ಕರ್ನಾಟಕವನ್ನು ಒಡೆಯುವ ಉಮೇಶ್ ಕತ್ತಿಯವರ ಮಾತಿನ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಸರಿಯಾದ ಒಕ್ಕೂಟ ವ್ಯವಸ್ಥೆ ರೂಪಿಸದೇ ಚಿಕ್ಕ ರಾಜ್ಯಗಳನ್ನು ಮಾಡುವುದು ಅವುಗಳ ದನಿ ಅಡಗಿಸುವ ಕ್ರಮ ಅನ್ನುವ ನನ್ನ ನಿಲುವನ್ನು ಕನ್ನಡ ಪತ್ರಿಕೆಗಳಿಗೆ ಪತ್ರದ ರೂಪದಲ್ಲಿ ಕಳಿಸಿದ್ದೆ. ಬ್ಲಾಗಿನ ಗೆಳೆಯರ ಓದಿಗಾಗಿ ಬ್ಲಾಗಿನಲ್ಲಿ ಹಾಕುತ್ತಿರುವೆ.
-ವಸಂತ
ಮಾನ್ಯ ಸಂಪಾದಕರೇ,
-ವಸಂತ
ಮಾನ್ಯ ಸಂಪಾದಕರೇ,
ವಿಷಯ: ಕರ್ನಾಟಕವನ್ನು ಒಡೆಯಬೇಕು ಅನ್ನುವುದು ಸರಿಯೋ ತಪ್ಪೋ ಅನ್ನುವ ಬಗ್ಗೆ ಓದುಗರ ಓಲೆಯಲ್ಲಿ ಪ್ರಕಟಿಸಲು
ಕರ್ನಾಟಕವನ್ನು ಒಡೆದು ಉತ್ತರ ಕರ್ನಾಟಕ ಬೇರೆ ರಾಜ್ಯ ಮಾಡಬೇಕು ಅನ್ನುವ ಮಂತ್ರಿ ಉಮೇಶ್ ಕತ್ತಿಯವರ ಹೇಳಿಕೆ ರಾಜ್ಯವ್ಯಾಪಿ ಖಂಡನೆಗೆ ಒಳಗಾಗಿದೆ. ಉತ್ತರ ಕರ್ನಾಟಕ ಬೇರೆ ರಾಜ್ಯ ಆಗುವುದರಿಂದಲೇ ಅದರ ಏಳಿಗೆ ಸಾಧ್ಯ ಅನ್ನುವುದು ನಿಜವೇ ಆಗಿದ್ದಲ್ಲಿ ಅದಕ್ಕೆ ನಮ್ಮ ಅಡ್ಡಿಯಿರಬಾರದು. ಆದರೆ ಪ್ರತ್ಯೇಕ ರಾಜ್ಯ ಬೇಕು ಅನ್ನುವವರು ಈ ಕೆಲ ಪ್ರಶ್ನೆಗಳನ್ನು ಉತ್ತರಿಸುವರೇ?
- ಇವತ್ತು ಇಡೀ ಕರ್ನಾಟಕದ ಸಂಪನ್ಮೂಲದ ಅಗತ್ಯಗಳ ಬಹುಪಾಲನ್ನು ಪೂರೈಸುತ್ತಿರುವುದು ಬೆಂಗಳೂರು. ಬೆಂಗಳೂರು ಇಲ್ಲದ ಉತ್ತರ ಕರ್ನಾಟಕ ಎಲ್ಲಿಂದ ಸಂಪನ್ಮೂಲ ಹೊಂದಿಸುತ್ತೆ?
- ಉತ್ತರ ಕರ್ನಾಟಕದ ಅಕ್ಕ ಪಕ್ಕ ಯಾವ ರಾಜ್ಯಗಳಿವೆ? ಒಂದೆಡೆ ೪೮ ಎಂ.ಪಿಗಳ ಮಹಾರಾಷ್ಟ್ರ, ಇನ್ನೊಂದೆಡೆ ೪೨ ಎಂ.ಪಿಗಳ ಆಂಧ್ರಪ್ರದೇಶ. ಆರ್ಥಿಕವಾಗಿಯೂ, ರಾಜಕೀಯವಾಗಿಯೂ ಬಲಾಡ್ಯವಾಗಿರುವ ಇಂತಹ ರಾಜ್ಯಗಳ ಜೊತೆ ನದಿ ನೀರು, ಗಡಿ ತಕರಾರುಗಳನ್ನು ಈ ರಾಜ್ಯ ಹೇಗೆ ನಿಬಾಯಿಸುತ್ತೆ? ಆಂಧ್ರ ಡ್ಯಾಮ್ ಕಟ್ಟಿ ಹಿನ್ನೀರಿನಲ್ಲಿ ಮುಳುಗಿಸಬಹುದು, ಮಹಾರಾಷ್ಟ್ರ ಡ್ಯಾಮ್ ಬಾಗಿಲು ತೆಗೆದು ನೀರಿನ ಪ್ರವಾಹ ಹರಿಸಬಹುದು. ಅದನ್ನು ತಡೆಯಬಲ್ಲರೇ? ೨೮ ಎಂ.ಪಿಗಳ ಕರ್ನಾಟಕ ರಾಜ್ಯಕ್ಕೆ ನೆಲ,ಜಲ ವಿಷಯಗಳಲ್ಲಿ ಅನ್ಯಾಯವಾಗುವುದನ್ನು ತಡೆಯಲು ಸಾಧ್ಯವಾಗದೇ ಇರುವಾಗ ೧೦ ಎಂ.ಪಿಗಳ ಈ ರಾಜ್ಯದ ಕೈಲಿ ಏನಾಗುತ್ತೆ?
- ನೈಸರ್ಗಿಕ ಸಂಪನ್ಮೂಲ ಅತಿ ಕಡಿಮೆ ಇರುವ ಈ ಬಯಲುಸೀಮೆಯ ಈ ಭಾಗ ಯಾವ ರೀತಿಯಲ್ಲಿ ತನ್ನ ಮಾನವ ಸಂಪನ್ಮೂಲದ ಏಳಿಗೆ ಮಾಡುತ್ತೆ? ಕೇಂದ್ರ ಕೊಡುವ ಅನುದಾನವನ್ನೇ ನಂಬಿಕೊಂಡು ಹೊಸ ರಾಜ್ಯ ಕಟ್ಟಿಕೊಂಡರೆ ಇವರು ಬಯಸುವ ಏಳಿಗೆ ಅನ್ನುವುದು ಕನ್ನಡಿಯೊಳಗಿನ ಗಂಟೇ ಸರಿ.
- ಇವತ್ತು ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೀವನ ಕಟ್ಟಿಕೊಂಡಿರುವ ಉತ್ತರ ಕರ್ನಾಟಕ ಭಾಗದ ಕನ್ನಡಿಗರಿದ್ದಾರೆ. ನಾಳೆ ಬೇರೆ ರಾಜ್ಯ ಮಾಡಿಕೊಂಡರೆ ಅಲ್ಲಿನ ಕನ್ನಡಿಗರಿಗೆ ಬೆಂಗಳೂರಿನಲ್ಲಿ ಇವತ್ತು ಸಿಗುತ್ತಿರುವ ಆತಿಥ್ಯ ಹಾಗೆಯೇ ಮುಂದುವರೆಯುವುದರ ಬಗ್ಗೆ ಅನುಮಾನಗಳಿವೆ. ಹೈದಾರಾಬಾದ್, ಮುಂಬೈ, ಪುಣೆಯ ಪಾಲಿಗೆ ಉತ್ತರ ಕರ್ನಾಟಕದ ಕನ್ನಡಿಗರು ಎಂದಿಗೂ ಹೊರಗಿನವರೇ. ಬೆಂಗಳೂರು ಮಾತ್ರ ಅವರನ್ನು ನಮ್ಮವರೇ ಎಂದು ಕರೆದು ಮಣೆ ಹಾಸಿದೆ. ಈಗ ಒಡೆದುಕೊಂಡು ಹೋದರೆ ಅದ್ದರಿಂದ ಹೆಚ್ಚಿನ ಹಾನಿ ಹಾಗೇ ಹೋಗುವವರಿಗೆ ಆಗಬಹುದೇ ಹೊರತು ಬೆಂಗಳೂರಿಗಲ್ಲ.
- ಭಾರತ ಒಕ್ಕೂಟದಲ್ಲಿ ಹೆಚ್ಚಿನ ಆರ್ಥಿಕ ಸಂಪನ್ಮೂಲವೆಲ್ಲ ಕೇಂದ್ರದ ಕೈಯಲ್ಲಿದೆ. ಸಮ್ಮಿಶ್ರ ಸರ್ಕಾರದ ಈ ಅವಧಿಯಲ್ಲಿ ಕೇಂದ್ರದಿಂದ ತನ್ನ ಪಾಲಿನ ನ್ಯಾಯಯುತವಾದ ಸಂಪನ್ಮೂಲ ಪಡೆಯಲು ರಾಜ್ಯಗಳು ದೊಡ್ಡದಾಗಿರುವುದು ಮತ್ತು ಅಲ್ಲಿ ಸರಿಯಾದ ಪ್ರಾದೇಶಿಕ ಪಕ್ಷಗಳಿರುವುದು ಅತ್ಯಂತ ಮುಖ್ಯವಾಗಿದೆ. ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯ ಚಿಕ್ಕ ಉತ್ತರ ಕರ್ನಾಟಕ ರಾಜ್ಯವನ್ನು ಕೇಂದ್ರ ಯಾವ ರೀತಿ ನಡೆಸಿಕೊಳ್ಳಬಹುದು ಅನ್ನುವುದನ್ನು ಊಹಿಸುವುದು ಕಷ್ಟವೇ?
- ಎಲ್ಲಕ್ಕೂ ಮಿಗಿಲಾಗಿ ಯಾವುದೇ ಪ್ರಾಂತ್ಯದ ಏಳಿಗೆಯ ನೇರ ಹೊಣೆ ಅಲ್ಲಿನ ಜನನಾಯಕರದ್ದು. ಹೀಗಿರುವಾಗ ಉತ್ತರ ಕರ್ನಾಟಕದ ಕೆಲ ಭಾಗಗಳು ಹಿಂದೆ ಬೀಳಲು ಕಾರಣ ಅಲ್ಲಿನ ಜನನಾಯಕರೇ ಹೊರತು ಇನ್ನಾರು ಅಲ್ಲ. ಉತ್ತರ ಕರ್ನಾಟಕ ಭಾಗದಿಂದ ಸುಮಾರು ೮ ಜನ ಮುಖ್ಯಮಂತ್ರಿಗಳು ಹೆಚ್ಚು ಕಡಿಮೆ ೨೫ ವರ್ಷಗಳ ಕಾಲ ಆಡಳಿತ ನಡೆಸಿದ್ದರೂ ಅಲ್ಲಿ ಅಂದುಕೊಂಡ ಮಟ್ಟಿಗೆ ಅಭಿವೃದ್ಧಿ ಆಗದಿರಲು ಕಾರಣ ಅಲ್ಲಿನ ಜನ ನಾಯಕರೇ ಅಲ್ಲವೇ? ಅಲ್ಲಿನ ಜನರನ್ನು ಅನಕ್ಷರತೆ, ಮೌಢ್ಯಗಳ ಪ್ರಪಂಚದಲ್ಲಿ ಬಂಧಿಸಿ ತಾವು ಮಾತ್ರ ಬೆಂಗಳೂರಿನಲ್ಲಿ ಎ.ಸಿ ಬಂಗಲೆಯಲ್ಲಿ ಆರಾಮಾಗಿರುವ ಅಲ್ಲಿನ ಇದೇ ಜನನಾಯಕರ ಕೈಗೆ ಹೊಸ ರಾಜ್ಯವೊಂದನ್ನು ಮಾಡಿ ಕೊಟ್ಟಲ್ಲಿ ಅಲ್ಲಿನ ಪರಿಸ್ಥಿತಿ ಬದಲಾಗುತ್ತೆ ಎಂದು ನಿರೀಕ್ಷಿಸುವುದು ಹುಲಿ ಹುಲ್ಲು ತಿನ್ನಲಿ ಎಂದು ನಿರೀಕ್ಷಿಸಿದಂತಲ್ಲವೇ?
- ಸರಿಯಾದ ಒಕ್ಕೂಟ ವ್ಯವಸ್ಥೆಯನ್ನು ರೂಪಿಸದೇ ಎಲ್ಲ ಅಧಿಕಾರವನ್ನು ಕೇಂದ್ರದ ಕೈಯಲ್ಲೇ ಉಳಿಸಿ ಚಿಕ್ಕ ಚಿಕ್ಕ ರಾಜ್ಯಗಳನ್ನು ಮಾಡಿಕೊಳ್ಳುವುದು ಒಂದರ್ಥದಲ್ಲಿ ರಾಜ್ಯಗಳನ್ನು ಕೇಂದ್ರದ ಸಾಮಂತರನ್ನಾಗಿಸಬಹುದೇ ಹೊರತು ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು, ಏಳಿಗೆಯನ್ನು ಜನಸಾಮಾನ್ಯರವರೆಗೆ ತರುವ ಸಾಧ್ಯತೆ ಇಲ್ಲ. ಇದನ್ನು ಬೇರೆ ರಾಜ್ಯ ಬೇಕೆನ್ನುವವರು ಅರ್ಥ ಮಾಡಿಕೊಂಡಿದ್ದಾರೆಯೇ?
ಕನ್ನಡಿಗರೆಲ್ಲರ ಏಳಿಗೆ ಸಾಧ್ಯವಾಗಲಿ ಅನ್ನುವ ಆಶಯವೇ ಕರ್ನಾಟಕದ ಏಕೀಕರಣಕ್ಕೆ ಕಾರಣವಾಗಿತ್ತು. ಇಂದು ಅದು ಅಂದುಕೊಂಡ ಮಟ್ಟದಲ್ಲಿ ಸಾಧ್ಯವಾಗಿಲ್ಲವೆಂದರೆ ಆ ಬಗ್ಗೆ ಎಲ್ಲ ಕನ್ನಡಿಗರು ಕೂತು, ಚರ್ಚೆ ಮಾಡಿ ಅಭಿವೃದ್ಧಿಯನ್ನು ಎಲ್ಲ ಭಾಗಕ್ಕೂ ಕೊಂಡೊಯ್ಯುವಲ್ಲಿ ಏನು ಮಾಡಬೇಕಿದೆ ಅನ್ನುವುದರತ್ತ ಗಮನಹರಿಸಬೇಕಿದೆಯೇ ಹೊರತು ಭಾವುಕರಾಗಿ ಒಂದೇ ನುಡಿಯಾಡುವ ಜನರ ನಡುವೆ ಇನ್ನಷ್ಟು ತಡೆಗೋಡೆಗಳನ್ನು ಕಟ್ಟುವ ಕೆಲಸಕ್ಕೆ ಹೋಗದಿರಲಿ.
ಇಂತಿ ನಿಮ್ಮ ನಂಬುಗೆಯ
ವಸಂತ ಶೆಟ್ಟಿ