ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ ಅನ್ನೋ ನನ್ನ ಬರಹವೊಂದನ್ನು ಆತ್ಮೀಯರಾದ ಶಾಮ್ ಅವರು ತಮ್ಮ ಸಂಪಾದಕತ್ವದ ದಟ್ಸ್ ಕನ್ನಡದಲ್ಲಿ ಹಾಕಿದ್ದರು. ಆ ಬರಹಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಶಿಕ್ಷಕರಾದ ಶ್ರೀ ಶೇಷಗಿರಿ ಜೋಡಿದಾರ್ ಅವರು ದಟ್ಸ್ ಕನ್ನಡ ಪತ್ರಿಕೆಯಲ್ಲಿ " ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್ " ಅನ್ನುವ ತಲೆಬರಹದಡಿ ತೂಕದ ಉತ್ತರವೊಂದನ್ನು ಕೊಟ್ಟಿದ್ದಾರೆ. ಅದನ್ನು ಓದಿ, ಶಾಮ್ ಅವರಿಗೆ ನನ್ನದೊಂದು ಪ್ರತಿಕ್ರಿಯೆ ಕಳಿಸಿದೆ. ಅದನ್ನು ಇಲ್ಲಿ ಹಾಕಿದ್ದೇನೆ.
ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್ ಓದಿ ಅದಕ್ಕೆ ನನಗನಿಸಿದ ಪ್ರತಿಕ್ರಿಯೆ ನೀಡುವ ಮುನ್ನ ಇಂತಹದೊಂದು ಸಮಯೋಚಿತ ಚರ್ಚೆಗೆ ಅವಕಾಶವನ್ನಿತ್ತ ದಟ್ಸ್ ಕನ್ನಡ ಸಂಪಾದಕರಾದ ಶಾಮ್ ಅವರಿಗೂ, ಹಾಗೂ ನನ್ನಂತಹ ಕಿರಿಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ತಮ್ಮ ಯೋಚನೆ ಮತ್ತು ಸಮಯ ನೀಡಿದ ಹಿರಿಯರಾದ ಶ್ರೀ ಶೇಷಗಿರಿ ಜೋಡಿದಾರ್ ಅವರಿಗೂ ( ಅವರನ್ನು ಈ ಬರಹದಲ್ಲಿ ಮೇಷ್ಟ್ರು ಎಂದೇ ಕರೆಯುವೆ) ಮನ ತುಂಬಿ ವಂದಿಸುವೆ.
ಇದು ಸಾಹಿತ್ಯ ದೃಷ್ಟಿ ಖಂಡಿತ ಅಲ್ಲ !
ಮೊದಲಿಗೆ, ವಿಜ್ಞಾನ, ಗಣಿತ ಇತ್ಯಾದಿಗಳಲ್ಲಿ ಭಾಷೆಗಿಂತ ನಾವು ಕಲಿಯುವ ವೈಜ್ಞಾನಿಕ ಸಾರಾಂಶ ಮುಖ್ಯವೇ ವಿನಾ ಶಾಲಾಪಠ್ಯವನ್ನು ಸಾಹಿತ್ಯ ಮತ್ತು ಭಾಷೆಯ ಸೂಕ್ಷ್ಮಗಳಿಂದ ನೋಡಬಾರದು ಅನ್ನುವ ಮೇಷ್ಟ್ರ ಮಾತು ನೂರಕ್ಕೆ ನೂರು ನಿಜ. ನನ್ನ ಬರಹದಲ್ಲಿ ಪೀನ ದರ್ಪಣ, ನಿಮ್ನ ದರ್ಪಣ ಅನ್ನಲು ಉಬ್ಬುಗಾಜು, ತಗ್ಗುಗಾಜು ಅನ್ನೋದಾಗಲಿ, ಇಲ್ಲವೇ ರೇಖೆಗೆ ಗೆರೆ ಅನ್ನುವುದಾಗಲಿ, ಇಲ್ಲವೇ ಬಿಂದುವಿಗೆ ಚುಕ್ಕಿ ಅನ್ನುವುದು ಖಂಡಿತವಾಗಿಯೂ ಸಾಹಿತ್ಯದ ದೃಷ್ಟಿಯಿಂದ ನೋಡುವ ಪ್ರಯತ್ನವಲ್ಲ. ನಿಜ ಹೇಳಬೇಕು ಅಂದರೆ, ಸಾಹಿತ್ಯದ ದೃಷ್ಟಿಯಿಂದ ನೋಡುವ ನಮ್ಮ ಹೆಚ್ಚಿನ ಸಾಹಿತಿಗಳ ಬರಹದಲ್ಲಿ ನಮಗೆ ಕಾಣುವುದು ಆಡುನುಡಿಯಲ್ಲಿ ಬಳಸದ ಪದಗಳು. ಆಡುನುಡಿಯಲ್ಲಿ ಈಗಾಗಲೇ ಇರುವ, ಸುಲಭಕ್ಕೆ ಅರ್ಥವಾಗುವ, ನೆನಪಿಟ್ಟುಕೊಳ್ಳಲು ಆಗುವ ಪದಗಳ ಬಳಕೆ ಮಾಡಬೇಕು ಅನ್ನುವ ವಾದ ಹೆಚ್ಚು ವೈಜ್ಞಾನಿಕವಾದ ಹಾದಿಯೇ ಹೊರತು ಸಾಹಿತ್ಯದ ದೃಷ್ಟಿಯಿಂದ ನೋಡುವ ಪ್ರಯತ್ನ ಖಂಡಿತವಲ್ಲ.
ಗಣಿತವಷ್ಟೇ ಅಲ್ಲ, ವಿಜ್ಞಾನದಲ್ಲೂ ಈ ತೊಂದರೆಗಳಿವೆ
ಮಕ್ಕಳಿಗೆ ವಿಷಯ ಸುಲಭವಾಗಿ ಅರ್ಥವಾದರೆ ಸಾಕು ಇನ್ನೇನು ಬೇಕಿಲ್ಲ ಎನ್ನುವ ತತ್ತ್ವ ಇಲ್ಲಿ ಕಣ್ಮರೆಯಾಗಿ ಓದುವವರಿಗೆ ಮತ್ತು ಕಲಿಸುವವರಿಗೆ ಶಿಕ್ಷೆ ಕೊಡುತ್ತದೆ ಅನ್ನುವ ಮೇಷ್ಟ್ರ ಮಾತು ಎಲ್ಲರೂ ಒಪ್ಪುವಂತದ್ದು. ಮೇಷ್ಟ್ರು ಗಣಿತದ ವಿಷ್ಯದಲ್ಲಿ ನಾನು ಎತ್ತಿರುವ ಪ್ರಶ್ನೆಗಳೆಲ್ಲ ಸರಿಯಾಗಿದೆ ಆದ್ರೆ ಅವರು ಕಲಿಸುತ್ತಿರುವ ಜೀವ ವಿಜ್ಞಾನ ಅಥವಾ ಜೀವ ಶಾಸ್ತ್ರ (ಇದರಲ್ಲಿ ಯಾವುದು ಹೆಚ್ಚು ಜನರಿಗೆ ಸುಲಭವೋ ( ನೆನಪಿಡಲು, ಉಲಿಯಲು, ಬರೆಯಲು) ಅದನ್ನೇ ಬಳಸೋಣ)ದ ವಿಷಯದಲ್ಲಿ ಮಾತ್ರ ಇಂತಹ ಯಾವುದೇ ತೊಂದರೆಗಳಿಲ್ಲ ಅನ್ನುವಂತಿದೆ. 'ಪತ್ರಹರಿತ್ತು' ಪದದ ಬದಲು 'ಎಲೆ ಹಸಿರು' ಎಂದು ಹೇಳುವುದರಿಂದ ಏನುಸಾಧಿಸಿದಂತೆ ಆಗುತ್ತದೆ? ಅನ್ನುವ ಮೇಷ್ಟ್ರ ಪ್ರಶ್ನೆಗೆ ನನ್ನ ಮರು ಪ್ರಶ್ನೆ " "ಪತ್ರ ಹರಿತ್ತು" ಎಂಬ ಪದ "ಎಲೆ ಹಸಿರು" ಪದಕ್ಕಿಂತ ಯಾವ ರೀತಿಯಲ್ಲಿ ಹೆಚ್ಚು ಸೂಕ್ತವಾಗಿದೆ ಅನ್ನುವುದನ್ನು ವಿವರಿಸಿ. "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟೀತು?
ಕಲಿಕೆಗೆ ಯಾವುದು ಸುಲಭವೋ ಅದನ್ನೇ ಬಳಸೋಣ
ನಮಗೆ ಪದಕ್ಕಿಂತ ಮುಖ್ಯವಾದುದು ವಿಜ್ಞಾನದ ಪರಿಕಲ್ಪನೆಗಳು ಸುಲಭವಾಗಿ ಹಾಗು ಪರಿಣಾಮಕಾರಿಯಾಗಿ ಮಕ್ಕಳ ಮಿದುಳನ್ನು ತಲುಪಿ ಅಲ್ಲೇ ಉಳಿಯುವಂತೆ ಮಾಡುವುದು." ಅನ್ನುವ ಮೇಷ್ಟ್ರ ಮಾತು ಸಕತ್ ಸರಿಯಾಗಿದೆ. ಆದರೆ ಅವರು ಕೇಳಿರುವ "ಹೃದಯಾವರಣ" ಮತ್ತು "ಗುಂಡಿಗೆ ಸುತ್ಪೊರೆ" ಪದಗಳಲ್ಲಿ ಯಾವುದು ಹೆಚ್ಚು ಸೂಕ್ತ ಅನ್ನುವ ಪ್ರಶ್ನೆಗೆ ನನ್ನ ಉತ್ತರ ಯಾವುದು ಮಕ್ಕಳಿಗೆ ನೆನಪಿಡಲು, ಉಲಿಯಲು, ಬರೆಯಲು ಸುಲಭವಾಗುವುದೋ ಅದೇ ಅನ್ನುವುದು. ಮಕ್ಕಳಿಗೆ ಹೃದಯಾವರಣವೇ ಹೆಚ್ಚು ಸುಲಭ ಅಂದರೆ ಯಾವುದೇ ಸಂದೇಹವಿಲ್ಲದೇ ಅದನ್ನೇ ಬಳಸಬೇಕು ಅನ್ನುವುದು ನನ್ನ ನಿಲುವು. ಇನ್ನೂ karyokinesis ಮತ್ತು cytokinesis ಪದಗಳ ಬಗ್ಗೆ ಬಂದರೆ, ಈ ಪದಗಳ ಸಂಸ್ಕೃತ ಅರ್ಥವನ್ನು ಕನ್ನಡಕ್ಕೆ ನೇರವಾಗಿ ತಂದು ಹಾಕಿದ್ದಾರೆ. karyokinesis ಮತ್ತು cytokinesis ಪದಗಳು scientifically important ಮತ್ತದನ್ನು ಅದೇ ರೂಪದಲ್ಲಿ ಬಳಸುವುದು ಹೆಚ್ಚು ಸೂಕ್ತ ಎನಿಸಿದರೆ, ಯಾವುದೇ ಮಡಿವಂತಿಕೆ ಇಲ್ಲದೇ ಕನ್ನಡ ಮಾಧ್ಯಮ ಮಕ್ಕಳಿಗೂ ಅವನ್ನೇ ಹೇಳಿ ಕೊಡಬೇಕು ಅನ್ನುವುದು ನನ್ನ ನಿಲುವು. ಹೋಮೋ ಸೆಪಿಯನ್ ಮತ್ತು ವಿವೇಕಿ ಮಾನವ ಬಗೆಗಿನ ಮೇಷ್ಟ್ರ ಉದಾಹರಣೆಗೂ ಇದು ಅನ್ವಯಿಸುತ್ತೆ. ಈಗ ಬಸ್ ಅನ್ನುವ ಪದಕ್ಕೆ ನಾವು ಕನ್ನಡದ "ನಾಲ್ಕು ಚಕ್ರದ ಸಾರಿಗೆ ವಾಹನ" ಅಂತೀವಾ ಇಲ್ಲ ಸಿಂಪಲ್ ಆಗಿ ಇಂಗ್ಲಿಷಿನ ಬಸ್(ಬಸ್ಸು) ಅಂತೀವಾ? ಬಸ್ಸು ತಾನೇ? ಹೀಗೆ, ಯಾವುದು ಹೆಚ್ಚು ಪರಿಣಾಮಕಾರಿ, ಹೆಚ್ಚು ಸುಲಭ ಅದನ್ನೇ ಬಳಸಬೇಕು, ಅದು ಕನ್ನಡ ಆಗಿದ್ದರೆ ಕನ್ನಡ, ಇಂಗ್ಲಿಷ್ ಆಗಿದ್ದರೆ ಇಂಗ್ಲಿಷ್, ಸಂಸ್ಕೃತ ಆಗಿದ್ದರೆ ಸಂಸ್ಕೃತ. ಈ ಹೇಳಿಕೆ ಮೂಲಕ ನಾನು ಸಂಸ್ಕೃತ ದ್ವೇಷಿಯೂ ಅಲ್ಲ, ಪ್ರತಿಯೊಂದು ಪೂರ್ತಿ ಕನ್ನಡೀಕರಣಗೊಳ್ಳಲಿ ಅನ್ನುವ ಹುಚ್ಚು ಆಸೆಯೂ ನನಗಿಲ್ಲ ಅನ್ನುವುದನ್ನು ಹೇಳಲು ಬಯಸುತ್ತೇನೆ.
ಶಿಕ್ಷಣ ಅಂದ್ರೇನು?
ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೂತಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.
ಕೊನೆಯದಾಗಿ, ಜಗತ್ತಿನ ಯಾವುದೇ ಮುಂದುವರಿದ ದೇಶವನ್ನು ನೋಡಿದರೂ ಅದಕ್ಕೆ ಮುಖ್ಯ ಕಾರಣಗಳಲ್ಲೊಂದು ಅಲ್ಲಿನ ಅದ್ಭುತ ಕಲಿಕಾ ವ್ಯವಸ್ಥೆ. ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಮತ್ತು ಆ ಕಲಿಕೆಯಿಂದ ಒಳ್ಳೆಯ ದುಡಿಮೆ ಕಾಣ್ತಿರೋ ಆ ದೇಶಗಳು ನಮಗೆ ಮಾದರಿಯಾಗಬೇಕು. ಇದಕ್ಕೆ ಅಮೇರಿಕ-ಇಂಗ್ಲಂಡ್ ಕೂಡಾ ಹೊರತಲ್ಲ ಯಾಕೆಂದ್ರೆ ಇಂಗ್ಲಿಷ್ ಅಲ್ಲಿನವರ ತಾಯಿ ನುಡಿ !ಇಂತದೇ ಒಂದು ವ್ಯವಸ್ಥೆ ಕರ್ನಾಟಕದಲ್ಲಿ ಕನ್ನಡದಲ್ಲಿ ಆಗುವ ದಿನಗಳು ಬಂದಾಗಲೇ ನಾವು ನಿಜಕ್ಕೂ ಏಳಿಗೆ ಹೊಂದಲು ಸಾಧ್ಯವಾಗುವುದು. ಆ ದಿನಗಳು ಆದಷ್ಟು ಬೇಗ ಬರಲಿ ಎನ್ನುವ ಆಶಯದೊಂದಿಗೆ ನನ್ನ ಎರಡು ಮಾತು ಮುಗಿಸುತ್ತೇನೆ.
ಮಂಗಳವಾರ, ಅಕ್ಟೋಬರ್ 27, 2009
ಶುಕ್ರವಾರ, ಅಕ್ಟೋಬರ್ 23, 2009
ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ :)
ಕಳೆದ ವರ್ಷ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಅಜ್ಜಿ ಮನೆಗೆ 4 ದಿನ ರಜೆ ಅಂತಾ ಹೋಗಿದ್ದೆ. ಸಂಜೆ ಊಟದ ನಂತರ ಮನೆಯಲ್ಲಿ ಮಾಮನ ಮಕ್ಕಳೆಲ್ಲ ಓದಿಕೊಳ್ತಾ ಇದ್ರು. 9ನೇ ಕ್ಲಾಸಲ್ಲಿ ಓದ್ತಾ ಇರೋ ಅನುಷಾಳಿಗೆ ಅಭ್ಯಾಸ ಎಲ್ಲ ಹೇಗ್ ನಡಿತಾ ಇದೆ, ಯಾವ ವಿಷ್ಯ ಕಷ್ಟ ಅನ್ಸುತ್ತೆ ಅಂತಾ ಕೇಳಿದೆ. ಅದಕ್ಕವಳು " ಅಣ್ಣಾ, ನನಗೆ ಗಣಿತ ಒಂದೇ ಚೂರು ಕಷ್ಟಾ" ಅಂದ್ಲು.
ಸುಮ್ಮನಿರದೇ ಇರುವೆ ಬಿಟ್ಕೊಂಡ ಅನ್ನೋ ಹಂಗೆ ನಾನು ಹೌದಾ, ಎಲ್ಲಿ ಗಣಿತದ ಪುಸ್ತಕ ತಗೊಂಡ್ ಬಾ, ಏನ್ ಕಷ್ಟ ಅನ್ಸುತ್ತೋ ಕೇಳು, ನಾನು ಹೇಳಿಕೊಡ್ತಿನಿ ಅಂದೆ. ಅವಳು ಗಣಿತದ 9ನೇ ಕ್ಲಾಸಿನ ಪುಸ್ತಕ ತಂದು ಕೇಳಿದ್ದು ಈ ಪ್ರಮೇಯದ (ಚಿತ್ರ ನೋಡಿ) ಅರ್ಥ:
ಹತ್ತು ಸಲಿ ತಲೆಕೆಳಗಾಗಿ ಓದಿದ್ರೂ ಇದರ ಅರ್ಥ ಹೊಳಿಲಿಲ್ಲ. ಆಗಲೇ ಅನ್ನಿಸಿದ್ದು, ಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿರೋದು ಅಂತ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ,, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?
ಕನ್ನಡದ ಮಕ್ಕಳು ಊರು ಹೊಡೆಯುವುದಲ್ಲೇ ತಮ್ಮ ಕಾಲ ಕಳೆಯುತ್ತಿವೆಯೇ ಹೊರತು ವಿಜ್ಞಾನ, ಗಣಿತದ ಅಂಶಗಳನ್ನು ಅರಿಯುವುದರಲ್ಲಲ್ಲ. Concave, Convex mirror ಅನ್ನು ಉಬ್ಬುಗಾಜು, ತಗ್ಗುಗಾಜು ಅಂದರೆ ಎಂತಹ ಗಮಾರನಿಗೂ ಅರ್ಥ ಆಗುತ್ತೆ, ಅದೇ ಕನ್ನಡ ಮಾಧ್ಯಮದ ಪುಸ್ತಕದಲ್ಲಿ ಪೀನ ಮಸೂರ, ನಿಮ್ನ ಮಸೂರ ಎಂದು ಹೇಳಿ ಕೊಡುತ್ತಾರೆ. ಮಕ್ಕಳಿಗೆ ಯಾವುದು ಸುಲಭವಾಗುತ್ತೆ ನೀವೇ ಒಮ್ಮೆ ಯೋಚಿಸಿ. chlorophyl ಅನ್ನುವುದನ್ನು ಪತ್ರಹರಿತ್ತು ಎಂದೆನ್ನದೇ "ಎಲೆಹಸಿರು" ಅಂದರೆ ಮಕ್ಕಳಿಗೆ ಸುಲಭವಾಗುತ್ತಾ, ಕಷ್ಟವಾಗುತ್ತ ನೀವು ಹೇಳಿ? Denominator / Nominator ಅನ್ನಲು ಮೇಲ್ ಮನೆ / ಕೆಳಮನೆ ಅನ್ನೋದು ಸುಲಭಾನಾ ಇಲ್ಲ ಭಾಜ್ಯ-ಭಾಜಕ ಅನ್ನೋದಾ? Line ಅನ್ನಲು ಗೆರೆ ಸುಲಭಾನಾ ರೇಖೆ ಅನ್ನೋದಾ? ಈ ಪಟ್ಟಿಗೆ ಕೊನೆನೇ ಇಲ್ಲ. ಅಷ್ಟರ ಮಟ್ಟಿಗೆ ಕನ್ನಡದ ಕಲಿಕೆ ಆಡುನುಡಿಯಿಂದ, ಆದ್ದರಿಂದ ಆ ನುಡಿಯಾಡುವ ನಾಡಿಗರಿಂದ ದೂರ ಸರಿದಿದೆ.
83% ಕರ್ನಾಟಕದ ಮಕ್ಕಳು, ಹೌದು 83% ಮಕ್ಕಳು ಈಗಲೂ ಕನ್ನಡ ಮಾಧ್ಯಮದಲ್ಲೇ ಓದ್ತಾ ಇದ್ದಾರೆ.ಇಷ್ಟು ದೊಡ್ಡ ಮಟ್ಟದಲ್ಲಿ ಮಕ್ಕಳು ನಾಡಿನ ಭಾಷೆಯಲ್ಲಿ ಓದುತ್ತಿರಬೇಕಾದರೆ, ಆ ಮಕ್ಕಳ ಕಲಿಕೆ ಸುಲಭ ಆಗಿಸುವತ್ತ, ಆ ಮಕ್ಕಳ ಬುದ್ಧಿ ಚುರುಕಾಗಿಸುವತ್ತ ನಮ್ಮ ಪಠ್ಯ ಪುಸ್ತಕದಲ್ಲಿ ಒಂದಿಷ್ಟು ಬದಲಾವಣೆಗಳಾಗಬೇಕು. ಹಾಗಂತ ನಿಮಗನಿಸಲ್ವಾ ಗೆಳೆಯರೇ? ಆ ಮಕ್ಕಳ ಕಲಿಕೆ ಸುಧಾರಿಸಿದ್ರೆ ತಾನೇ ಅಲ್ಲಿಂದ ಇನ್ನೊಬ್ಬ ವಿಶ್ವೇಶ್ವರಯ್ಯ, ಇನ್ನೊಬ್ಬ ಯು.ಆರ್.ರಾವ್ ತರಹದ ವ್ಯಕ್ತಿಗಳು ಬರಲು ಸಾಧ್ಯವಾಗೋದು?
ಅದಿರಲಿ, ಈ ಮೇಲಿನ ಚಿತ್ರದಲ್ಲಿದ್ದ ಬೀಜಗಣಿತದ ಈ ಪ್ರಮೇಯ ನಿಮಗೇನಾದ್ರೂ ಅರ್ಥ ಆದ್ರೆ, ಅದನ್ನ ವಿವರಿಸಿದರೆ ನಿಮಗೊಂದು ಬಹುಮಾನ ನಾನು ಕೊಡ್ತಿನಿ. :) Are you ready ?

ಶುಕ್ರವಾರ, ಅಕ್ಟೋಬರ್ 16, 2009
ಕುವೆಂಪು ಅಂದ ತಕ್ಷಣ ನಮಗೆಲ್ಲ ನೆನಪಿಗೆ ಬರೋದೇನು?
ಕವಿಗಳ, ಸಾಹಿತಿಗಳ ನೆನಪಲ್ಲಿ ಬೇರೆ ಬೇರೆ ವಿಷಯಗಳಿರಬಹುದು. Atleast, ನನ್ನ ಜನರೇಶನ್ನಿನ ಹೆಚ್ಚಿನ ಹುಡುಗರಿಗೆ ಹೊಳೆಯುವ ಕೆಲವು ಅಂಶಗಳು ಅಂದರೆ,
- ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಬಂತು.
- ಕುವೆಂಪು ಅವರು ಕನ್ನಡದ ಎರಡನೇ ರಾಷ್ಟ್ರಕವಿ.
- ಎಲ್ಲಾದರೂ ಇರು, ಎಂತಾದರೂ ಇರು ಅನ್ನೋ ಕನ್ನಡಿಗರಲ್ಲಿ ಕನ್ನಡತನದ ಕಿಚ್ಚು ತುಂಬೋ ಹಾಡಿನ ಸಾಲುಗಳು
- ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಅನ್ನೋ ನಾಡಗೀತೆ.
ಗಮನಿಸಿ ನೋಡಿದರೆ, ಇವೆಲ್ಲ ನಾವು ನಮ್ಮ ಶಾಲೆಗಳಲ್ಲಿ ಕಲಿತ, ಕೇಳಿದ ಅಂಶಗಳು. ಆದರೆ ಇದೆಲ್ಲವನ್ನು ಮೀರಿ, ಕುವೆಂಪು ಒಬ್ಬ ವ್ಯಕ್ತಿಯಾಗಿ ಅವರ ಮನೆಯಲ್ಲಿ ಹೇಗಿದ್ದರು? ಅವರ ಮಕ್ಕಳೊಡನೆ ಅವರಿಗಿದ್ದ ಒಡನಾಟ ಎಂತದ್ದು? ಕುವೆಂಪು ಅವರು ಅವರ ಕಾಲದಲ್ಲಿ ಇದ್ದಂತಹ ಸಾಮಾಜಿಕ ಪಿಡುಗುಗಳ ಬಗ್ಗೆ, ಜಾತಿ, ಧರ್ಮ, ದೇವರು, ಸಮಾಜವಾದದ ಬಗ್ಗೆ, ಅಖಂಡ ಕರ್ನಾಟಕದ ಬಗ್ಗೆ ಅವರಿಗಿದ್ದ ನಿಲುವೇನು ಅನ್ನೋ ಕೂತುಹಲ ನಿಮಗಿದ್ದಲ್ಲಿ ನೀವೆಲ್ಲ ತಪ್ಪದೇ ಓದಬೇಕಾದ ಕೃತಿ ತೇಜಸ್ವಿ ಅವರು ಬರೆದ ಅಣ್ಣನ ನೆನಪು. ತೇಜಸ್ವಿ ಅವರ ಅಬಚೂರಿನ ಪೋಸ್ಟಾಫೀಸು, ಕರ್ವಾಲೋ, ಚಿದಂಬರ ರಹಸ್ಯ, ಮುಂತಾದ ಹೊತ್ತಿಗೆಗಳನ್ನು ಓದಿದವರಿಗೆ ಅವರಿಗಿದ್ದ sense of humour ಎಂತದ್ದು ಅನ್ನುವುದು ತಿಳಿದಿರುತ್ತೆ. ಅಣ್ಣನ ನೆನಪುವಿನಲ್ಲೂ ಅದು ಎದ್ದು ಕಾಣುತ್ತೆ.
ಅಣ್ಣನ ನೆನಪಿನಲ್ಲಿ ನನಗಿಷ್ಟವಾದ ಕೆಲ ಸಂದರ್ಭಗಳು, ಮಾತುಗಳು:
ತೇಜಸ್ವಿ ಚಿಕ್ಕವರಿದ್ದಾಗ ಒಂದು ಜಾತಿ ನಾಯಿ ಸಾಕ್ತಾರೆ, ಯಾರನ್ನು ಕಂಡರೂ ಬಾಲ ಅಲ್ಲಾಡಿಸೋ ಆ ನಾಯಿನಾ ಪಳಗಿಸಿ, ಚುರುಕು ಮಾಡೋದು ಹೇಗೆ ಅನ್ನೋದು ಅವರ ತಲೆಬಿಸಿಯಾಗಿರುತ್ತೆ. ಜಾನ್ (ಜಾನಪ್ಪ) ಅನ್ನೋರು ಜಾತಿ ನಾಯಿಗೆ ಇಂಗ್ಲಿಷ್ ಮಾತ್ರ ಅರ್ಥ ಆಗುತ್ತೆ, ಹೀಗಾಗಿ ಇಂಗ್ಲಿಷ್ ಅಲ್ಲಿ ಮಾತಾಡಿ, ಕನ್ನಡ ಅರ್ಥ ಆಗೋಕೆ ಇದು ಕಂತ್ರಿ ನಾಯಿಯಲ್ಲ ಅನ್ನೋ ಮಾತು ಆಡ್ತಾರೆ. ಅದನ್ನ ಕೇಳಿ ತೇಜಸ್ವಿ ಮತ್ತವರ ತಮ್ಮ ನಾಯಿಗೆ ಇಂಗ್ಲಿಷ್ ಅಲ್ಲಿ " ಕಮಂಡಾ, ಕಮಂಡಾ" ( come on dog) ಅಂತ ನಾಯಿನಾ ಮಾತಾಡಿಸೋ ಪ್ರಯತ್ನದಲ್ಲಿದ್ದಾಗ ಕುವೆಂಪು ಅಲ್ಲಿಗೆ ಬರ್ತಾರೆ. ಏನ್ರೋ ಇದೆಲ್ಲ ಅಂದಾಗ, ಜಾನ್ ಹೇಳಿದ ಮಾತನ್ನ ತೇಜಸ್ವಿ ಅವರಿಗೆ ಹೇಳ್ತಾರೆ. ಇದನ್ನು ಕೇಳಿದ ಕುವೆಂಪು ಅವರಿಗೆ ಸಂಕಟ ಆಗುತ್ತೆ. ಕಂತ್ರಿ ನಾಯಿಗಳಿಗೆ ಕನ್ನಡ, ಜಾತಿ ನಾಯಿಗಳಿಗೆ ಇಂಗ್ಲಿಷ್ ಅನ್ನೋ ಆಲೋಚನೆಯ ಹಿಂದಿರುವ ಕನ್ನಡದ ಬಗೆಗಿನ ತಿರಸ್ಕಾರ ಅವರ ಮನ ನೋಯಿಸುತ್ತೆ. ಆಗ ಅವರು ಹೇಳೋ ಮಾತು, " ಪಂಪನೆನ್ನುವ ಕವಿ ಕನ್ನಡದಲ್ಲಿ ಮಹಾ ಕಾವ್ಯ ಬರೆಯುತ್ತಿದ್ದಾಗ ನಿನ್ನ ಇಂಗ್ಲಿಷ್ ದೊರೆಗಳು ಕಾಡಿನಲ್ಲಿ ತೊಗಟೆ ಸುತ್ತಿಕೊಂಡು ಕಿರಾತಕರಂತೆ ಬದುಕುತ್ತಿದ್ದರು ಅಂತ ಜಾನಪ್ಪ ಇನ್ನೊಮ್ಮೆ ಬಂದರೆ ಹೇಳಿ" ಅಂತ ಅಂದ್ರಂತೆ. ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ಕುವೆಂಪು ಅವರಿಗಿದ್ದ ಸಿಟ್ಟಿನ ಪರಿಚಯ ತೇಜಸ್ವಿಯವರಿಗಾಗುತ್ತದೆ.
ಇನ್ನೊಂದು ಸಂದರ್ಭದಲ್ಲಿ, ಕನ್ನಡದಲ್ಲಿ ಎಲ್ಲ ಹಂತದ ಕಲಿಕೆ ಬರಬೇಕು, ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಅನ್ನುತ್ತ ಅವರು ಹೇಳುವ ಇನ್ನೊಂದು ಮಾತು ಗಮನ ಸೆಳೆಯುತ್ತೆ:
ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೇರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ.
ಈ ಕಾಲದ ಹುಡುಗರು ಕನ್ನಡ ಸಾಹಿತ್ಯ ಓದಿಗೆ ದೊಡ್ಡ ನಮಸ್ಕಾರ ಹಾಕಿರುವಾಗ, ಇಂತಹ ಕೆಲವು ಕೃತಿಗಳು ಖಂಡಿತಾ ಅವರನ್ನು ಕನ್ನಡ ಪುಸ್ತಕದೆಡೆಗೆ ಸೆಳೆಯಬಲ್ಲವು. ಅಂಕಿತ ಪುಸ್ತಕದಲ್ಲಿ ಇದು one of the best seller ಅಂತಾ ಕೂಡಾ ಹೇಳಿದ್ರು. ನೀವು ಓದಿಲ್ಲ ಅಂದ್ರೆ ಖಂಡಿತ ಖರೀದಿ ಮಾಡಿ ಓದಿ, I am sure, you will enjoy it.
ಬುಧವಾರ, ಅಕ್ಟೋಬರ್ 7, 2009
ನೀನಾರಿಗಾದೆಯೋ ಓ ಕನ್ನಡಿಗ ?
ಉತ್ತರದ ನೆರೆ ನಾವೆಲ್ಲರೂ ಅಂದುಕೊಂಡದ್ದಕ್ಕಿಂತಲೂ ದೊಡ್ಡ ಮಟ್ಟದ ಹಾನಿ ಮಾಡಿದೆ. ೨೫ ಲಕ್ಷ ಹೆಕ್ಟೆರ್ ಭೂಮಿಯಲ್ಲಿನ ಬೆಳೆ ನಾಶವಾಗಿದೆ. ಭತ್ತ, ತೊಗರಿಬೆಳೆ, ಜೋಳ, ಈರುಳ್ಳಿ, ಕಬ್ಬಿನಂತಹ ದಿನ ನಿತ್ಯದ ಅಗತ್ಯಕ್ಕೆ ಬೇಕಾದ ಬೆಳೆಗಳನ್ನು ಬೆಳೆಯುತ್ತಿದ್ದ ಕಲಬುರ್ಗಿ, ಬಿಜಾಪುರ, ಬೆಳಗಾವಿ, ರಾಯಚೂರು, ಧಾರವಾಡದ ಹೆಚ್ಚು ಕಮ್ಮಿ ಎಲ್ಲ ತಾಲೂಕಿನಲ್ಲಿಯ ಬೆಳೆಯೂ ಸಂಪೂರ್ಣ ನಾಶವಾಗಿದೆ. ಮನೆ, ಮಠ, ಹಸು-ಕರು ಹೀಗೆ ತನ್ನದೆಂದು ಇದ್ದ ಎಲ್ಲವನ್ನು ಕಳೆದುಕೊಂಡು ಬಾಳಿನ ಬೆಳಕೇ ಆರಿ ಹೋದಂತೆ ಕುಳಿತಿದ್ದಾನೆ ಅಲ್ಲಿನ ಕನ್ನಡಿಗ. ಮುಂದೇನು ಎಂಬ ದಾರಿ ಕಾಣದೇ ಆತಂಕದ ಮಡುವಿನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಆತನ ಸಹಾಯಕ್ಕೆ ಧಾವಿಸದಷ್ಟು ಕಟುಕ ಮನಸ್ಸು ಕನ್ನಡಿಗನದಾ?
ಬಿಹಾರದಲ್ಲೆಲ್ಲೋ ನೆರೆ ಬಂದರೆ, ಬೆಂಗಳೂರಿನ ಪ್ರತಿ ಕಂಪನಿಯಲ್ಲೂ ಪರಿಹಾರ ಸಂಗ್ರಹಿಸುವ ಕೆಲಸ ನಡೆಯುತ್ತೆ. ಎಷ್ಟೋ ಬಾರಿ ಅದನ್ನ ಕನ್ನಡಿಗನೇ ಮುಂದೆ ನಿಂತು ಮಾಡಿರುತ್ತಾನೆ. ತಮಿಳುನಾಡಲ್ಲಿ ಸುನಾಮಿ ಬಂದರೇ ಕನ್ನಡಿಗನೇ ಮುಂದೆ ನಿಂತು ಲಾರಿಯಲ್ಲಿ ಚಪಾತಿ ತುಂಬಿಕೊಂಡು ಹೋಗಿ ಅಲ್ಲಿನ ಸಂತ್ರಸ್ಥರ ಕಣ್ಣೀರು ಒರೆಸಲು ಮುಂದಾಗ್ತಾನೆ. ಓರಿಸ್ಸಾದಲ್ಲೆಲ್ಲೋ ಚಂಡಮಾರುತೆ ಬೀಸಿದರೆ, ಅಲ್ಲಿಗೆ ಕೂಡಲೇ ಧಾವಿಸಿ, ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗ್ತಾನೆ. ಇವತ್ತು ಅವನ ಮನೆಗೆ ಬೆಂಕಿ ಬಿದ್ದಿದೆ, ಉಕ್ಕಿ ಬಂದ ತುಂಗೆ, ಕೃಷ್ಣೆಯರ ಅಬ್ಬರಕ್ಕೆ ತನ್ನದೆಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ಬೆತ್ತಲಾಗಿ ನಿಂತಿರುವ ಉತ್ತರದ ತನ್ನ ಅಣ್ಣ-ತಮ್ಮಂದಿರ ನೆರವಿಗೆ ಆತ ಮುಂದಾಗುತ್ತಾನಾ? ಅಥವಾ ಈಗಲೂ ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ ತನ್ನ ಪಾಡಿಗೆ ತಾನು ಇದ್ದು ಬಿಡ್ತಾನಾ?
ಏನ್ ಗುರು ಬ್ಲಾಗಿನಲ್ಲಿ ಬಂದ ಒಂದು ಕವನವನ್ನು ಇಲ್ಲಿ ಹಾಗೇ ಹಾಕ್ತಾ ಇದೀನಿ.
ಅಂದೊಮ್ಮೆ...
ಕಾರ್ಗಿಲ್ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...
ಹಿಂದೊಮ್ಮೆ ...
ಲಾಥೂರ್, ಕಿಲಾರಿಯಲ್ಲಿ,
ಕಛ್, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...
ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...
ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...
ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!
ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...
ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ
ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!
ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!! ಸೋಮವಾರ, ಅಕ್ಟೋಬರ್ 5, 2009
ಇದಕ್ಕೆಲ್ಲ ಕೊನೆ ಎಂದು ?
ಕರ್ನಾಟಕದ ೧೫ಕ್ಕೂ ಹೆಚ್ಚು ಜಿಲ್ಲೆಗಳು ಹಿಂದೆಂದೂ ಕೇಳರಿಯದ ರೀತಿಯಲ್ಲಿ ನೆರೆಗೆ ತುತ್ತಾಗಿದ್ದು, ಜನ ಮನೆ ಮಠ ಎಲ್ಲ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ತಕ್ಷಣ ಸ್ಪಂದಿಸಬೇಕಾಗಿದ್ದ ರಾಜ್ಯ ಸರ್ಕಾರ ಸುತ್ತೂರು ಮಠದಲ್ಲಿ ಜನಗಳ ಸೇವೆ ಮಾಡೋದು ಹೇಗೆ ಅಂತ ಪಾಠ ಕಲಿತಾ ಇದ್ರಂತೆ. ನೆರೆ ಪೀಡಿತ ಜನರ ನೆರವಿಗೆ ಧಾವಿಸಿ, ಅವರ ಕಣ್ಣೀರು ಒರೆಸೋ practical ಕೆಲಸ ಮಾಡೋದು ಬಿಟ್ಟು, ಅದೇ ಜನಗಳ ಕಷ್ಟ ನಿವಾರಿಸೋದು ಹೇಗೆ ಅಂತ theory ಕಲಿತೀನಿ ಅಂತ ಮಠದಲ್ಲಿ ಕೂತ ಸರ್ಕಾರ, ಜನರ ನೆರವಿಗೆ ಧಾವಿಸೋ ಹೊತ್ತಿಗೆ ಅಲ್ಲಾಗಲೇ ೧೮೦ಕ್ಕೂ ಹೆಚ್ಚು ಜನರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಕಾಲಿಕ ಸಾವಿಗೀಡಾದ ನಮ್ಮ ಅಣ್ಣ-ತಮ್ಮ-ಅಕ್ಕ-ತಂಗಿಯರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸೋಣ.
ಇದೇ ವೇಳೆ, ಕೇಂದ್ರದಲ್ಲಿರುವ ಸರ್ಕಾರ ಕರ್ನಾಟಕದ ಬಗ್ಗೆ ತನಗಿರುವ ಮಲತಾಯಿ ಧೋರಣೆಯನ್ನು ಹೇಗೆ ಮುಂದುವರೆಸಿದೆ ಅನ್ನೋದನ್ನ ಇವತ್ತಿನ DNA ಮತ್ತು ಕನ್ನಡ ಪ್ರಭ ಪತ್ರಿಕೆಗಳ ವರದಿಗಳು ಹೇಳುತ್ತಿವೆ.
ಅಲ್ಲಾ, ಇಂತಹ ಹೊತ್ತಲ್ಲೂ ಇವರಿಗೆ ರಾಜಕೀಯ ಲಾಭದ್ದೇ ಚಿಂತೆ ಅಂದ್ರೆ ಏನ್ ಹೇಳಬೇಕು. ರಾಜ್ಯದಲ್ಲಿ ೧೫ಕ್ಕೂ ಹೆಚ್ಚು ಜಿಲ್ಲೆಗಳು ನೆರೆಗೆ ತುತ್ತಾಗಿರುವುದು, ೧೮೦ಕ್ಕೂ ಹೆಚ್ಚು ಜನ ಸಾವೀಗಿಡಾಗಿ, ಆಂಧ್ರಕ್ಕಿಂತ ಅತಿ ಹೆಚ್ಚಿನ ನಷ್ಟ ಇಲ್ಲಿ ಆಗಿರುವ data ಕಣ್ಣ ಮುಂದೆ ಇದ್ದರೂ, ಆಂಧ್ರಕ್ಕೆ ಎಲ್ಲ ರೀತಿಯ ನೆರವು, ಕರ್ನಾಟಕಕ್ಕೆ ಬೇಕೋ ಬೇಡವೋ ಅನ್ನೋ ರೀತಿಯ ನೆರವು ಕೊಡ್ತಾ ಇರೋದನ್ನ ನೋಡಿದಾಗ, ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ, ಕನ್ನಡಿಗರ ಹಿತದ ಬಗ್ಗೆ ಅದೇಷ್ಟು ಕಾಳಜಿ ಇದೆ ಅನ್ನುವುದು ಗೊತ್ತಾಗಲ್ವ? ಇದೇ ಬಿ.ಜೆ.ಪಿ ಸರ್ಕಾರ ಕೇಂದ್ರದಲ್ಲಿದ್ದಿದ್ದರೆ ಪರಿಸ್ಥಿತಿ ಬೇರೆಯಾಗೇನು ಇರುತ್ತಿರಲಿಲ್ಲ. ಅವರ ಸರ್ಕಾರಕ್ಕೆ ಆಂಧ್ರದಿಂದ ಯಾರು ಸಪೋರ್ಟ್ ಕೊಡುತ್ತಿದ್ದರೋ, ಅವರ ಅಣತಿಯಂತೆ ಅವರಿಗೆ ಹೆಚ್ಚಿನ ನೆರವು ಸಿಗುತಿತ್ತು. ಕರ್ನಾಟಕಕ್ಕೆ ಯಾವತ್ತು ಚೊಂಬೇ ಗತಿ. ಇದಕ್ಕೆಲ್ಲ ಪರಿಹಾರವೆಂದರೆ, ಕರ್ನಾಟಕದ ಹಿತ ಕಾಯಬಲ್ಲ ಪ್ರಾದೇಶಿಕ ಪಕ್ಷವೊಂದರ ಉದಯ. ಅದು ಆಗೋವರೆಗೂ ಇಂತಹ ಅನ್ಯಾಯ, ಅಸಡ್ಡೆಗಳಿಗೆ ಕೊನೆಯಿಲ್ಲ ಅನ್ನಿಸುತ್ತೆ. ನೀವೇನ್ ಅಂತೀರಾ?

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)