ಶನಿವಾರ, ಆಗಸ್ಟ್ 7, 2010

ಮಗುಗೆ 75 ವರ್ಷ, ಇನ್ನೂ ಅಮ್ಮಾನೇ ತಿಂಡಿ ಕೊಡಬೇಕು !

ಕಳೆದ ವಾರಾಂತ್ಯ "ಅ ಬ್ಯೂಟಿಫುಲ್ ಮೈಂಡ್" ಅನ್ನುವ ಚಿತ್ರ ನೋಡಿದೆ. 2001ರಲ್ಲಿ ಬಿಡುಗಡೆಯಾಗಿ 4 ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಈ ಚಿತ್ರದ ಬಗ್ಗೆ ತುಂಬಾ ಕೇಳಿದ್ದೆ, ಕೊನೆಗೂ ಕಳೆದ ವಾರ ನೋಡಿದೆ. ಚಿತ್ರ ನೋಡಿದ ಮೇಲೆ ಇದನ್ನು ನೋಡಲು ಇಷ್ಟು ತಡ ಮಾಡಿದೆನಲ್ಲ ಅನ್ನಿಸಿತು. ಪ್ರೋಫೆಸರ್ ಜಾನ್ ಫೋರ್ಬ್ಸ್ ನ್ಯಾಶ್ ಅನ್ನುವ ಅಮೇರಿಕದ ಗಣಿತ ತಜ್ಞನ ಜೀವನ ಕತೆಯನ್ನಾಧರಿಸಿದ ಈ ಚಿತ್ರ ನಿಜಕ್ಕೂ ಸಕತ್ motivating ಅನ್ನಬಹುದು!  

ಛಲದಂಕ ಮಲ್ಲ ಈ ನ್ಯಾಶ್ !

ಚಿತ್ರದ ವಿಶೇಷವೇ ಅದರ ನಾಯಕನ ಪಾತ್ರ. ಪ್ರೋಫೆಸರ್ ಜಾನ್ ನ್ಯಾಶ್ ಪಾತ್ರದಲ್ಲಿ ರಸೆಲ್ ಕ್ರೌ, ಅವರ ಜೀವನದ ಅತ್ಯುತ್ತಮ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇಲ್ಲಿ ನಾಯಕ ಎದುರಾಳಿಗಳನ್ನು ಹೊಡೆದುರಿಳಿಸುವ ಜಟ್ಟಿಯೂ ಅಲ್ಲ, ಹುಡುಗಿಯರನ್ನು ಚಾರ್ಮ್ ಮಾಡುವ ರೋಮ್ಯಾಂಟಿಕ್ ಯುವಕನೂ ಅಲ್ಲ, ಬದಲು, ತನಗಿರುವ ಪ್ಯಾರಾನಾಯ್ಡ್ ಸ್ಕಿಝೋಪ್ರೇನಿಯಾ (ಒಂತರಾ ಮಾನಸಿಕ ಅವ್ಯವಸ್ಥೆಯಿಂದ ಉಂಟಾಗೋ ಭ್ರಮೆ) ಕಾಯಿಲೆಯನ್ನು ಎದುರಿಸುತ್ತಲೇ, ಅದು ಉಂಟು ಮಾಡುವ ಭ್ರಮೆಯೊಂದಿಗೆ ಜೀವಿಸುತ್ತಲೇ ಮಾರ್ಕೆಟ್ ಎಕನಾಮಿಕ್ಸ್, ಕಂಪ್ಯೂಟಿಂಗ್, ಎವುಲಷನರಿ ಬೈಲಾಜಿ, ಅಕೌಂಟಿಂಗ್, ಮಿಲಿಟರಿ ಥಿಯೇರಿ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಬಳಸುವಂತ ಅನೇಕ ಸಂಶೋಧನೆಗಳನ್ನು ಮಾಡಿ 1994ರ ಸಾಲಿನ ಎಕಾನಾಮಿಕ್ಸ್ ಗಾಗಿ ಕೊಡ ಮಾಡುವ ನೋಬೆಲ್ ಪ್ರಶಸ್ತಿಯನ್ನು ಗೆದ್ದ ಸಾಧಕ. ಜೀವನದ ಅನೇಕ ಎಡರು-ತೊಡರುಗಳನ್ನು ಛಲದಿಂದ ಮೆಟ್ಟಿ ನಿಂತು ಸಾಧನೆಗೈದ ಈ ಸಾಧಕ ನಡೆದು ಬಂದ ದಾರಿ ಎಂತವರಿಗೂ ಸ್ಪೂರ್ತಿ ಕೊಡುವಂತದ್ದು. 

ಜಗತ್ತಿಡಿ ಹುಚ್ಚ ಎಂದು ಗೇಲಿ ಮಾಡಿದಾಗಲೂ, ಮದುವೆಯಾಗಿ ಕೆಲವೇ ವರ್ಷದಲ್ಲಿ ಮದುವೆ ಜೀವನವೇ ಹಳಿ ತಪ್ಪಿ ಹೋದರೂ, ಪ್ರತಿ ಕ್ಷಣ, ಪ್ರತಿ ದಿನ ಹುಚ್ಚು ಭ್ರಮೆಯ ಕಾಯಿಲೆಗೆ ಸಿಲುಕಿದಾಗಲೂ ಪ್ರೋ ಜಾನ್ ನ್ಯಾಶ್ ಅದೆಲ್ಲವನ್ನೂ ಮೀರಿ ಸಾಧನೆಯ ಮೆಟ್ಟಿಲೇರುವ ಕತೆ ಯಾವ fairy taleಗೂ ಕಡಿಮೆಯಿಲ್ಲ. ನಮ್ಮ ಅದೃಷ್ಟ ಅಂದರೆ 82ರ ವಯಸ್ಸಿನ ಈ ಅಜ್ಜ ಇಂದಿಗೂ ನಮ್ಮೊಂದಿಗಿದ್ದಾರೆ ಅನ್ನುವುದು.

ಈ ಸಿನೆಮಾ ನಮ್ಮ ನುಡಿಯಲ್ಲಿ ನೋಡುವ ಭಾಗ್ಯ ನಮಗಿಲ್ಲ !
ಈ ಸಿನೆಮಾ ನೋಡಿದಾಗ ಅನ್ನಿಸಿದ ಒಂದು ಮಾತೆಂದರೆ, ಸ್ಪೂರ್ತಿ ತುಂಬುವ, ಬದುಕು ಮುಗಿದೇ ಹೋಯಿತು ಎಂದು ಕುಸಿದು ಕೂರೋ ಹೊತ್ತಲ್ಲೂ ಖಾಯಿಲೆಗೆ, ಕಾಲನಿಗೆ ಸೆಡ್ಡು ಹೊಡೆದು ಮತ್ತೆ ಎದ್ದೇಳುವ ಇಂತಹ ಕತೆಗಳು ಶಾಲೆ-ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳನ್ನು ಅವರಿಗರ್ಥವಾಗೋ ನುಡಿಯಲ್ಲಿ ತಲುಪಬೇಕು. ನಮ್ಮ ನಾಡಿನಲ್ಲಿರೋ ಡಬ್ಬಿಂಗ್ ಮೇಲಿನ ನಿಷೇಧ ಇಂತಹ ಯಾವ ಪ್ರಯತ್ನವೂ ನಡೆಯದಂತೆ ಮಾಡಿದೆ ಅನ್ನುವುದು ನನ್ನ ಅನಿಸಿಕೆ. ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲಿರೋ ಮಕ್ಕಳಿಗೆ ಕಾರ್ಟೂನ್ ಕಾರ್ಯಕ್ರಮದಿಂದ ಹಿಡಿದು ಒಳ್ಳೆಯ ವಿಜ್ಞಾನ, ತಂತ್ರಜ್ಞಾನದ ವಿಷಯದವರೆಗೂ, ಒಂದು 3D ಚಿತ್ರದಿಂದ ಹಿಡಿದು ಒಂದು ಸೈನ್ಸ್ ಫಿಕ್ಷನ್ ಚಿತ್ರಗಳವರೆಗೂ ಜಗತ್ತಿನ ಯಾವ ಒಳ್ಳೆ ವಿಷಯವನ್ನು ಅವರ ನುಡಿಯಲ್ಲಿ ನೋಡುವ ಭಾಗ್ಯವಿಲ್ಲ. ಮಕ್ಕಳನ್ನು, ಯುವಕರನ್ನು ಚಿಕ್ಕ ವಯಸ್ಸಿನಲ್ಲೇ ಕನ್ನಡದಿಂದ ಡಿಸ್ ಕನೆಕ್ಟ್ ಮಾಡುವ ಇಂತಹ ಪ್ರಯತ್ನವೂ ಕನ್ನಡದ ಯುವಕರಲ್ಲಿ, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹುಟ್ಟು ಹಾಕುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ.

ಜಗತ್ತಿನ ಎಲ್ಲ ಒಳ್ಳೆಯ ವಿಷಯಗಳು ಕನ್ನಡಿಗರಿಗೆ ಕನ್ನಡದಲ್ಲಿ ಸಿಗಬೇಕು
ಇಡೀ ನಾಡಿನ ಶಾಲೆ-ಕಾಲೇಜುಗಳಲ್ಲಿ ನಡೆಯುವ ಕಲ್ಚರಲ್ ಫೆಸ್ಟ್ ಗಳನ್ನು ಒಮ್ಮೆ ಗಮನಿಸಿದರೆ ಸಾಕು, ಅಲ್ಲೆಲ್ಲ ಕನ್ನಡ ಹೇಗೆ ಮರೆಯಾಗುತ್ತಿದೆ ಅನ್ನುವುದು ಎಂತವರಿಗೂ ಕಂಡೀತು. ಅಲ್ಲೆಲ್ಲ ನೆಲೆ ಕಂಡಿರುವುದು ತೆಲುಗು, ತಮಿಳು, ಹಿಂದಿ, ಇಂಗ್ಲಿಶ್ ಹಾಡುಗಳು. ಕನ್ನಡವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದ ಯುವಕರಲ್ಲೇ ಅದರ ಬಗ್ಗೆ ಅನಾದರ ಹೆಚ್ಚಿದರೆ ಕನ್ನಡಕ್ಕೆ ಭವಿಷ್ಯವುಂಟೇ ಅನ್ನುವ ಆತಂಕ ಖಂಡಿತ ಆಗುತ್ತೆ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡುವುದು, ಒಳ್ಳೆ ಪ್ರಚಾರ ತಂತ್ರ ಅನುಸರಿಸುವುದು, ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳುವುದು ಎಷ್ಟು ಮುಖ್ಯವೋ, ಜಗತ್ತಿನ ಎಲ್ಲ ಒಳ್ಳೆಯ ವಿಷಯಗಳನ್ನು ಕನ್ನಡಿಗರಿಗೆ ಕನ್ನಡದಲ್ಲಿ ಸಿಗುವಂತೆ ಮಾಡುವುದು ಅಷ್ಟೇ ಮುಖ್ಯ. ಈ ವಿಷಯದಲ್ಲಿ ಸಾಹಿತ್ಯ ಅನುವಾದದ ಮಾರುಕಟ್ಟೆ ಒಂದು ಒಳ್ಳೆಯ ಉದಾಹರಣೆ. ಜಗತ್ತಿನ ಎಲ್ಲ ಒಳ್ಳೆ ಸಾಹಿತ್ಯ ಕನ್ನಡಕ್ಕೆ ಅನುವಾದವಾಗುತ್ತಿರುವುದರಿಂದ ಕನ್ನಡ ಶ್ರೀಮಂತಗೊಂಡಿದೆಯೇ ಹೊರತು ಕನ್ನಡ ಸಾಹಿತ್ಯದ ಮಾರುಕಟ್ಟೆ ಬಿದ್ದು ಹೋಗಿಲ್ಲ. ಏನೇ ಆಗಲಿ, ಭಾಷೆ ಉಳಿದರೆ ಭಾಷೆಯ ಸುತ್ತ ಕಟ್ಟಿಕೊಂಡಿರುವ ಎಲ್ಲ ಉದ್ಯಮ  ಉಳಿದೀತು. ಡಬ್ಬಿಂಗ್ ನ ಒಳಿತು-ಕೆಡುಕುಗಳ ಬಗ್ಗೆ ಚರ್ಚಿಸಿ, ನಮ್ಮ ಉದ್ಯಮದ ಹಿತಾಸಕ್ತಿಯನ್ನು ಎತ್ತಿ ಹಿಡಿಯುತ್ತಲೇ ಡಬ್ಬಿಂಗ್ ಅನ್ನು ಹೇಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು, ಹೇಗೆ ನಮ್ಮ ಭಾಷೆಯನ್ನು ಈ ಪೀಳಿಗೆಗೂ relevant ಆಗಿ ಉಳಿಸಿಕೊಳ್ಳುವುದು ಎಂಬತ್ತ ಹಿರಿಯರು ಗಮನ ಹರಿಸಬೇಕಾಗಿದೆ. ಈ ವಿಷಯ ನಮ್ಮ ಚಿತ್ರೋದ್ಯಮದ ಹಿರಿಯರಿಗೆ ಎಷ್ಟು ಬೇಗ ಅರಿವಾಗುತ್ತೋ ಅಷ್ಟು ನಮ್ಮ ಉದ್ಯಮ, ನಮ್ಮ ನುಡಿಯ ಭವಿಷ್ಯಕ್ಕೆ ಒಳ್ಳೆಯದು.

ಕ್ಲೈಮ್ಯಾಕ್ಸ್:
ಒಂದೂರಲ್ಲಿ ಒಂದು ಚಿಕ್ಕ ಮಗು ಇತ್ತಂತೆ. ಆ ಮಗುವಿಗೆ ತಾಯಿ ಹಾಲು ಕೊಟ್ಟು, ಸ್ನಾನ ಮಾಡ್ಸಿ, ಬಟ್ಟೆ ಹಾಕಿ ಒಪ್ಪ ಮಾಡ್ತಾ ಇದ್ದಳಂತೆ. ಆ ಮಗುವಿಗೆ ಈಗ 75 ವರ್ಷ ವಯಸ್ಸು, ಆದರೂ ಆ ಮಗು ಈಗಲೂ ಅಮ್ಮಾನೇ ತಿಂಡಿ ಕೊಡಬೇಕು, ಸ್ನಾನ ಮಾಡಿಸಬೇಕು, ಬಟ್ಟೆ ಹಾಕಬೇಕು ಅಂತ ಹಟ ಮಾಡ್ತಾ ಇತ್ತಂತೆ. Sounds funny right ? ಇವತ್ತು ಕನ್ನಡ ಚಿತ್ರೋದ್ಯಮದಲ್ಲಿ ಡಬ್ಬಿಂಗ್ ಬೇಡ, ಸ್ಪರ್ಧೆ ಬೇಡ ಅನ್ನೋರಿಗೆ ಈ ಉದಾಹರಣೆ ಸರಿ ಹೊಂದುತ್ತೇನೋ!

ಪೂರಕ ಓದಿಗೆ:
ಡಬ್ಬಿಂಗ್ ಯಾಕೆ ಬೇಕು ಎಂಬ ಬಗ್ಗೆ ಖ್ಯಾತ ಸಿನೆಮಾ ಪತ್ರಕರ್ತ ಸದಾಶಿವ ಶೆಣೈ ಬರೆದಿರೋ ಈ ಬರಹವನ್ನು ಓದಿ:
http://www.ourkarnataka.com/kannada/movie/dubbing09.htm

9 ಕಾಮೆಂಟ್‌ಗಳು:

  1. sakattagi bardiddira sir..,naanu e chitravanna nodiddene..,nan maiye ondu sali romanchana vaaitu..e thara chitragala shikshana kannada makkalige kannadalle siguvudu athyavashyaka..,

    ಪ್ರತ್ಯುತ್ತರಅಳಿಸಿ
  2. ನಿಜ.. ಅಂಗ್ಲ ಭಾಷೆಯ ಎಷ್ಟೆಷ್ಟೋ ಅತ್ತ್ಯುತ್ತಮ ಚಿತ್ರಗಳನ್ನು ನಮ್ಮ ನುಡಿಯಲ್ಲೇ ನೋಡುವ ಭಾಗ್ಯ ಇಂದು ನಮಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಂತೂ ಅಂತಹ ಚಿತ್ರಗಳನ್ನು ನಾವು ಮಾಡುವುದೂ ಅಸಾಧ್ಯ. ಡಬ್ಬಿಂಗ್ ನಮ್ಮ ಚಿತ್ರ ರಂಗದಲ್ಲೂ ಬರಬೇಕು. ಎಲ್ಲ ಕನ್ನಡಿಗರೂ ಒಳ್ಳೆ ಚಿತ್ರಗಳನ್ನು ಕನ್ನಡದಲ್ಲೇ ನೋಡುವಂತಾಗಬೇಕು.

    ಪ್ರತ್ಯುತ್ತರಅಳಿಸಿ
  3. ನಮ್ಮಲ್ಲಿ ಡಬ್ಬಿಂಗ್ ಅಂದ್ರೆ ಬರೀ ತಮಿಳು, ತೆಲುಗು ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡೋದು ಅಂತ ಬಹಳಷ್ಟು ಜನ ಅಂದುಕೊಂಡಿದ್ದಾರೆ. ಹಾಲಿವುಡ್, ಚೈನೀಸ್, ಜಾಪನೀಸ್, ಇತ್ಯಾದಿ ಪ್ರಪಂಚದಾದ್ಯಂತ ತಯಾರಾದ ಹಲವಾರು ಉತ್ಕೃಷ್ಟ ಸಿನಿಮಾಗಳನ್ನು ಕನ್ನಡದಲ್ಲಿ ನೋಡಿ ಸವಿಯಲು ಡಬ್ಬಿಂಗ್ ಅತ್ಯಗತ್ಯ. ಡಬ್ಬಿಂಗ್ ಬಂದು ಕನ್ನಡ ಸಿನಿಮಾ ಎಕ್ಕುಟ್ಟುಹೋಗತ್ತೆ ಅಂತ ಭಯಪಡಬೇಕಿಲ್ಲ. ಉದಾಹರಣೆಗೆ ಎಷ್ಟೆಲ್ಲಾ ಅನುವಾದಗಳು ನಡೆದರೂ ಕನ್ನಡ ಸಾಹಿತ್ಯ ಇನ್ನು ಗಟ್ಟಿಯಾಗೇ ಉಳಿದಿದೆ.

    ಹಾಲಿವುಡ್ ಮೇಟ್ರಿಕ್ಸ್, ಅವತಾರ್ ನಂತ ಸಿನಿಮಾಗಳನ್ನು ಮಾಡಬಹುದು. ಆದರೆ ‘ಬಂಗಾರದ ಮನುಷ್ಯ’ ನಂತ ಸಿನಿಮಾ ಅವರಿಂದ ಮಾಡೋದು ಸಾಧ್ಯವಿಲ್ಲ. ಆದ್ದರಿಂದ ಡಬ್ಬಿಂಗ್ ನಿಂದ ಕನ್ನಡ ಚಿತ್ರರಂಗದ ಅವಸಾನವಾಗುವುದಿಲ್ಲ. ಬದಲಿಗೆ ಕನ್ನಡ ಭಾಷೆ, ಕನ್ನಡ ಜನರ ಜ್ಞಾನ ಮತ್ತಷ್ಟು ಶ್ರೀಮಂತವಾಗುತ್ತೆ.

    raajesh

    ಪ್ರತ್ಯುತ್ತರಅಳಿಸಿ
  4. Namma Kanada Chitraragakke bhere bhasheya andare English ,chainees chitragalanna dabbing madidre namma jana kannada chitragalanna nodalla anta bhaya........

    ಪ್ರತ್ಯುತ್ತರಅಳಿಸಿ
  5. olleya lekhana. jagattinalli baruttiruva science fiction, ee reetiya arthavattaada cinemagalu, makkalige sakkattagiro animations idannella kannadadalli siguvante madidare olledu. kannadadavaru nisheda heruvudakke yaava adhikaravu illa ekendare avaru ee reetiya big budget cinema tegeyuvudakke innu 100 varsha adaru agolla. eno ondashtu cheap telugu movies remake madokke ee reetiya nirbandha heri kootidare. selfish people. navella idara bagge pratibhatane maadi idannu teresabeku.

    ಪ್ರತ್ಯುತ್ತರಅಳಿಸಿ
  6. We need dubbing which makes best things to reach all people in authentic way. Not by remaking it.
    Those who produce/direct in kannada can't think about reaching audience. They just want to make money for themselves.

    ಪ್ರತ್ಯುತ್ತರಅಳಿಸಿ
  7. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ನಿಮ್ಮ ವಾದಕ್ಕೆ ನನ್ನ ಸಹಮತವಿದೆ ವಸಂತ್. ನಾನೂ ಡಬ್ಬಿಂಗ್ ಪರ ಮನುಷ್ಯನೇ. ಆದರೆ ಡಬ್ಬಿಂಗ್ ವಿರುದ್ದ ನಿಂತಿರುವುದು ಬಹಳ ದೊಡ್ಡವರು. ಅವರ ವಿರುದ್ದ ನನ್ನಂತವನು ಮಾತಾಡಿದರೆ ಆನೆಯ ಮುಂದೆ ನಾಯಿ ಬೊಗಳಿದಂತಾಗುತ್ತದೆ.. -veerendra

    ಪ್ರತ್ಯುತ್ತರಅಳಿಸಿ
  9. Dubbing illade irodrinda ivattu karnatakada moole mooleyallu tamilu, telugu, hindi bhaasheya chitragalu aarbhata maadtha iddaave. Kannada bittu ulida yella bhashegalannu namma jana channaagi kalitha iddare. Valase bandavarige kannada kaliyabekemba bhayave illa.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !