ಭಾನುವಾರ, ಅಕ್ಟೋಬರ್ 13, 2013

ರಘುರಾಮ್ ರಾಜನ್ ಬಗ್ಗೆ ಎರಡು ವಿಷಯ, ಒಂದು ನಿರೀಕ್ಷೆ !

ಆರ್.ಬಿ.ಐ ಗವರ್ನರ್ ಆಗಿ ರಘುರಾಮ್ ರಾಜನ್ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ರಘುರಾಮ್ ರಾಜನ್ ಬಗ್ಗೆ ಬಹಳ ಅಪರೂಪದ ಮಾಹಿತಿಯುಳ್ಳ ಅಂಕಣ ಈ ತಿಂಗಳ ಕೆರವಾನ್ ಇಂಗ್ಲಿಶ್ ಪತ್ರಿಕೆಯಲ್ಲಿ ಬಂದಿದೆ. ಒಂದೆರಡು ವಿಶೇಷ ಅನ್ನಿಸಿದ ವಿಷಯಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳಲು ಈ ಪೋಸ್ಟ್.

ಮುಕ್ತ ಮಾರುಕಟ್ಟೆಯ ಕನ್ಸಂಪ್ಶನ್ ಆಧಾರಿತ ಅರ್ಥ ವ್ಯವಸ್ಥೆಯ ಈ ದಿನಗಳಲ್ಲಿ ಆರ್ಥಿಕ ಹಿನ್ನಡೆ, ರಿಸೆಶನ್ ತರಹದ್ದು ಬಂದಾಗ ಆಯಾ ದೇಶದ ಸೆಂಟ್ರಲ್ ಬ್ಯಾಂಕ್ (ನಮ್ಮ ಆರ್.ಬಿ.ಐ ತರಹದ್ದು) ಅರ್ಥ ವ್ಯವಸ್ಥೆಯಲ್ಲಿ ಒಂದಿಷ್ಟು ಕೈಯಾಡಿಸುವ ಕೆಲಸ ಮಾಡುತ್ತೆ. ಬಡ್ಡಿ ದರ ಕಡಿಮೆ ಮಾಡುವುದು, ಬ್ಯಾಂಕ್ ಗಳಿಗೆ ಸಾಲ ನೀಡಲು ಹಣ ದಂಡಿಯಾಗಿ ಸಿಗುವಂತೆ ಹಣ ಮುದ್ರಿಸುವುದು (ಅಮೇರಿಕದಲ್ಲಿ ಇದಕ್ಕೆ ಕ್ವಾಂಟಿಟೇಟಿವ್ ಈಸಿಂಗ್ ಅನ್ನುವ ಹೆಸರಿದೆ), ಹೀಗೆ ಹಲವು ಕ್ರಮಗಳ ಮೂಲಕ ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಿ ಆ ಮೂಲಕ ಆರ್ಥಿಕ ಚಟುವಟಿಕೆ ಹೆಚ್ಚಿಸಿ ಎಕನಾಮಿಯನ್ನು ಮೇಲೆತ್ತುವಂತಹ ಹೆಜ್ಜೆಗೆ ಮುಂದಾಗುತ್ತೆ. ರಘುರಾಮ್ ರಾಜನ್ 2005ರಲ್ಲಿ ಐ.ಎಮ್.ಎಫ್ ನ ಅಧ್ಯಕ್ಷರಾಗಿದ್ದಾಗ ಈ ರೀತಿ ಈಸಿ ಹಣದ ಹರಿವು ಕೆಲವೇ ಕಾಲದಲ್ಲಿ ಒಳಿತಿಗಿಂತ ಕೆಡುಕೇ ಹೆಚ್ಚು ಮಾಡುತ್ತೆ ಅನ್ನುವ ವಾದವನ್ನು ಮಂಡಿಸಿದರು. ಹಾಗೆ ಮಂಡಿಸಿದ್ದಾದರೂ ಎಲ್ಲಿ ಅಂತೀರ? ಅರ್ಥ ವ್ಯವಸ್ಥೆ ಮೇಲೆತ್ತಲು ಈಸಿ ಹಣ ಹರಿವು ದಂಡಿಯಾಗಿ ಹೆಚ್ಚಿಸಬೇಕು ಮತ್ತು ಬ್ಯಾಂಕುಗಳು ಕಡಿಮೆ ಬಡ್ಡಿಗೆ ದಂಡಿಯಾಗಿ ಸಾಲ ನೀಡಬೇಕು ಅನ್ನುವುದನ್ನು ಕಾರ್ಯರೂಪಕ್ಕೆ ತಂದಿದ್ದ ಮತ್ತು ಅದರಿಂದಲೇ ಅಮೇರಿಕದಲ್ಲಿ ಆ ಹೊತ್ತಲ್ಲಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದ ಅಮೇರಿಕದ ಫೆಡರಲ್ ರಿಸರ್ವ್ ಚೇರಮನ್ ಆಗಿದ್ದ ಅಲನ್ ಗ್ರೀನ್-ಸ್ಪ್ಯಾನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ !  "Has financial development made the world riskier?" ಅನ್ನುವ ಪೇಪರ್ ಪ್ರೆಸೆಂಟ್ ಮಾಡಿ ಮಾತಾಡಿದ ಅವರು ಗ್ರೀನ್-ಸ್ಪ್ಯಾನ್ ಅವರ ವಿರುದ್ದದ ತಮ್ಮ ನೇರ ನುಡಿಯಿಂದ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಿದ್ದರು. ಅದಾದ ಕೆಲವೇ ವರ್ಷದಲ್ಲಿ ಸುಲಭದ ಹಣ ತಂದೊಡ್ಡಿದ ತೊಂದರೆಯಿಂದ ಅಮೇರಿಕದ ಅತಿ ದೊಡ್ಡ ಬ್ಯಾಂಕ್ ಆಗಿದ್ದ ಲೇಮನ್ ಬ್ರದರ್ಸ್ ದಿವಾಳಿಯಾಗಿ ರಾಜನ್ ಅವರ ಮಾತುಗಳು ನಿಜವಾದಾಗ ಇಡೀ ಅಮೇರಿಕವೇ ಅವರ ಮುಂದಾಲೋಚನೆಗೆ, ಆರ್ಥಿಕ ಚಿಂತನೆಗೆ ತಲೆದೂಗಿತ್ತು.

ಭಾರತವೆನ್ನುವ ಒಲಿಗಾರ್ಕಿ !
ಅವರ ಆ ಭವಿಷ್ಯ ಇಂದು ಅವರನ್ನು ಆರ್.ಬಿ.ಐ ಗದ್ದುಗೆಯ ಹತ್ತಿರ ತರುವದರಲ್ಲಿ ಮುಖ್ಯ ಪಾತ್ರ ವಹಿಸಿತ್ತು. ಈಗ ಅವರು ಗವರ್ನರ್ ಆದ ಮೇಲೆ ಹಣಕಾಸು ಮಂತ್ರಿಯ ವಿರೋಧದ ನಡುವೆಯೂ ಬ್ಯಾಂಕ್ ಸಾಲದ ದರವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರ ನಡೆ ಹೇಗೆ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ ಅನ್ನುವುದು ಕಾದು ನೋಡಬೇಕಿದೆ. ಇದರ ಜೊತೆಯಲ್ಲೇ ಇತ್ತಿಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿರುವ ಇನ್ನೊಂದು ಅಂಶ ಹೊಸ ಬ್ಯಾಂಕ್ ಲೈಸೆನ್ಸ್ ನೀಡುವ ಕುರಿತಾದದ್ದು. ಅಂಚೆ ಇಲಾಖೆಯಿಂದ ಹಿಡಿದು, ರಿಲಾಯನ್ಸ್, ಟಾಟಾ, ಬಿರ್ಲಾವರೆಗೆ ಎಲ್ಲರೂ ಬ್ಯಾಂಕ್ ಲೈಸೆನ್ಸಿಗೆ ಅರ್ಜಿ ಹಾಕಿದ್ದಾರೆ. ಭಾರತದ ವ್ಯವಸ್ಥೆ ಯಾವತ್ತಿಗೂ ದೊಡ್ಡವರ ಪರವಿರುವ ಒಂದು ಒಲಿಗಾರ್ಕಿ (Oligarchy is a form of power structure in which power effectively rests with a small number of people. ) ಅನ್ನುವುದನ್ನು ಸಾಬೀತು ಪಡಿಸುವಂತೆ ರಿಲಾಯನ್ಸ್, ಟಾಟಾ ಬಿರ್ಲಾ ತರಹದ ದೊಡ್ಡಪ್ಪಗಳಿಗೆ ಆರ್.ಬಿ.ಐ ಬ್ಯಾಂಕ್ ಲೈಸೆನ್ಸ್ ಕೊಡಲಿ ಅನ್ನುವ ಒತ್ತಾಯ ಹಣಕಾಸು ಮಂತ್ರಿ ಚಿದಂಬರಂ ಅವರದ್ದಾಗಿದ್ದರೆ, ಭಾರತದ ಉದ್ಯಮ, ಉದ್ಯಮಶೀಲತೆ ಹೆಚ್ಚಿಸಲು ಉಳ್ಳವರಿಗಿರುವ ಹಣ, ಅಧಿಕಾರದ ಬಲವಿಲ್ಲದ ಚಿಕ್ಕ ಉದ್ಯಮಗಳು, ಸಂಸ್ಥೆಗಳು, ಉದ್ಯಮಿಗಳನ್ನು ಎತ್ತಿ ಹಿಡಿಯುವ, ಅವರ ಬೆಂಬಲಕ್ಕೆ ನಿಲ್ಲುವ ಹೆಜ್ಜೆ ಆರ್.ಬಿ.ಐ ಕೈಗೊಳ್ಳಬೇಕು ಅನ್ನುವ ಆಸೆ ರಾಜನ್ ಅವರಿಗಿದೆ ಅನ್ನುತ್ತೆ ಆ ಅಂಕಣ. ಮುಕ್ತ ಅರ್ಥ ವ್ಯವಸ್ಥೆಗೆ ತೆರೆದುಕೊಂಡ ನಂತರ ಅದರಿಂದ ಅತಿ ಹೆಚ್ಚು ಲಾಭ ಪಡೆದವರು ಯಾರು ಎಂದು ಗಮನಿಸಿದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿದ್ದ ದೊಡ್ಡ ದುಡ್ಡಿನ ಅದೇ ಗುಂಪು ಅನ್ನುವುದು ಬಹಳ ಸ್ಪಷ್ಟವಾಗಿ ಕಾಣುತ್ತೆ. ಎಲ್ಲೋ ಐಟಿ ಉದ್ಯಮದ ಇನ್-ಫೋಸಿಸ್ ತರಹದ ಕೆಲವು exceptions ಕಾಣಿಸಬಹುದು. ಆದರೆ ಬೈ ಅಂಡ್ ಲಾರ್ಜ್ ಮುಕ್ತ ಮಾರುಕಟ್ಟೆ ಭಾರತದಲ್ಲಿ ಅದೇ ಹಳೆಯ ದೊಡ್ಡ ಉದ್ಯಮಿಗಳು ಇನ್ನಷ್ಟು ದೊಡ್ಡವರಾಗಲು ಸಹಾಯ ಮಾಡಿದೆ ಹೊರತು ಚಿಕ್ಕ, ಮಧ್ಯಮ ಗಾತ್ರದ ನೂರಾರು, ಸಾವಿರಾರು ಸಂಸ್ಥೆಗಳನ್ನು ಬೆಳೆಸುವ ಉದ್ಯಮಶೀಲತೆ ತೋರಿಲ್ಲ. ಅದನ್ನು ರಾಜನ್ ಬದಲಿಸಿ ತೋರಿಸಬಲ್ಲರಾ ಕಾದು ನೋಡಬೇಕು.

ಹಿಂದಿ ಹೇರಿಕೆ ನಿಲ್ಲಲಿ
ಇದೆಲ್ಲದರ ಜೊತೆ ಆರ್.ಬಿ.ಐ ಗವರ್ನರ್ ಮಾಡಬೇಕಿರುವ ಇನ್ನೊಂದು ಮುಖ್ಯ ಕೆಲಸವೆಂದರೆ ಭಾರತದಲ್ಲಿ ಫೈನಾನ್ಶಿಯಲ್ ಇನ್-ಕ್ಲೂಶನ್ ಕೆಲಸ ಮಾಡಲು ಸಾಧ್ಯವಾಗುವಂತೆ ಭಾರತದ ಎಲ್ಲ ಭಾಶೆಗಳಲ್ಲಿ ಬ್ಯಾಂಕಿಂಗ್, ಶೇರು ಮಾರುಕಟ್ಟೆ, ವಿಮೆ ಸೇರಿದಂತೆ ಎಲ್ಲ ರಂಗದ ಚಟುವಟಿಕೆಗಳನ್ನು ನಡೆಸುವುದಕ್ಕೆ ಒತ್ತು ಕೊಡುವುದು. ಇದರ ಜೊತೆ ಹಿಂದಿ ಹೇರಿಕೆಯ ಇವತ್ತಿನ ಭಾಷಾ ನೀತಿಗೆ ರಾಜನ್ ಮೊದಲು ಎಳ್ಳು-ನೀರು ಬಿಟ್ಟು ಆಯಾ ರಾಜ್ಯದಲ್ಲಿ ಅಲ್ಲಿನ ನುಡಿಯಲ್ಲೇ ಎಲ್ಲ ಹಂತದ ಆರ್ಥಿಕ ವ್ಯವಹಾರ ನಡೆಸಲಾಗುವಂತೆ ಸ್ಥಳೀಯ ಭಾಷೆಯನ್ನು ಕಡ್ಡಾಯಗೊಳಿಸುವ ಕೆಲಸ ಮಾಡಲಿ. ಹಿಂದಿ ಹೇರಿಕೆಯನ್ನು ವಿರೋಧಿಸಿ ಭಾರತದ ಭಾಷಾ ವೈವಿಧ್ಯತೆಯನ್ನು ತಕ್ಕ ಮಟ್ಟಿಗೆ ಉಳಿಸಿದ ತಮಿಳರ ನಡುವಿಂದಲೇ ಎದ್ದು ಬಂದ ರಾಜನ್ ಆ ಕೆಲಸ ಮಾಡಲಿ. ಅದು ಅವರು ಆರ್.ಬಿ.ಐ ಗವರ್ನರ್ ಆಗಿ ಭಾರತ ಒಕ್ಕೂಟಕ್ಕೆ ನೀಡುವ ಅತಿ ದೊಡ್ಡ ಕೊಡುಗೆಯಾದೀತು.

2 ಕಾಮೆಂಟ್‌ಗಳು:

  1. ವಸಂತ್... ಈ ಒಂದು ವಿಷಯಕ್ಕೆ ನನ್ನ ಸಂಪೂರ್ಣ ಸಮ್ಮತಿಯಿದೆ – ಫೈನಾಂಷಿಯಲ್ ಇನ್ಕ್ಲೂಷನ್ ಯಶಸ್ವಿಯಾಗಲು ಭಾಷೆಯ ಪಾತ್ರ. ಏಕೆಂದರೆ, ಇಂದು ನೀವು ಭಾರತದ ಯಾವುದೇ ಇನ್ಶುರನ್ಸ್, ಅಥವ ಬ್ಯಾಂಕಿಂಗ್ ಡಾಕ್ಯುಮೆಂಟ್ ತೆಗೆದುಕೊಂಡರೆ ಅದರಲ್ಲಿ ನಿಬಂಧಗಳು (terms & conditions) ಫೈನ್-ಪ್ರಿಂಟ್ ನಲ್ಲಿರುವುದೇನೋ ದುರ್ದೈವ. ಆದರೇ ಅವುಗಳತ್ತ ಗಮನ ಹೋದರೂ ಸಹ ಅವು ಕೇವಲ ಇಂಗ್ಲಿಷ್ ನಲ್ಲಿರುತ್ತವೆ. ನೀವು ಥಾಯಲ್ಯಾಂಡ್, ಸೌದಿ ಅರೇಬಿಯಾ, ಮಲೇಷಿಯಾ ಮುಂತಾದ ದೇಶಗಳಿಗೆ ಹೋದರೆ ಅಲ್ಲಿ ಸರ್ವಸಾಮಾನ್ಯವಾದ ಉತ್ಪನ್ನಗಳ (Lay’s chips, Colgate toothpaste etc) ಪ್ಯಾಕೆಟ್ ಗಳ ಮೇಲೆ “ಅವರ” ಭಾಷೆಯಲ್ಲಿ ಮಾಹಿತಿ ಇರುತ್ತದೆ. ನಮ್ಮ ದೇಶದಲ್ಲಿ ಕೆಲವು ಕ್ಷೇತ್ರದಲ್ಲಾದರೂ “ನಮ್ಮ-ನಮ್ಮ” ಭಾಷೆಯಲ್ಲಿ ಮಾಹಿತಿ ಕೊಡಲೇಬೇಕು. ನಾನು ಎರಡು ವರುಷಗಳ ಹಿಂದೆ IRDA, insurance ombudsman ಮುಂತಾದ ಸಂಘಟನೆಗಳಿಗೆ ಮತ್ತು ಮೇಲಧಿಕಾರಿಗಳಿಗೆ ಅನೇಕ ಸಲ ಇದನ್ನು ಕುರಿತು ಬರೆದಿದ್ದೆ. ಆದರೆ ಸಾಂಸಾರಿಕ ಹೊಣೆಗಳ ಕಾರಣ ಇದನ್ನು ಮುಂದಿನ ಹಂತಕ್ಕೆ ಒಯ್ಯಲು ಸಾಧ್ಯವಾಗಿಲ್ಲ.

    ಪ್ರತ್ಯುತ್ತರಅಳಿಸಿ
  2. ಗ್ರಾಹಕನಿಗೆ ಸಂಪೂರ್ಣ ಮಾಹಿತಿಯು ಆಯಾ ರಾಜ್ಯ ಭಾಷೆಗಳಲ್ಲಿ ಲಭ್ಯವಾಗಬೇಕು. ಕೇವಲ 3 ದಿನಗಳ ಹಿಂದೆ ನಮ್ಮದೇ ರಾಜ್ಯದಲ್ಲಿ ಸ್ಥಾಪಿತವಾದ ಪ್ರಮುಖ ಬೇಂಕುಗಳಲ್ಲೊಂದಾದ ವಿಜಯ ಬೇಂಕಿನ ಶಾಖೆಯೊಂದರಲ್ಲಿ ನಾನು (ದೂರವಾಣಿಯಲ್ಲಿ) ಕನ್ನಡ ಭಾಷೆಯಲ್ಲಿ ಮಾಹಿತಿಯನ್ನು ಕೇಳಲು ಅವರು ಹಿಂದಿಯಲ್ಲಿ ಉತ್ತರಿಸಲು ಪ್ರಾರಂಬಿಸಿದರು, ಹಿಂದಿಯ ಜ್ಞಾನ ನನಗೆ ಅತ್ಯಲ್ಪವಾದುದರಿಂದ ಅವರಲ್ಲಿ ಇಂಗ್ಲಿಷಲ್ಲಿಯಾದರೂ ತಿಳಿಸಿ ಎಂದು ವಿನಂತಿಸಬೇಕಾಯ್ತು.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !