ಮಂಗಳವಾರ, ಅಕ್ಟೋಬರ್ 27, 2009

ದಟ್ಸ್ ಕನ್ನಡ.ಕಾಮ್ ನಲ್ಲಿ ನಡೆದ ಚರ್ಚೆಗೆ ನನ್ನ ಉತ್ತರ ..

ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ ಅನ್ನೋ ನನ್ನ ಬರಹವೊಂದನ್ನು ಆತ್ಮೀಯರಾದ ಶಾಮ್ ಅವರು ತಮ್ಮ ಸಂಪಾದಕತ್ವದ ದಟ್ಸ್ ಕನ್ನಡದಲ್ಲಿ ಹಾಕಿದ್ದರು. ಆ ಬರಹಕ್ಕೆ ಪ್ರತಿಕ್ರಿಯೆಯಾಗಿ  ಹಿರಿಯ ಶಿಕ್ಷಕರಾದ ಶ್ರೀ ಶೇಷಗಿರಿ ಜೋಡಿದಾರ್ ಅವರು ದಟ್ಸ್ ಕನ್ನಡ ಪತ್ರಿಕೆಯಲ್ಲಿ  " ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್ " ಅನ್ನುವ ತಲೆಬರಹದಡಿ ತೂಕದ ಉತ್ತರವೊಂದನ್ನು ಕೊಟ್ಟಿದ್ದಾರೆ. ಅದನ್ನು ಓದಿ, ಶಾಮ್ ಅವರಿಗೆ ನನ್ನದೊಂದು ಪ್ರತಿಕ್ರಿಯೆ ಕಳಿಸಿದೆ. ಅದನ್ನು ಇಲ್ಲಿ ಹಾಕಿದ್ದೇನೆ.
 
ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್ ಓದಿ ಅದಕ್ಕೆ ನನಗನಿಸಿದ ಪ್ರತಿಕ್ರಿಯೆ ನೀಡುವ ಮುನ್ನ ಇಂತಹದೊಂದು ಸಮಯೋಚಿತ ಚರ್ಚೆಗೆ ಅವಕಾಶವನ್ನಿತ್ತ ದಟ್ಸ್ ಕನ್ನಡ ಸಂಪಾದಕರಾದ ಶಾಮ್ ಅವರಿಗೂ, ಹಾಗೂ ನನ್ನಂತಹ ಕಿರಿಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ತಮ್ಮ ಯೋಚನೆ ಮತ್ತು ಸಮಯ ನೀಡಿದ ಹಿರಿಯರಾದ ಶ್ರೀ ಶೇಷಗಿರಿ ಜೋಡಿದಾರ್ ಅವರಿಗೂ ( ಅವರನ್ನು ಈ ಬರಹದಲ್ಲಿ ಮೇಷ್ಟ್ರು ಎಂದೇ ಕರೆಯುವೆ) ಮನ ತುಂಬಿ ವಂದಿಸುವೆ.

ಇದು ಸಾಹಿತ್ಯ ದೃಷ್ಟಿ ಖಂಡಿತ ಅಲ್ಲ !
ಮೊದಲಿಗೆ, ವಿಜ್ಞಾನ, ಗಣಿತ ಇತ್ಯಾದಿಗಳಲ್ಲಿ ಭಾಷೆಗಿಂತ ನಾವು ಕಲಿಯುವ ವೈಜ್ಞಾನಿಕ ಸಾರಾಂಶ ಮುಖ್ಯವೇ ವಿನಾ ಶಾಲಾಪಠ್ಯವನ್ನು ಸಾಹಿತ್ಯ ಮತ್ತು ಭಾಷೆಯ ಸೂಕ್ಷ್ಮಗಳಿಂದ ನೋಡಬಾರದು ಅನ್ನುವ ಮೇಷ್ಟ್ರ ಮಾತು ನೂರಕ್ಕೆ ನೂರು ನಿಜ. ನನ್ನ ಬರಹದಲ್ಲಿ ಪೀನ ದರ್ಪಣ, ನಿಮ್ನ ದರ್ಪಣ ಅನ್ನಲು ಉಬ್ಬುಗಾಜು, ತಗ್ಗುಗಾಜು ಅನ್ನೋದಾಗಲಿ, ಇಲ್ಲವೇ ರೇಖೆಗೆ ಗೆರೆ ಅನ್ನುವುದಾಗಲಿ, ಇಲ್ಲವೇ ಬಿಂದುವಿಗೆ ಚುಕ್ಕಿ ಅನ್ನುವುದು ಖಂಡಿತವಾಗಿಯೂ ಸಾಹಿತ್ಯದ ದೃಷ್ಟಿಯಿಂದ ನೋಡುವ ಪ್ರಯತ್ನವಲ್ಲ. ನಿಜ ಹೇಳಬೇಕು ಅಂದರೆ, ಸಾಹಿತ್ಯದ ದೃಷ್ಟಿಯಿಂದ ನೋಡುವ ನಮ್ಮ ಹೆಚ್ಚಿನ ಸಾಹಿತಿಗಳ ಬರಹದಲ್ಲಿ ನಮಗೆ ಕಾಣುವುದು ಆಡುನುಡಿಯಲ್ಲಿ ಬಳಸದ ಪದಗಳು. ಆಡುನುಡಿಯಲ್ಲಿ ಈಗಾಗಲೇ ಇರುವ, ಸುಲಭಕ್ಕೆ ಅರ್ಥವಾಗುವ, ನೆನಪಿಟ್ಟುಕೊಳ್ಳಲು ಆಗುವ ಪದಗಳ ಬಳಕೆ ಮಾಡಬೇಕು ಅನ್ನುವ ವಾದ ಹೆಚ್ಚು ವೈಜ್ಞಾನಿಕವಾದ ಹಾದಿಯೇ ಹೊರತು ಸಾಹಿತ್ಯದ ದೃಷ್ಟಿಯಿಂದ ನೋಡುವ ಪ್ರಯತ್ನ ಖಂಡಿತವಲ್ಲ.

ಗಣಿತವಷ್ಟೇ ಅಲ್ಲ, ವಿಜ್ಞಾನದಲ್ಲೂ ಈ ತೊಂದರೆಗಳಿವೆ
ಮಕ್ಕಳಿಗೆ ವಿಷಯ ಸುಲಭವಾಗಿ ಅರ್ಥವಾದರೆ ಸಾಕು ಇನ್ನೇನು ಬೇಕಿಲ್ಲ ಎನ್ನುವ ತತ್ತ್ವ ಇಲ್ಲಿ ಕಣ್ಮರೆಯಾಗಿ ಓದುವವರಿಗೆ ಮತ್ತು ಕಲಿಸುವವರಿಗೆ ಶಿಕ್ಷೆ ಕೊಡುತ್ತದೆ ಅನ್ನುವ ಮೇಷ್ಟ್ರ ಮಾತು ಎಲ್ಲರೂ ಒಪ್ಪುವಂತದ್ದು. ಮೇಷ್ಟ್ರು ಗಣಿತದ ವಿಷ್ಯದಲ್ಲಿ ನಾನು ಎತ್ತಿರುವ ಪ್ರಶ್ನೆಗಳೆಲ್ಲ ಸರಿಯಾಗಿದೆ ಆದ್ರೆ ಅವರು ಕಲಿಸುತ್ತಿರುವ ಜೀವ ವಿಜ್ಞಾನ ಅಥವಾ ಜೀವ ಶಾಸ್ತ್ರ (ಇದರಲ್ಲಿ ಯಾವುದು ಹೆಚ್ಚು ಜನರಿಗೆ ಸುಲಭವೋ ( ನೆನಪಿಡಲು, ಉಲಿಯಲು, ಬರೆಯಲು) ಅದನ್ನೇ ಬಳಸೋಣ)ದ ವಿಷಯದಲ್ಲಿ ಮಾತ್ರ ಇಂತಹ ಯಾವುದೇ ತೊಂದರೆಗಳಿಲ್ಲ ಅನ್ನುವಂತಿದೆ. 'ಪತ್ರಹರಿತ್ತು' ಪದದ ಬದಲು 'ಎಲೆ ಹಸಿರು' ಎಂದು ಹೇಳುವುದರಿಂದ ಏನುಸಾಧಿಸಿದಂತೆ ಆಗುತ್ತದೆ? ಅನ್ನುವ ಮೇಷ್ಟ್ರ ಪ್ರಶ್ನೆಗೆ ನನ್ನ ಮರು ಪ್ರಶ್ನೆ " "ಪತ್ರ ಹರಿತ್ತು" ಎಂಬ ಪದ "ಎಲೆ ಹಸಿರು" ಪದಕ್ಕಿಂತ ಯಾವ ರೀತಿಯಲ್ಲಿ ಹೆಚ್ಚು ಸೂಕ್ತವಾಗಿದೆ ಅನ್ನುವುದನ್ನು ವಿವರಿಸಿ. "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟೀತು?

ಕಲಿಕೆಗೆ ಯಾವುದು ಸುಲಭವೋ ಅದನ್ನೇ ಬಳಸೋಣ
ನಮಗೆ ಪದಕ್ಕಿಂತ ಮುಖ್ಯವಾದುದು ವಿಜ್ಞಾನದ ಪರಿಕಲ್ಪನೆಗಳು ಸುಲಭವಾಗಿ ಹಾಗು ಪರಿಣಾಮಕಾರಿಯಾಗಿ ಮಕ್ಕಳ ಮಿದುಳನ್ನು ತಲುಪಿ ಅಲ್ಲೇ ಉಳಿಯುವಂತೆ ಮಾಡುವುದು." ಅನ್ನುವ ಮೇಷ್ಟ್ರ ಮಾತು ಸಕತ್ ಸರಿಯಾಗಿದೆ. ಆದರೆ ಅವರು ಕೇಳಿರುವ "ಹೃದಯಾವರಣ" ಮತ್ತು "ಗುಂಡಿಗೆ ಸುತ್ಪೊರೆ" ಪದಗಳಲ್ಲಿ ಯಾವುದು ಹೆಚ್ಚು ಸೂಕ್ತ ಅನ್ನುವ ಪ್ರಶ್ನೆಗೆ ನನ್ನ ಉತ್ತರ ಯಾವುದು ಮಕ್ಕಳಿಗೆ ನೆನಪಿಡಲು, ಉಲಿಯಲು, ಬರೆಯಲು ಸುಲಭವಾಗುವುದೋ ಅದೇ ಅನ್ನುವುದು. ಮಕ್ಕಳಿಗೆ ಹೃದಯಾವರಣವೇ ಹೆಚ್ಚು ಸುಲಭ ಅಂದರೆ ಯಾವುದೇ ಸಂದೇಹವಿಲ್ಲದೇ ಅದನ್ನೇ ಬಳಸಬೇಕು ಅನ್ನುವುದು ನನ್ನ ನಿಲುವು. ಇನ್ನೂ karyokinesis ಮತ್ತು cytokinesis ಪದಗಳ ಬಗ್ಗೆ ಬಂದರೆ, ಈ ಪದಗಳ ಸಂಸ್ಕೃತ ಅರ್ಥವನ್ನು ಕನ್ನಡಕ್ಕೆ ನೇರವಾಗಿ ತಂದು ಹಾಕಿದ್ದಾರೆ. karyokinesis ಮತ್ತು cytokinesis ಪದಗಳು scientifically important ಮತ್ತದನ್ನು ಅದೇ ರೂಪದಲ್ಲಿ ಬಳಸುವುದು ಹೆಚ್ಚು ಸೂಕ್ತ ಎನಿಸಿದರೆ, ಯಾವುದೇ ಮಡಿವಂತಿಕೆ ಇಲ್ಲದೇ ಕನ್ನಡ ಮಾಧ್ಯಮ ಮಕ್ಕಳಿಗೂ ಅವನ್ನೇ ಹೇಳಿ ಕೊಡಬೇಕು ಅನ್ನುವುದು ನನ್ನ ನಿಲುವು. ಹೋಮೋ ಸೆಪಿಯನ್ ಮತ್ತು ವಿವೇಕಿ ಮಾನವ ಬಗೆಗಿನ ಮೇಷ್ಟ್ರ ಉದಾಹರಣೆಗೂ ಇದು ಅನ್ವಯಿಸುತ್ತೆ. ಈಗ ಬಸ್ ಅನ್ನುವ ಪದಕ್ಕೆ ನಾವು ಕನ್ನಡದ "ನಾಲ್ಕು ಚಕ್ರದ ಸಾರಿಗೆ ವಾಹನ" ಅಂತೀವಾ ಇಲ್ಲ ಸಿಂಪಲ್ ಆಗಿ ಇಂಗ್ಲಿಷಿನ ಬಸ್(ಬಸ್ಸು) ಅಂತೀವಾ? ಬಸ್ಸು ತಾನೇ? ಹೀಗೆ, ಯಾವುದು ಹೆಚ್ಚು ಪರಿಣಾಮಕಾರಿ, ಹೆಚ್ಚು ಸುಲಭ ಅದನ್ನೇ ಬಳಸಬೇಕು, ಅದು ಕನ್ನಡ ಆಗಿದ್ದರೆ ಕನ್ನಡ, ಇಂಗ್ಲಿಷ್ ಆಗಿದ್ದರೆ ಇಂಗ್ಲಿಷ್, ಸಂಸ್ಕೃತ ಆಗಿದ್ದರೆ ಸಂಸ್ಕೃತ. ಈ ಹೇಳಿಕೆ ಮೂಲಕ ನಾನು ಸಂಸ್ಕೃತ ದ್ವೇಷಿಯೂ ಅಲ್ಲ, ಪ್ರತಿಯೊಂದು ಪೂರ್ತಿ ಕನ್ನಡೀಕರಣಗೊಳ್ಳಲಿ ಅನ್ನುವ ಹುಚ್ಚು ಆಸೆಯೂ ನನಗಿಲ್ಲ ಅನ್ನುವುದನ್ನು ಹೇಳಲು ಬಯಸುತ್ತೇನೆ.


ಶಿಕ್ಷಣ ಅಂದ್ರೇನು?
ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೂತಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.

ಕೊನೆಯದಾಗಿ, ಜಗತ್ತಿನ ಯಾವುದೇ ಮುಂದುವರಿದ ದೇಶವನ್ನು ನೋಡಿದರೂ ಅದಕ್ಕೆ ಮುಖ್ಯ ಕಾರಣಗಳಲ್ಲೊಂದು ಅಲ್ಲಿನ ಅದ್ಭುತ ಕಲಿಕಾ ವ್ಯವಸ್ಥೆ. ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಮತ್ತು ಆ ಕಲಿಕೆಯಿಂದ ಒಳ್ಳೆಯ ದುಡಿಮೆ ಕಾಣ್ತಿರೋ ಆ ದೇಶಗಳು ನಮಗೆ ಮಾದರಿಯಾಗಬೇಕು. ಇದಕ್ಕೆ ಅಮೇರಿಕ-ಇಂಗ್ಲಂಡ್ ಕೂಡಾ ಹೊರತಲ್ಲ ಯಾಕೆಂದ್ರೆ ಇಂಗ್ಲಿಷ್ ಅಲ್ಲಿನವರ ತಾಯಿ ನುಡಿ !ಇಂತದೇ ಒಂದು ವ್ಯವಸ್ಥೆ ಕರ್ನಾಟಕದಲ್ಲಿ ಕನ್ನಡದಲ್ಲಿ ಆಗುವ ದಿನಗಳು ಬಂದಾಗಲೇ ನಾವು ನಿಜಕ್ಕೂ ಏಳಿಗೆ ಹೊಂದಲು ಸಾಧ್ಯವಾಗುವುದು. ಆ ದಿನಗಳು ಆದಷ್ಟು ಬೇಗ ಬರಲಿ ಎನ್ನುವ ಆಶಯದೊಂದಿಗೆ ನನ್ನ ಎರಡು ಮಾತು ಮುಗಿಸುತ್ತೇನೆ.

3 ಕಾಮೆಂಟ್‌ಗಳು:

  1. ನಿಮ್ಮ ಮಾತು ನೂರಕ್ಕೆ ನೂರು ಖರೆ.

    ನಾನೂ ಕನ್ನಡ ಸಾಲೆಯಲ್ಲೀ ಓದಿದವ. ಜಡತ್ವ, ವಿಭಾಜತ್ವ ಇತ್ಯಾದಿ ಪದಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದ್ದೆವು. ಯಕೃತ್ತು ಸರಿಯೋ ಪಿತ್ತಜನಕಾಂಗ ಸರಿಯೋ ಗೊತ್ತಾಗುತ್ತಿರಲಿಲ್ಲ. ಇನ್ನು ಗಣಿತದ ಕಷ್ಟದ "ಕನ್ನಡ" ಪದಗಳಿಗೆ ಲೆಕ್ಕವೇ ಇರಲಿಲ್ಲ.

    ನೀವು ಹೇಳಿದಂತೆ ಒಂದು ಕಡೆಯಿಂದ ಕನ್ನಡದ ಕಸ ತೆಗೆಯುವ ಕೆಲಸ ಆಗಬೇಕಾಗಿದೆ. ಸುಲಭದ ಸಂಸ್ಕೃತ ಪದಗಳು, ಮತ್ತು ದಿನ ನಿತ್ಯ ರೂಢಿಯಾಗಿರುವ ಇಂಗ್ಲೀಷ್ ಪದಗಳನ್ನು ಎಗ್ಗಿಲ್ಲದೇ ಬಳಸೋಣ. ಕನ್ನಡದ ಆಡುಮಾತಿಂದ ಹೊಸ ಪದಗಳನ್ನು ಹೊಸೆಯೋಣ. ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವೇ ಇಲ್ಲವೇ?

    - ಕೇಶವ

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ ವಸಂತ ಅವರೆ,

    ನಿಮ್ಮ ಲೇಖನ ಮೆಚ್ಚುಗೆಯಾಯಿತು. ನಿಮ್ಮ ಬ್ಲಾಗನ್ನು http://baraha.com/kannada/ ದಲ್ಲಿ ಸೇರಿಸಿದ್ದೇನೆ.

    -ವಾಸು

    ಪ್ರತ್ಯುತ್ತರಅಳಿಸಿ
  3. Nanoo kannada maadhyamadalli kalithavalu.
    Ee reethiya padagalannu kandaada eshto baari 'summane kashta maadiddare' annisiddide.

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !