ಇತ್ತಿಚೆಗೆ ತಂದೆ-ತಾಯಿಯೊಂದಿಗೆ ಶಿರಡಿ ಪ್ರವಾಸಕ್ಕೆಂದು ಹೋಗಿದ್ದೆ. ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಬಗ್ಗೆ ತುಂಬಾ ಕೇಳಿದ್ದೆ. ಅಲ್ಲಿನ ಜನ ಜೀವನ ಹೇಗಿರಬಹುದು, ಕರ್ನಾಟಕಕ್ಕಿಂತ ಅವರು ಯಾವ ಯಾವ ವಿಷ್ಯದಲ್ಲಿ ಮುಂದಿದ್ದಾರೆ, ಅಲ್ಲಿನ ಮೂಲಭೂತ ಸೌಕರ್ಯ ಹೇಗಿರಬಹುದು ಅನ್ನುವ ಕುತೂಹಲ ನನ್ನಲ್ಲಿತ್ತು. ನಾನು ಪಯಣಿಸಿದ ದಕ್ಷಿಣ-ಪಶ್ಚಿಮ ಮಹಾರಾಷ್ಟ್ರ ಭಾಗದ ಕೊಲ್ಲಾಪುರ, ಸತಾರಾ, ಪುಣೆ, ನಾಶಿಕ್, ಅಹ್ಮದ್ ನಗರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಒಬ್ಬ ಪ್ರವಾಸಿಯಾಗಿ ನನಗೆ ಕಂಡ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು.
ಬೆಳಗಾವಿ ದಾಟಿದ ತಕ್ಷಣ ಕನ್ನಡ ಮಾಯ !

ಬೆಳಗಾವಿ ನಗರದಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಹಾರಾಷ್ಟ್ರದ ಗಡಿಗಿರುವ ದೂರ ಸುಮಾರು 80 ಕಿ.ಮೀ. ದಾರಿಯಲ್ಲಿ ಬರುವ ಸಂಕೇಶ್ವರ, ನಿಪ್ಪಾಣಿ, ರಾಣಿ ಚೆನ್ನಮ್ಮಳ ಹುಟ್ಟೂರು ಕಾಕತಿ ( ಇಲ್ಲಿ ಅಲ್ಲಲ್ಲಿ ಕನ್ನಡ ಬಾವುಟ ಹಾರಾಡ್ತಾ ಇತ್ತು),, ಹೀಗೆ ದಾರಿಯುದ್ದಕ್ಕೂ ಕನ್ನಡ, ಇಂಗ್ಲಿಷ್ ಜೊತೆ ಮರಾಠಿ ನಾಮಫಲಕಗಳು ರಾರಾಜಿಸುತ್ತಿದ್ದವು. ಗೆಳೆಯರೊಬ್ಬರ ಜೊತೆ ಮಾತನಾಡುವಾಗ ಅವರು ಹೇಳಿದ್ದು, ಇತ್ತಿಚೆಗೆ ಕನ್ನಡ ಪರ ಸಂಘಟನೆಗಳ ನಿರಂತರ ಪ್ರಯತ್ನದಿಂದ ಇಲ್ಲಿನ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಹೆಚ್ಚಾಗಿದ್ದು, ಅದಾದ ನಂತರವಷ್ಟೇ ಈ ಫಲಕಗಳಲ್ಲಿ ಕನ್ನಡಕ್ಕೂ ಸ್ಥಾನ ಸಿಕ್ಕಿದ್ದು, ಈ ಮುಂಚೆ ಕನ್ನಡವನ್ನು ಕೇಳುವವರೇ ಇರಲಿಲ್ಲವೆಂದು. ಅಚ್ಚರಿಯೆಂದರೆ, ಒಮ್ಮೆ ಮಹಾರಾಷ್ಟ್ರ ಗಡಿ ದಾಟಿದೊಡನೆ ಒಂದೇ ಒಂದು ಕನ್ನಡ ನಾಮಫಲಕಗಳು ಕಾಣಿಸದು ! ದಾರಿಯಲ್ಲಿ ಹಲವು ಚಿಕ್ಕ ಊರುಗಳ ಹೆಸರುಗಳು ಕನ್ನಡಮಯವಾಗಿದ್ದದ್ದು ಮಹಾರಾಷ್ಟ್ರಕ್ಕಿರುವ ಕನ್ನಡ ಇತಿಹಾಸವನ್ನು ಸಾರುತ್ತಿದ್ದವು, ಆದರೆ ಇವತ್ತು ಅಲ್ಲೆಲ್ಲೂ ಕನ್ನಡ ಕಾಣಿಸದು ಅನ್ನುವುದು ಅಷ್ಟೇ ಕಟುವಾದ ಸತ್ಯ.
ಹೇಗಿದೆ ಪಶ್ಚಿಮ ಮಹಾರಾಷ್ಟ್ರ ?

ಹೀಗೆ ಶುರುವಾದ ನನ್ನ ಮಹಾರಾಷ್ಟ್ರ ಪ್ರವಾಸದಲ್ಲಿ ಮೊದಲು ನನ್ನ ಗಮನಕ್ಕೆ ಬಂದಿದ್ದು, ಅಲ್ಲಿನ ನುಣುಪು ನುಣುಪು ರಸ್ತೆಗಳು. ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಬಹುದಾದಷ್ಟು ಚೆನ್ನಾಗಿರೊ ರಾಷ್ಟ್ರೀಯ ಹೆದ್ದಾರಿ ನಿಜಕ್ಕೂ ಅದ್ಭುತವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜೊತೆ ಮಹಾರಾಷ್ಟ್ರ PWD ಯವರು ಈ ಯೋಜನೆಯಲ್ಲಿ ಕೈ ಜೋಡಿಸಿದ್ದರಿಂದ ಅಲ್ಲಿ ಸ್ವರ್ಣ ಪಥ ಹೆದ್ದಾರಿ ಮುಕ್ತಾಯವಾಗಿ ಆಗಲೇ ಜನಬಳಕೆಯಲ್ಲಿದೆ. ಕರ್ನಾಟಕದಲ್ಲಿ ಮಾತ್ರ ಇದು ಇನ್ನೂ ಕುಂಟುತ್ತಾ ಸಾಗಿದೆ. ಬೆಳಗಾವಿಯಿಂದ ಹೆಚ್ಚು ಕಮ್ಮಿ ಪುಣೆಯವರೆಗೂ ಪ್ರತಿ 20-30 ಕಿ.ಮೀ ಗೊಂದರಂತಿರುವ ಸಕ್ಕರೆ ಕಾರ್ಖಾನೆಗಳು, ಹಾಲು ಉತ್ಪಾದನಾ ಘಟಕಗಳು, ಜೊತೆಗೆ ಅಲ್ಲಿ ಹರಿಯುವ ಕೃಷ್ಣಾ ನದಿ ದಕ್ಷಿಣ-ಪಶ್ಚಿಮ ಮಹಾರಾಷ್ಟ್ರ ಭಾಗದ ರೈತರ ಬಾಳನ್ನು ಹಸನಾಗಿಸಿದೆ. ಮಾರನೇ ದಿನ ಪುಣೆಯಿಂದ ಹೊರಟು ತಲುಪಿದ್ದು ನಾಶಿಕ್. ಪಂಚವಟಿ, ತ್ರೈಯಂಬಕೇಶ್ವರ ಸೇರಿದಂತೆ ಹಲವು ಯಾತ್ರಾ ಸ್ಥಳಗಳನ್ನುಳ್ಳ, ಶಿರಡಿ, ಶನಿ ಶಿಂಗಣಾಪುರ ದಂತಹ ಯಾತ್ರಾ ಸ್ಥಳಗಳಿಗೆ ಹತ್ತಿರ ಇರುವ ಕಾರಣಕ್ಕೆ ನಾಶಿಕ್ ನಗರಕ್ಕೆ city of pilgrimage ಅನ್ನುವ ಹೆಸರು ಕೂಡಾ ಇದೆ.

ಪ್ರವಾಸೋದ್ಯಮ ಇಲ್ಲಿನ ಒಂದು ಮುಖ್ಯ ಆದಾಯ ಮೂಲವೂ ಹೌದು. ಈ ಭಾಗದಲ್ಲಿ ಕೂಡ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಕಂಡು ಬಂದವು. ಇಲ್ಲಿಂದ ಶಿರ್ಡಿವರೆಗಿನ ರಾಜ್ಯ ರಸ್ತೆಯೂ ಚೆನ್ನಾಗಿತ್ತು. ಪುಣೆ, ನಾಶಿಕ್ ದಂತಹ ಎರಡನೇ ದರ್ಜೆಯ ಊರಿನಲ್ಲಿ ಕಂಡ ಅಗಲವಾದ ರಸ್ತೆಗಳು ಮೈಸೂರನ್ನು ನೆನೆಯುವಂತೆ ಮಾಡಿದವು. ಶಿರ್ಡಿ, ಶನಿಶಿಂಗಣಾಪುರದ ಭೇಟಿಯ ನಂತರ ಅಹ್ಮದ್ ನಗರದ ಮೂಲಕ ಪುಣೆಯತ್ತ ಪಯಣಿಸಿದೆವು. ಅಹ್ಮದ್ ನಗರದಿಂದ ಪುಣೆಗಿರುವ 4 ಸಾಲಿನ ರಾಜ್ಯ ಹೆದ್ದಾರಿ 60 ಎಷ್ಟು ಅದ್ಭುತವಾಗಿತ್ತೆಂದರೆ 120 ಕಿ.ಮೀ ದೂರವನ್ನು ಕೇವಲ 90 ನಿಮಿಷದಲ್ಲಿ ಕ್ರಮಿಸಿದೆವು ! ಈ ಭಾಗದಲ್ಲಿನ ಅಭಿವೃದ್ಧಿಯನ್ನು ಗಮನಿಸಿ, ಅಲ್ಲಿನ ಕೆಲ ಸ್ಥಳೀಯರನ್ನು ಮಾತನಾಡಿಸಿದಾಗ ಕೇಳಿ ಬಂದ ಅಂಶವೆಂದರೆ ಇದಕ್ಕೆಲ್ಲ ಕಾರಣ ಆ ಭಾಗದ ನೇತಾರರು. ಛಗನ್ ಭುಜಬಲ್, ಆರ್.ಆರ್.ಪಾಟೀಲ್, ಶರದ್ ಪವಾರ್ ಮುಂತಾದ ನಾಯಕರು ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಅನ್ನುವುದು. ಅಲ್ಲಿ ಜಾತಿ ಜೊತೆ, ಕೆಲಸವನ್ನೂ ಮಾಡಿ ರಾಜ್ಯ ಮಟ್ಟದ ನಾಯಕರಾದರೇ, ಕರ್ನಾಟಕದಲ್ಲಿ ಬರೀ ಜಾತಿ ಆಧಾರದ ಮೇಲೆ ಪ್ರಭಾವಿ ಮುಖಂಡರಾಗೋದು ಎರಡು ರಾಜ್ಯಗಳ ನಡುವಿನ ಇನ್ನೊಂದು ವ್ಯತ್ಯಾಸ.
ಹಿಂದಿ ಹೇರಿಕೆಗೆ ಕೊನೆಯಿಲ್ಲ !

ಮಹಾರಾಷ್ಟ್ರದುದ್ದಕ್ಕೂ ಕಂಡ ಇನ್ನೊಂದು ಅಂಶವೆಂದರೆ ಹಿಂದಿ ಅಲ್ಲಿ ಹೊಕ್ಕಿರುವ ರೀತಿ. ಲಿಪಿ, ನುಡಿ ಎರಡರಲ್ಲೂ ಹಿಂದಿಗೆ ಸಾಕಷ್ಟು ಸಾಮ್ಯತೆ ಇರುವ ಕಾರಣದಿಂದಲೋ ಏನೋ ಮರಾಠಿಗರಲ್ಲಿ ಹೆಚ್ಚಿನವರು ಹಿಂದಿ ಹೇರಿಕೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ಸಿಕ್ಕ ಅತಿ ದೊಡ್ಡ ನಿದರ್ಶನವೆಂದರೆ ಸುಮಾರು 1500 ಕಿ.ಮೀ ಮಹಾರಾಷ್ಟ್ರದಲ್ಲಿ ಓಡಾಡಿದರೂ, ಕೊಲ್ಲಾಪುರದ ಒಂದು ಚಿತ್ರಮಂದಿರ ಬಿಟ್ಟರೆ, ಬೇರೆಲ್ಲೂ ಮರಾಠಿ ಚಿತ್ರಗಳ ಒಂದೇ ಒಂದು ಪೋಸ್ಟರ್ ಕೂಡಾ ಕಾಣಿಸಲಿಲ್ಲ. ಎಲ್ಲಿ ನೋಡಿದರೂ ಹಿಂದಿ ಚಿತ್ರಗಳ ಅಬ್ಬರ ! ಅಪೂರ್ವ ಇತಿಹಾಸ, ಸಂಸ್ಕೃತಿ, ಸಾಹಿತ್ಯದ ಹಿನ್ನೆಲೆ ಇರುವ ಮರಾಠಿಗೆ, 10 ಕೋಟಿ ಮರಾಠಿಗರಿಗೆ ಒಂದು 100 ಕೋಟಿ ರೂಪಾಯಿ ಸಾಮರ್ಥ್ಯದ ಚಿತ್ರೋದ್ಯಮ ಕಟ್ಟಿಕೊಳ್ಳಲು ಆಗದಿರುವುದಕ್ಕೆ ಹಿಂದಿ ಒಪ್ಪಿಕೊಂಡಿರುವುದೇ ಕಾರಣವೆನ್ನುವುದು ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು. ಕನ್ನಡ ಚಿತ್ರೋದ್ಯಮ ಸುಮಾರು 250 ಕೋಟಿ ಸಾಮರ್ಥ್ಯದ ಉದ್ದಿಮೆಯಾಗಿದೆ. ಹಿಂದಿ ಹೇರಿಕೆಗೆ ಸೊಪ್ಪು ಹಾಕಿದ್ರೆ, ನಮ್ಮ ಚಿತ್ರೋದ್ಯಮವೂ ಅವನತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇದು ಚಿತ್ರೋದ್ಯಮದ ಮಾತಾದರೆ, ಇನ್ನೂ ಇಲ್ಲಿನ ಹೆಚ್ಚಿನ ಹೋಟೆಲ್, ವಸತಿ ಗೃಹಗಳಲ್ಲಿ ಕೆಲಸ ಮಾಡುವವರು ಬಿಹಾರ್, ಉತ್ತರ ಪ್ರದೇಶ್ ಮೂಲದ ವಲಸಿಗರು. ವಿಧರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಬರಗಾಲ, ಉದ್ಯೋಗ ಅವಕಾಶಗಳ ಕೊರತೆಯಿದೆ ಅನ್ನುವ ಮರಾಠಿಗರು ಇಲ್ಲೆಲ್ಲ ಬಂದು ಅದ್ಯಾಕೆ ಕೆಲಸ ಮಾಡುವುದಿಲ್ಲವೋ ಗೊತ್ತಿಲ್ಲ. ಇನ್ನೂ ಎಲ್ಲ
ದೇವಸ್ಥಾನಗಳಲ್ಲಿ ಇಂಗ್ಲಿಷ್, ಮರಾಠಿಗಳ ಜೊತೆ ಎಲ್ಲೆಡೆ ಹಿಂದಿಯಲ್ಲಿ ಫಲಕಗಳು ರಾರಾಜಿಸುತ್ತಿದ್ದವು ! ಒಮ್ಮೆ ಹಿಂದಿ ಒಪ್ಪಿಕೊಂಡ ಮೇಲೆ, ಹಿಂದಿ ವಲಸಿಗರು ಬರದೇ ಇರುತ್ತಾರೆಯೇ? ಸಂತೋಷದ ವಿಷಯವೆಂದರೆ, ಹಿಂದಿ ಹೇರಿಕೆಯ ವಿರುದ್ಧ, ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕು ಅನ್ನುವ ಕೂಗು ಕೊನೆಗೂ ಮಹಾರಾಷ್ಟ್ರದಲ್ಲಿ ಕೇಳಿ ಬರುತ್ತಿರುವುದು !
ಶಿವಾಜಿ ಮತ್ತು ಮರಾಠಿಗರು

ತಮ್ಮ ಭಾಷೆಯ ಮೇಲಿನ ಎಲ್ಲ ಆಕ್ರಮಣದ ನಡುವೆಯೂ, ಮರಾಠಿಗರನ್ನೆಲ್ಲ ಒಂದಾಗಿ ಬೆಸೆಯುತ್ತಿರುವುದು, ಅವರಲ್ಲಿ ಒಗ್ಗಟ್ಟು ಮೂಡಿಸುತ್ತಿರುವುದು ಅವರ ಇತಿಹಾಸದ ಅತೀ ಮುಖ್ಯ ಕೊಂಡಿಯಾದ ಶಿವಾಜಿ ಮಹಾರಾಜ. ಮಹಾರಾಷ್ಟ್ರ ಶುರುವಾದ ನಂತರ ಬರುವ ಕೊಲ್ಲಾಪುರ, ಸತಾರಾ, ಪುಣೆ, ಸಂಗಮನೇರ್, ನಾಶಿಕ್, ಅಹ್ಮದ ನಗರ ಹೀಗೆ ಪ್ರತಿ ಊರಲ್ಲಿ ಶಿವಾಜಿ ಮೂರ್ತಿ ಕಂಡು ಬಂತು. ಇತಿಹಾಸದಿಂದ, ಇತಿಹಾಸದಲ್ಲಿ ಸಾಧನೆಗೈದ ನಾಯಕರು ಒಂದು ಜನಾಂಗದ ಒಗ್ಗಟ್ಟು ಹೆಚ್ಚಿಸುವಲ್ಲಿ, ಅವರಲ್ಲಿ ಸ್ಪೂರ್ತಿ ಹೆಚ್ಚಿಸುವಲ್ಲಿ ಎಷ್ಟು ಸಹಕಾರಿಯಾಗಬಲ್ಲರು ಅನ್ನುವುದು ಮರಾಠಿಗರು ಮತ್ತು ಅವರ ಶಿವಾಜಿ ಆರಾಧನೆಯಿಂದ ಕಾಣಿಸುತ್ತೆ. ಕರ್ನಾಟಕದಲ್ಲೂ ಇದು ಹೆಚ್ಚಾಗಬೇಕು. ಕೃಷ್ಣ ದೇವರಾಯ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಒನಕೆ ಒಬವ್ವ, ಆಲೂರು ವೆಂಕಟರಾಯರು, ಡಾ.ರಾಜ್ ಕುಮಾರ್ ರಂತಹ ನಾಡು ಕಂಡ ಹೆಮ್ಮೆಯ ಪುತ್ರರ ಬಗ್ಗೆ ನಾಡಿನ ಮಕ್ಕಳಲ್ಲಿ ಹೆಚ್ಚು ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಇದು ಅವರಲ್ಲಿ ಇತಿಹಾಸ ಪ್ರಜ್ಞೆ, ನಮ್ಮ ನಾಡು-ನುಡಿಯ ಬಗ್ಗೆ ಹೆಮ್ಮೆ ತಾಳುವಲ್ಲಿ ಖಂಡಿತ ಸಹಾಯವಾಗಬಲ್ಲುದು.
ಮರಾಠಿ ಸಾಹಿತ್ಯಕ್ಕೆ ಈಗಲೂ ಇರುವ ಬೇಡಿಕೆ !

ಕೊಲ್ಲಾಪುರದ ದೇವಸ್ಥಾನದ ಬಾಗಿಲಲ್ಲೇ ಒಂದು ಪುಸ್ತಕ ಮಳಿಗೆ ಕಂಡು ಬಂತು. ಸಾಕಷ್ಟು ಜನಸಂದಣಿ ಇದ್ದ ಆ ಮಳಿಗೆ ಹೊಕ್ಕು ನೋಡಿದರೆ ಎಲ್ಲಿ ನೋಡಿದರೂ ಮರಾಠಿ ಪುಸ್ತಕಗಳ ರಾಶಿ !! ಅಷ್ಟೇ ಅಲ್ಲ, ಇಂಗ್ಲಿಷ್ ನಲ್ಲಿ ಬಂದ ಹಲವು ಪುಸ್ತಕಗಳ ಮರಾಠಿ ಅನುವಾದದ ಪ್ರತಿಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿಲಿದ್ದವು. Five point someone ಅನ್ನುವ ಕೃತಿ ಬರೆದ ಚೇತನ್ ಭಗತ್ ಅವರ ಎಲ್ಲ ಕೃತಿಗಳ ಮರಾಠಿ ಆವೃತ್ತಿಗಳು ಅಲ್ಲಿ ಮಾರಾಟಕ್ಕಿದ್ದವು. ಯುವ ಜನರನ್ನು ಗುರುಯಾಗಿಸಿಕೊಂಡು ಬರೆಯುತ್ತಿರುವ ಎಲ್ಲ ಇಂಗ್ಲಿಷ್ ಬರಹಗಾರರ ಕೃತಿಗಳನ್ನು ಮರಾಠಿಯಲ್ಲಿ ದೊರಕುವಂತೆ ಮಾಡುವ ಮೂಲಕ ಮರಾಠಿ ಯುವಕರನ್ನು ಮರಾಠಿ ಸಾಹಿತ್ಯದೆಡೆ ಸೆಳೆಯುವ ಪ್ರಯತ್ನ ನಡೆಯುತ್ತಾ ಇದೆ ಅನ್ನುವುದು ಪುಸ್ತಕದಂಗಡಿಯ ಮಾಲಿಕರ ಅಂಬೋಣ. ಇಂತಹ ಪ್ರಯತ್ನಗಳು ಕನ್ನಡದಲ್ಲೂ ಹೆಚ್ಚೆಚ್ಚು ನಡೆಯಬೇಕು.
ಕೊನೆ ಹನಿ
ಒಟ್ಟಾರೆ ಹಲವು ವಿಷ್ಯಗಳಲ್ಲಿ ಅವರು ನಮ್ಮಿಂದ ಕಲಿಯಬಹುದಾದ್ದು ಇದ್ದು, ಹಲವು ಬೇರೆ ವಿಷಯಗಳಲ್ಲಿ ಮರಾಠಿಗರು ನಮ್ಮಿಂದ ಮುಂದೆ ಇದ್ದು, ಅವರಿಂದ ನಮ್ಮ ನೆಲದ ನಾಯಕರು ಕಲಿಯಬಹುದಾದ್ದು ಇದೆ ಎಂದು ನನ್ನ ಅನಿಸಿಕೆ. ಕೇವಲ ನಾಲ್ಕು ದಿನಗಳ ಪ್ರವಾಸದಲ್ಲಿ ಒಂದು ಸ್ಥಳದ ಬಗ್ಗೆ ಕರಾರುವಾಕ್ ಅನ್ನುವಂತ ವರದಿ ಕೊಡಲು ಆಗದು ಅನ್ನುವುದು ನನ್ನ ಅರಿವಲ್ಲಿ ಇದ್ದರೂ, ಇಂತಹದೊಂದು ಪ್ರಯತ್ನವನ್ನು ಮಾಡಿದ್ದೇನೆ. ನನಗಿಂತಲೂ ಮಹಾರಾಷ್ಟ್ರವನ್ನು ಹೆಚ್ಚು ಕಂಡು-ಬಲ್ಲ ಹಲವರು ನಾನೆಲ್ಲಿ ಎಡವಿದ್ದೇನೆ ಅನ್ನುವುದನ್ನು ತೋರಿಸಿಕೊಟ್ಟು ನನ್ನನ್ನು ತಿದ್ದಬೇಕೆಂದು ಕೋರುತ್ತಾ ನನ್ನ ಮಿನಿ ಪ್ರವಾಸ ಕಥನ ಮುಗಿಸುತ್ತೇನೆ.