ಉತ್ತರದ ನೆರೆ ನಾವೆಲ್ಲರೂ ಅಂದುಕೊಂಡದ್ದಕ್ಕಿಂತಲೂ ದೊಡ್ಡ ಮಟ್ಟದ ಹಾನಿ ಮಾಡಿದೆ. ೨೫ ಲಕ್ಷ ಹೆಕ್ಟೆರ್ ಭೂಮಿಯಲ್ಲಿನ ಬೆಳೆ ನಾಶವಾಗಿದೆ. ಭತ್ತ, ತೊಗರಿಬೆಳೆ, ಜೋಳ, ಈರುಳ್ಳಿ, ಕಬ್ಬಿನಂತಹ ದಿನ ನಿತ್ಯದ ಅಗತ್ಯಕ್ಕೆ ಬೇಕಾದ ಬೆಳೆಗಳನ್ನು ಬೆಳೆಯುತ್ತಿದ್ದ ಕಲಬುರ್ಗಿ, ಬಿಜಾಪುರ, ಬೆಳಗಾವಿ, ರಾಯಚೂರು, ಧಾರವಾಡದ ಹೆಚ್ಚು ಕಮ್ಮಿ ಎಲ್ಲ ತಾಲೂಕಿನಲ್ಲಿಯ ಬೆಳೆಯೂ ಸಂಪೂರ್ಣ ನಾಶವಾಗಿದೆ. ಮನೆ, ಮಠ, ಹಸು-ಕರು ಹೀಗೆ ತನ್ನದೆಂದು ಇದ್ದ ಎಲ್ಲವನ್ನು ಕಳೆದುಕೊಂಡು ಬಾಳಿನ ಬೆಳಕೇ ಆರಿ ಹೋದಂತೆ ಕುಳಿತಿದ್ದಾನೆ ಅಲ್ಲಿನ ಕನ್ನಡಿಗ. ಮುಂದೇನು ಎಂಬ ದಾರಿ ಕಾಣದೇ ಆತಂಕದ ಮಡುವಿನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಆತನ ಸಹಾಯಕ್ಕೆ ಧಾವಿಸದಷ್ಟು ಕಟುಕ ಮನಸ್ಸು ಕನ್ನಡಿಗನದಾ?
ಬಿಹಾರದಲ್ಲೆಲ್ಲೋ ನೆರೆ ಬಂದರೆ, ಬೆಂಗಳೂರಿನ ಪ್ರತಿ ಕಂಪನಿಯಲ್ಲೂ ಪರಿಹಾರ ಸಂಗ್ರಹಿಸುವ ಕೆಲಸ ನಡೆಯುತ್ತೆ. ಎಷ್ಟೋ ಬಾರಿ ಅದನ್ನ ಕನ್ನಡಿಗನೇ ಮುಂದೆ ನಿಂತು ಮಾಡಿರುತ್ತಾನೆ. ತಮಿಳುನಾಡಲ್ಲಿ ಸುನಾಮಿ ಬಂದರೇ ಕನ್ನಡಿಗನೇ ಮುಂದೆ ನಿಂತು ಲಾರಿಯಲ್ಲಿ ಚಪಾತಿ ತುಂಬಿಕೊಂಡು ಹೋಗಿ ಅಲ್ಲಿನ ಸಂತ್ರಸ್ಥರ ಕಣ್ಣೀರು ಒರೆಸಲು ಮುಂದಾಗ್ತಾನೆ. ಓರಿಸ್ಸಾದಲ್ಲೆಲ್ಲೋ ಚಂಡಮಾರುತೆ ಬೀಸಿದರೆ, ಅಲ್ಲಿಗೆ ಕೂಡಲೇ ಧಾವಿಸಿ, ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗ್ತಾನೆ. ಇವತ್ತು ಅವನ ಮನೆಗೆ ಬೆಂಕಿ ಬಿದ್ದಿದೆ, ಉಕ್ಕಿ ಬಂದ ತುಂಗೆ, ಕೃಷ್ಣೆಯರ ಅಬ್ಬರಕ್ಕೆ ತನ್ನದೆಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ಬೆತ್ತಲಾಗಿ ನಿಂತಿರುವ ಉತ್ತರದ ತನ್ನ ಅಣ್ಣ-ತಮ್ಮಂದಿರ ನೆರವಿಗೆ ಆತ ಮುಂದಾಗುತ್ತಾನಾ? ಅಥವಾ ಈಗಲೂ ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ ತನ್ನ ಪಾಡಿಗೆ ತಾನು ಇದ್ದು ಬಿಡ್ತಾನಾ?
ಏನ್ ಗುರು ಬ್ಲಾಗಿನಲ್ಲಿ ಬಂದ ಒಂದು ಕವನವನ್ನು ಇಲ್ಲಿ ಹಾಗೇ ಹಾಕ್ತಾ ಇದೀನಿ.
ಅಂದೊಮ್ಮೆ...
ಕಾರ್ಗಿಲ್ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...
ಹಿಂದೊಮ್ಮೆ ...
ಲಾಥೂರ್, ಕಿಲಾರಿಯಲ್ಲಿ,
ಕಛ್, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...
ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...
ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...
ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!
ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...
ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ
ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!
ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!
baraha odi,, kannu manjaaytu vasant avare,,
ಪ್ರತ್ಯುತ್ತರಅಳಿಸಿnaavella seri namma anna-tammandirige sahaya maadbeku..