ಶನಿವಾರ, ಡಿಸೆಂಬರ್ 12, 2009

ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದ್ರೆ ಉದ್ಧಾರ ಆಗ್ತೀವಾ?

ತೆಲಂಗಾಣ ಬೇರೆ ರಾಜ್ಯ ಆಗುತ್ತೆ ಅನ್ನುವ ಸುದ್ಧಿಯ ಜೊತೆಗೆ, ಇಂತಹುದೇ ಕೂಗು ಕರ್ನಾಟಕದಲ್ಲಿಯೂ ಕೇಳಿ ಬರುವುದು ಎಂದೂ, ಕೊಡಗು, ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾರೆ ಅಂತಲೂ ಕನ್ನಡದ ಕೆಲವು ಮಾಧ್ಯಮಗಳಲ್ಲಿ ವರದಿ ಬರ್ತಾ ಇತ್ತು. ಅಷ್ಟೇ ಅಲ್ಲ, ದೇಶದ ಹಲವೆಡೆ, ಬೇರೆ ಬೇರೆ ದೊಡ್ಡ ರಾಜ್ಯದ ನಾಯಕರುಗಳು, ಚಿಕ್ಕ ರಾಜ್ಯಗಳು ಅಭಿವೃದ್ಧಿಗೆ sure shot ಹಾದಿ, ಜನರ ಅನುಕೂಲ (?) ಕ್ಕಾಗಿ ಇನ್ನಷ್ಟು ಚಿಕ್ಕ ರಾಜ್ಯಗಳಾಗಬೇಕು ಅಂತ ಹೇಳಿಕೆ ಕೊಡ್ತಾ ಇದ್ದಿದ್ದನ್ನು ಕಂಡೆ.  ಯು.ಪಿ/ಬಿಹಾರ್ ದಂತಹ ನೈಸರ್ಗಿಕ ಸಂಪನ್ಮೂಲದಿಂದ ತುಂಬಿರುವ ರಾಜ್ಯಗಳನ್ನು ಅಭಿವೃದ್ಧಿಯಲ್ಲಿ ಶಿಲಾಯುಗಕ್ಕೆ ತಳ್ಳಿದ, ಕೊಲೆ, ಸುಲಿಗೆ, ಭ್ರಷ್ಟಾಚಾರದಲ್ಲಿ ಮಂಚೂಣಿಗೆ ತಂದು ನಿಲ್ಲಿಸಿದ ಕೆಲವು ನಾಯಕರು ಚಿಕ್ಕ ರಾಜ್ಯಗಳ ಬಗ್ಗೆ, ಅದರಿಂದ ಆಗೋ ಲಾಭ (?)ದ ಬಗ್ಗೆ, ಒಟ್ಟಾರೆ, Small is beautiful ಅಂತ ಮಾತಾಡುವುದನ್ನು ನೋಡಿದಾಗ ನಗು ಬರ್ತಾ ಇತ್ತು.

ಹೋಗಲಿ,, ಈಗ ಕರ್ನಾಟಕಕ್ಕೆ ಹಿಂತಿರುಗೋಣ. ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದರೆ ನಿಜಕ್ಕೂ ಎಲ್ಲ ಭಾಗಗಳು ಅಭಿವೃದ್ಧಿ ಹೊಂದುತ್ತಾ? ಎಂಬ ಪ್ರಶ್ನೆ ಇಟ್ಟುಕೊಂಡು ನೋಡಿದ್ರೆ, ಖಂಡಿತವಾಗಿಯೂ ಆಗಲ್ಲ ಅನ್ನೋದೇ ನನ್ನ ಅಭಿಪ್ರಾಯ. ಹೇಗೆ ಅಂತೀರಾ?
  • ಹತ್ತತ್ತು ಬಾರಿ ಆಯ್ಕೆಯಾಗಿ ಬಂದರೂ ಹೈದ್ರಾಬಾದ್ ಕರ್ನಾಟಕಕ್ಕೆ ನಯಾ ಪೈಸೆ ಕೆಲಸ ಮಾಡದ, ಆ ಭಾಗದ ಜನರ ಕುಂದು ಕೊರತೆಗೆ ಸ್ಪಂದಿಸದ ಅಲ್ಲಿನ ಜನ ನಾಯಕರ ಕೈಗೆ ಹೈದ್ರಾಬಾದ್ ಕರ್ನಾಟಕವೆಂಬ ಹೊಸ ರಾಜ್ಯ ಮಾಡಿ ಕೊಟ್ಟರೆ ಏನಾದೀತು? ನಮ್ಮ ಧಾರವಾಡದ ಕಡೆ ಹೇಳುವಂತೆ "ಊದುದ್ ಕೊಟ್ಟು, ಬಾರ್ಸುದ್ ತಗೊಂಡಂತೆ" ಆಗುತ್ತೆ ಅಷ್ಟೇ.
  •  ಅಸ್ಸಾಂ, ಮಣಿಪುರ, ಮೀಜೊರಾಮ್, ನಾಗಾಲ್ಯಾಂಡ್ ನಂತಹ ಚಿಕ್ಕ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ಅಸ್ತಿತ್ವವೂ ಇಲ್ಲ. ದೆಹಲಿಯಲ್ಲಿ ಏನಿದ್ರೂ ದೊಡ್ಡ ರಾಜ್ಯಗಳ ಮಾತೇ ನಡೆಯೋದು. ನಿಮ್ಮ ಬಳಿ 1,2,5 ಇಲ್ಲ 10 ಎಮ್.ಪಿಗಳಿದ್ದರೆ, ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ನೀವು ನಗಣ್ಯ. ಅಂತಾದ್ರಲ್ಲಿ, ಕೊಡಗಿನ ಒಬ್ಬ ಎಮ್.ಪಿ, ಹೈದ್ರಾಬಾದ್ ಕರ್ನಾಟಕದ 5 ಎಮ್.ಪಿಗಳ ಕೂಗು ದೆಹಲಿಯಲ್ಲಿರುವ ದೊರೆಯ ಕಿವಿಗೆ ಎಂದಿಗಾದರೂ ಬಿದ್ದಿತಾ? 
  •  28 ಲೋಕಸಭೆ ಸದಸ್ಯರನ್ನಿಟ್ಟುಕೊಂಡೇ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ಯೋಜನೆಗಳನ್ನು ತಂದುಕೊಳ್ಳಲು ನಾವು ಒದ್ದಾಡುತ್ತಿರುವಾಗ, ಇನ್ನೂ ಈ ಚುಲ್ಟು ರಾಜ್ಯಗಳ ಕಥೆ ಏನಾದೀತು ಅನ್ನುವುದನ್ನು ಊಹಿಸಲು ಅಸಾಧ್ಯವೇ? 
  • ಕಾವೇರಿ ನೀರಿಗಾಗಿ, ಕೊಡಗು-ಕರ್ನಾಟಕ, ಕೃಷ್ಣಾ ನದಿ ನೀರಿಗಾಗಿ ಹೈ.ಕ - ಕರ್ನಾಟಕದ ನಡುವೆ ವಿವಾದಗಳು,ಕಿತ್ತಾಟಗಳು, ಕೋರ್ಟ್ ಮೆಟ್ಟಿಲು ಏರೋ ಪ್ರಸಂಗಗಳು ಬರಲ್ವಾ? ಈಗಲೇ ಇರೋ ವಿವಾದಗಳು ಸಾಕಾಗಿಲ್ವಾ?
  •  ಒಂದು ಭಾಷೆ ಮಾತನಾಡುವ ಜನರ ನಡುವೆ ಒಗ್ಗಟ್ಟಿನ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ.  ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಮುಂದೆ, ಇವತ್ತಿಗೂ ನಮ್ಮ ಭಾಷೆಗಳು ಎರಡನೆ ದರ್ಜೆಯ ಪ್ರಜೆಗಳಂತೆ ನಲುಗುತ್ತಿವೆ. ಅದು ಅಲ್ಲದೇ, ಕಲಿಕೆಯ ಎಲ್ಲ ಹಂತದಲ್ಲೂ ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯೊಂದೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ಪರ್ಧೆಗೆ ಸಜ್ಜುಗೊಳಿಸಲು ಸಾಧ್ಯವಾಗಿಸೋದು. ಕನ್ನಡಿಗರ ಒಗ್ಗಟ್ಟು, ಕನ್ನಡಿಗರ ಒಂದು ರಾಜ್ಯವಿಲ್ಲದೇ, ಭಾಷೆಯ ಮೇಲೆ, ಅದರಿಂದ ಉದ್ಧಾರ ಆಗೋ ಬಗ್ಗೆ ಗಮನ ಕೇಂದ್ರಿಕರಿಸುವುದು ಸಾಧ್ಯವೇ?

ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರ
ಅಷ್ಟೇ ಅಲ್ಲ, ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಲು ಮುಖ್ಯ. ಇಲ್ಲಿ ನಾನೇನು, ಅಮೇರಿಕದಂತಹ ವಲಸಿಗರಿಂದ ಕಟ್ಟಿದ, ಚೌಕಾಕಾರದಲ್ಲಿ ಕತ್ತರಿಸಿ, ಇಂಗ್ಲಿಷ್ ಹೇರಿ ಕಟ್ಟಿದ ದೇಶದ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳುತ್ತಿರುವುದು, ಅನಾದಿ ಕಾಲದಿಂದಲೂ ಇಲ್ಲೇ ನೆಲೆಸಿ, ಇಲ್ಲಿನ ನುಡಿಯಾಡುತ್ತಿರುವ ಕನ್ನಡಿಗರ ಬಗ್ಗೆ, ಅವರ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಿದ್ದೇನೆ. ಒಡೆದು ಚೂರು ಮಾಡಿದ ಕರ್ನಾಟಕದಲ್ಲಿ ಈ ಅಭಿವೃದ್ಧಿ ಎಂದಿಗೂ ಸಾದ್ಯವಿಲ್ಲ.

ಜಗತ್ತಿನ ಒಂದು ಭಾಷೆಯಾಡುತ್ತಿದ್ದ, ಆದರೆ ಕಿತ್ತಾಡಿ ಬೇರೆಯಾಗಿದ್ದ ಜರ್ಮನ್ನರು ಬರ್ಲಿನ್ ಗೋಡೆಯನ್ನು ಒಡೆದು ಮತ್ತೆ ಒಂದಾಗಿ ಮುಂದೆ ಸಾಗುತ್ತಿರುವುದನ್ನು  ನಾವು ಒಂದೆಡೆ ನೋಡುತ್ತಿದ್ದರೆ, ಇಲ್ಲಿ, ಕೆಲವು ಭ್ರಷ್ಟ ರಾಜಕಾರಣಿಗಳ ಸಿ.ಎಮ್ ಆಗುವ ಆಸೆಗೆ, ಅವರ ಉಪವಾಸಕ್ಕೆ ಬೆದರಿ ಒಂದು ಭಾಷೆಯಾಡುವ ಜನರನ್ನು ಒಡೆಯಲು ಹೊರಡುವವರ ಕಣ್ಣಿಗೆ,  ಭಾಷೆ ಅನ್ನುವುದು ಏಳಿಗೆಯ ನಿಜವಾದ ಸಾಧನ ಅನ್ನುವುದನ್ನು ಗುರುತಿಸಲು ಆಗದ ಭೌದ್ದಿಕ ದಾರಿದ್ರ್ಯ ತೋರಿಸುತ್ತೆ.

ಕೊನೆಗೆ, The quality of life of Kannadigas who are having to contend with underdevelopment in Karnataka – whether north or south – can improve only at the dawn of appreciation for the pressing need for the unity of Kannadigas in every walk of life including politics. Any thought process which divides them makes them that much weaker.

22 ಕಾಮೆಂಟ್‌ಗಳು:

  1. ಬರಹ ಬಹಳ ಚೆನ್ನಾಗಿದೆ ವಸ೦ತ್,ಏನೂ ಗೊತ್ತಿಲ್ಲದವರಿಗೆ ತಿಳಿ ಹೇಳುವುದು ಬಲು ಸುಲಭ,ಎಲ್ಲಾ ಗೊತ್ತಿದ್ದೂ ಮೂಢರ ತರ ಆಡೋ ಜನರಿಗೆ ಬುದ್ದಿ ಹೇಳೋದು ಬಲು ಕಷ್ಟ.ನಿಮ್ಮ ಬರಹ ಸಮಯಕ್ಕೆ ಬರೆದಿದ್ದೀರಿ.ಮು೦ದುವರಿಸಿ.ಚಿ೦ತನೆಗೀಡುಮಾಡುವ ಕೆಲವೇ ಬ್ಲಾಗುಗಳಲ್ಲಿ ನಿಮ್ಮದು ಒ೦ದು.ಸಾರ್ಥಕ ಪ್ರಯತ್ನ.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿ ಬರೆದಿದ್ದೀರಿ. ಎಲ್ಲಾ ಕನ್ನಡಿಗರೂ ಓದಲೇಬೇಕಾದ ಲೇಖನ ಇದು. ಅಲ್ಪ ಜ್ನಾನಿಗಳಿಂದ ಕೂಡಿದ ನಮ್ಮ ದೇಶದಲ್ಲಿ ಇಂತಹ ಒಗ್ಗಟ್ತು ಒಡೆಯುವ ಕೆಲಸ ನಡೆಯುತ್ತಲೇ ಬಂದಿದೆ. ಈಗ ಎಲ್ಲರೂ ಕಣ್ಣು ತೆರೆಯುವ ಕಾಲ ಬಂದಿದೆ.

    ಪ್ರತ್ಯುತ್ತರಅಳಿಸಿ
  3. thumba nijaa... adarante kasargod annuva jagavanuu karnatakakke serisidre thumba olledu alliyavarige....

    ಪ್ರತ್ಯುತ್ತರಅಳಿಸಿ
  4. ಹೋಯ್.. ತೆಲಂಗಾಣದ ವಿಷಯವೇ ಬೇರೆ..ಆ ವಿಷಯವಾಗಿ ನೀವು ಹೇಳುವ ಮಾತನ್ನು ಒಪ್ಪುತ್ತೇನೆ ಮಾರಾಯ್ರೇ.. ಆದ್ರೆ ತುಳು ಮತ್ತೆ ಕೊಡವ ಭಾಷೆಗಳು ಕನ್ನಡಕ್ಕಿಂತ ಬೇರೆನೆ ಭಾಷೆಗಳು..ನೀವು ಹೇಳೋ ಸಿದ್ಧಾಂತದ ಪ್ರಕಾರವೇ ಹೋಗಿ ನೋಡಿದ್ರೆ, ತುಳು,ಕೊಡವ ಭಾಷಿಕರು ಕರ್ನಾಟಕದಿಂದ ಬೇರೆಯಾಗಿ ತುಳುನಾಡು ಮತ್ತು ಕೊಡವನಾಡು ರಾಜ್ಯಗಳಲ್ಲಿ ಒಂದಾಗಲಿ ಬಿಡಿ ಮಾರಾಯ್ರೇ..ಅವರು ಕೇಳೋದು ಸರಿಯಾಗೇ ಉಂಟಲ್ವೆ? ಕನ್ನಡಿಗರು ಕನ್ನಡ ಭಾಷೆಯಿಂದ ಕರ್ನಾಟಕದಲ್ಲಿ ಒಂದಾಗೋ ಹಾಗಾದ್ರೆ ತುಳವರು ಕೊಡವರು ತುಳುನಾಡು ಕೊಡವನಾಡು ಎಂಬ ರಾಜ್ಯಗಳಲ್ಲಿ ಯಾಕೆ ಒಂದಾಗಬಾರದು? ಹಾಗೆ ಹೊಸ ರಾಜ್ಯಗಳು ಹುಟ್ಟಿದರೂ ಕೂಡ, ಕನ್ನಡಿಗರು ಭಾಗವಾದನ್ತಲ್ಲ..ಭಾಷೆಯ ಅಡಿಯಲ್ಲಿ ಭಾಷಿಕರು ಒಂದೇ ರಾಜ್ಯದಲ್ಲಿ ಒಂದಾದ ಹಾಗೆ ಆಗುತ್ತದಲ್ವೋ?ರಾಜ್ಯಗಳಾದ ಮೇಲೆ ಹೇಗೆ ಅವು ಅಭಿವೃದ್ಧಿ ಹೊಂದುತ್ತಾವೋ ಅದು ಅವರಿಗೆ ಬಿಟ್ಟ ವಿಚಾರ..ಆದ್ರೆ ಅವರ ಭಾಷೆಯನ್ನು ಉಳಿಸಲು ಅವರು ರಾಜ್ಯವನ್ನು ಬೇಡುವುದು ಸರಿಯಾಗಿಯೇ ಇದೆ ಅಲ್ವ..ನಾನು ಕೇಳಿದ್ದರಲ್ಲಿ ತಪ್ಪಿದ್ದರೆ ಕ್ಷಮಿಸಿ..ಆಯಿತಾ..ಆದ್ರೆ ನಿಮ್ಮ ಉತ್ತರವಂತೂ ತಿಳಿಸಿ ಮಾರಾಯ್ರೇ..

    ಮಂಗಳೂರು ಮಂಜುನಾಥ

    ಪ್ರತ್ಯುತ್ತರಅಳಿಸಿ
  5. ಮಂಜುನಾಥ್ ಅವರೆ,

    ಕೊಡವ, ತುಳು ಸಮುದಾಯದಿಂದ ಆಯ್ಕೆಯಾದ ರಾಜಕಾರಣಿಗಳು, ತಮ್ಮ ಸುಮುದಾಯಕ್ಕೆ ಕರ್ನಾಟಕದ ವಿದಾನ ಸಭೆಯಲ್ಲೇ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಇನ್ನು ಲೋಕಸಭೆಯಲ್ಲಿ ಹೇಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ. ರಾಜ್ಯಗಳು ಒಡೆದು ಚಿಕ್ಕದಾದ್ರೆ ಅಭಿವೃದ್ಧಿ ಒಂದು ಬಿಟ್ಟು ಮಿಕ್ಕಿದ್ದೆಲ್ಲಾ ಸಾಧ್ಯವಾಗಬಹುದು ಅಷ್ಟೆ.

    ಗುರು

    ಪ್ರತ್ಯುತ್ತರಅಳಿಸಿ
  6. ಮಂಗಳೂರು ಮಂಜುನಾಥ ಅವರೇ,
    ನನ್ನ ಮನೆಯಲ್ಲೂ ತುಳು ಮಾತನಾಡುವವರುಂಟು. ದ.ಕ ದಲ್ಲಿ ತುಳು ಮಾತನಾಡುವಷ್ಟೇ ಸಂಖ್ಯೆಯಲ್ಲಿ ಕನ್ನಡ ಮಾತನಾಡುವವರುಂಟು ಅನ್ನುವುದನ್ನು ತಾವ್ಯಾಕೋ ಮರೆತಿರುವ ಹಾಗಿದೆ. ಇನ್ನೂ ಕೊಡಗಿನ 5.5 ಲಕ್ಷ ಜನಸಂಖ್ಯೆಯಲ್ಲಿ ಕೊಡವ ನುಡಿಯಾಡುವವರು 2 ಲಕ್ಷ. ಉಳಿದವರು ಕನ್ನಡ ನುಡಿಯಾಡುವವರು.

    ಅದಕ್ಕೂ ಮೀರಿ, ಇಲ್ಲಿ ತುಳು-ಕನ್ನಡ-ಕೊಡವ ಭಾಷೆಗಳು, ಆ ಭಾಷೆಯಾಡುವ ಜನರು ಸಾಮರಸ್ಯದಿಂದ ಶತ ಶತಮಾನಗಳಿಂದ ಬದುಕುತ್ತಾ ಬಂದಿದ್ದಾರೆ.
    ತುಳುನಾಡಲ್ಲಿ ಬರೀ ತುಳು ಬುಡಕಟ್ಟಿನವರೇ ಮೂಲವಾಗಿ ಇದ್ದರು ಎಂದು ಯಾರೂ ಸಾಬೀತು ಮಾಡಲಾರರು. ಅಲ್ಲಿ ಕನ್ನಡ ಮತ್ತು ತುಳು ಮಂದಿ ಹಿಂದಿನಿಂದಲೂ ಒಟ್ಟಿಗೆ ಇದ್ರು. ಬ್ರಿಟೀಶ್ ಕಾಲದಲ್ಲೂ ಅಲ್ಲಿ ಆಡಳಿತ ಕನ್ನಡದಲ್ಲೇ ಇತ್ತು. ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವವರು ಸಿ.ಎಮ್ ಆಗಬೇಕು ಅನ್ನುವ ಖಯಾಲಿನವರಷ್ಟೇ.

    ಆದರೆ ತುಳು ಮತ್ತು ಕೊಡವದ ಬಗ್ಗೆ ನನಗಿರುವ ಬೇರೆ ಕೆಲವು ಅನಿಸಿಕೆಗಳು:
    ೧> ದ.ಕ/ ಕೊಡಗಿನಲ್ಲಿ ತುಳು ಮತ್ತು ಕೊಡವವನ್ನು ಬರೀ ಒಂದು ಭಾಷೆಯಾಗಲ್ಲ, ಶಿಕ್ಷಣ ಮಾಧ್ಯಮವಾಗಿ ಕಲಿಸುವ ವ್ಯವಸ್ಥೆಯಾಗಬೇಕು.
    ೨> ತುಳು, ಕೊಡವ ಭಾಷೆಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಬೇಕು.
    ೩> ತುಳು-ಕೊಡವ ಭಾಷೆಯಾಡುವ ಜಾಗಗಳಲ್ಲಿ, ಅಲ್ಲಿನ ಸರ್ಕಾರಿ ಕಚೇರಿಯಲ್ಲಿ ವ್ಯವಹಾರದಲ್ಲಿ ಕನ್ನಡದ ಜೊತೆ ಈ ಭಾಷೆಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕು.

    ತುಳು-ಕೊಡವ ನಮ್ಮ ನಾಡಿನದೇ ಭಾಷೆಗಳು. ಆ ಭಾಷೆಯಾಡುವ ಜನರ ಪ್ರದೇಶದಲ್ಲಿ ಅವರ ಮೇಲೆ ಕನ್ನಡವೂ ಸೇರಿದಂತೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನಗಳಾಗಬಾರದು.

    ಇವತ್ತು ತುಳು-ಕೊಡವದ ಶತ್ರು ಕನ್ನಡವಲ್ಲ, ರಾಷ್ಟ್ರ ಭಾಷೆಯೆನ್ನುವ ಸೋಗಿನಡಿ ಎಲ್ಲ ಭಾಷೆಗಳನ್ನು ತುಳಿಯಲು ಹವಣಿಸುತ್ತಿರುವ ಹಿಂದಿ ಎನ್ನುವುದನ್ನು ತಾವು ಮನಗಾಣಿ ಎಂದು ಹೇಳುವೆ.

    ಪ್ರತ್ಯುತ್ತರಅಳಿಸಿ
  7. ಮಂಜು ರವರೇ,
    ತುಂಬಾ ಒಳ್ಳೆಯ ವಿಚಾರ, ಆದ್ರೆ ಕರ್ನಾಟಕ ದಲ್ಲಿ, ಎಲ್ಲಾ ಜಿಲೆಯ ಜನರು ಬೇರೆ ಬೇರೆಯಾದ ಮಾತನಾಡುತಾರೆ,
    ಬೇರೆ ಬೇರೆ ಜಿಲೆಯ ಜನರ ಕನ್ನಡ ಮಾತಿನ ಸೋಗಡೆ ಬಲು ಚಂದ. ದ.ಕ., ಮೈಸೂರ್, ಧಾರವಾಡ್, ಗುಲ್ಬರ್ಗ,
    ಈ ಎಲ್ಲಾ ಭಾಷಾಯಾ ಸೊಗಡು ತುಂಬಾ ಚನಾಗಿದೆ,

    ಅಬಿವ್ರದ್ಹಿ ಸಹ ಕಷ್ಟ ಮಾರಾಯ, ನಿಮಗೆ ಗೊತ್ತುಉಂಟಲ್ಲ ?

    ಬಸು

    ಪ್ರತ್ಯುತ್ತರಅಳಿಸಿ
  8. Ella zillegalalli samanavada abivruaddi kealasagalannu madadare janaru inthaha bedikege mundaguvadilla, idella aya rajyada sarkarada kayallirutte, munche uttara karnatakadallu kuda eentaha kugu ittu High court saluvagi....

    ಪ್ರತ್ಯುತ್ತರಅಳಿಸಿ
  9. ನೀವು ನಿನ್ನೆ ಪ್ರಜಾವಾಣಿಲಿ ದಿನೇಶ್ ಅಮಿನಮಟು ಅವರ ಲೇಖನ ಓದಿದ್ದೀರ? ಪ್ರತಿಯೊಂದು ಪ್ರದೇಶಗಳ ಅಭಿವೃದ್ದಿ ಮುಖ್ಯ. ಚಿಕ್ಕ ರಾಜ್ಯಗಳು ಜೊತೆಗೆ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಇದ್ದಾರೆ ನಿಜಕ್ಕೂ ದೇಶ ಉದ್ದಾರ ಆಗುತ್ತದೆ ಎಂದನ್ನಿಸುತ್ತದೆ. ನಿಮ್ಮ 'ನನ್ನ ಬಗ್ಗೆ' ಓದಿ ಹೇಳುವೆದಾದರೆ, ಉತ್ತರ ಕರ್ನಾಟಕ, ಕರಾವಳಿಯ ಊರುಗಳು ತಕ್ಕಷ್ಟು ಅಭಿವ್ರುದ್ದಿಯಾಗಿದ್ದರೆ ನೀವು ಅನ್ನ ಹುಡುಕಿಕೊಂಡು ಬೆಂಗಳೂರಿಗೆ ಬರುವ ಅಗತ್ಯವೇ ಇರಲಿಲ್ಲ. ಸಂಪನ್ಮೂಲದಿಂದ ಕೂಡಿದ, ಧಾರಾಳ ವಿದ್ಯುತ್ ಇರುವ ಮಲೆನಾಡು ಮತ್ತು ಕರಾವಳಿ ಪ್ರದೇಶ ಚಿಕ್ಕ ರಾಜ್ಯವಾಗಿದ್ದರೆ ಊರುಗಳು ಉದ್ದಾರವಾಗುತ್ತಿದ್ದವು.

    ಪ್ರತ್ಯುತ್ತರಅಳಿಸಿ
  10. @Machikoppa,
    ಚಿಕ್ಕ ರಾಜ್ಯಗಳು = ಅಭಿವೃದ್ಧಿ ಅನ್ನೋದೇ ಆಗಿದ್ರೆ ಮಣಿಪುರ, ಮಿಜೋರಾಂ, ಮೇಘಾಲಯ, ಪಾಂಡಿಚೇರಿ, ಗೋವಾ ಇವೆಲ್ಲ ಭಾರತದ ಇತರ ರಾಜ್ಯಗಳಿಗಿಂತ ಸಕತ್ ಮುಂದಿರಬೇಕಿತ್ತಲ್ಲ?
    ಇನ್ನೂ ನನ್ನ ಅನ್ನದ ಬಗ್ಗೆ ಬಂದರೇ, ನಾನು ಮಾಡುತ್ತಿರುವ ವೃತ್ತಿಯಲ್ಲಿ ಕೆಲಸ ಹುಡುಕಿಕೊಂಡು ನಾನಷ್ಟೇ ಅಲ್ಲ, ಇಡಿ ದೇಶದ ಜನರೇ ಬೆಂಗಳೂರಿಗೆ ಬರುತ್ತಿದ್ದಾರೆ. ಅಷ್ಟಕ್ಕೂ ನಾನು ಅನ್ನ ಹುಡುಕಿಕೊಂಡು ಬೇರೊಂದು ರಾಜ್ಯಕ್ಕೆ ಹೋಗಿಲ್ಲ. ನಾನು ನನ್ನದೇ ರಾಜ್ಯದ ಇನ್ನೊಂದು ಭಾಗಕ್ಕೆ ಬಂದಿದೀನಿ. ಕನ್ನಡಿಗನೊಬ್ಬನಿಗೆ ಇಡೀ ಕನ್ನಡ ನಾಡು ಅವನದು.

    ಚಿಕ್ಕ ರಾಜ್ಯಗಳ ಜೊತೆಯೇ ಬರುವ ಗಡಿ-ನೆಲ-ಜಲದ ತಗಾದೆ, ಕಿತ್ತಾಟ ಯಾವುದು ನಮ್ಮನ್ನ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೆ ಅಂತ ನನಗನಿಸಲ್ಲ.

    ಪ್ರತ್ಯುತ್ತರಅಳಿಸಿ
  11. ಹಾಗಲ್ಲಾ
    ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟು ಬೇರೆ ಊರುಗಳು ಎಷ್ಟು ಅಭಿವೃದ್ದಿ ಆಗಿವೆ? ಎಲ್ಲರು ಅಲ್ಲಿಗೆ ವಲಸೆ ಹೋಗುತ್ತಾರೆ. ಕರಾವಳಿ ಹಾಗು ಮಲೆನಾಡಿನ ೧೦-೧೨ ಜಿಲ್ಲೆಗಳು ಸೇರಿ ಒಂದು ರಾಜ್ಜ್ಯವಾಗಿದ್ದರೆ ಮಂಗಳೂರು, ಉಡುಪಿ ವಿದ್ಯುತ್ ಸಾಕಷ್ಟಿರುವ ಶಿವಮೊಗ್ಗ ಮೊದಲಾದ ಊರುಗಳು ಉದ್ಯಮಿಗಳನ್ನ ರತ್ನಗಂಬಳಿ ಹಾಸಿ ಕರೆಯುತ್ತಿದ್ದವು. ಬೇಕಾದಷ್ಟು ಉದ್ಯೋಗ ಅಲ್ಲೇ ದೊರೆಯುತ್ತಿತ್ತು. ನೀವೀಗ ಮಾಡುತ್ತಿರುವ ಉದ್ಯೋಗ ನಾನು ಮೇಲೆ ಹೇಳಿದ ಊರಲ್ಲಿ ಈಗ ಮಾಡೋಕ್ಕೆ ಆಗುತ್ತಾ?

    ಪ್ರತ್ಯುತ್ತರಅಳಿಸಿ
  12. ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಒಂದೇ,
    ಯಾವುದೇ ದೇಶ ಇರಲಿ, ರಾಜ್ಯವಿರಲಿ, ಅಲ್ಲಿನ ಅಭಿವೃದ್ಧಿಗೆ ನೇರ ಕಾರಣರು ಅಲ್ಲಿನ ಜನ ನಾಯಕರು. ದ.ಕ ಜಿಲ್ಲೆಯಿಂದ ಮೊಯ್ಲಿ, ಶಿವಮೊಗ್ಗ ಜಿಲ್ಲೆಯಿಂದ ಬಂಗಾರಪ್ಪ, ಜೆ.ಎಚ್.ಪಟೇಲ್, ಯಡಿಯೂರಪ್ಪ ರಂತಹ ರಾಜ್ಯ ಮಟ್ಟದ ನಾಯಕರು ಈ ನಾಡನ್ನು ಆಳಿಯೂ, ಆ ಭಾಗದಲ್ಲಿ ಬೆಂಗಳೂರಿನಷ್ಟು ಅಭಿವೃದ್ಧಿ ಆಗಿಲ್ಲ ಅಂದ್ರೆ ಅದಕ್ಕೆ ಹೊಣೆ ಯಾರು? ಅಲ್ಲಿನ ಜನ ನಾಯಕರು ತಾನೇ? ಅಲ್ಲಿಗೆ ಉದ್ಯಮಿಗಳನ್ನು ಕರೆತರಬೇಡಿ ಎಂದು ಇವರನ್ನು ಯಾರಾದರೂ ತಡೆದಿದ್ದರೆ?
    ನೀವು ಹೇಳುವಂತೆ ಬೇರೆ ರಾಜ್ಯ ಮಾಡಿದ ಮೇಲೆ, ಆ ರಾಜ್ಯವನ್ನು ಆಳುವವರು ಇದೇ ನಾಯಕರು ತಾನೇ? ಕರ್ನಾಟಕದಲ್ಲಿ ಅಧಿಕಾರ ಇದ್ದಾಗ ಮಾಡಲಾಗದವರು, ಇನ್ನೂ ಹೊಸ ರಾಜ್ಯ ಮಾಡಿದರೆ ಮಾಡ್ತಾರೆ ಅಂತ ನನಗಂತೂ ಖಂಡಿತ ಅನ್ನಿಸಲ್ಲ.

    ಪ್ರತ್ಯುತ್ತರಅಳಿಸಿ
  13. ವಸಂತವರೆ, ಬಹಳ ಚೆನ್ನಾಗಿ ಬರೆದಿದ್ದೀರ. ಅಭಿವ್ರುದ್ಧಿ ಮತ್ತು ರಾಜ್ಯದ ಗಾತ್ರ - ಅವೆರಡಕ್ಕೂ ಎನೂ ಸಂಬಂಧವಿಲ್ಲ. ಆದರೆ, ಅಭಿವ್ರುದ್ದಿಗೆ ಜನ ನಾಯಕರು ಮತ್ತು ಜನ ಸಮಾನ್ಯರು - ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕು. ನಮ್ಮ ನಾಯಕರು ಕೆಲಸ ಮಾಡದೆ ಇದ್ದರೆ ಅದು ನಮ್ಮ ಜವಾಬ್ದಾರಿ ಕೂಡ. ನಮ್ಮಲ್ಲಿ ಇದೊಂದು ಕೊರತೆ ಇದೆ ನೋಡಿ. ನಾವು ಜವಬ್ದಾರಿಯಿಂದ ದೂರ ಇರ್ತೀವಿ. ಇದನ್ನು ಸರಿಪಡಿಸಲು ಒಳ್ಳೆ ನಾಯಕರ ಅವಶ್ಯಕತೆ ಇದೆ.
    ಭವಾನಿ ಪ್ರಸಾದ್

    ಪ್ರತ್ಯುತ್ತರಅಳಿಸಿ
  14. ವಸಂತರವರಿಗೆ,
    ಧನ್ಯವಾದಗಳು..

    @Machikoppa
    ಸರ‍್..
    ನೀವು ಹೀಗೆ.. ಎಲ್ಲಾದು ಸಣ್ಣದಾಗಿ ಮಾಡಿದರೆ ಒಳ್ಳೆದು ಅಂತೀದಿರಲ್ಲಾ..
    ಶಿವಮೊಗ್ಗಕ್ಕೆ ಬರಬೇಕಿದ್ದ ಕೈಗಾರಿಕೆಗಳು, ಜಾಗದ ಸಮಸ್ಯೆಯಿಂದ ಕೈತಪ್ಪಿದವು ಅಂತ ನಾನು ಓದಿದ ನೆನಪು. ಅಂದರೆ, ಅಲ್ಲಿರೋದು ರಕ್ಷಿತ ಅರಣ್ಯ ಪ್ರದೇಶ. ಕೈಗಾರಿಕೆಗೆ ಬೇಕಾದಂತಹ ಜಾಗ ಒಟ್ಟಿಗೆ ಸಿಗದೇಹೋಯ್ತು ಅಂತ ನಾ ಓದಿದ್ದೆ.. ಹಾಗೇ ಒಂದೊಂದು ಪ್ರದೇಶಗಳು ಒಂದೊಂದು ವಿಚಾರಗಳಲ್ಲಿ ಮುಂದುವರೆದಿರುತ್ತದೆ. ಎಲ್ಲ ವಿಭಜನೆಯಾದಲ್ಲಿ, ಎಲ್ಲಾರೂ ಒಂದೊಂದಕ್ಕೂ ಇನ್ನೊಬ್ಬರ ಮೇಲೆ ಅವಲಂಬನೆ ಹೊಂದಬೇಕಾಗುತ್ತೆ.
    ನಂತರ ಅದರಿಂದ ಆಗುವ ಎಡವಟ್ಟುಗಳು ಎನೇನು ಅನ್ನೋದನ್ನು ಸ್ವಲ್ಪ ಯೋಚಿಸಿ. ಇಂದಿನ ವ್ಯಾಪಾರೀಕೃತ ಜಗತ್ತಿನಿಂದಾಗಿ, ಪ್ರತೀ ಈ ಚಿಕ್ಕ ರಾಜ್ಯಗಳು ತಮಗೆ ಎಲ್ಲಿಂದ ಲಾಭವೋ ಅಲ್ಲಿಗೆ ಮಾತ್ರ ತಮ್ಮ ಸರಕನ್ನ ಕಳಿಸಲು ಶುರುಮಾಡಿದರೆ, ವಸಾಹತುಶಾಹಿ ರಾಜ್ಯಡಳಿತದಿಂದಲೇ ಆಗೋದ್ರಲ್ಲಿ ಆಶ್ಚರ್ಯ ಇಲ್ಲ ಅಲ್ಲವೇ.. ಇನ್ನೂ ಪಟ್ಟಿ ಮಾಡಿದಲ್ಲಿ, ತುಂಬಾ ಸಮಸ್ಯೆಗಳ ಪಟ್ಟಿ ಮಾಡಬಹುದಲ್ವೆ?

    ನಿಮ್ಮೊಲವಿನ,
    ಸತ್ಯ..

    ಪ್ರತ್ಯುತ್ತರಅಳಿಸಿ
  15. ಚಿಕ್ಕ ರಾಜ್ಯಗಳು ಆಡಳಿತಕ್ಕೆ ಒಳ್ಳೆಯವು ಅಂತಾ ಅನ್ನೋದಾದ್ರೆ ಚಿಕ್ಕದೇಶಗಳೂ ಕೂಡಾ ಆಡಳಿತಕ್ಕೆ ಅನುಕೂಲಕರ ಅಂತಾಗಲ್ವಾ? ಭಾರತಾನೂ ಒಡೆದು ಚಿಕ್ಕಚಿಕ್ಕ ದೇಶ ಮಾಡೋಣ್ವಾ ಅಂತಾ ಕೇಳಿ ವಸಂತ್!
    - ಸುಂದರ್

    ಪ್ರತ್ಯುತ್ತರಅಳಿಸಿ
  16. 10-10 bhari arisi banda nayakaru chennagi thindu thegalu aha bhagada janagale karanarallave..ega bere ondu rajya madidare ade jana antha nayakaranne arisuthare..konege abhvruddi shunya...

    ಪ್ರತ್ಯುತ್ತರಅಳಿಸಿ
  17. ತುಂಬಾ ಚೆನ್ನಾಗಿ, ಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವಂತೆ ಬರೆದಿದ್ದೀರಿ
    ಧನ್ಯವಾದಗಳು
    ಜೈ ಕರ್ನಾಟಕ

    ಪ್ರತ್ಯುತ್ತರಅಳಿಸಿ
  18. ಮಂಗಳೂರ ಮಂಜುನಾಥರವರೆ ನನಗೇನೋ ನಿಮ್ಮ ಮಾತು ಸರಿ ಎನಿಸುತ್ತಿದೆ. ನನ್ನ ಪ್ರಕಾರ ತುಳುನಾಡೇ ಬೇರೆ, ಕೊಡವನಾಡೇ ಬೇರೆ ಮಾಡಿದರೆ ಒಳಿತು. ಹಾಗೆಯೇ ಬ್ಯಾರಿಗಳಿಗೆ ಬ್ಯಾರಿನಾಡು, ಕೊಂಕಣಿಗಳಿಗೆ ಕೊಂಕಣನಾಡು ಆದರೆ ಇನ್ನೂ ಒಳಿತು. ಕಡೆಗೆ ಬೀದಿ ಬೀದಿಗೂ ಒಂದೊಂದು ನಾಡಾದರೆ ಎಂತ ಚಂದವಲ್ಲವೇ ಮಾರಾಯ್ರೆ.
    ಇನ್ನಾದರೂ ಬಾಲಿಶ ಹೇಳಿಕೆ ನಿಲ್ಲಿಸಿ ಸಮಗ್ರ ಕರ್ನಾಟಕದ ಉನ್ನತಿಗೆ ಒಂದಾಗಿ ಹೋರಾಡಿ ಇಲ್ಲಿಯೇ ನಿಮ್ಮ ತನವ ಉಳಿಸಿಕೊಳ್ಳಿ.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !