ಬುಧವಾರ, ಮೇ 9, 2012

ಸತ್ಯ ಮೇವ ಜಯತೇ ಮತ್ತು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ಅನ್ನುವ ಪರಿಹಾರ !

ಸತ್ಯ ಮೇವ ಜಯತೇ ಅನ್ನುವ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡದಂತೆ ಸುವರ್ಣ ವಾಹಿನಿಯನ್ನು ಕೆಲವು ಖಾಸಗಿ ಸಂಸ್ಥೆಗಳು ತಡೆದರು. ಅದರ ಬೆನ್ನಲ್ಲೇ ಜಗತ್ತಿನ ಜ್ಞಾನ, ಮನರಂಜನೆಯೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಕನ್ನಡ ಪರವೂ, ಗ್ರಾಹಕರಾಗಿ ಅದು ಕನ್ನಡಿಗರ ಹಕ್ಕು ಎಂಬ ಕೂಗು ಬಲು ದೊಡ್ಡ ದನಿಯಲ್ಲೇ ಕಳೆದೆರಡು ವಾರದಲ್ಲಿ ಸಾಮಾಜಿಕ
ಸಂಪರ್ಕ ತಾಣಗಳು, ಪತ್ರಿಕೆಗಳು, ಸುದ್ದಿವಾಹಿನಿಗಳು ಸೇರಿದಂತೆ ಹಲವೆಡೆ ಪ್ರತಿಧ್ವನಿಸಿವೆ. ಇದರ ಫಲವೆಂಬಂತೆ ಯಾವುದೇ ಪಾಳೇಗಾರರ ಅಂಕೆಗೆ ಇನ್ನೂ ಸಿಲುಕದ ಯೂ ಟ್ಯೂಬ್ ನಂತಹ ತಾಣದಲ್ಲಿ ಈ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ನೋಡಲಾಗುವಂತಹ ಬದಲಾವಣೆಯನ್ನು ಎಚ್ಚೆತ್ತ ಕನ್ನಡದ ಗ್ರಾಹಕರು ತಂದು ಕೊಂಡಿದ್ದಾರೆ ಅನ್ನಬಹುದು.

ಈ ಗೆಲುವು ಕೊಟ್ಟಿರುವ ಸಂದೇಶವೊಂದಿದೆ. ಹೆಚ್ಚೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಯತ್ತ ನಮ್ಮ ಸಮಾಜ ಮುಂದಡಿಯಿಡುತ್ತಿರುವಾಗ ಮತ್ತು ಆ ಬದಲಾವಣೆ ಕನ್ನಡ ನುಡಿಯ ಮುಂದೆ ಹಲವಾರು ಸವಾಲುಗಳನ್ನು ತರುತ್ತಿರುವಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಾಗಿದೆ ಅನ್ನುವುದು.
ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ
1991ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಇತರೆಡೆಯಂತೆ ಕನ್ನಡ ಸಮಾಜದಲ್ಲೂ ಹಲವಾರು ಬದಲಾವಣೆಗಳಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ಹಂತಗಳನ್ನು ಸರ್ಕಾರವೇ ನಿಯಂತ್ರಿಸುತ್ತಿದ್ದ ದಿನಗಳಿಂದ ಸಾಕಷ್ಟು ಹೊರ ಬಂದು ಮಾರುಕಟ್ಟೆ ಆಧಾರಿತ ವ್ಯವಸ್ಥೆಯೆಡೆಗೆ ಹೆಜ್ಜೆ ಹಾಕಿದ್ದೇವೆ. ಅದರ ಒಳಿತು-ಕೆಡಕುಗಳ ಬಗ್ಗೆ ಇಲ್ಲಿ ಚರ್ಚಿಸುವುದು ಬೇಡ. ಇಲ್ಲಿ ಗಮನಿಸಬೇಕಿರುವುದು ಏನೆಂದರೆ ಈ ಬದಲಾವಣೆ ನಿಲ್ಲದು. ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಹೆಚ್ಚಿನ ಮಝಲುಗಳು ಮಾರುಕಟ್ಟೆ ಆಧಾರಿತವಾಗುತ್ತವೆ. ಇದರ ಪರಿಣಾಮವಾಗಿ ಹೆಚ್ಚಿನ ವಲಸೆ,ಹಲ ಸಂಸ್ಕೃತಿಗಳ ದಾಳಿಯಂತಹ
ಕೆಲ ಸಮಸ್ಯೆಗಳು ಮುಂದೆಯೂ ಇರುತ್ತವೆ, ಅಷ್ಟೇ ಏಕೆ, ಕೆಲ ಮಟ್ಟಿಗೆ ಅವು ಹೆಚ್ಚಲೂ ಬಹುದು. ಈಗ, ಕನ್ನಡದ ಮುಂದಿರುವ ಸವಾಲು ಇದನ್ನು ಎದುರಿಸುವುದು ಹೇಗೆ? ಎಂಬುದು. ನನ್ನ ಪ್ರಕಾರ ಯಾವ ಸರ್ಕಾರ, ಸಾಮಾಜಿಕ ಸಂಘಟನೆಗಳು ಇದಕ್ಕೆ ಪೂರ್ತಿ ಪರಿಹಾರ ಕೊಡಲಾರರು. ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ. ಗ್ರಾಹಕನೊಬ್ಬನೇ ಅದನ್ನು ಬಗ್ಗಿಸಬಲ್ಲ. ಗ್ರಾಹಕನೊಬ್ಬನೇ ಅದನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲ. ಕನ್ನಡ ಸಮಾಜದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು, ಈ ವ್ಯವಸ್ಥೆಯ ಎಲ್ಲ ಹಂತದಲ್ಲೂ ಕನ್ನಡ ನೆಲೆ ಕಾಣಬೇಕು ಅನ್ನುವುದಾದರೆ ಈ ಗ್ರಾಹಕನಿಗೂ ಕನ್ನಡಕ್ಕೂ ಒಂದು ಕಡಿಯದ ನೆಂಟು ಬೆಸೆಯಬೇಕು. ಕನ್ನಡದ ಸುತ್ತ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ರೂಪಿಸುವುದೊಂದೇ ಮುಕ್ತ ಮಾರುಕಟ್ಟೆ ಆಧಾರಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಅಡುಗೆಮನೆಯ ಭಾಷೆಯಾಗದಂತೆ ತಡೆಯುವ ಪರಿಹಾರ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.
ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೇ ಪರಿಹಾರ
ನೀವು ಕೇಳಬಹುದು ಅದು ಹೇಗೆ ಎಂದು. ಕಳೆದ ಕೆಲ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಹಲವು ಬದಲಾವಣೆಗಳನ್ನು ನೀವು ಸುಮ್ಮನೆ ಗಮನಿಸಿ. 2005ರಲ್ಲಿ ಎಫ್.ಎಮ್ ವಾಹಿನಿಗಳು ಶುರುವಾಗಿ ಕನ್ನಡವನ್ನೇ ಕೈ ಬಿಟ್ಟು ನಡೆಯುತ್ತಿದ್ದಾಗ, ಇಂದಿನ ಯುವಕರಿಗೆ ಹಿಂದಿ,ಇಂಗ್ಲಿಷೇ ಬೇಕು ಅನ್ನುವ ತಪ್ಪು ನಿಲುವಲ್ಲಿದ್ದಾಗ, ಅವರಿಗೆ ಕನ್ನಡಕ್ಕಿರುವ ಮಾರುಕಟ್ಟೆ ವ್ಯಾಪ್ತಿಯನ್ನು ದೊಡ್ಡ ಸಂಖ್ಯೆಯಲ್ಲಿ ಮನವರಿಕೆ ಮಾಡಿ ಕೊಟ್ಟದ್ದು ಕನ್ನಡದ ಗ್ರಾಹಕರೇ. ಇಂದು ಹಲವಾರು ಖಾಸಗಿ ಬ್ಯಾಂಕುಗಳ ಎಟಿಎಮ್, ಐವಿಆರ್, ಕಚೇರಿಗಳಲ್ಲಿ ಹಂತ ಹಂತವಾಗಿ ಕನ್ನಡ ನೆಲೆ ಕಂಡಿದ್ದರೆ ಅದರ ಹಿಂದೆ ಕೆಲಸ ಮಾಡಿದ್ದು ಕನ್ನಡದ ಗ್ರಾಹಕರೇ. ಮಲ್ಟಿಪ್ಲೆಕ್ಸುಗಳಲ್ಲಿ, ಮಾಲುಗಳಲ್ಲಿ, ವಿಮಾನದಲ್ಲಿ, ಮೆಟ್ರೊದಲ್ಲಿ ಹೀಗೆ ಎಲ್ಲೆಲ್ಲಿ ಕನ್ನಡ ಮೂಲೆಗುಂಪಾಗಿತ್ತೋ ಅಲ್ಲೆಲ್ಲ ಅದನ್ನು ತಕ್ಕ ಮಟ್ಟಿಗೆ ಸರಿ ಮಾಡಿದ್ದು ಮತ್ತದೇ ಕನ್ನಡದ ಗ್ರಾಹಕರು. ಸರ್ಕಾರದ ನೂರು ನಿಯಮಗಳಿದ್ದಾಗಲೂ ಆಗದ  ಬದಲಾವಣೆಯನ್ನು ತಕ್ಕ ಮಟ್ಟಿಗೆ ಮಾಡಿಕೊಳ್ಳಲಾಗಿದ್ದು ಕನ್ನಡ ಗ್ರಾಹಕನ ಹಕ್ಕೊತ್ತಾಯವೊಂದರಿಂದಲೇ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ಹಾಗಿದ್ರೆ ಎಲ್ಲ ಸರಿ ಹೋಗಿದೆಯಾ ಎಂದು ಕೇಳಿದರೆ ನನ್ನ ಉತ್ತರ "ಇಲ್ಲ, ಎಲ್ಲವೂ ಸರಿ ಹೋಗಿಲ್ಲ. ಆದರೆ ಸರಿ ಹೋಗಿರುವ ಬಹುತೇಕ ವಿಷಯಗಳು ಕನ್ನಡದಲ್ಲಿ ಸೇವೆಗೆ ಆಗ್ರಹಿಸಿದ ಗ್ರಾಹಕನ ಒತ್ತಾಯದಿಂದಲೇ ಆಗಿದ್ದು" ಅನ್ನುವುದಾಗಿದೆ. ಕನ್ನಡ ಕೇಂದ್ರಿತವಾದ ಒಂದು ಗಟ್ಟಿ ಗ್ರಾಹಕ ಚಳುವಳಿಯನ್ನು ರೂಪಿಸುವುದೇ ಮುಂದಿನ ದಿನದಲ್ಲಿ ಕನ್ನಡವನ್ನು ಮಾರುಕಟ್ಟೆಯ ನುಡಿಯಾಗಿ ಉಳಿಸಿಕೊಳ್ಳುವ ಏಕೈಕ ಹಾದಿ. ಈ ಆಯಾಮದಲ್ಲಿ ನೋಡಿದಾಗ ಮಾತ್ರವೇ ಡಬ್ಬಿಂಗ್ ನಿಷೇಧ ಗ್ರಾಹಕನ ಹಕ್ಕಿನ ಉಲ್ಲಂಘನೆ ಅನ್ನುವ ಹಲವು ಕನ್ನಡ ಗ್ರಾಹಕರ ವಾದದ ತಿರುಳು ಅರ್ಥವಾದೀತು.

