ಸೋಮವಾರ, ಅಕ್ಟೋಬರ್ 31, 2011

ರಾಜ್ಯೋತ್ಸವಕ್ಕೆ ಸರ್ಕಾರದ ಉಡುಗೊರೆ - 3 ಸಾವಿರ ಶಾಲೆಗಳಿಗೆ ಬೀಗ !

ಇವತ್ತು ಭಾರತ ಒಕ್ಕೂಟದಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನ. ಸರಿಯಾಗಿ 55 ವರ್ಷದ ಹಿಂದೆ ಇದೇ ದಿನದಂದು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಹಲವು ಭಾಗಗಳು ಆಲೂರು ವೆಂಕಟರಾಯರ ಮುಂದಾಳತ್ವದಲ್ಲಿ ನಡೆದ ದಶಕಗಳ ಕಾಲದ ಹೋರಾಟದ ಫಲವಾಗಿ ಒಂದಾದ ಸುದಿನ. ಇಂತಹ ದಿನವೊಂದನ್ನು ನೆನೆಯಲು ನಮ್ಮ ರಾಜ್ಯ ಸರ್ಕಾರ ಎಲ್ಲ ಕನ್ನಡಿಗರಿಗೆ ಒಂದು ಭರ್ಜರಿ ಉಡುಗೊರೆ ಕೊಡುತ್ತಿದೆ. ಏನು ಗೊತ್ತೇ? ಮಕ್ಕಳ ಸಂಖ್ಯೆ ಕಡಿಮೆಯಿದೆ ಅನ್ನುವ ನೆಪವೊಡ್ಡಿ ಸರಿ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚುವ ನಿರ್ಧಾರ ! ಕನ್ನಡದ ಮಕ್ಕಳ ಏಳಿಗೆಗೆ ಬುನಾದಿ ಹಾಕಬೇಕಾದ ಶಾಲೆಗಳನ್ನು ಒಳ್ಳೆ ಅವೆನ್ಯೂ ರಸ್ತೆಯಲ್ಲಿ ಅಂಗಡಿ ಇಟ್ಟಿರೋ ವ್ಯಾಪಾರಿ ರೀತಿಯಲ್ಲಿ ಲಾಭ-ನಷ್ಟದ ಕಣ್ಣಿಂದ ಅಳೆದು ಮುಚ್ಚುವ ನಿಲುವಿಗೆ ಬಂದಿರುವ ಸರ್ಕಾರ "ಸರಿಯಾದ ಕಲಿಕೆ ರೂಪಿಸುವುದು" ನಾಡಿನ ಮಕ್ಕಳ ಬಗ್ಗೆ ತನಗಿರುವ ಕರ್ತವ್ಯದಂತೆ ಕಾಣದೇ ವ್ಯಾಪಾರವೆಂಬಂತೆ ಕಾಣುತ್ತಿರುವುದು ಬರಲಿರುವ ದಿನಗಳ ದಿಕ್ಸೂಚಿಯೇನೊ ಅನ್ನಿಸುವಂತಿದೆ.

ಮೂರು ಸಾವಿರ ಶಾಲೆಗಳಿಗೆ ಬೀಗ
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಕಾರಣ? ಆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ಕ್ಕಿಂತ ಕಡಿಮೆ ಇದೆ ಅನ್ನುವುದು. ಅಲ್ಲದೇ ಇತ್ತಿಚೆಗೆ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಶಿಕ್ಷಣ ಮಂತ್ರಿ ಕಾಗೇರಿಯವರು ಹೇಳಿದ ಇನ್ನೂ ಕೆಲವು ಮಾತುಗಳೆಂದರೆ "ಕೇಂದ್ರ ಸರ್ಕಾರ 20 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕೆಂದು ಆದೇಶಿಸಿದೆ", "ಕೇಂದ್ರದಿಂದಲೇ ಆದೇಶ ಬಂದಿರುವಾಗ ನಾನೇನು ಮಾಡಲು ಸಾಧ್ಯ?", "ಇಂದು ಹಳ್ಳಿಗಳಲ್ಲಿ ಬಹಳಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿಲ್ಲ. ಖಾಸಗಿ ಶಾಲೆಗಳ ಕಡೆ ಹೊರಳುತ್ತಿದ್ದಾರೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಶಿಕ್ಷಣ ಪೂರೈಸುವುದು ಸಾಧ್ಯವಾಗುತಿಲ್ಲ" ನೀವೇ ಯೋಚನೆ ಮಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಅನ್ನುವುದು ಮೂಲಭೂತ ಹಕ್ಕು ಅನ್ನುವ ಕಾನೂನು ತರುತ್ತಿರುವ ಈ ದಿನಗಳಲ್ಲಿ ಇಲ್ಲಿ ಕಡಿಮೆ ಮಕ್ಕಳಿದ್ದಾರೆ, ಅದಕ್ಕೆ ನಷ್ಟ ಆಗುತ್ತೆ ಅದಕ್ಕೆ ಮುಚ್ಚಿ ಇನ್ನೊಂದು ಕಡೆ ಹಾಕ್ತೀವಿ ಅನ್ನಲು ಶಿಕ್ಷಣ ಅನ್ನುವುದು ಲಾಭ-ನಷ್ಟದ ವ್ಯಾಪಾರವೇ? ಕಲಿಕೆ ಅನ್ನುವುದು ಸಂವಿಧಾನದ ಜಂಟಿ ಪಟ್ಟಿಯಲ್ಲಿದ್ದರೂ  (ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಕೈಯಲ್ಲಿರಬೇಕಿತ್ತು !) ಅದರ ಹೆಚ್ಚಿನ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಹೀಗಿರುವಾಗ ಕರ್ನಾಟಕದ ಮಕ್ಕಳ ಕಲಿಕೆಯ ಅಗತ್ಯಗಳ ಬಗ್ಗೆ ಏನೇನು ತಿಳಿಯದ ಯಾರೋ ದೆಹಲಿಯ ಯಜಮಾನರು ಆಜ್ಞೆ ಮಾಡಿದ್ದಾರೆ, ಅದಕ್ಕೆ ಮುಚ್ಚುತ್ತೀವಿ ಅನ್ನುವುದು ಮೈಗೆ ಎಣ್ಣೆ ಸವರಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸವಲ್ಲವೇ?  ಇನ್ನೂ ಮುಂದೆವರೆದು, ಸ್ಪರ್ಧಾತ್ಮಕ ಶಿಕ್ಷಣದ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ ಅನ್ನುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಅಂತಹದೊಂದು ಶಿಕ್ಷಣ ಕೊಡಲಾಗುವುದಿಲ್ಲ, ಅಂತಹ ಶಿಕ್ಷಣ ಬೇಕಿದ್ದರೆ ಖಾಸಗಿ ಶಾಲೆಗಳಿಗೆ ಹೋಗಿ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿರುವುದು ಎಲ್ಲ ವರ್ಗದ ಕನ್ನಡಿಗರ ಕಲಿಕೆಯ ಅಗತ್ಯಗಳನ್ನು ಪೂರೈಸುವ ಬಗ್ಗೆ ಈ ಸರ್ಕಾರಕ್ಕೆ ಎಷ್ಟರ ಮಟ್ಟಿಗಿನ ಬದ್ಧತೆ, ಯೋಗ್ಯತೆ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ? ಸರ್ಕಾರಿ ಶಿಕ್ಷಣ ಕಳಪೆ, ಖಾಸಗಿ ಇಂಗ್ಲಿಷ್ ಶಿಕ್ಷಣವೇ ಶ್ರೇಷ್ಟ ಅನ್ನುವ ಕೆಲವು ಖಾಸಗಿ ಮಾರುಕಟ್ಟೆ ಶಕ್ತಿಗಳ ನಿಲುವನ್ನೇ ಸರ್ಕಾರ ಪ್ರತಿಪಾದಿಸುವುದು ಕನ್ನಡ ಮಾಧ್ಯಮ ಶಿಕ್ಷಣದ ಸಮಾಧಿಯನ್ನೇ ಕಟ್ಟುವ ದಿನಗಳನ್ನು ತಂದೀತು. ಇದೇ ರೀತಿ ಸರ್ಕಾರಿ ಶಾಲೆಗಳನ್ನು ಬೇಕಾಬಿಟ್ಟಿ ಅಂಬಂತೆ ನಡೆಸುತ್ತ ಹೋದಲ್ಲಿ ಇವತ್ತು ಮೂರು ಸಾವಿರ ಮುಚ್ಚಿದವರೂ ನಾಳೆ ಎಲ್ಲ ಶಾಲೆಗಳನ್ನು ಮುಚ್ಚಿ ಬೇಕಾದ್ರೆ ಖಾಸಗಿ ಶಾಲೆಗೆ ಹೋಗಿ, ಇಲ್ಲ ಮನೇಲಿ ಬೆಚ್ಚಗೆ ಮಲ್ಕೊಳ್ಳಿ, ನಾವೇನು ಮಾಡೋಕಾಗಲ್ಲ ಅನ್ನುವ ಉಡಾಫೆಯ ನಿಲುವು ತಳೆದರೂ ಅಚ್ಚರಿಯಿಲ್ಲ.

ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ
ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಇರುವ ಶಾಲೆಗಳನ್ನು ಮುಚ್ಚಿ ಹೋಬಳಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ ಮಾಡ್ತೀವಿ ಅನ್ನುವುದು, ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ದೂಡಿ ಧನ್ಯತಾ ಭಾವ ಅನುಭವಿಸುವುದು, ತಮ್ಮ ಸಿದ್ಧಾಂತವನ್ನು ಯಾವ ಯಾವುದೋ ರೂಪದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತೂರಿಸುವ ಪ್ರಯತ್ನ ಮಾಡುವುದು ಹೀಗೆ ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿರುವ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಒಂದೆಡೆ  ಶಾಲೆ ಮುಚ್ಚಿ, ಹಳ್ಳಿಗಾಡಿನ ಮಕ್ಕಳ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಕಲಿಕೆಯ ಹಕ್ಕನ್ನೇ ಕಸಿದುಕೊಳ್ಳುವ ತೊಂದರೆ ಇದ್ದರೆ, ಇನ್ನೊಂದೆಡೆ ಒಳ್ಳೆಯ ಶಿಕ್ಷಣ ಬೇಕಾ ಖಾಸಗಿ ಶಾಲೆಗೆ ಹೋಗಿ, ಸರ್ಕಾರಿ ಶಾಲೆಯಲ್ಲಿ ಅದನ್ನು ಕೊಡಲಾಗದು ಅನ್ನುವ ಸಂದೇಶದ ಮೂಲಕ ಜನರು ಖಾಸಗಿ ಇಂಗ್ಲಿಷ್ ಶಾಲೆಗಳತ್ತ ಹೋಗುವಂತೆ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮ ತಿಳಿಯಬೇಕೇ? ಸುಮ್ಮನೆ ಬೆಂಗಳೂರನ್ನು ಗಮನಿಸಿ. ಖಾಸಗಿ ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ  ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಮಿತಿ ಮೀರಿ ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ನಾಳೆ ಇದು ಇಡೀ ಕರ್ನಾಟಕವನ್ನು ವ್ಯಾಪಿಸಿದರೂ ಅಚ್ಚರಿಯಿಲ್ಲ. ಇಡೀ ಕರ್ನಾಟಕಕ್ಕೆ ಸಮಗ್ರವಾದ, ಅತ್ಯುತ್ತಮ ಗುಣಮಟ್ಟದ, ಎಲ್ಲ ಹಂತದ ಒಳ್ಳೆಯ ಕಲಿಕೆಯನ್ನು ಕನ್ನಡದಲ್ಲೇ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊರದೇ ಹೋದರೆ ಆಗುವ ಕೆಟ್ಟ ಬದಲಾವಣೆಗಳು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಗಳಾಗಲಿವೆ.

ಒಂದಿಷ್ಟು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು, ಮಾಣೇಕ್ ಶಾ ಮೈದಾನದಲ್ಲಿ ಒಂದು ಕಾರ್ಯಕ್ರಮ ಮಾಡಿ ಸಿಹಿ ತಿನ್ನುವುದು, ಆಮೇಲೆ ಕನ್ನಡ, ಕನ್ನಡಿಗರ ಉಳಿವಿಗೆ ತಾವೆಷ್ಟು ಬದ್ಧ ಎಂದು ಭಾಷಣ ಕೊರೆಯುವುದು, ಕಲೆ, ಸಾಹಿತ್ಯ, ಸಿನೆಮಾ ಅಂತ ಬೊಕ್ಕಸದಿಂದ ಒಂದಿಷ್ಟು ಹಣ ಕೊಡುವುದೇ ಕನ್ನಡದ ಕೆಲಸ ಅಂದುಕೊಂಡಿರುವ ಈ ಸರ್ಕಾರ ನಾಡಿನ ನಾಳೆಯನ್ನು ರೂಪಿಸಬೇಕಾದ ಕಲಿಕಾ ವ್ಯವಸ್ಥೆಗಳತ್ತ ಇದೇ ಕಡೆಗಣನೆ ಮುಂದುವರೆಸಿದರೆ ಕನ್ನಡ, ಕನ್ನಡಿಗನಿಗೆ ಉಳಿಗಾಲವಿಲ್ಲ.

ಕೊನೆ ಹನಿ: ಉದ್ಯಮಿ ಅಜೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ ಮೂಲಕ ಎಲ್ಲ ರೀತಿಯ ವ್ಯವಸ್ಥೆಯುಳ್ಳ ಎರಡೆರಡು ಶಾಲೆಯನ್ನು ಎಲ್ಲ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತೆಗೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಈ ಶಾಲೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲೇ ಕಲಿಕಾ ವ್ಯವಸ್ಥೆ ರೂಪಿಸುವುದು ಮತ್ತು ಅದನ್ನು ರಾಜ್ಯದ ಬೋರ್ಡ್ ನೊಂದಿಗೆ ನೊಂದಾಯಿಸಿಕೊಳ್ಳುವ ಅತ್ಯಂತ ಸಂತೋಷದ ನಿಲುವು ಪ್ರಕಟಿಸಿದ್ದಾರೆ. ನಮ್ಮ ನಾರಾಯಣ ಮೂರ್ತಿ, ಕ್ಯಾ.ಗೋಪಿನಾಥ್ ಅವರು ಇದನ್ನು ಗಮನಿಸುತ್ತಿದ್ದಾರೆ ಅಂದುಕೊಳ್ಳುವೆ. ಇಂತಹ ಕ್ರಮಗಳು ಹೊಳಪು ಕಳೆದುಕೊಳ್ಳುತ್ತಿರುವ ತಾಯ್ನುಡಿ ಶಿಕ್ಷಣದತ್ತ ಎಲ್ಲರೂ ದೊಡ್ಡ ಮಟ್ಟದಲ್ಲಿ ತಿರುಗಿ ನೋಡುವಂತೆ ಮಾಡಲಿ ಆಗಲಾದರೂ ಸರ್ಕಾರಕ್ಕೆ ತನ್ನ ಹೊಣೆಗಾರಿಕೆ ನೆನಪಾಗುವುದಾ ನೋಡೊಣ.

ಭಾನುವಾರ, ಅಕ್ಟೋಬರ್ 23, 2011

ನಮ್ಮ ಮೆಟ್ರೋ ನಿಜಕ್ಕೂ ನಮ್ಮದೇನಾ ?

ಯಾವುದೇ ಊರಿನ ಸಾರಿಗೆ ವ್ಯವಸ್ಥೆ ಒಂದು ರೀತಿಯಲ್ಲಿ ಆ ಊರಿನ ಮುಖವಾಣಿಯಂತೆ ಇರುತ್ತೆ. ಅಲ್ಲಿಗೆ ಬರುವ ಪ್ರಯಾಣಿಕನಿಗೆ, ಪ್ರವಾಸಿಗನಿಗೆ ಆ ಊರು, ಅಲ್ಲಿನ ಜನರ ಭಾಷೆ, ಅಲ್ಲಿನ ಜನ ಜೀವನ ಎಲ್ಲವನ್ನು ಒಂದು ರೀತಿಯಲ್ಲಿ ಪರಿಚಯಿಸುವ ಕನ್ನಡಿಯಾಗಿರುತ್ತೆ. ಬಿ.ಎಂ.ಟಿ.ಸಿಯ ನಂತರ ಈಗ ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯದ ಚಹರೆಯನ್ನೇ ಬದಲಾಯಿಸುವ ಹೊಸ ವ್ಯವಸ್ಥೆಯಾಗಿ ನಮ್ಮ ಮೆಟ್ರೋ ನಗರ ರೈಲು ಸಾರಿಗೆ ಕಳೆದ ಗುರುವಾರದಿಂದ ಶುರುವಾಗಿದೆ. ಹೆಚ್ಚು ಕಡಿಮೆ ೩೦ ವರ್ಷಗಳ ಕಾಲದಿಂದ ಇಂತಹದೊಂದು ವ್ಯವಸ್ಥೆಯ ಬಗ್ಗೆ ಹಲವಾರು ನಾಯಕರು, ಸರ್ಕಾರಗಳು, ನಟ ಶಂಕರ್ ನಾಗ್ ನಂತಹ ಕನಸುಗಾರ ಕನ್ನಡಿಗರು ಕಂಡ ಕನಸು ನನಸಾಗುವ ಮೊದಲ ಹಂತವಾಗಿ ಇದು ಬಂದಿದೆ. ತುಂಬಾ ಸಂತಸದ ವಿಚಾರವೇ ಸರಿ. ನಮ್ಮ ಮೆಟ್ರೋದಲ್ಲಿ ನಮ್ಮತನದ ಅಚ್ಚು ಒತ್ತಿರಬೇಕು ಎಂದುಕೊಂಡು ನೋಡಲು ಹೋದರೆ ಅಚ್ಚರಿ ಕಾದಿದೆ. ಅಲ್ಲಿನ ನಾಮ ಫಲಕ, ಘೋಷಣೆ, ಸುರಕ್ಷೆಯ ಸಂದೇಶ, ಹೀಗೆ ಎಲ್ಲ ವ್ಯವಸ್ಥೆಯಲ್ಲೂ ಯಾರದೋ ಒತ್ತಾಯಕ್ಕೆ ಸಿಲುಕಿಯೋ ಅಥವಾ ಯಾರನ್ನೋ ಒಲೈಸಲೋ ಎಂಬಂತೆ ಕನ್ನಡ, ಇಂಗ್ಲಿಶ್ ಜೊತೆ ಅನಾವಶ್ಯಕವಾಗಿ ಹಿಂದಿಯನ್ನೂ ಬಳಸಿರುವುದು ಕಂಡಾಗ ಹಿಂದಿ ಮೂಲಭೂತವಾದಿಗಳ ಕೈಗೆ ಹಿಂದಿ ಹೇರಿಕೆಯ ಹೊಸ ಅಸ್ತ್ರವಾಗಿ ನಮ್ಮ ಮೆಟ್ರೋ ಕಂಡಿದೆ ಅಂದರೆ ತಪ್ಪಾಗದು.


ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ? 

ನಮ್ಮ ಮೆಟ್ರೋ ರೈಲಿನ ಎಲ್ಲ ಸೂಚನೆ, ನಾಮ ಫಲಕ, ನಿಲ್ದಾಣದ ಎಲ್ಲ ಕಡೆಯಲ್ಲೂ ತ್ರಿ ಭಾಷಾ ಸೂತ್ರ ಅನ್ನುವ ಪೊಳ್ಳು ನೆಪವೊಡ್ಡಿ ಹಿಂದಿ ಬಳಸಿರುವುದು ಯಾಕೆ? ಇಡೀ ಬೆಂಗಳೂರಿನ ಜೀವನಾಡಿಯಾಗಿರುವ  ಬಿ.ಎಂ.ಟಿ.ಸಿ ಕನ್ನವೊಂದನ್ನೇ ಬಳಸಿ ಎಲ್ಲ ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪುತ್ತಿರುವಾಗ ಇಲ್ಲಿ ಮಾತ್ರ ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ?  ಕೇಂದ್ರ ಸರ್ಕಾರ ಈ ಯೋಜನೆಗೆ ಕೊಟ್ಟ ಹಣ ಕೇವಲ ೨೫%. ರಾಜ್ಯದ ಪಾಲು ೩೦% ಜೊತೆಗೆ ಮೆಟ್ರೋ ಆಸ್ತಿ-ಪಾಸ್ತಿಯನ್ನೇ ಆಧಾರವಾಗಿಟ್ಟುಕೊಂಡು ಪಡೆದ ಸಾಲ ಖಾಸಗಿ ಸಾಲ ೪೫% ಇದೆ. ಕೇಂದ್ರ ಕೊಟ್ಟಿರುವ ೨೫% ಹಣ ಕೂಡ ಅವರದ್ದಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಹೋಗೋ ಸಾವಿರಾರು ಕೋಟಿಯ ತೆರಿಗೆ ಹಣದಲ್ಲಿ ನಮಗೆ ಮರಳಿ ಕೊಟ್ಟ ಪುಡಿಗಾಸಷ್ಟೇ. ಹೀಗಿರುವಾಗ ಕೊಟ್ಟಿರುವ ೨೫% ನಮ್ಮದೇ ಹಣಕ್ಕೆ ಎಲ್ಲೆಡೆ ಹಿಂದಿ ಬಳಸಬೇಕು ಎಂದು ಕೇಂದ್ರ ಅಂದರೆ ಅದು ಹಿಂದಿ ಹೇರಿಕೆಯಲ್ಲದೆ ಇನ್ನೇನು?  