ಸರೋಜಿನಿ ಮಹಿಷಿ ವರದಿ ಅನುಷ್ಟಾನ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು ಅನ್ನುವ ಬೇಡಿಕೆಗೆ ಸಂವಿಧಾನದಲ್ಲಿ ಯಾವುದೇ ಮಾನ್ಯತೆಯಿಲ್ಲ ಆದ್ದರಿಂದ ಇದು ಕಾನೂನು ಬಾಹಿರವೂ, ದೇಶದ ಹಿತಾಸಕ್ತಿಗೆ ವಿರೋಧವಾದುದು ಎಂದು ಮಾನ್ಯ ನ್ಯಾಯಮೂರ್ತಿಗಳು ಅನಿಸಿಕೆ ವ್ಯಕ್ತಪಡಿಸಿರುವ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ವರದಿಗಳಿವೆ. ಹಾಗಿದ್ದರೆ ಇಂತಹ ಬೇಡಿಕೆಗಳು ಪ್ರಜಾಸತ್ತಾತ್ಮಕವಾದ, ನ್ಯಾಯಯುತವಾದ ಬೇಡಿಕೆ ಅಲ್ಲವೇ ಅನ್ನುವುದನ್ನು ನೋಡಬೇಕಿದೆ.
ಉದ್ಯೋಗದಲ್ಲಿ ಆದ್ಯತೆ ಬೇಡಿಕೆ ತಪ್ಪೇ?
ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಸ್ಥಾಪನೆಯ ಉದ್ದೇಶವೇ ಭಾಷೆ, ಆಚರಣೆ, ಸಂಸ್ಕ್ರುತಿ, ಆಸೆ, ಆಶೋತ್ತರಗಳಲ್ಲಿ ವೈವಿಧ್ಯತೆ ಹೊಂದಿರುವ ಈ ಒಕ್ಕೂಟದಲ್ಲಿ ಎಲ್ಲ ಭಾಷಿಕರು ಸಮಾನತೆಯ ನೆಲೆಯಲ್ಲಿ, ಸಮಾನ ಗೌರವದೊಂದಿಗೆ ಬದುಕು ಕಟ್ಟಿಕೊಳ್ಳುವಂತಾಗಬೇಕು ಅನ್ನುವ ಸಂವಿಧಾನದ ಆಶಯದೊಂದಿಗೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಭಾಷಿಕರ ಬದುಕಿನ ಹಕ್ಕನ್ನು ರಕ್ಷಿಸಿಕೊಳ್ಳುವ, ಕಟ್ಟಿಕೊಳ್ಳುವ ಎಲ್ಲ ಹಕ್ಕು ಅಲ್ಲಿನ ರಾಜ್ಯ ಸರ್ಕಾರಕ್ಕಿದೆ. ಕರ್ನಾಟಕದ ಕನ್ನಡಿಗರ ಬದುಕು ಹಸನಾಗಲಿ ಎಂದೇ ರಾಜ್ಯ ಸರ್ಕಾರ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಭೂಮಿ, ವಿದ್ಯುತ್, ನೀರು ಹಾಗೂ ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳನ್ನು ಉದ್ಯಮಿಗಳಿಗೆ ನೀಡಿದೆ. ಈ ಉದ್ದಿಮೆಗಳ ಸ್ಥಾಪನೆಗಾಗಿಯೇ ಇಲ್ಲಿನ ಸ್ಥಳೀಯರು ಹತ್ತಾರು ತ್ಯಾಗಗಳನ್ನು ಮಾಡಿದ್ದಾರೆ. ಹೀಗಿರುವಾಗ ಇದರ ಫಲವಾಗಿ ಹುಟ್ಟುವ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಲಿ ಅನ್ನುವುದು ಅತ್ಯಂತ ನ್ಯಾಯಯುತವೂ, ಪ್ರಜಾಸತ್ತಾತ್ಮಕವಾದ ಬೇಡಿಕೆಯೇ ಅನ್ನಬಹುದು. ಇವತ್ತು ಕರ್ನಾಟಕದಲ್ಲಿ ಹಲ ಮೇಲ್ವರ್ಗದ ಜನರನ್ನು ಬಿಟ್ಟರೆ ಉಳಿದ ಬಹುಸಂಖ್ಯಾತರಿಗೆ ಶಿಕ್ಷಣ, ಉದ್ಯೋಗದ ವಿಷಯದಲ್ಲಿ ಸಾಮಾಜಿಕ ಸ್ತರದಲ್ಲಿ ಮೇಲೆ ಬರಲು ಸಹಾಯವಾಗಲು ಇಂತಹ ನಿಯಮಗಳನ್ನು ರೂಪಿಸುವುದರಲ್ಲಿ ತಪ್ಪೂ ಇಲ್ಲ. ಇವತ್ತಿನ ಭಾರತದ ಸಂವಿಧಾನದಲ್ಲಿ ಇಂತಹ ಬೇಡಿಕೆಗೆ ಮನ್ನಣೆ ಇಲ್ಲದಿದ್ದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯರ ಬದುಕಿನ ಹಕ್ಕಿನ ರಕ್ಷಣೆಗೆ ಅವಕಾಶ ಕಲ್ಪಿಸುವುದು ಸರಿಯಾದ ಹಾದಿಯಾಗಿದೆ.
ಈ ಬಗ್ಗೆ ಗಮನ ಹರಿಸಲು ಹಲ ಕಾರಣಗಳೂ ಇವೆ!
ಇಂತಹದೊಂದು ತಿದ್ದುಪಡಿಗೆ ಬೇಕಿರುವ ಬೆಂಬಲವನ್ನು ರಾಜಕೀಯ ನೆಲೆಯಲ್ಲಿ ಕಟ್ಟಿಕೊಳ್ಳುವತ್ತ ಕನ್ನಡಿಗರು, ಕನ್ನಡಿಗರನ್ನು ಆಳುವವರು ತುರ್ತು ಗಮನ ಹರಿಸಲು ಬಹಳ ಮಹತ್ವದ ಹಲ ಕಾರಣಗಳೂ ಇವೆ. ಕರ್ನಾಟಕ ಸ್ವಾತಂತ್ರ್ಯ ಪೂರ್ವದ ಅವಧಿಯಿಂದಲೂ ಶಿಕ್ಷಣ, ಔದ್ಯೋಗಿಕರಣದಂತಹ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದ್ದ ರಾಜ್ಯವಾಗಿದೆ. ಇಲ್ಲಿನ ಜನಸಂಖ್ಯೆಯ ಸಾಂದ್ರತೆಯೂ ಬಹಳ ಚಿಕ್ಕದಿದೆ. ಎಷ್ಟು ಚಿಕ್ಕದು ಅಂದರೆ ಕೆಲ ಯೂರೋಪಿನ ದೇಶಗಳಿಗೆ ಹೋಲಿಸುವಷ್ಟು ಚಿಕ್ಕದು. 2001ರ ಜನಗಣತಿಯ ಪ್ರಕಾರ ಚದರ ಕಿಲೋ ಮೀಟರಿಗೆ ಕೇವಲ 252 ಜನರು ಕರ್ನಾಟಕದಲ್ಲಿದ್ದರೆ, ಈ ಪ್ರಮಾಣ ಜನಸಂಖ್ಯೆಯ ಸಮಸ್ಯೆಯಿಂದ ಬಳಲುತ್ತಿರುವ ಉತ್ತರದ ಹಲವು ರಾಜ್ಯಗಳಲ್ಲಿ ಎರಡರಿಂದ ಐದು ಪಟ್ಟು ಹೆಚ್ಚಿದೆ. ಭಾರತ ಒಂದು ಒಕ್ಕೂಟ ವ್ಯವಸ್ಥೆಯಾದರೂ ಅನಿಯಂತ್ರಿತ ವಲಸೆ ನಿಯಂತ್ರಣಕ್ಕೆ ಯಾವುದೇ ಕಾನೂನು ಇಲ್ಲದಿರುವುದರಿಂದ ಆರ್ಥಿಕ ಚಟುವಟಿಕೆಗಳಲ್ಲಿ ಮುಂದಿರುವ, ಆದರೆ ಜನಸಾಂದ್ರತೆ ಅಷ್ಟಾಗಿ ಇಲ್ಲದಿರುವ ಕರ್ನಾಟಕದಂತಹ ರಾಜ್ಯಗಳಿಗೆ ಕೋಡಿ ಬಿದ್ದ ಕೆರೆಯಂತೆ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಂದ ವಲಸೆ ಹರಿದು ಬರುತ್ತಿದೆ ಮತ್ತು ಕರ್ನಾಟಕದ ಜನಲಕ್ಷಣ ತೀವ್ರ ಗತಿಯಲ್ಲಿ ಬದಲಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯರ ಬದುಕಿನ ರಕ್ಷಣೆಗೆ ಬೇಕಿರುವ ಯಾವುದೇ ಕಾನೂನಿನ ಬಲವೂ ಇಲ್ಲದಿದ್ದರೆ ಇನ್ನು ಕೆಲವೇ ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡಿಗರ ಪಾಡು ಇನ್ನಷ್ಟು ಹೀನಾಯವಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯದಲ್ಲಿ ಹುಟ್ಟುವ ಉದ್ಯೋಗದಲ್ಲಿ ಅಲ್ಲಿನ ಸ್ಥಳೀಯರಿಗೆ ಆದ್ಯತೆ ಕೊಡುವಂತೆ ಸಂವಿಧಾನ ತಿದ್ದುಪಡಿಯಾಗುವುದು ಅತ್ಯಂತ ಪ್ರಜಾಸತ್ತಾತ್ಮಕವಾದ ಬೇಡಿಕೆಯಾಗಿದೆ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವ ಸಂದರ್ಭದಲ್ಲಿ ಹೈಕಮಾಂಡ್ ಅಣತಿಯಂತೆ ನಡೆಯುವ ರಾಷ್ಟ್ರೀಯ ಪಕ್ಷಗಳಿಗೆ ಆಗದಿದ್ದರೂ ಕೊನೆಯ ಪಕ್ಷ ಮೂರು ಪ್ರಾದೇಶಿಕ ಪಕ್ಷಗಳಾದರೂ ಈ ಬೇಡಿಕೆಗೆ ರಾಜಕೀಯವಾದ ಪರಿಹಾರ ಕಂಡುಹಿಡಿಯುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸುವಂತಾಗಬೇಕು. ಒಕ್ಕೂಟ ಮಟ್ಟದಲ್ಲಿ ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸುವಂತಾಗಬೇಕು ಮತ್ತು ಈ ನಿಟ್ಟಿನಲ್ಲಿ ಇತರ ರಾಜ್ಯದ ಪಕ್ಷಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಇನ್ನೆರಡು ದಶಕಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕನ್ನಡಿಗರ ಬಲ ಇನ್ನಷ್ಟು ಕುಗ್ಗುವುದನ್ನು ತಡೆಯಲಾಗದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !