ಮಂಗಳವಾರ, ಜುಲೈ 17, 2012

ನಿಮ್ಮ ಮನೆಯ ನೆಮ್ಮದಿಗೆ ನೀವು ಹೊಣೆ - ಹೌದೋ, ಅಲ್ಲವೋ?

1976ರ ತುರ್ತು ಪರಿಸ್ತಿತಿಯ ಹೊತ್ತಿನಲ್ಲಿ ಸಾಕಶ್ಟು ನಾಗರೀಕ ಹಕ್ಕುಗಳನ್ನು ಕಿತ್ತುಕೊಳ್ಳುವುದರ ಜೊತೆ ರಾಜ್ಯದ ಪಟ್ಟಿಯಲ್ಲಿದ್ದ ಶಿಕ್ಶಣವನ್ನು ಅಲ್ಲಿಂದ ತೆಗೆದು ಸಂವಿದಾನದ ಜಂಟಿ ಪಟ್ಟಿಗೆ ಅಂದಿನ ಪ್ರದಾನಿ ಇಂದಿರಾಗಾಂದಿ ಸೇರಿಸಿದರು. ಸಂವಿದಾನದ ಜಂಟಿ ಪಟ್ಟಿ ಅನ್ನುವುದು ರಾಜ್ಯಕ್ಕಿಂತ ಕೇಂದ್ರದ ನಿರ್ದಾರಕ್ಕೆ ಮನ್ನಣೆ ಕೊಡುವ ವ್ಯವಸ್ತೆಯಾಗಿರುವುದರಿಂದ ಸಹಜವಾಗಿಯೇ 1976ರಿಂದಾಚೆ ಆಯಾ ರಾಜ್ಯದ ಮಕ್ಕಳ ಕಲಿಕೆ ಹೇಗಿರಬೇಕು, ಏನಾಗಬೇಕು ಅನ್ನುವುದನ್ನು ನಿರ್ದರಿಸುವ ಹಕ್ಕು ರಾಜ್ಯದ ಕೈಯಿಂದ ಕೇಂದ್ರದ ಕೈಗೆ ಹೋಯಿತು ಅನ್ನಬಹುದು. ಇತ್ತಿಚಿನ ವರ್ಶಗಳಲ್ಲಂತೂ ಕಲಿಕೆಯ ವಿಶಯದಲ್ಲಿ ಕೇಂದ್ರ ಸರ್ಕಾರದ ಮೂಗು ತೂರಿಸುವಿಕೆ ಬಲು ವೇಗದಿಂದ ಬೆಳೆಯುತ್ತಿದ್ದು ಕಲಿಕಾ ವ್ಯವಸ್ತೆಯ ಮೇಲೆ ಇದರಿಂದಾಗಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತಿದೆ ಅನ್ನಬಹುದು.

ಹೊಣೆ ಹೊತ್ತಾಗಲೇ ಹೊಣೆಗಾರಿಕೆ ಬರುವುದು
ನೀವೆ ಯೋಚಿಸಿ,  ಯಾವುದೋ ಒಂದು ಕೆಲಸದ ಪೂರ್ತಿ ಹೊಣೆ ನಿಮ್ಮ ಮೇಲೆ ಹೊರಿಸಿ, ಒಳ್ಳೆಯದಾದರೂ, ಕೆಟ್ಟದಾದರೂ ಅದಕ್ಕೆ ನೀವೆ ಹೊಣೆ, ತಪ್ಪಿಗೆ ನಿಮ್ಮ ತಲೆಯನ್ನೇ ಕೊಡಬೇಕು ಅನ್ನುವ ಹೊಣೆಗಾರಿಕೆ ಇರುವಲ್ಲಿ ನಿಮ್ಮ ನಿಲುವು ಏನಾಗಿರುತ್ತದೆ? ವಹಿಸಿಕೊಂಡ ಕೆಲಸ ಅತ್ಯಂತ ಸರಿಯಾಗಿ ನಡೆಸುವತ್ತ ನಿಮ್ಮೆಲ್ಲ ಶ್ರಮ, ಕಾಳಜಿ ಎರೆದು ನೀವು ಕೆಲಸ ಮಾಡುವುದಿಲ್ಲವೇ? ಆದರೆ ಇಂತಹದೊಂದು ಹೊಣೆಯಿಲ್ಲದ, ಎಡವಟ್ಟಾದರೆ ಇನ್ನಾರನ್ನೋ ಹೊಣೆಯಾಗಿಸಬಹುದು ಅನ್ನುವಂತಹ ವ್ಯವಸ್ತೆಯಲ್ಲಿ ಸಹಜವಾಗಿಯೇ ಬೇಜವಾಬ್ದಾರಿಯ, ಹೊಣೆಗೇಡಿತನದ ನಡತೆಯನ್ನು ಎದುರು ನೋಡಬಹುದಲ್ಲವೇ? ಇಂದು ಕಲಿಕೆಯ ವಿಶಯದಲ್ಲಿ ಕೇಂದ್ರದ ಮೂಗು ತೂರಿಸುವಿಕೆ ಅಂತಹುದೇ ತೊಂದರೆ ತಂದೊಡ್ಡಿದೆ. ಇದಕ್ಕೆ ಎತ್ತುಗೆಯಾಗಿ ಇತ್ತಿಚೆಗೆ ನಮ್ಮ ಶಿಕ್ಶಣ ಮಂತ್ರಿಗಳು ಕೊಟ್ಟ ಹೇಳಿಕೆಯೊಂದನ್ನು ಇಲ್ಲಿ ಪ್ರಸ್ತಾಪಿಸುವೆ. ಇತ್ತಿಚೆಗೆ ರಾಜ್ಯ ಸರ್ಕಾರ ೩೦೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಾಗ ಅವರು ಕೊಟ್ಟ ಕಾರಣ "ನಾವೇನು ಮಾಡಲಾಗಲ್ಲ, ಇದು ಕೇಂದ್ರದ ಆದೇಶ, ಮತ್ತು ಅದನ್ನು ನಾವು ಪಾಲಿಸಲೇಬೇಕು" ಎಂದು. ಇವರೊಬ್ಬರೇ ಕನ್ನಡದ ಮಕ್ಕಳ ಕಲಿಕೆಯ ಪೂರ್ತಿ ಹೊಣೆ ಹೊತ್ತಿದ್ದರೆ ಇಂತಹದೊಂದು ಬೇಜವಾಬ್ದಾರಿಯ ಹೇಳಿಕೆ ಬರುತ್ತಿತ್ತೇ? ಇನ್ನೂ ಒಂದು ವಿಶಯವೆಂದರೆ ಹೀಗೆ ಮುಚ್ಚುವ ಶಾಲೆಗೆ ಪ್ರತಿಯಾಗಿ ಶಿಕ್ಶಣದ ಇನ್ನಾವುದೋ ವಿಶಯಕ್ಕೆ ಅನುದಾನ ಕೊಡುತ್ತೀನಿ ಎಂದು ಆಸೆ ತೋರಿಸುವ ಕೇಂದ್ರದ ಕ್ರಮ "ಅನುದಾನದ ತೀವ್ರ ಕೊರತೆ ಎದುರಿಸುವ" ರಾಜ್ಯಗಳಲ್ಲಿ ಆದಶ್ಟು ಬೇಗ ಕೇಂದ್ರ ಹೇಳಿದಂತೆ ಕೇಳಿ ಅನುದಾನ ಪಡೆದುಕೊಳ್ಳೊಣ ಅನ್ನುವ ಮನಸ್ತಿತಿ ಬಿತ್ತಿದೆ. ಇತ್ತಿಚೆಗೆ ಗಡಿಬಿಡಿಯಲ್ಲಿ ರಾಜ್ಯದ ಪಿಯುಸಿ ಮಟ್ಟದಲ್ಲಿ ಶಿಕ್ಶಕರಿಗೆ ಯಾವುದೇ ತಯಾರಿ ಇಲ್ಲದಿರುವಾಗಲೂ CBSE ಪಟ್ಯಕ್ರಮ ತರುತ್ತೀನಿ ಎಂದು ರಾಜ್ಯ ಹೊರಟಿರುವುದು ಕೇಂದ್ರದ ಅನುದಾನ ಬಾಚಿಕೊಳ್ಳಬೇಕು ಅನ್ನುವ ಆತುರಕ್ಕೆ ಅನ್ನುವ ವರದಿಗಳು ಮಾದ್ಯಮದಲ್ಲಿವೆ. ಇಂತಹ ವ್ಯವಸ್ತೆ ಆಳವಾಗಿ ಮಕ್ಕಳ ಕಲಿಕೆಗೆ ಏನು ಸರಿ, ಏನು ತಪ್ಪು ಎಂದು ಯೋಚನೆ ಮಾಡದಂತೆ ರಾಜ್ಯಗಳನ್ನು ತಡೆಯುತ್ತಿಲ್ಲವೇ? ಯೋಚನೆ ಮಾಡಿದರೆ, ಸಹಜವಾಗಿ ರಾಜ್ಯದ ಕೈಯಲ್ಲಿ ಇರಬೇಕಿದ್ದ ಆರ್ತಿಕ ಸಂಪನ್ಮೂಲವೆಲ್ಲವನ್ನೂ ಕೇಂದ್ರ ತನ್ನ ಹಿಡಿತದಲ್ಲಿರಿಸಿಕೊಂಡು, ಅದನ್ನೇ ಬಳಸಿಕೊಂಡು ರಾಜ್ಯವೊಂದರ ಕಲಿಕೆಯ ವ್ಯವಸ್ತೆಯನ್ನು ತಿರುಚುವುದು, ನಿಯಂತ್ರಿಸುವುದು ಒಂದರ್ತದಲ್ಲಿ ರಾಜ್ಯಗಳಿಗೆ ಈ ವಿಶಯದ ಬಗ್ಗೆ ಯಾವುದೇ ಹೊಣೆಗಾರಿಕೆ ಇರದಂತೆ ನೋಡಿಕೊಂಡಿದೆ ಅಂದರೂ ತಪ್ಪಾಗದು.

ದೆಹಲಿ ಹತ್ತಿರವೋ ಬೆಂಗಳೂರು ಹತ್ತಿರವೋ?
"ನಿಮ್ಮ ಮನೆಗೆ ನೀವು ಯಜಮಾನ. ಅದರ ನೆಮ್ಮದಿ ನಿಮ್ಮ ಹೊಣೆ" ಅನ್ನುವುದಕ್ಕೂ "ನಿಮ್ಮ ಮನೆಗೆ ನೀವು ಹೆಸರಿಗೆ ಯಜಮಾನ, ಆದರೆ ಅದರ ನೆಮ್ಮದಿಗೆ ನೀವು ನಿಜವಾದ ಹೊಣೆಗಾರರಲ್ಲ" ಅನ್ನುವುದಕ್ಕೂ ವ್ಯತ್ಯಾಸವಿಲ್ಲವೇ? ಕನ್ನಡ ಮಕ್ಕಳ ಕಲಿಕೆಯ ತೊಂದರೆಗಳೇನು, ಇಲ್ಲಿನ ಬೇರೆ ಬೇರೆ ಬಾಗದ ಮಕ್ಕಳಿಗೆ ಯಾವ ರೀತಿಯಲ್ಲಿ ಹೇಳಿ ಕೊಡಬೇಕು, ಅವರಿಗೆ  ಯಾವ ರೀತಿಯ ಸೌಕರ್ಯ, ಸೌಲಬ್ಯ ಬೇಕು, ಅವರು ಏನು ಕಲಿಯಬೇಕು, ಹೇಗೆ ಕಲಿಯಬೇಕು ಅನ್ನುವುದು ದೆಹಲಿಯ ಕೂತ ಕೇಂದ್ರದ ಶಿಕ್ಶಣ ಮಂತ್ರಿಗೆ ಚೆನ್ನಾಗಿ ಮನದಟ್ಟಾಗುವುದೋ ಇಲ್ಲ ಬೆಂಗಳೂರಿನಲ್ಲಿರುವ ರಾಜ್ಯ ಮಂತ್ರಿಗೆ ಹೆಚ್ಚು ಅರ್ತವಾಗುವುದೋ? ಆಯ್ಕೆಗಳು, ನಿರ್ದಾರಗಳು ಸ್ತಳೀಯ ಮಟ್ಟದಲ್ಲಿ ನಡೆಯುವುದರಿಂದಲೇ ಹೆಚ್ಚು ಸರಿಯಾದ ಪರಿಣಾಮ ದೊರಕುವುದು ಅನ್ನುವುದು ಜಗತ್ತಿನ ಮುಂದುವರೆದ ದೇಶಗಳಲ್ಲೆಲ್ಲ ಸಾಬೀತಾಗುತ್ತಿರುವಾಗ ಇಲ್ಯಾಕೆ ಪ್ರತಿಯೊಂದು ವಿಶಯದಲ್ಲೂ "ರಾಜ್ಯಗಳು ನಾಲಾಯಕ್ಕು, ಹೀಗಾಗಿ ಇದಕ್ಕೆಲ್ಲ ಕೇಂದ್ರದ ಬುದ್ದಿವಂತರೇ ಸರಿ" ಅನ್ನುವ ಒಕ್ಕೂಟ ವಿರೋದಿ ನಿಲುವು? SSA, CBSE, RTE, RSMA ಹೀಗೆ ಹತ್ತಾರು ಯೋಜನೆಗಳನ್ನು ರೂಪಿಸಿ ಮೇಲಿಂದ ಕೆಳಕ್ಕೆ ಒತ್ತುವ, ಮತ್ತು ಆ ಮೂಲಕ ಆ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಬ್ರಶ್ಟಾಚಾರಕ್ಕೆ ಅವಕಾಶ ಕಲ್ಪಿಸುವ ಬದಲು ಶಿಕ್ಶಣವನ್ನು ಪೂರ್ತಿಯಾಗಿ ರಾಜ್ಯದ ಪಟ್ಟಿಗೆ ಬಿಟ್ಟು ಕೊಡುವ ಸಂವಿದಾನ ತಿದ್ದುಪಡಿ ಜಾರಿಗೆ ಬರಲಿ. ಆ ಮೂಲಕ ರಾಜ್ಯಗಳು ತನ್ನ ನೆಲದ ಮಕ್ಕಳ ಕಲಿಕೆಯ ಪೂರ್ತಿ ಹೊಣೆ ಹೊರುವಂತಾಗಲಿ, ಶಿಕ್ಶಣ ಸೆಸ್ ಹೆಸರಲ್ಲಿ ಕೇಂದ್ರ ಸಂಗ್ರಹಿಸುವ ತೆರಿಗೆ ಹಣವನ್ನು ರಾಜ್ಯಕ್ಕೆ ನೇರವಾಗಿ ಬಿಟ್ಟು ಕೊಡಲಿ ಮತ್ತು ಆ ಹಣವನ್ನು ಮೂಲಬೂತ ಸೌಕರ್ಯ ಕಟ್ಟಿಕೊಳ್ಳಲು ರಾಜ್ಯಗಳು ಬಳಸಲು ಅನುವಾಗಲಿ. ಶಿಕ್ಶಣದ ವಿಶಯದಲ್ಲಿ ಕೇಂದ್ರದ ಪಾತ್ರವೇನಿದ್ದರೂ ಬೇರೆ ರಾಜ್ಯಗಳು ಅನುಸರಿಸುತ್ತಿರುವ best practices ಅನ್ನು ತಿಳಿಸುವ, ಸಲಹೆ, ಸೂಚನೆ ನೀಡುವ ಮಟ್ಟಕ್ಕಿರಲಿ.

ಕೊನೆಹನಿ: 1976ರ ತುರ್ತು ಪರಿಸ್ತಿತಿಯನ್ನು ನಮ್ಮ ಪ್ರಜಾತಂತ್ರ ವ್ಯವಸ್ತೆಯ ಮೇಲಾದ ಹಲ್ಲೆ, ಒಂದು ಕಹಿ ನೆನಪು, ಒಂದು ಕಪ್ಪು ಚುಕ್ಕಿ ಎಂದು ನೆನೆಸುವಾಗ, ಶಿಕ್ಶಣವನ್ನು ಜಂಟಿಪಟ್ಟಿಗೆ ಸೇರಿಸಬೇಕು ಎಂದು ಅಂದು ತೆಗೆದುಕೊಂಡು ತಪ್ಪು ನಿರ್ದಾರವನ್ನು ಅದೇ ರೀತಿಯಲ್ಲಿ ನೋಡಬೇಕಿದೆಯಲ್ಲವೇ?


ಗಮನಿಸಿ: ಈ ಬ್ಲಾಗ್ ಬರಹವನ್ನು ಇತ್ತಿಚೆಗೆ ನುಡಿಯರಿಗರ (Linguists) ನಡುವೆ ವ್ಯಾಪಕವಾಗಿ ಚರ್ಚೆಗೆ ಒಳಗಾಗುತ್ತಿರುವ ’ಹೊಸ ಬರಹ’ ದಲ್ಲಿ ಬರೆದಿದ್ದೇನೆ. ಇದರ ಬಗ್ಗೆ ಹೆಚ್ಚು ತಿಳಿಯಲು: ellarakannada.org ನೋಡಿ.

ಚಿತ್ರ ಕ್ರಪೆ: ಔಟ್ ಲುಕ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !