ಭಾನುವಾರ, ಮಾರ್ಚ್ 17, 2013

GST ಮತ್ತು ಒಕ್ಕೂಟ ವ್ಯವಸ್ಥೆ

ಹೆಚ್ಚಿನ ರಾಜ್ಯಗಳು ಒಪ್ಪಿಗೆ ಸೂಚಿಸುವುದರೊಂದಿಗೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಇನ್ನೇನು ಜಾರಿಗೆ ಬರುವ ದಿನಗಳು ಹತ್ತಿರದಲ್ಲಿವೆ. ಏನಿದು ಜಿ.ಎಸ್.ಟಿ, ಅದರಿಂದಾಗುವ ಲಾಭವೇನು? ಯಾಕೆ ರಾಜ್ಯಗಳು ಅದನ್ನು ವಿರೋಧಿಸುತ್ತಿವೆ, ಒಕ್ಕೂಟ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳೇನು ಅನ್ನುವುದದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಅಂಕಣ.

ಭಾರತ ಒಕ್ಕೂಟದ ತೆರಿಗೆ ವ್ಯವಸ್ಥೆಯ ಮೇಲೊಂದು ಹಕ್ಕಿ ನೋಟ
ಭಾರತದ ಸಂವಿಧಾನ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಬೇರ ಬೇರೆ ರೀತಿಯ ತೆರಿಗೆ ಸಂಗ್ರಹಿಸುವ ಅಧಿಕಾರ ನೀಡಿದೆ. ಕೇಂದ್ರ ಸರ್ಕಾರ ನೇರ ತೆರಿಗೆಗಳಾದ ಜನರ ಆದಾಯ ತೆರಿಗೆ, ಕಂಪನಿಗಳ ಕಾರ್ಪೊರೇಟ್ ತೆರಿಗೆ ಹಾಗೂ ವಾರೆ (ಇಂಡೈರೆಕ್ಟ್) ತೆರಿಗೆಗಳಾದ ಸೇವಾ ತೆರಿಗೆ, ಕಸ್ಟಮ್ಸ್ ಮತ್ತು ಒಳನಾಡ ತೆರಿಗೆ(ಎಕ್ಸೈಸ್) ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳ ತೆರಿಗೆ ವ್ಯಾಪ್ತಿಗೆ ವ್ಯಾಟ್, ಮಾರಾಟ ತೆರಿಗೆ ಮತ್ತು ಕೆಲ ಸ್ಥಳೀಯ ತೆರಿಗೆಗಳು ಬರುತ್ತವೆ. ರಾಜ್ಯವೊಂದರಿಂದ ಕೇಂದ್ರಕ್ಕೆ ಹೋಗುವ ತೆರಿಗೆಗೆ ಹೋಲಿಸಿದರೆ ರಾಜ್ಯ ಸಂಗ್ರಹಿಸುವ ತೆರಿಗೆಯ ಪ್ರಮಾಣ ಬಹಳ ಸಣ್ಣದೇ ಅನ್ನಬಹುದು. ಕೇಂದ್ರ ಸಂಗ್ರಹಿಸಿದ ತೆರಿಗೆಯಲ್ಲಿ ಕೆಲ ಪಾಲನ್ನು ರಾಜ್ಯಗಳಿಗೆ ಹಣಕಾಸು ಆಯೋಗವು ನಿರ್ಧರಿಸಿದಂತೆ ಮರಳಿ ಹಂಚಲಾಗುತ್ತದೆ. ಸಂವಿಧಾನ ಕೊಟ್ಟಿರುವ ಅವಕಾಶಗಳಡಿ ಕೇಂದ್ರ ಒಂದು ಸರಕಿನ ತಯಾರಿಕೆ ಮತ್ತು ಸೇವೆಯ ಮೇಲೆ ತೆರಿಗೆಯನ್ನು ವಿಧಿಸಬಹುದಾಗಿದ್ದರೆ, ಸರಕಿನ ಮೇಲೆ ಮಾರಾಟದ ತೆರಿಗೆ ಹಾಕುವ ಹಕ್ಕನ್ನು ರಾಜ್ಯಗಳಿಗೆ ನೀಡಿದೆ. ರಾಜ್ಯಗಳಿಗೆ ಆಮದು ಸುಂಕ ಹಾಕುವ ಅವಕಾಶವೂ ಇಲ್ಲ. ಈ ಮುಂಚಿನ ತೆರಿಗೆ ಪದ್ದತಿಯಲ್ಲಿ ಜನರು ಬೇರೆ ಬೇರೆ ಹಂತದಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಅಂದರೆ ಒಂದು ಉತ್ಪನ್ನಕ್ಕೆ ಬಳಸುವ ಮೂಲವಸ್ತುವಿನ ಖರೀದಿಯಿಂದ ಹಿಡಿದು ಉತ್ಪಾದನೆ, ಹಂಚಿಕೆ, ಸಾಗಾಟ ಕೊನೆಯಲ್ಲಿ ಗ್ರಾಹಕನಿಗೆ ಮಾರುವ ಹಂತದವರೆಗೆ ಪ್ರತಿ ಹಂತದಲ್ಲೂ ತೆರಿಗೆ ಕಟ್ಟಬೇಕಾದ ಅಗತ್ಯವಿತ್ತು. ಸರಿಯಾದ ವ್ಯವಸ್ಥೆಯಲ್ಲಿ ಉತ್ಪಾದಕನೊಬ್ಬ ಒಂದು ವಸ್ತುವಿಗೆ ತನ್ನ ಮಟ್ಟದಲ್ಲಿ ತಾನು ಸೇರಿಸಿದ ಮೌಲ್ಯ ವರ್ಧನೆಗೆ ತಕ್ಕುದಾಗಿ ತೆರಿಗೆ ಕಟ್ಟುವ ಹಾಗಿರಬೇಕಿತ್ತು. ಹಾಗಿರದೇ ಇದ್ದ ವ್ಯವಸ್ಥೆಯಿಂದಾಗಿ ಉತ್ಪಾದಕರು ಅತಿ ಹೆಚ್ಚಿನ ತೆರಿಗೆ ಕಟ್ಟುವ ಒತ್ತಡಕ್ಕೊಳಗಾಗುತ್ತಿದ್ದರು. ಇದರಿಂದ ಸಹಜವಾಗಿಯೇ ತೆರಿಗೆ ವ್ಯವಸ್ಥೆಯಿಂದಲೇ ಆಚೆ ಉಳಿಯುವ, ತೆರಿಗೆ ವಂಚಿಸುವವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಯಿತು. ವ್ಯಾಟ್ ಹೆಚ್ಚಾಗಿ ಸರಕುಗಳ ಮೇಲೆ ಹಾಕುವ ತೆರಿಗೆಯಾಗಿದ್ದರೆ ಹೊಸತಾಗಿ ಪರಿಚಯಗೊಳ್ಳುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಹೆಸರೇ ಸೂಚಿಸುವಂತೆ ಸರಕಿನೊಂದಿಗೆ ಸೇವೆಯ ಮೇಲೂ ತೆರಿಗೆ ವಿಧಿಸುವ ಅವಕಾಶ ಹೊಂದಿದೆ.

ಏನಿದು ಜಿ.ಎಸ್.ಟಿ?
ಜಿ.ಎಸ್.ಟಿ ಒಂದು ತೆರಿಗೆ ಸುಧಾರಣೆಯಲ್ಲಿನ ಮಹತ್ವದ ಕ್ರಮವೆಂದೇ ಬಿಂಬಿತವಾಗಿದೆ. 1991ರಿಂದಾಚೆ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳಲ್ಲಿ ಅತ್ಯಂತ ಮಹತ್ವದ್ದು ಕೂಡ ಅನ್ನಿಸಿಕೊಂಡಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿರುವ ಹತ್ತಾರು ಗೋಜಲಿನ ವಾರೆ ತೆರಿಗೆಗಳ ಜಾಗದಲ್ಲಿ ಈ ಎಲ್ಲ ತೆರಿಗೆಗಳನ್ನು ಒಂದಾಗಿಸಿದ ಹೊಸತೊಂದು ತೆರಿಗೆ ಮಾದರಿ ಜಿ.ಎಸ್.ಟಿ ಅನ್ನಬಹುದು. ಆರ್ಥಿಕ ತಜ್ಞ ವಿಜಯ್ ಕೇಲ್ಕರ್ ಮುಂದಾಳತ್ವದ ಸಮಿತಿ ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದಾಗಿಸಿ ದೇಶಕ್ಕೆ ಒಂದೇ ಜಿ.ಎಸ್.ಟಿ ತರುವ ಪ್ರಸ್ತಾವನೆಯನ್ನು ಮುಂದೆ ತಂದಿದ್ದರು. ಆ ಪ್ರಸ್ತಾವನೆಯಂತೆ ಎಲ್ಲ ತೆರಿಗೆಗಳನ್ನು ಕೇಂದ್ರವೇ ಸಂಗ್ರಹಿಸಿ ಆನಂತರ ರಾಜ್ಯಗಳಿಗೆ ಸೂತ್ರವೊಂದರ ಅನ್ವಯ ಹಂಚುವ ಸಲಹೆ ನೀಡಿದ್ದರು. ಮೊದಲೇ ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿರುವ ರಾಜ್ಯಗಳು ತಮ್ಮ ಕೈಯಲ್ಲಿನ ಚಿಕ್ಕ ಪುಟ್ಟ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಕಿತ್ತುಕೊಳ್ಳುವ ಕೇಂದ್ರದ ನಡೆಯನ್ನು ಸಹಜವಾಗಿಯೇ ವಿರೋಧಿಸಿದ್ದರ ಪರಿಣಾಮವಾಗಿ ಈಗ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಇಬ್ಬಗೆಯ (ಡ್ಯುಯಲ್ ) ಜಿ.ಎಸ್.ಟಿ ತೆರಿಗೆಯನ್ನು ತರುವ ಪ್ರಯತ್ನ ನಡೆಯುತ್ತಿದೆ. ಈ ಸುಲಭವಾದ ತೆರಿಗೆ ಪದ್ದತಿಯಿಂದ ಭಾರತ ಒಕ್ಕೂಟದ ಜಿ.ಡಿ.ಪಿ ಕಡಿಮೆಯೆಂದರೂ 1.5% ಏರಿಕೆ ಕಾಣುವ ನಿರೀಕ್ಷೆಯನ್ನು ಆರ್ಥಿಕ ತಜ್ಞರು ವ್ಯಕ್ತ ಪಡಿಸುತ್ತಾರೆ. ಸರಿ ಸುಮಾರು 75.000 ಕೋಟಿ ರೂಪಾಯಿಯಷ್ಟು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸುವ ಸಾಧ್ಯತೆ ಇದೆ ಅನ್ನುತ್ತಾರೆ ಪರಿಣಿತರು.

ಯಾರಿಗೆ ಏನು ಲಾಭ?

ಜಿ.ಎಸ್.ಟಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಯಾವುದೇ ವಸ್ತುವಿನ ಮೇಲಿನ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿ ತೆರಿಗೆಯನ್ನು ಮಾರಾಟದ ಹಂತದಲ್ಲಿ (ಪಾಯಿಂಟ್ ಆಫ್ ಸೇಲ್) ಸಂಗ್ರಹಿಸಲಾಗುವುದು. ಉತ್ಪಾದನೆಗೆ ತಗಲಿರುವ ವೆಚ್ಚದ ಮೇಲೆ ಈ ಎರಡೂ ತೆರಿಗೆಗಳನ್ನು ವಿಧಿಸಲಾಗುವುದು. ಈ ಮೊದಲಿನ ವ್ಯವಸ್ಥೆಯಲ್ಲಿದ್ದ ಪರೋಕ್ಷ ತೆರಿಗೆಗಳಾದ ಸೇವಾ ತೆರಿಗೆ, ಮಾರಾಟ ತೆರಿಗೆ, ಒಳಬರುವ ತೆರಿಗೆ, ಒಳನಾಡ ತೆರಿಗೆ, ಸೆಸ್, ಸರ್ಚಾರ್ಜ್, ವ್ಯಾಟ್, ರಾಜ್ಯ-ರಾಜ್ಯಗಳ ನಡುವಿನ ಮಾರಾಟ ತೆರಿಗೆ ಎಲ್ಲದರ ಜಾಗದಲ್ಲಿ ಕೇವಲ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿಗಳು ಮಾತ್ರ ಅನ್ವಯಿಸಲಿವೆ. ಹತ್ತಾರು ಗೋಜಲಿನ ತೆರಿಗೆಗಳು ದೂರವಾಗುವುದರಿಂದ ಗ್ರಾಹಕರಿಗೆ ನೇರವಾಗಿ ಅದರ ಲಾಭ ದೊರಕಲಿದೆ. ಕಡಿಮೆಯಾದ ಬೆಲೆಯಿಂದ ಹೆಚ್ಚುವ ಕೊಳ್ಳುವಿಕೆಯಿಂದ ಕಂಪನಿಗಳಿಗೂ ಹೆಚ್ಚಿನ ವ್ಯಾಪಾರದಿಂದ ಲಾಭವಾಗಲಿದೆ. ಜೊತೆಯಲ್ಲೇ ಉತ್ಪಾದಕರಿಗೆ ತಗಲುವ ತೆರಿಗೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಡಿಮೆಯಾಗುವುದರಿಂದ ಅವರು ತೆರಿಗೆ ಕದಿಯದೇ ತೆರಿಗೆ ಕಟ್ಟುವ ಪ್ರಮಾಣವೂ ಏರಲಿದೆ ಅನ್ನುವುದು ಬಲ್ಲವರ ಅಂಬೋಣ.

ಇಷ್ಟೆಲ್ಲ ಲಾಭವಿದ್ದರೂ ರಾಜ್ಯಗಳ ವಿರೋಧವೇಕೆ?
ಎಲ್ಲವೂ ರಂಗು ರಂಗಾಗಿ ಕಂಡರೂ ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷವೆನ್ನದೇ ಹಲವಾರು ರಾಜ್ಯಗಳು ಜಿ.ಎಸ್.ಟಿಯನ್ನು ವಿರೋಧಿಸುತ್ತ ಬಂದಿವೆ. ಹಲವು ಹಂತದ ಕೊಡುಕೊಳ್ಳುವಿಕೆಯ ನಂತರ ರಾಜ್ಯಗಳ ಪಟ್ಟು ಸಡಿಲಿಸದ ಹೋರಾಟದ ಫಲವಾಗಿ ಕೇಂದ್ರ ಇಂದು ರಾಜ್ಯಗಳ ಕಾಳಜಿಯನ್ನು ಪರಿಹರಿಸುವತ್ತ ಗಮನ ಹರಿಸಿದೆ ಮತ್ತು ಅದರಿಂದಾಗಿ ಜಿ.ಎಸ್.ಟಿ ಜಾರಿಗೆ ದಿನ ಹತ್ತಿರದಲ್ಲಿವೆ ಎಂಬಂತೆ ಕಾಣುತ್ತಿದೆ. ಹಾಗಿದ್ದರೆ ರಾಜ್ಯಗಳು ವಿರೋಧ ಮಾಡಿದ್ದಾದರೂ ಯಾವ ಕಾರಣಕ್ಕೆ ಅನ್ನುವುದನ್ನು ನೋಡಿದಾಗ ಕಾಣುವ ಮುಖ್ಯ ಅಂಶಗಳು.
 • ಈ ಸದ್ಯಕ್ಕೆ ರಾಜ್ಯಗಳು ಸಂಗ್ರಹಿಸುತ್ತಿರುವ ಹಲವು ತೆರಿಗೆಗಳಿಗೆ ಜಿ.ಎಸ್.ಟಿ ಕತ್ತರಿ ಹಾಕಲಿದೆ. ಇದರಿಂದ ತೆರಿಗೆ ಸಂಗ್ರಹ ವಿಷಯದಲ್ಲಿನ ಸ್ವಾಯತ್ತತೆ ಕಳೆದುಕೊಳ್ಳುವ ಆತಂಕ ರಾಜ್ಯಗಳದ್ದಾಗಿದೆ.


 • ಇಲ್ಲಿಯವರೆಗೆ ರಾಜ್ಯಗಳು ಸಂಗ್ರಹಿಸುತ್ತಿದ್ದ ಕೇಂದ್ರ ಮಾರಾಟ ತೆರಿಗೆ (ಸಿ.ಎಸ್.ಟಿ) ಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದರಿಂದ ರಾಜ್ಯಗಳ ತೆರಿಗೆ ಸಂಗ್ರಹಕ್ಕೆ ದೊಡ್ಡ ಹೊಡೆತ ಬೀಳಲಿದೆ.
 • ಕಾಳು ಕಡಿ ಖರೀದಿ ಮೇಲಿನ ತೆರಿಗೆಯನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರುವುದರಿಂದಾಗಿ ಕೆಲ ರಾಜ್ಯಗಳಿಗೆ ತೆರಿಗೆ ಕೊರತೆಯಾಗಲಿದೆ. ಪಂಜಾಬ್ ರಾಜ್ಯ ತನಗೆ ವರ್ಷಕ್ಕೆ 1500 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದಿದೆ.


 • ಜಿ.ಎಸ್.ಟಿ ತೆರಿಗೆಯ ಮಿತಿಯನ್ನು ಕೇಂದ್ರ 20%ಗೆ ನಿಕ್ಕಿ ಮಾಡಿದ್ದರೆ ಕರ್ನಾಟಕ ರಾಜ್ಯ ಈ ಮಿತಿಯನ್ನು 24-26%ವರೆಗೆ ನಿಗದಿ ಮಾಡುವ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿದೆ.
 • ಎಲ್ಲ ರಾಜ್ಯಗಳು ಜಿ.ಎಸ್.ಟಿ ಕೆಳಗೆ ಕೇಂದ್ರ ತರಲು ಬಯಸಿರುವ ಡಿಕ್ಲರ್ಡ್ ಗೂಡ್ಸ್ (ಘೋಷಿತ ಸರಕು) ಅನ್ನುವ ವಿಷಯವನ್ನು ವಿರೋಧಿಸಿವೆ. ಹತ್ತಿ, ಎಣ್ಣೆ, ಸಕ್ಕರೆ, ಬಟ್ಟೆ, ಕಬ್ಬಿಣ, ಸ್ಟೀಲ್, ಬೇಳೆ ಕಾಳು, ತಂಬಾಕು, ಎಲ್.ಪಿ.ಜಿ ಮುಂತಾದವುಗಳನ್ನು ಘೋಷಿತ ಸರಕಿನ ವ್ಯಾಪ್ತಿಗೆ ತರಲು ಕೇಂದ್ರ ತಂತ್ರ ರೂಪಿಸಿತ್ತು. ಒಮ್ಮೆ ಘೋಷಿತ ಸರಕು ಎಂದು ನಿರ್ಣಯವಾದರೆ ಆ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇವಲ ಕೇಂದ್ರಕ್ಕೆ ಮಾತ್ರ ದಕ್ಕಲಿದೆ. ಇದನ್ನು ಎಲ್ಲ ರಾಜ್ಯಗಳು ವಿರೋಧಿಸಿವೆ.
 • ತೈಲ ಉತ್ಪನ್ನಗಳನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಲು ಕೇಂದ್ರ ಮುಂದಾಗಿದ್ದನ್ನು ರಾಜ್ಯಗಳು ವಿರೋಧಿಸಿವೆ. ರಾಜ್ಯಗಳ 22%ಕ್ಕೂ ಅಧಿಕ ಆದಾಯ ಈ ಒಂದೇ ಮೂಲದಿಂದ ಬರುತ್ತಿರುವಾಗ ಇದರ ಮೇಲೆ ಸೂಕ್ತವೆನಿಸುವ ತೆರಿಗೆ ವಿಧಿಸುವ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಕೇಂದ್ರ ಮಾಡುತ್ತಿದೆ ಎಂದು ರಾಜ್ಯಗಳು ದೂರಿದ್ದವು.
 • ಕೇಂದ್ರ-ರಾಜ್ಯ-ರಾಜ್ಯಗಳ ನಡುವಿನ ತೆರಿಗೆ ತಕರಾರುಗಳನ್ನು ಬಗೆಹರಿಸಲು ಜಿ.ಎಸ್.ಟಿ ಯೊಡನೆ ಶುರು ಮಾಡಬೇಕೆಂದಿದ್ದ ಡಿಸ್ಪ್ಯೂಟ್ ಸೆಟ್ಲಮೆಂಟ್ ಅತಾರಿಟಿ ಒಂದು ಸಂವಿಧಾನಿಕ ಸ್ಥಾನಮಾನ ಹೊಂದುವ ವ್ಯವಸ್ಥೆಯಾಗುವುದರಿಂದ ತಕರಾರು ಬಗೆಹರಿಸಲು ಮಧ್ಯಸ್ತಿಕೆಗಿಂತ ತನ್ನ ಅಭಿಪ್ರಾಯಗಳನ್ನೇ ರಾಜ್ಯಗಳ ಮೇಲೆ ಹೇರುವಂತಹ ವ್ಯವಸ್ಥೆ ಇದಾಗಬಹುದು ಅನ್ನುವ ಆತಂಕ ರಾಜ್ಯಗಳಲ್ಲಿದ್ದು ಹೆಚ್ಚಿನ ಎಲ್ಲ ರಾಜ್ಯಗಳು ಇದನ್ನು ವಿರೋಧಿಸಿವೆ.
ಕೇಂದ್ರ ತನ್ನ ಜಿಗುಟುತನ ಬಿಡಲಿ
ಹಿಂದಿನಿಂದಲೂ ರಾಜ್ಯಗಳನ್ನು ತನ್ನ ಅಡಿಯಾಳೆಂಬಂತೆ ನೋಡಿಕೊಂಡು ಬಂದಿರುವ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ರಾಜ್ಯಗಳು ತಮ್ಮ ಹಕ್ಕಿಗಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಮೂಲಕ ಭಾರತ ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಒಂದು ಕೇಂದ್ರಿಕೃತ ವ್ಯವಸ್ಥೆಯಲ್ಲ ಅನ್ನುವ ಸಂದೇಶವನ್ನು ಕೊಟ್ಟಿವೆ. ಲೋಕಪಾಲ್ ವ್ಯಾಪ್ತಿಗೆ ಲೋಕಾಯುಕ್ತರನ್ನು ತರುವ ಪ್ರಯತ್ನ, ಉಗ್ರರ ವಿರುದ್ದದ ಹೋರಾಟದಲ್ಲಿ ರಾಜ್ಯಗಳ ಅನಿಸಿಕೆಯನ್ನೇ ಕೇಳದೇ ಎನ್.ಸಿ.ಟಿ.ಸಿ ಮಾಡಲು ಹೊರಟಿದ್ದು, ಆರ್.ಪಿ.ಎಫ್ ಬಿಲ್ ಮೂಲಕ ರೈಲ್ವೆ ಪೋಲಿಸರಿಗೆ ರಾಜ್ಯ ಪೋಲಿಸರ ಕೈಯಲ್ಲಿದ್ದ ಅಧಿಕಾರವನ್ನು ಕೊಡುವ ಪ್ರಯತ್ನ ಹೀಗೆ ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿ ನಡೆದುಕೊಂಡಿದ್ದನ್ನು ಪ್ರಾದೇಶಿಕ ಪಕ್ಷಗಳ ಆಳ್ವಿಕೆಯ ಹಲವಾರು ರಾಜ್ಯಗಳು ಉಗ್ರವಾಗಿ ವಿರೋಧಿಸಿದ್ದರ ಪರಿಣಾಮವಾಗಿ ಇಂದು ರಾಜ್ಯಗಳ ಸ್ವಾಯತ್ತತೆ ಕಾಯ್ದುಕೊಳ್ಳುವಲ್ಲಿ ಸಹಾಯವಾಗಿದೆ. ಜಿ.ಎಸ್.ಟಿ ವಿಷಯದಲ್ಲೂ ಕೇಂದ್ರ ತನ್ನ ಜಿಗುಟುತನ ಬಿಟ್ಟು ಎಲ್ಲ ರಾಜ್ಯಗಳ ಆತಂಕಗಳನ್ನು ದೂರ ಮಾಡಿ ಮುಂದಿನ ಹೆಜ್ಜೆ ಇಡಲಿ. ಹಾಗೆಯೇ, ರಾಜ್ಯಗಳ ಪರ ಧ್ವನಿ ಎತ್ತುವ ಕೆಲಸವನ್ನು ಕೇವಲ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಹೊರ ಗುತ್ತಿಗೆ ಕೊಟ್ಟಂತೆ ವರ್ತಿಸುವ ಬದಲು ಕರ್ನಾಟಕ ಸರ್ಕಾರವೂ ಒಕ್ಕೂಟದಲ್ಲಿ ತನ್ನ ನ್ಯಾಯಯುತ ಹಕ್ಕಿಗಾಗಿ ದನಿ ಎತ್ತಲಿ.

1 ಕಾಮೆಂಟ್‌:

 1. ಪ್ರಶಾಂತ ಸೊರಟೂರಮಾರ್ಚ್ 20, 2013 07:09 ಅಪರಾಹ್ನ

  ವಸಂತ ಜಿಎಸಟಿ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ನನ್ನಿ.
  ಕೇಂದ್ರ ಸರಕಾರದ ಕೈಯಲ್ಲಿ ಎಲ್ಲ ತೆರಿಗೆ ಹೋದರೆ ಕರ್ನಾಟಕದಂತ ರಾಜ್ಯಗಳಿಗೆ ತುಂಬಾ ನಶ್ಟವಾಗಲಿದೆ. ಹಣಕಾಸು ಆಯೋಗ ತೆರಿಗೆಯ ದುಡ್ಡನ್ನು ಎರಡು ಬಗೆಗಳಲ್ಲಿ ಹಂಚಿಕೆ ಮಾಡುತ್ತದೆ ೧) ನೇರ ಹಂಚಿಕೆ (Verticle devolution): ಇದರಲ್ಲಿ ರಾಜ್ಯದಿಂದ ಹೋದ ತೆರಿಗೆಯಲ್ಲಿ ಇಂತಿಶ್ಟು ಅಂತಾ ಆ ರಾಜ್ಯಕ್ಕೆ ಪಾಲು ಕೊಡುವುದು (13 ನೇ ಹಣಕಾಸು ಆಯೋಗದಂತೆ ಇದು 32%) ೨)ಅಡ್ಡ ಹಂಚಿಕೆ (Horizantal devolution): ಇದರಲ್ಲಿ ೧೩ನೇ ಹಣಕಾಸು ಆಯೋಗ ಹೀಗೆ ಹಣ ಹಂಚಲು ಹೇಳಿದೆ, 1971 ರ ಜನಸಂಕ್ಯೆ:25%, ಹರವು (area):10%, ಹಣಕಾಸು ಕಸುವಿನ ದೂರ (Fisical capcity distance): 47.5% ಮತ್ತು ಹಣಕಾಸಿನ ಅಚ್ಚುಕಟ್ಟತನ: 10%. ಈ ಕಟ್ಟಲೆಗಳಿಂದಾಗಿ ಜನಸಂಕ್ಯೆಯಲ್ಲಿ ಕಡಿಮೆ ಇರುವ, ಹಲವು ರಾಜ್ಯಗಳಿಗಿಂತ ತೆರಿಗೆ ಗಳಿಕೆಯಲ್ಲಿ ಚೆನ್ನಾಗಿರುವ ಕರ್ನಾಟಕಕ್ಕೆ ನಶ್ಟವಾಗಲಿದೆ! ಜೊತೆಗೆ ಇಡೀ ಬಾರತದಲ್ಲಿ, ರಾಜ್ಯ ಒಳತೆರಿಗೆ ಕೂಡಿಸುವಿಕೆಯಲ್ಲಿ ಕರ್ನಾಟಕ ಮುಂಚೂಣಿ ರಾಜ್ಯ ಈಗ ಜಿಎಸಟಿ ಇಂದಾಗಿ ರಾಜ್ಯಕ್ಕೆ ನೇರವಾಗಿ ದಕ್ಕುತ್ತಿದ್ದ ಒಳತೆರಿಗೆ ಕೇಂದ್ರದ ಚೀಲಕ್ಕೆ ಹೋಗುತ್ತದೆ!

  ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !