ಭಾನುವಾರ, ಮಾರ್ಚ್ 31, 2013

ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆ


ಮತ್ತೆ ಚುನಾವಣೆ ಬಂದಿದೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ  ಪ್ರಾದೇಶಿಕ ಪಕ್ಷಗಳು ದೊಡ್ಡ ಮಟ್ಟದಲ್ಲಿ ಸ್ಪರ್ಧೆಗೆ ಸಜ್ಜಾಗಿವೆ. ಕಳೆದ ಐದು ವರ್ಷದಲ್ಲಿ ರಾಜ್ಯ ರಾಜಕಾರಣ ತಲುಪಿರುವ ಸ್ಥಿತಿಯಿಂದ ಸಾಕಷ್ಟು ಜನರಿಗೆ ಚುನಾವಣಾ ವ್ಯವಸ್ಥೆಯ ಬಗ್ಗೆಯೇ ಒಂದು ರೀತಿಯಲ್ಲಿ ಭ್ರಮ ನಿರಸನವಾಗಿ ಮತದಾನದಿಂದಲೇ ದೂರ ಉಳಿಯುವ ನಿರ್ಧಾರ ಕೈಗೊಂಡರೂ ಅಚ್ಚರಿಯಿಲ್ಲ. ಆದರೆ ಸಮಸ್ಯೆಗೆ ದೂರ ಉಳಿಯುವುದು ಪರಿಹಾರವಲ್ಲವೇ ಅಲ್ಲ. ಎಂತಹುದೇ ಕೆಡುಕಿನ ಸ್ಥಿತಿಯಲ್ಲಿದ್ದರೂ ಪ್ರತಿ ಐದು ವರ್ಷಕ್ಕೊಮ್ಮೆ ಅದನ್ನು ಸರಿಪಡಿಸಿಕೊಳ್ಳಲು ಸಿಗುವ ಒಂದೇ ಒಂದು ಅಸ್ತ್ರ ಮತದಾನ. ಅದನ್ನು ಕನ್ನಡಿಗ ಅನ್ನುವ ಐಡೆಂಟಿಟಿ ಇಟ್ಟುಕೊಂಡು ಸರಿಯಾಗಿ, ಅಳೆದು, ತೂಗಿ ಚಲಾಯಿಸುವ ಹೊಣೆ ನಮ್ಮೆಲ್ಲರದ್ದು. ಇರಲಿ, ಭಾರತ ಒಕ್ಕೂಟದಲ್ಲಿ ಕರ್ನಾಟಕದ ಸಮಸ್ಯೆಗಳಿಗೆ ರಾಜಕೀಯವಾದ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡಿಗರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಮತ್ತು ಮತದಾನದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯವಾದ ಕೆಲಸ ಎಂದು ಹೇಳಲು ಮೇಲಿನ ಒಂದೆರಡು ಮಾತು ಬರೆದೆ. ಆದರೆ ಇವತ್ತು ಹೇಳ ಹೊರಟಿದ್ದು ಇನ್ನೆನೋ ಇದೆ. ಅದು ಈ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜಕೀಯವಾಗಿ ಎಂತಹ ದಿಗಿಲಿನ  ಸ್ಥಿತಿಯಲ್ಲಿದೆ, ಕನ್ನಡ-ಕರ್ನಾಟಕ-ಕನ್ನಡಿಗನ ಬದುಕಿನ ಸವಾಲುಗಳಿಗೆ ರಾಜಕೀಯವಾದ ಪರಿಹಾರ ಕಂಡುಕೊಳ್ಳುವಲ್ಲಿ ಎಷ್ಟು ಕೆಟ್ಟದಾಗಿ ಎಡವಿದ್ದೇವೆ ಮತ್ತು ಈ ಹೊತ್ತಿನಲ್ಲಿ ಇದಕ್ಕೆ ಪರಿಹಾರವಾಗಿ  ಕನ್ನಡಿಗರಲ್ಲಿ ರಾಜಕೀಯ ಪ್ರಜ್ಞೆ ಯಾಕೆ ಬೆಳೆಯಬೇಕಿದೆ? ಯಾರು ಏನೇ ಅಂದುಕೊಂಡರೂ ನಮ್ಮ ಸುತ್ತ ಮುತ್ತಲಿನ ಪ್ರತಿಯೊಂದು ವಿಷಯವನ್ನು "ಕನ್ನಡಿಗರ ಹಿತಾಸಕ್ತಿ" ಅನ್ನುವ ಕಣ್ಣಿನಿಂದ ಮಾತ್ರ ನೋಡಬೇಕಾದ ಸಂದರ್ಭ ಯಾಕೆ ಬಂದಿದೆ ಅನ್ನುವುದರ ಕುರಿತು ನನ್ನ ಅನಿಸಿಕೆ ಬರೆಯಲು ಈ ಬರಹ.

ಟಿಕೇಟ್ ಹಂಚಿಕೆಯೇ ಕನ್ನಡಿಗರ ಸಮಸ್ಯೆಯೇ?
ಚುನಾವಣೆ ಘೋಷಣೆಯಾಗಿ ಹೆಚ್ಚು ಕಮ್ಮಿ ಎರಡು ವಾರ ಆಗಿದೆ. ಈ ಎರಡು ವಾರದಲ್ಲಿ ಪತ್ರಿಕೆ, ಸುದ್ದಿವಾಹಿನಿಗಳನ್ನು ಗಮನಿಸಿದ್ದರೆ ಏನು ಕಾಣುತ್ತೆ? ಅಲ್ಲೇನಾದರೂ ಕರ್ನಾಟಕ ಕೇಂದ್ರಿತವಾಗಿ ಯಾರು ಏನು ಮಾಡುತ್ತಾರೆ? ಕನ್ನಡಿಗರ ಸಮಸ್ಯೆಗಳಿಗೆ ಯಾರ ಬಳಿ ಏನು ಪರಿಹಾರವಿದೆ ಅಂತೇನಾದ್ರೂ ಕಾಣುತ್ತಾ? ಖಂಡಿತ ಇಲ್ಲ. ಕಳೆದ ಎರಡು ವಾರದಿಂದ ಚುನಾವಣೆಗೆ ಸಂಬಂಧಿಸಿದಂತೆ ಕಾಣುತ್ತಿರುವ ಒಂದೇ ಒಂದು ಸುದ್ದಿ ಅಂದರೆ ಟಿಕೇಟ್ ಹಂಚಿಕೆ. ಹಾಗಿದ್ದರೆ ಟಿಕೇಟ್ ಹಂಚಿಕೆಯೇ ಕನ್ನಡಿಗರ ಎದುರಿರುವ ಅತಿ ದೊಡ್ಡ ಸಮಸ್ಯೆಯೇ? ಯಾಕೆ ನಮ್ಮ ರಾಜಕೀಯದ ಡಿಸ್-ಕೋರ್ಸ್ ಇಂತಹ ಸಣ್ಣ ವಿಷಯಗಳತ್ತ ಗಿರಕಿ ಹೊಡೆಯುತ್ತಿದೆ? ಕನ್ನಡಿಗರ ಮುಂದೆ ದೊಡ್ಡ ಸಮಸ್ಯೆಗಳು, ಸವಾಲುಗಳೇ ಇಲ್ಲವೇ? ರೈಲು, ರಸ್ತೆ, ಅನುದಾನ, ತೆರಿಗೆ ಹಂಚಿಕೆ, ಕಲಿಕೆ, ನೆರೆ ಪರಿಹಾರ, ಬರ ಪರಿಹಾರ, ನದಿ ನೀರಿನ ಹಂಚಿಕೆ, ಗಡಿ ವಿವಾದ ಹೀಗೆ ಕನ್ನಡಿಗರ ಬದುಕನ್ನು ನೇರವಾಗಿ ತಟ್ಟುವ ಹತ್ತಾರು ಸಮಸ್ಯೆಗಳು ಯಾಕೆ ನಮ್ಮ ಚುನಾವಣೆಯ ವೇದಿಕೆಯ ಮೇಲೆ ಈ ಹೊತ್ತಲ್ಲಿ ಅತ್ಯಂತ ಗಟ್ಟಿಯಾಗಿ ಕೇಳಿಸುತ್ತಿಲ್ಲ, ಪ್ರಸ್ತುತವಾಗಿ ಕಾಣಿಸುತ್ತಿಲ್ಲ? 
ಕಾವೇರಿ ಅನ್ಯಾಯ ಟ್ರಿವಿಯಲ್ ಆದ ವಿಷಯವೇ?
ಬಹಳ ಹಿಂದೆ ಹೋಗಬೇಕಿಲ್ಲ. ಬರೀ ಒಂದು ತಿಂಗಳ ಹಿಂದೆ ಮುಂದೆಂದೂ ಸರಿಪಡಿಸಿಕೊಳ್ಳಲಾಗದ ರೀತಿಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯ ಐತೀರ್ಪಿನಲ್ಲಾದ ಅನ್ಯಾಯವನ್ನು ಕೇಂದ್ರದ ಕಾಂಗ್ರೆಸ್ ಸರ್ಕಾರ ಗೆಜೆಟ್ಟಿನಲ್ಲಿ ಪ್ರಕಟಿಸಿದೆ. ಕಾವೇರಿ ಕೊಳ್ಳದ ಮೇಲೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗೆ ಬೀರಲಿದೆ ಅನ್ನುವ ಚಿಕ್ಕ ಕಲ್ಪನೆಯೂ ಕೊಳ್ಳದ ರೈತರಲ್ಲಿ, ಜನಸಾಮಾನ್ಯರಲ್ಲಿ ಇದ್ದಂತಿಲ್ಲ.  ಈಗಾಗಲೇ ಕೊಳ್ಳದ ರೈತರು ಕಬ್ಬು ಬೆಳೆಯಬೇಡಿ, ಅದೇ ನೀರನ್ನು ಬೆಂಗಳೂರು ಎಂಬ ವಲಸಿಗರ ಸ್ವರ್ಗಕ್ಕೆ ಮೀಸಲಿಡಿ ಅನ್ನುವ ಮಾತುಗಳು ಕೇಂದ್ರದ ಅಧಿಕಾರಿಗಳಿಂದ ಕೇಳಿಬರುತ್ತಿವೆ. ಇಂತಹ ಸಂದರ್ಭ ಬಂದಾಗಲೂ  ಕಾವೇರಿಯ ವಿಷಯದ ಬಗ್ಗೆ ರಾಜಕೀಯವಾಗಿ ಮಾತನಾಡೋದೇ ತಪ್ಪು ಅನ್ನುವ ಮಾತನ್ನು ಮಾಧ್ಯಮದ ಹಲವು ವಲಯಗಳೇ ಹೇಳಿದ್ದನ್ನು ಕಂಡೆವು. ಜೆಡಿಎಸ್ ಈ ವಿಷಯವಾಗಿ ಮಾತನಾಡಿದರೆ ಅದು ರಾಜಕೀಯ ಮಾಡುತ್ತಿದೆ ಅನ್ನುವ ಆರೋಪ ಕಂಡೆವು.  ಇಂತಹ ಬದುಕಿನ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡದೇ ಇನ್ನಾವ ವಿಷಯದಲ್ಲಿ ಮಾಡಬೇಕು? ಸಾಹಿತ್ಯ ಸಮ್ಮೇಳನದಲ್ಲಿ ಬಿಸಿಲು ಜಾಸ್ತಿ ಇತ್ತು ಅನ್ನುವ ವಿಷಯಕ್ಕೆ ರಾಜಕೀಯ ಮಾಡಬೇಕೇ? ನಮ್ಮ ರಾಜಕೀಯವಾದ ಆದ್ಯತೆಗಳಿಗೆ ಏನಾಗಿದೆ? ನಾಳೆಯ ಭವಿಷ್ಯವನ್ನೇ ನಿರ್ಧರಿಸುವಂತಹ ವಿಷಯಗಳು ಯಾಕೆ ಒಂದು ರೀತಿಯಲ್ಲಿ ಟ್ರಿವಿಯಲೈಸ್ ಆಗಿವೆ? ಕಾವೇರಿ ಅನ್ಯಾಯ ಈ ಹೊತ್ತಿನ ಚುನಾವಣೆಯ ಚರ್ಚೆಯಲ್ಲಿ ಅತ್ಯಂತ ಮುಂದಿರಬೇಕಿದ್ದ ಪ್ರಶ್ನೆಯಾಗಿತ್ತಲ್ಲವೇ?  ಹಾಗಿದ್ದರೆ ನಮ್ಮ ರಾಜಕಾರಣಿಗಳು ಇಂತಹ ಬದುಕಿನ ವಿಷಯಗಳನ್ನು ಕೈ ಬಿಟ್ಟು ಟಿಕೆಟ್ ಹಂಚಿಕೆಯ ಸುತ್ತಲೇ ತಲೆ ಕೆಡಿಸಿಕೊಳ್ಳುವಂತಾಗಲು ಕಾರಣ ಯಾರು? "ಅಯ್ಯೋ ಬಿಡಿ ಸಾರ್, ರಾಜಕಾರಣಿಗಳೆಲ್ಲ ಸರಿಯಿಲ್ಲ" ಅಂತ ಸಿನಿಕರಾಗಿ ಇದಕ್ಕೆಲ್ಲ ನಮ್ಮ ರಾಜಕಾರಣಿಗಳನ್ನು ದೂರುವುದೇ ಪರಿಹಾರವೇ? 
ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆ
ಇಲ್ಲ, ಸಮಸ್ಯೆ ಅವರಲ್ಲ. ರಾಜಕಾರಣಿಗಳು ಯಾವತ್ತು playing to the gallery ಅನ್ನುವಂತೆಯೇ ವರ್ತಿಸುವವರು, ಒಂದು ವಿಷಯ ಮುಖ್ಯವಾದದ್ದು ಎಂದು ಜನರಿಗೂ ಅನ್ನಿಸಿದೆ ಎಂದಾಗದ ಹೊರತು ಅವರೆಂದೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳರು. ಕರ್ನಾಟಕಕ್ಕೆ ಆಗುತ್ತಿರುವ ಸಾಲು ಸಾಲು ಅನ್ಯಾಯಗಳನ್ನು ಕನ್ನಡಿಗ ಅನ್ನುವ ಐಡೆಂಟಿಟಿ ಇಟ್ಟುಕೊಂಡು ನೋಡುವ ರಾಜಕೀಯ ಪ್ರಜ್ಞೆ ಇಲ್ಲದಿರುವುದು, ನಮ್ಮನ್ನು ತಟ್ಟುವ ಎಲ್ಲ ವಿಷಯಗಳಲ್ಲೂ ಕರ್ನಾಟಕದ ಹಿತಾಸಕ್ತಿ ಅನ್ನುವುದು ಎಲ್ಲಕ್ಕಿಂತ ಮುಖ್ಯವಾದದ್ದು ಅನ್ನುವ ನ್ಯಾರೆಟಿವ್ ನಮ್ಮ ಸಮಾಜದಲ್ಲಿ ಇಲ್ಲದಿರುವುದು ಇಂತಹ ವಿಷಯಗಳಿಗೆ ಸ್ಪಂದಿಸಲೇಬೇಕು ಅನ್ನುವ ಒತ್ತಡವನ್ನು ನಮ್ಮನ್ನು ಆಳುವವರ ಮೇಲೆ ತಂದಿಲ್ಲ ಅನ್ನಬಹುದು. ಜಾತಿ ರಾಜಕೀಯ, ಹಣ, ಹೆಂಡದ ಲೆಕ್ಕಾಚಾರದಲ್ಲೇ ಚುನಾವಣೆ ಗೆಲ್ಲಬಹುದು ಅಂತಿದ್ದಾಗ ಬದುಕಿನ ವಿಷಯಗಳತ್ತ ಆಳುವವರಿಗೆ ಇರಬೇಕಾದ ಗಮನ ಹೇಗೆ ತಾನೇ ಇದ್ದೀತು? ದೆಹಲಿಯವರು ಏನ್ ಅಂದ್ಕೊತಾರೆ, ಇನ್ನಾರೋ ಏನ್ ಅಂದ್ಕೊತಾರೆ ಅಂತ ಯೋಚಿಸುವುದನ್ನ ಬಿಟ್ಟು ನಮ್ಮ ಬದುಕಿನ ವಿಷಯಗಳು ಬಂದಾಗ ನಮ್ಮ ಹಿತ ಕಾಯುವ ರಾಜಕಾರಣವೇ ಸರಿಯಾದದ್ದು, 
ಕರ್ನಾಟಕ ಕೇಂದ್ರಿತ ರಾಜಕಾರಣವೇ rational ಆದದ್ದು ಅನ್ನುವ ದಿಟ ಕನ್ನಡಿಗರಲ್ಲಿ ಕಂಡಾಗಲೇ ಆಳುವವರು ನಮ್ಮ ಹೊಣೆ ಹೊತ್ತಾರು !  

ಪ್ರಾದೇಶಿಕ ಚಿಂತನೆ ಅನ್ನುವ ಸಿಸ್ಟಮಿಕ್ ಕರೆಕ್ಷನ್ !
ಇವತ್ತಿನ ಈ ಚುನಾವಣೆಯ ಸಂದರ್ಭದಲ್ಲಿ ಭಾರತ ಒಕ್ಕೂಟದಲ್ಲಿ ಕರ್ನಾಟಕಕ್ಕೆ ರೈಲು, ರಸ್ತೆ, ಅನುದಾನ, ತೆರಿಗೆ ಹಂಚಿಕೆ, ಕಲಿಕೆ, ನೆರೆ, ಬರ ಪರಿಹಾರ, ನದಿ ನೀರಿನ ಹಂಚಿಕೆ, ಗಡಿ ವಿವಾದ ಹೀಗೆ ಎಲ್ಲ ವಿಷಯಗಳಲ್ಲೂ ನ್ಯಾಯಸಮ್ಮತ ಅವಕಾಶಗಳು ಸಿಗುವಂತಾಗಲು ಕರ್ನಾಟಕ ಕೇಂದ್ರಿತವಾದ ಚಿಂತನೆ ಇರುವ ಪಕ್ಷಗಳಿಗೆ ಶಕ್ತಿ ತುಂಬುವ ಕೆಲಸ ಕನ್ನಡಿಗರು ಮಾಡಬೇಕಿದೆ. ಇಡೀ ಭಾರತ ಒಕ್ಕೂಟದ ಹೆಚ್ಚಿನ ರಾಜ್ಯಗಳಲ್ಲಿ ಅಲ್ಲಿನ ಏಳಿಗೆಗೆ ಪ್ರದೇಶದ ಆಶೋತ್ತರಗಳಿಗೆ ಸ್ಪಂದಿಸಬಲ್ಲ ಪಕ್ಷವೇ ಮುಖ್ಯ ಅನ್ನುವ ವಾದಕ್ಕೆ ಬೆಂಬಲ ಸಿಗುತ್ತಿರುವಾಗ, ಕೇಂದ್ರದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಿಂದ ಆಗಿರುವ ತೊಡಕುಗಳಿಗೆ ತಾನೇತಾನಾದ ಕರೆಕ್ಶನ್ ಅನ್ನುವಂತೆ ಪ್ರಾದೇಶಿಕ ಚಿಂತನೆ ಬಲಗೊಳ್ಳುತ್ತಿರುವಾಗ ಕರ್ನಾಟಕ ಆ ದಿಕ್ಕಿನಲ್ಲಿ ಸಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆಯ ಚರ್ಚೆಯ ಡಿಸ್-ಕೋರ್ಸ್ ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆಯನ್ನು ಕಟ್ಟಿಕೊಳ್ಳುವತ್ತ, ಕನ್ನಡಿಗ ಅನ್ನುವ ಗುರುತಿಗೆ ರಾಜಕೀಯದ ಬಲ ಪಡೆದುಕೊಳ್ಳುವತ್ತ ಸಾಗಬೇಕಿದೆ.  ಈ ನಿಟ್ಟಿನಲ್ಲಿ ಮಾಧ್ಯಮಗಳ, ಚಿಂತಕರ ಮತ್ತು ಕರ್ನಾಟಕ ಪರವಾದ ಎಲ್ಲ ಶಕ್ತಿಗಳ ಪಾತ್ರ ಹಿರಿದಿದೆ.
ಸರಣಿ ಬರಲಿದೆ: ಚುನಾವಣೆಗೆ ಇನ್ನು ಕೆಲವು ವಾರಗಳಿರುವುದರಿಂದ ಅಲ್ಲಿಯವರೆಗೆ ಕೇಂದ್ರ ರಾಜ್ಯದ ಕೊಡು-ಕೊಳ್ಳುವಿಕೆ, ಕರ್ನಾಟಕಕ್ಕಾದ ಅನ್ಯಾಯಗಳು, ಒಕ್ಕೂಟದಲ್ಲಿ ಕರ್ನಾಟಕ ಪಡೆದುಕೊಂಡಿದ್ದೇನು, ಕಳೆದುಕೊಂಡಿದ್ದೇನು ಅನ್ನುವ ಸುತ್ತ ಸರಣಿ ಬರಹಗಳನ್ನು ಬರೆಯಲಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ.

2 ಕಾಮೆಂಟ್‌ಗಳು:

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !