ಗುರುವಾರ, ಮಾರ್ಚ್ 24, 2011

ದೇಶದ ಟಿವಿ ಮಾರುಕಟ್ಟೆ ಹೇಳ್ತಿರೊ ಕತೆ ಏನು ?

ಭಾರತದಾದ್ಯಂತ ಪತ್ರಿಕೆ, ಟಿವಿ, ಇಂಟರ್ ನೆಟ್, ರೇಡಿಯೊ, ಸಿನೆಮಾ ಮಾಧ್ಯಮಗಳ ಜಾಹೀರಾತಿನ ಮುನ್ನೋಟ, ಹಿನ್ನೋಟ ನೀಡುವ ಪಿಚ್ ಮ್ಯಾಡಿಸನ್ ಮೀಡಿಯಾ ಅಡ್ವಟೈಸಿಂಗ್ ಔಟಲುಕ್ ಸರ್ವೆ ಮಾಹಿತಿ ಗಮನಿಸುತ್ತಿದ್ದೆ, ಅದರಲ್ಲೂ ವಿಶೇಷವಾಗಿ ಸಮಾಜದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುವ ಟಿವಿ ಮಾಧ್ಯಮ ಯಾವ ರೀತಿ ಸಾಗುತ್ತಿದೆ, ಯಾವ ಭಾಷೆಗೆ ಎಷ್ಟು ಮಾರುಕಟ್ಟೆ ಇದೆ ಎಂದು ತಿಳಿಯುವ ಕುತೂಹಲ ನನಗಿತ್ತು. ಆ ಮಾಹಿತಿ ಗಮನಿಸುವಾಗ ಕಣ್ಣಿಗೆ ಬಿದ್ದ ಒಂದು ಮಾಹಿತಿ ನಿಮ್ಮ ಜೊತೆ ಹಂಚಿಕೊಳ್ಳೊಣ ಅನ್ನಿಸ್ತು.

ಹೇಗಿದೆ ಟಿವಿ ಮಾರುಕಟ್ಟೆ ಭಾಷೆಯಾಧಾರದ ಮೇಲೆ ?

2010ರಲ್ಲಿ ಟಿವಿ ಮಾರುಕಟ್ಟೆಯನ್ನು ಭಾಷೆಯಾಧಾರದ ಮೇಲೆ ನೋಡಿದರೆ ಕಾಣೋದು ಇಂತಿದೆ. (ಮಾಹಿತಿ ಮೂಲಕ್ಕೆ ಇಲ್ಲಿ ನೋಡಿ) 
ಇಲ್ಲಿ ಗಮನಿಸಬೇಕಾದ ಅಂಶವೆಂದರೆ  ಹಿಂದಿ ಹೇರಿಕೆಗೆ ತುತ್ತಾಗಿ ಟಿವಿ ಮಾರುಕಟ್ಟೆಯಲ್ಲಿ ಕೆಲವು ಭಾಷೆಗಳು ತಲುಪಿರುವ ಕೆಟ್ಟ ಗತಿಯನ್ನು. ಇಲ್ಲಿ ಬೆಂಗಾಲಿ, ಗುಜರಾತಿ, ಪಂಜಾಬಿ, ಮರಾಠಿ, ಒರಿಯಾ, ಅಸ್ಸಾಮಿಸ್ ನಂತಹ ನುಡಿಗಳ ಮಾರುಕಟ್ಟೆ ಸ್ಥಿತಿಯನ್ನು ಗಮನಿಸಿ. ಈ ನುಡಿಗಳನ್ನಾಡುವ ಜನರ ಸಂಖ್ಯೆಯ ಜೊತೆಗೆ ಈ ನುಡಿಗಳ ಟಿವಿ ಮಾಧ್ಯಮದ ಮಾರುಕಟ್ಟೆ ಪಾಲು ಹೋಲಿಸಿ ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಈ ನುಡಿಗಳನ್ನಾಡುವ ಜನರಿದ್ದರೂ ತಮ್ಮ ನುಡಿಯಲ್ಲಿ ಸುದ್ದಿ, ಮನರಂಜನೆಯಂತಹ ಮೂಲಭೂತ ಅಗತ್ಯಗಳನ್ನು ಪೂರ್ತಿಯಾಗಿ ಪೂರೈಸಿಕೊಳ್ಳಲಾಗದ, ಅದಕ್ಕೂ ಹಿಂದಿಯನ್ನೇ ನೆಚ್ಚಿಕೊಳ್ಳುವಂತಹ ಸ್ಥಿತಿ ಈ ಭಾಷೆಗಳಿಗೆ ಬಂದೊದಗಿದೆ (ಹಾಗೇ ಮಾಡಲಾಗಿದೆ ಅನ್ನಬಹುದು) ಅನ್ನುವುದು ವೈವಿಧ್ಯತೆಯನ್ನು ಎತ್ತಿ ಹಿಡಿಯಬೇಕಾದ ಭಾರತದ ಒಕ್ಕೂಟ ವ್ಯವಸ್ಥೆ ಹಿಂದಿ ಹೇರಿಕೆಯ ಮೂಲಕ ಮಾಡಿರುವ ತಪ್ಪು ಎಂತಹುದು ಅನ್ನುವುದನ್ನು ಎತ್ತಿ ತೋರಿಸುತ್ತೆ. ಸಹಜವಾಗಿ ಎಲ್ಲೆಲ್ಲಿ ಯಾವ ನುಡಿಯಲ್ಲಿ ಅಲ್ಲಿನ ವ್ಯವಸ್ಥೆಗಳಿರಬೇಕಿತ್ತೋ ಅಲ್ಲೆಲ್ಲ ಹಿಂದಿಗೆ ನೆಲೆ ಕಲ್ಪಿಸಿ, ಆ ನಾಡಿನ ನುಡಿಯನ್ನು ಮೂಲೆಗುಂಪು ಮಾಡುತ್ತಿರುವುದಕ್ಕೆ ಇದು ಇನ್ನೊಂದು ಉದಾಹರಣೆಯಷ್ಟೇ.

ಹಿಂದಿ ಭಾಷಿಕರೆಷ್ಟು ?
ಅಷ್ಟೇ ಅಲ್ಲ, 2001ರ ಜನಗಣತಿ ಪ್ರಕಾರ ಹಿಂದಿ ಭಾಷಿಕರ ಸಂಖ್ಯೆ 41.03% ಅಂತೆ. ಆದ್ದರಿಂದ ಟಿವಿ ಮಾರುಕಟ್ಟೆಯಲ್ಲಿ 51% ಮಾರುಕಟ್ಟೆ ಇರುವುದು ಸಹಜ ಅನ್ನಿಸಬಹುದು. ಆದರೆ ದಿಟ ಏನೆಂದರೆ, ಹಿಂದಿಗೆ ಅಲ್ಪ ಸ್ವಲ್ಪ ಹೋಲುವ ಎಲ್ಲ ಭಾಷೆಗಳನ್ನು ಹಿಂದಿಯ ಉಪಭಾಷೆಗಳೆಂದು ಕರೆದು ಅವುಗಳನ್ನ ಸಾರಾಸಗಟಾಗಿ appropriate ಮಾಡಿಕೊಂಡಿದ್ದಾರೆ ಅನ್ನುವುದು. ಉದಾಹರಣೆಗೆ, ಹಿಂದಿಯ ಉಪಭಾಷೆಗಳೆಂದು ಕರೆಯುವ ಅವಧಿ, ಹರ್ಯಾಣ್ವಿ, ಬುಂಧೇಲಿ, ಕನೌಜಿ, ಬ್ರಜ್, ಭೋಜಪುರಿ, ಮೈಥಿಲಿ, ಮಾರ್ವಾಡಿ, ಬಗೇಲಿ, ಚತ್ತಿಸ್-ಗರಿ, ಧನ್ವಾರ್, ಖರಿಬೋಲಿ ಮುಂತಾದ ನುಡಿಗಳಿಗೆ ಹಲವು ನೂರು ವರ್ಷಗಳ ತಮ್ಮದೇ ಆದ ಇತಿಹಾಸವಿದೆ. ಆದರೆ ಈ ಎಲ್ಲ ವಿಶಿಷ್ಟ ನುಡಿಗಳನ್ನು ಹಿಂದಿ ಅನ್ನುವ ಹೊದಿಕೆಯಡಿ ತಂದು ಆ ಎಲ್ಲ ವೈವಿಧ್ಯತೆಯನ್ನು ಅಳಿಸಿ, ಅಲ್ಲೆಲ್ಲ ಹಿಂದಿಯನ್ನು ಸ್ಥಾಪಿಸಿರುವುದು ಸ್ವಲ್ಪ ಗಮನಿಸಿದರೂ ಕಂಡೀತು. ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸುವ, ವೈವಿಧ್ಯತೆಯನ್ನು ಅಳಿಸಿವುದೇ ಒಗ್ಗಟ್ಟು ಸಾಧಿಸುವ ವಿಧಾನವೆನ್ನುವ ಮನಸ್ಥಿತಿ ಇರುವವರೆಗೆ ಈ ರೀತಿಯ ಅಧರ್ಮದ ಹಾದಿಯ ಕೆಲಸಗಳಿಗೆ ಕೊನೆಯಿಲ್ಲ ಅನ್ನಬಹುದು.

ಭಾರತಕ್ಕೆ ಬೇಕು ಹೊಸ ಭಾಷಾ ನೀತಿ.
ಭಾರತಕ್ಕೆ ಟಿವಿ ಬಂದ ಹೊಸತರಲ್ಲಿ ಹೇಗಿತ್ತು ಒಮ್ಮೆ ನೆನೆಸಿಕೊಳ್ಳಿ. 1982ರಲ್ಲಿ ಶುರುವಾದ ಕೇಂದ್ರ ಸರ್ಕಾರಿ ಪ್ರಾಯೋಜಿತ ದೂರದರ್ಶನವೆಂಬ ಹಿಂದಿ ಹೇರಿಕೆಯ ಸಾಧನ ನಿರಾಂತಕವಾಗಿ 1991ರವರೆಗೆ ನಡೆದಿತ್ತು. ದೇಶದ ಬೇರೆಲ್ಲ ಭಾಷೆಗಳಿಗೆ ವಾರಕ್ಕೊಮ್ಮೆ ಭಿಕ್ಷೆಯಂತೆ 2-3ಗಂಟೆಯ ಅವಕಾಶ ಕೊಟ್ಟು ಬೇರೆಲ್ಲ ಸಮಯದಲ್ಲಿ ಹಿಂದಿ ಮಾತ್ರ ಪ್ರಸಾರ ಮಾಡಿ ಹಿಂದಿಯನ್ನು ವ್ಯವಸ್ಥಿತವಾಗಿ ಜನರ ಮೇಲೆ ಹೇರುವ ಮತ್ತು ಆ ಮೂಲಕ ಅದಕ್ಕೆ ಜನರ ಮನವೊಲಿಸುವ ಕೆಲಸ ನಡೆದಿತ್ತು. 1991ರಲ್ಲಿ ಒಮ್ಮೆ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಹಿಂದಿಯೇತರ ನುಡಿಯಲ್ಲೂ ಖಾಸಗಿ ವಾಹಿನಿಗಳು ಶುರುವಾಗುವ ಮೂಲಕ ಹಿಂದಿ ಹೇರಿಕೆಯೆಂಬ ಅಮಾನವೀಯ, ಸಂವಿಧಾನ ವಿರೋಧಿ ನಡೆಯಿಂದ ಹಿಂದಿಯೇತರರಿಗೆ ಬಿಡುಗಡೆ ದೊರಕಿದ್ದು. ಗಟ್ಟಿಯಾಗಿರುವ ತನ್ನತನ, ಸಬಲವಾದ ಸಿನೆಮಾ ಉದ್ಯಮ ಕಟ್ಟಿಕೊಂಡಿರುವ ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ ಭಾಷೆಗಳೇ ತಕ್ಕ ಮಟ್ಟಿಗೆ  ಹಿಂದಿಯ ಸಾಂಸ್ಕೃತಿಕ ದಾಳಿಗೆ ತುತ್ತಾಗದೇ ತಮ್ಮ ತಮ್ಮ ಭಾಷೆಗಳ ಮಾರುಕಟ್ಟೆಯನ್ನು ಉಳಿಸಿಕೊಂಡಿವೆ ಎನ್ನಬಹುದು. ಇವತ್ತು ಅಸ್ಸಾಮಿಸ್, ಬೆಂಗಾಳಿ, ಮರಾಠಿ, ಒರಿಯಾ, ಗುಜರಾತಿ ನುಡಿಗಳಿಗೆ ಬಂದೊದಗಿರುವ ಕುತ್ತು ನಾಳೆ ನಮಗೂ ಬರಬಹುದು ಅನ್ನಿಸಲ್ವಾ? ವೈವಿಧ್ಯತೆ ಅಳಿಸುವ ಯಾವ ಹೇರಿಕೆಯೂ ಸಲ್ಲದು ಅನ್ನಿಸಲ್ವಾ? ಭಾರತದ ಎಲ್ಲ ಭಾಷೆಗಳನ್ನೂ ಭಾಷಿಕರನ್ನೂ ಸಮಾನವೆಂದು ಕಾಣುವ ಭಾಷಾ ನೀತಿಯೊಂದೇ ವೈವಿಧ್ಯತೆಯನ್ನು ಕಾಪಾಡುವ ಆ ಮೂಲಕ ಭಾಷಿಕರ ನಡುವೆ ಒಗ್ಗಟ್ಟು ಹೆಚ್ಚಿಸುವ ಸಾಧನವಾಗಬಹುದೇ ಹೊರತು ಈ ರೀತಿ "ಒಂದು ದೇಶ - ಒಂದು ಭಾಷೆ" ಅನ್ನುವ ಮನಸ್ಥಿತಿಯಿಂದಲ್ಲ ಅನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಗುರುವಾರ, ಮಾರ್ಚ್ 10, 2011

ವಿಶ್ವ ಕನ್ನಡ ಸಮ್ಮೇಳನ - ಏನಿದೆ, ಏನಿರಬೇಕಾಗಿತ್ತು?

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೇನು ಹೊತ್ತು ಎಣಿಕೆ ಶುರುವಾಗಿದೆ. ನಾಟಕ, ಕವನ ವಾಚನ, ಗಮಕ ವಾಚನ, ಕುಣಿತ, ಹಾಡುಗಾರಿಕೆ ಸೇರಿದಂತೆ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅನ್ನುತ್ತೆ ಸಮ್ಮೇಳನದ ವೆಬ್ ಸೈಟ್ ಅಲ್ಲಿರೋ ಕರೆಯೋಲೆ. ಇದಲ್ಲದೇ, ಕೆಲವು ಒಳ್ಳೆಯ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿದೆ ಅಂತಲೂ ಕಂಡೆ. ಕನ್ನಡ, ಕನ್ನಡಿಗ, ಕರ್ನಾಟಕ ಇತಿಹಾಸದಲ್ಲೆಂದೂ ಕಂಡಿರದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಾಗತೀಕರಣದ ನಂತರದ ಈ ದಿನಗಳಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಿನ ಮಹತ್ವ ಪಡೆದಿವೆ ಕೂಡಾ. ಈ ಸಮ್ಮೇಳನ ಕರ್ನಾಟಕದ, ಕನ್ನಡಿಗರ ನಾಳೆಗಳನ್ನು ಕಟ್ಟಲು ಆಗಬೇಕಾದ ಕೆಲಸಗಳ ಬಗ್ಗೆ, ಇವತ್ತು ನಾವೆಲ್ಲಿದೀವಿ, ಈ ದಿನ ನಮ್ಮೆದುರು ಇರುವ ಸವಾಲುಗಳೇನು, ನಾವು ಸಾಗಬೇಕಾದ ದಾರಿ ಯಾವುದು, ಎಂತದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ, ಹೊಸ ದಿಕ್ಕು,ದೆಸೆ ನೀಡುವ ವೇದಿಕೆಯಾಗುತ್ತೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು, ಆದರೆ ಕಾರ್ಯಕ್ರಮದ ಪಟ್ಟಿ ನೋಡಿದಾಗ ಕೆಲ ಮಟ್ಟಿಗೆ ನಿರಾಸೆಯಾಗಿದೆ ಅಂತಲೇ ಹೇಳಬೇಕು. ಜ್ಞಾನಾಧಾರಿತ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಕನ್ನಡಿಗರ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಚೆನ್ನಾಗಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಆದರೆ ಕಾರ್ಯಕ್ರಮದ ಪಟ್ಟಿ ನೋಡಿದ್ರೆ, ಈ ಸಮ್ಮೇಳನ ಹೊಟ್ಟೆಗೆ ಹಿಟ್ಟಿನ ವಿಷಯಗಳಿಗಿಂತ ಹೆಚ್ಚು ಜುಟ್ಟಿನ ಮಲ್ಲಿಗೆಯ ವಿಷಯಗಳತ್ತಲೇ ಗಮನ ಹರಿಸಿದೆಯೆನೋ ಅನ್ನುವಂತಿದೆ !

ಏನಿದೆ?

ಹಾಗಂತ, ಸಮ್ಮೇಳನದಲ್ಲಿ ಪ್ರಯೋಜನವಾಗುವಂತಹ ವಿಷಯಗಳೇ ಇಲ್ಲ ಅಂತಿಲ್ಲ. ಜಾಗತೀಕರಣ, ಮಾರುಕಟ್ಟೆ ಮತ್ತು ಯುವಕರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಜಾಗತೀಕರಣ ಕರ್ನಾಟಕ ಅನ್ನುವ ಗೋಷ್ಟಿ, ಗಡಿನಾಡಲ್ಲಿರುವ ಕನ್ನಡಿಗರ ಶಿಕ್ಷಣ ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಗಡಿನಾಡ ಕನ್ನಡಿಗರು ಅನ್ನುವ ಗೋಷ್ಟಿ, ಕನ್ನಡ ತಂತ್ರಾಂಶ, ವಿಜ್ಞಾನ ಶಿಕ್ಷಣದಂತಹ ವಿಷಯಗಳ ಬಗೆಗಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ-ಕರ್ನಾಟಕ ಅನ್ನುವ ಗೋಷ್ಟಿ, ಆಡಳಿತದಲ್ಲಿ ಕನ್ನಡ ಬಳಕೆ ಬಗೆಗಿನ ಕನ್ನಡ ಭಾಷಾ ಬಳಕೆ ಅನ್ನುವ ಗೋಷ್ಟಿ, ಕೃಷಿ ರಂಗ ಎದುರಿಸುತ್ತಿರುವ ಸವಾಲುಗಳ ಬಗೆಗಿನ ಕೃಷಿ-ಸಾಧನೆ ಸವಾಲು ಗೋಷ್ಟಿಗಳು ಈ ಕಾಲಮಾನಕ್ಕೆ ಪ್ರಸ್ತುತವೆನ್ನಿಸುವಂತಹ ಗೋಷ್ಟಿಗಳಾಗಿವೆ. ಇಲ್ಲಿ ಪಾಲ್ಗೊಳ್ಳುತ್ತಿರುವವರು ಅಷ್ಟೇ ಯೋಗ್ಯರು ಅನ್ನುವುದು ಕೂಡಾ ಗಮನಿಸಬೇಕಾದದ್ದು.

ಏನ್ ಇರಬೇಕಾಗಿತ್ತು ?

ಕವಿ ಗೋಷ್ಟಿ, ಹಾಸ್ಯ, ನಾಟಕ, ಸಂಗೀತದಂತಹ ವಿಷಯಗಳನ್ನು ಬಿಟ್ಟು ಚಿಂತನೆಗೆ ಹಚ್ಚುವ ಚರ್ಚಾ ಗೋಷ್ಟಿಗಳತ್ತ ನೋಡಿದಾಗ ಕಾಣೋದು ಸುಮಾರು 16 ಗೋಷ್ಟಿಗಳು. ಇವುಗಳಲ್ಲಿ ಕನ್ನಡಿಗರ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಕಲಿಕೆಗೆ ಸಂಬಂಧಿಸಿದಂತೆ ಇರೋದು ಒಂದೇ ಒಂದು ಗೋಷ್ಟಿ, ಅದರಲ್ಲೂ ತಾಯ್ನುಡಿ ಶಿಕ್ಷಣದ ಮಹತ್ವ, ಇವತ್ತು ಅದು ಯಾವ ಹಂತದಲ್ಲಿದೆ, ಜಾಗತೀಕರಣದ ಸ್ಪರ್ಧೆಗೆ ಸಜ್ಜುಗೊಳಿಸಲು ಅದರಲ್ಲಿ ಆಗಬೇಕಾದ ಸುಧಾರಣೆಗಳೇನು, ಬದುಕಿನ ಎಲ್ಲ ಹಂತದ ವಿದ್ಯೆಯನ್ನು ಕನ್ನಡದಲ್ಲಿ ತರಲು ಆಗಬೇಕಾದ ಕೆಲಸಗಳೇನು ಅನ್ನುವ ವಿಷಯವೇನೂ ಚರ್ಚೆಯ ಅಜೆಂಡಾದಲ್ಲಿ ಇಲ್ಲ.  ಜಗತ್ತಿನ ಮುಂಚೂಣಿಲ್ಲಿರುವ ಎಲ್ಲ ದೇಶಗಳು ತಮ್ಮ ಏಳಿಗೆಗೆ ಏಣಿಯಾಗಿಸಿಕೊಂಡಿರುವುದು ತಮ್ಮ ತಾಯ್ನುಡಿಯನ್ನು. ಮಕ್ಕಳ ಬುದ್ದಿ ವಿಕಾಸಕ್ಕೆ ತಾಯ್ನುಡಿ ಕಲಿಕೆಗಿಂತ ಒಳ್ಳೆಯ ಹಾದಿಯಿಲ್ಲ ಅನ್ನುವುದನ್ನು ಜಗತ್ತು ಸಾರಿ ಸಾರಿ ಹೇಳಿದೆ. ತಮ್ಮ ತಮ್ಮ ತಾಯ್ನುಡಿಯನ್ನು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಎಲ್ಲ ದೇಶಗಳು ಏಳಿಗೆ ಸಾಧಿಸಿ ಮುನ್ನಡೆದಿದ್ದರೆ, ಅಂತಹದೊಂದು ಕನಸು ಕಾಣುವುದೇ ಅಪರಾಧ, ಅದು ಎಂದಿಗೂ ಸಾಧ್ಯವಿಲ್ಲ ಅನ್ನುವ ಆತ್ಮಹತ್ಯಾ ಭಾವ ಆವರಿಸಿಕೊಂಡಿರುವ ಭಾರತದಂತಹ ದೇಶ, ಏಳಿಗೆ ಹೊಂದಿರುವ ದೇಶದ ಬ್ಯಾಕ್ ಆಫೀಸ್ ನಂತೆ ಕೆಲಸ ಮಾಡುತ್ತ ಒಂದಿಷ್ಟು ಸರ್ವಿಸಸ್ ನ ಪುಡಿಗಾಸು ಸಂಪಾದಿಸಿಕೊಂಡು, ಅದನ್ನೇ ಏಳಿಗೆ ಎಂದು ನಂಬಿ, ಸಮಾಜವನ್ನು ನಂಬಿಸುವಂತಹ ದಡ್ಡತನ ತೋರಿಸುತ್ತಿದೆ. ಹೀಗೆ ಹುಟ್ಟುತ್ತಿರುವ ಪುಡಿಗಾಸಿಗೆ ಕಾರಣವಾಗಿರುವ ಇಂಗ್ಲಿಷ್ ಒಂದೇ ನಮ್ಮನ್ನು ನಮ್ಮ ಬಡತನದಿಂದ, ದಾರಿದ್ರ್ಯದಿಂದ, ಕಷ್ಟದಿಂದ ಪಾರು ಮಾಡುವ ಕಾಮಧೇನು ಅನ್ನುವ ಕೆಲವು ಪ್ರಭಾವಿಗಳ ನಂಬಿಕೆಗಳು ತಾಯ್ನುಡಿ ಶಿಕ್ಷಣವನ್ನು ಮೇಲೆತ್ತುವ, ಅದರಲ್ಲಿ ಅನ್ನದ ವಿದ್ಯೆ ತರುವ, ಆ ಮೂಲಕ ಒಳ್ಳೆಯ ದುಡಿಮೆ ಹುಟ್ಟಿಸುವ ವ್ಯವಸ್ಥೆಗೆ ಅಡಿಪಾಯ ಹಾಕಬೇಕಿದ್ದ ಸರ್ಕಾರದ ದಿಕ್ಕು ತಪ್ಪಿಸುತ್ತಿದೆ ಅಂದರೆ ತಪ್ಪಾಗದು.

ಕನ್ನಡ ನುಡಿಯ ಯೋಗ್ಯತೆ ಹೆಚ್ಚಿಸುವುದು ಯಾವಾಗ?
ಇನ್ನೂ ಕನ್ನಡ ನುಡಿಯಲ್ಲಾಗಬೇಕಾದ ಸುಧಾರಣೆ ಬಗ್ಗೆಯೂ ಯಾವ ಚರ್ಚೆಯೂ ಏರ್ಪಟ್ಟಿಲ್ಲ. ಜ್ಞಾನ-ವಿಜ್ಞಾನದ ಸಾರವನ್ನು ಕನ್ನಡಿಗರಿಗೆ ಕನ್ನಡದಲ್ಲೇ ತರಲು ನಮ್ಮ ನುಡಿ ಸಿದ್ಧವಾಗಿದೆಯೇ? ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತದಲ್ಲೂ ಹಂತ ಹಂತವಾಗಿ ಒಳ್ಳೆಯ ಕಲಿಕೆ ತರಲು ನಮ್ಮ ನುಡಿಯ ಸುತ್ತ ಭಾಷಾ ವಿಜ್ಞಾನದ ಕಣ್ಣಿನಿಂದ ಆಗಬೇಕಾದ ಕೆಲಸಗಳೇನು? ಇಂತಹ ಕೆಲಸಗಳಿಗೆ ಹೆಚ್ಚು ಹೆಚ್ಚು ಪ್ರತಿಭಾವಂತ ಹುಡುಗರನ್ನು ಸೆಳೆಯುವುದು ಹೇಗೆ? ಅಂತಹದೊಂದು ವಾತಾವರಣ (eco-system) ಕಟ್ಟುವುದರಲ್ಲಿ ಸರ್ಕಾರದ, ವಿಶ್ವವಿದ್ಯಾಲಯಗಳ, ಶಿಕ್ಷಣ ತಜ್ಞರ, ಭಾಷಾ ವಿಜ್ಞಾನಿಗಳ ಪಾತ್ರವೇನು ಅನ್ನುವ ಬಗ್ಗೆ ಚರ್ಚೆ ನಡೆದಿದ್ದಲ್ಲಿ, ಕನ್ನಡಕ್ಕೆ ಇವತ್ತು ಇಲ್ಲದಿರುವ ಕೆಲವು ಯೋಗ್ಯತೆ ತಂದು ಕೊಡುವ ಬಗ್ಗೆ ನಿಜವಾದ ಅರ್ಥದಲ್ಲಿ ಕೆಲಸ ಶುರುವಾಗಿದೆ ಅನ್ನಬಹುದಿತ್ತು. ನಮ್ಮ ನುಡಿಗೆ ಯೋಗ್ಯತೆ ತಂದುಕೊಡದೇ ನಮ್ಮ ವೈಫಲ್ಯತೆಗೆ ಜಾಗತೀಕರಣವನ್ನು ಬೈದು ಏನು ಪ್ರಯೋಜನವಾಗದು.

ಉದ್ದಿಮೆಗಾರಿಕೆ ಹೆಚ್ಚಿಸುವುದು ಹೇಗೆ?
ಉದ್ಯಮಿ ನಾರಾಯಣ ಮೂರ್ತಿಯವರನ್ನು ಕರೆಸುತ್ತಿರುವುದದಿಂದ ಚರ್ಚಾ ಗೋಷ್ಟಿಗಳಲ್ಲಿ ಉದ್ದಿಮೆಗಾರಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆನೋ ಅಂದುಕೊಂಡಿದ್ದೆ. ಉದ್ಯಮಿಯೊಬ್ಬರು ಈ ಸಭೆಗೆ ಚಾಲನೆ ನೀಡುತ್ತಿರುವುದದಿಂದ ಉದ್ದಿಮೆಗಾರಿಕೆ, ಉದ್ಯಮಿಗಳಾಗುವುದು, ಉದ್ಯಮಗಳನ್ನು ಕಟ್ಟುವುದು ಹೀಗೆ ಉದ್ದಿಮೆಗಾರಿಕೆಯ ನಾನ ಮಝಲನ್ನು ಮುಟ್ಟುವ, ಕನ್ನಡಿಗರಲ್ಲಿ ಈ ಕೊರತೆಯನ್ನು ನೀಗಿಸುವ ಬಗ್ಗೆ ಚರ್ಚೆ ನಡೆಸುವ ಅವಕಾಶವಿತ್ತು. ಗೋಷ್ಟಿಗಳ ಪಟ್ಟಿ ನೋಡಿದಾಗ ಈ ಬಗ್ಗೆ ಗಮನ ಕೊಟ್ಟ ಹಾಗಿಲ್ಲ.

ನಾಳೆ ನಮ್ಮದಾಗಲಿ
ಕನ್ನಡವೆಂದರೆ ಬರೀ ಸಾಹಿತ್ಯ, ಸಂಗೀತ, ನಾಟಕ,ಸಿನೆಮಾ ಅನ್ನುವ ಜುಟ್ಟಿನ ಮಲ್ಲಿಗೆಗೆ ಸೀಮಿತವಾಗಿರುವಾಗ, ಅದರಲ್ಲೂ ಬದುಕಿನ ವಿದ್ಯೆಗಳನ್ನು ತರಬಹುದು, ಅದರಲ್ಲೂ ಅನ್ನ ಹುಟ್ಟಿಸಬಹುದು ಅನ್ನುವುದನ್ನು ಸಾಧಿಸಿ ತೋರಿಸುವ ಹೊಣೆಗಾರಿಕೆ ಕನ್ನಡದ ಬಗ್ಗೆ ಕನಸು ಕಾಣುವ ಎಲ್ಲ ಕನ್ನಡದ ಯುವಕರ ಮುಂದಿದೆ. ಇವತ್ತಿನ ವ್ಯವಸ್ಥೆಯನ್ನು ಅಲ್ಲಗಳೆಯದೆಲೆ ಇಂದಿನ ವ್ಯವಸ್ಥೆಯ ಸಾರವನ್ನು ಹೀರಿಕೊಂಡೇ ನಾಳೆ ಕನ್ನಡದಲ್ಲೂ ಈಗಿರುವುದಕ್ಕಿಂತಲೂ ಅದ್ಭುತವಾದ ವ್ಯವಸ್ಥೆ ಕಟ್ಟುವ ಕೆಲಸವಾಗಬೇಕಿದೆ. ಇಂದಿರುವ ವ್ಯವಸ್ಥೆಯನ್ನು ಚಿಮ್ಮುಹಲಗೆಯಾಗಿಸಿಕೊಂಡೇ ಆಗಸಕ್ಕೆ ನೆಗೆಯುವ ಕನಸು ಕಾಣಬೇಕಿದೆ. ಅದಾಗದೇ ಎಷ್ಟು ಸಮ್ಮೇಳನ, ಸಭೆ ಮಾಡಿದರೂ ಕನ್ನಡ ಮುಂದಾಗದು.

ಶುಕ್ರವಾರ, ಮಾರ್ಚ್ 4, 2011

ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಇನ್ ಫೋಸಿಸ್ ನ ನಾರಾಯಣ ಮೂರ್ತಿ "ಅವರನ್ನು ಆಯ್ಕೆ ಮಾಡಿದ ಸರ್ಕಾರದ ಕ್ರಮ ತಪ್ಪೆಂದೂ, ಅವರೊಬ್ಬ ಉದ್ಯಮಿಯೇ ಹೊರತು ಕನ್ನಡಕ್ಕೆ ಅವರ ಕೊಡುಗೆ ಶೂನ್ಯ" ಅಂತಲೂ ಅವರ ಆಯ್ಕೆಯ ಬಗ್ಗೆ ಅಪಸ್ವರ ಎದ್ದ ಸುದ್ದಿ ಪತ್ರಿಕೆಗಳಲ್ಲಿ,ಟಿವಿಗಳಲ್ಲಿ ನೋಡಿದೆ. ಅದೇ ಸಮಯಕ್ಕೆ ಕೆಲವು ಪತ್ರಿಕೆಗಳಲ್ಲಿ "ಅವರೊಬ್ಬ ಉದ್ಯಮಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ, ಅವರ ಆಯ್ಕೆಯನ್ನು ವಿರೋಧಿಸಿರುವವರು ಕನ್ನಡಕ್ಕೆ ಏನ್ ಮಾಡಿದ್ದಾರೆ?" ಎಂದು ಮೂರ್ತಿ ಅವರ ಆಯ್ಕೆಯನ್ನು ಸಮರ್ಥಿಸುವ ಸುದ್ದಿಯನ್ನು ಕಂಡೆ. ಕರ್ನಾಟಕದ ಸಮಾಜಕ್ಕೆ ಮೂರ್ತಿ ಅವರ ಕೊಡುಗೆ ಏನೇನು ಇಲ್ಲ ಅನ್ನುವುದು ಎಷ್ಟು ತಪ್ಪೋ, ಮೂರ್ತಿ ಅವರ ಪರವಾಗಿ ಬರೆಯುವ ಆತುರದಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಅವರು ಮಾತಾಡಿದ್ದು, ಮಾಡಿದ್ದೆಲ್ಲ ಸರಿ ಅನ್ನುವ ಧೋರಣೆಯೂ ಅಷ್ಟೇ ತಪ್ಪು.

ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿದ್ದರೂ, ಜಾಗತೀಕರಣದ ನಂತರ ತೆರೆದ ಮಾರುಕಟ್ಟೆ ಕೊಡ ಮಾಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ, ಪ್ರತಿಭೆ, ಪರಿಶ್ರಮಕ್ಕೆ ಬೆಲೆ ಕೊಡುವ ವ್ಯವಸ್ಥೆಯೊಂದನ್ನು ಕಟ್ಟಬಹುದು ಮತ್ತು ಆ ಮೂಲಕ ದೊಡ್ಡ ಮಟ್ಟದಲ್ಲಿ ಕೆಲಸ ಮತ್ತು ಸಂಪತ್ತು ಸೃಷ್ಟಿಸಬಹುದು ಹಾಗೂ ಆ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಜೀವನದ ಆರ್ಥಿಕ ಮಟ್ಟ ಸುಧಾರಿಸಬಹುದು ಅನ್ನುವುದನ್ನು ತೋರಿಸಿಕೊಟ್ಟ ಶ್ರಮಜೀವಿ ಕನಸುಗಾರರಲ್ಲಿ ಇವರೂ ಒಬ್ಬರು. ಉದ್ಯಮಶೀಲತೆಯ ಅಪಾರ ಕೊರತೆ ಅನುಭವಿಸುತ್ತಿರುವ ಕನ್ನಡನಾಡಿನ ಯುವ ಜನತೆಗೆ ದೊಡ್ಡದಾಗಿ ಯೋಚಿಸುವ, ಕನಸು ಕಾಣುವ, ಆ ಕನಸಿನ ಬೆನ್ನತ್ತಿ ಶ್ರಮ ಪಟ್ಟರೆ ಎಂತಹ ಯಶಸ್ಸು ಸಾಧಿಸಬಹುದು ಅನ್ನುವ ನಂಬಿಕೆಯನ್ನು ಇನ್ ಫೋಸಿಸ್ ನ ಯಶಸ್ಸಿನ ಮೂಲಕ ಬಿತ್ತಿದ ಉದ್ಯಮಿ ನಮ್ಮ ನಾರಾಯಣ ಮೂರ್ತಿಯವರು.

ಅವರ ಶ್ರಮ, ಮುಂದಾಲೋಚನೆ ಅವರಿಗಷ್ಟೇ ಗೆಲುವು ತರಲಿಲ್ಲ. ದೊಡ್ಡ ಮಟ್ಟದಲ್ಲಿ ಐಟಿ ಕ್ರಾಂತಿಗೂ ಅದು ಸ್ಪೂರ್ತಿಯಾಯಿತು. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಕಲ್ಪಿಸುವ ಆ ಮೂಲಕ ದೊಡ್ಡ ಮಟ್ಟದಲ್ಲಿ ಅವರ ಆರ್ಥಿಕ ಮಟ್ಟದ ಸುಧಾರಣೆಗೆ ಅದು ಇಂಬು ನೀಡಿತು. ಆದ್ದರಿಂದಲೇ ಇಡೀ ಕನ್ನಡ ಸಮಾಜ ಅವರ ಸಂಸ್ಥೆಗೂ, ಅವರಿಗೂ ಎತ್ತರದ ಸ್ಥಾನಮಾನ, ಗೌರವವನ್ನು ಕಲ್ಪಿಸಿತ್ತೆನ್ನಬಹುದು. ಒಬ್ಬ ಉದ್ಯಮಿಯಾಗಿ ಏನ್ ಮಾಡಬಹುದೋ ಅದನ್ನು ಅವರು ಮಾಡಿದರು ಅನ್ನಲು ಅಡ್ಡಿಯಿಲ್ಲ. ಆ ವಿಷಯದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲೂ ಬೇಕು.

ಮೂರ್ತಿ ಅವರಿಗೆ ಅರ್ಥವಾಗದ ಕನ್ನಡ ಸಮಾಜ !

ಒಬ್ಬ ಸಾಹಿತಿ, ನಟ ಹೇಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಅಂತೆಯೇ ಮೂರ್ತಿಯವರು ತಮ್ಮ ಉದ್ಯಮದಲ್ಲಿ ಕೆಲಸ ಮಾಡಿ ಗುರುತರವಾದದ್ದನ್ನು ಸಾಧಿಸಿದ್ದಾರೆ. ಅದನ್ನು ಅಷ್ಟಕ್ಕೆ ಸೀಮಿತಗೊಳಿಸಿ ನೋಡಬೇಕು. ಆದರೆ ಯಾರಾದ್ರೂ ಗೆಲುವು ಕಂಡ್ರೆ, ಎಲ್ಲದಕ್ಕೂ ಅವರ ಸಲಹೆ ಕೇಳುವುದು ನಮ್ಮ ಸಮಾಜ, ಸರ್ಕಾರಕ್ಕಂಟಿರುವ ಊನವೆನ್ನಬಹುದು. ಅದರಂತೆ ಅವರ ಸಂಸ್ಥೆಯ ಯಶಸ್ಸು ಕಂಡ ನಮ್ಮ ಜನ, ನಮ್ಮ ಮಾಧ್ಯಮದವರು ಕನ್ನಡ ನಾಡಿನ ಏಳಿಗೆ, ಭವಿಷ್ಯದ ಬಗ್ಗೆಯೂ ಅವರ ಅಭಿಪ್ರಾಯ, ಸಲಹೆ ಕೇಳಿದಾಗಲೇ ಕನ್ನಡ ಸಮಾಜವನ್ನು, ಅದರ ಅಗತ್ಯಗಳನ್ನು ಅವರು ಅರ್ಥೈಸಿಕೊಂಡಿರುವ ರೀತಿಯಲ್ಲಿರುವ ತೊಂದರೆ ಎಂತದ್ದು ಅನ್ನುವುದು ಗಮನಕ್ಕೆ ಬಂದಿದ್ದು. ಮೂರ್ತಿಯವರ ಪ್ರಕಾರ ಇಂಗ್ಲಿಷ್ ಒಂದೇ ನಮ್ಮ ನಾಡನ್ನು ಪ್ರಪಂಚದ ಮುಂಚೂಣಿಗೆ ತಂದು ನಿಲ್ಲಿಸಬಲ್ಲಂತದು. ಈ ನಾಡಿಗೆ ಭವಿಷ್ಯ ಬೇಕಾ, ಇಂಗ್ಲಿಷ್ ಅಪ್ಪಿಕೊಳ್ಳಿ ಇಲ್ಲದಿದ್ದರೆ ಉಳಿಗಾಲವಿಲ್ಲ ಅನ್ನುವ ತಪ್ಪು ಧೋರಣೆ ಅವರದ್ದು. "ಕನ್ನಡ ಮಾಧ್ಯಮ ಶಾಲೆಗಳನ್ನೆಲ್ಲ ಮುಚ್ಚಿ, ಇಂಗ್ಲಿಷ್ ಶಾಲೆ ತೆರೆಯಿರಿ" ಜಾಗತೀಕರಣವನ್ನು ಎದುರಿಸಲು ಇಂಗ್ಲಿಷ್ ಒಂದೇ ಸಾಧನ ಅನ್ನುತ್ತ ಜಗತ್ತೇ ಒಪ್ಪಿರುವ ತಾಯ್ನುಡಿ ಶಿಕ್ಷಣದ ಜಾಗದಲ್ಲಿ ಇಂಗ್ಲಿಷ್ ಕಲಿಕಾ ವ್ಯವಸ್ಥೆ ತರುವುದನ್ನು ಬೆಂಬಲಿಸಿ ಕನ್ನಡದ ಮಕ್ಕಳ ಕಲಿಕೆಯ ಈ ದಿನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಕತ್ ಆಗೇ ಎಡವಿದರು.

ಕನ್ನಡ ಸಮಾಜವೊಂದೇ ಅಲ್ಲ, ಭಾರತವೆಂಬ ಒಕ್ಕೂಟವೂ ಅವರಿಗರ್ಥವಾಗಿಲ್ಲ !
  
ಬೆಂಗಳೂರಿನಲ್ಲಿ ಇವರ ಸಂಸ್ಥೆಯ ಏಳಿಗೆಗೆ ಸರ್ಕಾರದ ಕೊಡುಗೆ ಕಡಿಮೆಯೇನಲ್ಲ. ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆದಿದ್ದರೂ (ನೆಲ, ಜಲ, ತೆರಿಗೆ ವಿನಾಯಿತಿ) ನಗರದ ಮೂಲಭೂತ ಸೌಕರ್ಯ ಸರಿಯಿಲ್ಲ, ಅದರಿಂದ ಅನಾನುಕೂಲವಾಗಿದೆ,, ಆದ್ದರಿಂದ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ಹೆಚ್ಚು ಅನುಕೂಲ ಅನ್ನುವ ಧಾಟಿಯಲ್ಲಿ ಮಾತನಾಡಿದ್ದು ಮೂರ್ತಿಯವರೇ. ತಮಗೆ ಒಂದಿಷ್ಟು ಅನಾನುಕೂಲವಾಯಿತು ಎಂದು ಬೆಂಗಳೂರನ್ನು ಕರ್ನಾಟಕದಿಂದ ಬೇರ್ಪಡಿಸಿ ಅನ್ನುವುದು ಭಾರತವೆಂಬ ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು ಆಡುವ ಮಾತೇ? ಬೆಂಗಳೂರನ್ನು ಕೇಂದ್ರಕ್ಕೆ ವರ್ಗಾಯಿಸೋ ಬದಲು ಅಮೇರಿಕಕ್ಕೆ ವರ್ಗಾಯಿಸಿದರೆ ಇನ್ನೂ ಒಳ್ಳೆದಲ್ವಾ? ಎಷ್ಟಂದರೂ ಅವರು ಒಳ್ಳೆ ಮೂಲಭೂತ ಸೌಕರ್ಯ ಕಲ್ಪಿಸುವುದರಲ್ಲಿ ಜಗತ್ತಿಗೆ ದೊಡ್ಡವರಲ್ವಾ. ನಮ್ಮ ಆಡಳಿತದಲ್ಲಿ ಒಂದಿಷ್ಟು ತೊಂದರೆ ಇದೆ ಅಂದಾಕ್ಷಣ ಭಾರತದ ಒಕ್ಕೂಟದ ಸ್ವರೂಪವನ್ನೇ ಬದಲಾಯಿಸಿ ಅನ್ನುವವರಿಗೆ ಭಾರತವೆಂಬ ಒಕ್ಕೂಟ ವ್ಯವಸ್ಥೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಅನ್ನಿಸಲ್ವಾ?  

ಹೋಗಲಿ, ಇವರ ಸಂಸ್ಥೆಯಲ್ಲೇ ಕನ್ನಡದ ಸ್ಥಿತಿ ಹೇಗಿದೆ?

ಇವರ ಸಂಸ್ಥೆಯ ಮಂಗಳೂರು, ಮೈಸೂರು, ಬೆಂಗಳೂರು ಕೇಂದ್ರಗಳಲ್ಲಿ ಕನ್ನಡ, ಕನ್ನಡಿಗರ ಸ್ಥಿತಿ ಹೇಗಿದೆ? ನಿಜಕ್ಕೂ ಅಷ್ಟೇನು ಚೆನ್ನಾಗಿಲ್ಲ ಅಂತಾರೆ ಅಲ್ಲಿ ಕೆಲಸ ಮಾಡುವ ಗೆಳೆಯರು. ಒಂದು ಚಿಕ್ಕ ಕನ್ನಡ ಕಲಿ ಕಾರ್ಯಕ್ರಮ ಮಾಡುವುದಾಗಿರಬಹುದು, ಇಲ್ಲವೇ ಕನ್ನಡ ರಾಜ್ಯೋತ್ಸವ ಆಚರಿಸುವುದಿರಬಹುದು. ಅಲ್ಲಿನ ಕನ್ನಡಿಗರು ಎಷ್ಟು ಕಷ್ಟ ಪಟ್ಟು ದಕ್ಕಿಸಿಕೊಂಡಿದ್ದಾರೆ ಅನ್ನುವುದನ್ನು ಬಲ್ಲವರೇ ಬಲ್ಲರು. ಯಾಕೆ ಹೀಗಿದೆ? ಇದಕ್ಕೆ ಮೂರ್ತಿಯವರ indifference ಕಾರಣ ಅನ್ನಿಸಲ್ವಾ? ಕನ್ನಡ ಪರವಾಗಿರೋದು ಬೇಡ, ಕೊನೆ ಪಕ್ಷ ಇಂತಹದೊಂದು ಲೆಕ್ಕಕ್ಕಿಲ್ಲ ಅನ್ನುವ ಧೋರಣೆಯನ್ನು ಇವರು ತೋರಿಸದೇ ಇದ್ದಿದ್ದರೆ ಆ ಸಂಸ್ಥೆಯಲ್ಲಿ ಹಿರಿಯ ಹುದ್ದೆಯಲ್ಲಿರುವ ಪರಭಾಷಿಕರು ಇಂತಹದೊಂದು ಧೋರಣೆ ತೋರಿಸುತ್ತಿದ್ದರೇ? ಇನ್ಫಿಯ ಮಂಗಳೂರು, ಮೈಸೂರು ಕೇಂದ್ರದಲ್ಲಿ ಮಲಯಾಳಿಗಳದ್ದೇ ಕಾರುಭಾರು ಎಂದು ಕೇಳ್ಪಟ್ಟೆ. ಪ್ರತಿಭೆಯೊಂದೇ ಮಾನದಂಡ ಅಂತ ಇವರೆನೋ ಅನ್ನುತ್ತಾರೆ, ಹಾಗಾದ್ರೆ ಇಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದೆ ಅನ್ನುವುದು ಏನ್ ತೋರಿಸುತ್ತೆ ? ನಮಗೆ ಪ್ರತಿಭೆಯೇ ಇಲ್ಲವೆಂತಲೋ ಇಲ್ಲ ಮಲೆಯಾಳಿಗಳಿಗೆ ಮಾತ್ರ ಪ್ರತಿಭೆ ಇದೆ ಅಂತಲೋ? ಕಾಕತಾಳೀಯವೆಂಬಂತೆ ಈ ಕೇಂದ್ರದ ಹೆಚ್ಚಿನ ಹಿರಿಯ ಅಧಿಕಾರಿಗಳು ಮಲೆಯಾಳಿಗಳು ಅಂತಲೂ ಕೇಳ್ಪಟ್ಟೆ :) .

ನಾರಾಯಣ ಮೂರ್ತಿ ಅವರಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಅನ್ನುವುದು ಎಷ್ಟು ಸರಿಯೋ, ಕಣ್ಣು ಮುಚ್ಚಿ ಅವರನ್ನು ರೋಲ್ ಮಾಡೆಲ್ ಅಂತ ಒಪ್ಪಿಕೊಳ್ಳುವುದು, ಸಮಾಜದ ಬಗ್ಗೆ ಅವರು ಕೊಡುವ ಟಿಪ್ಪಣಿಯನ್ನು ಪರಿಶೀಲಿಸದೆ ವೇದ ವಾಕ್ಯವೆಂಬಂತೆ ಕಣ್ಣಿಗೊತ್ತಿಕೊಳ್ಳುವುದು ಅಷ್ಟೇ ತಪ್ಪು.

ಸೋಮವಾರ, ಫೆಬ್ರವರಿ 21, 2011

ರಾಜ್ಯಸಭೆಗೆ ಕನ್ನಡೇತರರು - ಎಷ್ಟು ಸರಿ ?

ರಾಜ್ಯ ಸಭೆ ಸದಸ್ಯರಾದ ರಾಜಶೇಖರ್ ಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿಂದಿ ನಟಿ ಹೇಮಾಮಾಲಿನಿ ಅನ್ನುವವರ ಹೆಸರನ್ನು ಬಿಜೆಪಿಯ ಹೈಕಮಾಂಡ್ ತೀರ್ಮಾನಿಸಿದೆ ಅನ್ನುವ ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದೆ. ಹೀಗೆ ಕನ್ನಡ, ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದ, ಯಾವ ಸೇವೆಯನ್ನು ಮಾಡದ, ಕನ್ನಡಿಗರ ಬದುಕಿನ ಯಾವ ಸಮಸ್ಯೆಗಳ ಬಗ್ಗೆಯೂ ಒಂದಿನಿತು ಅರಿವಿಲ್ಲದ ಒಬ್ಬ ಮಾಜಿ ಚಿತ್ರ ನಟಿ, ಈ ರೀತಿ ರಾಜ್ಯ ಸಭೆ ಅನ್ನುವ ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲೆಂದೇ ಹುಟ್ಟಿದ ವ್ಯವಸ್ಥೆಗೆ, ಆಯ್ಕೆಯಾಗುವುದನ್ನು ನೋಡಿದಾಗ ಈ ರಾಜ್ಯಸಭೆ ಅನ್ನುವ ವ್ಯವಸ್ಥೆಯ ಅರ್ಥವಾದರೂ ಏನು? ಅದು ಯಾಕಾಗಿ ಬೇಕಾಗಿದೆ ಅನ್ನುವ ಪ್ರಶ್ನೆ ಮನದಲ್ಲಿ ಹುಟ್ಟಿತು.

ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ?

ರಾಜ್ಯಸಭೆ ಅನ್ನುವುದು ಮಾಂಟೆಗೊ-ಚೆಮ್ಸಫರ್ಡ್ ಅನ್ನುವ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರದಿಯನ್ನಾಧರಿಸಿ 1918ರಲ್ಲಿ ಹುಟ್ಟಿದ ವ್ಯವಸ್ಥೆ. ಸ್ವಾತಂತ್ರ್ಯ ಬಂದ ನಂತರ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆ ಅನ್ನುವ Council of States ಮುಂದುವರೆಯಬೇಕೇ, ಅದರ ಅಗತ್ಯ ಇದೆಯೇ ಅನ್ನುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿತ್ತು. ಭಾರತದಂತ ಹೆಜ್ಜೆ ಹೆಜ್ಜೆಗೂ ವೈವಿಧ್ಯತೆಯುಳ್ಳ ದೇಶಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯಾದ ವ್ಯವಸ್ಥೆ ಅಂಬುದನ್ನು ಅಂದಿನ ರಾಜಕೀಯ ನಾಯಕರು ಒಪ್ಪಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯೆಂದೇ ಘೋಷಿಸಿದ್ದರು. ಜನರಿಂದಲೇ ನೇರವಾಗಿ ಆಯ್ಕೆಯಾಗುವ ಲೋಕಸಭೆಯೊಂದಕ್ಕೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದು, ಆದ್ದರಿಂದ ರಾಜ್ಯಸಭೆ ಅನ್ನುವ ಪ್ರತಿ ರಾಜ್ಯದ ಜನ ಪ್ರತಿನಿಧಿಗಳಿಂದಲೇ ಆಯ್ಕೆಯಾಗಿ ಬರುವ ವಿಶೇಷ ಪ್ರತಿನಿಧಿಗಳ ಸಂಸ್ಥೆಯನ್ನು ಲೋಕಸಭೆಗೆ complimentory ಎಂಬಂತೆ ಇಟ್ಟುಕೊಳ್ಳಲಾಯಿತು. ಅದರ ಸ್ಥಾಪಿತ ಉದ್ದೇಶವನ್ನು ರಾಜ್ಯಸಭೆಯ ವೆಬ್ ಸೈಟ್ ಹೀಗೆ ಬಣ್ಣಿಸುತ್ತೆ (ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)
Extensive debate took place in the Constituent Assembly regarding the utility or otherwise of a Second Chamber in Independent India and ultimately, it was decided to have a bicameral legislature for independent India mainly because a federal system was considered to be most feasible form of Government for such a vast country with immense diversities.  A single directly elected House, in fact, was considered inadequate to meet the challenges before free India.  A second chamber known as the ‘Council of States’, therefore, was created with altogether different composition and method of election from that of the directly elected House of the People.  It was conceived as another Chamber, with smaller membership than the Lok Sabha (House of the People).  It was meant to be the federal chamber i.e., a House elected by the elected members of Assemblies of the States and two Union Territories in which  States were not given equal representation.
ಲೋಕಸಭೆಯಲ್ಲಿ ಕೈಗೊಳ್ಳುವ ತೀರ್ಮಾನವನ್ನು ಪರಿಶೀಲಿಸಲು, ಪ್ರಜೆಗಳ ಅನುಕೂಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಸೂಚಿಸುವ ಅಧಿಕಾರ ರಾಜ್ಯಸಭೆಗಿದೆ. ಅಷ್ಟರ ಮಟ್ಟಿಗೆ ಅದರ ಸ್ಥಾಪಿತ ಉದ್ದೇಶ ಜನರ ಕಲ್ಯಾಣಕ್ಕಾಗಿ ರೂಪಿಸುವ ಎಲ್ಲ ಯೋಜನೆಗಳನ್ನು, ಅದರ ಅನುಷ್ಟಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದಾಗಿದೆ ಅನ್ನಬಹುದು.

ಎಲ್ಲ ಸರಿ, ಆದರೆ ಇಂದು ನಡೆಯುತ್ತಿರುವುದಾದರೂ ಏನು?
ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಧರ್ಮವನ್ನು ಸರಿಯಾಗಿ ಪಾಲಿಸಲೆಂದೇ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯಲ್ಲಿ ಇಂದು ನಡೆಯುತ್ತಿರುವುದು ಏನು? ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯವೂ ತನ್ನ ನೆಲದ ಸಮಸ್ಯೆಗಳಿಗೆ ಕೇಂದ್ರದಿಂದ ಅರ್ಹವಾಗಿ ಸಿಗಬೇಕಾದ ಪರಿಹಾರ,ನೆರವು, ಅನುದಾನಕ್ಕಾಗಿ ಲೋಕಸಭೆ,ರಾಜ್ಯಸಭೆಯತ್ತ ನೋಡುತ್ತವೆ. ಎರಡೂ ಕಡೆಗಳಲ್ಲೂ ಆಯಾ ರಾಜ್ಯದ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇದ್ದು, ಆ ಸಮಸ್ಯೆಗಳಿಗೆ ಪರಿಹಾರವೇನು, ಅದರಲ್ಲಿ ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳೇನು ಅನ್ನುವುದರ ಅರಿವಿರುವ ಜನರು ಸದಸ್ಯರಾಗಿದ್ದಲ್ಲಿ, ಅವರು ಸಮರ್ಥರಾಗಿ ಧ್ವನಿ ಎತ್ತಿದಲ್ಲಿ ಅವುಗಳಿಗೆ ತಕ್ಕ ಪರಿಹಾರ ದೊರಕುತ್ತೆ. ಹೀಗಿರುವಾಗ ಕರ್ನಾಟಕದ ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡದ, ಇಲ್ಲಿನ ಸಮಸ್ಯೆ, ದುಃಖ-ದುಮ್ಮಾನಗಳನ್ನು ಹತ್ತಿರದಿಂದೆಲೂ ನೋಡದ ಯಾವುದೋ ಚಿತ್ರನಟಿಯೊಬ್ಬರನ್ನು ಕರೆತಂದು ಸದಸ್ಯರಾಗಿಸುವುದು ಒಕ್ಕೂಟ ವ್ಯವಸ್ಥೆಯನ್ನೇ ಅಣಕ ಮಾಡುವಂತಹ ತಪ್ಪೆನಿಸುವುದಿಲ್ಲವೇ? ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೆಂದೇ ರಾಜ್ಯ ಸಭೆ ಇರುವುದಲ್ಲವೇ? ಹೇಮಾ ಮಾಲಿನಿ ಕಲಾವಿದೆ, ಕಲೆಗೆ ಭಾಷೆಯ ಹಂಗಿಲ್ಲ ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಸಭೆಯಂತ ವೇದಿಕೆ ಇರುವುದೇ ಹೊರತು, ಯಾವುದೋ ನಿವೃತ್ತ ನಟಿಮಣಿಯರಿಗೆ, ಇಲ್ಲವೇ ವ್ಯಾಪಾರಿಗಳಿಗೆ rehabilitation ಕಲ್ಪಿಸುವ ಆಶ್ರಯ ಕೇಂದ್ರ ಇದಲ್ಲ ಅನ್ನುವುದು.

ಕಾನೂನು ಬದಲಾಯಿಸಿದ್ದು ಎನ್.ಡಿ.ಎ
ಈ ಮೊದಲು ಹೀಗಿರಲಿಲ್ಲ. ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು. ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು. ಆ ತಿದ್ದುಪಡಿ ಇಲ್ಲಿದೆ (ಪುಟ 4 ಅನ್ನು ಗಮನಿಸಿ,ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)
In order to be chosen a member of Rajya Sabha, a person (a) must be a citizen of India, (b) must not be less than 30 years of age. Under the Representation of the People Act, 1951, a person had to be an elector in a parliamentary constituency in the State from where he seeks election to Rajya Sabha. It may, however, be mentioned that the Representation of the People (Amendment) Act, 2003, which amended Section 3 of the Representation of the People Act, 1951, has done away with the requirement of being a resident of State or Union territory from which a person seeks to contest elections to Rajya Sabha.
ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ. ಬಿ.ಜೆ.ಪಿಯ ಧನಂಜಯ್ ಕುಮಾರ್ ದೆಹಲಿಯ ಕರ್ನಾಟಕ ಪ್ರತಿನಿಧಿಯಾಗಿ ಸುಮಾರು ಸಮಯದಿಂದ ಕೆಲಸ ಮಾಡಿಕೊಂಡಿದ್ದರು. ಇನ್ನೂ ಹಲವು ಯೋಗ್ಯ ಕನ್ನಡಿಗರು ಬಿಜೆಪಿಯ ಪಾಳೆಯದಲ್ಲಿ ಇದ್ದಾಗಲೂ ಹೈಕಮಾಂಡ್ ಅನ್ನುವ ಶಾನುಭೋಗ ಕೊಡುವ ಪತ್ರಕ್ಕೆ ಹೆಬ್ಬೆಟ್ಟೆತ್ತುವ ಗಮಾರನಂತೆ ನಡೆದುಕೊಳ್ಳುವ ರಾಜ್ಯದ ನಾಯಕರು ಎಂದಿಗಾದರೂ ಈ ನಾಡಿನ, ಈ ಜನರ ಸಮಸ್ಯೆಗಳಿಗೆ ಸ್ಪಂದಿಸಿಯಾವಾ ? ಬರೀ ಭಾಷಾ ಅಲ್ಪಸಂಖ್ಯಾತರನ್ನು ಒಲೈಸುವುದರಲ್ಲೇ ತಮ್ಮ ಮತಬ್ಯಾಂಕ್ ರಾಜಕೀಯ ಮಾಡುವ ರಾಷ್ಟ್ರೀಯ ಪಕ್ಷಗಳಿಗೆ  ಕನ್ನಡ, ಕನ್ನಡಿಗ ಅನ್ನುವುದು ಎಂದಿಗಾದರೂ ಒಂದು ಗಂಭೀರ ವಿಷಯ ಅನ್ನಿಸಿತಾ ಅನ್ನೋ ಪ್ರಶ್ನೆ ಬಿಟ್ಟು ಬಿಡದೇ ಕಾಡುತ್ತೆ. ಏನಂತೀರಾ ಗೆಳೆಯರೇ?

ಶುಕ್ರವಾರ, ಫೆಬ್ರವರಿ 11, 2011

ಬೆಂಗಳೂರಲ್ಲಿ ಕನ್ನಡಿಗರು ಕಮ್ಮಿ ಅನ್ಬೇಡಿ ಸಾರ್ !

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತೀಚಿಗೆ ಬೆಂಗಳೂರಲ್ಲಿ ನಡೀತು. ಅದ್ದೂರಿ ಮೆರವಣಿಗೆ, ಸಾವಿರಾರು ಕನ್ನಡಿಗರು, ನೂರಾರು ಹೊತ್ತಗೆ ಮಳಿಗೆಗಳು, ಹಾರಾಡುತ್ತಿದ್ದ ಹಳದಿ ಕೆಂಪು ಬಾವುಟಗಳು, ಉಕ್ಕಿ ಹರಿಯುತ್ತಿದ್ದ ಸಡಗರ, ತುಂಬಿ ತುಳುಕುತ್ತಿದ್ದ ಬಸವನಗುಡಿ... ಓಹ್, ಕನ್ನಡದ ನುಡಿಹಬ್ಬದ ಸೊಗಸನ್ನು ತುಂಬಿಕೊಳ್ಳಲು ಎರಡು ಕಣ್ಣು ಸಾಲದಾಗಿದ್ದವು. ಈ ಸಮ್ಮೇಳನದ ಅಧ್ಯಕ್ಷರಾದ ಹಿರಿಯರಾದ ವೆಂಕಟಸುಬ್ಬಯ್ಯನವರು (ಚಿತ್ರ ಕೃಪೆ: ದ ಹಿಂದೂ) ಈ ಸಂದರ್ಭದಲ್ಲಿ ಭಾಷಣ ಮಾಡಿದರು. ಅನಿಯಂತ್ರಿತ ವಲಸೆಯಿಂದ ಮುಂದೊಂದು ದಿನ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬಹುದು, ಕಾಲ್ ಸೆಂಟರ್ ಐವಿಆರ್ ನಲ್ಲಿ ಕನ್ನಡ ಆಯ್ಕೆ ಬಳಸಿ, ಅಡುಗೆ ಮನೆಯಲ್ಲಿ ಕನ್ನಡದ ಹೆಂಗಸರು ಕನ್ನಡ ಬಳಸಿ,, ಹೀಗೆ ಹಲವು ವಿಷಯಗಳಲ್ಲಿ ಸತ್ತಂತಿಹ ಕನ್ನಡಿಗರನ್ನು ಬಡಿದೆಬ್ಬಿಸುವಂತ ವಿಷಯಗಳನ್ನು ಅಧ್ಯಕ್ಷರು ತಮ್ಮ ಭಾಷಣದಲ್ಲಿ ಹೇಳಿದರು. ಅವೆಲ್ಲವೂ ಅವರ ಬಗ್ಗೆ ನನಗಿದ್ದ ಗೌರವವನ್ನು ಇಮ್ಮಡಿಗೊಳಿಸಿದವು. ಹೀಗೆ ಹೇಳುತ್ತಲೇ ಅವರಾಡಿದ ಇನ್ನೊಂದು ಮುಖ್ಯವಾದ ವಿಷಯದ ಬಗ್ಗೆ  ನನ್ನ ಬ್ಲಾಗ್ ಅಲ್ಲಿ ಬರಿಬೇಕು ಅನ್ನಿಸ್ತು. ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ನೂರಕ್ಕೆ ಮೂವತ್ತರಷ್ಟು ಇದೆ ಮತ್ತು ಮತ್ತಷ್ಟು ಕುಸಿಯುತ್ತಿದೆ ಎಂದು ಜಿವಿ ಅವರು ಹೇಳಿದ್ರು, ಇದು ನಿಜಾನಾ? ಇದನ್ನ ಆಡಳಿತದಲ್ಲಿರುವ ಹಲವರು ಆಗಾಗ ಹೇಳ್ತಾನೇ ಇರ್ತಾರೆ, ಆದ್ರೆ ಇದೆಷ್ಟು ನಿಜ?

ಕನ್ನಡಿಗರ ಸಂಖ್ಯೆಯ ಬಗ್ಗೆ!
ಕನ್ನಡಿಗರು ಕಡಿಮೆ ಅನ್ನುವ ಅಂಕಿ-ಅಂಶಕ್ಕೆ ಸಾಮಾನ್ಯವಾಗಿ ಆಧಾರವೆಂದರೆ 2001ರ ಜನಗಣತಿಯ ಮಾಹಿತಿ. ಇದು ಅರೆಬೆಂದ ಮಾಹಿತಿ ಎನ್ನುವುದು ನನ್ನ ಅನಿಸಿಕೆ ಹಾಗೂ ನಂಬಿಕೆ. ಇದಕ್ಕೆ ಜನಗಣತಿಯ ಯಾವ ಕಾಲಂ ಆಧಾರವೆಂಬುದನ್ನು ನೋಡಿದರೆ ಅರ್ಥ ಆಗುತ್ತೆ. ಜನಗಣತಿಯಲ್ಲಿ ಮನೆಯೊಂದರಲ್ಲಿ ವಾಸಿಸುವ ಜನರ ತಾಯ್ನುಡಿಯನ್ನು ಕೇಳಿ ಬರೆದುಕೊಳ್ಳಲಾಗುತ್ತದೆ. ಬೆಂಗಳೂರಿನ ಜನಗಣತಿಯಲ್ಲಿ ಹೀಗೆ ತಮ್ಮ ತಾಯ್ನುಡಿ ಕನ್ನಡ ಅಂತಾ ಬರೆಸಿರೋರ ಸಂಖ್ಯೆ ನೂರಕ್ಕೆ 30ರಷ್ಟು ಎಂಬುದನ್ನು, ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರೆನ್ನುವುದಕ್ಕೆ ಆಧಾರವಾಗುವುದು ಸರಿಯಲ್ಲ. ಇದೇ ಬೆಂಗಳೂರಿನಲ್ಲಿ ತಲತಲಾಂತರದಿಂದ ಬದುಕುತ್ತಿರುವ ಮುಸಲ್ಮಾನರು ತಮ್ಮ ತಾಯ್ನುಡಿಯನ್ನು ಉರ್ದು ಎಂದೇ ಬರೆಸಿರುತ್ತಾರೆ. ಇವರು ಕನ್ನಡಿಗರಲ್ಲವೇ? ಇಲ್ಲೇ ನೂರಾರು ವರ್ಷದಿಂದ ಬದುಕುತ್ತಿರುವ ಅನೇಕ ತುಳುವರು, ಕೊಡವರು, ಅಯ್ಯಂಗಾರರು, ರೆಡ್ಡಿಗಳು...ಮೊದಲಾದವರು ತಮ್ಮ ತಾಯ್ನುಡಿಯನ್ನು ಕನ್ನಡವೆಂದು ಬರೆಸಿಲ್ಲದಿದ್ದಾಗ ಅವರನ್ನು ಕನ್ನಡಿಗರಲ್ಲ ಎನ್ನಲಾಗುವುದೇ?

ಕನ್ನಡಿಗರೆಂದರೆ ಯಾರು?
ಡಾ. ಸರೋಜಿನಿ ಮಹಿಷಿ ಅವ್ರು ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ವರದಿಯನ್ನು ಸಲ್ಲಿಸಿದ್ದರು. ಆಗ ಅದರಲ್ಲಿ ಕನ್ನಡಿಗರು ಅಂದ್ರೆ ಯಾರು ಅನ್ನೋ ಒಂದು ಮೂಲಭೂತ ಪ್ರಶ್ನೆ ಎತ್ತಿ ಅದಕ್ಕೊಂದು ಸೂತ್ರಾನೂ ಹೇಳಿದ್ರು. ಹದಿನೈದು ವರ್ಷಗಳಿಂದ ಕನ್ನಡನಾಡಲ್ಲಿ ಬದುಕ್ತಾ ಇರೋ... ಕನ್ನಡವನ್ನು ಮಾತಾಡಬಲ್ಲ, ಓದಬಲ್ಲ, ಬರೆಯಬಲ್ಲವರೆಲ್ಲರೂ ಕನ್ನಡಿಗರು ಅಂತಂದಿದ್ರು. ಸರೀ ತಾನೇ? ಈ ಮಾನದಂಡದ ಪ್ರಕಾರವೇ ಯಾಕೆ ನೋಡಬೇಕು ಅಂದರೆ ಬೆಂಗಳೂರಿನಂತಹ ದೊಡ್ಡ ಊರಿನಲ್ಲಿ ಕೆಲಸದ ಅವಕಾಶಗಳು ಹೆಚ್ಚು ಹೆಚ್ಚು ಆದಷ್ಟೂ ಬೇರೆ ಬೇರೆ ಕಡೆಗಳಿಂದ ಜನರು ಬರೋದು ಸಹಜ. ವಲಸೆ ನಿಯಂತ್ರಣ ಕಾಯ್ದೆ ಇಲ್ಲದೆ ನಮ್ಮ ಕೈ ಕಟ್ಟಿ ಹಾಕಲಾಗಿರುವ ಇಂಥಾ ಸಂದರ್ಭದಲ್ಲಿ ಹಾಗೆ ಬಂದವರು ಮುಖ್ಯವಾಹಿನಿಗೆ ಬೆರೆಯುವಂತೆ ಮಾಡುವುದೊಂದೇ ದಾರಿಯಲ್ಲವೇ. ಹಾಗಾಗಿ ಹೀಗೆ ಮುಖ್ಯವಾಹಿನಿಗೆ ಬಂದು ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಕಲಿತವರನ್ನು ಕನ್ನಡಿಗರೆಂಬ ಲೆಕ್ಕಕ್ಕೇ ತೆಗೆದುಕೊಳ್ಳಬೇಕಲ್ಲವೇ? ಹಾಗೆ ನೋಡಿದಾಗ ಬೆಂಗಳೂರಿನ ಕನ್ನಡಿಗರ ಸಂಖ್ಯೆ 30%ಕ್ಕಿಂತಾ ಹೆಚ್ಚಿದೆ ಅನಿಸುವುದಿಲ್ಲವೇ? ನಿಜವಾದ ಲೆಕ್ಕವನ್ನು ಈಗಿನ ಪದ್ದತಿಯ ಜನಗಣತಿ ಎಂದಿಗೂ ಹೊರತರಲಾರದು. ಆದರೆ ಕನ್ನಡವೇ ಬೆಂಗಳೂರಿನ ಬಹುಸಂಖ್ಯಾತ ಭಾಷೆ ಎಂದು ನಂಬಲು ಬೇಕಾದ ಇತರೆ ಹಲವು ಕಾರಣಗಳೂ, ಮಾಹಿತಿಗಳು ಸಾಕಷ್ಟಿವೆ.

ಬೆಂಗಳೂರಿನಲ್ಲಿ ಕನ್ನಡಿಗರೇ ಹೆಚ್ಚೆಣಿಕೆಯಲ್ಲಿರುವವರು!
ನನ್ನ ನಂಬಿಕೆಗೆ ಕಾರಣಗಳೂ ಇವೆ. ಇಡೀ ಬೆಂಗಳೂರಿನ ದಿನಪತ್ರಿಕೆಗಳ ಓದುಗರ ಪ್ರಮಾಣದ ಬಗ್ಗೆ ಒಂದು ಸಮೀಕ್ಷಾ ವರದಿ ಬಂದಿದೆ. ಇದರ ಆಧಾರದಂತೆ ಬೆಂಗಳೂರಿನಲ್ಲಿ ದಿನಪತ್ರಿಕೆ ಓದುಗರ ಸಂಖ್ಯೆ ಸುಮಾರು 26 ಲಕ್ಷ. ಇದರಲ್ಲಿ 18 ಲಕ್ಷದಷ್ಟು ಓದುಗರು ಕನ್ನಡ ದಿನಪತ್ರಿಕೆ ಓದುತ್ತಾರೆ. ಅಂದರೆ ನೂರಕ್ಕೆ 70ರಷ್ಟು ಎಂದಾಯ್ತು. ಬೆಂಗಳೂರಿನ ಜನಸಂಖ್ಯೆ ಸುಮಾರು 60 ಲಕ್ಷದ ಆಸುಪಾಸಿನಲ್ಲಿದ್ದು ನೂರಕ್ಕೆ 83 ಜನ ಓದು ಬರಹ ಬಲ್ಲವರು. ಈ ಲೆಕ್ಕವನ್ನೂ ಸೇರಿಸಿಕೊಂಡರೆ ಪತ್ರಿಕೆಗಳನ್ನೇ ಓದದ ಕನ್ನಡಿಗರ ಸಂಖ್ಯೆಯೂ ಇದೇ ಪ್ರಮಾಣದಲ್ಲಿರುತ್ತದೆ ಎನ್ನುವ ಅಂದಾಜಿನೊಂದಿಗೆ ನಗರದ ಕನ್ನಡಿಗರ ಪ್ರಮಾಣ 65%ಕ್ಕಿಂತ ಹೆಚ್ಚಿದೆ ಎನ್ನಬಹುದಲ್ಲವೇ? ಇದೇ ರೀತಿ ಬೆಂಗಳೂರಿನಲ್ಲಿ FM ಕೇಳುಗರ ಸಂಖ್ಯೆಯತ್ತಲೂ ಕಣ್ಣು ಹಾಯಿಸೋಣ. ಇದನ್ನು ಕೂಡಾ RAM ವರದಿ ಹೇಳುತ್ತಿದೆ. ಕನ್ನಡ ವಾಹಿನಿಗಳ ಪಾಲು ಒಟ್ಟಾರೆ 85%ಕ್ಕಿಂತಲೂ ಹೆಚ್ಚಿದೆ. ಒಟ್ಟು FM ಕೇಳುಗರ ಸಂಖ್ಯೆ ಬೆಂಗಳೂರಿನಲ್ಲಿ ಸುಮಾರು 53 ಲಕ್ಷದಷ್ಟು. ಅಂದರೇನಂದುಕೊಳ್ಳಬಹುದು? ಬೆಂಗಳೂರಿನಲ್ಲಿ ಕನ್ನಡಿಗರು ಬಹುಸಂಖ್ಯಾತರೆಂದೇ ಅಲ್ಲವೇ? ಹೌದು... ಬರಿಯ IRS ವರದಿ ಮತ್ತು RAM ವರದಿಗಳು ಕನ್ನಡಿಗರ ಜನಸಂಖ್ಯೆ ಇಷ್ಟು ಎಂದು ನಿಖರವಾಗಿ ಹೇಳುವುದಿಲ್ಲ. ಆದ್ರೆ ನಿಶ್ಚಿತವಾಗಿ ಒಲವೊಂದನ್ನು ಇದು ತೋರಿಸಿಕೊಡುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪುಸ್ತಕಗಳಿಗೆ ಸಿಕ್ಕ ಸಕತ್  ಪ್ರೋತ್ಸಾಹಾನೂ ಇದೇ ತೋರಿಸುತ್ತೆ.  ಕನ್ನಡಿಗರು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡದಿರಲು ಇಷ್ಟು ಸಾಕು ಅನ್ಸುತ್ತೆ.

ಅಪಪ್ರಚಾರದಿಂದ ಸಲ್ಲದ ಭಯ, ಕೀಳರಿಮೆ!
"ಕನ್ನಡಿಗರು ಬೆಂಗಳೂರಲ್ಲಿ ಅಲ್ಪಸಂಖ್ಯಾತರು" ಎಂದು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೆ ಕೊಡೋದು ಇನ್ನಾದ್ರೂ ನಿಲ್ಲಲಿ. ಯಾಕಂದ್ರೆ ಅದನ್ನು ಕೇಳಿ ಕೇಳಿ ಕನ್ನಡಿಗರಲ್ಲಿ ಸಲ್ಲದ ಕೀಳರಿಮೆ ತುಂಬುವ ಎಲ್ಲಾ ಸಾಧ್ಯತೆಗಳಿವೆ. ಕನ್ನಡಿಗರೇ ಕಮ್ಮಿ ಇದ್ದಾಗ ಬೆಂಗಳೂರಿನ ಆಡಳಿತ ಯಾಕೆ ಕನ್ನಡದಲ್ಲಿರಬೇಕು? ಗ್ರಾಹಕಸೇವೆಯಲ್ಲಿ ಯಾಕೆ ಕನ್ನಡ ಇರಬೇಕು? ಕಲಿಕೆ ಯಾಕೆ ಕನ್ನಡದಲ್ಲಿರಬೇಕು? ಅನ್ನೋ ಧ್ವನಿಗಳು ಬಲವಾಗೋಕೆ ಇದು ಅವಕಾಶ ಕೊಡಲ್ವಾ ? ಕನ್ನಡಿಗರ ನುಡಿಹಬ್ಬದಲ್ಲೇ ಇಂಥಾ ಎದೆಗುಂದಿಸೋ ಮಾತುಗಳನ್ನು ಸಮ್ಮೇಳನದ ಅಧ್ಯಕ್ಷರೇ ಆಡಿದ್ರೆ ಸಾಮಾನ್ಯ ಕನ್ನಡಿಗರ ಮನಸ್ಸಿನ ಮೇಲೆ ಆಗೋ ಪರಿಣಾಮ  ಎಷ್ಟು ಕೆಟ್ಟದ್ದು ಅಂತ ಅನ್ನಿಸಲ್ವಾ?

ಭಾನುವಾರ, ಜನವರಿ 23, 2011

ಕನ್ನಡ ಸಾಹಿತ್ಯ ಸಮ್ಮೇಳನ - ಬಂತು ನಮ್ ಬೆಂಗಳೂರಿಗೆ !


41 ವರ್ಷಗಳ ದೊಡ್ಡ ಅಂತರದ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ರಾಜಧಾನಿ ಬೆಂಗಳೂರಿಗೆ ಬರುತ್ತಿದೆ. 1970ರ ಬೆಂಗಳೂರಿಗೂ, 2011ರ ಬೆಂಗಳೂರಿಗೂ ಆಕಾಶ-ಭೂಮಿಗಿರುವಷ್ಟು ಅಂತರವಿದೆ. ಬೆಂಗಳೂರಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯವಾದ ಬದಲಾವಣೆಯಾಗಿದೆ. ಜಾಗತೀಕರಣದ ನಂತರ ಶುರುವಾದ ಐಟಿ ಕ್ರಾಂತಿ, ತದನಂತರ ಕೋಡಿ ಬಿದ್ದ ಕೆರೆಯಂತೆ ಹರಿದು ಬಂದ ವಲಸಿಗರ ಅಬ್ಬರದಲ್ಲಿ ಬೆಂಗಳೂರು ಖಂಡಿತ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿಗೆ ಬರುತ್ತಿರುವ ಸಮ್ಮೇಳನ ಖಂಡಿತವಾಗಿಯೂ ಪ್ರಮುಖವಾದದ್ದು, ಅಲ್ಲಿ ಆಗಬೇಕಾದ ಚರ್ಚೆ, ನಡೆಯಬೇಕಾದ ವಿಚಾರ-ವಿಮರ್ಷೆ, ತೆಗೆದುಕೊಳ್ಳಬೇಕಾದ ನಿಲುವು ಎಲ್ಲವೂ ಬೆಂಗಳೂರು, ಕರ್ನಾಟಕದ ಮುಂದಿನ ದಾರಿಗೆ ದಿಕ್ಸೂಚಿಯಾಗಬಲ್ಲಂತದ್ದು ಅನ್ನುವುದು ನನ್ನ ಅನಿಸಿಕೆ.
 
ಬೆಂಗಳೂರಿಗೆ ಅಷ್ಟೊಂದು ಮಹತ್ವ ಯಾಕೆ?
ಇದೆಲ್ಲ ಸರಿ, ಆದ್ರೆ ಬೆಂಗಳೂರಲ್ಲಿ ಸಾಹಿತ್ಯ ಸಮ್ಮೇಳನ ಆದ್ರೆ ಅದಕ್ಯಾಕೆ ಅಷ್ಟು ಮಹತ್ವ ಅನ್ನಿಸಬಹುದು. ಬೆಂಗಳೂರು ಅನ್ನುವುದು ಕರ್ನಾಟಕದ ಬೇರೆ ಊರುಗಳಂತಲ್ಲ. ಇಡೀ ಕರ್ನಾಟಕದ, ಕನ್ನಡಿಗರ ಕಲಿಕೆ, ದುಡಿಮೆ, ಬದುಕು ರೂಪಿಸಬೇಕಾದ ವ್ಯವಸ್ಥೆಯಾದ ಸರ್ಕಾರ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಸಾಂಸ್ಕೃತಿಕ ಗುರುತುಗಳಲ್ಲೊಂದಾದ ಕನ್ನಡ ಚಿತ್ರೋದ್ಯಮ ಇಲ್ಲೇ ನೆಲೆಗೊಂಡಿರುವುದು. ಕರ್ನಾಟಕದ ಕಳೆದ 60 ವರ್ಷಗಳ ಇತಿಹಾಸದಲ್ಲಿ ರೂಪುಗೊಂಡ ಹತ್ತು ಹಲವು ನಾಡ ಪರ, ಭಾಷೆ ಪರ ಚಳುವಳಿಗಳಿಗೆ ಹೊಸ ದಿಕ್ಕು ತೋರಿಸಿದ, ಜನಾಭಿಪ್ರಾಯ ರೂಪಿಸುವಲ್ಲಿ ಕೆಲಸ ಮಾಡಿದ ಹತ್ತು ಹಲವು ಕನ್ನಡ ಚಿಂತಕರು, ಸಂಘಟನೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ. ಕರ್ನಾಟಕದ ರಾಜಕೀಯ, ಆಡಳಿತ ವ್ಯವಸ್ಥೆಯನ್ನು ಹದ್ದಿನ ಕಣ್ಣಿನಿಂದ ಬೆನ್ನು ಬಿಡದೇ ಕಾಯುತ್ತಿರುವ ಸುದ್ದಿ, ದೃಶ್ಯ ಮಾಧ್ಯಮಗಳಿಗೂ ಬೆಂಗಳೂರೇ ಕೇಂದ್ರ ಸ್ಥಾನ. ಇವೆಲ್ಲದಕ್ಕೂ ಮಿಗಿಲಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಬಹು ಪಾಲು ನಿಯಂತ್ರಿಸುತ್ತಿರುವುದು  ಬೆಂಗಳೂರೆಂಬ ಕೆಂಪೇಗೌಡರ ಊರು. ಕರ್ನಾಟಕದ ಪಾಲಿನ ಹೆಚ್ಚಿನ ಎಲ್ಲ stakeholders ಇರೋ ಬೆಂಗಳೂರಲ್ಲಿ, ಇವರೆಲ್ಲರ ನಡುವೆ ನಡಿತಿರೋ ಈ ಸಮ್ಮೇಳನ ನಿಜಕ್ಕೂ ಮಹತ್ವದ್ದೇ.

ಕೆಲ ಮುಖ್ಯ ವಿಷಯಗಳು, ಬೇಡಿಕೆಗಳು
ಎಲ್ಲ ಸರಿ, ಆದ್ರೆ ಈ ಸಮ್ಮೇಳನದಲ್ಲಿ ಬರೀ ಲಲಿತ ಸಾಹಿತ್ಯ, ಕವಿ ಗೋಷ್ಟಿ, ಹಾಸ್ಯ ಸಂಜೆ ಅಂತ ವಾಡಿಕೆಯಂತೆ  ಸಮ್ಮೇಳನ ಕಳೆಯದೇ, ಸಮ್ಮೇಳನ ನಿಜವಾದ ಅರ್ಥದಲ್ಲಿ ಸಾರ್ಥಕತೆ ಕಾಣಲು ಕೆಲವು ಮುಖ್ಯವಾದ ವಿಷಯಗಳು, ಬೇಡಿಕೆಗಳ ಬಗ್ಗೆ ಎಲ್ಲ ಪಾಲುದಾರರು ಗಮನ ಹರಿಸಬೇಕು. ನನಗನಿಸಿದ ಕೆಲ ವಿಷಯಗಳು:
  • ವಲಸಿಗರ ಪ್ರವಾಹವನ್ನೇ ಕಾಣುತ್ತಿರುವ ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಕನ್ನಡೇತರರನ್ನು ಕನ್ನಡ ಮುಖ್ಯವಾಹಿನಿಗೆ ತರುವತ್ತ ಎಲ್ಲ ಪ್ರಯತ್ನಗಳಾಗಬೇಕು. ಅಲಾಯನ್ಸ್ ಫ್ರೆಂಚ್, ಮ್ಯಾಕ್ಸ್ ಮ್ಯೂಲರ್ ನಂತಹ ಫ್ರೆಂಚ್, ಜರ್ಮನ್ ಕಲಿಸುವ ಸಂಸ್ಥೆಗಳಂತೆ ಕನ್ನಡ ಕಲಿಸುವ ವಿಶ್ವ ದರ್ಜೆಯ ಸಂಸ್ಥೆಗಳನ್ನು ಹುಟ್ಟು ಹಾಕುವಂತ, ಅದಕ್ಕೆ ಬೇಕಾದ eco-system ಕಟ್ಟುವಂತ ಪ್ರಯತ್ನವನ್ನು ಸಂಬಂಧ ಪಟ್ಟವರು ಮಾಡಬೇಕು.
  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕನ್ನಡ ಅನ್ನುವುದು ಮಾರುಕಟ್ಟೆಯ ಮೊದಲ ಆಯ್ಕೆಯ ಭಾಷೆಯಾಗಿ ಬಳಕೆಯಲ್ಲಿಲ್ಲ. ಕನ್ನಡ ಒಂದು ಬಳಕೆ ಮೌಲ್ಯ ಇರುವ, ಜೀವಂತಿಕೆಯುಳ್ಳ ಮಾರುಕಟ್ಟೆಯ ಭಾಷೆಯಾಗಿ ಬಳಕೆಯಾಗದಿರುವುದು ಕಂಡು ಬರುತ್ತದೆ. ಕನ್ನಡದಲ್ಲಿ ಸೇವೆ ದೊರೆಯದೇ ಗ್ರಾಹಕರಿಗೆ ತೊಂದರೆಗೀಡಾಗಿರುವ ನೂರಾರು ಉದಾಹರಣೆಗಳಿದ್ದರೂ ಗ್ರಾಹಕಸೇವೆಯಲ್ಲಿ ಕನ್ನಡದ ಬಳಕೆಗೆ ಅವಕಾಶ ಕಲ್ಪಿಸುವ ಕಾನೂನು ಇಂದಿಗೂ ಇಲ್ಲ. ಗ್ರಾಹಕಸೇವೆಯ ಕಾನೂನು ಅಂದರೆ ಬರೀ ತೂಕ, ಅಳತೆ ಅನ್ನುವುದಕ್ಕೆ ಸೀಮಿತವಾಗಿರುವಾಗ, ಗ್ರಾಹಕಸೇವೆಯ ಭಾಷಾ ಆಯಾಮಕ್ಕೂ ಕಾನೂನಿನ ಬಲ ನೀಡುವ ಕಾಯ್ದೆ ರೂಪಿಸುವ ದೊಡ್ಡ ಹೊಣೆಗಾರಿಕೆ ಸರ್ಕಾರದ ಮೇಲಿದೆ.
  • ಕನ್ನಡ ಕೆಲ ವಿಷಯಕ್ಕೆ ಮಾತ್ರ ಸೂಕ್ತ. ಕಲಿಕೆ, ತಂತ್ರಜ್ಞಾನದಂತಹ ವಿಷಯಗಳಲ್ಲಿ ಕನ್ನಡಕ್ಕೆ ಯೋಗ್ಯತೆಯೇ ಇಲ್ಲ ಅನ್ನುವ suicidal ಮನಸ್ಥಿತಿ ನಮ್ಮ ಸರ್ಕಾರಕ್ಕೆ ಇದ್ದಂತಿದೆ. ಕನ್ನಡದಲ್ಲಿ ಉನ್ನತ ಶಿಕ್ಷಣ ತರುವ ಯಾವ ಪ್ರಯತ್ನವನ್ನು ಮಾಡದೇ ಸರ್ಕಾರ ಕೈ ಚೆಲ್ಲಿದೆ. ಸಾಲದ್ದಕ್ಕೆ ತನ್ನ ವ್ಯಾಪ್ತಿಯಲ್ಲಿದ್ದ ಪಾಲಿಕೆ ಶಾಲೆಗಳಲ್ಲಿ CBSE ಪಠ್ಯಕ್ರಮ ಜಾರಿ ಮಾಡಿ ಅದನ್ನೇ ಸಾಧನೆ ಎಂದು ಕರೆದುಕೊಳ್ಳುವ ಹುಚ್ಚು ಪ್ರಯತ್ನವನ್ನು ಮಾಡಿತ್ತು. ಸರ್ಕಾರಕ್ಕೆ ಕಲಿಕೆಯಲ್ಲಿ ತಾಯ್ನುಡಿಯ ಪಾತ್ರದ ಮಹತ್ವವೇ ಅರಿವಾದಂತಿಲ್ಲ. ಒಂದು ಸಮಯಾಧಾರಿತ ವ್ಯವಸ್ಥೆ ರೂಪಿಸಿ ಅದರಡಿ ಕಲಿಕೆಯಲ್ಲಿ ಆಗಬೇಕಾದ ಸುಧಾರಣೆ, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ತರಲು ಬೇಕಿರುವ ಕಾರ್ಯ ಯೋಜನೆಯನ್ನು ಪ್ರಕಟಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಒಳ್ಳೆಯ ಬದುಕು ಕೊಡಲು ಕನ್ನಡಕ್ಕೆ ಯೋಗ್ಯತೆ ಇಲ್ಲ ಅನ್ನುವ ಮನಸ್ಥಿತಿಯಿಂದ ಜನಸಾಮಾನ್ಯರು ಇಂಗ್ಲಿಷ್ ಅನ್ನು ಅಪ್ಪಿಕೊಳ್ಳುತ್ತಿದ್ದಾರೆ. ಕನ್ನಡ ಓದಲು, ಬರೆಯಲು ಬಾರದ ಒಂದು ಹೊಸ ಪೀಳಿಗೆಯೇ ಹುಟ್ಟಿಕೊಳ್ಳುತ್ತಿದೆ. ಹೀಗಿರುವಾಗ ಮುಂದೊಂದು ದಿನ ಸಾಹಿತ್ಯ ಸಮ್ಮೇಳನದ ನೂರಾರು ಪುಸ್ತಕ ಮಳಿಗೆಗಳಲ್ಲಿ ಭರ್ಜರಿ ರಿಯಾಯಿತಿ ಕೊಟ್ಟರೂ ಕನ್ನಡ ಪುಸ್ತಕ ಓದುವವರೇ ಇರದಂತಾಗಬಹುದು. ಹೀಗಾಗಿ ಕನ್ನಡದಲ್ಲಿ ಒಳ್ಳೆಯ ಕಲಿಕೆ, ಒಳ್ಳೆಯ ದುಡಿಮೆ ಹುಟ್ಟವಂತ ವ್ಯವಸ್ಥೆ ನಿರ್ಮಿಸುವತ್ತ ಎಲ್ಲ ಪಾಲುದಾರರು ಗಮನಹರಿಸಬೇಕು.
  • ತಂತ್ರಜ್ಞಾನ ಬದಲಾಗುತ್ತಿರುವ ವೇಗಕ್ಕೆ ಕನ್ನಡವೂ technology ready ಆಗಬೇಕಾದ ತುರ್ತು ಅಗತ್ಯವಿದೆ. ಅದು ಕಂಪ್ಯೂಟರ್, ಮೊಬೈಲ್ ನಿಂದ ಹಿಡಿದು ಎ.ಟಿ.ಎಮ್ / ಐವಿಆರ್ ನಂತಹ ಬ್ಯಾಂಕ್ ವ್ಯವಸ್ಥೆಯವರೆಗೆ ಎಲ್ಲ ರೀತಿಯಲ್ಲೂ technology adoptionಗೆ ಸಿದ್ದವಾಗಬೇಕಿದೆ. ಕನ್ನಡಕ್ಕೆ ಇಂತಹ ಯೋಗ್ಯತೆ ಬಂದಾಗಲಷ್ಟೇ ಅದು ಯುವಕರನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ಸಾಧ್ಯ. ಈ ವಿಷಯದ ಬಗ್ಗೆಯೂ ಸಮ್ಮೇಳನದಲ್ಲಿ ಗೋಷ್ಟಿಗಳು ನಡೆಯಬೇಕು.
  • ಜಾಗತೀಕರಣದ ನಂತರದ ದಿನಗಳಲ್ಲಿ ಬೆಂಗಳೂರು ಅತಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ನಗರವಾಗಿ ಪರಿವರ್ತನೆಗೊಂಡಿದೆ. ಆದರೆ ಈ ಬದಲಾವಣೆಯ ಫಲ ಮಾತ್ರ ಕನ್ನಡಿಗರಿಗೆ "ಕನ್ನಡಿಯೊಳಗಿನ ಗಂಟೇ" ಆಗಿದೆ. 41 ವರ್ಷಗಳ ನಂತರ ರಾಜಧಾನಿಯಲ್ಲಿ ನಡೆಯುತ್ತಿರುವ ಸಮ್ಮೇಳನದ ಸಂದರ್ಭದಲ್ಲಿ ಸರ್ಕಾರ ಈ ಕಾಲಮಾನಕ್ಕೆ ಹೊಂದುವಂತೆ ಬದಲಾಯಿಸಿದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತಂದು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡುವತ್ತ ಕಾನೂನು ರೂಪಿಸುವ, ಅದನ್ನು ಅನುಷ್ಟಾನಗೊಳಿಸುವ ಇಚ್ಛಾಶಕ್ತಿ ಪ್ರಕಟಿಸಬೇಕಿದೆ. ಈ ಸಮ್ಮೇಳನದ ಎಲ್ಲ ಪಾಲುದಾರರು ಈ ಬಗ್ಗೆಯೂ ಕೊಂಚ ಗಮನ ಹರಿಸಬೇಕು..
  • ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ ೨೪ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಆದರೆ ಈ ಕಾನೂನು ಇಂದಿಗೂ ಅನುಷ್ಟಾನಕ್ಕೆ ಬಂದಿಲ್ಲ. 1985ರಲ್ಲೇ ಈ ಕಾನೂನು ಬಂದಿದೆ. ಕಾನೂನು ಬಂದಾಗ ಇದ್ದದ್ದು 50 ರೂಪಾಯಿ ದಂಡ. ಇವತ್ತು 25 ವರ್ಷದ ನಂತರ ಆ ದಂಡದ ಮೊತ್ತ 10,000 ವರೆಗೂ ಹೋಗಿದೆ. ಒಂದು ಸರಳವಾದ ಕಾನೂನು ಅನುಷ್ಟಾನಕ್ಕೆ 25 ವರ್ಷ ಸಾಕಾಗಲ್ವ? ಈಗಲಾದರೂ ಇದರ ಬಗ್ಗೆ ಗಮನ ಹರಿಸಲಿ.
  • ಬ್ಯಾಂಗಲೋರ್ ಅನ್ನುವ ಬ್ರಿಟಿಷರ ಬಳುವಳಿ ಇನ್ನೂ ಬೆಂಗಳೂರು ಎಂದು ಬದಲಾಗಿಲ್ಲ. 2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಶ್ರೀ. ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು.  2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಸಾಹಿತ್ಯ ಸಮ್ಮೇಳನ ನಡಿತಿರೋ ಈ ಸಂದರ್ಭದಲ್ಲಾದರೂ ಜನರ ಭಾವನೆಗಳನ್ನು ಗೌರವಿಸುವಂತಹ ಇಂತಹ ವಿಷಯಗಳ ಬಗ್ಗೆ ಎಲ್ಲ ಪಾಲುದಾರರು ಗಮನ ಹರಿಸಿದರೆ ಸಮ್ಮೇಳನಕ್ಕೆ ಕಳೆ ಕಟ್ಟುತ್ತೆ.
ಸಾಹಿತ್ಯ ಸಮ್ಮೇಳನ ಒಂದಿಷ್ಟು ಸಾಹಿತ್ಯ ಗೋಷ್ಟಿ, ಸನ್ಮಾನ ಸಮಾರಂಭಗಳಿಗೆ ಮೀಸಲಾಗದೇ ಕನ್ನಡಿಗರ ಬದುಕಿನ, ಸ್ವಾಭಿಮಾನದ ಹಲವು ಪ್ರಶ್ನೆಗಳನ್ನು ಎತ್ತಿಕೊಳ್ಳುವಂತ, ಅವುಗಳಿಗೆ ಉತ್ತರ ಕಂಡುಕೊಳ್ಳುವ ವೇದಿಕೆಯಾದರೆ ಇಂತಹ ಸಮ್ಮೇಳನಗಳಿಗೊಂದು ಅರ್ಥವಿರುತ್ತೆ. ಕರ್ನಾಟಕದ ಏಕೀಕರಣಕ್ಕಾಗೇ ಹುಟ್ಟಿದ, ಕನ್ನಡಿಗರನ್ನು ಒಗ್ಗೂಡಿಸಲು ಸರ್ ಎಮ್.ವಿ ಅವರ ಮುಂದಾಳತ್ವದಲ್ಲಿ ಶುರುವಾದ ಸಂಸ್ಥೆ ನಮ್ಮ ಸಾಹಿತ್ಯ ಪರಿಷತ್ತು. ಈ ಸಂಸ್ಥೆಯಿಂದ ಅಂತದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪೇನು ಅಲ್ಲ ಅಂತ ನನ್ನ ಅನಿಸಿಕೆ. ಏನಂತೀರಾ ಗೆಳೆಯರೇ?

ಸೋಮವಾರ, ಜನವರಿ 10, 2011

ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !

ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ "ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:
The value systems of those with access to power and of those far removed from such access cannot be the same. The viewpoint of the privileged is unlike that of the underprivileged.
ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.
ಹಾಗೇ, ರಾಜಕೀಯವೆಂದರೆ ಕೊಳಕು, ಕೊಳಚೆ ಅನ್ನುವ ಮನಸ್ಥಿತಿಯ ಜನರ ಮನಸ್ಸಿನಲ್ಲಿ ಅವರ ಈ ಮಾತುಗಳು ಕ್ಷಣವೂ ರಿಂಗಣಿಸಬೇಕು:
You can never separate the political system of a country from the way you conduct your daily life.
ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ಅಲ್ಲಿನ ಜನರು ನಿತ್ಯ ಜೀವನದಲ್ಲಿ ತಮ್ಮನ್ನು ತಾವು ನಡೆಸಿಕೊಳ್ಳುವ ರೀತಿಯಿಂದ ಎಂದಿಗೂ ಬೇರೆಗೊಳಿಸಲಾಗದು. 
ಅಲ್ಲದೇ, ಸವಲತ್ತು, ಅವಕಾಶ ವಂಚಿತ ಜನರಿಗೆ ಸೀರೆ ಪಂಚೆ ಹಂಚುವುದರಲ್ಲೇ ತೃಪ್ತಿ ಕಾಣುತ್ತಿರುವ ಕರ್ನಾಟಕದ ರಾಜಕೀಯ ನಾಯಕರ ಮನಸ್ಸಿನಲ್ಲಿ ಅವರ ಈ ಮಾತುಗಳು ದಿನವೂ ರಿಂಗಣಿಸಬೇಕು:
The provision of basic material needs is not sufficient to make minority groups and indigenous peoples feel they are truly part of the greater national entity. For that they have to be confident that they too have an active role to play in shaping the destiny of the state that demands their allegiance.

ಜನರ ಮೂಲಭೂತ ಅವಶ್ಯಕತೆಯನ್ನು ಪೂರೈಸುವುದೊಂದೇ ಅವರನ್ನು ನಿಜವಾದ ಅರ್ಥದಲ್ಲಿ ಆ ದೇಶದ ಭಾಗವಾಗಿಸುವುದಿಲ್ಲ. ಯಾವ ದೇಶ ತನ್ನ ನಿಷ್ಟೆ ಬೇಡುತ್ತೋ, ಆ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ತಮಗೂ ಒಂದು ಮುಖ್ಯವಾದ ಪಾತ್ರವಿದೆ ಅನ್ನುವ ನಂಬಿಕೆ ಮೂಡಿದಾಗಲಷ್ಟೇ ಅದು ಆಗಲು ಸಾಧ್ಯ.
ಕೊನೆಯಲ್ಲಿ ಅವರ ಈ ಮಾತುಗಳು, ಕರ್ನಾಟಕದ ಭವಿಷ್ಯದ ಬಗ್ಗೆ, ಅದರ ನಾಳೆಗಳನ್ನು ಬದಲಾಯಿಸುವತ್ತ ಕನಸು ಕಾಣುವ ಪ್ರತಿಯೊಬ್ಬನ ಮನದಲ್ಲೂ ರಿಂಗಣಿಸಬೇಕು:
The democracy process provides for political and social change without violence.

ಪ್ರಜಾತಂತ್ರ ವ್ಯವಸ್ಥೆ ಹಿಂಸೆಯ ಅಗತ್ಯವಿಲ್ಲದೆಯೇ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆ ತರುವ ಎಲ್ಲ ಅವಕಾಶವನ್ನಿಯುತ್ತದೆ.
ಬರ್ಮಾದಲ್ಲಿರುವ ಮಿಲಿಟರಿ ಆಡಳಿತ ಆದಷ್ಟು ಬೇಗನೇ ಅಂತ್ಯ ಕಂಡು ಜನರಿಂದ, ಜನರಿಗಾಗಿ ಆಯ್ಕೆಯಾದ ಸರ್ಕಾರ ಕಾಣುವ ವ್ಯವಸ್ಥೆ ಆದಷ್ಟು ಬೇಗನೆ ಬರಲಿ ಎಂದು ಹಾರೈಸೋಣ. ತನ್ನ ಜೀವನದ ಬಹು ಪಾಲು ಅಹಿಂಸೆಯ ಮಾರ್ಗದಲ್ಲೇ  ಈ ಹೋರಾಟಕ್ಕೆ ಮೀಸಲಿಟ್ಟ ಆಂಗ್ ಸಾನ್ ಸೂ ಕಿ ಜೀವಂತವಾಗಿರುವಾಗಲೇ ಈ ಬದಲಾವಣೆ ಕಾಣುವ ದಿನ ಬರಲಿ ಎಂದು ಹಾರೈಸೋಣ. 

ಸೂಚನೆ: ಈ ಬರಹದ ಬಹು ಪಾಲು ಕಿರಣ್ ರಾವ್ ಅವರ ಕರ್ನಾಟಿಕ್ ಬ್ಲಾಗ್ ನಲ್ಲಿ ಬಂದ ಒಂದು ಅಂಕಣದ ಅನುವಾದ. ಅದನ್ನು ಓದಿದ ಮೇಲೆ ಅದನ್ನು ಕನ್ನಡದಲ್ಲೂ ಅನುವಾದ ಮಾಡಬೇಕು ಅನ್ನಿಸಿ, ನನ್ನ ಕೆಲವು ಮಾತನ್ನು ಸೇರಿಸಿ ಅನುವಾದಿಸಿದ್ದೇನೆ.

ಶುಕ್ರವಾರ, ಜನವರಿ 7, 2011

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?

ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು.  ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ "ಸಂಸ್ಕೃತ ಭಾರತಿ"  ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು.

ಕನ್ನಡ ಒಂದು ದ್ರಾವಿಡ ನುಡಿ

ಈ ಮೇಳ ಶುರುವಾದ ನಿನ್ನೆ ದಿನ ಶಿಕ್ಷಣ ಮಂತ್ರಿ ಕಾಗೇರಿಯವರು " ಸಂಸ್ಕೃತವೇ ಎಲ್ಲ ಭಾಷೆಗಳ ತಳಹದಿ" ಅನ್ನುವ ಹಸಿ ಸುಳ್ಳೊಂದನ್ನು ಹೇಳಿದ್ದಾರೆ. Linguistics ಅನ್ನುವ ವಿಜ್ಞಾನ ಗೊತ್ತಿರುವ ಯಾರಿಗಾದರೂ ಗೊತ್ತಿರುವ ಅಂಶವೆಂದರೆ ದಕ್ಷಿಣ ಭಾರತದ ಕನ್ನಡ,ತಮಿಳು,ತೆಲುಗು, ಮಲಯಾಳಂಗಳು ದ್ರಾವಿಡ ಭಾಷೆಗಳು ಅನ್ನುವುದು. ಹಾಗೆಯೇ ಸಂಸ್ಕೃತ ಅನ್ನುವುದು ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆ ಅನ್ನುವುದು. ಕನ್ನಡ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದಿದೆ ಎಂದ ಮಾತ್ರಕ್ಕೆ ಸಂಸ್ಕೃತ ಅದರ ತಾಯಿಯಾಗುವುದಿಲ್ಲ.

ಕನ್ನಡಿಗರ ಬದುಕಿನ ಭಾಷೆಯಾದ ಕನ್ನಡ ಅತ್ಯಂತ ತುರ್ತಾಗಿ ಗಮನ ಬೇಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಆದ್ಯತೆ ಕನ್ನಡದ ಉಳಿವು, ಬೆಳೆವಿನತ್ತ ಧಾವಿಸುವುದಾಗಬೇಕೆ ವಿನಹ "ಸಂಸ್ಕೃತ ಎಲ್ಲ ಭಾಷೆಗಳ ತಾಯಿ", "ಸಂಸ್ಕೃತ = ಸಂಸ್ಕೃತಿ" ಅನ್ನುತ್ತ ತನ್ನ ideological pet themesಗಳನ್ನು ಪೋಷಿಸುವ ಕೆಲಸಗಳತ್ತ ಸರ್ಕಾರದ ಸಂಪನ್ಮೂಲವನ್ನು ಪೋಲು ಮಾಡುವುದಕ್ಕಲ್ಲ ಅನ್ನುವುದು ನನ್ನ ಅನಿಸಿಕೆ.

ಬುಧವಾರ, ಡಿಸೆಂಬರ್ 29, 2010

ABVP ಸಮಾವೇಶಕ್ಕೆ ಹಿಂದಿ ಬ್ಯಾನರ್ ಯಾಕೆ?

ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ, ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ.

ಎಲ್ಲ ಓಕೆ, ಹಿಂದಿ ಬ್ಯಾನರ್ ಯಾಕೆ?
ಸಮಾವೇಶ ಮಾಡೋದು, ಜನರನ್ನ ಸೇರಿಸೋದು, ತಮ್ಮ ನಿಲುವನ್ನ ಹೇಳಿಕೊಳ್ಳೊ ಅವಕಾಶ ಎಲ್ಲ ಸಂಘಟನೆಗಳಿಗೂ ಇದೆ. ಅದನ್ನೇ ABVPನೂ ಮಾಡಿದ್ರೆ ತಪ್ಪೇನಿಲ್ಲ, ಆದರೆ ಇದೇ ನೆಪದಲ್ಲಿ ಬೆಂಗಳೂರಲ್ಲಿ ಎಲ್ಲೆಡೆ ಹಿಂದಿ ಬ್ಯಾನರ್ ಹಾಕುವ ಉದ್ದೇಶವೇನು? ’ಹಿಂದಿ’ಗೂ ಬೆಂಗಳೂರಿಗೂ, ಇಲ್ಲವೇ ಕರ್ನಾಟಕಕ್ಕೂ ಏನ್ ಸಂಬಂಧ? ಸಮಾವೇಶಕ್ಕೆ ಬರೋ ಪರಭಾಷಿಕರಿಗಾಗಿ ಇಂಗ್ಲಿಷ್ ಅಲ್ಲಿ ಮಾಹಿತಿ, ಕನ್ನಡಿಗರಿಗಾಗಿ ಕನ್ನಡದಲ್ಲಿ ಮಾಹಿತಿ ಸಾಕಾಗಲ್ವಾ? ಅದ್ಯಾಕೆ ಬೇಡದಿದ್ದರೂ ’ಹಿಂದಿ’ನಾ ಕರ್ನಾಟಕಕ್ಕೆ ತೂರಿಸೋದು? ಇದೇ ಅಲ್ವಾ  ಹಿಂದಿ ಹೇರಿಕೆ ಅಂದರೆ ? ಹಿಂದಿ ರಾಷ್ಟ್ರ ಭಾಷೆ ಅನ್ನೋ ಸುಳ್ಳನ್ನೇ ಸಾವಿರದ ಒಂದನೇ ಸಾರಿ ಕನ್ನಡಿಗರ ತಲೆಗೆ ತುಂಬೋದು ಇದರ ಹಿಂದಿನ ಉದ್ದೇಶವಾ? ಪಾಟ್ನಾದಲ್ಲೋ, ಲಕ್ನೋದಲ್ಲೋ ನಡೆಯುವ ಸಮಾವೇಶದಲ್ಲೂ ಹೀಗೆ ಕನ್ನಡ ಬ್ಯಾನರ್ ಹಾಕ್ತಾರಾ? ನಿಜವಾದ ರಾಷ್ಟ್ರವಾದಿಗಳು ಅನ್ನೋರು ರಾಷ್ಟ್ರದ ಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣಬೇಕಿತ್ತಲ್ವಾ? ಅದ್ಯಾಕೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಅನ್ನೋ ಧೋರಣೆ?   ಭಾರತದ ಭಾಷಾ ವೈವಿಧ್ಯತೆಯೇ ದೇಶದ ಏಕತೆಗೆ ಭಂಗ ತರುತ್ತಿರುವ ಅಂಶ, ಆದ್ದರಿಂದ ಅವೆಲ್ಲವನ್ನು ಗೌಣವಾಗಿಸಿ, ಹಿಂದಿಯೊಂದನ್ನೇ ದೇಶದ ಭಾಷೆ ಆಗಿಸಿ ಬಿಟ್ರೆ ದೇಶದಲ್ಲಿ ಏಕತೆ ತುಂಬಿ ತುಳುಕುತ್ತೆ ಅನ್ನೋ ಭ್ರಮೆಯಲ್ಲಿರುವವರಿಂದ ಇನ್ನೇನು ತಾನೇ ನಿರೀಕ್ಷಿಸಲಾದೀತು ಅನ್ನಿಸುತ್ತೆ.

ಗುರುವಾರ, ಡಿಸೆಂಬರ್ 16, 2010

ಕನ್ನಡ ಮಿಡಿಯಾ - ಎಡವುತ್ತಿರುವುದೆಲ್ಲಿ ?

ನಾವು ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ  ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು
’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಆದರೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಪ್.ಎಮ್ ರೇಡಿಯೊಗಳು ಕೆಲವೇ ಕೆಲವು ವರ್ಷಗಳಲ್ಲಿ ಕನ್ನಡ ಅಪ್ಪಿಕೊಂಡು ಅತಿ ಹೆಚ್ಚು ವ್ಯಾಪಾರ ಮಾಡುವಂತಾದದ್ದು ನಾವೆಲ್ಲರೂ ಕಂಡುಕೊಂಡ ಸತ್ಯ.

ಈಗ ಬೆಂಗಳೂರಿನ ಹಿಂದಿ ಹಾಡು ಹಾಕುವ ಏಕೈಕ ಸ್ಟೇಶನ್ ಆದ ರೇಡಿಯೊ ಒನ್ ವಾಹಿನಿಯ ನ್ಯಾಷನಲ್ ಮಾರ್ಕೆಟಿಂಗ್ ಹೆಡ್ ಶೈಜು ಅವರ ಪ್ರಕಾರವೇ ಬೆಂಗಳೂರಿನ ಎಫ್.ಎಮ್ ಮಾರುಕಟ್ಟೆಯಲ್ಲಿ ’ಹಿಂದಿ’ಗಿರುವ ಪಾಲು ಹೆಚ್ಚೆಂದರೆ 14%. ಕನ್ನಡ ವಾಹಿನಿಗಳನ್ನು ಕೇಳುವವರ ಸಂಖ್ಯೆಯ ಮುಂದೆ ಹಿಂದಿ ಕೇಳುಗರ ಸಂಖ್ಯೆ ನಗಣ್ಯ ಅನ್ನುವ ಮಾತನ್ನು ಅವರು ಆಡಿದ್ದಾರೆ. ಕನ್ನಡ ಮನರಂಜನೆ ಅನ್ನುವುದು ಬೆಂಗಳೂರಿನ, ಕನ್ನಡ ಗ್ರಾಹಕರ ಮೊದಲ ಆಯ್ಕೆ ಅನ್ನುವುದು ನಿಜ ಸ್ಥಿತಿಯಾಗಿರುವಾಗ, ಕನ್ನಡ ಮಾಧ್ಯಮಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ನನ್ನ ಮನಸ್ಸಲ್ಲಿ ಏಳುತ್ತಿರುವ ಹಲವು ಪ್ರಶ್ನೆಗಳು ಇಂತಿವೆ.

  • ಅದ್ಯಾಕೆ ಕನ್ನಡದ ಹೆಸರಾಂತ ಪತ್ರಿಕೆಗಳು ಹಿಂದಿ ಚಿತ್ರರಂಗ, ಚಿತ್ರಗಳು, ಹಿಂದಿ ಸಿನೆಮಾ ತಾರೆಯರನ್ನು ಹೆಗಲ ಮೇಲೆ ಹೊತ್ತು ಮೆರೆಸುವುದು?
  • ಅದ್ಯಾಕೆ ಕನ್ನಡದ 24X7 ಸುದ್ದಿ ವಾಹಿನಿಗಳ ಫಿಲ್ಮಿ ಫಂಡಾ, ರಂಜನೆ ಮನರಂಜನೆಯಂತಹ ಸಿನೆಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಕನ್ನಡಕ್ಕಿಂತ ತುಸು ಹೆಚ್ಚೇ ಹಿಂದಿ ಚಿತ್ರಗಳ ಬಗ್ಗೆ ಮಾಹಿತಿ ನೀಡಲು ತುದಿಗಾಲ ಮೇಲೆ ನಿಂತುಕೊಳ್ಳುವುದು?
  • ಯಾಕೆ ಕನ್ನಡದ ಮನರಂಜನೆ ವಾಹಿನಿಗಳ ಡ್ಯಾನ್ಸ್, ಹಾಡು ಮುಂತಾದ ಕಾರ್ಯಕ್ರಮಗಳಲ್ಲಿ ಸುಖಾಸುಮ್ಮನೆ ಹಿಂದಿ ಹಾಡುಗಳನ್ನು ತೂರಿಸುವುದು?
  • ಕನ್ನಡಿಗರಿಗೆ ಹಿಂದಿ ಮನರಂಜನೆಯೇ ಬೇಕಿದ್ದಲ್ಲಿ, ಅದು ಹೇಗೆ ಬೆಂಗಳೂರಿನ 80% ಕ್ಕೂ ಹೆಚ್ಚು ಜನರು ಕನ್ನಡ ಎಫ್.ಎಮ್ ವಾಹಿನಿಗಳನ್ನು ಕೇಳುತ್ತಿದ್ದಾರೆ ?
  • ಕನ್ನಡಿಗರಿಗೆ ನಿಜಕ್ಕೂ ಅಷ್ಟೇನು ಮಹತ್ವವಿಲ್ಲದ ಹಿಂದಿ,ತಮಿಳು,ತೆಲುಗು ಚಿತ್ರಗಳ ಬಗ್ಗೆ ನೀಡುವ ಪ್ರಚಾರ ನಿಜಕ್ಕೂ disproportionate ಅನ್ನಿಸುವುದಿಲ್ಲವೇ? 
  • ಕನ್ನಡಿಗರ ಮಾರುಕಟ್ಟೆಯನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮಾಡುತ್ತಿರುವ ಈ ರೀತಿಯ ಎಡವಟ್ಟುಗಳು ನಾವೇ ಕೈಯಾರೇ ಇಲ್ಲದಿರುವ ಮಾರುಕಟ್ಟೆಯನ್ನು ಪರಭಾಷಾ ಚಿತ್ರಗಳಿಗೆ ಕಲ್ಪಿಸಿಕೊಡುವಂತೆ ಮಾಡುತ್ತಿಲ್ಲವೇ?
ಕನ್ನಡದ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರು ಈ ಬಗ್ಗೆ ಗಮನ ಹರಿಸಿ, ಬದಲಾವಣೆ ಮಾಡಿಕೊಂಡರೆ ಅವರಿಗೂ ಲಾಭ, ಕನ್ನಡದ ಗ್ರಾಹಕನಿಗೂ ಲಾಭ, ಕನ್ನಡ ಭಾಷೆಯ ಉಳಿವು, ಬೆಳವಿಗೂ ಪೂರಕ ಅನ್ನುವುದು ನನ್ನ ಅನಿಸಿಕೆ.