ಕೊನೆಹನಿ: ಕೊಟ್ಟಿದ್ದನ್ನು ತಗೊಂಡು ಬಿದ್ದಿರು ಅನ್ನುವ ಚಿತ್ರೋದ್ಯಮದ ಹಲವರ ಧೋರಣೆಯ ವಿರುದ್ದ ಸಿಡಿದೆದ್ದು ಸಂಘಟಿತರಾದ ಕನ್ನಡಿಗರು ತಮ್ಮ ಗ್ರಾಹಕ ಅನ್ನುವ ಗುರುತನ್ನು ಒತ್ತಿ ಹೇಳುತ್ತಿರುವುದು ಮತ್ತು ಜಗತ್ತಿನ ಒಳ್ಳೆಯದೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಗ್ರಾಹಕನಾಗಿ ತನ್ನ ಹಕ್ಕು ಎಂದು ಮಾತನಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದುಡ್ಡು ಕೊಟ್ಟು ಮನರಂಜನೆ ಬಯಸುವವನು ಗ್ರಾಹಕನಲ್ಲ ಅವನು ಪ್ರೇಕ್ಷಕ ಅನ್ನುವ ವಿತಂಡವಾದ ಮಾಡುವ ಚಿತ್ರರಂಗದ ಕೆಲ "ಬುದ್ದಿಜೀವಿಗಳು" ಇದನ್ನು ಅರ್ಥ ಮಾಡಿಕೊಂಡು ಗ್ರಾಹಕನ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ನಿಲ್ಲಿಸದೇ ಹೋದರೆ
ಕನ್ನಡ ಗ್ರಾಹಕನ ಉರಿಗಣ್ಣಿಗೆ ಬಲಿಯಾಗಿ ಮನೆ ಸೇರುವುದು ಖಂಡಿತ.

4 ಕಾಮೆಂಟ್‌ಗಳು:

  1. ನಟರಾಜು ತಿಪಟೂರು. ಕುವೈತ್ ನಿಂದ.

    ಯಾವುದನ್ನಾದರೂ ಇಂದು ತುಂಬಾ ವಿಶಾಲವಾಗಿ ನೋಡಬೇಕು. ಇಪ್ಪತ್ತು ವರ್ಷಗಳ ಹಿಂದೆ ಇದ್ದ ಜೀವನ ಶೈಲಿಗೂ ಇಂದಿನ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ.ಮುಂಚೆ ಜನರಿಗೆ ಕ್ರೀಡೆ,ಹಬ್ಬ ಹರಿದಿನಗಳು,ಬಯಲು ನಾಟಕಗಳು,ಮೇಳಗಳು ಹೀಗೆ ಕೆಲವೊಂದು ಸೀಮಿತ ಪರಿಧಿಯಲ್ಲಿ ಮನರಂಜನೆಗಳು ಸಿಗುತ್ತಿದ್ದವು. ಆದರೆ ಈಗ ಹಾಗಿಲ್ಲ ದೂರದರ್ಶನ ಬಂದ ನಂತರವಂತೂ ಮನರಂಜನೆಯ ಪರಿಧಿಗೆ ಮಿತಿಯೇ ಇಲ್ಲ. ಇಲ್ಲಿ ಮನರಂಜನೆಯೊಂದೇ ಮುಖ್ಯವಾಗುವುದೂ ಇಲ್ಲ ಅದರ ಜೊತೆಗೆ ಅರಿವಿನ ಹಂದರವೂ ಇದೆ. ತನ್ನ ಹುಟ್ಟು ಭಾಷೆಯಲ್ಲಿಯೇ ಎಲ್ಲವೂ ಸಿಗುವುದಾದರೆ ಎಷ್ಟು ಸಾಧನೆ ಮಾಡಬಹುದೆಂಬುದಕ್ಕೆ ಜಪಾನ್ ಒಂದು ಉತ್ತಮ ಉದಾಹರಣೆ. ಡಬ್ಬಿಂಗ್ ನ್ನು ವ್ಯಾವಹಾರಿಕ ದೃಷ್ಟಿಯಿಂದ, ವೈಯುಕ್ತಿಕ ಲಾಭ ನಷ್ಟಗಳಿಂದ ನೋಡುವುದನ್ನು ಬಿಟ್ಟು ಸಾಮಾಜಿಕ, ಸಾಮೂಹಿಕ ಹಿತದೃಷ್ಟಿಯಿಂದ ಒಮ್ಮೆ ನೋಡಲಿ.ಇಂದಿಗೂ ನಾನು ರಾಮಾಯಣ ಮತ್ತು ಮಹಾಭಾರತದಂತಹ ಕಥೆಗಳನ್ನು ಕನ್ನಡದಲ್ಲಿ ನೋಡಬೇಕೆನ್ನುವ ಹಂಬಲದಿಂದ ಕಾಯುತ್ತಿದ್ದೇನೆ. ಕನ್ನಡದಲ್ಲಿ ಡಬ್ಬಿಂಗ್ ವಿಷಯಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !