ಸಿಂಗಂ ಅನ್ನುವ ನಕಲು ಚಿತ್ರದಲ್ಲಿ ಕನ್ನಡಿಗರನ್ನು ನಾಯಿಗಳೆಂದು ಜರಿಯುವ ಡೈಲಾಗ್ನಿಂದ ಕರ್ನಾಟಕದಲ್ಲಿ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದ್ದು ಕಂಡೆ. ಕರ್ನಾಟಕದಲ್ಲಿ ವ್ಯಕ್ತವಾದ ಭಾರಿ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿಂಗಂನಲ್ಲಿ ನಟಿಸಿರುವ ಕನ್ನಡ ಮೂಲದ ನಟ ಮಹಾಶಯರೊಬ್ಬರು "ಅದೇನು ದೊಡ್ಡ ವಿಷಯವೇ ಅಲ್ಲ. ಇದರ ವಿರೋಧಕ್ಕೆ ಅರ್ಥವಿಲ್ಲ" ಅಂದರು. ಘಟನೆ ಚಿಕ್ಕದೋ, ದೊಡ್ಡದೋ ಅನ್ನುವುದಕ್ಕಿಂತ ಇಂತಹ ಘಟನೆಯ ಹಿಂದೆ ಮನಸ್ಸಲ್ಲಿ ಏಳುವ ಕೆಲವು ಪ್ರಶ್ನೆಗಳು ಹಲವಾರು.
- ಇದೊಂದು ಚಿಕ್ಕ ಘಟನೆ ಅನ್ನುವ ಪ್ರಕಾಶ ರೈ ಅವರಿಗೆ ಕರ್ನಾಟಕ-ಮಹಾರಾಷ್ಟ್ರದ ನಡುವೆ ದಶಕಗಳಿಂದ ಗಡಿ ವಿವಾದವಿರುವುದು, ಅದು ಎರಡೂ ಕಡೆಯವರಿಗೆ ಭಾವನಾತ್ಮಕ ವಿಷಯವಾಗಿರುವುದರ ಅರಿವಿಲ್ಲವೇ? ಅರಿವಿದ್ದೂ ಇಂತಹದೊಂದು ಡೈಲಾಗ್ ಪ್ರಯೋಗ ಮಾಡಿರುವುದು ಪ್ರಚೋದಿಸಿ ಮರಾಠಿಗರನ್ನು ಈ ಹಿಂದಿ ಚಿತ್ರದತ್ತ ಸೆಳೆಯುವ playing to the gallery ಅನ್ನುವ ಮನಸ್ಥಿತಿಯಲ್ಲವೇ? ಇಲ್ಲದಿದ್ದರೆ ಚಿತ್ರದಲ್ಲಿ ಕರ್ನಾಟಕದಿಂದ ಸಾವಿರ ಜನರನ್ನು ಕರೆ ತರುವೆ ಎಂದು ಇವರು ಅನ್ನುವುದು, ಅದಕ್ಕೆ ಎದೆ ತಟ್ಟಿ ನಾನು ಮರಾಠ, ನಾನು ಮರಾಠ ಎಂದು ಕೂಗುತ್ತ ಕನ್ನಡಿಗರನ್ನು ನಾಯಿಗಳು ಎಂದು ಹೀರೊ ಬೊಬ್ಬಿರಿಯವುದು ಏನನ್ನು ತೋರಿಸುತ್ತದೆ? Artistic freedom ಹೆಸರಿನಲ್ಲಿ ಯಾವ ಅವಮಾನ ಮಾಡಿದರೂ, ಏನು ಮಾತನಾಡಿದರೂ ಸಹಿಸಿಕೊಳ್ಳಬೇಕೆ? ಅದನ್ನು ಪ್ರಶ್ನಿಸಿ ಬೀದಿಗಿಳಿಯುವುದು ಸಣ್ಣತನವೇ? ಸಂಕುಚಿತ ಮನೋಭಾವನೆಯೇ? ಪ್ರಕಾಶ್ ರೈಗೇನು ಬಿಡಿ, ಇವತ್ತು ಇಲ್ಲಿ ಕನ್ನಡಿಗ, ಅಲ್ಲಿ ತಮಿಳಿಗ, ಇನ್ನೆಲ್ಲೋ ತೆಲುಗ, ಮತ್ತೆಲ್ಲೋ ಇಂಡಿಯನ್ ಅಂದುಕೊಂಡು ತಮ್ಮ ಕೆಲಸ ಮಾಡ್ಕೊಂಡು ಮುಂದಕ್ಕೊಗ್ತಾರೆ. ಎಷ್ಟೇ ಅಂದರೂ ಕಲಾವಿದರಿಗ ಭಾಶೆಯ ಹಂಗಿಲ್ಲವಲ್ಲವೇ? :)
- ಇಂತದೇ ಡೈಲಾಗ್ ಪ್ರಕಾಶ ರೈ ಕೈಯಲ್ಲಿ ಮರಾಠರ ವಿರುದ್ದ ಉದುರಿಸುವ ಧೈರ್ಯ ನಿರ್ದೇಶಕರಿಗೆದೆಯೇ? ಅಂತಹ ಪ್ರಯತ್ನ ಮಾಡಿದ್ದಲ್ಲಿ ಮಹಾರಾಷ್ಟ್ರ ಇಷ್ಟೊತ್ತಿಗೆ ಹೊತ್ತಿ ಉರಿಯುತ್ತಿತ್ತೆನೋ..ಇದು ಕರ್ನಾಟಕ ನೋಡಿ, ಬಿಟ್ಟಿ ಬಿದ್ದಿರುವ ಊರು, ಜನರು. ಈ ರೀತಿ ಬೆಂಕಿ ಹಚ್ಚೋ ಯಾವ ಕೆಲಸ ಮಾಡಿದ್ರೂ ನಡೆಯುತ್ತೆ ಅನ್ನೋದು ಇದರ ಹಿಂದಿನ ನಂಬಿಕೆಯೇ?
- ಕಂಠಿ ಅನ್ನುವ ಕನ್ನಡ ಚಿತ್ರದಲ್ಲಿ ಮರಾಠಿಗರ ವಿರುದ್ಧ ಡೈಲಾಗ್ ಇದೆ ಅನ್ನುವ ಕಾರಣವೊಡ್ಡಿ ಎರಡೆರಡು ತಿಂಗಳು ಚಿತ್ರದ ಬಿಡುಗಡೆಯೇ ಆಗದಂತೆ ಮುಂದೂಡಿದ ಸೆನ್ಸಾರ್ ಮಂಡಳಿ ಈ ಚಿತ್ರದಲ್ಲಿ ಇಂತಹದೊಂದು ನೇರಾನೇರ ಪ್ರಚೋದನಕಾರಿ ಡೈಲಾಗ್ ಇದ್ದರೂ ಚಿತ್ರವನ್ನು ಸರ್ಟಿಫೈ ಮಾಡಿದ್ದು ಯಾಕೆ? ಹಿಂದಿ ಚಿತ್ರಕ್ಕೊಂದು, ಕನ್ನಡ ಚಿತ್ರಕ್ಕೊಂದು ಅಂತೇನಾದರೂ ನಿಯಮಗಳಿವೆಯಾ?
- ತಮಿಳಿನಲ್ಲಿ ಮೊದಲು ಬಂದು, ಆಮೇಲೆ ಕನ್ನಡದಲ್ಲಿ ಕೆಂಪೇಗೌಡನಾಗಿ ಬಂದ ಈ ಚಿತ್ರಕ್ಕೆ ಕರ್ನಾಟಕದಲ್ಲಿ ಸಿಕ್ಕಿದ್ದು ಬರೋಬರಿ 27 ಚಿತ್ರಮಂದಿರಗಳು. ನಿಯಮಾನುಸಾರ 21 ಚಿತ್ರಮಂದಿರಗಳಲ್ಲಿ ಮಾತ್ರವೇ ಪರಭಾಷಾ ಚಿತ್ರ ಬಿಡುಗಡೆಯಾಗಬೇಕು. ಇಲ್ಲಿ ಅದನ್ನು ಮೀರಿ ಬಿಡುಗಡೆ ಮಾಡಿದ ರಿಲಾಯನ್ಸ್ ಸಂಸ್ಥೆಯನ್ನು ಪ್ರಶ್ನಿಸಬೇಕಾದ KFCC ಏನ್ ನಿದ್ದೆ ಮಾಡ್ತಿದೆಯೇ? ಉದ್ಯಮದ ಏಳಿಗೆ, ಉಳಿವಿನ ಬಗ್ಗೆ ಕೆಲಸ ಮಾಡಬೇಕಾದ ಇವರ ಗಮನ ಏನಿದ್ದರೂ ರಿಮೇಕ್ ಚಿತ್ರಕ್ಕೂ ಸಬ್ಸಿಡಿ ಕೊಡಿ, ಅಸಂವಿಧಾನಿಕವಾಗಿ ಡಬ್ಬಿಂಗ್ ನಿಷೇಧಿಸಿ ಅನ್ನುವಂತಹ ಕೆಲಸಕ್ಕೆ ಬಾರದ ಬೇಡಿಕೆಗಳ ಬಗ್ಗೆ ಮಾತ್ರವೇನು?