ಸೋಮವಾರ, ಮೇ 17, 2010

ಹಟಕ್ಕೆ ಬಿದ್ದ ಹುಡುಗರೇ ಈ ಜಗತ್ತನ್ನ ಬದಲಾಯಿಸಿದವರು !

ಕನ್ನಡ ಚಿತ್ರೋದ್ಯಮ ಶುರುವಾಗಿ ಬರೋಬರಿ 75 ವರ್ಷ ಆದ ಮೇಲೆ ಕನ್ನಡದಲ್ಲಿ ಮೊಟ್ಟ ಮೊದಲನೆಯ ಅನಿಮೇಷನ್ ಚಿತ್ರ ಬರ್ತಿದೆ. ಮಠ, ಎದ್ದೇಳು ಮಂಜುನಾಥದಂತಹ ಹೊಸ ಬಗೆಯ cult ಚಿತ್ರಗಳನ್ನು ನಿರ್ದೇಶಿಸಿರುವ ಗುರುಪ್ರಸಾದ್ ಇದರ ಹಿಂದಿನ ಸೂತ್ರಧಾರಿ. ಬಂದ ಕೊಡಂಗಿ ಅನ್ನುವ ಕತೆಯನ್ನಾಧರಿಸಿ "ಇದು ಬೊಂಬೆಯಾಟವಯ್ಯ" ಅನ್ನೋ 2D ಚಿತ್ರ ನಿರ್ಮಿಸುವ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಹೊಸತೊಂದು ಅಧ್ಯಾಯ ಶುರು ಮಾಡಿದ ಗುರು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕು.

ಮಿತಿ ಇರೋದು ಭಾಷೆಗಾ? ಭಾಷೆಯಾಡೋ ಜನರಿಗಾ?
ಅನಿಮೇಶನ್, 3ಡಿ, ವಿಜ್ಞಾನ, ತಂತ್ರಜ್ಞಾನ, ಮ್ಯಾನೇಜಮೆಂಟ್‘ನಂತಹ ವಿಷಯಕ್ಕೆ ಕನ್ನಡ ನಾಲಾಯಕ್ಕು, ಅಂತಹ ವಿಷಯಗಳಲ್ಲಿ ಕನ್ನಡಕ್ಕೆ ಯೋಗ್ಯತೆ ಇಲ್ಲ, ಅದಕ್ಕೆಲ್ಲ ಇಂಗ್ಲಿಷೇ ಸರಿ ಅನ್ನುವ ಮನಸ್ಥಿತಿ ಇರೋರಿಗೆ ನನ್ನ ಒಂದೆರಡು ಪ್ರಶ್ನೆಗಳು. ಯಾವುದಾದರೂ ಒಂದು ಭಾಷೆಗೆ ಇಂತದ್ದು ಸಾಧ್ಯ, ಇಂತದ್ದು ಸಾಧ್ಯವಿಲ್ಲ ಅಂತಾ ಇರುತ್ತಾ? ಒಂದು ಭಾಷೆಗೆ ಈ ರೀತಿಯ ಮಿತಿ ಇರುತ್ತಾ? ಅಥವಾ ಆ ಮಿತಿ ಇರುವುದು ಆ ಭಾಷೆಯಾಡುವ ಜನರಲ್ಲಿ, ಅವರ ಯೋಚನೆಯಲ್ಲಿ ತಾನೇ? ಇಂತಿಂತದು ಸಾಧ್ಯವಿಲ್ಲ ಅಂದುಕೊಂಡ್ರೆ ಯಾವತ್ತಿಗೂ ಸಾಧ್ಯವಿಲ್ಲ. ಇಂತಿಂತದು ಸಾಧ್ಯ ಆಗುತ್ತೆ, ಸಾಧ್ಯ ಮಾಡ್ತಿನಿ ಅಂದುಕೊಂಡ್ರೆ ಅದು ಸಾಧ್ಯ ಆಗೇ ಆಗುತ್ತೆ. ಮನುಷ್ಯನ ಇಚ್ಛಾಶಕ್ತಿಯಿಂದಲೇ ತಾನೇ ಇವತ್ತು ಜಗತ್ತು ಈ ರೂಪ ಪಡೆದಿರೋದು? ಅದೇ ತಾನೇ ಮನುಷ್ಯರನ್ನೂ, ಪ್ರಾಣಿಗಳನ್ನು ಪ್ರತ್ಯೇಕಿಸಿರುವುದು? ಹಾಗಿದ್ದಾಗ, ಕನ್ನಡದಲ್ಲಿ ಅನಿಮೇಶನ್ ಸಾಧ್ಯವಿಲ್ಲ ಅಂದವರಿಗೂ, ಅದನ್ನು ಸಾಧ್ಯವಾಗಿಸಿ ತೋರಿಸಿದವರಿಗೂ ಇರುವ ವ್ಯತ್ಯಾಸ ಅವರ ಯೋಚನಾ ರೀತಿಯಲ್ಲೇ ಇದೆಯಲ್ವಾ? ಕನ್ನಡದ ಯುವಕರು ಮನಸ್ಸು ಮಾಡಿದ್ರೆ ಆಗಲ್ಲ ಅನ್ನೋದು ಏನು ಇಲ್ಲ ಅನ್ನೋದು ನನ್ನ ನಂಬಿಕೆ.


ಹಟಕ್ಕೆ ಬಿದ್ದ ಹುಡುಗರೇ ಈ ಜಗತ್ತನ್ನ ಬದಲಾಯಿಸಿದವರು

ಒಂದು ಇಂಗ್ಲಿಷ್ ಸಾಲು ಯಾವತ್ತು ನೆನಪಾಗುತ್ತೆ:  One man with courage is a majority. ಜಗತ್ತಲ್ಲಿ, ಇಂತದ್ದು  ಆಗಬೇಕು ಅಂತ ಹಟಕ್ಕೆ ಬಿದ್ದ ಕೆಲವರೇ ಈ ಜಗತ್ತನ್ನು ಬದಲಾಯಿಸಿದವರು. 1973ರಲ್ಲಿ ಮಾರ್ಟಿನ್ ಕೂಪರ್ ಮೊದಲನೇ ಸಲಿ ಒಂದು ಇಟ್ಟಿಗೆ ಗಾತ್ರದ ಮೊಬೈಲ್ ಫೋನ್ ಹಿಡಿದುಕೊಂಡು ನ್ಯೂಯಾರ್ಕ್ ಸಿಟಿಯ ಬೀದಿಗಳಲ್ಲಿ "ಇದು ಮೊಬೈಲ್ ಫೋನ್, ಇದರಿಂದ ಕರೆ ಮಾಡಬಹುದು" ಅಂದಾಗ ಅಂಡು ಬಡ್ಕೊಂಡು ನಕ್ಕವರೇ ಹೆಚ್ಚು. ಆದ್ರೆ ಇವತ್ತು ನೋಡಿ ಏನಾಗಿದೆ, ಮೊಬೈಲ್ ಫೋನ್ ಅನ್ನೋದು ಜನರು ಸಂಪರ್ಕ ಮಾಡೋ ಶೈಲಿಯನ್ನೇ ಹಿಂದೆಂದೂ ಕಾಣದ ರೀತಿಯಲ್ಲಿ ಬದಲಾಯಿಸಿಬಿಟ್ಟಿದೆ. ಕನಸು ಕಂಡು, ಅದರ ಬೆನ್ನು ಬೀಳೋ ಕನಸುಗಾರರೇ ಈ ಜಗತ್ತನ್ನು  ಬದಲಾಯಿಸೋರು. ನಮ್ಮ ಕನ್ನಡನಾಡಿನ ಏಳಿಗೆಗೂ ಇದೇ ಮಾತು ಅನ್ವಯಿಸುತ್ತೆ. ಕನ್ನಡ ಭಾಷೆಯ ಬಳಕೆಯ ಸಾಧ್ಯತೆಯನ್ನು ಎಲ್ಲ ರಂಗಗಳಲ್ಲಿ, ಎಲ್ಲ ಹಂತಗಳಲ್ಲಿ ವಿಸ್ತರಿಸೋ ಕನಸು ಕಾಣೋ ಹುಡುಗರು ಇವತ್ತು ಈ ನಾಡಿಗೆ ತುರ್ತಾಗಿ ಬೇಕು. ಅಂತಹ ಕನಸು ಕಾಣೋ ಆಸೆ ಕಣ್ಣಿನ ಹುಡುಗರೇ ನಾಳೆ ಕನ್ನಡದಲ್ಲಿ ಹೊಸ ಹೊಸ ಸಾಧನೆ ಮಾಡೋರೇ ಹೊರತು ಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಳ್ಳೊ ಜನರಲ್ಲ. ನೀವೆನ್ ಅಂತೀರಾ ಗೆಳೆಯರೇ?

3 ಕಾಮೆಂಟ್‌ಗಳು:

  1. ನಮಸ್ಕಾರ ವಸಂತ್, ನಿಮ್ಮ ಬ್ಲಾಗ್ ಬಹಳ ಚೆನ್ನಾಗಿದೆ. ನಿಮ್ಮನ್ನ ನಾನು ಟ್ವಿಟರ್ ಅಲ್ಲು ಹಿಂಬಾಲಿಸಿತ್ತಿರುವೆ.

    ಇಂತಿ,
    ದೀಪ

    ಪ್ರತ್ಯುತ್ತರಅಳಿಸಿ
  2. ಅದ್ಭುತ!! ನಿಮ್ಮ ಬ್ಲಾಗ್ ಮತ್ತು ಅಲ್ಲಿನ ಬರಹಗಳು ಅದ್ಭುತ! ನಂಗೆ fb request ಕಳಿಸಿ ನಿಮ್ಮ ಪರಿಚಯ ಮಾಡಿಕೊಂಡಿದ್ದು ತುಂಬಾ ಸಂತೋಷ ಆಯ್ತು.....

    - ಅಭಿಷೇಕ್

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !