ಶುಕ್ರವಾರ, ಅಕ್ಟೋಬರ್ 23, 2009

ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ :)

ಕಳೆದ ವರ್ಷ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಅಜ್ಜಿ ಮನೆಗೆ 4 ದಿನ ರಜೆ ಅಂತಾ ಹೋಗಿದ್ದೆ. ಸಂಜೆ ಊಟದ ನಂತರ ಮನೆಯಲ್ಲಿ ಮಾಮನ ಮಕ್ಕಳೆಲ್ಲ ಓದಿಕೊಳ್ತಾ ಇದ್ರು. 9ನೇ ಕ್ಲಾಸಲ್ಲಿ ಓದ್ತಾ ಇರೋ ಅನುಷಾಳಿಗೆ ಅಭ್ಯಾಸ ಎಲ್ಲ ಹೇಗ್ ನಡಿತಾ ಇದೆ, ಯಾವ ವಿಷ್ಯ ಕಷ್ಟ ಅನ್ಸುತ್ತೆ ಅಂತಾ ಕೇಳಿದೆ. ಅದಕ್ಕವಳು " ಅಣ್ಣಾ, ನನಗೆ ಗಣಿತ ಒಂದೇ ಚೂರು ಕಷ್ಟಾ" ಅಂದ್ಲು.

ಸುಮ್ಮನಿರದೇ ಇರುವೆ ಬಿಟ್ಕೊಂಡ ಅನ್ನೋ ಹಂಗೆ ನಾನು ಹೌದಾ, ಎಲ್ಲಿ ಗಣಿತದ ಪುಸ್ತಕ ತಗೊಂಡ್ ಬಾ, ಏನ್ ಕಷ್ಟ ಅನ್ಸುತ್ತೋ ಕೇಳು, ನಾನು ಹೇಳಿಕೊಡ್ತಿನಿ ಅಂದೆ. ಅವಳು ಗಣಿತದ 9ನೇ ಕ್ಲಾಸಿನ ಪುಸ್ತಕ ತಂದು ಕೇಳಿದ್ದು ಈ ಪ್ರಮೇಯದ (ಚಿತ್ರ ನೋಡಿ) ಅರ್ಥ:












ಹತ್ತು ಸಲಿ ತಲೆಕೆಳಗಾಗಿ ಓದಿದ್ರೂ ಇದರ ಅರ್ಥ ಹೊಳಿಲಿಲ್ಲ. ಆಗಲೇ ಅನ್ನಿಸಿದ್ದು, ಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿರೋದು ಅಂತ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ,, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?


ಕನ್ನಡದ ಮಕ್ಕಳು ಊರು ಹೊಡೆಯುವುದಲ್ಲೇ ತಮ್ಮ ಕಾಲ ಕಳೆಯುತ್ತಿವೆಯೇ ಹೊರತು ವಿಜ್ಞಾನ, ಗಣಿತದ ಅಂಶಗಳನ್ನು ಅರಿಯುವುದರಲ್ಲಲ್ಲ. Concave, Convex mirror ಅನ್ನು ಉಬ್ಬುಗಾಜು, ತಗ್ಗುಗಾಜು ಅಂದರೆ ಎಂತಹ ಗಮಾರನಿಗೂ ಅರ್ಥ ಆಗುತ್ತೆ, ಅದೇ ಕನ್ನಡ ಮಾಧ್ಯಮದ ಪುಸ್ತಕದಲ್ಲಿ ಪೀನ ಮಸೂರ, ನಿಮ್ನ ಮಸೂರ ಎಂದು ಹೇಳಿ ಕೊಡುತ್ತಾರೆ. ಮಕ್ಕಳಿಗೆ ಯಾವುದು ಸುಲಭವಾಗುತ್ತೆ ನೀವೇ ಒಮ್ಮೆ ಯೋಚಿಸಿ. chlorophyl ಅನ್ನುವುದನ್ನು ಪತ್ರಹರಿತ್ತು ಎಂದೆನ್ನದೇ "ಎಲೆಹಸಿರು" ಅಂದರೆ ಮಕ್ಕಳಿಗೆ ಸುಲಭವಾಗುತ್ತಾ, ಕಷ್ಟವಾಗುತ್ತ ನೀವು ಹೇಳಿ? Denominator / Nominator ಅನ್ನಲು ಮೇಲ್ ಮನೆ / ಕೆಳಮನೆ ಅನ್ನೋದು ಸುಲಭಾನಾ ಇಲ್ಲ ಭಾಜ್ಯ-ಭಾಜಕ ಅನ್ನೋದಾ? Line ಅನ್ನಲು ಗೆರೆ ಸುಲಭಾನಾ ರೇಖೆ ಅನ್ನೋದಾ? ಈ  ಪಟ್ಟಿಗೆ ಕೊನೆನೇ ಇಲ್ಲ. ಅಷ್ಟರ ಮಟ್ಟಿಗೆ ಕನ್ನಡದ ಕಲಿಕೆ ಆಡುನುಡಿಯಿಂದ, ಆದ್ದರಿಂದ ಆ ನುಡಿಯಾಡುವ ನಾಡಿಗರಿಂದ ದೂರ ಸರಿದಿದೆ.

83% ಕರ್ನಾಟಕದ ಮಕ್ಕಳು, ಹೌದು 83% ಮಕ್ಕಳು ಈಗಲೂ ಕನ್ನಡ ಮಾಧ್ಯಮದಲ್ಲೇ ಓದ್ತಾ ಇದ್ದಾರೆ.ಇಷ್ಟು ದೊಡ್ಡ ಮಟ್ಟದಲ್ಲಿ ಮಕ್ಕಳು ನಾಡಿನ ಭಾಷೆಯಲ್ಲಿ ಓದುತ್ತಿರಬೇಕಾದರೆ, ಆ ಮಕ್ಕಳ ಕಲಿಕೆ ಸುಲಭ ಆಗಿಸುವತ್ತ, ಆ ಮಕ್ಕಳ ಬುದ್ಧಿ ಚುರುಕಾಗಿಸುವತ್ತ ನಮ್ಮ ಪಠ್ಯ ಪುಸ್ತಕದಲ್ಲಿ ಒಂದಿಷ್ಟು ಬದಲಾವಣೆಗಳಾಗಬೇಕು. ಹಾಗಂತ ನಿಮಗನಿಸಲ್ವಾ ಗೆಳೆಯರೇ? ಆ ಮಕ್ಕಳ ಕಲಿಕೆ ಸುಧಾರಿಸಿದ್ರೆ ತಾನೇ ಅಲ್ಲಿಂದ ಇನ್ನೊಬ್ಬ ವಿಶ್ವೇಶ್ವರಯ್ಯ, ಇನ್ನೊಬ್ಬ ಯು.ಆರ್.ರಾವ್ ತರಹದ ವ್ಯಕ್ತಿಗಳು ಬರಲು ಸಾಧ್ಯವಾಗೋದು?

ಅದಿರಲಿ, ಈ ಮೇಲಿನ ಚಿತ್ರದಲ್ಲಿದ್ದ ಬೀಜಗಣಿತದ ಈ ಪ್ರಮೇಯ ನಿಮಗೇನಾದ್ರೂ ಅರ್ಥ ಆದ್ರೆ, ಅದನ್ನ ವಿವರಿಸಿದರೆ ನಿಮಗೊಂದು ಬಹುಮಾನ ನಾನು ಕೊಡ್ತಿನಿ. :) Are you ready ?

28 ಕಾಮೆಂಟ್‌ಗಳು:

  1. ಯಾವುದು ಕನ್ನಡ ಅನ್ನೋ ಪರಿವೇ ಇಲ್ಲದೆ ಇ೦ದು ಕನ್ನಡಿಗರ ವಿದ್ಯಾಭ್ಯಾಸ ನಡೆಯುತ್ತಿದೆ. ಈ ರೀತಿಯ ಕನ್ನಡದಲ್ಲಿ ಕಲಿತ ಮಕ್ಕಳು ನಾಡಿನ ನಾಳೆಗಳನ್ನು ರೂಪಿಸಲು ಶಕ್ತರಾಗೋದು ಹೇಗೆ? ಕನ್ನಡವು ಅನ್ನ ಕೊಡೋ ಭಾಷೆಯಾಗಿ ಬೆಳೆಯೋದಾದ್ರೂ ಹೇಗೆ?

    ಇದಕ್ಕೆಲ್ಲಾ ಒ೦ದೇ ಮದ್ದು. ಕಲಿಕೆಯಲ್ಲಿ ಕ್ರಾ೦ತಿಯಾಗಬೇಕು. ಇದಕ್ಕೂ ಮುನ್ನ ನಾಡಿನ ರಾಜಕೀಯ ನಾಯಕತ್ವದಲ್ಲಿ, ಸರ್ಕಾರದಲ್ಲಿ, ಸರ್ಕಾರದ ಆಡಳಿತದಲ್ಲಿ ದೆಕನ್ನಡತನದ ಜಾಗೃತಿಯಾಗಬೇಕು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಮಾತು ನಿಜ ಕಿಶೋರ್,,
    ಕನ್ನಡ ಮಾಧ್ಯಮದಲ್ಲಿ ಎಲ್ಲ ಹಂತದ ಶಿಕ್ಷಣ ತರಲು ಬೇಕಾದ ಅತ್ಯಂತ ಮುಖ್ಯವಾದ ಅಂಶ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ರಂಗದ ಕಷ್ಟದ ಶಬ್ದಗಳನ್ನು ಕನ್ನಡದಲ್ಲಿ ತರುವ ಪ್ರಯತ್ನ. ಕನ್ನಡದಲ್ಲಿ ಅಂತಹ ಹೊಸ ಶಬ್ದಗಳನ್ನು ಹುಟ್ಟಿಸುವಾಗ ಅವು ಆದಷ್ಟು, ನಾಡಿಗರ ಆಡು ನುಡಿಗೆ ಹತ್ತಿರವಾಗಿದ್ದು, ಸುಲಭವಾಗಿ ಉಲಿಯಲು ಸಾಧ್ಯವಾಗುವಂತದಿದ್ದು, ಸುಲಭವಾಗಿ ನೆನಪಿನಲ್ಲೂ ಇಟ್ಟುಕೊಳ್ಳುವಂತದಾಗಬೇಕಿದೆ. ಈಗ ಹೇಳಿ, ಅದು ಇನ್ನೊಂದು ಕಷ್ಟದ ನುಡಿಯಿಂದ ಎರವಲು ಪಡೆದ ಶಬ್ದಗಳಿಂದ ಆದಿತೋ, ಇಲ್ಲ ನಾಡಿಗನ ಆಡು ನುಡಿಗೆ ಹತ್ತಿರದ ಶಬ್ದಗಳಿಂದಲೋ? ಖ್ಯಾತ ನುಡಿಯರಿಗ ಡಿ.ಎನ್.ಶಂಕರ್ ಭಟ್ಟರು, ತಮ್ಮ " ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಪದಗಳು" ಕೃತಿಯಲ್ಲಿ ಈ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಅದನ್ನು ತೆರೆದ ಮನಸ್ಸಿಂದ ಓದೋ ಯಾರಿಗೆ ಆದರೂ ಅವರ ಮಾತಿನಲ್ಲಿರುವ ನಿಜಾಂಶ ಅರಿವಾಗದೇ ಇರದು.

    ಪ್ರತ್ಯುತ್ತರಅಳಿಸಿ
  3. ಇನ್ನೊಂದು ವಿಷ್ಯ ಅಂದ್ರೆ, ಇವತ್ತು ಕನ್ನಡಕ್ಕೆ ಅನ್ನ ಹುಟ್ಟಿಸುವ ಶಕ್ತಿ ಇಲ್ಲ ಅನ್ನುವುದು ನಮ್ಮೆಲ್ಲರ ಕಣ್ಣಿಗೂ ಸ್ಪಷ್ಟವಾಗಿ ಕಾಣುತ್ತಿದೆ. ನೀವೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುತ್ತಿರಾ,, ಹೇಳಿ? ಕನ್ನಡದ ಮೇಲಿನ ಅಭಿಮಾನದಿಂದ ಕಳಿಸಬಹುದೇನೋ, ಆದ್ರೆ ಅಭಿಮಾನದಿಂದ ಅನ್ನ ಹುಟ್ಟುವುದಿಲ್ಲ. ಇದೇ ಚಿಂತೆಯಲ್ಲೇ ಇವತ್ತು ನಾಡಿನ ಜನರೆಲ್ಲ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲಿ ಎಂದು ಹಾರೈಸುವುದು. ಇಂಗ್ಲಿಷ್ ಗೆ ಸಿಕ್ಕಿರುವ ಅನ್ನ ಹುಟ್ಟಿಸುವ ಶಕ್ತಿ, ಕನ್ನಡಕ್ಕೂ ಕೊಡ ಮಾಡದ ಹೊರತು, ಕಥೆ, ಕವನ, ಸಿನೆಮಾ, ನಾಟಕ ಎನ್ನುವ ಜುಟ್ಟಿನ ಮಲ್ಲಿಗೆಯಿಂದ ಕನ್ನಡಿಗರ ನಾಳೆಗಳು ಉದ್ಧಾರ ಆಗುತ್ತೆ ಅನ್ನೋದು ಕನಸಿನ ಮಾತು.

    ಕನ್ನಡಕ್ಕಿರೋ ಭವ್ಯ ಇತಿಹಾಸದಿಂದಲೋ, ಇಲ್ಲ ಹಿಂದೆ ರಾಜರೂ, ಕವಿಗಳೂ, ಸಾಹಿತಿಗಳು ಮಾಡಿರುವ ಸಾಧನೆಯಿಂದಲೋ ಈ ನಾಡಿನ ನಾಳೆ ಭವ್ಯ ಆಗುತ್ತೆ ಅನ್ನೋದು ತಿರುಕನ ಕನಸು. ನಮ್ಮ ನಮ್ಮ ಕಂಪನಿಗಳಲ್ಲಿರುವ ಎಲ್ಲ ಕನ್ನಡಿಗರನ್ನೂ ಅಚೆಗೆಳೆದು ರನ್ನ, ಪಂಪನ ಬಗ್ಗೆ ಓದಿರುವವರು ಯಾರ್ ಯಾರು ಅಂತ ಏನಾದ್ರೂ ಎಣಿಸಿದರೆ ಒಂದು 10 ಜನಾನೂ ಸಿಗಲಾರರು. ಇಂದಿನ ಯುವಕರಿಗೆ ಅದು ಬೇಕೂ ಇಲ್ಲ. ಅವರಿಗೆ ಬೇಕಿರುವುದು ಹೊಟ್ಟೆಗೆ ಹಿಟ್ಟು, ಅದನ್ನು ಕನ್ನಡ ಕೊಡಿಸುತ್ತಾ? ಕನ್ನಡದಲ್ಲಿ ಉಳಿಯುತ್ತಾರೆ, ಇಲ್ಲದಿದ್ದಲ್ಲಿ, ಯಾವ ಭಾಷೆ ಕೊಡುತ್ತೋ ಆ ಭಾಷೆಯನ್ನು ಅಪ್ಪಿಕೊಳ್ಳುತ್ತಾರೆ. ನಾಡಿನ ಇತಿಹಾಸ, ನುಡಿಗಿರುವ ಭವ್ಯ ಚರಿತ್ರೆಯನ್ನು ನೆನಪಿಸಿಕೊಳ್ಳುತ್ತಲ್ಲೇ ನಾಳೆಯ ದಿನದ ಕನ್ನಡಿಗರ ಬದುಕಿಗೆ ಕನ್ನಡ ಬದುಕಿನ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಮತ್ತು ಆ ದಿಕ್ಕಲ್ಲಿ ಖಂಡಿತ ಕೆಲಸಗಳಾಗಬೇಕು.

    ಪ್ರತ್ಯುತ್ತರಅಳಿಸಿ
  4. Idanna inmele entrance exam puzzle section alli haakbahudu.
    ಇದು ತಮಾಶೆಯಾಗಿ ಕಂಡರೂ, ಬಹಳ ಖೆದಪದಬೇಕಾದ ಸಂಗತಿ. ಪಾಪ ಮಕ್ಕಳು. ಇವರ ಸಂಸ್ಕೃತ ಆರಾಧನೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.

    ಪ್ರತ್ಯುತ್ತರಅಳಿಸಿ
  5. Neevu kottiruva chitra-dalliruva vishaya, shabdagaLa parichaya namage illade irodrinda , athava maretu hodudarinda kasta annisuttade. Idara artha tumba sulabha ide:
    "Thus, when we divide a monomial by a monomial we need to follow below two rules:
    1. The numerical coefficient of the quotient of the two monomials is equal to the quotient of the numerical coefficients of the two monomials.
    2. The literal coefficient of the quotient obtained after dividing the two monomials is equal to the quotient obtained by dividing the literal coefficients (themselves)."
    In summary, they are telling that numerical and liteal coefficients can be separated and divided.

    So point is that unfamiliarity with the vocabulary is the whole reason and not the words themselves. At least familiarity with few words and "maths" should help decode what it says (that's what I did).
    I think, for your sister the difficulty was with mathematics, the way how statements twist themselves and not the language itself (because, if she's studying 9th std in Kannada, she would be familiar with the words by now). However, problem for you seems to be otherwise. Mathematics is the toughest subject for most in the world, not only your sister!

    Kannada-dalli mAtra alla, bere bhashe-galalloo kUda ee taraha ancient language-galinda word tagondiddaare. English-alli greek mattu Latin bhashe-galinda udBhavisiruva shabhdagalu bEkadastive. Addarinda, naavu kannada-dalli sanskrita shabdha-gaLannu upayogisuvudu Ashcharya-dinda athava tappaagi nOdOdu beda.

    Haage visheshwaraya mattu U R rav avrugaLu, ide gaNita pustakagalinda odirtaare. Naanu haago nanna bere geLeyaru kooda ide ganita pustaka-galinda odirteevi. Namage idara bagge dooru illa. Neeveega namage aa shabhagala nenapu maadi kottiddakke, kannada rajyotsava samaya-dalli, tumba dhanyavada-galu.

    Matte, illi sanskrita huchch antella comment bittiruva huchcharige bEga jnanodaya aagali anta devarilli keLkoLtEne. YAkandre, nammellara bhashege Sanskritaane moola, haagu, prapanchada shreSTa kriti-galella sanskritadalle ide. Addarinda, swalpa gowarava irali. Dooshane beda.

    ಪ್ರತ್ಯುತ್ತರಅಳಿಸಿ
  6. @Raghavendra,

    ಗಣಿತದಲ್ಲಿ "ಕೂಡುವುದು" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ.
    ಅದೇ ಸಂಕಲನ ಎಂದರೆ, ಆ ಪದದ ಅರ್ಥ ಸಾಮಾನ್ಯ ಕನ್ನಡಿಗರಿಗೆ ಉರು ಹೊಡೆಯದೇ ಆಗುವುದಿಲ್ಲ.

    ಬಹುಷ, ವಸಂತ್ ಇಲ್ಲಿ ಹೇಳುತ್ತಿರುವುದು ಏನಂದರೆ, ಸುಲಭ ಪದಗಳನ್ನು ಬಳಸಿದಲ್ಲಿ ಮಕ್ಕಳಿಗೆ concept ಸುಲಭವಾಗಿ ಅರ್ಥವಾಗುತ್ತದೆ. ಉರು ಹೊಡೆಯುವ ಅವಶ್ಯಕತೆ ಇರುವುದಿಲ್ಲ. ಸುಲಭ ಪದಗಳು ಇಲ್ಲವಾದ ಪಕ್ಶದಲ್ಲಿ, ಸಂಸ್ಕ್ರುತದ ಪದಗಳನ್ನು ಎರವಲು ಪಡೆಯುವುದರಲ್ಲಿ ತಪ್ಪೇನೂ ಕಾಣುವುದಿಲ್ಲ.

    ಈಗಿನ ವ್ಯವಸ್ಥೆಯ ತೊಂದರೆ ಎಲ್ಲಾಗಿದೆ ಎಂದರೆ, “ಪದಗಳನ್ನು ನೆನಪಿಟ್ಟುಕೊಳ್ಳುವ ಬಲ ಇರುವವರು ಓದಿನಲ್ಲಿ ಮುಂದುವರೆಯುತ್ತಾರೆ. ಹೊಸ ಪದಗಳನ್ನು ನೆನಪಿಟ್ಟುಕೊಳ್ಳಲಾಗದ ಮಕ್ಕಳು, ಗಣಿತದಲ್ಲಿ ಬುದ್ಧಿವಂತರಿದ್ದರೂ ಓದಿನಲ್ಲಿ ಮುಂದುವರೆಯಲಾರರು.”
    ನೆನಪಿಟ್ಟುಕೊಳ್ಳುವುದೊಂದೇ ಬುದ್ಧಿವಂತಿಕೆಯಲ್ಲವಲ್ಲ. ಕೆಲವು ಮಹಾನ್ ವಿಜ್ನ್ಯಾನಿಗಳು ಮರೆಗುಳಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

    ಈ ಉರು ಹೊಡೆಯುವಂತೆ ಮಾಡಲಾಗಿರುವುದರಿಂದಲೇ ಏನೋ, ನಮ್ಮಲ್ಲಿನ ಪ್ರತಿಭೆಗಳು ಹೊರಬರುತ್ತಿಲ್ಲ ಮತ್ತು ನಮ್ಮಲ್ಲಿ ಅತೀ ಕಡಿಮೆ nobel ಪ್ರಶಸ್ತಿ ಪುರಸ್ಕ್ರುತರಿರುವುದು.

    ಪ್ರತ್ಯುತ್ತರಅಳಿಸಿ
  7. The prize must go to the experts in the text book authority of karnataka.

    -sham
    http://thatskannada.oneindia.in

    ಪ್ರತ್ಯುತ್ತರಅಳಿಸಿ
  8. ರಾಘವೇಂದ್ರ ಅವರೇ,
    ನಿಮ್ಮ ಅನಿಸಿಕೆ ಎಂದೋ ಓದಿದ ಆ ಶಬ್ದಗಳು ಇವತ್ತು ಮರೆತು ಹೋಗಿರೋದ್ರಿಂದಲೇ ಈ ಪ್ರಮೇಯ ಅರ್ಥ ವಿವರಿಸಲು ಆಗಿಲ್ಲ ಅನ್ನೋದು ಕೆಲ ಮಟ್ಟಿಗೆ ನಿಜ. ಆದರೆ ಯೋಚಿಸಿ ನೋಡಿ, ಕಲಿಕೆಯ ನಿಜವಾದ ಉದ್ದೇಶ ಏನಾಗಿರಬೇಕು? ಗಣಿತ-ವಿಜ್ಞಾನದಂತಹ ವಿಷಯಗಳನ್ನು ಒಮ್ಮೆ ಕಲಿತು, ಅದು ನಿಜಕ್ಕೂ ನಮ್ಮ ಬುದ್ಧಿಗೆ ಅರ್ಥ ಆಗಿದ್ದಲ್ಲಿ ಅದು ಎಂದಿಗಾದರೂ ಮರೆತು ಹೋದಿತೇ? ಚಿಕ್ಕಂದಿನಲ್ಲಿ ಅಪ್ಪ-ಅಮ್ಮನಿಂದ ಮನೆಯಲ್ಲಿ ಕಲಿತ ಕೂಡಸೋದು, ಕಳೆಯೋದು, ಗುಣಸೋದು ಅನ್ನೋದು ಇರಬಹುದು, ಇಲ್ಲವೇ ಒಂದೋ ಎರಡೋ ಬಾಳೆಲೆ ಹರಡೋ ಅನ್ನೋ ಲೆಕ್ಕದ ಹಾಡಿರಬಹುದು ಯಾಕೆ ಮರೆತು ಹೋಗಲ್ಲ? ನೀವೇ ಹೇಳಿದ familiarity with the words ಬೇಕು ಅನ್ನೋದು ಸಕತ್ ನಿಜ. ಆದ್ರೆ ಅದು ನಮ್ಮ ಆಡು ನುಡಿಗೆ ಹತ್ತಿರದ ಶಬ್ದವಾಗಿದ್ದಾಗ ಮಾತ್ರವೇ ಅದು familiar ಆಗಲು ಸಾಧ್ಯ. ಇನ್ನೂ ಸಂಸ್ಕೃತ ಪ್ರೀತಿ-ದ್ವೇಶದ ಮಾತು ಇಲ್ಲಿ ಅಪ್ರಸ್ತುತ. ಇಲ್ಲಿ ನಿಜಕ್ಕೂ ನೋಡಬೇಕಾಗಿರುವುದು ಮಕ್ಕಳ ಕಲಿಕೆ ಹೇಗೆ ಸುಲಭವಾಗಿಸೋದು, ಇನ್ನಷ್ಟು ಪರಿಣಾಮಕಾರಿಯಾಗಿಸೋದು ಅನ್ನೋದು.

    ಸರ್ ಎಮ್.ವಿ, ಯು.ಆರ್.ರಾವ್ ಕಲಿತಾಗ ನಮ್ಮ ಕಲಿಕೆಯಲ್ಲಿ ಇಷ್ಟು ಪರ ನುಡಿಯ influence ಇರಲಿಲ್ಲ ಅನ್ನೋದನ್ನ ಸ್ವಲ್ಪ ರಿಸರ್ಚ್ ಮಾಡಿದರೆ ತಿಳಿಯುತ್ತೆ ( ಅದರ ಬಗ್ಗೆ ವಿವರವಾಗಿ ಇನ್ನೊಂದು ಪೋಸ್ಟ್ ಬರೆಯಬಹುದು). ಒಬ್ಬ ಸರ್.ಎಮ್.ವಿ ಒಬ್ಬ ಯು.ಆರ್.ರಾವ್ ತರಹದವರು ಕಳೆದ ೫೦ ವರ್ಷಗಳಲ್ಲಿ ಇನ್ನೊಬ್ಬರೇ ಒಬ್ಬರು ಬಂದಿಲ್ಲ ಅನ್ನುವ ಕಟು ಸತ್ಯ ನಮ್ಮ ಕಲಿಕೆಯಿಂದ ನಿಜಕ್ಕೂ ಮಕ್ಕಳ ಬುದ್ಧಿ ಆಗಬೇಕಾದ ಮಟ್ಟದಲ್ಲಿ ಚುರುಕಾಗುತ್ತಿಲ್ಲ ಅನ್ನೋದಕ್ಕೆ Testimony ಅಂತ ನಿಮಗನಿಸಲ್ವಾ?

    ಪ್ರತ್ಯುತ್ತರಅಳಿಸಿ
  9. @ಶಾಮ್,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು ಸರ್.
    ನಾಡಿನ ಅದ್ಯಾವುದೋ ಮೂಲೆಯಲ್ಲಿ ದೀಪದ ಬೆಳಕಲ್ಲಿ ಆ ಬೆಳಕಿಗೆ ಕಣ್ಣು ಕೀಲಿಸಿಕೊಂಡು ಓದುತ್ತಿರುವ ಪುಟಾಣಿ ಮಕ್ಕಳ ಕಲಿಕೆ ಸುಲಭ ಆಗಬೇಕು, ಆ ಕಲಿಕೆ ಅವರ ಬುದ್ಧಿ ಚುರುಕಾಗಿಸಬೇಕು, ಆ ಕಲಿಕೆಯಿಂದ ನಿಜಕ್ಕೂ ದುಡಿಮೆ ಹುಟ್ಟೋ ದಿನಗಳು ಬರಲಿ ಅನ್ನುವುದು ಲೇಖನದ ಆಶಯ.

    ಪ್ರತ್ಯುತ್ತರಅಳಿಸಿ
  10. "nammellara bhashege Sanskritaane moola, haagu, prapanchada shreSTa kriti-galella sanskritadalle ide"

    ನಾನು ಹೇಳಿದ ಸಂಸ್ಕೃತ ಹುಚ್ಚರು ಇಲ್ಲೇ ಇದಾರೆ ನೋಡಿ..

    ಕನ್ನಡದ ಮೂಲ ಸಂಸ್ಕೃತ ಅನ್ನೋದಕ್ಕೆ ಪುರಾವೆ ಏನು? ಇಂಥ ಸುಳ್ಳನ್ನ ಹೇಳ್ತಾ ತಿರುಗಾಡ್ತಾ ಇರುವ ಇವರಿಗೆ ಆ ದ್ಯಾವ್ರು ಇವರ ಕಣ್ ತೆರೆಯಲ್ಲಿ ಅಂತ ಕೇಳಿಕೊಳ್ಳುತ್ತೇನೆ.

    ಕನ್ನಡಕ್ಕಿಂತ ಸಂಸ್ಕೃತ ಮೇಲು ಅನ್ನೋ ಮನೋಭಾವ ಬೆಳೆಸೋ ಇಂಥ ದದ್ದರಿಗೆ ನಿಜಾಂಶ ಅರಿವಾಗಲಿ.

    ಪುರಾವೆ ಇಲ್ಲದ ಮಾತು, ವಾದಗಳನ್ನ ಕನ್ನಡಿಗರು ಸದೆ ಬಡಿಯಬೇಕು.

    ಪ್ರತ್ಯುತ್ತರಅಳಿಸಿ
  11. ವಸಂತ್,

    ನಿಮ್ಮ ಈ ಲೇಖನವನ್ನು ನಮ್ಮ ತಾಣದಲ್ಲಿ ಹಾಕಿದ್ದೇನೆ. ನೋಡಿ. ಥ್ಯಾಂಕ್ಯು.
    ಲೇಖನಕ್ಕೆ ಪ್ರತಿಕ್ರಿಯೆಯಾಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಲೇಖನ ರೂಪದಲ್ಲಿರುವ ಪ್ರತಿಕ್ರಿಯೆ ಇವತ್ತು, ಇನ್ನೇನು ಪ್ರಕಟವಾಗುತ್ತದೆ. ನೋಡಿ.
    ಶಾಮ್
    shami.sk@greynium.com

    http://thatskannada.oneindia.in

    ಪ್ರತ್ಯುತ್ತರಅಳಿಸಿ
  12. ದೇವ್ರೇ! ಏನ್ರೀ ಇದು ! ಇದನ್ನ ಅರ್ಥ ಮಾಡ್ಕೊಳ್ಳೋದು ಇನ್ಫೋಸಿಸ್ puzzle ಬಿಡಿಸಿದ ಹಾಗಾಯ್ತು. ಹಿಂಗಾದ್ರೆ ಕನ್ನಡ ಮಕ್ಕಳ ಗತಿ ಅಷ್ಟೇ :(

    ಪ್ರತ್ಯುತ್ತರಅಳಿಸಿ
  13. ಆಹಾ..ನಿಜಕ್ಕೂ ಒಳ್ಳೆಯ ವಿವರಣೆ..ಗಣಿತ ನಮ್ಮ ಭಾಷೆಯಲ್ಲಿ ಹೇಗಿರತ್ತೆ ಎಂದು ಬಹುಷಃ ಇಂದೇ ಸರಿಯಾಗಿ ನಾ ಓದುತಿರೋದು..ಗುಣಮಟ್ಟ ಬಹಳ ಚೆನ್ನಾಗಿದೆ..ಆ೦ಗ್ಲಕ್ಕಿ೦ತಲೂ ಸುಂದರವಾಗಿದೆ..ಆದರೆ ನನಗೇನೂ ಅರ್ಥವಾಗಲಿಲ್ಲ ಅನ್ನೋದು ಮಾತ್ರ ಬೇಸರ ಹುಟ್ಟಿಸುವ ಸಂಗತಿ..ನಾನು ಈ ವಿಚಾರದಲ್ಲಿ ರಾಘವೇಂದ್ರರ ಅಭಿಪ್ರಾಯ ಸರಿ ಎಂದು ಭಾವಿಸುತ್ತೇನೆ..ಕನ್ನಡಕ್ಕೆ ಸಂಸ್ಕೃತ ಆಧಾರವಾದರೆ ಏನು ತಪ್ಪು..ಮತ್ತೆ ಅದು ನಮಗೆ ಅರ್ಥವಾಗೋಲ್ಲ ಅಂದ್ರೆ ಅದು ನಮ್ಮ ಭಾಷಾ ಪ್ರೌಢಿಮೆಯನ್ನು ನಾವು ಪ್ರಶ್ನಿಸಿಕೊLLaಬೇಕಾದ ಸಂಗತಿಯಲ್ಲವೇ..ಹೆಚ್ಚು ಮಂದಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ತಿಳಿದಾಗ ಸಂತಸವಾಯ್ತು.. ಮೊದಲಿನಿಂದ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಖಂಡಿತವಾಗಿ ಭಾಷೆ ಕಷ್ಟ ಎಂದನ್ನಿಸೋಲ್ಲ..ಗಣಿತ ಕಷ್ಟವಾಗೋದು ಸಹಜವಾದ ವಿಷಯ..ನಮಗೆ ಇದೇ ವಿವರಣೆಯನ್ನು ಇಂಗ್ಲಿಷ್ನಲ್ಲಿ ಕೊಟ್ಟಿದಲ್ಲಿ ಸುಲಭವಾಗುತ್ತಿತ್ತೇನೋ..ಆದರೆ ಅದು ನಾವು ಇಂಗ್ಲಿಷ್ಗೆ ಎಷ್ಟು ಒಗ್ಗಿಹೊಗಿದ್ದೇವೆ annO ವಿಷಯವನ್ನು ತಿಲಿಸತ್ತೆ..ಅದು ನಮ್ಮಲ್ಲಿರುವ ಲೋಪ..

    ಪ್ರತ್ಯುತ್ತರಅಳಿಸಿ
  14. ಆಶಾ ಅವರೇ,
    ಬರಹದಲ್ಲಿ ಸಂಸ್ಕೃತ ಮೂಲದ ಪದಗಳ ಬಳಕೆಯಿಂದ ಆಗುತ್ತಿರುವ ಕಲಿಕೆಯಲ್ಲಿನ ತೊಂದರೆ, ಅದಕ್ಕೆ ಪರ್ಯಾಯವಾಗಿ ಆಡು ನುಡಿಗೆ ಹತ್ತಿರದ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಓದಿದ ನಂತರವೂ ನಿಮಗೆ ಕನ್ನಡಕ್ಕೆ ಸಂಸ್ಕೃತ ಆಧಾರವಾಗಲಿ ಅನ್ನಿಸಿದ್ದು ಕೊಂಚ ಅಚ್ಚರಿ ಆಯ್ತು.
    ನಾನು ಹತ್ತು ವರ್ಷ ಕಲಿತ ನನ್ನ ಕನ್ನಡ ಮಾಧ್ಯಮ ಶಾಲೆಯಲ್ಲಿ ಈ ಬರಹದಲ್ಲಿನ ಗಣಿತ/ವಿಜ್ಞಾನ ಪದಗಳ ಬಗ್ಗೆ ಒಂದು ಪರೀಕ್ಷೆ ಮಾಡಿದ್ದೆ. ಮಕ್ಕಳಿಗೆ ಸಂಸ್ಕೃತ ಮೂಲದ ಪದಗಳ ಎದುರು ಕನ್ನಡ ಮೂಲದ ಪದಗಳು ನಿಜಕ್ಕೂ ಸುಲಭ ಅನ್ನಿಸಿದವು. ನಾನು ಹತ್ತು ವರ್ಷ ಕನ್ನಡ ಮಾಧ್ಯಮದಲ್ಲಿ ಕಲಿತ ಮೇಲೂ ನನಗೆ ಪೀನ/ನಿಮ್ನ ದರ್ಪಣಗಳ ವ್ಯತ್ಯಾಸದ ಬಗ್ಗೆ ಈಗಲೂ ಕನಫ್ಯೂಶನ್ ಇದೆ.

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ! :)

    ಪ್ರತ್ಯುತ್ತರಅಳಿಸಿ
  15. ನೀವು ಸ್ವತ: ಅನುಭವಿಸಿದ್ದೀರೆ೦ದ ಮೇಲೆ ನಾ ಏನು ಹೇಳೋಕಾಗತ್ತೆ..ನನಗೆ ಯಾವುದೇ ಅನುಭವವಿಲ್ಲ..ನಾ ಕಲಿತದ್ದು ಆಂಗ್ಲ ಮಾಧ್ಯಮದಲ್ಲಿ..ಹಾಗಾಗಿ ನನಗೆ ಅರ್ಥವಾಗದೆ ಇರೋದು ಸಹಜ ಎಂದುಕೊಂಡೆ..ಸಂಸ್ಕೃತವನ್ನು ಐದು ವರ್ಷಗಳು ಕಲಿತೆ..ಈಗ ಏನೂ ನೆನಪಿಲ್ಲ ಅನ್ನೋದು ನಿಜ..ಆದರೆ ಭಾಷೆ ಬಹಳ ಶುಧ್ಧ..ನಮ್ಮ ಭಾರತದ ಎಷ್ಟೋ ಭಾಷೆಗಳಿಗೆ ಮೂಲ.."chlorophyl" ಅನ್ನೋ ಪದನ ಆಂಗ್ಲ ಮಾಧ್ಯಮದಲ್ಲಿ ಏಕೆ ಹೇಳಿಕೊಡುತ್ತಾರೆ..ನೀವು ಹೇಳಿದ ಹಾಗೆ ಇಂಗ್ಲಿಷ್ ನಲ್ಲಿ "leafy green" ಅಂದಿದ್ರೆ ಸುಲಭವಾಗ್ತಿರ್ಲಿಲ್ವ..ಆಂಗ್ಲದಲ್ಲಿ ಹಾಗೆ ಹೇಳೋದಿಲ್ವಲ್ಲ..ಹೇಳಿದ್ರೆ ಮಕ್ಕಳಿಗೆ ಸುಲಭವಾಗ್ತಿತ್ತು ನಿಜ..ಆದರೆ ಯಾವಾಗಲಾದರೊಮ್ಮೆ ತಲೆ ತಲಾ೦ತರದಿ೦ದ ಸಾವಿರಾರು ಪುಸ್ತಕಗಳಲ್ಲಿ ಬಳಸಿರುವ ಈ ಪದವನ್ನು ಕಲಿಯಲೇ ಬೇಕಾಗತ್ತಲ್ವೆ..ಚಿಕ್ಕ ವಯಸ್ಸಿನಲ್ಲಿ ಹೊಸ ಪದಗಳನ್ನು ಕಲಿಯೋದು ಸುಲಭ ಅಲ್ವ? ಇದು ಕೇವಲ ನನ್ನ ಅಭಿಪ್ರಾಯ..ನಿಜ..ನೀವು ಬರೆದಿರೋದನ್ನು ನೋಡಿದ ಕೂಡಲೇ ಮೇಲ್ನೋಟಕ್ಕನ್ನಿಸೋದು ಮಕ್ಕಳಿಗೆ ಹಿಂಸೆ ಅಂತಲೇ..ಆದರೆ ಸ್ವಲ್ಪ ಯೋಚಿಸಿದ ಮೇಲೆ ನನಗೆ ಈ ರೀತಿಯ ಕಲಿಕೆ ಅವಶ್ಯ ಅನ್ನಿಸಿತು..ನಿಮಗೆ ಬೇಸರವಾದ್ದಲ್ಲಿ ಕ್ಷಮೆ ಇರಲಿ..
    P S : ಪೀನ/ನಿಮ್ನ ದರ್ಪಣಗೇನೆ೦ದೇ ನನಗೆ ಗೊತ್ತಿಲ್ಲ ಆನೋದು :( :(

    ಪ್ರತ್ಯುತ್ತರಅಳಿಸಿ
  16. ಆಶಾ ಅವರೇ,
    >>ತಲಾ೦ತರದಿ೦ದ ಸಾವಿರಾರು ಪುಸ್ತಕಗಳಲ್ಲಿ ಬಳಸಿರುವ ಈ ಪದವನ್ನು ಕಲಿಯಲೇ ಬೇಕಾಗತ್ತಲ್ವೆ..ಚಿಕ್ಕ ವಯಸ್ಸಿನಲ್ಲಿ ಹೊಸ ಪದಗಳನ್ನು ಕಲಿಯೋದು ಸುಲಭ ಅಲ್ವ?

    ಮೊದಲಿಗೆ,, ಸಂಸ್ಕೃತ ಮೂಲದ ಈ ಪದಗಳು ತಲೆ ತಲಾಂತರದಿಂದ ಬಳಸಿರುವ ಪದಗಳಲ್ಲ. ಸಂಸ್ಕೃತದಲ್ಲಿ ಈಗಾಗಲೇ ಇದ್ದ ಪದಗಳು ನಮ್ಮ ಏಳನೇ ಕ್ಲಾಸಿನ ಗಣಿತ-ವಿಜ್ಞಾನ ಪಠ್ಯದ ಅಗತ್ಯಗಳಿಗೂ ಸಾಲಲ್ಲ. ಆದರೆ ಕನ್ನಡ ಮಾಧ್ಯಮದ ಪಠ್ಯದಲ್ಲಿ ಹೊಸ ಪದಗಳನ್ನು ಹುಟ್ಟಿಸಬೇಕಾದ ಸಂಧರ್ಭ ಬಂದಾಗಲೆಲ್ಲ, ಸಂಸ್ಕೃತದಲ್ಲಿಯೂ ಇರದ ಪದಗಳನ್ನು ಸಂಸ್ಕೃತದ ಪದಗಳನ್ನು ಸೇರಿಸಿ ಹುಟ್ಟಿಸಿದ್ದಾರೆ. ನನ್ನ ಪ್ರಶ್ನೆ ಇಷ್ಟೇ,, ಹೊಸ ಪದಗಳನ್ನು ಹುಟ್ಟಿಸೋ ಈ ಸಂಧರ್ಭದಲ್ಲಿ ಆಡುನುಡಿಗೆ ಹತ್ತಿರದ ಪದಗಳನ್ನು ಬಳಸುವುದು, ಇಲ್ಲವೇ ಆಡುನುಡಿಯಲ್ಲಿ ಹೊಸ ಪದಗಳನ್ನು ಹುಟ್ಟಿಸುವುದನ್ನು ಬಿಟ್ಟು, ಈ ರೀತಿ ಸಾಮಾನ್ಯ ಜನರಿಗೆ ಅರ್ಥವಾಗದ ಪದಗಳನ್ನು ಪಠ್ಯದ ತುಂಬಾ ತುಂಬಿರುವುದು ನಿಜಕ್ಕೂ ಕಲಿಕೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ.

    ಇನ್ನೂ chlorophyl ಬಗ್ಗೆ. ಇವತ್ತು ಇಂಗ್ಲಿಷ್ ಅಲ್ಲಿ ಇರುವ ಸಾಕಷ್ಟು ಗಣಿತ-ವಿಜ್ಞಾನದ ಸಾಹಿತ್ಯದಲ್ಲಿ ಹೆಚ್ಚಿನ ಪದಗಳು ಆಮದಾಗಿದ್ದು ಲ್ಯಾಟಿನ್ ಭಾಷೆಯಿಂದ. ಕಳೆದ ಎರಡು ಶತಮಾನಗಳಿಂದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಕಲಿಕೆ-ಸಂಶೋಧನೆ ನಡೆಯಲು ಶುರುವಾದದ್ದು, ಮತ್ತು ಈ ಹಂತದಲ್ಲೇ ಇಂಗ್ಲಿಷ್ ನಲ್ಲಿ ಹೆಚ್ಚಿನ ಕಲಿಕೆ ಶುರುವಾದದ್ದು. ಆಗ ಇಂಗ್ಲಿಷ್ ಭಾಷೆ ಲ್ಯಾಟಿನ್ ಮೂಲದ ಎಷ್ಟೋ ಪದಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡು ಬಂದಿದೆ. ಆದ್ರೆ modern day science ತಗೊಳ್ಳಿ, ಅದು economics, computers, software ಹೀಗೆ ಯಾವುದೇ ವಿಷಯ ತಗೊಳ್ಳಿ, ಅಲ್ಲಿ ಇವತ್ತು ಇಂಗ್ಲಿಷ್ ಮೂಲದ ಪದಗಳೇ ತುಂಬಿವೆ. ಪ್ರತಿ ಭಾಷೆಗೂ ತನ್ನಲ್ಲಿ ಹೊಸ ಪದಗಳನ್ನು ಹುಟ್ಟಿಸುವ ಶಕ್ತಿ ಇದ್ದೇ ಇರುತ್ತೆ.

    modern day science ವಿಷಯದಲ್ಲೂ ಇಂಗ್ಲಿಷ್ ಲ್ಯಾಟಿನ್ ಮೂಲದ ಪದಗಳ ಮೊರೆ ಹೋಗಿದ್ಯಾ? ಖಂಡಿತ ಇಲ್ಲ.


    ಕನ್ನಡದಲ್ಲೂ ಅಷ್ಟೇ..
    ಯಾವ ಪದಗಳು ಕನ್ನಡದಲ್ಲಿ ಇರಲಿಲ್ಲ, ಸಂಸ್ಕೃತದಲ್ಲಿ ಇತ್ತೋ, ಅದನ್ನ ಹಾಗೆಯೇ ತಂದು ಬಳಸೋಣ. ಉದಾ: ವಸ್ತು ಅನ್ನೋ ಪದ ಸಂಸ್ಕೃತ ಮೂಲದ್ದು, ಕನ್ನಡದಲ್ಲಿ ಅದು ಇಲ್ಲ. ಹೀಗಾಗಿ ಅದನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳೊಣ.

    ಆದರೆ, ಯಾವ ಪದಗಳು ಕನ್ನಡದಲ್ಲೂ, ಸಂಸ್ಕೃತದಲ್ಲೂ ಇಲ್ಲವೋ, ಅಲ್ಲಿ ಕನ್ನಡ ಮೂಲದ ಪದಗಳನ್ನು ಸೃಷ್ಟಿಸುವುದು ನಾಡಿಗರಿಗೆ ಅನುಕೂಲಕರವಲ್ಲವೇ?
    ಉದಾ: ಕ್ಲೋರೊಫಿಲ್,, ಇದಕ್ಕೆ ಪತ್ರ ಹರಿತ್ತು ಅನ್ನುವ ಪದ ಸಂಸ್ಕೃತದಲ್ಲೂ ಇರಲಿಲ್ಲ. ಆದ್ರೆ ಪತ್ರ ಮತ್ತು ಹರಿತ್ತು ಅನ್ನುವ ಪದ ಜೋಡಿಸಿ, ಹೊಸ ಪದ ಸೃಷ್ಟಿಸಿದ್ದಾರೆ. ಯೋಚಿಸಿ ನೋಡಿ, ಇವೆರಡು ಪದಗಳು ಸಾಮಾನ್ಯ ಕನ್ನಡಿಗನಿಗೆ ಇಂಗ್ಲಿಷ್ ನಷ್ಟೇ ಅಪರಿಚಿತ. ಅದರ ಬದಲು "ಎಲೆ ಹಸಿರು" ಸೂಕ್ತವಾದ ಆಯ್ಕೆ ಆಗುತ್ತಿರಲಿಲ್ಲವೇ?

    Bottom line ಇಷ್ಟೇ:
    ಯಾವುದು ಕನ್ನಡದಲ್ಲಿ ಈಗಾಗಲೇ ಇಲ್ಲ, ಸಂಸ್ಕೃತದಲ್ಲಿ ಇದ್ದು, ಅದನ್ನು ಕಲಿಕೆಯಲ್ಲಿ ಬಳಸುವುದು ಮಕ್ಕಳಿಗೆ ಸುಲಭವೂ ಆಗುತ್ತೆ ಅನ್ನುವುದಾದರೆ, ಕಣ್ಣು ಮುಚ್ಚಿ ಅದನ್ನೇ ಬಳಸಬೇಕು.
    ಯಾವುದು ಕನ್ನಡದಲ್ಲಿ ಇಲ್ಲ, ಸಂಸ್ಕೃತದಲ್ಲೂ ಇಲ್ಲವೋ, ಅಂತಹ ಪದಗಳಿಗೆ ಹೊಸ ಪದ ಹುಟ್ಟಿಸುವಾಗ, ಆಡುನುಡಿಗೆ ಹತ್ತಿರ ಪದಗಳನ್ನು ಹುಟ್ಟಿಸುವುದು ಮಕ್ಕಳ ಕಲಿಕೆಯನ್ನು ಸುಲಭವಾಗಿಸುವ ಹಾದಿಯಾಗಿದೆ.

    ಇನ್ನೂ ಒಂದು ಹಾದಿ ಇದೆ. ಬಸ್ ಅನ್ನಾ ಬಸ್ಸು ಅನ್ನೋ ತರಹ ಕ್ಲೊರೊಫಿಲ್ ಅನ್ನೋದನ್ನ ಕ್ಲೊರೊಫಿಲ್ಲು ಅಂತ ಕನ್ನಡದಲ್ಲಿ ಬಳಸೋದ್ರಿಂದ ಅನುಕೂಲ ಅನ್ನಿಸಿದರೆ, ಹಾಗೂ ಮಾಡಬಹುದು.

    ಪ್ರತ್ಯುತ್ತರಅಳಿಸಿ
  17. jayapraksh: devara aane nanage kannadadalli baredirodu khandita artha aagalilla ekandre naanu english medium shaaleyalli odiddu.....mattu innu khedhakara vichaara andre english nalli raghavendra avaru baredirodu khandita artha aagalill! engineer endu karedukolloke besaravaagtide!

    ಪ್ರತ್ಯುತ್ತರಅಳಿಸಿ
  18. ವಸಂತ್,
    ಇದನ್ನ ಫೇಸ್ಬುಕ್ ನಲ್ಲಿ translations ಚರ್ಚೆಯಲ್ಲಿ ಹಾಕಿದ್ದೇನೆ....
    ಆದಷ್ಟು ಕನ್ನಡದ್ದೇ ಪದಗಳನ್ನ ಬಳಸಲು ಹೇಳೋದಕ್ಕೆ....

    ಪ್ರತ್ಯುತ್ತರಅಳಿಸಿ
  19. ವಸಂತ ಅವರೇ..

    ತುಂಬಾ ಒಳ್ಳೇ ಬರಹ..

    ಹಾಗೆ ಹೊಸ ರೀತಿಯ ಪತ್ಯ ಕ್ರಮ ರೂಪಿಸುತಿದಾರೆ ಅಂತ ಸುದ್ದಿ ಕೆಲ ದಿನಗಳ ಹಿಂದ ಪೇಪರ್ ನಲ್ಲಿ ಓದಿದ ನೆನಪು. ಇದರ ಬಗ್ಗೆ ಪತ್ರಿಕೆ ಗಲ್ಲಿ ಗಮನ ಚಲ್ಲಿದರೆ ಅನುಕೂಲ ಆಗಬಹುದು

    ಪ್ರತ್ಯುತ್ತರಅಳಿಸಿ
  20. ನನಗೆ ಆಶಾ ಅರುಣರ ಸಲಹೆ ತುಂಬ ಇಷ್ಟ ಆಯಿತು. ಯಾವುದೇ ಭಾಷೆಯ ಮೂಲ ಹಾಗೂ ಮೌಲ್ಯತೇನ ಉಳಿಸಿಕೊಂಡು ಹೋದ್ರೆ ಮಾತ್ರಾ ಅದನ್ನು ಬೆಳೆಸೋದು ಸಾಧ್ಯ. ಸರಳತೆ ಜಾಸ್ತಿ ಆದಸ್ಟೂ ಅವನತಿ ಜಾಸ್ತಿ. ಮೂರು ದಶಕಗಳನ್ನು ಕಂಡ, ಹತ್ತು ವರ್ಷ ಕನ್ನಡ ಮಾಧ್ಯಮದಲ್ಲಿ ಓದಿದ ನನಗೇ ಅರ್ಥ ಆಗ್ಲಿಲ್ಲ ಅಂದಮೇಲೆ ಈಗಿನ ಪೀಳಿಗೆಗೆ ಹೇಗೆ ಅರ್ಥ ಆಗೋಕೆ ಸಾಧ್ಯ? ಭಾಷಾ ಗುಣಮಟ್ಟ, ಅದೂ ಇಂದಿನ ಕಾಲದ ಕನ್ನಡ ಪಠ್ಯ ಪುಸ್ತಕಗಳಲ್ಲಿ ನೋಡಿ ತುಂಬಾ ಸಂತೋಷವಾಯಿತು. ಕನ್ನಡ ಮಾಧ್ಯಮ ಆರಿಸಿಕೊಂಡ ಬಳಿಕ ಭಾಷೆಯ ಬಗ್ಗೆ ಗಹನ ಅಧ್ಯಯನ ಉತ್ತಮ ಅಂತ ನನ್ನ ಅಭಿಪ್ರಾಯ. ಇದನ್ನ ನಮ್ಮೊಡನೆ ಹಂಚಿಕೊಂಡ ವಸಂತರಿಗೆ ತುಂಬಾ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  21. e rithi kannada vanu heli kotare adu makkalige kabinadha kadale aguthadhe,

    e vishaya vagi krama tagobeku,


    adhare namma sarkara idhanela madutha anodhe yaksha prashne?

    ಪ್ರತ್ಯುತ್ತರಅಳಿಸಿ
  22. ಬಹಳ ಒಳ್ಳೆ ಲೇಖನ ವಸಂತ್.ಶೇಕಡಾ ೮೩ ರಷ್ಟು ಕನ್ನಡ ನಾಡಿನ ವಿಧ್ಯಾರ್ಥಿಗಳ ಸಮಸ್ಯೆಯನ್ನು ಸರಿಯಾಗಿ ಅರಿತಿದ್ದೀರಿ. ಆದರೆ ಪಠ್ಯ ಪುಸ್ತಕಗಳಲ್ಲಿನ ಭಾಷೆಯನ್ನು ಸಡಿಲಗೊಳಿಸಿದರೆ ಮಕ್ಕಳಿಗೆ ಕಲಿಕೆ ಸುಲಭವಾಗುತ್ತದೆ ಅನ್ನೋದೇನೋ ನಿಜ ಆದರೆ ಶೋಭ ಪ್ರಶಾಂತ್ ಹಾಗು ಆಶಾ ಅರುಣ ಅವರು ಹೇಳಿದ ಹಾಗೆ ಭಾಷೆಯ ಬೆಳವಣಿಗೆ ಕುಂಟಿತ ಆಗೋದಿಲ್ಲವೆ?? ಮುಂದಿನ ಪೀಳಿಗೆಯ ಕನ್ನಡ ಪದಸಂಪತ್ತು(Vocabulary) ಕ್ಷೀಣಿಸುವುದಲ್ಲವೆ?? ಈಗಾಗಲೆ ಕನ್ನಡ ಪುಸ್ತಕ ಓದುಗರ ಸಂಖ್ಯೆ ಕಡೀಮೆಯಾಗುತ್ತಿದೆ. ಪಠ್ಯ ಪುಸ್ತಕಗಳಿಂದಲೂ ಇಂತಹ ಶಬ್ದಗಳು ಮಾಯವಾದರೆ ಕನ್ನಡ ಬಡವಾಗುವುದಿಲ್ಲವೆ??
    ಬಾಲಮಂಗಳ, ಚಂದಮಾಮದಂತಹ ನಿಯತಕಾಲಿಕೆಗಳು ಮಾಯವಾಗಿವೆ. ನಗರೇತರ ಪ್ರದೇಶಗಳಲ್ಲಿ ವಿಧ್ಯಾರ್ಥಿಗಳಿಗೂ ಕನ್ನಡಕ್ಕೂ ಇರುವ ಒಂದೇ ಕೊಂಡಿ ಅಂದರೆ ಪಠ್ಯಪುಸ್ತಕಗಳು. ಇವುಗಳಿಂದಲೂ ಅರ್ಥ ಗರ್ಭಿತವಾದಂತಹ ಕನ್ನಡದ ಹಿರಿಯ ಪದಗಳು ಮಾಯವಾದರೆ ಮುಂದೆ ಬರುವ ಕನ್ನಡ ನಿಗಂಟಿನ ಪುಟಗಳ ಸಂಖ್ಯೆ ಕಡಿಮೆಯಾಗುತ್ತದೆಯಲ್ಲವೇ??

    ಇಂಗ್ಲೀಷಿನ photosynthesis ಅನ್ನು ನಾವು ಧ್ಯುತಿ ಸಂಷ್ಲೇಶಣೆ, chromosome ಗಳನ್ನು ವರ್ಣತಂತುಗಳೆಂದು Neutralization ಅನ್ನು ತಟಸ್ಥೀಕರಣ ಎಂದು ಕರೆಯುತ್ತೀವಿ. ಇಲ್ಲಿ ವಿಜ್ನಾನದ ಜೊತೆ ಕನ್ನಡದ ಕಲಿಕೆ ಕೂಡ ಆಗುತ್ತಿಲ್ಲವೆ?? ಸಸ್ಯಗಳ ಆಹಾರ ತಯಾರಿಕೆ ಇನ್ನೂ ಸರಳವಾಗಿ ಹೇಳೊದಾದರೆ ಗಿಡಗು ಅಡುಗೆ ಮಾಡುವುದು ಎಂದು ಮಕ್ಕಳಿಗೆ ಹೇಳಿದರೆ ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಆಗ ಭಾಷೆಯ ಕೊಲೆಯಾಗುವುದಿಲ್ಲವೇ?? ಧ್ಯುತಿ ಎಂದರೆ ಬೆಳಕು ಧ್ಯುತಿ ಸಂಷ್ಲೇಶಣೆ ಎಂದರೆ ಸೂರ್ಯನ ಬೆಳಕಿನಲ್ಲಿ ಸಸ್ಯಗಳು ಪತ್ರಹರಿತ್ತಿನ ಸಹಾಯದಿಂದ ಆಹಾರ ತಯಾರಿಸುವ ಕ್ರಿಯೆ, ವರ್ಣ ಅಂದರೆ ಬಣ್ಣ ವರ್ಣತಂತುಗಳೆಂದರೆ ಜೀವಕೋಶದಲ್ಲಿರುವ ಬಣ್ಣದ ಆಕೃತಿಗಳು, ಇವುಗಳೇ ಅನುವಂಶೀಯತೆಯ ವಾಹನಗಳು, ತಟಸ್ಥ ಅಂದರೆ ನಿರ್ದಿಷ್ಟ ಗುಂಪಿಗೆ ಸೇರದ ಸ್ಥಿತಿ ತಟಸ್ಥೀಕರಣವೆಂದರೆ ಆಮ್ಲಳಿಗೆ ಪ್ರತ್ಯಾಮ್ಲಗಳನ್ನು ಅಥವಾ ಪ್ರತ್ಯಾಮ್ಲಗಳಿಗೆ ಆಮ್ಲಾಗಳನ್ನು ನಿಧಾನವಾಗಿ ಮಿಶ್ರಮಾಡಿ ತಟಸ್ಥ ಸ್ಥಿತಿಗೆ ತರುವುದು ಎಂದು ಸರಳವಾಗಿ ಅರ್ಥೈಸಿ ಹೇಳಿಕೊಡುವ ಗುರುಗಳಿದ್ದರೆ ಮಕ್ಕಳಿಗೆ ವಿಜ್ನಾನದ ಅರಿವಿನ ಜೊತೆಗ ಕನ್ನಡದ ಕಲಿಕೆ ಕೂಡ ಆಗುತ್ತದೆ ಅನ್ನುವುದು ನನ್ನ ಅನಿಸಿಕೆ.

    ಈ ಸಮಸ್ಯೆಗೆ ಪರಿಹಾರ ಸುಲಭ ಪಠ್ಯಕ್ರಮವಲ್ಲ ಸುವ್ಯಸ್ಥಿತ ಶಿಕ್ಷಣ ಕ್ರಮ ಅನ್ನುವುದು ನನ್ನ ಅನಿಸಿಕೆ. ಪ್ರತಿಭಾನ್ವಿತರು ಶಿಕ್ಷಕರಾಗಲು ಮುನ್ನಡೆಯಬೇಕು. ಸಮಾಜದಲ್ಲಿ ಶಿಕ್ಷಕ ವ್ರುತ್ತಿ ಬಗೆಗಿನ ಕೀಳರಿಮೆ ನಶಿಸಬೇಕು. ಪಕ್ಕದ ಮನೆಯವರು ಕೇಳುವ ಪ್ರಶ್ನೆಗಳಿಗೆ ಹೆದರಿ passion ತೊರೆದು ಮಾರುಕಟ್ಟೆಯಲ್ಲಿ Demand ಇರುವ So called high profile jobಗಳ ಬೆನ್ನು ಹತ್ತುವುದನ್ನ ಯುವಜನಾಂಗ ನಲ್ಲಿಸಬೇಕು. ಸರ್ಕಾರ ಕೂಡ ಶಿಕ್ಷಕರಿಗೆ ಒಳ್ಳೆಯ ಸಂಬಳ ನೀಡಬೇಕು ಆಗ ಮಾತ್ರ ಅಕ್ಷರ ಕ್ರಾಂತಿಯೊಂದಿಗೆ ಕನ್ನಡಾಭಿವ್ರುದ್ಧಿ ಏಕಕಾಲದಲ್ಲಿ ಸಾಧ್ಯ.

    ವಸಂತ ಅವರೆ ದಯವಿಟ್ಟು ಈ ಪ್ರತಿಕ್ರಿಯೆಯನ್ನು ಟೀಕೆ ಎಂದು ಪರಿಗಣಿಸಬೇಡಿ. ನೀವು ನಮ್ಮೆಲ್ಲರ ಮುಂದಿಟ್ಟ ಸಮಸ್ಯೆಗಿದೊಂದು ಪರ್ಯಾಯ ಪರಿಹಾರವೆಂದೆ ಭಾವಿಸಿ. ನನ್ನ ಪ್ರತಿಕ್ರಿಯೆಯಲ್ಲಿನ ಸರಿತಪ್ಪುಗಳ ಕುರಿತು ಮರೆಯದೆ ಪ್ರತಿಕ್ರಿಯಿಸಿ. ನಿಮ್ಮೊಡನೆ ವಿಚಾರ ವಿನಿಮಯ ಮಾಡಿಕೊಳ್ಳುವುದರಲ್ಲಿ ಏನೋ ಖುಷಿ ಇದೆ. ಕನ್ನಡಾಭಿವೃದ್ದಿ ನಮ್ಮೆಲ್ಲರ ಉದ್ದೇಶ.

    ಪ್ರೀತಿಯಿಂದ,
    ದುಶ್ಯಂತ್

    ಪ್ರತ್ಯುತ್ತರಅಳಿಸಿ
  23. ಪ್ರಶಾಂತ ಸೊರಟೂರಮೇ 8, 2011 ರಂದು 12:24 PM ಸಮಯಕ್ಕೆ

    ವಸಂತ,
    ನೀವು ಹೇಳಿದ್ದು ನಿಜ, ಆದರೆ ಸಂಸ್ಕೃತ ಪದಗಳು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚು ಕಠಿಣ ಇಂಗ್ಲೀಷ್.
    ಕನ್ನಡ ಮಾಧ್ಯಮದಲ್ಲಿ ಓದಿದಂತ ನನ್ನಂಥವರಿಗೆ ನಿಮ್ನ-ಪೀನ ಮಸೂರ ಎಷ್ಟು ಭಾರಗಳಾಗಿವೆಯೋ ಅದೇ ರೀತಿ concave - convex ಪದಗಳೂ ಇಂಗ್ಲೀಷ್ ಮಾಧ್ಯದವರಿಗೆ ಕಬ್ಬಿಣದ ಕಡಲೆಗಳೆ.
    ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದು ಒಂದು ಪ್ರತಿಷ್ಟೆ(?) ಅನ್ನೋದು ಬಿಟ್ಟರೇ ಅದರಿಂದ ಹೆಚ್ಚಿಗೆ ಪ್ರಯೋಜನವೇನು ಇಲ್ಲ. ಈ ಒಣ ಪ್ರತಿಷ್ಟೆಯಿಂದಾಗಿ ಇಂಗ್ಲೀಷನಲ್ಲಿ ಓದಿದವರು-ಓದುತ್ತಿರುವವರು ತಮ್ಮ ಕಲಿಕೆಯಲ್ಲಿ ಇಂಗ್ಲೀಷನಿಂದ ಆದ ಕಷ್ಟವನ್ನು ಹೇಳೋದಿಲ್ಲಾ.

    ಇಂಗ್ಲೀಷನಲ್ಲಿ ಓದಿದವರು ಕರ್ನಾಟಕ್ಕೆ-ಭಾರತಕ್ಕೆ ಅವಿಷ್ಕಾರ-ಸಂಶೋಧನೆಗಳ ಸುರಿಮಳೆ ಏನೂ ಮಾಡಿಲ್ಲ.
    ಈಗ ಆಗಬೇಕಾಗಿರುವುದು ಕಲಿಕೆಯನ್ನು ಹೆಚ್ಚು ಕನ್ನಡೀಕರಿಸುವುದು (ನೀವು ಬರೆದ ಹಾಗೆ) ಮತ್ತು ಅದರ ಜೊತೆಗೆ ಇಂಗ್ಲೀಷನ ಕಾರಣವಿಲ್ಲದ ಸೆಳಿತ-ವ್ಯಾಮೋಹವನ್ನು ಕಡಿಮೆ ಮಾಡೋದು.
    (ಕನ್ನಡ ಮಾಧ್ಯಮದಲ್ಲಿ ಓದುವರ ಸಂಖ್ಯೆ ೮೩% ದಿಂದ ಕಡಿಮೆ ಅಂದರೂ ೯೫% ದ ವರೆಗೆ ಏರಬೇಕು)
    ಇಂಗ್ಲೀಷನಿಂದಲೇ "ಅನ್ನ" ಹುಟ್ಟುತ್ತೇ ಅಂತಾ ನನಗೆ ಅನ್ನಿಸೋದಿಲ್ಲಾ. ಇಂದು ಕರ್ನಾಟಕದಲ್ಲಿ ಇಂಗ್ಲೀಷನ ಪರಿಚಯವಿಲ್ಲದೇ ಎಷ್ಟೋ ಕ್ಷೇತ್ರಗಳಲ್ಲಿ ಜನರು "ಅನ್ನ" ಕಂಡುಕೊಳ್ಳತ್ತಾ ಇಲ್ಲವೇ ?
    ("ಮೃಷ್ಟಾನ್ನ" ವಿಷಯದಲ್ಲಿ ತುಸು ಕಡಿಮೆ ಇರಬಹುದು!)

    ಇತ್ತೀಚೆಗೇ ನನ್ನ ಕಾರಖಾನೆ ಕೆಲಸದಲ್ಲಿ ಜಪಾನಿ ಗ್ರಾಹಕರ ಜೊತೆ ಮಾತಾಡುವ ಅವಕಾಶ ಸಿಕ್ಕಿತು, ಅವರು ಕೇಳುವುದು ಇಷ್ಟೆ ನೀವು ಯಾವುದೇ ದೇಶದವರೇ ಆಗಿರಿ,ಅವರಿಗೆ ಎಲ್ಲ ಕಡತಗಳು/ಯೋಜನೆ ಮಾಹಿತಿಗಳು ತಪ್ಪದೇ ಜಪಾನೀಸ್ ಭಾಷೆಯಲ್ಲಿರಬೇಕು, ಬೇಕಾದರೇ (ಬೇಕಾದವರು!) ಇಂಗ್ಲೀಷನಲ್ಲಿ ಅದರ ಅನುವಾದ ಇಟ್ಟುಕೊಳ್ಳಬಹುದು. ಈ ರೀತಿಯ, ತಮ್ಮ ಸಂಸ್ಕೃತಿಯ-ನುಡಿಯ ಆಭಿಮಾನವನ್ನು ನಾನು ಜರ್ಮನ್ಸ್ ಜನರಲ್ಲೂ ನೋಡಿದ್ದೇನೆ. (ಪ್ರೆಂಚರು ಇದೇ ರೀತಿ ಅಂತಾ ಕೇಳಿದ್ದೀನಿ). ನಾವು ಕನ್ನಡಿಗರು ಇವರಿಂದ ಇಂತಹ ವಿಷಯಗಳನ್ನು ಕಲಿಯಬೇಕಾಗಿದೆ.

    ಇನ್ನೂ ಕನ್ನಡದಲ್ಲಿ ಕಲಿಕೆ ವಿಷಯ ಬಂದಾಗ ಬಹಳಷ್ಟು ಜನರು ಹೇಳುವುದು, ಕನ್ನಡದಲ್ಲಿ ಇಂಗ್ಲೀಷನಲ್ಲಿ ಇರುವಷ್ಟು ಪದಗಳು ಇಲ್ಲ ಅಂತಾ.(ಹೆಚ್ಚಾಗಿ ತಂತ್ರಜ್ಞಾನದ ವಿಷಯದಲ್ಲಿ), ಇದು ನಿಜವೇ ಆಗಿದ್ದರೇ ಆ ಪದ ಸಂಪತ್ತು, ಅರಿಮೆಯು ಕನ್ನಡದಲ್ಲಿ ಹುಟ್ಟು ಹಾಕುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ-ಹೊಣೆ. ಅದನ್ನು ಬಿಟ್ಟು ಇಂಗ್ಲೀಷನ ಹಿಂದೆ ಓಡಿದರೆ ಅಂಥವರಿಗೆ "ತನ್ನ" ಸಾಮರ್ಥ್ಯದ ಮೇಲೆಯೆ ನಂಬಿಕೆಯಿಲ್ಲ ಅಂತಾ ಅನ್ನಬೇಕು (ಕನ್ನಡಿಗನಿಗೆ "ಕನ್ನಡ" ಅಂದರೆ "ತಾನೇ" ಅಂತಾ ಮರೆಯಬಾರದು, "ಕನ್ನಡ"ದಲ್ಲಿ ಇಲ್ಲಾ ಅಂದರೆ ಅದು "ತನ್ನಲ್ಲೇ" ಇಲ್ಲ ಅಂತಾ ಅರ್ಥ)

    ನಿಮ್ಮ ಬರವಣಿಗೆಯಲ್ಲಿ Numerator/Denominator ಅನ್ನು ಭಾಜ್ಯ-ಭಾಜಕ ಅಂತಾ ಬರೆದಿದ್ದೀರಿ, ಅದು ಅಂಶ-ಛೇದ ಆಗಬೇಕಾಗಿತ್ತು ಅಂತಾ ಅನಿಸುತ್ತೆ, ಆದರೆ ಇವೆರೆಡಕ್ಕಿಂತ "ಮೇಲ್ಮನೆ-ಕೆಳಮನೆ" ಕನ್ನಡ ಮಕ್ಕಳಿಗೆ ಹೆಚ್ಚು ಹತ್ತಿರ ಅನ್ನುವ ತಮ್ಮ ಅನಿಸಿಕೆ ನಾನು ತುಂಬು ಮನದಿಂದ ಒಪ್ಪುತ್ತೇನೆ.

    ಹೀಗೆ ಬರೀತಾ ಇರಿ, ಕನ್ನಡದ ಏಳಿಗೆಗಾಗಿ.

    ವಂದನೆಗಳು,
    ಪ್ರಶಾಂತ ಸೊರಟೂರ

    ಪ್ರತ್ಯುತ್ತರಅಳಿಸಿ
  24. ಇದು ಕನ್ನಡ ಒಂದೇ ಅಲ್ಲ. ಬೇರೆಲ್ಲಾ ಭಾಷೆಯ ಪುಸ್ತಕಗಳಲ್ಲಿಯೂ ಇದೇ ಪ್ರಾಬ್ಲಮ್. ಸಂಸ್ಕೃತ ಆಗಿನ ಕಾಲದ ಟೆಕ್ನಿಕಲ್ ಭಾಷೆಯಾಗಿದ್ದರಿಂದ. ಈಗ ಗ್ರ್ಯಾಜುಯಲ್ ಆಗಿ ಬದಲಾಯಿಸಬೇಕು. ಒಂದು ಕಡೆ ಇಂಗ್ಲಿಷ್ ಪದಗಳನ್ನೂ ಸಹ ಸೇರಿಸಬೇಕು...... ಇದರಲ್ಲಿ ಇನ್ನೊಂದು ಪ್ರಾಬ್ಲಮ್ ಇದೆ. ಉಬ್ಬು ಗಾಜು, ತಗ್ಗು ಗಾಜು, ಗೆರೆ, ಎಲೆ ಹರಿತ್ತು ಈ ಪದಗಳೆಲ್ಲಾ ಓಕೆ ಆದರೆ ಮೇಲ್ಮನೆ ಕೆಳಮನೆ ನನಗ್ಯಾಕೋ ಆಗ್ತಿಲ್ಲ :) ಕಾರಣ ಏನಂದ್ರೆ ಮಕ್ಕಳಿಗೆ ಸುಲಭವಾಗಿ ಅರ್ಥ ಏನೋ ಆಗತ್ತೆ ನೀವು ಹೇಳೋ ಹಾಗೆ ಆದರೆ ಅದು ಯಾವ ಕೆಟ್ನಿಕಲ್ ಮೀನಿಂಗ್ ಕೊಡಲ್ಲ. ಪ್ರಾಥಮಿಕ ಶಿಕ್ಷಣಕ್ಕೆನೋ ಪರವಾಗಿಲ್ಲ ಆದರೆ ಉನ್ನತ ಶಿಕ್ಷಣ ಕನ್ನಡದಲ್ಲಿ ಆದರೆ ಅದು ಸರಿಹೊಗೋದಿಲ್ಲ. ಭಾಗ್ಯ ಭಾಜಕ ಅದು exact meaning ಕೊಡತ್ತೆ. ಎಲ್ಲ ಪದಗಳು ಮೇಲ್ಮನೆ ಕೆಳಮನೆ ಥರ ಆದ್ರೆ ಅದು ಪದಗಳ ಅರ್ಥದ ಸಾರವನ್ನೇ ಕಳೆದುಕೊಳ್ಳುತ್ತದೆ. ಬೇಕಾದ್ರೆ ಅಂಶ ಛೇದ ಅನ್ನೋ ರೀತಿಯ ಪದಗಳನ್ನು ಹುಡುಕಬಹುದಲ್ವ? ಇನ್ನೊಂದು ಏನಂದ್ರೆ when it comes to English no one complains. No one says anything about numerator and denominator. They are also difficult to remember for children in early days. why not top house and bottom house? ಹಾಗಾಗಿ ಭಾಷೆಯನ್ನು ಸುಲಭವಾಗಿಸೋದರ ಜೊತೆಗೆ ಭಾಷೆಯ ಸಾರವೂ ಸ್ವಲ್ಪ ಉಳೀಬೇಕು ಅನ್ನೋದು ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  25. ಬೀಜೋಕ್ತಿ= 2x ,3y +4z ಇತ್ಯಾದಿ. ಏಕಪದ ಬೀಜೋಕ್ತಿ 5x , 2a ಇತ್ಯಾದಿ.
    ಭಾಗಲಬ್ಧ = quotient (ಭಾಗಿಸಿದಾಗ ಬಂದ ಉತ್ತರ ಶೇಷ(reminder ) ಬಿಟ್ಟು ).
    ಸಂಖ್ಯಾ ಸಹಗುಣಕ =4 . (4x ರಲ್ಲಿ).
    ಚರಾಂಶ =x . (4x ರಲ್ಲಿ).
    ಉಧಾಹರಣೆ ೧) ==> ಎರಡು ಬೀಜೋಕ್ತಿಗಳು 4x ಮತ್ತು 2y ಆಗಿರಲಿ .
    ಅವುಗಳ ಭಾಗಲಬ್ಧ 4x /2y
    (೧)ಇವುಗಳ ಸಂಖ್ಯಾ ಸಹಗುಣಕಗಳ ಭಾಗಲಬ್ಧ = (4 /2 )=2
    (೨)ಬೀಜೋಕ್ತಿಗಳ ಚರಾಂಶಗಳ ಭಾಗಲಬ್ಧ= x /y .
    ಉತ್ತರ= 2x /y .
    ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇದು ಒಂದು ಸಮಸ್ಯೆಯೇ ಅಲ್ಲ. :)

    ಪ್ರತ್ಯುತ್ತರಅಳಿಸಿ
  26. ಪ್ರಿಯ ಗೆಳೆಯರೇ ...

    ಗಲ್ಲಿ ಇದು ಕನ್ನಡ ಪದಾನಾ ..

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !