ಗುರುವಾರ, ಡಿಸೆಂಬರ್ 31, 2009

ಮುತ್ತಿನ ಹಾರದ ನೂರೊಂದು ನೆನಪು

ನಿನ್ನೆ ಬೆಳಿಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಸಾವನ್ನಪ್ಪಿದ ಸುದ್ಧಿ ಕೇಳಿ ಕೆಲ ಕಾಲ ತಲೆನೇ ಓಡಲಿಲ್ಲ. ಟಿ.ವಿಯಲ್ಲಿ ಸುದ್ಧಿ ನೋಡುತ್ತಾ "ಛೇ, ಇಷ್ಟು ಬೇಗ ಹೀಗಾಗಬಾರದಿತ್ತು" ಅಂದುಕೊಂಡೆ. ಹಾಗೆಯೇ ಮನಸ್ಸು ನೆನಪಿನಾಳಕ್ಕೆ ಇಳಿದು ನಾನು ಓದಿ, ಬೆಳೆದ ಧಾರವಾಡ ಜಿಲ್ಲೆಯ ಕಲಘಟಗಿ ಅನ್ನುವ ಊರಿನಲ್ಲಿ ವಿಷ್ಣು ಸಿನೆಮಾ ನೋಡಲು ಪಟ್ಟ ಹರಸಾಹಸಗಳನ್ನು ನೆನಪಿಗೆ ತಂದಿತು.

ನನ್ನೂರಿನ ಒಂದೇ ಒಂದು ಥಿಯೇಟರ್ ಶಿವಗಂಗಾ !
ಅದು ಇಸವಿ 1990-91 ಅನ್ನಿಸುತ್ತೆ, ಮುತ್ತಿನ ಹಾರ ಚಿತ್ರ ಬಿಡುಗಡೆಯಾಗಿ ಎಲ್ಲೆಲ್ಲೂ ಅದೇ ಚಿತ್ರದ ಸುದ್ಧಿ. ನನ್ನ ಊರಲ್ಲಿ ಇದ್ದ ಒಂದೇ ಒಂದು ಥಿಯೇಟರ್ ಅಂದ್ರೆ ಶಿವಗಂಗಾ ಚಿತ್ರ ಮಂದಿರ. ಬಾಲ್ಕನಿಯ ಕಲ್ಲಿನ ಸೀಟಿಗೆ ಆಗ 5 ರೂಪಾಯಿ ಚಾರ್ಜ್. ಹೆಚ್ಚಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಬಿಡುಗಡೆಯಾದ ಆರು ತಿಂಗಳು - ಒಂದು ವರ್ಷದ ಮೇಲಷ್ಟೇ ಕನ್ನಡ ಚಿತ್ರಗಳು ನನ್ನೂರಿಗೆ ಬರ್ತಾ ಇದ್ದಿದ್ದು, ಅಂತಾದ್ರಲ್ಲಿ ಮುತ್ತಿನ ಹಾರ ಕೂಡಾ ಬೇರೆಡೆ ಬಿಡುಗಡೆಯಾದ ಆರು ತಿಂಗಳ ನಂತರ ನನ್ನೂರಿನ ಶಿವಗಂಗಾ ಚಿತ್ರ ಮಂದಿರಕ್ಕೆ ಬಂದಿತ್ತು. ಆದ್ರೆ ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ನೋಡಲು 5 ರೂಪಾಯಿ ಅಪ್ಪನ್ನ ಹತ್ತಿರ ಕೇಳಲು ಭಯ. ಆಗಾಗ ಅಮ್ಮನಿಂದ 50 ಪೈಸೆ ಚಿಕ್ಕಿ, ಕಡ್ಲಿ, ಪಾಪಡಿ, ಬೊಂಬಾಯ್ ಮೀಠಾಯಿ ತಿನ್ನಲು ಸಿಗ್ತಾ ಇತ್ತು. ದಿನವೂ 50 ಪೈಸೆ ಇಸ್ಕೊಂಡು 5 ರೂಪಾಯಿ ಒಟ್ಟುಗೂಡಿಸಲು ಕಮ್ಮಿ ಅಂದ್ರೂ 10 ದಿನ ಆದ್ರೂ ಬೇಕು. ಆದ್ರೆ ನಮ್ಮೂರಿನ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಓಡುತ್ತಾ ಇದ್ದದ್ದೇ 1 ವಾರ ಮಾತ್ರ ( ಬರೀ 25,000 ಜನಸಂಖ್ಯೆಯುಳ್ಳ ಚಿಕ್ಕ ಊರು ಅದಾಗಿದ್ದದ್ದು ಇದಕ್ಕೆ ಕಾರಣವಾಗಿತ್ತು). ಈ ಚಾನ್ಸ್ ಮಿಸ್ ಮಾಡ್ಕೊಂಡ್ರೆ ಮುತ್ತಿನ ಹಾರ ನೋಡಲು ಸಾಧ್ಯವೇ ಇಲ್ಲ ಅನ್ನಿಸ್ತಾ ಇತ್ತು. ಆಗಲೇ ಒಂದಿಬ್ರು ಗೆಳೆಯರು ಸಿನೆಮಾ ನೋಡಿ, ಅಲ್ಲಿನ ಯುದ್ಧದ ದೃಶ್ಯ, ಮಾಸ್ಟರ್ ಆನಂದನ ಅಭಿನಯ, ವಿಷ್ಣು ಅವರ ಅಭಿನಯದ ಬಗ್ಗೆ ಹೇಳಿ ನನ್ನಲ್ಲಿ ತಡೆದುಕೊಳ್ಳಲಾಗದ ಕಾತುರವಾಗಿತ್ತು. ಆಗ ನೆನಪಾದವನು ನನ್ನ ಗೆಳೆಯ ದೀಪಕ್ ರೇವಣಕರ್. ಅವ್ರ ತಂದೆ ಅಕ್ಕಸಾಲಿಗರಾಗಿದ್ದರಿಂದ ಅವನ ಹತ್ರ ನನಕ್ಕಿಂತ 4 ಪಟ್ಟು ಹೆಚ್ಚು ಪಾಕೆಟ್ ಮನಿ ಇರ್ತಾ ಇತ್ತು ( ಅಂದ್ರೆ 2 ರೂಪಾಯಿ :) ). ಅವನ ಹತ್ರ ಹೋಗಿ " ಲೇ ದೀಪ್ಯಾ,, ಒಂದು 4 ರೂಪಾಯಿ ಸಾಲ ಕೊಡಲೇ, ಮುಂದಿನ ವಾರ ಅಂದ್ರೆ ತೀರಿಸಿ ಬಿಡ್ತೆನಿ" ಅಂದೆ. ಅವನಿಗೆ ಏನ್ ಅನ್ನಿಸ್ತೋ ಒಂದೇ ಮಾತಿಗೆ ಕೊಟ್ಟು ಬಿಟ್ಟ. ಅದನ್ನೆತ್ತಿಕೊಂಡು ಶನಿವಾರ ಸಂಜೆ ಶೋಗೆ ಮುತ್ತಿನ ಹಾರ ಚಿತ್ರಕ್ಕೆ ಹೋಗೇ ಬಿಟ್ಟೆ. ಚಿತ್ರದಲ್ಲಿ ಮೇಜರ್ ಅಚ್ಚಪ್ಪನ ಮಗನ ಪಾತ್ರದಲ್ಲಿ ಮಾಸ್ಟರ್ ಆನಂದ "ವೀರರಾಜು" ಅನ್ನೋ ಪಾತ್ರ ಮಾಡಿದ್ರು. ಶತ್ರು ದೇಶದ ವಿಮಾನ ನೋಡಿ, ಅಮ್ಮ ಅನ್ನುತ್ತ ಸುಹಾಸಿನಿಯವರ ಹತ್ರ ಬರೋದ್ರೊಳಗೆ ಬಾಂಬ್ ದಾಳಿಗೆ ತುತ್ತಾಗಿ ವೀರರಾಜು ಸತ್ತಾಗ, ಅವನ ಮೃತ ದೇಹವನ್ನು ಉಸುಕಿನಲ್ಲೇ ಮಣ್ಣು ಮಾಡುವ ದೃಶ್ಯ ನೋಡಿ ಕಣ್ತುಂಬಿ ಬಂದಿತ್ತು. ಅದಾದ ಮೇಲೆ, ವಿಷ್ಣು ತನ್ನ ಮಗನ ಸಮಾಧಿಯತ್ತ ಬಂದು "ವೀರರಾಜು" ಅಂತ ಅಳೊ ದೃಶ್ಯ ನೋಡಿ ಇಡೀ ಚಿತ್ರ ಮಂದಿರ ಕಣ್ಣೀರುಗರೆದಿತ್ತು. ಅವರ ಸುಪ್ರಭಾತ, ಬಂಧನ, ಯಜಮಾನ ಮುಂತಾದ ಚಿತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಹಳ್ಳಿಜನರು ಚಕ್ಕಡಿ ಮಾಡಿಕೊಂಡು ಸೆಕೆಂಡ್ ಶೋ ಗೆ ಬರುತ್ತಿದ್ದ ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ಇದೆಲ್ಲ ನಿನ್ನೆ ವಿಷ್ಣು ಸಾವಿನ ಸುದ್ಧಿ ಕೇಳಿದಾಗ ನೆನಪಾಯ್ತು.ಹಲವಾರು ಬಾರಿ, ನಾಡ ಪರ ಹೋರಾಟಗಳ ವಿಷಯದಲ್ಲಿ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ಸಾಕಷ್ಟು ಅಸಮಾಧಾನವಿದ್ದರೂ, ಒಬ್ಬ ಕಲಾವಿದನಾಗಿ ವಿಷ್ಣು ಯಾವತ್ತು ನಮ್ಮೆಲ್ಲರ ನೆನಪಲ್ಲಿ ಹಚ್ಚ ಹಸಿರಾಗಿರುತ್ತಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !