ಜನರ ಅಪೇಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರಿಂದ ಬೇಡಿಕೆ ಬಂದ್ರೆ ಆರನೇ ತರಗತಿಯಿಂದ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರ ತಯಾರಾಗಿದೆ ಅನ್ನುವ ಹೇಳಿಕೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲೆ ಸಚಿವರಾದ ಕಾಗೇರಿಯವರು ಹೇಳಿದ್ದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಕಂಡೆ. ಬೇಲಿಯೇ ಎದ್ದು ಹೊಲವ ಮೇಯೊದು ಅಂದ್ರೆ ಇದೇನಾ ಅನ್ನಿಸ್ತಾ ಇತ್ತು. ಒಂದೆಡೆ ಪಾಲಿಕೆ ವ್ಯಾಪ್ತಿಯ ಕನ್ನಡ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ಕೊಡಿಸಿ ತಮ್ಮ ಜನ್ಮ ಪಾವನವಾಯ್ತು ಅನ್ನುವ ಸಚಿವರೊಬ್ಬರು, ಇನ್ನೊಂದೆಡೆ ಜನರ ಅಪೇಕ್ಷೆ ಈಡೇರಿಸಲು ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಾಗಿ ಹೇಳುವ ಈ ಸಚಿವರು. ಇವರ ಹೊಣೆಗಾರಿಕೆ ಇಲ್ಲದ ಈ ನಡೆಗಳು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗಟ್ಟಿಯಾದ ಸಮಾಧಿಯೊಂದನ್ನು ಸದ್ದಿಲ್ಲದೇ ಕಟ್ಟುತ್ತಿವೆ ಅನ್ನಬಹುದು.
ಇದೇ ಸಂದರ್ಭದಲ್ಲಿ ತಾಯ್ನುಡಿ ಶಿಕ್ಷಣದ ಬದಲು ಇಂಗ್ಲಿಶ್ ಬೇಕೆನ್ನುವವರ ವಾದವಾದರೂ ಏನು ಅಂದರೆ ನನಗೆ ಕಾಣುವುದು ಕೆಳಗಿನ ಕೆಲವು ಮಾತುಗಳು. ಅವುಗಳಿಗೆ ನನ್ನ ಅನಿಸಿಕೆ ಏನು ಅನ್ನುವುದನ್ನು ಈ ಸಂದರ್ಭದಲ್ಲಿ ಬರೆದಿರುವೆ.
ಕನ್ನಡ ಮಾಧ್ಯಮ ಬೇಕು ಅನ್ನುವವರದ್ದು ಬೂಟಾಟಿಕೆ. ಕನ್ನಡ ಮಾಧ್ಯಮ ಬೇಕು ಅನ್ನುವ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಶ್ ಮಾಧ್ಯಮದ ಸಿ.ಬಿ.ಎಸ್.ಈ/ಐ.ಸಿ.ಎಸ್.ಈ ಶಾಲೆಗಳಿಗೆ, ಆದರೆ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು ಅನ್ನುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಿ.
ಆರು ಕೋಟಿ ಜನರ ಕಲಿಕೆ, ದುಡಿಮೆ ರೂಪಿಸಬೇಕಾದ ಸರ್ಕಾರ ತನ್ನ ನೀತಿ ನಿಯಮಗಳನ್ನು ಯಾವ ಆಧಾರದ ಮೇಲೆ ರೂಪಿಸಬೇಕು? ಯಾರೋ ನಾಲ್ಕು ಜನ ಸಾಹಿತಿಗಳು, ಚಿಂತಕರು ತಮ್ಮ ಮಕ್ಕಳನ್ನು ಇಂಗ್ಲಿಶ್ ಶಾಲೆಗಳಿಗೆ ಕಳಿಸುವುದರ ಆಧಾರದ ಮೇಲೆ ಒಂದು ಸರ್ಕಾರವೇ ನಾಡಿನ ಜನರ ಕಲಿಕೆ ರೂಪಿಸುವ ತನ್ನ ಹೊಣೆಗಾರಿಕೆಯಿಂದಲೇ ನುಣುಚಿಕೊಂಡು, ಜನರಿಂದ ಬೇಡಿಕೆ ಇದೆ ಅನ್ನುವ ಕಾರಣವೊಡ್ಡಿ ಇಂಗ್ಲಿಶ್ ಶಾಲೆಗಳನ್ನು ತೆರೆಯಲು ಹೊರಡುವುದು ಎಷ್ಟು ಸರಿ? ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೩ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ” ಎನ್ನುವ ಅನಿಸಿಕೆಯಿದೆ. ಈ ಕಾರಣದಿಂದಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಷ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಷ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಅರಿಯದ ಮುಗ್ಧರು ಜನಸಾಮಾನ್ಯರು. ಹಾಗಾಗಿ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಷ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಆಕರ್ಷಣೆಗೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ, ಹಾಗಾಗಿ ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ” ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಆದರೆ ಸರ್ಕಾರವೊಂದು ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದೇ ಇಲ್ಲಿನ ಮುಖ್ಯಪ್ರಶ್ನೆಯಾಗಿದೆ.
ಅಮೇರಿಕದಂತಹ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಹೊಂದಿರುವ ದೇಶದಲ್ಲೇ ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲಭೂತ ವಿಷಯಗಳು ಈಗಲೂ ಸರ್ಕಾರದ ಕಣ್ಣಂಚಿನಲ್ಲೇ ಇದೆ ಅನ್ನುವುದನ್ನು ಗಮನಿಸಬೇಕಾಗುತ್ತದೆ. ಅಷ್ಟಕ್ಕೂ ಜನ ಮರುಳೋ ಜಾತ್ರೆ ಮರುಳೋ ಅಂಬಂತೆ ಇಂಗ್ಲಿಶ್ ಶಾಲೆಗಳಿಗೆ ಸೇರಿರುವ ಮಕ್ಕಳೆಲ್ಲ ಇಂಗ್ಲಿಶ್ ಕಲಿತು ಜ್ಞಾನ, ವಿಜ್ಞಾನದ ಶಾಖೆಗಳಲ್ಲಿ ಪ್ರಪಂಚವೇ ಬೆರಗಾಗುವಂತಹ ಸಾಧನೆಯೆನಾದರೂ ಮಾಡಿದ್ದಾರಾ? ಕರ್ನಾಟಕದಲ್ಲಿ ಇವತ್ತು ಅನ್ನ ತಿನ್ನುತ್ತಿರುವವರೆಲ್ಲ ಇಂಗ್ಲಿಶಿನಿಂದಲೇ ಅದನ್ನು ಪಡೆಯುತ್ತಿದ್ದಾರಾ? ಎಲ್ಲೋ ಒಂದಿಷ್ಟು ಐಟಿ, ಕಾಲ್ ಸೆಂಟರ್ ನ ಪುಡಿಗಾಸಿನ ಕೆಲವು ಕೆಲಸಗಳ ಲಾಭವಷ್ಟೇ ಆಗುತ್ತಿರುವುದು. ಅಷ್ಟು ಮಾತ್ರದ ಲಾಭಕ್ಕೆ ಎಲ್ಲೆಡೆ ಸರ್ಕಾರವೇ ಮುಂದೆ ನಿಂತು ಇಂಗ್ಲಿಶ್ ಶಾಲೆ ತೆರೆಯುವ ಮಾತು ಸರ್ಕಾರಕ್ಕೆ ಒಂದು ಭಾಶೆಯಾಗಿ ಇಂಗ್ಲಿಶ್ ಕಲಿಸುವುದಕ್ಕೂ, ಇಂಗ್ಲಿಶ್ ಮಾಧ್ಯಮದಲ್ಲೇ ಎಲ್ಲವನ್ನೂ ಮಾಡುತ್ತೇವೆ ಅನ್ನುವುದಕ್ಕೂ ಇರುವ ಅಂತರವಾದರೂ ಅರ್ಥವಾಗಿದೆಯೇ ಅನ್ನುವ ಪ್ರಶ್ನೆ ಹುಟ್ಟು ಹಾಕುತ್ತಿಲ್ವೇ?
ಅಮೇರಿಕದಂತಹ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಹೊಂದಿರುವ ದೇಶದಲ್ಲೇ ಶಿಕ್ಷಣ, ಆರೋಗ್ಯ ಸೇವೆಯಂತಹ ಮೂಲಭೂತ ವಿಷಯಗಳು ಈಗಲೂ ಸರ್ಕಾರದ ಕಣ್ಣಂಚಿನಲ್ಲೇ ಇದೆ ಅನ್ನುವುದನ್ನು ಗಮನಿಸಬೇಕಾಗುತ್ತದೆ. ಅಷ್ಟಕ್ಕೂ ಜನ ಮರುಳೋ ಜಾತ್ರೆ ಮರುಳೋ ಅಂಬಂತೆ ಇಂಗ್ಲಿಶ್ ಶಾಲೆಗಳಿಗೆ ಸೇರಿರುವ ಮಕ್ಕಳೆಲ್ಲ ಇಂಗ್ಲಿಶ್ ಕಲಿತು ಜ್ಞಾನ, ವಿಜ್ಞಾನದ ಶಾಖೆಗಳಲ್ಲಿ ಪ್ರಪಂಚವೇ ಬೆರಗಾಗುವಂತಹ ಸಾಧನೆಯೆನಾದರೂ ಮಾಡಿದ್ದಾರಾ? ಕರ್ನಾಟಕದಲ್ಲಿ ಇವತ್ತು ಅನ್ನ ತಿನ್ನುತ್ತಿರುವವರೆಲ್ಲ ಇಂಗ್ಲಿಶಿನಿಂದಲೇ ಅದನ್ನು ಪಡೆಯುತ್ತಿದ್ದಾರಾ? ಎಲ್ಲೋ ಒಂದಿಷ್ಟು ಐಟಿ, ಕಾಲ್ ಸೆಂಟರ್ ನ ಪುಡಿಗಾಸಿನ ಕೆಲವು ಕೆಲಸಗಳ ಲಾಭವಷ್ಟೇ ಆಗುತ್ತಿರುವುದು. ಅಷ್ಟು ಮಾತ್ರದ ಲಾಭಕ್ಕೆ ಎಲ್ಲೆಡೆ ಸರ್ಕಾರವೇ ಮುಂದೆ ನಿಂತು ಇಂಗ್ಲಿಶ್ ಶಾಲೆ ತೆರೆಯುವ ಮಾತು ಸರ್ಕಾರಕ್ಕೆ ಒಂದು ಭಾಶೆಯಾಗಿ ಇಂಗ್ಲಿಶ್ ಕಲಿಸುವುದಕ್ಕೂ, ಇಂಗ್ಲಿಶ್ ಮಾಧ್ಯಮದಲ್ಲೇ ಎಲ್ಲವನ್ನೂ ಮಾಡುತ್ತೇವೆ ಅನ್ನುವುದಕ್ಕೂ ಇರುವ ಅಂತರವಾದರೂ ಅರ್ಥವಾಗಿದೆಯೇ ಅನ್ನುವ ಪ್ರಶ್ನೆ ಹುಟ್ಟು ಹಾಕುತ್ತಿಲ್ವೇ?
ಇಡೀ ರಾಜ್ಯದಲ್ಲಿ ಇಂಗ್ಲಿಶ್ ಮಾದ್ಯಮ ಶಾಲೆ ತೆರೆದರೆ ಕರ್ನಾಟಕ ಖಂಡಿತ ಮುಂದುವರೆಯುತ್ತೆ, ಏಳಿಗೆ ಹೊಂದುತ್ತೆ.
ಕರ್ನಾಟಕದ 83% ಮಕ್ಕಳು ಇಂದಿಗೂ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ. ಈ ಶಾಲೆಗಳನ್ನೆಲ್ಲ ಮುಚ್ಚಿ ಇಂಗ್ಲಿಶ್ ಶಾಲೆಗಳಾಗಿಸುವುದು ಸಾಧ್ಯವೇ? ಸಾಧ್ಯ ಯಾಕಾಗಲ್ಲ ಅನ್ನುವುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. 90 ಲಕ್ಷ ವಿದ್ಯಾರ್ಥಿಗಳಿಗೆ ಅವರ ವಾತಾವರಣದಲ್ಲಿ ಇಲ್ಲದ ಇಂಗ್ಲಿಶ್ ನುಡಿಯಲ್ಲಿ, ಅವರೆಲ್ಲ ಇಂಗ್ಲಿಶ್ ನಲ್ಲೇ ಚೆನ್ನಾಗಿ ಪಾಠ ಕೇಳಿ, ಕಲಿತು, ಮನದಟ್ಟು ಮಾಡಿಕೊಳ್ಳಲು ಇಂಗ್ಲಿಶ್ ಅನ್ನು ಅರೆದು ಕುಡಿದಿರುವ, ಅದನ್ನು ಮಕ್ಕಳಿಗೆ ಅಷ್ಟೇ ಪರಿಣಾಮಕಾರಿಯಾಗಿ ಕಲಿಸಬಲ್ಲ ಪರಿಣಿತ ಶಿಕ್ಷಕರು ಬೇಕು. ಪ್ರತಿ ಮೂವತ್ತು ವಿದ್ಯಾರ್ಥಿಗೆ ಒಬ್ಬ ಶಿಕ್ಷಕ ಅಂದರೆ ಕಡಿಮೆ ಅಂದರೂ 3 ಲಕ್ಷ ಜನ ಇಂಗ್ಲಿಶ್ ಬಲ್ಲ ಶಿಕ್ಷಕರು ಬೇಕು. ಹೇಳಿ ಎಲ್ಲಿಂದ ತರೋಣ ಇವರನ್ನೆಲ್ಲ? ಇರುವ ಮಕ್ಕಳಿಗೆ ಕನ್ನಡದಲ್ಲೇ ಪಾಠ ಮಾಡಲು ಶಿಕ್ಷಕರು ಸಿಗುತ್ತಿಲ್ಲ. ಇನ್ನು ಇವರನ್ನೆಲ್ಲಿಂದ ತರೋಣ ? ವಾತಾವರಣದಲ್ಲಿರುವ ಮಕ್ಕಳ, ಶಿಕ್ಷಕರೆಲ್ಲರ ಭಾಷೆಯಾಗಿರುವ ಕನ್ನಡದಲ್ಲಿ ಇಂತಹದೊಂದು ವ್ಯವಸ್ಥೆ ಕಲ್ಪಿಸುವುದು ಸುಲಭವೋ ಅಥವಾ ಇದಾವುದು ಇಲ್ಲದ ಇಂಗ್ಲಿಷ್ ನಲ್ಲೋ? ಹಾಗಿದ್ದರೆ ಇವತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಹೆಚ್ಚಿನ ಕಲಿಕೆಯನ್ನು ಅದರಲ್ಲೇ ತರುವ ಪ್ರಯತ್ನಕ್ಕೆ ಹಣ, ಸಂಪನ್ಮೂಲ, ಆದ್ಯತೆ ಕೊಡುವ ಮಾತನ್ನು ಮಾನ್ಯ ಮಂತ್ರಿಗಳು ಆಡಿದ್ದರೆ ಜನರ ಬಗೆಗಿನ ಕಾಳಜಿಯ ಇವರ ಮಾತುಗಳು ನಿಜ ಅನ್ನಿಸುತ್ತಿತ್ತು.
ಕನ್ನಡದಲ್ಲಿ ಎಲ್ಲಿದೆ ವಿಜ್ಞಾನ-ತಂತ್ರಜ್ಞಾನದ ವಿಷ್ಯಗಳ ಪುಸ್ತಕಗಳು. ಉನ್ನತ ಶಿಕ್ಷಣ ಎಲ್ಲಿದೆ?
ಇವತ್ತು ಆ ವ್ಯವಸ್ಥೆ ಇಲ್ಲ ಅಂದರೆ ಪರಿಹಾರ, ಅದನ್ನು ಬಿಟ್ಟು ಇನ್ನೊಂದು ವ್ಯವಸ್ಥೆ ಕಟ್ಟುತ್ತೀನಿ ಅಂತ ಹೊರಡೋದಾ ಇಲ್ಲ ಅದರಲ್ಲಿ ಅಂತಹ ಸಾಧ್ಯತೆ ತರುವುದರತ್ತ ಕೆಲಸ ಮಾಡುವುದಾ? ನಿಮ್ಮನೆ ಮಗುವಿಗೆ ಯಾವುದೋ ಒಂದು ಸಾಮರ್ಥ್ಯ ಇವತ್ತಿಲ್ಲ ಅಂದರೆ,ಆ ಮಗುವನ್ನೇ ಕೈ ಬಿಟ್ಟು ಇನ್ನೊಂದು ಮಗುವನ್ನ ಕೊಂಡು ತರ್ತಿರೋ ಇಲ್ಲ ನಿಮ್ಮ ಮಗುವಲ್ಲಿ ಆ ಸಾಮರ್ಥ್ಯ ದೊರಕಿಸಿಕೊಡುವತ್ತ ಕೆಲಸ ಮಾಡುತ್ತಿರೋ? ಒಂದು ಸಮಯಾಧಾರಿತ ಯೋಜನೆ ಹಾಕಿಕೊಂಡು ಜ್ಞಾನ ಶಾಖೆಯ ಎಲ್ಲ ವಿಷಯಗಳನ್ನು ಕನ್ನಡದಲ್ಲಿ ತರುವತ್ತ ಕೆಲಸ ಮಾಡಬೇಕಾದುದು ಇವತ್ತಿನ ಅಗತ್ಯವೇ ಹೊರತು ಕೈ ಚೆಲ್ಲಿ ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಲ್ಲ ಅಲ್ಲವೇ?
ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ !
ಇದೆಲ್ಲ ಒಂದು ತೂಕವಾದರೆ, ಸರ್ಕಾರದ ಇಂತಹ ನಿಲುವೊಂದು ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಇವತ್ತು ಎಲ್ಲೆಲ್ಲಿ ಕನ್ನಡದ ಬಳಕೆ ಚೆನ್ನಾಗಿ ಆಗುತ್ತಿದೆಯೋ, ಅಲ್ಲೆಲ್ಲ ಒಂದು ಪೀಳಿಗೆಯ ಅವಧಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಿದ್ದೀರಾ? ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ಇಡೀ ಕರ್ನಾಟಕಕ್ಕೆ ಇಂಗ್ಲಿಶಿನ ವ್ಯವಸ್ಥೆ ತರುವುದು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಯಾಗಲಿದೆ ಅನ್ನುವುದು ಸರ್ಕಾರದ ಅರಿವಿಗೆ ಬಂದಿದೆಯೇ? ಸಾವಿರಾರು ವರ್ಷಗಳ ಇತಿಹಾಸ, ಹಿರಿಮೆ ಇರುವ ಒಂದು ಜನಜೀವನ ಒಂದೇ ಒಂದು ಪೀಳಿಗೆಯ ಅವಧಿಯಲ್ಲಿ ಹೊಂದಲಿರುವ ಬದಲಾವಣೆ ಎಂತಹುದು ಅನ್ನುವುದರ ಪ್ರಜ್ಞೆ ಸರ್ಕಾರಕ್ಕಿದೆಯೇ?
ಕನ್ನಡ ಶಾಲೆಗಳ ಯಶಸ್ಸೊಂದೇ ಬದಲಾಯಿಸಬಲ್ಲುದು
ತಾಯ್ನುಡಿ ಶಿಕ್ಷಣ ಮಕ್ಕಳ ಬುದ್ದಿ ವಿಕಾಸಕ್ಕೆ ದಾರಿಯೆನ್ನುವುದನ್ನು ಜಗತ್ತಿನ ನೂರಾರು ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಸಾರಿ ಸಾರಿ ಹೇಳುತ್ತಿದ್ದರೂ, ತಾಯ್ನುಡಿ ಶಿಕ್ಷಣದ ವ್ಯವಸ್ಥೆಯಿಂದಲೇ ಇಸ್ರೇಲ್, ಜಪಾನ, ಜರ್ಮನಿ, ಅಮೇರಿಕ, ಇಂಗ್ಲಂಡ್, ಫ್ರಾನ್ಸ್ ನಂತಹ ದೇಶಗಳು ಏಳಿಗೆ ಹೊಂದಿರುವ ಎತ್ತುಗೆ ಕಣ್ ಮುಂದಿದ್ದರೂ, ಅಂತಹದೊಂದು ವ್ಯವಸ್ಥೆ ಕಟ್ಟುವೆಡೆ ಪ್ರಾಮಾಣಿಕವಾಗಿ ಕೆಲಸ ಮಾಡದೇ, ಈ ರೀತಿ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವ ಸರ್ಕಾರಗಳ ಕಣ್ ತೆರೆಸಲು ಇರುವ ಹಾದಿಯೊಂದೇ.. ಕನ್ನಡ ಮಾದ್ಯಮದಲ್ಲೇ ಎಲ್ಲ ಸವಲತ್ತು, ಸೌಕರ್ಯ, ಹೊಸ ಮಾದರಿಯ ಕಲಿಕೆ ಇರುವ ಖಾಸಗಿ ಶಾಲೆಗಳನ್ನು ಕನ್ನಡಿಗರು ಕಟ್ಟಿ, ಅಂತಹ ಶಾಲೆಗಳ ಮಕ್ಕಳು ಅದ್ಭುತ ಯಶಸ್ಸು ಸಾಧಿಸಬೇಕು, ಅಂತಹ ಯಶಸ್ಸಿನ ಅಲೆಯೊಂದೇ ಸರ್ಕಾರವನ್ನು ಮತ್ತೆ ಕನ್ನಡ ಮಾಧ್ಯಮದೆಡೆಗೆ ಗಮನ ಹರಿಸುವಂತೆ ಮಾಡಬಹುದೆನೋ..