ಗುರುವಾರ, ನವೆಂಬರ್ 15, 2012

ಪ್ರಶ್ನೆ: ಕರ್ನಾಟಕದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳಿಗೆ ಕಾಲ ಕೂಡಿ ಬಂದಿದೆಯೇ? ಉತ್ತರ: ಹೌದು

ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಈ ಹಿಂದೆಯೂ ಪ್ರಾದೇಶಿಕ ಪಕ್ಷ ಗೆಲುವು ಕಂಡಿಲ್ಲ, ಈಗಲೂ ಕಾಣಲ್ಲ ಅಂತೆಲ್ಲ ಅಲ್ಲಲ್ಲಿ ದನಿ ಎಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಅದು ತಾರಕಕ್ಕೆರಲಿದೆ. ಈ ಪಕ್ಷಗಳ ಭವಿಷ್ಯ ಜನತಾ ನ್ಯಾಯಲಯದಲ್ಲಿ ನಿರ್ಧಾರವಾಗುತ್ತೆ ಮತ್ತು ಆ ತೀರ್ಪೇ ಅಂತಿಮ ಅನ್ನುತ್ತಲೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಸಿಗುವ ಸಾಧ್ಯತೆ ಯಾಕೆ ಹೆಚ್ಚಿದೆ ಅನ್ನುವುದರ ಬಗ್ಗೆ ನನ್ನ ಅನಿಸಿಕೆ ಓದುಗ ಗೆಳೆಯರೊಡನೆ ಹಂಚಿಕೊಳ್ಳಲು ಈ ಬರಹ.

ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ಸುಮ್ಮನೆ ನೆನೆಸಿಕೊಳ್ಳಿ. ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದು ನಮ್ಮೆಲ್ಲಗಿಂತಲೂ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎಂಬ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೊನಚು ತಂದ ನಾಯಕರಿದ್ದದ್ದು ಕಾಂಗ್ರೆಸ್ ಅನ್ನುವ ಅಂದಿನ ಪಕ್ಷದಲ್ಲಿ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ "ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು" ಅನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೊದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು. 

ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ !
ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟು ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲಸಾಧ್ಯವಾದದ್ದು (unwieldy) ಅನ್ನುವುದು ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದ್ದು ಅನ್ನುವುದನ್ನು ಗಮನಿಸಬೇಕಿದೆ. 1990ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಾದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿದೆ ಅಂದರೆ ತಪ್ಪಾಗಲಾರದು. 

ಕರ್ನಾಟಕದಲ್ಲಾದ ಮೂರು ಹಂತದ ಬದಲಾವಣೆಗಳು
ಈ ಬದಲಾವಣೆಗಳು ಆಗುವ ಹೊತ್ತಲ್ಲಿ ಕರ್ನಾಟಕದಲ್ಲೇನಾಯಿತು ಎಂದು ನಾವು ನೋಡಲು ಹೋದರೆ ಒಂದಿಷ್ಟು ವಿಷಯಗಳು ಗೋಚರಿಸುತ್ತವೆ. ಕಾಂಗ್ರೆಸ್ಸಿನ ಪ್ರಾಬಲ್ಯ ಮುಗಿದು ಸಮಾಜವಾದಿ ಹಿನ್ನೆಲೆಯ ಜನತಾ ಪರಿವಾರ ತನ್ನ ಬಲದಲ್ಲೇ ಅಧಿಕಾರ ಹಿಡಿಯುವ ಮಟ್ಟಿಗಿನ ಬದಲಾವಣೆ ಕರ್ನಾಟಕದಲ್ಲಾದ ಮೊದಲ ಹಂತದ ಬದಲಾವಣೆ ಅನ್ನಬಹುದು. ಮುಂದೆ ಜನತಾ ಪರಿವಾರ ಒಡೆದು ಹೋದಾಗ ಅಲ್ಲಿನ ನಾಯಕರನ್ನು, ಅದರ ಶಕ್ತಿಯನ್ನು ಬಳಸಿಕೊಂಡ ಬಿಜೆಪಿ ಯಡಿಯೂರಪ್ಪನವರಂತಹ ರಾಜ್ಯವ್ಯಾಪಿ ಪ್ರಭಾವ, ಸಮುದಾಯದ ಬೆಂಬಲ ಇರುವ ಪ್ರಾದೇಶಿಕವಾಗಿ ಬಲವಾಗಿರುವ ನಾಯಕನ ನೇತೃತ್ವದಲ್ಲಿ  ಕರ್ನಾಟಕದಲ್ಲಿ ಒಂದು ಮಟ್ಟಿಗೆ ನೆಲೆ ಕಂಡುಕೊಂಡಿತು. ಇದನ್ನು ಎರಡನೆಯ ಹಂತವೆಂದು ಕರೆಯಬಹುದು. ಆದರೆ ಈ ಎರಡೂ ಹಂತದ ಬದಲಾವಣೆಗಳು ಕರ್ನಾಟಕದ ಮಟ್ಟಿಗೆ ಇಲ್ಲಿನ  ನದಿ, ನೆಲ, ನುಡಿ, ಬದುಕು ಬವಣೆಗಳ ಸವಾಲಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರೀಕ್ಷೆ ಇಟ್ಟುಕೊಂಡ ಮಟ್ಟಕ್ಕೆ ಯಶಸ್ವಿಯಾಗದೇ ಇರುವುದರಿಂದಲೇ ಇಂದು ಪ್ರಾದೇಶಿಕ ಪಕ್ಷಗಳು ಬೇಕು ಅನ್ನುವ ಮೂರನೇ ಹಂತದ ಬದಲಾವಣೆಯತ್ತ ಕರ್ನಾಟಕ ಮುಂದಡಿಯಿಡುತ್ತಿದೆ. ಯಡಿಯೂರಪ್ಪನವರಿರಲಿ, ಶ್ರೀರಾಮುಲು ಇರಲಿ ಇನ್ನೊಂದು ಅಸ್ತಿತ್ವದಲ್ಲಿರುವ ಪಕ್ಷಕ್ಕೆ ಸೇರುವ ಬದಲು ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ ಅನ್ನುವಲ್ಲಿ ಇಲ್ಲವೇ ತಮ್ಮನ್ನು ತಾವು ಪ್ರಾದೇಶಿಕ ಪಕ್ಷ ಎಂದು ಕರೆದುಕೊಳ್ಳುತ್ತಿರುವ ಜಾತ್ಯಾತೀತ ಜನತಾದಳದ ಇತ್ತೀಚಿನ ನಿಲುವಿನಲ್ಲಿರುವ ಆತ್ಮವಿಶ್ವಾಸವನ್ನು ಕರ್ನಾಟಕದಲ್ಲಿ ಬಲಗೊಳ್ಳುತ್ತಿರುವ "ಪ್ರಾದೇಶಿಕ ಪಕ್ಷ ಬೇಕು" ಅನ್ನುವ ಚಿಂತನೆಯ ಹಿನ್ನೆಲೆಯಲ್ಲಿ ನೋಡಿದಾಗಲೇ ಮೂರನೆಯ ಹಂತದ ಬದಲಾವಣೆ ಹೇಗೆ ರೂಪುಗೊಳ್ಳುತ್ತಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. 

ಪ್ರಾದೇಶಿಕ ಪಕ್ಷಗಳು ಮಾತ್ರ ಭ್ರಷ್ಟರೇ?
ಸರಿ, ಭಾರತ ಒಕ್ಕೂಟದಲ್ಲಿ ನಮ್ಮ ನೆಲ, ಜಲ, ನುಡಿ, ಬದುಕಿನ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಬೇಕಿರುವ ಸಂಧಾನದ ಶಕ್ತಿ ಪಡೆಯಲು ಪ್ರಾದೇಶಿಕ ಪಕ್ಷಗಳೆನೋ ಬೇಕು, ಆದರೆ ಪ್ರಾದೇಶಿಕ ಪಕ್ಷಗಳು ಹೆಚ್ಚು ಭ್ರಷ್ಟವಲ್ಲವೇ ಅನ್ನುವ ವಾದ ಅಲ್ಲಲ್ಲಿವೆ.  ಅದು ಸರಿ ಅನ್ನಿಸುವ ತಪ್ಪು ವಾದವೆನ್ನಬಹುದು. ಭ್ರಷ್ಟಾಚಾರ ಇಂದು ಪ್ರಾದೇಶಿಕ, ರಾಷ್ಟ್ರೀಯ ಪಕ್ಷ ಅನ್ನದೇ ಎಲ್ಲೆಡೆ ವ್ಯಾಪಿಸಿದೆ. ಅದು ಯಾವುದೋ ಒಂದು ಪಕ್ಷ ಇಲ್ಲವೇ ವ್ಯಕ್ತಿಯಿಂದ ಬಗೆಹರಿಯುವ ಸಮಸ್ಯೆಯೂ ಅಲ್ಲ. ಅದಕ್ಕೆ ಬೇಕಿರುವುದು ಚುನಾವಣೆ ಸುಧಾರಣೆ, ಬೇಕಿಲ್ಲದ ಕ್ಷೇತ್ರಗಳಿಂದ ಸರ್ಕಾರದ ಪಾತ್ರ ಕಡಿಮೆಗೊಳಿಸುವುದು, ರಾಜಕೀಯ ಹಸ್ತಕ್ಷೇಪವಿಲ್ಲದೇ ಕೆಲಸ ನಿರ್ವಹಿಸುವಂತೆ ತನಿಖಾ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವುದು, ಅಧಿಕಾರ ವಿಕೇಂದ್ರಿಕರಣದ ಮೂಲಕ ಆಡಳಿತವನ್ನು ಕೆಳ ಹಂತದವರೆಗೆ ಕೊಂಡೊಯ್ಯುವಂತಹ ಸಾಂಸ್ಥಿಕ ಸುಧಾರಣೆಗಳಾಗಿವೆ. ಅಂತಹ ಬದಲಾವಣೆಗೆ ಒತ್ತಡ ತರುವ ಕೆಲಸವನ್ನು ಸಾಮಾಜಿಕ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಮಾಡಬೇಕಿವೆ. ಅಂತಹ ಬದಲಾವಣೆಗಳಾಗುವವರೆಗೂ ಇವತ್ತಿನ ಎಲ್ಲೆ ಮೀರಿ ಕೇಂದ್ರಿಕೃತವಾಗಿರುವ ಕೇಂದ್ರದಲ್ಲಿನ ಒಕ್ಕೂಟ ವ್ಯವಸ್ಥೆಯಲ್ಲಿ ಆಯಾ ರಾಜ್ಯದ ಏಳಿಗೆಗೆ ಸಂಪನ್ಮೂಲ ಹೊಂದಿಸಲು ಪ್ರಾದೇಶಿಕ ಪಕ್ಷಗಳ ಅಗತ್ಯ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇಷ್ಟೊಂದು ವೈವಿಧ್ಯತೆಯ ಭಾರತ ಒಕ್ಕೂಟ ಒಂದು ಸರಿಯಾದ ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡುವಂತೆ ಮಾಡುವ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಅಸ್ತಿತ್ವಕ್ಕೆ ಬರುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಕರ್ನಾಟಕದ ಹಿತ ಕಾಯಲು ಸರಿಯಾದ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಕನ್ನಡ, ಕನ್ನಡಿಗರ ಪಾಲಿಗೆ ಅತ್ಯಂತ ಮುಖ್ಯವಾದದ್ದಾಗಿದೆ ಅನ್ನಬಹುದು. 

ಈ ಹಿಂದಿನ ಪ್ರಯತ್ನಕ್ಕೂ ಈಗಿನದ್ದಕ್ಕೂ ವ್ಯತ್ಯಾಸವಿದೆ.
ಕರ್ನಾಟಕದಲ್ಲಿ ಈ ಹಿಂದಿನ ಪ್ರಯತ್ನಗಳು ಗೆಲುವು ಕಂಡಿಲ್ಲ, ಹಾಗಾಗಿ ಈ ಬಾರಿಯ ಪ್ರಯತ್ನಗಳು ಗೆಲುವು ಕಾಣಲ್ಲ ಅನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಅಂದಿನ ಸೋಲು ಯಾಕಾಯಿತು ಅನ್ನುವುದನ್ನು ಹುಡುಕಿದಾಗ ಅವುಗಳ ಸೋಲಿನ ಕಾರಣ ಸುಲಭವಾಗಿ ತಿಳಿಯಬಹುದು. ಈ ಹಿಂದೆ ಪಕ್ಷ ಕಟ್ಟಿದ್ದ ದೇವರಾಜ್ ಅರಸು, ಬಂಗಾರಪ್ಪನವರ ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳು ದೇಶಾದ್ಯಂತ ಬಲವಾಗಿದ್ದವು, ಆದರೆ ಇಂದು ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಬಲಗೊಂಡಿರುವ, ಬಲಗೊಳ್ಳುತ್ತಿರುವ ಸಮ್ಮಿಶ್ರ ಸರ್ಕಾರಗಳ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವ ದಿನಗಳಿವೆ. ಈ ಹಿಂದಿನ ಪ್ರಯತ್ನಗಳನ್ನು ಮಾಡಿದವರು ಕರ್ನಾಟಕದ ಪ್ರಭಾವಿ ಸಮುದಾಯಕ್ಕೆ ಸೇರದ, ರಾಜ್ಯವ್ಯಾಪಿ ರಾಜಕೀಯ ಪ್ರಭಾವ ಹೊಂದಿರದ ನಾಯಕರಾಗಿದ್ದರೆ ಇಂದಿನ ಪ್ರಯತ್ನದಲ್ಲಿರುವವರಿಗೆ ಆ ತೊಡಕುಗಳು ಅಷ್ಟಾಗಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಕರ್ನಾಟಕಕ್ಕೆ ನಿರಂತರವಾಗಿ ಭಾರತ ಒಕ್ಕೂಟದಲ್ಲಿ ನದಿ, ನೆಲ, ಬದುಕಿನ ಹಕ್ಕುಗಳ ವಿಷಯಗಳಲ್ಲಿನ ಅನ್ಯಾಯ ಸರಿಪಡಿಸಲು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಅನ್ನುವ ಚಿಂತನೆ ಈ ಹಿಂದಿನವರು ಪ್ರಯತ್ನ ಮಾಡಿದ್ದ ಹೊತ್ತಲ್ಲಿ ಅಷ್ಟಾಗಿ ಜನಮಾನಸದಲ್ಲಿ ಗಟ್ಟಿಯಾಗಿರಲಿಲ್ಲ, ಆದರೆ ಇಂದು ಈ ವಾದಕ್ಕೆ ಕರ್ನಾಟಕದ ಜನಸಾಮಾನ್ಯರಲ್ಲೂ ಬಹು ದೊಡ್ಡ ಮಟ್ಟದಲ್ಲಿ ಬೆಂಬಲವಿದೆ. ಹೀಗಾಗಿ ಸರಿಯಾದ ಪ್ರಯತ್ನ ಮಾಡಿದರೆ ಕರ್ನಾಟಕದಲ್ಲಿ ಒಂದೆರಡು ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನೆಲೆ ನಿಲ್ಲುವ ಎಲ್ಲ ಸಾಧ್ಯತೆಗಳಿವೆ. ಆದರೆ ಈ ಬದಲಾವಣೆ  ಎಂದಿಗೂ ಆಗದು ಅನ್ನುವ ಅನಿಸಿಕೆಗಳಿಗೆ ಉತ್ತರ  ಬರುವ ಚುನಾವಣೆಯೇ ನೀಡಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !