ಸೋಮವಾರ, ಅಕ್ಟೋಬರ್ 1, 2012

ಕಾವೇರಿ ವಿವಾದ, ನಮ್ಮ ರಾಜಕೀಯ ನಾಯಕರ ಕೈಲಾಗದತನ, ನಮಗೆ ಬೇಕಿರುವ ರಾಜಕೀಯ ಪರಿಹಾರ

ಕಾವೇರಿ ವಿವಾದ, ನಮ್ಮ ರಾಜಕೀಯ ನಾಯಕರ ಕೈಲಾಗದತನ, ನಮಗೆ ಬೇಕಿರುವ ರಾಜಕೀಯ ಪರಿಹಾರದ ಬಗ್ಗೆ ಕನ್ನಡದ ಪತ್ರಿಕೆಗಳಿಗೆ ಒಂದು ಪತ್ರ ಬರೆದಿದ್ದೆ. ಅದನ್ನೇ ಇಲ್ಲಿ ಹಾಕಿರುವೆ.
-ವಸಂತ  

ಮಾನ್ಯ ಸಂಪಾದಕರೇ,

ವಿಷಯ: ಕಾವೇರಿ ವಿವಾದ ಮತ್ತು ರಾಜಕೀಯವಾದ ಪರಿಹಾರ ಓದುಗರ ಓಲೆಯಲ್ಲಿ ಪ್ರಕಟಿಸಲು

ಪ್ರತಿ ಬಾರಿ ಕಾವೇರಿ ವಿವಾದ ತಲೆದೋರಿದಾಗಲೂ ಕೇಳುವಂತೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅನ್ನುವ ಕೂಗು ಈ ಬಾರಿಯೂ ಎದ್ದಿದೆ. ಆದರೆ ಇಂತಹ ಅನ್ಯಾಯ ಪದೇ ಪದೇ ಆಗಲು ಕಾರಣವೇನು ಅನ್ನುವ ಬಗ್ಗೆ ಕನ್ನಡ ಸಮಾಜದಲ್ಲಿ ಚಿಂತನೆ ನಡೆಯಬೇಕಿದೆ. ಈ ಬಾರಿ ಕರ್ನಾಟಕದಲ್ಲಿ ಭೀಕರ ಬರವಿದ್ದು, ಕುಡಿಯುವ ನೀರಿಗೂ ತೊಂದರೆ ಅನ್ನುವ ಸ್ಥಿತಿಯ ಬಗ್ಗೆ ಮನವರಿಕೆ ಆದ ಮೇಲೂ ಪ್ರಧಾನಿ ದಿನಕ್ಕೆ 9000 ಕ್ಯೂಸೆಕ್ಸ್ ನೀರು ಬಿಡುವ ಆಜ್ಞೆ ಯಾಕೆ ಹೊರಡಿಸುತ್ತಾರೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಡಿಸೇಲ್ ಬೆಲೆ ಏರಿಕೆ, ಚಿಲ್ಲರೆ ವ್ಯಾಪಾರದಲ್ಲಿ ಎಫ್.ಡಿ.ಐ ಅನುಮತಿಯಂತಹ ನಿರ್ಧಾರದಿಂದ ಕೆಲ ಮಿತ್ರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ಕೇಂದ್ರ ಸರ್ಕಾರದ ಅಸ್ತಿತ್ವವೇ ಅಲುಗಾಡುತ್ತಿದೆ. ಹೀಗಿರುವಾಗ ನ್ಯಾಯಸಮ್ಮತವಾದ ನಿಲುವು ತೆಗೆದುಕೊಂಡು ತಮಿಳುನಾಡು ಕೇಳಿದಷ್ಟು ನೀರು ಬಿಡದಿರುವ ನಿಲುವಿಗೆ ಬಂದರೆ ಮಿತ್ರಪಕ್ಷ ಡಿ.ಎಮ್.ಕೆ ಬೆಂಬಲ ಹಿಂಪಡೆಯುವ ಸಾಧ್ಯತೆ ಒಂದೆಡೆಯಾದರೆ, ಮುಂದಿನ ಚುನಾವಣೆಯ ನಂತರ ಎ.ಐ.ಎ.ಡಿ.ಎಮ್.ಕೆ ಜೊತೆ ಮೈತ್ರಿಗೆ ಅವಕಾಶದ ಸಾಧ್ಯತೆ ಮಸುಕಾಗುವ ಅಪಾಯ ಇನ್ನೊಂದೆಡೆ ಇರುವಾಗ ಪ್ರಧಾನಿಗಳು ಅದು ಹೇಗೆ ಕರ್ನಾಟಕದ ಪರವಾದ ನಿಲುವು ತಳೆಯಲು ಸಾಧ್ಯ?

ಇಂತಹ ರಾಜಕೀಯ ಮೇಲಾಟಗಳ ಲೆಕ್ಕಾಚಾರದ ಪ್ರಕಾರ ತಳೆಯುವ ನಿಲುವಿನ ಆಧಾರದ ಮೇಲೆ ನೀರು ಬಿಡಲೇಬೇಕು ಅನ್ನುವ ಕಟ್ಟುಪಾಡು ಉಂಟಾಗುವುದು ಸಮಾನತೆಯ ಆಧಾರದ ಮೇಲೆ ಕಟ್ಟಲ್ಪಟ್ಟ ಒಕ್ಕೂಟ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಸರಿಯಾದದ್ದು? ಹಾಗಿದ್ದರೆ ಇದಕ್ಕೇನು ಪರಿಹಾರ ಎಂದು ಕಾಣಲು ಹೊರಟರೆ ಕರ್ನಾಟಕದಲ್ಲೂ ತಮಿಳುನಾಡಿನಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳುವುದೇ ಆಗಿದೆ ಅನ್ನಿಸದಿರದು. ಒಂದು ವೇಳೆ ಕರ್ನಾಟಕದಲ್ಲೂ ಒಂದು ಪ್ರಾದೇಶಿಕ ಪಕ್ಷವಿದ್ದು, ಅದಕ್ಕೊಂದು 20 ಜನ ಸಂಸತ್ ಸದಸ್ಯರ ಬಲವಿದ್ದಿದ್ದರೆ ಪ್ರಧಾನಿಯವರ ನಿಲುವು ಈಗಿರುವಂತೆಯೇ ಇರುತ್ತಿತ್ತೇ? ಮೈತ್ರಿಕೂಟದ ಸರ್ಕಾರಗಳೇ ಆಳ್ವಿಕೆ ಮಾಡುತ್ತಿರುವ, ಮುಂದೆಯೂ ಮಾಡುವ ಇವತ್ತಿನ ಸಂದರ್ಭದಲ್ಲಿ  ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಇರುವ ನಾಡುಗಳು ಕೇಂದ್ರದಿಂದ ತನ್ನ ನಾಡಿಗೆ ಬೇಕಿರುವ ಅನುಕೂಲಗಳನ್ನು ಪಡೆದುಕೊಳ್ಳುತ್ತಿರುವುದನ್ನು ದಿನವೂ ನೋಡುತ್ತಿದ್ದೇವೆ. ಹಾಗೆಯೇ ಎಷ್ಟೇ ನಾಡ ಪರವಾಗಿದ್ದರೂ ಹೈಕಮಾಂಡ್ ಮಾತಿನ ಮುಂದೆ ಉಸಿರೆತ್ತಲಾಗದ ರಾಷ್ಟ್ರೀಯ ಪಕ್ಷಗಳಲ್ಲಿರುವ ನಮ್ಮ ನಾಯಕರ ಅಸಹಾಯಕತೆಯನ್ನು ನೋಡುತ್ತಿದ್ದೇವೆ. ಈ ವ್ಯವಸ್ಥೆ ಹೀಗೆಯೇ ಮುಂದುವರೆದಲ್ಲಿ ಪ್ರತಿ ಬಾರಿ ನಮ್ಮ ನಾಡಿನ ನೆಲ, ಜಲ, ನುಡಿ, ಬದುಕಿನ ಪ್ರಶ್ನೆಗಳು ಎದ್ದಾಗಲೂ ಕನ್ನಡಿಗರು ಬೀದಿ ಹೋರಾಟ, ಚಳುವಳಿ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಅವುಗಳು ತುದಿ ಮುಟ್ಟುವ, ಶಾಶ್ವತವಾದ ಯಾವುದೇ ಪರಿಹಾರವನ್ನು ಕೊಡಲಾರವು.

ಹೀಗಿರುವಾಗ ಕರ್ನಾಟಕದ ಪರ, ರೈತ ಪರವಾದ ಪ್ರಬಲ ಸಂಘಟನೆಗಳು, ಅಪಾರ ಸಾಮರ್ಥ್ಯವಿದ್ದೂ ರಾಷ್ಟ್ರೀಯ ಪಕ್ಷಗಳಲ್ಲಿ ಕೇವಲ ಚುನಾವಣೆ ಫಂಡ್ಸ್ ತರುವಾಗ ಬೇಕಿದ್ದ, ಈಗ ಹೊರೆಯಾಗಿರುವ ರಾಜ್ಯದ ಹಲವು ಪ್ರಬಲ ನಾಯಕರು ಈ ಬಗ್ಗೆ ಚಿಂತಿಸಿ, ಸರಿಯಾದ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿಕೊಳ್ಳುವತ್ತ ಮುನ್ನಡೆಯಬೇಕಿದೆ. ಒಮ್ಮೆ ಅಂತಹ ಪಕ್ಷ ಅಸ್ತಿತ್ವಕ್ಕೆ ಬಂದರೆ ಕರ್ನಾಟಕದಲ್ಲಿರುವ ಇತರ ರಾಷ್ಟ್ರೀಯ ಪಕ್ಷಗಳು ಕನ್ನಡ, ಕರ್ನಾಟಕದ ಪರವಾದ ನಿಲುವು ತಳೆಯುವ ಒತ್ತಡಕ್ಕೆ ಒಳಗಾಗುತ್ತಾರೆ ಅನ್ನುವುದರಲ್ಲಿ ಅನುಮಾನವಿಲ್ಲ ಮತ್ತು ಅಂತಹ ರಾಜಕೀಯ ಬಲವೊಂದಿದ್ದಾಗ ದೆಹಲಿಯಲ್ಲಿ ನಡೆಯುವ ರಾಜಿ-ಸಂಧಾನಗಳಲ್ಲೂ ನಾವು ಸರಿ ಸಮಾನವಾಗಿ ಧ್ವನಿ ಎತ್ತುವ, ನ್ಯಾಯ ತಂದುಕೊಳ್ಳುವ, ನಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಲಿವೆ. ಹಾಗಾಗಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !