ಗುರುವಾರ, ಆಗಸ್ಟ್ 16, 2012

ನಿಜವಾದ ಸ್ವಾತಂತ್ರ್ಯ ಯಾವಾಗ ಬರುತ್ತೆ ಗೊತ್ತಾ?

ಭಾರತ ಒಕ್ಕೂಟ ಬ್ರಿಟಿಶರ ಆಳ್ವಿಕೆಯಿಂದ ಬಿಡುಗಡೆ ಪಡೆದು ಮೊನ್ನೆಗೆ 65 ವರ್ಷಗಳು ಕಳೆದು ಹೋದವು. ಎಂದಿನಂತೆ ಕೆಂಪು ಕೋಟೆಯ ಮೇಲೆ ನಿಂತು ಕೇಂದ್ರದ ಆಳುವವರು ಒಕ್ಕೂಟದ ಒಂದು ಭಾಗದ ನುಡಿಯಾದ "ಹಿಂದಿ"ಯಲ್ಲಿ ನಾವೆಲ್ಲರೂ ಅಣ್ಣ-ತಮ್ಮಂದಿರು, ಭಾವೈಕ್ಯತೆ ಮೆರೆಯಬೇಕು, ಒಂದಾಗಬೇಕು ಅನ್ನುವ ಪ್ರತಿ ವರ್ಷದ ಸಂದೇಶವನ್ನೇ ಮತ್ತೆ ನೀಡಿದರು. ಎಂದಿನಂತೆ ಆಳಿಸಿಕೊಳ್ಳುವವರು ಮುಖಕ್ಕೆ ಬಾವುಟದ ಬಣ್ಣ ಬಳಿದುಕೊಂಡೋ, ತಮ್ಮ ಗಾಡಿಗೆ ಬಾವುಟ ಸಿಕ್ಕಿಸಿಕೊಂಡೋ, ಸಿಹಿ ಹಂಚಿಯೋ ಬಿಡುಗಡೆಯ ಖುಷಿಯನ್ನು ಆಚರಿಸಿಕೊಂಡ್ರು. ಎಂದಿನಂತೆ ಹಲವು ಮಾಧ್ಯಮಗಳು ಹಿಂದಿಯಲ್ಲಿ ಘೋಷಣೆ ಕೂಗುವುದು, ಹಿಂದಿ ದೇಶಭಕ್ತಿ ಗೀತೆಗಳನ್ನು ಹಾಕುವುದೇ ದೇಶ ಪ್ರೇಮದ ಸಂಕೇತ ಎಂಬಂತೆ ವರ್ತಿಸಿದವು. ಇದೆಲ್ಲದರ ಆಚೆ ಸ್ವಾತಂತ್ರ್ಯ ನಿಜವಾದ ಅರ್ಥದಲ್ಲಿ ಬಂದಿದೆಯೇ? ಬಂದಿದ್ದರೆ ಯಾರಿಗೆ ಬಂದಿದೆ? ಬಂದಿಲ್ಲ ಅಂದರೆ ಯಾರಿಗೆ ಬಂದಿಲ್ಲ? ಬರುವುದು ಅಂದರೇನು ಅನ್ನುವ ಬಹು ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ರಾಜಕೀಯ ಭಾರತ(Political India) ಬ್ರಿಟಿಷರ ಕೊಡುಗೆ
ಹಲವು ಸಂಸ್ಕೃತಿ, ಹಲವು ಆಚರಣೆ, ಹಲವಾರು ನುಡಿಗಳ ತವರಾದ ಭಾರತವೆನ್ನುವ ಇಂದಿನ ಒಕ್ಕೂಟವನ್ನು ರಾಜಕೀಯವಾಗಿ ಒಂದು ಯುನಿಟ್ ಆಗಿಸಿದ್ದು ಬ್ರಿಟಿಷರ ಕೆಲಸವೇ. ತಮ್ಮ ಆಳ್ವಿಕೆಗೆ ಸುಲಭವಾಗಲಿ, ಈ ಭಾಗದಿಂದ ಲೂಟಿ ಮಾಡಲು ಅನುಕೂಲವಾಗಲಿ ಎಂದು ತಮ್ಮ ಆಳ್ವಿಕೆಯಲ್ಲಿದ್ದ ಇವತ್ತಿನ ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶದ ಭಾಗಗಳನ್ನು ಒಂದೇ ಆಳ್ವಿಕೆಯಡಿ ತಂದ ಅವರ ಹೆಜ್ಜೆಯೇ ರಾಜಕೀಯವಾದ ಭಾರತವೆನ್ನುವುದರ ಹುಟ್ಟಿಗೆ ಕಾರಣವಾಯ್ತು ಅನ್ನುವುದನ್ನು ಸ್ವಾತಂತ್ರ್ಯ ನಂತರ ಇವತ್ತಿನ ಭಾರತ ಒಕ್ಕೂಟವನ್ನು ರೂಪಿಸುವಲ್ಲಿ ವಲ್ಲಬಬಾಯಿ ಪಟೇಲ್ ಜೊತೆ ಕೆಲಸ ಮಾಡಿದ, ಬ್ರಿಟಿಷರ ಅಡಿ ಅಧಿಕಾರಿಯಾಗಿದ್ದ ವಿ.ಪಿ.ಮೆನನ್ Integration of Indian States ಅನ್ನುವ ತಮ್ಮ ಪುಸ್ತಕದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಅವರ ಕೆಲ ಮಾತುಗಳು:
India is one geographical entity. Yet, throughout her long and chequered history, she never achieved political homegeneity. No greater achievement can be credited to the British than that they brought about India's enduring political consolidation. But for this accomplishment and the rise of national consciousness in its wake, the Government of Free India could hardly have taken the final step of bringing about the peaceful integration of the princely States. Today, for the first time in the country's history, the writ of a single central Government runs from Kailas to Kanyakumari, from Kathiawar to Kamarupa (the old name of Assam).
ಈ ಮೇಲಿನ ಮಾತು ಇವತ್ತಿನ ರಾಜಕೀಯ ಭಾರತವನ್ನು ರೂಪಿಸುವಲ್ಲಿ ಬ್ರಿಟಿಷರ ಪಾತ್ರವೇನಾಗಿತ್ತು ಅನ್ನುವುದನ್ನು ತಿಳಿಸಲು ಹೇಳಿದೆ. ಆದರೆ ಇವತ್ತು ಹೇಳಲು ಹೊರಟಿದ್ದು ಇದಕ್ಕೆ ತಾಕಿರುವ ಇನ್ನೊಂದು ಅಂಶ. ಅದೇನೆಂದರೆ ಬ್ರಿಟಿಷರು ದೆಹಲಿಯಿಂದ ಇಡೀ ದೇಶವನ್ನು ಆಳುವ ಕೇಂದ್ರಿಕೃತವಾದ ವ್ಯವಸ್ಥೆ ರೂಪಿಸಿಕೊಂಡಿದ್ದೇ ಭಾರತ ಒಕ್ಕೂಟವನ್ನು ಲೂಟಿ ಮಾಡಿ, ಇಂಗ್ಲಂಡಿಗೆ ಕಳಿಸಲು ಸುಲಭವಾಗಲಿ ಎಂದು. ಹಾಗಿದ್ದಾಗ ಸ್ವಾತಂತ್ರ್ಯ ನಂತರ ಇಂತಹ ವ್ಯವಸ್ಥೆ ಬದಲಾಗಬೇಕಿತ್ತಲ್ಲವೇ? ಆದರೆ ಹೆಚ್ಚಿನ ಎಲ್ಲ ಅಧಿಕಾರವನ್ನು, ಮುಖ್ಯವಾಗಿ ಆರ್ಥಿಕ ಸಂಪನ್ಮೂಲದ ಮೇಲಿನ ಹಿಡಿತವನ್ನೆಲ್ಲ ಕೇಂದ್ರದಲ್ಲೇ ಉಳಿಸಿಕೊಂಡು ರಾಜ್ಯಗಳನ್ನು ಸಾಮಂತ ರಾಜರಂತೆ ನಡೆಸಿಕೊಳ್ಳುವ ಅಂದಿನ ಬ್ರಿಟಿಷರ ವ್ಯವಸ್ಥೆಯೇ ಸ್ವಾತಂತ್ರ್ಯ ನಂತರವೂ ಮುಂದುವರೆದಿರುವುದು ಮತ್ತು ಅದರಿಂದ ರಾಜ್ಯಗಳ ಆಡಳಿತವನ್ನು ಪರಿಣಾಮಕಾರಿಯಾಗಿಸುವ, ಭ್ರಷ್ಟಾಚಾರ ಕಡಿಮೆ ಮಾಡಿಸುವ, ಆಳುವವರಿಗೆ ಹೊಣೆಗಾರಿಕೆ ತರುವ ಸರಿಯಾದ ವ್ಯವಸ್ಥೆಯೊಂದು ರೂಪುಗೊಳ್ಳದಂತಾಗಿದ್ದು ಕಂಡಾಗ ಏಳಿಗೆಗೆ ಬೇಕಿರುವ ಒಳ್ಳೆಯ ಆಡಳಿತ ಪಡೆದುಕೊಳ್ಳುವ ನಿಜವಾದ ಸ್ವಾತಂತ್ರ್ಯ ನಮಗೆ ಬಂದಿದೆಯೇ ಅನ್ನುವ ಪ್ರಶ್ನೆ ಏಳದೇ ಇರುವುದಿಲ್ಲ.

ಒಕ್ಕೂಟ ವ್ಯವಸ್ಥೆ ಇಲ್ಲದಿರುವುದೇ ನಿಜವಾದ ತೊಂದರೆ
ಸ್ವಾತಂತ್ರ್ಯ ನಂತರ ಸಂವಿಧಾನ ರಚನೆಯಾದಾಗ ಇಲ್ಲಿನ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಭಾಷಾವಾರು ಪ್ರಾಂತ್ಯಗಳನ್ನು ರಚಿಸಿದ್ದು, ಅವುಗಳಿಗೆ ಒಂದಿಷ್ಟು ರಾಜಕೀಯ ಅಧಿಕಾರ ಕೊಟ್ಟಿರದೇ ಹೋಗಿದ್ದರೆ ಇವತ್ತಿಗೆ ಭಾರತ ಒಕ್ಕೂಟದ ಉಳಿವೇ ಕಷ್ಟವಾಗುತ್ತಿತ್ತು. ಆದರೆ ಈ ಕ್ರಮಗಳನ್ನು ಅಷ್ಟಕ್ಕೇ ನಿಲ್ಲಿಸಿ ನಿಜವಾದ ಒಕ್ಕೂಟ ವ್ಯವಸ್ಥೆಯಾಗುವತ್ತ ನಾವು ಮುಂದಡಿ ಇಡದೇ ಹೋದದ್ದು ಇವತ್ತು ಹಲವು ರೀತಿಯ ಆಡಳಿತದ ತೊಂದರೆಗಳಿಗೆ ಕಾರಣವಾಗುತ್ತಿದೆ. ನೂರಾರು ತೊಂದರೆಗಳಲ್ಲಿ ಒಂದೆರಡು ಸ್ಯಾಂಪಲ್ ನಿಮ್ಮ ಮುಂದಿಡುತ್ತೇನೆ.
  • ಎಲ್ಲ ಆರೋಗ್ಯ ಸೇವೆಗಳು ರಾಜ್ಯದ ಪಟ್ಟಿಯಲ್ಲಿರಬೇಕಿತ್ತು. ಆದರೆ ಸಾರ್ವಜನಿಕ ಆರೋಗ್ಯ ಸೇವೆಗಳು, ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಔಷಧ, ವೈದ್ಯಕೀಯ ಶಿಕ್ಷಣ, ಜನಸಂಖ್ಯೆ ನೀತಿಯಂತಹ ಹಲವು ವಿಷಯಗಳು ಕೇಂದ್ರದ ತೆಕ್ಕೆಯಲ್ಲಿವೆ. ಹೆಚ್ಚಿನ ಆರ್ಥಿಕ ಸಂಪನ್ಮೂಲಗಳು ಕೇಂದ್ರದ ತೆಕ್ಕೆಯಲ್ಲಿರುವುದರಿಂದ ರಾಜ್ಯಗಳ ಬಳಿ ಸರಿಯಾದ ಆರೋಗ್ಯ ಸೇವೆ ರೂಪಿಸಲು ಬೇಕಿರುವ ಹಣವಿಲ್ಲ. ಅದರ ಮೇಲೆ ಕೇಂದ್ರದಲ್ಲಿ ಕೂತಿರುವ ಮಂತ್ರಿಗೆ ಇಷ್ಟವಾದ ಯೋಜನೆಯನ್ನೇ ರಾಜ್ಯವೂ ಒಪ್ಪಿಕೊಳ್ಳಬೇಕಾದ (ಅದರ ಅಗತ್ಯವೇ ಇಲ್ಲದ ಸಂದರ್ಭದಲ್ಲೂ) ಅನಿವಾರ್ಯತೆ ಇಂದಿದೆ. ಒಂದು ರಾಜ್ಯಕ್ಕೆ ಮಲೇರಿಯಾ ವಿರುದ್ದ ಹೋರಾಡಲು ಫಂಡ್ಸ್ ಬೇಕಿರಬಹುದು, ಆದರೆ ಕೇಂದ್ರದ ಆರೋಗ್ಯ ಸಚಿವಾಲಯಕ್ಕೆ ಜನಸಂಖ್ಯೆ ನಿಯಂತ್ರಣ ಪೆಟ್ ಪ್ರಾಜೆಕ್ಟ್ ಆಗಿದ್ದರೆ ಮಲೇರಿಯಾ ಕೈ ಬಿಟ್ಟು ಜನಸಂಖ್ಯೆ ನಿಲ್ಲಿಸೋಕೆ ಆ ರಾಜ್ಯ ಹೊರಡುವ ಸ್ಥಿತಿ ಇಂದಿದೆ. ಕೇಂದ್ರದ ಮಾತು ಒಪ್ಪಿಕೊಳ್ಳದಿದ್ದಲ್ಲಿ ಅನುದಾನ ಕೊಡುವುದಿಲ್ಲ ಅನ್ನುವ ಅದರ ನಿಲುವೇ ಇದಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ.
  • ಪ್ರತಿ ನುಡಿಯಾಡುವ ಜನಾಂಗದ ಕಲಿಕೆಯ ಸವಾಲುಗಳೇನು ಅನ್ನುವುದನ್ನು ಆಯಾ ರಾಜ್ಯ ಸರ್ಕಾರಗಳಿಗಿಂತ ಚೆನ್ನಾಗಿ ಬಲ್ಲವರು ಯಾರಿದ್ದಾರೆ? ಆದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಶಿಕ್ಷಣವನ್ನು ಸಂವಿಧಾನದ ಜಂಟಿಪಟ್ಟಿಗೆ ತೆಗೆದುಕೊಂಡ ಕೇಂದ್ರ ಅಲ್ಲಿಂದಾಚೆ ಶಿಕ್ಷಣದಲ್ಲಿ ಮೂಗು ತೂರಿಸುತ್ತಲೇ ಬಂದಿದೆ. ಇದರಿಂದಾಗಿಯೇ ಇಂದು ದೇಶಕ್ಕೆಲ್ಲ ಒಂದೇ ಸಿಇಟಿ ಅನ್ನುವಂತಹ ನಿರ್ಧಾರಗಳು, ಇಲ್ಲಿನ ಶಿಕ್ಷಕರು ತಯಾರಾಗಿರದೇ ಇದ್ದಾಗಲೂ ಪಿಯುಸಿಯಿಂದ ಸಿ.ಬಿ.ಎಸ್.ಇ ಸಿಲಾಬಸ್ ಶುರು ಮಾಡಲೇಬೇಕು ಅನ್ನುವಂತಹ ನಿರ್ಧಾರಗಳನ್ನು ಕೇಂದ್ರ ರಾಜ್ಯಗಳ ಮೇಲೆ ಹೇರುತ್ತಿರುವುದು. ಅನುದಾನದ ಆಸೆಗೆ ಬೇಕೊ ಬೇಡವೋ ಕೇಂದ್ರ ಹೇಳಿದ್ದೆಲ್ಲ ಒಪ್ಪಬೇಕು ಅನ್ನುವಂತಹ ಒತ್ತಡಕ್ಕೆ ರಾಜ್ಯಗಳು ಸಿಲುಕಿರುವುದು ಕಣ್ಣಿಗೆ ಕಾಣುವ ಸತ್ಯವಾಗಿದೆ. ಇಂತಹ ನಿರ್ಧಾರಗಳಿಂದಲೇ ಇಂದು ರಾಜ್ಯಗಳಿಗೆ ನಿಜವಾದ ಹೊಣೆಗಾರಿಕೆ ಬರದೇ ಇರುವುದು.
  • ದೇಶಕ್ಕೊಂದು ಭಾಷೆ ಬೇಕು ಅನ್ನುವ ಪೊಳ್ಳು ನೀತಿಯಡಿ ಒಂದು ಭಾಗದ ಭಾಷೆಯಾದ ಹಿಂದಿಯನ್ನು ಇವತ್ತಿಗೂ ಎಲ್ಲ ಹಿಂದಿಯೇತರ ಜನರ ಮೇಲೂ ಹೇರುವ ಪ್ರಕ್ರಿಯೆ ತಡೆಯಿಲ್ಲದೇ ಮುಂದುವರೆದಿದೆ. ರಾಜಭಾಷಾ ಆಯೋಗ ಅನ್ನುವ ಸಂಸ್ಥೆಯನ್ನಿಟ್ಟುಕೊಂಡು ತೆರಿಗೆದಾರರ ಹಣದಲ್ಲಿ ಒಂದು ಭಾಗದ ನುಡಿಯನ್ನು ಎಲ್ಲೆಡೆ ಹರಡುವ ಮತ್ತು ಆ ಮೂಲಕ ಅಲ್ಪಸಂಖ್ಯಾತ ನುಡಿಗಳನ್ನು ಅವುಗಳನ್ನಾಡುವ ಜಾಗದಲ್ಲೇ ಮೂಲೆಗುಂಪಾಗಿಸುವ ಕೆಲಸವೂ ದೆಹಲಿಯಿಂದ ನಡೆಯುತ್ತಲಿದೆ. ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಯಾಕಿಲ್ಲ ಅನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಈ ಒಕ್ಕೂಟ ವಿರೋಧಿ ಭಾಷಾ ನೀತಿಯೇ ಆಗಿದೆ.
  • ರಾಜ್ಯಗಳ ಹಿತ ಕಾಯಲೆಂದೇ ಇರುವ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗುವವರು ಅದೇ ರಾಜ್ಯದವರಾಗಿರಬೇಕು ಅನ್ನುವ ನಿಯಮವನ್ನು ತಿದ್ದಿ ಯಾರು ಬೇಕಾದರೂ ಯಾವ ರಾಜ್ಯದಿಂದ ಬೇಕಾದರೂ ಆಯ್ಕೆಯಾಗಬಹುದು ಅನ್ನುವಂತಹ ನಿಯಮವನ್ನು ಕಳೆದ ಎನ್.ಡಿ.ಎ ಸರ್ಕಾರ ಮಾಡಿತು. ಇದರಿಂದಾಗಿ ಕರ್ನಾಟಕದ ಬಗ್ಗೆ ನಯಾ ಪೈಸೆ ಗೊತ್ತಿಲ್ಲದ ಜನರೆಲ್ಲ ಕರ್ನಾಟಕದಿಂದ ರಾಜ್ಯಸಭೆಗೆ ಹೋಗುವಂತಹ ಬದಲಾವಣೆಗಳಾದವು.
ಮೇಲೆ ಹೇಳಿದ್ದು ಬರೀ ಕೆಲ ಎತ್ತುಗೆಗಳಷ್ಟೇ. ಹೇಳಲು ಇನ್ನು ನೂರಾರು ಆಡಳಿತದ ವಿಷಯಗಳಿವೆ, ಆ ಬಗ್ಗೆ ಮುಂದೆ ಬರೆಯುವೆ. ಹೀಗೆ ಆಡಳಿತದ ಹೆಚ್ಚಿನ ಹಂತಗಳಲ್ಲಿ ಕೇಂದ್ರದ ಮೂಗು ತೂರಿಸುವಿಕೆ, ರಾಜ್ಯದ ಅಧಿಕಾರವನ್ನು ಹಂತ ಹಂತವಾಗಿ ಮೊಟಕುಗೊಳಿಸುವ ಹೆಜ್ಜೆಗಳು ನಡೆಯುತ್ತಲೇ ಇವೆ. ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿಗಳ ನಡುವೆ ಹೆಚ್ಚೇನು ಅಂತರವಿಲ್ಲ. ರಾಜ್ಯಗಳನ್ನು ಸಾಮಂತರಂತೆ ಇರಿಸಿಕೊಳ್ಳುವ ನಿಲುವಿನಲ್ಲಿ ಇಬ್ಬರಲ್ಲಿ ಹೆಚ್ಚು ಭಿನ್ನಾಭಿಪ್ರಾಯವೂ ಇಲ್ಲ. ಇವತ್ತು ಇಂತಹ ಒಕ್ಕೂಟ ವಿರೋಧಿ ನಿಲುವೇ ಹೆಚ್ಚಿನ ಭಾಷಿಕ ಸಮುದಾಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಿದೆ ಮತ್ತು ಅವುಗಳ assertion ಯಿಂದಾಗಿಯೇ ಇಂದು ಒಕ್ಕೂಟ ವ್ಯವಸ್ಥೆ ಅನ್ನುವುದು ಕೊಂಚವಾದರೂ ಉಸಿರಾಡುತ್ತಿದೆ. ಕರ್ನಾಟಕದಂತಹ ಅತ್ತ ಪ್ರಾದೇಶಿಕ ಪಕ್ಷವೂ ಇಲ್ಲದ, ಇತ್ತ ಒಕ್ಕೂಟ ವ್ಯವಸ್ಥೆಯ ನಿಜವಾದ ಬದ್ದತೆ, ಕಾಳಜಿ ಇರದ ರಾಶ್ಟ್ರೀಯ ಪಕ್ಷಗಳಿಂದ ಆಳಿಸಿಕೊಳ್ಳುತ್ತಿರುವ ರಾಜ್ಯಗಳ ಪಾಡು ನಿಜ ಅರ್ಥದಲ್ಲಿ ನಾಯಿ ಪಾಡೇ !
 
ಭಾರತಕ್ಕಿಂತ ಭಾರತೀಯರ ಏಳಿಗೆ ಮುಖ್ಯ
ಇತ್ತಿಚೆಗೆ ಗೆಳೆಯರೊಬ್ಬರು ಒಂದು ಮಾತು ಹೇಳಿದ್ದು ಇನ್ನೂ ಕಿವಿಯಲ್ಲಿದೆ. The welfare of Indian people is more important than Indian nation. ಭಾರತ ಒಕ್ಕೂಟದ ಪ್ರತಿಯೊಂದು ರಾಜ್ಯವೂ, ಪ್ರತಿಯೊಂದು ಭಾಷಾ ಜನಾಂಗವೂ ಏಳಿಗೆಯಾಗಬೇಕು. ಹಾಗಾಗಲು ಇವತ್ತಿರುವ ಪಿರಮಿಡ್ ಮಾದರಿಯ ಈ ವ್ಯವಸ್ಥೆ ಬದಲಾಗಬೇಕು. ಅಧಿಕಾರ ವಿಕೇಂದ್ರಿಕರಣಗೊಂಡು ನಿಜವಾದ ಅರ್ಥದಲ್ಲಿ ಭಾರತ ಒಕ್ಕೂಟ ವ್ಯವಸ್ಥೆಯಾಗಬೇಕು. ಅಧಿಕಾರ ರಾಜ್ಯಗಳಿಗೆ ನಿಲ್ಲದೇ ಪಂಚಾಯ್ತಿ ವ್ಯವಸ್ಥೆ ಬಲಗೊಳ್ಳುವವರೆಗೆ ಕೆಳ ಹರಿಯಬೇಕು. ರಾಜ್ಯಗಳು ಸಂಗ್ರಹಿಸುವ ತೆರಿಗೆಯ ಹೆಚ್ಚಿನ ಪಾಲು ಅವುಗಳಿಗೆ ಸಿಗುವ ಹಾಗಾಗಬೇಕು. ಕೇಂದ್ರವೇನಿದ್ದರೂ ರಕ್ಷಣೆ, ಕರೆನ್ಸಿ, ವಿದೇಶಾಂಗ ವ್ಯವಹಾರದಂತಹ ವಿಷಯಗಳಿಗೆ ಸೀಮಿತವಾಗಬೇಕು. ಆಗಲೇ ದೆಹಲಿಯಲ್ಲಿ ಮಡುವುಗಟ್ಟಿರುವ ಏಳಿಗೆಯೆಂಬ ನೀರು ಹರಿದು ದೇಶದ ಮೂಲೆ ಮೂಲೆ ತಲುಪಲು ಸಾಧ್ಯ. ಆಗಷ್ಟೇ ಬ್ರಿಟಿಷರಿಂದ ಸಿಕ್ಕ ಸ್ವಾತಂತ್ರ್ಯಕ್ಕೂ, ಅದಕ್ಕಾಗಿ ಹೋರಾಡಿ ಮಡಿದ ಹಿರಿಯರ ತ್ಯಾಗಕ್ಕೂ ಒಂದು ಸಾರ್ಥಕತೆ ಸಾಧ್ಯ.

ಚಿತ್ರ ಕೃಪೆ: ಡೆಕ್ಕನ್ ಕ್ರಾನಿಕಲ್

2 ಕಾಮೆಂಟ್‌ಗಳು:

  1. ಅದ್ಭುತವಾದ ವಿಚಾರಲಹರಿ ವಸಂತ್. ಕಣ್ತೆರೆಸುವ ಬರಹಕ್ಕಾಗಿ ನನ್ನಿ. ಈ ಬರಹ ಇಂಗ್ಲಿಷ್ ನಲ್ಲಿ ಬಂದರೆ ನನ್ನ ಕೆಲವು ಗೆಳೆಯರಲ್ಲಿ ಹಂಚುವ ಆಸೆ.

    ಪ್ರತ್ಯುತ್ತರಅಳಿಸಿ
  2. nimma haritavada bhashe mana muttuvantide.......... nimmalli tumba olleya patrika baraha garara gunagalive...... niveke rajyamattada ondu patrikeyalli ondu ankana shuru madabaradu? .... nimma matu pratiyobba kannadigarigu serali emba ashaya nannadu........

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !