ್ನಡಿಗರು. ಹಾಗಿದ್ದ ಈ ನಾಡು,ಈ ಜನ ಇವತ್ತು ಹೀಗಾಗಿದ್ದಾರೆ. ಕಾರಣಗಳೇನೇ ಇರಲಿ, ಇದು ಬದಲಾಗಬೇಕು. ಬದಲಾಗಲೇಬೇಕು. ಅದಿಲ್ಲದೇ ಈ ನಾಡಿಗೆ, ಈ ನಾಡಿನ ಮಕ್ಕಳಿಗೆ ಭವಿಷ್ಯವಿಲ್ಲ.

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಈ ಸಂದರ್ಭದಲ್ಲಿ ನನಗೆ ಅಣ್ಣಾವ್ರು ನೆನಪಾಗ್ತಾರೆ. ಚೆನ್ನೈನಲ್ಲಿ ತಮಿಳು ಚಿತ್ರದ ಜೆರಾಕ್ಸ್ ಕಾಪಿಯಂತಿದ್ದ ಕನ್ನಡ ಚಿತ್ರೋದ್ಯಮವನ್ನು ಬೆಂಗಳೂರಿಗೆ ಕರೆ ತರಲು, ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಅದನ್ನು ಕಟ್ಟುವಲ್ಲಿ ಅಣ್ಣಾವ್ರ ಕೊಡುಗೆ ಬಲು ದೊಡ್ಡದು. ಇವತ್ತು ಅವರ ಹುಟ್ಟಿದ ದಿನ. ಒಂದಿಡೀ ನಾಡನ್ನು, ನಾಡಿಗರನ್ನು ಭಾವನಾತ್ಮಕವಾಗಿ ಬೆಸೆದ, ಒಂದಿಡೀ ನಾಡಿಗೆ ಆತ್ಮ ಗೌರವ, ಸ್ವಾಭಿಮಾನದ ಕಿಡಿ ತುಂಬಿದ, ತಮ್ಮ ಅಭಿನಯದ ಚಿತ್ರಗಳ ಮೂಲಕ ಜನರಲ್ಲಿ ಸರಿದಾರಿಯಲ್ಲಿ ನಡೆಯುವಂತ ಮೌಲ್ಯಗಳನ್ನು ತುಂಬಿದ ಅಣ್ಣಾವ್ರನ್ನು ಈ ಹಾಡಿನೊಂದಿಗೆ ನೆನೆಯೋಣ. ನರನಾಡಿಯಲ್ಲಿ ಛಲದ ಬಿಸಿ ನೆತ್ತರು ತುಂಬುವ, ಸಾಧಿಸಬೇಕು ಅನ್ನುವ ಹಟ ತುಂಬುವ ಈ ಹಾಡು evergreen !



ಹುಟ್ಟು ಹಬ್ಬದ ಸವಿ ಸಹಿ ಹಾರೈಕೆಗಳು ಅಣ್ಣಾವ್ರೇ ...

ಶನಿವಾರ, ಏಪ್ರಿಲ್ 3, 2010

ಬೆಂಗಳೂರಿನ ಎಲ್ಲ ಕನ್ನಡದ ಮಕ್ಕಳು ಹೀಗೆ ಕನ್ನಡ ಮಾತಾಡಿದ್ರೆ ಎಷ್ಟು ಚೆಂದ !

ಮೊನ್ನೆ ಅಮೇರಿಕದಲ್ಲಿರೋ ಗೆಳೆಯನೊಬ್ಬ ಒಂದು ಯು-ಟ್ಯೂಬ್ ವಿಡಿಯೋ ಲಿಂಕ್ ಕೊಟ್ಟ. ಪುಟ್ಟ ಕಂದಮ್ಮ ತೊದಲುತ್ತ ಕನ್ನಡ ಮಾತಾಡೋ ಈ ವಿಡಿಯೋ ನಿಜಕ್ಕೂ ಖುಷಿ ಕೊಡ್ತು. ಅಮೇರಿಕಕ್ಕೆ, ಯುರೋಪಿಗೆ ಹೋದವರಿಗೆ ತಾಯ್ನಾಡು, ತಾಯ್ನುಡಿಯ ಸೆಳೆತ ಇಂತಹ ಒಳ್ಳೆ ಕೆಲಸಕ್ಕೆ ಸ್ಪೂರ್ತಿ ಕೊಡುತ್ತೆ.




ಅಮೇರಿಕದ ಈ ಕನ್ನಡದ ಕಂದನ ಕತೆ ಇಂತಾದ್ರೆ, ಇದೇ ವಯಸ್ಸಿನ ಕನ್ನಡದ ಮಗು ಬೆಂಗಳೂರಿನ ಮಾಲ್-ನಲ್ಲೋ, ಹೋಟೆಲ್-ನಲ್ಲೋ ನೋಡಿದ್ರೆ ಒಂದು ವ್ಯತ್ಯಾಸ ಅಂತೂ ಕಾಣುತ್ತೆ (ಎಲ್ಲ ಮಕ್ಕಳಿಗೂ ಅನ್ವಯಿಸಲ್ಲ!). ಇಲ್ಲಿ ಮಗು ಇಂಗ್ಲಿಷ್ ಅಲ್ಲಿ ಅರಳು ಹುರಿದಂತೆ ಮಾತಾಡಿದ್ರೆ, ಕನ್ನಡದ ಗಂಧ-ಗಾಳಿಯೂ ಇಲ್ಲದಂತೆ ಬೆಳೆದ್ರೆ ತಮ್ಮ ಜೀವನ ಪಾವನ ಆಯ್ತು, ಮಗುವಿನ ಭವಿಷ್ಯ secured ಆಯ್ತು ಅಂದುಕೊಳ್ಳೊ ಅಪ್ಪ-ಅಮ್ಮಂದಿರಿದ್ದಾರೆ ! ತಾಯ್ನುಡಿಯಿಂದ ಬೆಳೆವ ಮಗುವನ್ನು ಬೇರ್ಪಡಿಸುವುದು, ಆ ಮಗುವನ್ನು ತನ್ನ ತಾಯ್ನುಡಿ, ತಾಯ್ನುಡಿಯ ಸುತ್ತಲೂ ಕಟ್ಟಿಕೊಂಡಿರುವ ಸಂಸ್ಕೃತಿ, ಸೊಗಡು, ಇತಿಹಾಸ, ಜೀವನ ವಿಧಾನ, ಹಬ್ಬ, ಹರಿದಿನ, ಒಟ್ಟಾರೆ ತನ್ನತನದಿಂದಲೇ ವಂಚಿಸಿದಂತೆ ಅನ್ನುವುದು ನನ್ನ ಅನಿಸಿಕೆ.

ಹುಟ್ಟಿಂದಲೇ ಇಂಗ್ಲಿಷ್ ಮಾತಾಡೋ ಮಗುವಿಗೆ, ಕರ್ನಾಟಕ ಕಟ್ಟಲು ಆಲೂರು ವೆಂಕಟರಾಯರು ಜೀವನ ಸವೆಸಿದರು ಅನ್ನೋದು ಗೊತ್ತಾಗುತ್ತಾ? 50 ವರ್ಷಗಳ ಕಾಲ ಕನ್ನಡಿಗರನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದ ಡಾ.ರಾಜ್ಕುಮಾರ್ ಯಾರು ಅಂತ ಗೊತ್ತಿರುತ್ತಾ? ಈ ಮಕ್ಕಳು ಓದೋ ICSE, CBSE ಸಿಲಾಬಸ್ ನೋಡಿದ್ರೆ, ಈ ಮಕ್ಕಳು ಕರ್ನಾಟಕದ ಗಂಧ-ಗಾಳಿ ಇಲ್ಲದೇ ಬೆಳಿತಾರೆ ಅನ್ನೋದಂತೂ ದಿಟ.  ಹೋಗಲಿ ರಾಜ್ಕುಮಾರ್ ಯಾರು ಅಂತ ಗೊತ್ತಿದ್ರೂ, ರಾಜ್ಕುಮಾರ್ ಅಂದ ತಕ್ಷಣ ಕನ್ನಡಿಗರು ಅಭಿಮಾನ ಪಡೋ ರೀತಿ, ಕನ್ನಡಿಗರು ಭಾವಾವೇಶಕ್ಕೆ ಒಳಗಾಗೋ ರೀತಿ ಇವೆಲ್ಲ ಎಂದಿಗಾದ್ರೂ ಅರ್ಥ ಆಗುತ್ತಾ? ಇವತ್ತು ಬೆಂಗಳೂರಲ್ಲಿ ಒಬ್ಬ ತಮಿಳನೋ, ತೆಲುಗನೋ, ಇಲ್ಲ ಹಿಂದಿಯವನೋ, ರಾಜ್ಕುಮಾರ್ ಸತ್ರೆ ಜನ ಹೀಗ್ಯಾಕೆ ದುಃಖ ಪಡ್ತಾರೆ ಅಂತ ಕೇಳಿದ ಪ್ರಶ್ನೆನಾ ನಾಳೆ, ಈ ಮಣ್ಣು, ಈ ಮಣ್ಣಿನ ಹಿರಿಮೆ, ಇತಿಹಾಸ ಗೊತ್ತಿಲ್ಲದ ಕನ್ನಡದ ಮಕ್ಕಳೇ ಕೇಳಿದ್ರೆ ಏನು ಅಚ್ಚರಿ ಪಡಬೇಡಿ.ಕನ್ನಡದ ಮಕ್ಕಳನ್ನು ತನ್ನ ಬೇರಿಂದಲೇ ಬೇರ್ಪಡಿಸೋ ಕೆಲಸ ಆಗ್ತಾ ಇರೋವಾಗ, ಕನ್ನಡದ ಮಕ್ಕಳು, ಯುವಕರು ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾದಂತಹ ವಿಷಯಗಳ ಬಗ್ಗೆ ಆಸಕ್ತಿ ತಳೆಯುತ್ತಾ ಇಲ್ಲ ಅನ್ನೋದು ಬರೀ ಗೊಣಗಾಟವಾಗಿ ಉಳಿದುಬಿಡಲ್ವಾ?

ಕೊನೆ ಪಕ್ಷ, State syllabus ಇರಲಿ, ಇಲ್ಲ CBSE, ICSE Syllabus ಇರಲಿ, ಎಲ್ಲ ಪಠ್ಯಕ್ರಮದಲ್ಲೂ ಕನ್ನಡವನ್ನ, ಕನ್ನಡದ ಸರಿಯಾದ ಇತಿಹಾಸವನ್ನ ಕಲಿಸೋ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಇದು ಮಕ್ಕಳಲ್ಲಿ ಕನ್ನಡ ಪ್ರಜ್ಞೆ ತುಂಬೋ ನಿಟ್ಟಿನಲ್ಲಿ ಬಲು ಅವಶ್ಯಕ.

ಭಾನುವಾರ, ಜನವರಿ 31, 2010

ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ !

ಇವತ್ತು ಜೀ ಕನ್ನಡದಲ್ಲಿ ಬರುವ ಸರೆಗಮಪ ಹಾಡಿನ ಸ್ಪರ್ಧೆ ನೋಡ್ತಾ ಇದ್ದೆ. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರ "ಜಸ್ಟ್ ಮಾತ್ ಮಾತಲ್ಲಿ" ನ promote ಮಾಡಲು ಸುದೀಪ್, ರಘು ದೀಕ್ಷಿತ್ ವಿಶೇಷ ಅತಿಥಿಗಳಾಗಿ ಬಂದಿದ್ರು. ನನಗೆ ತುಂಬಾ ಖುಶಿ ಅನ್ನಿಸಿದ ವಿಷಯಗಳಲ್ಲಿ ಇದು ಒಂದು. ಬರೀ ಚಿತ್ರ ಮಾಡಿ, ಸರಿಯಾಗಿ promote ಮಾಡದೇ ಇರೋದ್ರಿಂದಲೇ ಅದೆಷ್ಟೋ ಒಳ್ಳೆಯ ಕನ್ನಡ ಚಿತ್ರಗಳು ನೆಲಕ್ಕಚ್ಚುತ್ತವೆ. ಅಂತಾದ್ರಲ್ಲಿ "ಜಸ್ಟ್ ಮಾತ್ ಮಾತಲ್ಲಿ" ಗಾಗಿ ಸುದೀಪ್, ಮಳೆಯಲಿ ಜೊತೆಯಲಿ ಚಿತ್ರಕ್ಕಾಗಿ ಗಣೇಶ್ ಮಾಡಿದ ಪ್ರಚಾರ ನಿಜಕ್ಕೂ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಹೆಜ್ಜೆ. ಮಳೆಯಲಿ ಜೊತೆಯಲಿ ಚೆನ್ನಾಗಿ ಓಡುತ್ತಿರುವುದಕ್ಕೆ, ಗಣೇಶ ಪ್ರಚಾರಕ್ಕಾಗಿ ಪಟ್ಟ ಶ್ರಮ ಕೂಡಾ ಒಂದು ಕಾರಣ ಅನ್ನಬಹುದು.


ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ !
ಅದಿರಲಿ, ಈ ಕಾರ್ಯಕ್ರಮದಲ್ಲಿ ಸುದೀಪ್ ನನಗೆ ಇಷ್ಟ ಆಗಿದ್ದು ಇನ್ನೊಂದು ಬೇರೆ ಕಾರಣಕ್ಕೆ. "ಮರುಭೂಮಿ ಹೂವು ಅರಳೋ ಹುಚ್ಚು ಕನಸಾ ಕಂಡೆ" ಅನ್ನೋ ಸಕತ್ ಹಾಡೊಂದನ್ನ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಸ್ಪರ್ಧೆಯಲ್ಲಿ ಒಬ್ಬ ಈ ಹಾಡನ್ನು ಹಾಡಿದಾಗ, ರಾಜೇಶ್ ಮಾತಾಡಿ " ಇಂತಹ ಹಾಡು ನನ್ ಕೈಲೂ ಹಾಡೋಕೆ ಆಗ್ತಿರಲಿಲ್ಲ, It's a different genre song. ಆದ್ರೆ ರಘು ಹಾಡಿಸಿದ್ರು" ಅಂತಾ ಹೇಳಿದ್ರು. ಆಗ ಮಾತಾಡಿದ ಸುದೀಪ್ " ರಾಜೇಶ್, ನಿಮ್ಮಲ್ಲಿರೋ ಸಾಮರ್ಥ್ಯ ನಿಮಗೆ ಗೊತ್ತಿಲ್ಲ. ನಿಮ್ಮ ಸಾಮರ್ಥ್ಯನಾ underestimate ಮಾಡಬೇಡಿ. ಕನ್ನಡದ ಗಾಯಕರು ಯಾರಿಗೂ ಕಮ್ಮಿ ಇಲ್ಲ. ಹೊರಗಿನಿಂದ ಬಂದ ಯಾವ ಗಾಯಕನೂ ಕನ್ನಡದ ಗಾಯಕನ feel ಕೊಡಲಾರ, ಆದ್ರೆ ನಾವು ನಮ್ಮನ್ನ ಸರಿಯಾಗಿ promote ಮಾಡಿಕೊಳ್ಳದೇ ಇರೋದ್ರಿಂದಲೇ ಇವತ್ತು ಹೊರಗಿನವರು ನಮ್ಮ ಮಾರುಕಟ್ಟೆಯಲ್ಲಿ ಮಿಂಚುತ್ತಾ  ಇರೋದು, ಕನ್ನಡದ ಗಾಯಕರು ಇದರ ಬಗ್ಗೆ ಗಮನ ಕೊಡಬೇಕು" ಅನ್ನೋ ಸಂದೇಶ ಕೊಟ್ರು. ಇದು ನಿಜಕ್ಕೂ ಸಕತ್ ಒಳ್ಳೆಯ ಮಾತು. We should become more market savvy. We should not hesitate to promote ourselves.

ನಮ್ಮನ್ನ ನಾವು promote ಮಾಡ್ಕೋಬೇಕು
ರಾಜೇಶ್ ಕೃಷ್ಣನ್ ಈ ದಶಕ ಕಂಡ ಅದ್ಭುತ ಗಾಯಕರಲ್ಲಿ ಒಬ್ಬ. ಕರ್ನಾಟಕದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್ ಇರೋ ಗಾಯಕ. ಇಷ್ಟೆಲ್ಲಾ ಜನಪ್ರಿಯತೆ ಇರೋ ಇವರು ತಮ್ಮನ್ನು ಒಂದು ಬ್ರಾಂಡ್ ತರಹ ಪ್ರಮೋಟ್ ಮಾಡಿಕೊಂಡಿದ್ದಾರಾ? ಖಂಡಿತ ಇಲ್ಲ ಅನ್ನಬಹುದು. ರಾಜ್ಯದ ಅಸಂಖ್ಯಾತ ಶಾಲೆ-ಕಾಲೇಜುಗಳಲ್ಲಿ ನಡೆಯೋ ಫೆಸ್ಟ್, ಹಲವು ದೊಡ್ಡ ಪಟ್ಟಣಗಳಲ್ಲಿ ನಡೆಯೋ ದಸರೆ, ದೀಪಾವಳಿ ಉತ್ಸವ, ಹೀಗೆ ಇಲ್ಲೆಲ್ಲ ಕನ್ನಡದ ಗಾಯಕರು, ಸಂಗೀತ ನಿರ್ದೇಶಕರು ತಮ್ಮ concerts, music shows ಗಳನ್ನು ಆಯೋಜಿಸಿ, ತಮ್ಮ ಬ್ರಾಂಡ್ ಕಟ್ಟಿಕೊಳ್ಳಬೇಕು. ಇವರು ಇದನ್ನ ಮಾಡದೇ ಇರೋದ್ರಿಂದಲೇ, ಇವತ್ತು ಅಲ್ಲೆಲ್ಲ ಬಾಲಿವುಡ್ ಗಾಯಕರು ಬಂದು, ಹಿಂದಿ ಮೆರೆಸೋ ಕೆಲಸ ನಡಿತಿದೆ.

ಕನ್ನಡದಿಂದ ದುಡ್ಡು, ಹೆಸರು ಎಲ್ಲಾ ಮಾಡ್ಕೊಬೇಕು
ನಮ್ಮವರು ತಮ್ಮನ್ನು promote ಮಾಡ್ಕೊಳ್ಳೋದು ತಪ್ಪೇನೋ, ಆದಷ್ಟು ಎಲೆಮರೆಕಾಯಿಯಂತೆ ಇರಬೇಕು ಅನ್ನೋ ರೀತಿಲಿ ವರ್ತಿಸುತ್ತಾರೆ (ಇದಕ್ಕೆ ಅಪವಾದವೆಂಬಂತೆ ಇರೋರು ರಘು ದೀಕ್ಷಿತ್ ಒಬ್ರೇ ಅನ್ಸುತ್ತೆ. ಅವರನ್ನ ಈ ವಿಷಯಕ್ಕೆ ನಿಜಕ್ಕೂ ಮೆಚ್ಚಬೇಕು). ಆದ್ರೆ ಸೋನು ನಿಗಮ್ ಅವರನ್ನ ನೊಡಿ, ಆತನ ಕನ್ನಡ ಹಾಡುಗಳಿಗೆ ಕನ್ನಡಿಗರು ಕೊಟ್ಟ ಪ್ರೀತಿ ವಿಶ್ವಾಸಕ್ಕೆ ಪ್ರತಿಯಾಗಿ ಕಾಣಿಕೆಯಾಗಿ ಕೊಟ್ಟ "ನೀನೇ ಬರೀ ನೀನೇ" ಅಲ್ಬಮ್ ಗಾಗಿ ತಗೊಂಡಿದ್ದು ಕೇವಲ ಒಂದು ಕೋಟಿಯಂತೆ ಅನ್ನೋ ಸುದ್ದಿ ಕೆಲ ತಿಂಗಳ ಹಿಂದೆ ಓದಿದ್ದ ನೆನಪು. ದುಡ್ಡು ತಗೊಂಡು, ತಮ್ಮನ್ನ ಮಾಧ್ಯಮದಲ್ಲೂ ಚೆನ್ನಾಗಿ promote ಮಾಡಿಕೊಳ್ಳೊ ಬಾಲಿವುಡ್ ಗಾಯಕರ ಕಲೆ ಕನ್ನಡದ ಗಾಯಕರಲ್ಲೂ ಬರ್ಬೇಕು. ಕನ್ನಡದಿಂದ ಚೆನ್ನಾಗಿ ದುಡ್ದು, ಖ್ಯಾತಿ ಎಲ್ಲಾನೂ ಗಳಿಸಿಕೊಳ್ಳಬಹುದು, ಆದ್ರೆ ನಮ್ಮ ಗಾಯಕರು, ಸಂಗೀತಗಾರರು ಆ ಬಗ್ಗೆ ಯೋಚ್ನೆ ಮಾಡಬೇಕಷ್ಟೇ. ನಿಮಗೇನ್ ಅನ್ಸುತ್ತೆ ಗೆಳೆಯರೇ?

ಭಾನುವಾರ, ಜನವರಿ 24, 2010

ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ !

ಕನ್ನಡ ಚಿತ್ರರಂಗ ಈ ದಶಕದಲ್ಲಿ ಕಂಡ ಪ್ರತಿಭಾನ್ವಿತ ನಟರಲ್ಲಿ ಸುದೀಪ್  ಒಬ್ಬರು. ಅವರ ಹುಚ್ಚ, ಮೈ ಆಟೋಗ್ರಾಫ್, ಶಾಂತಿನಿವಾಸ ಮುಂತಾದ ಚಿತ್ರಗಳ ಅಭಿನಯ ನನಗೆ ಇಷ್ಟವಾದದ್ದು. ಆದ್ರೆ ಬರೀ ರಿಮೇಕ್ ಚಿತ್ರಗಳಲ್ಲಿ ನಟಿಸ್ತಾರೆ ಅನ್ನೋ ಬೇಜಾರು ಕೊಂಚವಿತ್ತು. ಆದ್ರೆ ಈ ವರ್ಷ ಅವರು ಸ್ವಂತ ಕತೆಯೊಂದಿಗೆ ನಿರ್ದೇಶನ ಮಾಡಿರುವ "ಜಸ್ಟ್ ಮಾತ್ ಮಾತಲ್ಲಿ" ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ.

ರಘು ದೀಕ್ಷಿತ್, ರಮ್ಯಾ, ಸುದೀಪ್, ರಾಜೇಶ್ ಮುಂತಾದ ಪ್ರತಿಭಾನ್ವಿತರ ತಂಡವೇ ಚಿತ್ರಕ್ಕೆ ಕೆಲಸ ಮಾಡಿರುವಾಗ, ಜೊತೆಗೆ ಸುದೀಪ್ ನಿರ್ದೇಶವೂ ಇರೋದ್ರಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿರಬಹುದು ಅನ್ನುವ ನಿರೀಕ್ಷೆಯಂತೂ ಇದೆ. ಅದು ಅತ್ಲಾಗಿರಲಿ, ಈ ಸಿನೆಮಾದ ಹಾಡಿನ ಸಿ.ಡಿ ತಗೊಂಡು ಹಾಡು ಕೇಳ್ತಾ ಇದ್ದೆ. ರಘು ದೀಕ್ಷಿತ್ ಅವರ ಸಂಗೀತ ನಿಜಕ್ಕೂ ಮನಸೆಳೆಯುತ್ತೆ. ಎಲ್ಲ ಹಾಡುಗಳ ಸಾಹಿತ್ಯ, ಸಂಗೀತ ಎರಡೂ ಕೇಳೊಕೆ ಖುಷಿ ಕೊಡುತ್ತೆ. "ಈ ಕಣ್ಣಿನಲ್ಲಿ, ಕಣ್ ಚಿಪ್ಪಿನಲ್ಲಿ" ಅನ್ನೋ ಹಾಡನ್ನು ಕೇವಲ ರಘು ಮಾತ್ರ ಹಾಡಬಲ್ಲರು. ಅದು ಅವರ ಧ್ವನಿಗಿರೋ ವಿಶೇಷತೆ. "ನಿನ್ನ ಪೂಜೆಗೆ ಬಂದೆ ಮಹಾದೇಶ್ವರಾ" ಆದ ಮೇಲೆ ರಘು ಹಾಡಿರೋ ಸಕತ್ ಹಾಡಲ್ಲಿ ಇದು ಒಂದು ಅನ್ನಬಹುದು.

ಹಾಗೇ, ಈ ಚಿತ್ರದಲ್ಲಿ  ನಮ್ಮ ರಾಜೇಶ್ ಕೃಷ್ಣನ್ ಹಾಡಿರುವ ಈ ಹಾಡಿನ ಸಾಲುಗಳು ಒಂತರಾ ಸೆಳೆತ ಇದೆ.


"ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ, ಹೀಗೆ ಜಸ್ಟ್ ಮಾತ್ ಮಾತಲ್ಲಿ..

ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ
ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆಯ ಕಂಡೆ
ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ತೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ,, ಹೀಗೆ ಜಸ್ಟ್ ಮಾತ್ ಮಾತಲ್ಲಿ..

ನನ್ನ ಉಸಿರಿಗೆ ನೀ ಸ್ವರವೇ, ಆ ಸ್ವರಕೆ ನಿನ್ನ ಹೆಸರು ಪದವೇ ? ||೨||
ಕೇಳಿದೆ ಕೋಗಿಲೆ, ಆ ಹಾಡು ಹಾಡಲೇ ? ಒಪ್ಪಿಗೆ ನಿನ್ನ ಕೇಳಿದೆ,, ||೨||
ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
 ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ, ಹೀಗೆ ಜಸ್ಟ್ ಮಾತ್ ಮಾತಲ್ಲಿ.."

ಈ ಹಾಡನ್ನು ಬರೆದಿದ್ದು ರಘು ದೀಕ್ಷಿತ್ ಅನ್ನೋದು ಇನ್ನೊಂದು ವಿಶೇಷ. ಆನ್ ಲೈನ್ ಇಲ್ಲಿ ಕೇಳಬಹುದು. ಇಷ್ಟ ಆದಲ್ಲಿ, ಅಂಗಡಿಗೆ ಹೋಗಿ ಒಂದು ಸಿ.ಡಿ ಖರೀದಿ ಮಾಡಿ, ಕನ್ನಡ ಸಂಗೀತ ಉದ್ಯಮವನ್ನು ಬೆಂಬಲಿಸಬೇಕು ಅನ್ನೋದು ನನ್ನ ಕೋರಿಕೆ.

ಭಾನುವಾರ, ಜನವರಿ 3, 2010

ನನ್ನ ಮಹಾರಾಷ್ತ್ರ ಪ್ರವಾಸದ ಅನುಭವಗಳು !

ಇತ್ತಿಚೆಗೆ ತಂದೆ-ತಾಯಿಯೊಂದಿಗೆ ಶಿರಡಿ ಪ್ರವಾಸಕ್ಕೆಂದು ಹೋಗಿದ್ದೆ. ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಬಗ್ಗೆ ತುಂಬಾ ಕೇಳಿದ್ದೆ. ಅಲ್ಲಿನ ಜನ ಜೀವನ ಹೇಗಿರಬಹುದು, ಕರ್ನಾಟಕಕ್ಕಿಂತ ಅವರು ಯಾವ ಯಾವ ವಿಷ್ಯದಲ್ಲಿ ಮುಂದಿದ್ದಾರೆ, ಅಲ್ಲಿನ ಮೂಲಭೂತ ಸೌಕರ್ಯ ಹೇಗಿರಬಹುದು ಅನ್ನುವ ಕುತೂಹಲ ನನ್ನಲ್ಲಿತ್ತು. ನಾನು ಪಯಣಿಸಿದ ದಕ್ಷಿಣ-ಪಶ್ಚಿಮ ಮಹಾರಾಷ್ಟ್ರ ಭಾಗದ ಕೊಲ್ಲಾಪುರ, ಸತಾರಾ, ಪುಣೆ, ನಾಶಿಕ್, ಅಹ್ಮದ್ ನಗರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಒಬ್ಬ ಪ್ರವಾಸಿಯಾಗಿ ನನಗೆ ಕಂಡ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು.

ಬೆಳಗಾವಿ ದಾಟಿದ ತಕ್ಷಣ ಕನ್ನಡ ಮಾಯ !

ಬೆಳಗಾವಿ ನಗರದಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಹಾರಾಷ್ಟ್ರದ ಗಡಿಗಿರುವ ದೂರ ಸುಮಾರು 80 ಕಿ.ಮೀ. ದಾರಿಯಲ್ಲಿ ಬರುವ ಸಂಕೇಶ್ವರ, ನಿಪ್ಪಾಣಿ, ರಾಣಿ ಚೆನ್ನಮ್ಮಳ ಹುಟ್ಟೂರು ಕಾಕತಿ ( ಇಲ್ಲಿ ಅಲ್ಲಲ್ಲಿ ಕನ್ನಡ ಬಾವುಟ ಹಾರಾಡ್ತಾ ಇತ್ತು),, ಹೀಗೆ ದಾರಿಯುದ್ದಕ್ಕೂ ಕನ್ನಡ, ಇಂಗ್ಲಿಷ್ ಜೊತೆ ಮರಾಠಿ ನಾಮಫಲಕಗಳು ರಾರಾಜಿಸುತ್ತಿದ್ದವು. ಗೆಳೆಯರೊಬ್ಬರ ಜೊತೆ ಮಾತನಾಡುವಾಗ ಅವರು ಹೇಳಿದ್ದು, ಇತ್ತಿಚೆಗೆ ಕನ್ನಡ ಪರ ಸಂಘಟನೆಗಳ ನಿರಂತರ ಪ್ರಯತ್ನದಿಂದ ಇಲ್ಲಿನ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಹೆಚ್ಚಾಗಿದ್ದು, ಅದಾದ ನಂತರವಷ್ಟೇ ಈ ಫಲಕಗಳಲ್ಲಿ ಕನ್ನಡಕ್ಕೂ ಸ್ಥಾನ ಸಿಕ್ಕಿದ್ದು, ಈ ಮುಂಚೆ ಕನ್ನಡವನ್ನು ಕೇಳುವವರೇ ಇರಲಿಲ್ಲವೆಂದು. ಅಚ್ಚರಿಯೆಂದರೆ, ಒಮ್ಮೆ ಮಹಾರಾಷ್ಟ್ರ ಗಡಿ ದಾಟಿದೊಡನೆ ಒಂದೇ ಒಂದು ಕನ್ನಡ ನಾಮಫಲಕಗಳು ಕಾಣಿಸದು ! ದಾರಿಯಲ್ಲಿ ಹಲವು ಚಿಕ್ಕ ಊರುಗಳ ಹೆಸರುಗಳು ಕನ್ನಡಮಯವಾಗಿದ್ದದ್ದು ಮಹಾರಾಷ್ಟ್ರಕ್ಕಿರುವ ಕನ್ನಡ ಇತಿಹಾಸವನ್ನು ಸಾರುತ್ತಿದ್ದವು, ಆದರೆ ಇವತ್ತು ಅಲ್ಲೆಲ್ಲೂ ಕನ್ನಡ ಕಾಣಿಸದು ಅನ್ನುವುದು ಅಷ್ಟೇ ಕಟುವಾದ ಸತ್ಯ.

ಹೇಗಿದೆ ಪಶ್ಚಿಮ ಮಹಾರಾಷ್ಟ್ರ ?

ಹೀಗೆ ಶುರುವಾದ ನನ್ನ ಮಹಾರಾಷ್ಟ್ರ ಪ್ರವಾಸದಲ್ಲಿ ಮೊದಲು ನನ್ನ ಗಮನಕ್ಕೆ ಬಂದಿದ್ದು, ಅಲ್ಲಿನ ನುಣುಪು ನುಣುಪು ರಸ್ತೆಗಳು. ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಬಹುದಾದಷ್ಟು ಚೆನ್ನಾಗಿರೊ ರಾಷ್ಟ್ರೀಯ ಹೆದ್ದಾರಿ ನಿಜಕ್ಕೂ ಅದ್ಭುತವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜೊತೆ ಮಹಾರಾಷ್ಟ್ರ PWD ಯವರು ಈ ಯೋಜನೆಯಲ್ಲಿ ಕೈ ಜೋಡಿಸಿದ್ದರಿಂದ ಅಲ್ಲಿ ಸ್ವರ್ಣ ಪಥ ಹೆದ್ದಾರಿ ಮುಕ್ತಾಯವಾಗಿ ಆಗಲೇ ಜನಬಳಕೆಯಲ್ಲಿದೆ. ಕರ್ನಾಟಕದಲ್ಲಿ ಮಾತ್ರ ಇದು ಇನ್ನೂ ಕುಂಟುತ್ತಾ ಸಾಗಿದೆ. ಬೆಳಗಾವಿಯಿಂದ ಹೆಚ್ಚು ಕಮ್ಮಿ ಪುಣೆಯವರೆಗೂ ಪ್ರತಿ 20-30 ಕಿ.ಮೀ ಗೊಂದರಂತಿರುವ ಸಕ್ಕರೆ ಕಾರ್ಖಾನೆಗಳು, ಹಾಲು ಉತ್ಪಾದನಾ ಘಟಕಗಳು, ಜೊತೆಗೆ ಅಲ್ಲಿ ಹರಿಯುವ ಕೃಷ್ಣಾ ನದಿ ದಕ್ಷಿಣ-ಪಶ್ಚಿಮ ಮಹಾರಾಷ್ಟ್ರ ಭಾಗದ ರೈತರ ಬಾಳನ್ನು ಹಸನಾಗಿಸಿದೆ. ಮಾರನೇ ದಿನ ಪುಣೆಯಿಂದ ಹೊರಟು ತಲುಪಿದ್ದು ನಾಶಿಕ್. ಪಂಚವಟಿ, ತ್ರೈಯಂಬಕೇಶ್ವರ ಸೇರಿದಂತೆ ಹಲವು ಯಾತ್ರಾ ಸ್ಥಳಗಳನ್ನುಳ್ಳ, ಶಿರಡಿ, ಶನಿ ಶಿಂಗಣಾಪುರ ದಂತಹ ಯಾತ್ರಾ ಸ್ಥಳಗಳಿಗೆ ಹತ್ತಿರ ಇರುವ ಕಾರಣಕ್ಕೆ ನಾಶಿಕ್ ನಗರಕ್ಕೆ city of pilgrimage ಅನ್ನುವ ಹೆಸರು ಕೂಡಾ ಇದೆ.


ಪ್ರವಾಸೋದ್ಯಮ ಇಲ್ಲಿನ ಒಂದು ಮುಖ್ಯ ಆದಾಯ ಮೂಲವೂ ಹೌದು. ಈ ಭಾಗದಲ್ಲಿ ಕೂಡ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಕಂಡು ಬಂದವು. ಇಲ್ಲಿಂದ ಶಿರ್ಡಿವರೆಗಿನ ರಾಜ್ಯ ರಸ್ತೆಯೂ ಚೆನ್ನಾಗಿತ್ತು. ಪುಣೆ, ನಾಶಿಕ್ ದಂತಹ ಎರಡನೇ ದರ್ಜೆಯ ಊರಿನಲ್ಲಿ ಕಂಡ ಅಗಲವಾದ ರಸ್ತೆಗಳು ಮೈಸೂರನ್ನು ನೆನೆಯುವಂತೆ ಮಾಡಿದವು. ಶಿರ್ಡಿ, ಶನಿಶಿಂಗಣಾಪುರದ ಭೇಟಿಯ ನಂತರ ಅಹ್ಮದ್ ನಗರದ ಮೂಲಕ ಪುಣೆಯತ್ತ ಪಯಣಿಸಿದೆವು. ಅಹ್ಮದ್ ನಗರದಿಂದ ಪುಣೆಗಿರುವ 4 ಸಾಲಿನ ರಾಜ್ಯ ಹೆದ್ದಾರಿ 60 ಎಷ್ಟು ಅದ್ಭುತವಾಗಿತ್ತೆಂದರೆ 120 ಕಿ.ಮೀ ದೂರವನ್ನು ಕೇವಲ 90  ನಿಮಿಷದಲ್ಲಿ ಕ್ರಮಿಸಿದೆವು ! ಈ ಭಾಗದಲ್ಲಿನ ಅಭಿವೃದ್ಧಿಯನ್ನು ಗಮನಿಸಿ, ಅಲ್ಲಿನ ಕೆಲ ಸ್ಥಳೀಯರನ್ನು ಮಾತನಾಡಿಸಿದಾಗ ಕೇಳಿ ಬಂದ ಅಂಶವೆಂದರೆ ಇದಕ್ಕೆಲ್ಲ ಕಾರಣ ಆ ಭಾಗದ ನೇತಾರರು. ಛಗನ್ ಭುಜಬಲ್, ಆರ್.ಆರ್.ಪಾಟೀಲ್, ಶರದ್ ಪವಾರ್ ಮುಂತಾದ ನಾಯಕರು ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಅನ್ನುವುದು. ಅಲ್ಲಿ ಜಾತಿ ಜೊತೆ, ಕೆಲಸವನ್ನೂ ಮಾಡಿ ರಾಜ್ಯ ಮಟ್ಟದ ನಾಯಕರಾದರೇ, ಕರ್ನಾಟಕದಲ್ಲಿ ಬರೀ ಜಾತಿ ಆಧಾರದ ಮೇಲೆ ಪ್ರಭಾವಿ ಮುಖಂಡರಾಗೋದು ಎರಡು ರಾಜ್ಯಗಳ ನಡುವಿನ ಇನ್ನೊಂದು ವ್ಯತ್ಯಾಸ.





ಹಿಂದಿ ಹೇರಿಕೆಗೆ ಕೊನೆಯಿಲ್ಲ !

ಮಹಾರಾಷ್ಟ್ರದುದ್ದಕ್ಕೂ ಕಂಡ ಇನ್ನೊಂದು ಅಂಶವೆಂದರೆ ಹಿಂದಿ ಅಲ್ಲಿ ಹೊಕ್ಕಿರುವ ರೀತಿ. ಲಿಪಿ, ನುಡಿ ಎರಡರಲ್ಲೂ ಹಿಂದಿಗೆ ಸಾಕಷ್ಟು ಸಾಮ್ಯತೆ ಇರುವ ಕಾರಣದಿಂದಲೋ ಏನೋ ಮರಾಠಿಗರಲ್ಲಿ ಹೆಚ್ಚಿನವರು ಹಿಂದಿ ಹೇರಿಕೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ಸಿಕ್ಕ ಅತಿ ದೊಡ್ಡ ನಿದರ್ಶನವೆಂದರೆ ಸುಮಾರು 1500 ಕಿ.ಮೀ ಮಹಾರಾಷ್ಟ್ರದಲ್ಲಿ ಓಡಾಡಿದರೂ, ಕೊಲ್ಲಾಪುರದ ಒಂದು ಚಿತ್ರಮಂದಿರ ಬಿಟ್ಟರೆ, ಬೇರೆಲ್ಲೂ ಮರಾಠಿ ಚಿತ್ರಗಳ ಒಂದೇ ಒಂದು ಪೋಸ್ಟರ್ ಕೂಡಾ ಕಾಣಿಸಲಿಲ್ಲ. ಎಲ್ಲಿ ನೋಡಿದರೂ ಹಿಂದಿ ಚಿತ್ರಗಳ ಅಬ್ಬರ ! ಅಪೂರ್ವ ಇತಿಹಾಸ, ಸಂಸ್ಕೃತಿ, ಸಾಹಿತ್ಯದ ಹಿನ್ನೆಲೆ ಇರುವ ಮರಾಠಿಗೆ, 10 ಕೋಟಿ ಮರಾಠಿಗರಿಗೆ ಒಂದು 100 ಕೋಟಿ ರೂಪಾಯಿ ಸಾಮರ್ಥ್ಯದ ಚಿತ್ರೋದ್ಯಮ ಕಟ್ಟಿಕೊಳ್ಳಲು ಆಗದಿರುವುದಕ್ಕೆ ಹಿಂದಿ ಒಪ್ಪಿಕೊಂಡಿರುವುದೇ ಕಾರಣವೆನ್ನುವುದು ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು. ಕನ್ನಡ ಚಿತ್ರೋದ್ಯಮ ಸುಮಾರು 250 ಕೋಟಿ ಸಾಮರ್ಥ್ಯದ ಉದ್ದಿಮೆಯಾಗಿದೆ. ಹಿಂದಿ ಹೇರಿಕೆಗೆ ಸೊಪ್ಪು ಹಾಕಿದ್ರೆ, ನಮ್ಮ ಚಿತ್ರೋದ್ಯಮವೂ ಅವನತಿಯಾಗುವುದರಲ್ಲಿ ಅನುಮಾನವೇ ಇಲ್ಲ.  ಇದು ಚಿತ್ರೋದ್ಯಮದ ಮಾತಾದರೆ, ಇನ್ನೂ ಇಲ್ಲಿನ ಹೆಚ್ಚಿನ ಹೋಟೆಲ್, ವಸತಿ ಗೃಹಗಳಲ್ಲಿ ಕೆಲಸ ಮಾಡುವವರು ಬಿಹಾರ್, ಉತ್ತರ ಪ್ರದೇಶ್ ಮೂಲದ ವಲಸಿಗರು. ವಿಧರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಬರಗಾಲ, ಉದ್ಯೋಗ ಅವಕಾಶಗಳ ಕೊರತೆಯಿದೆ ಅನ್ನುವ ಮರಾಠಿಗರು ಇಲ್ಲೆಲ್ಲ ಬಂದು ಅದ್ಯಾಕೆ ಕೆಲಸ ಮಾಡುವುದಿಲ್ಲವೋ ಗೊತ್ತಿಲ್ಲ. ಇನ್ನೂ ಎಲ್ಲ ದೇವಸ್ಥಾನಗಳಲ್ಲಿ ಇಂಗ್ಲಿಷ್, ಮರಾಠಿಗಳ ಜೊತೆ ಎಲ್ಲೆಡೆ ಹಿಂದಿಯಲ್ಲಿ ಫಲಕಗಳು ರಾರಾಜಿಸುತ್ತಿದ್ದವು ! ಒಮ್ಮೆ ಹಿಂದಿ ಒಪ್ಪಿಕೊಂಡ ಮೇಲೆ, ಹಿಂದಿ ವಲಸಿಗರು ಬರದೇ ಇರುತ್ತಾರೆಯೇ?  ಸಂತೋಷದ ವಿಷಯವೆಂದರೆ, ಹಿಂದಿ ಹೇರಿಕೆಯ ವಿರುದ್ಧ, ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕು ಅನ್ನುವ ಕೂಗು ಕೊನೆಗೂ ಮಹಾರಾಷ್ಟ್ರದಲ್ಲಿ ಕೇಳಿ ಬರುತ್ತಿರುವುದು !

ಶಿವಾಜಿ ಮತ್ತು ಮರಾಠಿಗರು

ತಮ್ಮ ಭಾಷೆಯ ಮೇಲಿನ ಎಲ್ಲ ಆಕ್ರಮಣದ ನಡುವೆಯೂ, ಮರಾಠಿಗರನ್ನೆಲ್ಲ ಒಂದಾಗಿ ಬೆಸೆಯುತ್ತಿರುವುದು, ಅವರಲ್ಲಿ ಒಗ್ಗಟ್ಟು ಮೂಡಿಸುತ್ತಿರುವುದು ಅವರ ಇತಿಹಾಸದ ಅತೀ ಮುಖ್ಯ ಕೊಂಡಿಯಾದ ಶಿವಾಜಿ ಮಹಾರಾಜ. ಮಹಾರಾಷ್ಟ್ರ ಶುರುವಾದ ನಂತರ ಬರುವ ಕೊಲ್ಲಾಪುರ, ಸತಾರಾ, ಪುಣೆ, ಸಂಗಮನೇರ್, ನಾಶಿಕ್, ಅಹ್ಮದ ನಗರ ಹೀಗೆ ಪ್ರತಿ ಊರಲ್ಲಿ ಶಿವಾಜಿ ಮೂರ್ತಿ ಕಂಡು ಬಂತು. ಇತಿಹಾಸದಿಂದ, ಇತಿಹಾಸದಲ್ಲಿ ಸಾಧನೆಗೈದ ನಾಯಕರು ಒಂದು ಜನಾಂಗದ ಒಗ್ಗಟ್ಟು ಹೆಚ್ಚಿಸುವಲ್ಲಿ, ಅವರಲ್ಲಿ ಸ್ಪೂರ್ತಿ ಹೆಚ್ಚಿಸುವಲ್ಲಿ ಎಷ್ಟು ಸಹಕಾರಿಯಾಗಬಲ್ಲರು ಅನ್ನುವುದು ಮರಾಠಿಗರು ಮತ್ತು ಅವರ ಶಿವಾಜಿ ಆರಾಧನೆಯಿಂದ ಕಾಣಿಸುತ್ತೆ. ಕರ್ನಾಟಕದಲ್ಲೂ ಇದು ಹೆಚ್ಚಾಗಬೇಕು. ಕೃಷ್ಣ ದೇವರಾಯ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಒನಕೆ ಒಬವ್ವ, ಆಲೂರು ವೆಂಕಟರಾಯರು, ಡಾ.ರಾಜ್ ಕುಮಾರ್ ರಂತಹ ನಾಡು ಕಂಡ ಹೆಮ್ಮೆಯ ಪುತ್ರರ ಬಗ್ಗೆ ನಾಡಿನ ಮಕ್ಕಳಲ್ಲಿ ಹೆಚ್ಚು ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಇದು ಅವರಲ್ಲಿ ಇತಿಹಾಸ ಪ್ರಜ್ಞೆ, ನಮ್ಮ ನಾಡು-ನುಡಿಯ ಬಗ್ಗೆ ಹೆಮ್ಮೆ ತಾಳುವಲ್ಲಿ ಖಂಡಿತ ಸಹಾಯವಾಗಬಲ್ಲುದು.


ಮರಾಠಿ ಸಾಹಿತ್ಯಕ್ಕೆ ಈಗಲೂ ಇರುವ ಬೇಡಿಕೆ !

ಕೊಲ್ಲಾಪುರದ ದೇವಸ್ಥಾನದ ಬಾಗಿಲಲ್ಲೇ ಒಂದು ಪುಸ್ತಕ ಮಳಿಗೆ ಕಂಡು ಬಂತು. ಸಾಕಷ್ಟು ಜನಸಂದಣಿ ಇದ್ದ ಆ ಮಳಿಗೆ ಹೊಕ್ಕು ನೋಡಿದರೆ ಎಲ್ಲಿ ನೋಡಿದರೂ ಮರಾಠಿ ಪುಸ್ತಕಗಳ ರಾಶಿ !! ಅಷ್ಟೇ ಅಲ್ಲ, ಇಂಗ್ಲಿಷ್ ನಲ್ಲಿ ಬಂದ ಹಲವು ಪುಸ್ತಕಗಳ ಮರಾಠಿ ಅನುವಾದದ ಪ್ರತಿಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿಲಿದ್ದವು. Five point someone  ಅನ್ನುವ ಕೃತಿ ಬರೆದ ಚೇತನ್ ಭಗತ್ ಅವರ ಎಲ್ಲ ಕೃತಿಗಳ ಮರಾಠಿ ಆವೃತ್ತಿಗಳು ಅಲ್ಲಿ ಮಾರಾಟಕ್ಕಿದ್ದವು. ಯುವ ಜನರನ್ನು ಗುರುಯಾಗಿಸಿಕೊಂಡು ಬರೆಯುತ್ತಿರುವ ಎಲ್ಲ ಇಂಗ್ಲಿಷ್ ಬರಹಗಾರರ ಕೃತಿಗಳನ್ನು ಮರಾಠಿಯಲ್ಲಿ ದೊರಕುವಂತೆ ಮಾಡುವ ಮೂಲಕ ಮರಾಠಿ ಯುವಕರನ್ನು ಮರಾಠಿ ಸಾಹಿತ್ಯದೆಡೆ ಸೆಳೆಯುವ ಪ್ರಯತ್ನ ನಡೆಯುತ್ತಾ ಇದೆ ಅನ್ನುವುದು ಪುಸ್ತಕದಂಗಡಿಯ ಮಾಲಿಕರ ಅಂಬೋಣ. ಇಂತಹ ಪ್ರಯತ್ನಗಳು ಕನ್ನಡದಲ್ಲೂ ಹೆಚ್ಚೆಚ್ಚು ನಡೆಯಬೇಕು.



ಕೊನೆ ಹನಿ
ಒಟ್ಟಾರೆ ಹಲವು ವಿಷ್ಯಗಳಲ್ಲಿ ಅವರು ನಮ್ಮಿಂದ ಕಲಿಯಬಹುದಾದ್ದು ಇದ್ದು, ಹಲವು ಬೇರೆ ವಿಷಯಗಳಲ್ಲಿ ಮರಾಠಿಗರು ನಮ್ಮಿಂದ ಮುಂದೆ ಇದ್ದು, ಅವರಿಂದ ನಮ್ಮ ನೆಲದ ನಾಯಕರು ಕಲಿಯಬಹುದಾದ್ದು ಇದೆ ಎಂದು ನನ್ನ ಅನಿಸಿಕೆ. ಕೇವಲ ನಾಲ್ಕು ದಿನಗಳ ಪ್ರವಾಸದಲ್ಲಿ ಒಂದು ಸ್ಥಳದ ಬಗ್ಗೆ ಕರಾರುವಾಕ್ ಅನ್ನುವಂತ ವರದಿ ಕೊಡಲು ಆಗದು ಅನ್ನುವುದು ನನ್ನ ಅರಿವಲ್ಲಿ ಇದ್ದರೂ, ಇಂತಹದೊಂದು ಪ್ರಯತ್ನವನ್ನು ಮಾಡಿದ್ದೇನೆ. ನನಗಿಂತಲೂ ಮಹಾರಾಷ್ಟ್ರವನ್ನು ಹೆಚ್ಚು ಕಂಡು-ಬಲ್ಲ ಹಲವರು ನಾನೆಲ್ಲಿ ಎಡವಿದ್ದೇನೆ ಅನ್ನುವುದನ್ನು ತೋರಿಸಿಕೊಟ್ಟು ನನ್ನನ್ನು ತಿದ್ದಬೇಕೆಂದು ಕೋರುತ್ತಾ ನನ್ನ ಮಿನಿ ಪ್ರವಾಸ ಕಥನ ಮುಗಿಸುತ್ತೇನೆ.