ಅಷ್ಟಕ್ಕೂ ಹಿಂದಿಯಲ್ಲೇ ಆಡಳಿತ ಮಾಡಬೇಕು ಅನ್ನಲು ಕೇಂದ್ರ ಸರ್ಕಾರ ಅನ್ನುವುದು ಕೇವಲ ಹಿಂದಿ ಭಾಷಿಕರ ಸರ್ಕಾರವೇ? ಭಾರತದ ೨೨ ಭಾಷೆಯವರು ಸೇರಿ ತಾನೇ ಕೇಂದ್ರ ಆಗಿರುವುದು? ಹಾಗಿದ್ದಾಗ ನಿಮ್ಮೂರಲ್ಲೇ ನಿಮ್ಮ ನಿಮ್ಮ ಭಾಷೆ ಏನಾದ್ರೂ ಮಾಡ್ಕೊಳ್ಳಿ ( ಮನೇಲಿ ಇದ್ರೆ ಒಳ್ಳೆಯದು ಅಂತ ಓದಿಕೊಳ್ಳಿ) ಹಿಂದಿ ಮಾತ್ರ ಬಳಸಲೇಬೇಕು ಅಂತ ಕೇಂದ್ರ ಹೇಳುವುದು ಹಿಂದಿಯೇತರ ನುಡಿಗಳ ಬಗ್ಗೆ ಅದಕ್ಕೆಷ್ಟು ಕಾಳಜಿ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ ? ಇರಲಿ ಕೇಂದ್ರ ತನ್ನ ವ್ಯಾಪ್ತಿಯಲ್ಲಿರುವ ಕಛೇರಿಗಳಲ್ಲಿ ಪ್ರಜಾತಂತ್ರ ವಿರೋಧಿಯಾಗಿ  ಹಿಂದಿ ಹೇರುವುದೇ ಗೊತ್ತೇ ಇದೆ, ಒಂದಲ್ಲ ಒಂದು ದಿನ ಅದು ಅಂತ್ಯ ಕಾಣಲು ಬೇಕು. ಆದ್ರೆ ಒಂದು ಊರಿನ ಸ್ಥಳೀಯ ಸಾರಿಗೆಯಲ್ಲೂ ಹಿಂದಿ ಹೇರಬೇಕು ಎಂದು ಅದು ಹೊರಟಿತ್ತೆ ಎಂದು ನೋಡಲು ಹೊರಟರೆ ಕಾಣುವುದು ಇನ್ನೂ ಅಚ್ಚರಿಯ ಸಂಗತಿ. ಅದೇನು ಗೊತ್ತೇ? ನಮ್ಮ ಮೆಟ್ರೋದಲ್ಲಿ ಕಡ್ಡಾಯವಾಗಿ ಹಿಂದಿ ಬಳಸಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಎಂದು ಮೆಟ್ರೋ ಎಂ.ಡಿ ಶ್ರೀ ಶೈಲಂ ಅವರಿಗೆ ಈ ಹಿಂದೆ ಗೆಳೆಯರೊಬ್ಬರು ಮಿಂಚೆ ಕಳಿಸಿ ಕೇಳಿದ್ದಾಗ ಅವರು ಕೊಟ್ಟ ಸ್ಪಷ್ಟ ಉತ್ತರ "ಇಲ್ಲ" ಅನ್ನುವುದಾಗಿತ್ತು. ಆ ಮಿಂಚೆಯಲ್ಲಿ ಏನಿತ್ತು ಎಂದು ಕೆಳಗೆ ನೋಡಿ:
ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?
ಹಾಗಿದ್ದಲ್ಲಿ ಇವತ್ತು ನಮ್ಮ ಮೆಟ್ರೋ ದಲ್ಲಿ ಎಲ್ಲ ಸೂಚನೆ, ಸುರಕ್ಷೆ, ಘೋಷಣೆಗಳಲ್ಲಿ ಹಿಂದಿ ಬಳಸುತ್ತಿರುವುದು ಯಾತಕ್ಕೆ? ಕನ್ನಡವೇ ಬಾರದ ರಕ್ಷಣಾ ಸಿಬ್ಬಂದಿ ಕಾಣಿಸಿಕೊಳ್ಳುತ್ತಿರುವುದು ಯಾಕೆ? ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?  ಇವತ್ತು ಮೊದಲ ಹಂತದಲ್ಲಿ ಮಾಡಿರುವ ಈ ಹೇರಿಕೆ ನಾಳೆ ಎಲ್ಲ ಹಂತದಲ್ಲೂ ಕಾಣುತ್ತೆ.. ಮುಂದೆ? ಬಿ.ಎಂ.ಟಿ.ಸಿ ಯಲ್ಲೂ ತ್ರಿಭಾಷ ಸೂತ್ರ? ಆಮೇಲೆ ಕೆಸ್ಸಾರ್ಟಿಸಿ ? ನಂತರ ಸಾರಿಗೆ ಇಲಾಖೆ? ಎಲ್ಲಿದೆ ಇದಕ್ಕೆ ಕೊನೆ? ಮೊದಲು  ಕನ್ನಡದ ಜೊತೆಗೆ ಹಿಂದಿ ಹಾಕ್ತಿವಿ ಅಂತಾರೆ, ಆಮೇಲೆ ಹಿಂದಿ ಕಲಿತಾಗಿದೆಯಲ್ಲ, ಇನ್ಯಾಕೆ ಕನ್ನಡ, ಸುಮ್ನೆ ದುಡ್ಡು ದಂಡ ಅಂತಾರೆ. ಅಲ್ಲಿಗೆ ಕನ್ನಡದ ತಿಥಿ. ಈ ರೀತಿಯ ನೂರೆಂಟು ವಲಸಿಗರಿಗಾಗಿನ  ಅನುಕೂಲಗಳು ಕರ್ನಾಟಕಕ್ಕೆ ಇನ್ನಷ್ಟು ಪರಭಾಷಿಕರ ವಲಸೆ ಹೆಚ್ಚಿಸಿ, ಸ್ಥಳೀಯ ಡೆಮಾಗ್ರಫಿಯನ್ನು ಬದಲಾಯಿಸಿ, ಅವರೆಂದು ಕನ್ನಡ ಕಲಿತು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡಿ  ಸ್ಥಳೀಯರ ಜೀವನವನ್ನು ಇನ್ನಷ್ಟು ಅಸಹನೀಯ ಮಾಡಬಲ್ಲದೇ  ಹೊರತು ಇನ್ನಾವ ದೊಡ್ಡ ಲಾಭವು ನಮಗೆ ಸಿಗದು. ಈ ಹಿಂದಿ ಹೇರಿಕೆಯನ್ನು ನಾವೆಲ್ಲರೂ ವಿರೋಧಿಸಬೇಕು. ನಮ್ಮ ಮೆಟ್ರೋಗೆ ಹೋದಾಗಲೆಲ್ಲ ನಿಮ್ಮ ಅನಿಸಿಕೆ ಬರೆಯಿರಿ, ಮೆಟ್ರೋ ಅಧಿಕಾರಿಗಳಿಗೆ ಪತ್ರ, ಮಿಂಚೆ, ಕರೆಗಳ ಮೂಲಕ ಈ ಮೂರ್ಖತನವನ್ನು ಕೈ ಬಿಡುವಂತೆ ಒತ್ತಾಯಿಸಿ.  ಇಲ್ಲದಿದ್ದಲ್ಲಿ ಇವತ್ತು ಶುರುವಾದ ಈ ಹೊರ ಬಗೆಯ ಹೇರಿಕೆ ಮುಂದೆ ದೊಡ್ಡ ಅನಾಹುತವನ್ನೇ ತಂದೀತು!
ನೀವು ಬರೆಯಬೇಕಾದ ಮೆಟ್ರೋ ಅಧಿಕಾರಿಗಳ ವಿಳಾಸ: sivasailam@bmrc.co.insudhirchandra@bmrc.co.invasanthrao@bmrc.co.inbmrcl@dataone.in

ಮಂಗಳವಾರ, ಅಕ್ಟೋಬರ್ 11, 2011

ಬಾರದ ಕರೆಂಟು - ಎತ್ತಿರೋ ಪ್ರಶ್ನೆ ನೂರೆಂಟು !


ಮಳೆಗಾಲ ಇನ್ನೇನು ಮುಗೀತು ಅನ್ನೋ ಹೊತ್ತಿಗಾಗಲೇ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ದಿನವೊಂದಕ್ಕೆ 160 ಮಿಲಿಯನ್ ಯುನಿಟ್ ವಿದ್ಯುತ್ತಿಗೆ ಬೇಡಿಕೆ ಇದ್ದರೆ ಕೇವಲ 136 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಿದ್ದು, ಸುಮಾರು 24 ಮಿಲಿಯನ್ ಯುನಿಟ್ ವಿದ್ಯುತ್ತಿನ ಕೊರತೆ ಕರ್ನಾಟಕಕ್ಕೆ ಎದುರಾಗಿದೆ.  ಕಲ್ಲಿದ್ದಲ್ಲಿನ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಅನ್ನುವುದು ಮಾಧ್ಯಮದಲ್ಲಿ ಕಂಡು ಬರುತ್ತಿರುವ ವರದಿಯಾಗಿದೆ.  ಅದೇನೇ ಇದ್ದರೂ ಜನರ ಜೀವನಾಡಿಯಾದ ವಿದ್ಯುತ್ ಪೂರೈಕೆಯ ಈ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿರುವ ರೀತಿ ನೋಡಿದರೆ  ಸಮಸ್ಯೆ ಬಗೆಹರಿಸುವುದಕ್ಕಿಂತ  ಪರಸ್ಪರ ದೋಷಾರೋಪ, ಕೆಸೆರೆರೆಚಾಟಕ್ಕೆ ಹೆಚ್ಚು ಗಮನ ಕೊಟ್ಟಂತಿದೆ ! 
ಯಾವ ಯಾವ ಮೂಲದಿಂದ ಎಷ್ಟೆಷ್ಟು ವಿದ್ಯುತ್ ?
ಕರ್ನಾಟಕದ ವಿದ್ಯುತ್ ಬೇಡಿಕೆ 160 ಮಿಲಿಯನ್ ಯುನಿಟ್ ಗಳಾಗಿದ್ದರೆ ಲಭ್ಯವಿರುವ ವಿದ್ಯುತ್ ಸುಮಾರು 136 ಮಿಲಿಯನ್ ಯುನಿಟ್ ಅನ್ನುತ್ತೆ ಕನ್ನಡಪ್ರಭ ವರದಿ. ಈ 136 ಮಿಲಿಯನ್ ಯುನಿಟ್ ಅಲ್ಲಿ 50 ಮಿಲಿಯನ್ ಯುನಿಟ್ ಜಲ ವಿದ್ಯುತ್ ಮೂಲದಿಂದ ಬಂದರೆ, ಸುಮಾರು 26 ಮಿಲಿಯನ್ ಯುನಿಟ್ ಉಷ್ಣ ವಿದ್ಯುತ್ ಮೂಲದಿಂದಲೂ, ಬಾಕಿ 60 ಮಿಲಿಯನ್ ಯುನಿಟ್ ಹೊರ ರಾಜ್ಯ ಮತ್ತು ಕೇಂದ್ರ ಗ್ರಿಡ್ ನಿಂದ ರಾಜ್ಯ ಖರೀದಿಸುತ್ತೆ.  ಆಂಧ್ರಪ್ರದೇಶದಲ್ಲಿ  ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಿಂದಾಗಿ ಅಲ್ಲಿನ ತೆಲಂಗಾಣ ಪ್ರಾಂತ್ಯದಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆಯಾಗದ ಹಿನ್ನೆಲೆಯಲ್ಲಿ ನಮ್ಮಲ್ಲೇ ಉತ್ಪಾದನೆಯಾಗುವ ಮತ್ತು ಕೇಂದ್ರ ಗ್ರಿಡ್ ನಿಂದ ದೊರಕುವ ಉಷ್ಣ ವಿದ್ಯುತ್ತಿನಲ್ಲಾಗಿರುವ ಕೊರತೆಯಿಂದಾಗಿ ಇವತ್ತು ಕತ್ತಲಲ್ಲಿ ಕೈ ತೊಳೆಯುವಂತಾಗಿದೆ ಅಂಬುದು ಮಾದ್ಯಮಗಳ ವರದಿ. 
ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಹೋಗದೇ ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಮ್ಮ ಮಂತ್ರಿಗಳ ಹೇಳಿಕೆ ನೋಡಿದರೆ ಸಮಸ್ಯೆಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ಯಾರ ತಪ್ಪಿನಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಆರೋಪಿಸುವುದರಲ್ಲೇ ಇಬ್ಬರಿಗೂ ಹೆಚ್ಚು ಸಮಾಧಾನವಾದಂತಿದೆ. ಈ ಸಮಯದಲ್ಲಿ ಇಬ್ಬರಿಗೂ ನಾನು ಕೇಳುವ ಕೆಲವು ಪ್ರಶ್ನೆಗಳೆಂದರೆ 
ರಾಜ್ಯದ ಅಧಿನಾಯಕರಿಗೆ:
  • ಕೇಂದ್ರವನ್ನು ದೂರುತ್ತ ಕೂರುವ ಬದಲು ತಮ್ಮ ಆಳ್ವಿಕೆಯ ಕಳೆದ ಮೂರು ವರ್ಷದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವತ್ತ ತಾವೇನು ಮಾಡಿದ್ದೀರಿ? ತಮ್ಮ ಆಳ್ವಿಕೆಯಲ್ಲಿ ವಿದ್ಯುತ್ ಉತ್ಪಾದನೆ ಎಷ್ಟರ ಮಟ್ಟಿಗೆ ಹೆಚ್ಚಿದೆ? 
  • ಎಸ್ಕಾಮ್ ಕಂಪನಿಗೆ ರಾಜ್ಯ ಸರ್ಕಾರ ಕೊಡಬೇಕಿರುವ ಬಾಕಿ 12,000 ಕೋಟಿ ರೂಪಾಯಿಗಳು ಅನ್ನುತ್ತೆ ಮಾಧ್ಯಮ ವರದಿ. ವಿದ್ಯುತ್ ವ್ಯವಸ್ಥೆಯೇ ಕುಸಿದು ಬೀಳುವ ಹಂತದಲ್ಲಿರುವಾಗಲೂ ರೈತರಿಗೆ ಉಚಿತ ವಿದ್ಯುತ್ ಅನ್ನುವ ಪಾಪುಲಿಸ್ಟ್ ಕ್ರಮಗಳಿಗೆ ಜೋತು ಬಿದ್ದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದು ಯಾಕೆ? ಹೋಗಲಿ,  ಆಗಾಗ ವಿದ್ಯುತ್ ದರ ಏರಿಸುವುದನ್ನು ಬಿಟ್ಟು ಈ ಬಾಕಿ ತೀರಿಸಲು ಇನ್ಯಾವ ಕ್ರಮ ಕೈಗೊಂಡಿದ್ದೀರಿ?
  • ತೆಲಂಗಾಣ ಹೋರಾಟದ ಸಕಲ ಜನುಲಾ ಸಮ್ಮೆ ಹೋರಾಟ ಶುರುವಾಗಿ 29 ದಿನಗಳಾದವು. ಈ ಸಮಸ್ಯೆ ಇಂತಹದೊಂದು ವಿಪರೀತಕ್ಕೆ ಹೋಗಬಹುದು ಅನ್ನುವ ಕೊಂಚ ಮುಂದಾಲೋಚನೆಯೂ ತಮಗೆ ಇಲ್ಲದಾಯಿತೇ? ಕಳೆದ 29 ದಿನಗಳಲ್ಲಿ ಸರ್ವ ಪಕ್ಷದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ಕಲ್ಲಿದ್ದಲ್ಲಿನ ವ್ಯವಸ್ಥೆ  ಕಲ್ಪಿಸಿಕೊಳ್ಳಲು ಯಾಕೆ ಮುಂದಾಗಲಿಲ್ಲ? 
  • ಹೋಗಲಿ, ಸರ್ವ ಪಕ್ಷ ಸಭೆಗೆ ಪ್ರತಿಪಕ್ಷಗಳು ತಯಾರಿಲ್ಲ ಅಂದುಕೊಳ್ಳೊಣ, ತಮ್ಮ ಪಕ್ಷದ 19 ಜನ ಸಂಸತ್ ಸದಸ್ಯರಿದ್ದಾಗಲೂ ಅವರನ್ನೆಲ್ಲ ಸೇರಿಸಿ ದೆಹಲಿಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಯಾಕೆ ಮುಂದಾಗಿಲ್ಲ? ಕೇಂದ್ರವನ್ನು ದೂರುವುದು ಹೆಚ್ಚು ಸುಲಭ ಅನ್ನುವ ಕಾರಣಕ್ಕೊ?
ಕೇಂದ್ರದಲ್ಲಿ ಮಂತ್ರಿಗಳಾಗಿರುವ  ನಮ್ಮ ನಾಡಿನ  ದೊರೆಸಾನಿಗಳಿಗೆ:
  • ಕೇಂದ್ರ ಮತ್ತು ಆಂಧ್ರ ಪ್ರದೇಶ ಸರ್ಕಾರದ ಜಂಟಿ ಒಡೆತನದಲ್ಲಿರುವ ಸಿಂಗರೇಣಿ ಗಣಿಯಿಂದ ಕಲ್ಲಿದ್ದಲು ತರಿಸಿಕೊಳ್ಳಲು ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆ ಗಣಿಯ ಕಲ್ಲಿದ್ದಲ್ಲಿನ ಮೇಲೆ ನಮಗೆ ಇಂತಹದೊಂದು ಅವಲಂಬನೆ ಇರುವಾಗ ಒಪ್ಪಂದ ಮಾಡಿಕೊಂಡ ರಾಜ್ಯಗಳಿಗೆ ಒಪ್ಪಂದದನ್ವಯ ಸಮರ್ಪಕ ಕಲ್ಲಿದ್ದಲು ಪೂರೈಸಲು ಯಾವ ಕ್ರಮವನ್ನು ಯಾಕೆ ಕೈಗೊಂಡಿಲ್ಲ? ಒಂದು ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡುವಂತಹ ಇಂತಹ ಗಂಭೀರ ಸಮಸ್ಯೆ ಬಂದಾಗಲೂ ಮಧ್ಯ ಪ್ರವೇಶಿಸಿ ಪರಿಹಾರ ನೀಡುವಂತೆ ತಾವುಗಳು ಯಾಕೆ ಮನವಿ ಮಾಡಿಲ್ಲ? 
  • ಪಡೆದ  ಕಲ್ಲಿದ್ದಲಿಗೆ ಹಣ ಪಾವತಿಸುವಾಗ ಕರ್ನಾಟಕವೂ ಹೀಗೆ ಬೇಕಾಬಿಟ್ಟಿ ವರ್ತಿಸಿದರೆ ನಿಮ್ಮ ಕೇಂದ್ರ ಸರ್ಕಾರ ಕೇಳುವುದೇ?
  • ಆಂಧ್ರದ ಮುಖ್ಯಮಂತ್ರಿ ಮನವಿ ಮಾಡಿದ ತಕ್ಷಣ ಅಲ್ಲಿಗೆ ಪೂರ್ವ ಗ್ರಿಡ್ ನಿಂದ 800 ಮೆಗಾ ವ್ಯಾಟ್ ವಿದ್ಯುತ್ ಪೂರೈಸಲು ಮುಂದಾಗುವ ಕೇಂದ್ರ ಕರ್ನಾಟಕದ ಮನವಿಗೆ ಸ್ಪಂದಿಸದಿರುವುದು ಏನು ತೋರಿಸುತ್ತೆ? ಒಕ್ಕೂಟದಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾದವರು ತಮ್ಮ  ಪಕ್ಷದ ಆಡಳಿತ ಇರುವ ರಾಜ್ಯದ ನೋವಿಗೆ ಮಾತ್ರ ಸ್ಪಂದಿಸುವುದು ಒಕ್ಕೂಟಕ್ಕೆ ಬಗೆಯುತ್ತಿರುವ ಅಪಚಾರವಲ್ಲವೇ? ಇದರ ಬಗ್ಗೆ ತಮ್ಮ ಸರ್ಕಾರದ ಗಮನ ತಾವುಗಳು ಯಾಕೆ ಸೆಳೆದಿಲ್ಲ?
  • ಓರಿಸ್ಸಾ, ಮಹಾರಾಷ್ಟ್ರಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳೊಣವೆಂದರೆ ಸರಿಯಾದ ರೈಲ್ವೇ ಮಾರ್ಗಗಳು ಇಲ್ಲದಿರುವುದೇ ಸಮಸ್ಯೆಯಾಗಿದೆ ಅನ್ನುವುದು ಶೋಭಾ ಕರಂದ್ಲಾಜೆಯವರ ಹೇಳಿಕೆ. ಹಾಗಿದ್ದಲ್ಲಿ, ರಾಜ್ಯದ ರೈಲ್ವೇ ಯೋಜನೆಗಳ ತ್ವರಿತ ಅನುಷ್ಟಾನಕ್ಕಾಗಿ ನಿಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇದಕ್ಕಿಂತ ಒಳ್ಳೆಯ ಸಂದರ್ಭವುಂಟೇ?  
ಪರಸ್ಪರ ಕೆಸರೆರಚಾಟ, ರಾಜಕೀಯ ಮೇಲಾಟ ಬಿಟ್ಟು ಇನ್ನಾದರೂ ಒಂದು ಧ್ವನಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ರೆ  ಕತ್ತಲಲ್ಲಿ ಕೈ ತೊಳೆಯುತ್ತಿರುವ ನಮ್ಮ ಜನರು, ಉದ್ದಿಮೆಗಳು, ರೈತರು, ವಿಧ್ಯಾರ್ಥಿಗಳು ಎಲ್ಲರೂ ನಿಟ್ಟುಸಿರು ಬಿಟ್ಟಾರು.  ಮಾಡ್ತಿರಾ ಅಧಿನಾಯಕರೇ, ದೊರೆಸಾನಿಗಳೇ?