ಮೊದಲ ಭಾಗದಲ್ಲಿ ಮೋದಿಯವರು ಗುಜರಾತಿನಲ್ಲಾದಂತೆ ದೆಹಲಿ ಮಟ್ಟದಲ್ಲಿ ಗೆಲುವು ಕಾಣುವುದು ಸುಲಭ ಯಾಕಲ್ಲ ಅನ್ನುವ ಬಗ್ಗೆ ನನ್ನ ಅನಿಸಿಕೆ ಬರೆದಿದ್ದೆ. ಎರಡನೆಯ ಭಾಗದಲ್ಲಿ ಗುಜರಾತಿನಲ್ಲಿ ಕೇಶು ಬಾಯಿ ಪಟೇಲ್ ಅವರ ಪ್ರಾದೇಶಿಕ ಪಕ್ಷಕ್ಕಾದ ಗತಿಯೇ ಯಡಿಯೂರಪ್ಪನವರ ಕೆಜೆಪಿಗೂ ಆಗಲಿದೆ ಅನ್ನುವ ಕೆಲವರ ಅನಿಸಿಕೆ ಬರೆದಿರುವೆ.
ಗುಜರಾತಿನಲ್ಲಿ ಮೋದಿಯವರಿಗೆ ಹಿನ್ನಡೆ ಉಂಟು ಮಾಡಬಹುದು ಎಂದು ನಂಬಲಾಗಿದ್ದ ಮೋದಿಯವರ ಗುರು ಕೇಶುಬಾಯಿ ಪಟೇಲ್ ಅವರ ಗುಜರಾತ್ ಪರಿವರ್ತನ್ ಪಾರ್ಟಿ ಹೇಳಹೆಸರಿಲ್ಲದಂತೆ ನೆಲಕಚ್ಚಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಬಿಜೆಪಿಯ ಈಶ್ವರಪ್ಪನವರು ಯಡಿಯೂರಪ್ಪನವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದು, ಬರುವ ಚುನಾವಣೆಯಲ್ಲಿ ಕೆಜೆಪಿಗೂ ಕೇಶುಬಾಯಿಗಾದ ಗತಿಯಾಗಲಿದೆ ಅನ್ನುವ ಮಾತುಗಳನ್ನಾಡಿದ್ದಾರೆ. (ಅವರು ಹೀಗೆ ಹೇಳುವ ಹೊತ್ತಿಗೆ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದು 37ಕೆಜಿಗೂ ಹೆಚ್ಚು ಬೆಳ್ಳಿ, 2ಕೆಜಿಗೂ ಹೆಚ್ಚು ಚಿನ್ನ ಸಮೇತ ಹಲವಾರು ಆಸ್ತಿ ವಿವರ ಸಿಕ್ಕಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ ಅನ್ನುವುದು ಬೇರೆ ವಿಚಾರ ಬಿಡಿ.) ಆದರೆ ನನ್ನ ಅನಿಸಿಕೆಯಲ್ಲಿ 10 ವರ್ಷದಿಂದ ಹೆಚ್ಚು ಕಡಿಮೆ ರಾಜಕೀಯ ಸನ್ಯಾಸದಲ್ಲಿರುವ ಕೇಶುಬಾಯಿ ಪಟೇಲ್ ಅವರನ್ನು ಇವತ್ತಿಗೂ ಸಕ್ರೀಯ ರಾಜಕಾರಣದಲ್ಲಿರುವ ಯಡಿಯೂರಪ್ಪನವರಿಗೆ ಹೋಲಿಸಲಾಗದು. ಯಡಿಯೂರಪ್ಪನವರನ್ನು ಕೇಶುಬಾಯಿಗೆ ಹೋಲಿಸುವ ಮುನ್ನ ಕೇಳಿಕೊಳ್ಳಬೇಕಾದ ಕೆಲ ಪ್ರಶ್ನೆಗಳಿವೆ.
- ಇವತ್ತಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನರೇಂದ್ರ ಮೋದಿಯವರಷ್ಟೇ ಕರ್ನಾಟಕದಲ್ಲಿ ಜನಪ್ರಿಯರೇ? ಮೋದಿಯವರು ಆಡಳಿತದಲ್ಲಿ ಮಾಡಿರುವಷ್ಟೇ ಸಾಧನೆಯನ್ನು ಶೆಟ್ಟರ್ ಅವರು ಮಾಡಿದ್ದಾರೆಯೇ? ಶೆಟ್ಟರ್ ಅವರಿಗೆ ಸತತ ಹತ್ತು ವರ್ಷಗಳ ಕಾಲ ಉತ್ತಮ ಆಡಳಿತ ಕೊಟ್ಟ ಹೆಸರಿದೆಯೇ?
- ಗುಜರಾತಿನಲ್ಲಿ ಮೋದಿಯವರು ತಮ್ಮ ಪಕ್ಷವನ್ನು ಅಂಗೈಯಲ್ಲಿರಿಸಿಕೊಂಡಂತೆ ಕರ್ನಾಟಕದಲ್ಲಿ ಶೆಟ್ಟರ್, ಸದಾನಂದ ಗೌಡ ಮತ್ತು ಈಶ್ವರಪ್ಪನವರಿಗೂ ತಮ್ಮ ಪಕ್ಷದ ಮೇಲೆ ಹಿಡಿತವಿದೆಯೇ? ಹಾವೇರಿ ಸಮಾವೇಶದಲ್ಲಿ ಪಕ್ಷದ ಶಿಸ್ತಿಗೆ ನೇರವಾಗಿ ಸವಾಲು ಹಾಕಿದ ಶಾಸಕರ ಮೇಲೆ ಇಂದಿಗೂ ಕ್ರಮ ಕೈಗೊಳ್ಳಲಾಗದವರನ್ನು ಗುಜರಾತಿನಲ್ಲಿ ಒನ್ ಮ್ಯಾನ್ ಶೋ ರೀತಿಯಲ್ಲಿ ನಡೆಯುತ್ತಿರುವ ಪಕ್ಷದ ಜೊತೆ ಹೋಲಿಸಲಾದಿತೇ?
- ಗುಜರಾತಿನಲ್ಲಿ ಎಂದಿನಿಂದಲೂ ಕೇವಲ ಎರಡೇ ಪಕ್ಷಗಳು ರಾಜಕೀಯದಲ್ಲಿವೆ. ಕರ್ನಾಟಕದಲ್ಲಿ ಮೂರು ದಶಕಗಳಿಂದಲೂ ಮೂರು ಪಕ್ಷಗಳು ರಾಜಕೀಯದಲ್ಲಿವೆ. ಕಾಂಗ್ರೆಸ್, ಬಿಜೆಪಿ ಹೊರತಾಗಿ ಇವತ್ತು ಕರ್ನಾಟಕದಲ್ಲಿ ಕಡಿಮೆಯೆಂದರೂ 100 ಸ್ಥಾನಗಳಲ್ಲಿ ಪರಿಣಾಮ ಬೀರಬಲ್ಲ ಜೆಡಿಎಸ್ ಅಸ್ತಿತ್ವದಲ್ಲಿದೆ. ಹೀಗಿರುವಾಗ ಕರ್ನಾಟಕದ ಮತ್ತು ಗುಜರಾತಿನ ರಾಜಕೀಯ ವ್ಯವಸ್ಥೆಯನ್ನು ನೇರವಾಗಿ ಹೋಲಿಸಲಾದಿತೇ?
- ಯಡಿಯೂರಪ್ಪ ಮತ್ತು ಕೇಶುಬಾಯಿ ಪಟೇಲರನ್ನು ನೇರವಾಗಿ ಹೋಲಿಸಲಾದಿತೇ? ಯಡಿಯೂರಪ್ಪನವರು ಇತ್ತಿಚಿನವರೆಗೂ ಮುಖ್ಯಮಂತ್ರಿಯಾಗಿದ್ದವರು, ಇವತ್ತಿಗೂ ಕರ್ನಾಟಕದ ರಾಜಕೀಯದಲ್ಲಿ ಸಮುದಾಯ, ಸಂಪನ್ಮೂಲಗಳ ಬೆಂಬಲದ ವಿಷಯದಲ್ಲಿ ಬಲವುಳ್ಳವರು. ಅವರನ್ನು ಹೆಚ್ಚು ಕಡಿಮೆ 10 ವರ್ಷಗಳಿಂದ ತೆರೆಮರೆಯಲ್ಲಿರುವ ಕೇಶುಬಾಯಿಯವರ ಜೊತೆ ಹೋಲಿಸಲಾದಿತೇ?
ಯಡಿಯೂರಪ್ಪನವರ ಮುಂದಿನ ರಾಜಕೀಯ ನಡೆಯ ಯಶಸ್ಸು ಅವರು ಯಾವ ರೀತಿಯಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯಲಿದ್ದಾರೆ, ಜೊತೆಯಲ್ಲಿಟ್ಟುಕೊಳ್ಳಬೇಕಾದ ಜನರಲ್ಲಿರಬೇಕಾದ ಗುಣಮಟ್ಟದ ಬಗ್ಗೆ ಎಷ್ಟು ಎಚ್ಚರದಿಂದಿದ್ದಾರೆ ಅನ್ನುವುದರ ಮೇಲಿದೆ. ತಾವಿದ್ದ ಪಕ್ಷದಲ್ಲಿ ಅನ್ಯಾಯ ಆಯ್ತು ಅನ್ನುವ ಒಂದೇ ವಾದದ ಮೇಲೆ ಜನರ ಮುಂದೆ ಹೋದರೆ ಅವರ ಗೆಲುವು ಅಷ್ಟು ಸುಲಭವಲ್ಲ. ಕರ್ನಾಟಕದಲ್ಲಿ ಇಂದಿಗೂ ಒಂದು ಮಟ್ಟದ ರಾಜಕೀಯ ಬಲ ಹೊಂದಿರುವ ಅವರು ಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ಈಗಿರುವ ಪಕ್ಷಗಳಿಗಿಂತ ಹೇಗೆ ಭಿನ್ನ? ಹೇಗೆ ಜನ ಪರ? ಅನ್ನುವುದನ್ನು ಜನರ ಎದುರು ಇಡಬೇಕಿದೆ. ಕೇವಲ ಜಾತಿಯೊಂದರ ಪ್ರತಿನಿಧಿ ಎಂಬಂತೆ ಕಾಣಿಸಿಕೊಂಡರೆ (ಪರ್ಸೆಪ್ಶನ್) ಜೆಡಿಎಸ್ ನಂತೆ ಅದು ಕೂಡಾ ಒಂದು ಪ್ರದೇಶಕ್ಕೆ ಸೀಮಿತವಾದ ಪಕ್ಷವಾಗಬಹುದು. ರಾಜ್ಯವ್ಯಾಪಿ ಪ್ರಭಾವವುಳ್ಳ ಪಕ್ಷವಾಗಿ ಹೊರ ಹೊಮ್ಮಲು ಸಾಧ್ಯವೂ ಆಗದಿರಬಹುದು. ಹಲವು ಆಯಾಮಗಳಲ್ಲಿ ಇಂದಿಗೆ ಕೇಶುಬಾಯಿ ಪಟೇಲರಿಗಿಂತ ಹೆಚ್ಚು ಶಕ್ತಿಶಾಲಿ ಸ್ಥಾನದಲ್ಲಿ ಅವರಿದ್ದರೂ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷವೊಂದಕ್ಕೆ ಕೊಡಬೇಕಾದ ರೂಪುರೇಷೆ, ತೆಗೆದುಕೊಳ್ಳುವ ನಿಲುವುಗಳು ಅವರ ರಾಜಕೀಯ ಬಲ ಹಿಗ್ಗುವುದೋ ಇಲ್ಲವೋ ಎಂಬುದನ್ನು ಮೇ ತಿಂಗಳ ಚುನಾವಣೆ ನಿರ್ಧರಿಸಲಿವೆ.