ಬುಧವಾರ, ಮಾರ್ಚ್ 13, 2013

ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ Vs ಮಾರುಕಟ್ಟೆ ಆಧಾರಿತ ಸಮಾಜ

ಮೈಕಲ್ ಸ್ಯಾಂಡೆಲ್ ನಮ್ಮ ನಡುವಿನ ಅಪರೂಪದ ರಾಜಕೀಯದ ಫಿಲಾಸಫರ್ ಗಳಲ್ಲಿ ಒಬ್ಬರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ "ಜಸ್ಟಿಸ್" ಅನ್ನುವ ಕೋರ್ಸ್ ಕಲಿಸುವ ಇವರು ತಮ್ಮ "ವಾಟ್ ಮನಿ ಕಾಂಟ್ ಬಯ್ - ದಿ ಮಾರಲ್ ಲಿಮಿಟ್ಸ್ ಆಫ್ ಮಾರ್ಕೆಟ್" ಅನ್ನುವ ಹೊತ್ತಗೆಯ ಮೂಲಕ ಮುಕ್ತ ಮಾರುಕಟ್ಟೆಯ ಈ ಸಂದರ್ಭದಲ್ಲಿ ನೈತಿಕವಾದದ ಒಂದು ಬಹು ದೊಡ್ಡ ಪ್ರಶ್ನೆಯೊಂದನ್ನು ನಮ್ಮ ಮುಂದಿರಿಸಿದ್ದಾರೆ. ಅದು "ಮಂದಿಯಾಳ್ವಿಕೆಯ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಸರಿಯಾದ ಪಾತ್ರ ಏನಾಗಿರಬೇಕು? ಹಣದಿಂದ ಕೊಳ್ಳಲಾಗದ, ನೈತಿಕತೆಯ ನೆಲೆಗಟ್ಟಿನಲ್ಲಿ ಮಾತ್ರ ನೋಡಬಹುದಾದ ವಿಷಯಗಳಲ್ಲಿ ಮಾರುಕಟ್ಟೆಯ ತಲುಪಿಗೆ ಎಲ್ಲಿ ಮತ್ತು ಯಾಕೆ ಗೆರೆ ಎಳೆಯಬೇಕಿದೆ ಅನ್ನುವುದರ ಬಗ್ಗೆ ಹತ್ತಾರು ಉದಾಹರಣೆಗಳ ಸಮೇತ ಅಮೇರಿಕದ ಸಮಾಜದಲ್ಲಾಗುತ್ತಿರುವ ಚರ್ಚೆ, ತಲ್ಲಣಗಳಿಗೆ ಕನ್ನಡಿ ಹಿಡಿಯುವ ಕೆಲಸ ಈ ಹೊತ್ತಗೆಯ ಮೂಲಕ ಮಾಡಿದ್ದಾರೆ. ಮಾರುಕಟ್ಟೆಯ ವ್ಯವಸ್ಥೆಯತ್ತ ದಾಪುಗಾಲಿಡುತ್ತಿರುವ ಭಾರತ ಮತ್ತು ಕರ್ನಾಟಕದ ವ್ಯವಸ್ಥೆಗಳಿಗೂ ಅರೆಗಳಿಗೆ ನಿಂತು ನೋಡುವ ಪಾಠಗಳು ಈ ಹೊತ್ತಗೆಯಲ್ಲಿವೆ ಅನ್ನಬಹುದು.



ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಗೂ ಮಾರುಕಟ್ಟೆ ಆಧಾರಿತ ಸಮಾಜಕ್ಕೂ ವ್ಯತ್ಯಾಸವಿದೆ
ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಅಮೇರಿಕಕ್ಕೆ ತಂದು ಕೊಟ್ಟಿರುವ ಅನುಕೂಲಗಳು, ಲಾಭಗಳು, ಉದ್ಯಮಶೀಲತೆ ಮತ್ತು ಸ್ಪರ್ಧಾತ್ಮಕ ಗುಣಗಳಾವದನ್ನು ಸ್ಯಾಂಡೆಲ್ ಅಲ್ಲಗಳೆಯುವುದಿಲ್ಲ. ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ  ಜಗತ್ತಿನ ಹಲವೆಡೆ ಸಿರಿವಂತಿಕೆ, ಏಳಿಗೆಯನ್ನು ತಂದಿದೆ ಆದರೆ ಇಂದು ನಾವು ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯಿಂದ ಮಾರುಕಟ್ಟೆ ಆಧಾರಿತ ಸಮಾಜದೆಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ಇದು ಅಪಾಯಕಾರಿ ಎಂದು ಸ್ಯಾಂಡೆಲ್ ವಾದಿಸುತ್ತಾರೆ. ಹಾಗಿದ್ದರೆ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಗೂ, ಸಮಾಜಕ್ಕೂ ಏನಿದೆ ಅಂತರ ಅನ್ನುವ ಪ್ರಶ್ನೆ ಏಳುತ್ತೆ. ಅದಕ್ಕೆ ಸ್ಯಾಂಡೆಲ್ ಕೊಡುವ ಉತ್ತರ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಉತ್ಪಾದಕತೆ ಹೆಚ್ಚಿಸಲು, ಆರ್ಥಿಕ ಏಳಿಗೆ ಸಾಧಿಸಲು ಇರುವ ಅತ್ಯಂತ ಮಹತ್ವದ ಮತ್ತು ಪರಿಣಾಮಕಾರಿಯಾದ ಸಾಧನ ಆದರೆ ಮಾರುಕಟ್ಟೆ ಆಧಾರಿತ ಸಮಾಜ ಹಾಗಲ್ಲ, ಅಲ್ಲಿ ಹಣವೊಂದಿದ್ದರೆ ಸಾಕು  ಸರಿ ತಪ್ಪುಗಳ ಪ್ರಶ್ನೆಗಳೇ ಇಲ್ಲದೆ ಎಲ್ಲವೂ ಕೊಳ್ಳಲು ಸಿಗುತ್ತೆ. ಆರೋಗ್ಯ, ಕಲಿಕೆ, ಸಾರ್ವಜನಿಕ ಸುರಕ್ಷತೆ, ಪರಿಸರದ ಉಳಿವಿನಂತಹ ಸಮಾಜವೆಲ್ಲವನ್ನೂ ತಟ್ಟುವಂತಹ ವಿಷಯಗಳ ಹಂಚಕೆ ಹೇಗಾಗಬೇಕು ಅನ್ನುವುದನ್ನು ಮಾರುಕಟ್ಟೆಯೇ ನಿರ್ಧರಿಸುವ ಮಾದರಿ ಇಲ್ಲಿದೆ. ಸಮಾಜದ ಎಲ್ಲ ಹಂತದ ಎಲ್ಲ ವಿಷಯಗಳನ್ನೂ ಮಾರುಕಟ್ಟೆಯೇ ನಿರ್ಧರಿಸುವಂತಾದಾಗ ಮಾರುಕಟ್ಟೆಯಾಚೆಗಿನ ನೈತಿಕವಾದ, ಮಾನವೀಯವಾದ ಮೌಲ್ಯಗಳು ಮೂಲೆ ಸೇರಿ, ದುಡ್ಡಿದ್ದವರಿಗೆ ಎಲ್ಲವೂ ಸಿಗುತ್ತೆ, ಆದರೆ ದುಡ್ಡಿಲ್ಲದವರಿಗೆ ಏನು ದೊರೆಯದು ಅನ್ನುವಂತಹ ವ್ಯವಸ್ಥೆ ಜಾರಿಗೆ ಬಂದುಬಿಡುವ ಆತಂಕ ಅಮೇರಿಕ ಎದುರಿಸುತ್ತಿದೆ ಎಂದು ಸ್ಯಾಂಡೆಲ್ ಕಳವಳ ತೋರುತ್ತಾರೆ.


ತಮ್ಮ ಮಾತನ್ನು ಸಮರ್ಥಿಸಲು ಅವರು ಕೆಲವು ಎತ್ತುಗೆಗಳನ್ನು ಕೊಡುತ್ತಾರೆ. ಅಮೇರಿಕದ ಹಲವಾರು ರಾಜ್ಯಗಳಲ್ಲಿ ಶಾಲೆ ಮಕ್ಕಳು ತಮ್ಮ ಹೋಂ ವರ್ಕ್ ಮಾಡಿದರೆ, ಒಳ್ಳೆಯ ಫಲಿತಾಂಶ ತೋರಿದರೆ ಅವರಿಗೆ ಹಣದ ಪ್ರೋತ್ಸಾಹ ನೀಡುವ ಪದ್ದತಿ ಜಾರಿಗೆ ಬಂದಿದೆ. ಇನ್ನು ಕೆಲವು ಶಾಲೆಗಳಲ್ಲಿ ಓದುವ ಪ್ರತಿ ಹೊತ್ತಗೆಗೂ ಮಗುವಿಗೆ ಎರಡು ಡಾಲರ್ ಹಣ ಉತ್ತೇಜನದ ರೂಪದಲ್ಲಿ ಕೊಡುವ ಪದ್ದತಿ ಜಾರಿಗೆ ಬಂದಿದೆ. ಮಕ್ಕಳಿಗೆ ಕಲಿಯಲು ಹಣದ ಆಸೆ ತೋರಿಸುವಂತದ್ದು ಕೆಟ್ಟ ಪಾಟವನ್ನು ಕಲಿಸುತ್ತದೆ. ಓದುವುದು ಒಂದು ಸಾರ್ಥಕತೆ ನೀಡುವ, ಮನೋವಿಕಾಸದ ಹಾದಿಯೆಂದು ನೋಡದೇ ಹಣ ಮಾಡಲು ಇರುವ ಒಂದು ಕೆಲಸ ಅನ್ನುವ ಭಾವ ಮಕ್ಕಳಲ್ಲಿ ಬಿತ್ತುವ ಎಲ್ಲ ಅಪಾಯವಿದೆ ಅನ್ನುತ್ತಾರೆ ಸ್ಯಾಂಡೆಲ್. ಇನ್ನೊಂದು ಉದಾಹರಣೆಯಾಗಿ ಅಲ್ಲಿನ ಕೆಲ ಆಸ್ಪತ್ರೆಗಳಲ್ಲಿ ಸರದಿಯಲ್ಲಿ ಮೊದಲು ಬಂದ ರೋಗಿಯ ಬದಲು ಹಣ ತೆತ್ತು ಸರದಿ ಮುರಿದು ಬರುವ ರೋಗಿಗಳಿಗೆ ಆದ್ಯತೆ ನೀಡುವಂತಹ ಬೆಳವಣಿಗೆಗಳನ್ನ ಸ್ಯಾಂಡೆಲ್ ಎತ್ತಿ ತೋರುತ್ತಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಅನ್ನುವುದು ಸರದಿ ಧರ್ಮ. ಆದರೆ ಕೊಂಚ ಹಣ ತೆತ್ತರೆ ಸರದಿ ಮುರಿವ ಹಕ್ಕು ಸಿಗುವಂತಾದರೆ ಅಷ್ಟೊತ್ತು ಸರದಿಯಲ್ಲಿ ಕಾದ, ಆದರೆ ಹಣ ಕೊಡಲಾಗದ ವ್ಯಕ್ತಿಯ ಮನದಲ್ಲಿ ನಾವು ಯಾವ ಭಾವನೆಯನ್ನು ತುಂಬುತ್ತಿದ್ದೇವೆ? ಅಮೇರಿಕದ ಸಾಮಾಜಿಕ ಜೀವನದೆಲ್ಲೆಡೆ ಸರದಿಯಲ್ಲಿ ನಿಲ್ಲುವ ಸಂಸ್ಕಾರದ ಜಾಗದಲ್ಲಿ ಹಣದ ಸಂಸ್ಕಾರ ಬಂದು ನೆಲೆ ಕಾಣುತ್ತಿದೆ. ಇದು ಸಮಾನತೆಯ ನೆಲೆಯ ಸಮಾಜದ ಆರೋಗ್ಯದ ಕಣ್ಣಿನಿಂದ ಎಷ್ಟು ಸರಿ ಅನ್ನುವ ನೈತಿಕವಾದವನ್ನು ಅವರು ಮಂಡಿಸುತ್ತಾರೆ.

ಸಮಾಜದೊಳಿತು ಅನ್ನುವ ಮೌಲ್ಯ ಹಣ ಕೊಂಡುಕೊಳ್ಳಲಾಗದ್ದು
ಇಡೀ ಸಮಾಜಕ್ಕೆ ಒಳಿತಾಗುವಂತದ್ದನ್ನು ಮಾರುಕಟ್ಟೆಯ ಕಟ್ಟಳೆಗಳಿಂದ ಅಳೆದಾಗ ಅದರ ಪರಿಣಾಮ ಕೆಡುಕಾಗುತ್ತೆ ಅನ್ನಲು ಇನ್ನೊಂದು ಎತ್ತುಗೆಯಾಗಿ ಸ್ವೀಜರ್ ಲ್ಯಾಂಡಿನ ಹಳ್ಳಿಯೊಂದರಲ್ಲಿ ಅಣು ಕಸ ಎಸೆಯುವ ತಾಣವೊಂದನ್ನು ಮಾಡಲು ಹೊರಟಾಗ ಕಾಸರಿಗರು ಕೈಗೊಂಡ ಸಮೀಕ್ಷೆಯೊಂದನ್ನು ಅವರು ತಿಳಿಸುತ್ತಾರೆ. ಬಹು ಜನರಿಗೆ ಒಳಿತು ಮಾಡುವ ಈ ತಾಣವನ್ನು ನಿಮ್ಮ ಹಳ್ಳಿಯಲ್ಲಿ ಶುರು ಮಾಡಲು ನೀವು ಒಪ್ಪುತ್ತೀರಾ ಅಂದಾಗ ಅಲ್ಲಿನ 51% ಜನರು ಎಲ್ಲ ಜನರ ಒಳಿತಿಗಾಗಿ ಇದನ್ನು ಒಪ್ಪುತ್ತೇವೆ ಎಂದರು. ಇದಾದ ಮೇಲೆ ಕಾಸರಿಗರು ಒಪ್ಪಿಗೆ ಸೂಚಿಸಿದವರಿಗೆ ಪ್ರತಿ ವರ್ಷ ಇಂತಿಷ್ಟು ಹಣ ಸಂದಾಯ ಮಾಡಲಾಗುವುದು, ಇದಕ್ಕೆ ಒಪ್ಪಿಗೆಯಿದೆಯೇ ಎಂದು ಅದೇ ಪ್ರಶ್ನೆಯನ್ನು ಹಣದ ಆಮಿಷದೊಂದಿಗೆ ಕೇಳಿದಾಗ ಈ ತಾಣ ತಮ್ಮ ಹಳ್ಳಿಗೆ ಬರಲಿ ಎಂದವರ ಸಂಖ್ಯೆ 25%ಕ್ಕೆ ಕುಸಿಯಿತಂತೆ. ಈ ವಿಷಯದಲ್ಲಿ ಯಾವಾಗ ಮಾರುಕಟ್ಟೆ ಮೌಲ್ಯ ಒಳಬಂತೋ  ಸಮಾಜದೊಳಿತಿಗೆ ತ್ಯಾಗ ಮಾಡಲು ಸಿದ್ದರಾಗಿದ್ದ ಜನರ ವರ್ತನೆಯಲ್ಲಿ ಹಟಾತ್ ಬದಲಾವಣೆಯಾಯಿತು. ಸಮಾಜದೊಳಿತು ಅನ್ನುವ ಮೌಲ್ಯ ಹಣ ಕೊಂಡುಕೊಳ್ಳಲಾಗದ್ದು ಮತ್ತು ಅಂತಹ ಸಾಮಾಜಿಕ ಮೌಲ್ಯಗಳು ನಿರ್ಧರಿಸಬೇಕಾದ ವಿಷಯಗಳಲ್ಲಿ ಮಾರುಕಟ್ಟೆ ಮೌಲ್ಯಗಳು ಒಳಬರದಿರವುದೇ ಒಳಿತು ಅನ್ನುವ ಅಭಿಪ್ರಾಯವನ್ನು ಸ್ಯಾಂಡೆಲ್ ವ್ಯಕ್ತಪಡಿಸುತ್ತಾರೆ. ಇಂತಹ ನೂರಾರು ಉದಾಹರಣೆಗಳನ್ನು ಈ ಹೊತ್ತಗೆಯುದ್ದಕ್ಕೂ ಅವರು ನೀಡುತ್ತಾರೆ. ಮುಕ್ತ ಮಾರುಕಟ್ಟೆಯಾಧಾರಿತ ಅರ್ಥ ವ್ಯವಸ್ಥೆಗೂ  ಮುಕ್ತ ಮಾರುಕಟ್ಟೆಯಾಧಾರಿತ ಸಮಾಜಕ್ಕೂ ನಡುವಿನ ತೆಳು ಗೆರೆಯನ್ನು ನಾವು ಕಂಡುಕೊಳ್ಳದಿದ್ದರೆ ಹಣವೊಂದೇ ಎಲ್ಲವನ್ನೂ ನಿರ್ಧರಿಸುವ ಸಾಮಾಜಿಕ, ನೈತಿಕ ಮತ್ತು ಮಾನವೀಯ ಮೌಲ್ಯಗಳು ಬಲಗುಂದುವ ಸಮಾಜವಾಗಿ ಅಮೇರಿಕ ಬದಲಾಗುತ್ತೆ ಅನ್ನುವ ಆತಂಕದೊಂದಿಗೆ ಅವರ ಹೊತ್ತಗೆ ಮುಗಿಯುತ್ತೆ. ಅಂತಹದೊಂದು ಪಲ್ಲಟ ಜರುಗುತ್ತಿರುವ ಕನ್ನಡ ಸಮಾಜಕ್ಕೂ ಇಲ್ಲಿ ಕೆಲ ಪಾಠಗಳಿವೆ ಅನ್ನಿಸದೇ ಇರದು.

ಈ ಹೊತ್ತಗೆಯ ಬಗ್ಗೆ ನನ್ನ ಎರಡು ಮಾತುಗಳು ವಿಜಯ ಕರ್ನಾಟಕದ ರವಿವಾರದ  "ನಾನು ಓದುತ್ತಿರುವ ಹೊತ್ತಗೆ" ವಿಭಾಗದಲ್ಲಿ ಪ್ರಕಟಗೊಂಡಿದೆ. ಅದು ಇಲ್ಲಿದೆ:

1 ಕಾಮೆಂಟ್‌:

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !