ಭಾನುವಾರ, ಅಕ್ಟೋಬರ್ 20, 2013

Should everyone in India learn Sanskrit to develop better character?

A rediff article about making Sanskrit as the people's language makes hilarious claims about how Sanskrit can eliminate India's plaguing problems like Corruption, Rape etc. New Delhi based Sanskrit
Bharati is on a mission to cleanse Indian languages from the evil influence of English, Persian and Arabic and infuse the holier than thou Sanskrit in their place so that Indians develop good character and become well behaved to not indulge in acts like Corruption and Rape.
Let's analyse some of the claims in the article and see how the whole initiative is against diversity, self defeating as well as doing a great disservice to Sanskrit.
>> Many feel that Indian languages are in a mess and what one witnesses is a mixture of English, Persian and Arabic in our regional languages. The question is, how do we purify Indian languages and remove the mix of various foreign languages? <<
=> Indian languages are in mess because there is not much worthy worldly knowledge exist in them. They are just fit for song and dance and some literature. When a language becomes unfit for commerce, technology and education, they definitely become a mess. Now, let's come to the mixture of other languages: No language survives or grows in isolation. Language, like a flowing river, keeps on absorbing newer words from other languages. Kannada has received words from Persian, Marathi, Tamil, Sanskrit as well as English and similarly other languages have received words from Kannada too and that's how languages evolve. Now, if someone wants to cleanse those other language words for Sanskrit, that's nothing but imposing Sanskrit in my view.

>>“Our organisation aims at the revival of Sanskrit as a mass communication language (janbhasha) and facilitation of common man’s access to its vast knowledge treasure.<<
=> Was Sanskrit ever a mass communication language ? It was a written language and was never a spoken language. Evidence? The grammar of Sanskrit has not changed. All spoken languages change with time. Kannada has a haLegannaDa, naDugannaDa and hosagannaDa form indicating the fact that as a spoken language it kept evolving with time, and for the point of accessing vast knowledge treasure what Sanskrit claims to have, the best way to do that is to translate those knowledge to people's language and making it available to the masses rather than asking everyone to learn Sanskrit. Latin has medicine knowledge, German has automobile technology,  now what is the best way to acquire these knowledge ? Asking everyone to learn those languages? or translating them and making it available in people's language? This should answer the futility of making a non-existent language as spoken language.
>>“While our first goal is to ensure that everyone learns how to speak the language, the next aim would be to teach them how to read and write. Once you learn how to speak the language it becomes easy to read and write,” Kamath notes.<<
=>Isn't this the modus operandi of Hindi imperialists too? They too want everyone to learn Hindi and then to read and write in Hindi so that India becomes "Hindi"stan.

>>It is important that everyone, apart from learning the bread-giving language, should also learn the character-building language -- which is Sanskrit. <<
=>Millions of Indians have no knowledge of Sanskrit, so do they lack character? Character building doesn't come from a language, it comes from what values parents and teachers instill in a kid. Associating Sanskrit to character building is like relegating other languages to something that spoils character.

>>Trust me, if everyone learns Sanskrit the culture among the people will change and it would only be a matter of time before crimes such as corruption and rape stop completely. This is the advantage of learning a character and culture-building language,” Kamath argues.<<
=> This is the most hilarious claim of the article. Learning a language doesn't solve Corruption and rape, what solves or at least reduces them is institutional solutions of reducing Corruption like downsizing the mammoth government, reducing the chances to give and take graft and better deterrence using law and order. Kamath's claim is nothing but a cock and bulls story.

>>Once Sanskrit is learnt one gets the feeling of being a Bharatiya.<<
=> This is a dangerous majoritarian view. To me, my bharatiyate lies in the fact that I am a Kannadiga. Like Alooru Venkataraya told I realise my bharatiyate only through Kannada. Like Sanskrit fanatics, even Hindi fanatics use the same reasoning by arguing that learning Hindi gives one the feeling of being Bharatiya. Both are against diversity and the plural Idea of India.

>>“At no point in time am I trying to say that people should stop speaking their regional language or mother tongue. I am only saying that each one should learn Sanskrit in a bid to protect their own mother tongue. Take a closer look and you will find that our mother tongues have become a mix of English, Arabic and Persian,” he adds.<<
=> Teach everyone to read, write, speak Sanskrit and then make it official language and then mandate it's usage everywhere and then come back to say "At no point in time am I trying to say that people should stop speaking their regional language or mother tongue". The first set of actions will invariably result in marginalisation of all spoken languages. Hindi imposition which is done in a very similar way is already eating into most natural language registers where Kannada was present in Karnataka. For example, the railways, airport, banks, post offices, income tax, PF offices and the likes in Karnataka are slowly making way for Hindi and Kannada is being pushed out of these offices. This is exactly what will happen if Sanskrit is forced down the unwilling throats.
Everyone is free to learn any language based on their need but the problem starts when chauvinists who are having majoritarian world views start imposing one language, one religion, one identity in the name of patriotism, dharma and nation building. Every Indian who believes in plurality and linguistic equality should be careful about people who offer such ideas that lack pragmatism and empathy towards diversity.

ಭಾನುವಾರ, ಅಕ್ಟೋಬರ್ 13, 2013

ರಘುರಾಮ್ ರಾಜನ್ ಬಗ್ಗೆ ಎರಡು ವಿಷಯ, ಒಂದು ನಿರೀಕ್ಷೆ !

ಆರ್.ಬಿ.ಐ ಗವರ್ನರ್ ಆಗಿ ರಘುರಾಮ್ ರಾಜನ್ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ರಘುರಾಮ್ ರಾಜನ್ ಬಗ್ಗೆ ಬಹಳ ಅಪರೂಪದ ಮಾಹಿತಿಯುಳ್ಳ ಅಂಕಣ ಈ ತಿಂಗಳ ಕೆರವಾನ್ ಇಂಗ್ಲಿಶ್ ಪತ್ರಿಕೆಯಲ್ಲಿ ಬಂದಿದೆ. ಒಂದೆರಡು ವಿಶೇಷ ಅನ್ನಿಸಿದ ವಿಷಯಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳಲು ಈ ಪೋಸ್ಟ್.

ಮುಕ್ತ ಮಾರುಕಟ್ಟೆಯ ಕನ್ಸಂಪ್ಶನ್ ಆಧಾರಿತ ಅರ್ಥ ವ್ಯವಸ್ಥೆಯ ಈ ದಿನಗಳಲ್ಲಿ ಆರ್ಥಿಕ ಹಿನ್ನಡೆ, ರಿಸೆಶನ್ ತರಹದ್ದು ಬಂದಾಗ ಆಯಾ ದೇಶದ ಸೆಂಟ್ರಲ್ ಬ್ಯಾಂಕ್ (ನಮ್ಮ ಆರ್.ಬಿ.ಐ ತರಹದ್ದು) ಅರ್ಥ ವ್ಯವಸ್ಥೆಯಲ್ಲಿ ಒಂದಿಷ್ಟು ಕೈಯಾಡಿಸುವ ಕೆಲಸ ಮಾಡುತ್ತೆ. ಬಡ್ಡಿ ದರ ಕಡಿಮೆ ಮಾಡುವುದು, ಬ್ಯಾಂಕ್ ಗಳಿಗೆ ಸಾಲ ನೀಡಲು ಹಣ ದಂಡಿಯಾಗಿ ಸಿಗುವಂತೆ ಹಣ ಮುದ್ರಿಸುವುದು (ಅಮೇರಿಕದಲ್ಲಿ ಇದಕ್ಕೆ ಕ್ವಾಂಟಿಟೇಟಿವ್ ಈಸಿಂಗ್ ಅನ್ನುವ ಹೆಸರಿದೆ), ಹೀಗೆ ಹಲವು ಕ್ರಮಗಳ ಮೂಲಕ ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಿ ಆ ಮೂಲಕ ಆರ್ಥಿಕ ಚಟುವಟಿಕೆ ಹೆಚ್ಚಿಸಿ ಎಕನಾಮಿಯನ್ನು ಮೇಲೆತ್ತುವಂತಹ ಹೆಜ್ಜೆಗೆ ಮುಂದಾಗುತ್ತೆ. ರಘುರಾಮ್ ರಾಜನ್ 2005ರಲ್ಲಿ ಐ.ಎಮ್.ಎಫ್ ನ ಅಧ್ಯಕ್ಷರಾಗಿದ್ದಾಗ ಈ ರೀತಿ ಈಸಿ ಹಣದ ಹರಿವು ಕೆಲವೇ ಕಾಲದಲ್ಲಿ ಒಳಿತಿಗಿಂತ ಕೆಡುಕೇ ಹೆಚ್ಚು ಮಾಡುತ್ತೆ ಅನ್ನುವ ವಾದವನ್ನು ಮಂಡಿಸಿದರು. ಹಾಗೆ ಮಂಡಿಸಿದ್ದಾದರೂ ಎಲ್ಲಿ ಅಂತೀರ? ಅರ್ಥ ವ್ಯವಸ್ಥೆ ಮೇಲೆತ್ತಲು ಈಸಿ ಹಣ ಹರಿವು ದಂಡಿಯಾಗಿ ಹೆಚ್ಚಿಸಬೇಕು ಮತ್ತು ಬ್ಯಾಂಕುಗಳು ಕಡಿಮೆ ಬಡ್ಡಿಗೆ ದಂಡಿಯಾಗಿ ಸಾಲ ನೀಡಬೇಕು ಅನ್ನುವುದನ್ನು ಕಾರ್ಯರೂಪಕ್ಕೆ ತಂದಿದ್ದ ಮತ್ತು ಅದರಿಂದಲೇ ಅಮೇರಿಕದಲ್ಲಿ ಆ ಹೊತ್ತಲ್ಲಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದ ಅಮೇರಿಕದ ಫೆಡರಲ್ ರಿಸರ್ವ್ ಚೇರಮನ್ ಆಗಿದ್ದ ಅಲನ್ ಗ್ರೀನ್-ಸ್ಪ್ಯಾನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ !  "Has financial development made the world riskier?" ಅನ್ನುವ ಪೇಪರ್ ಪ್ರೆಸೆಂಟ್ ಮಾಡಿ ಮಾತಾಡಿದ ಅವರು ಗ್ರೀನ್-ಸ್ಪ್ಯಾನ್ ಅವರ ವಿರುದ್ದದ ತಮ್ಮ ನೇರ ನುಡಿಯಿಂದ ಸಾಕಷ್ಟು ಜನರ ವಿರೋಧ ಕಟ್ಟಿಕೊಂಡಿದ್ದರು. ಅದಾದ ಕೆಲವೇ ವರ್ಷದಲ್ಲಿ ಸುಲಭದ ಹಣ ತಂದೊಡ್ಡಿದ ತೊಂದರೆಯಿಂದ ಅಮೇರಿಕದ ಅತಿ ದೊಡ್ಡ ಬ್ಯಾಂಕ್ ಆಗಿದ್ದ ಲೇಮನ್ ಬ್ರದರ್ಸ್ ದಿವಾಳಿಯಾಗಿ ರಾಜನ್ ಅವರ ಮಾತುಗಳು ನಿಜವಾದಾಗ ಇಡೀ ಅಮೇರಿಕವೇ ಅವರ ಮುಂದಾಲೋಚನೆಗೆ, ಆರ್ಥಿಕ ಚಿಂತನೆಗೆ ತಲೆದೂಗಿತ್ತು.

ಭಾರತವೆನ್ನುವ ಒಲಿಗಾರ್ಕಿ !
ಅವರ ಆ ಭವಿಷ್ಯ ಇಂದು ಅವರನ್ನು ಆರ್.ಬಿ.ಐ ಗದ್ದುಗೆಯ ಹತ್ತಿರ ತರುವದರಲ್ಲಿ ಮುಖ್ಯ ಪಾತ್ರ ವಹಿಸಿತ್ತು. ಈಗ ಅವರು ಗವರ್ನರ್ ಆದ ಮೇಲೆ ಹಣಕಾಸು ಮಂತ್ರಿಯ ವಿರೋಧದ ನಡುವೆಯೂ ಬ್ಯಾಂಕ್ ಸಾಲದ ದರವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರ ನಡೆ ಹೇಗೆ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ ಅನ್ನುವುದು ಕಾದು ನೋಡಬೇಕಿದೆ. ಇದರ ಜೊತೆಯಲ್ಲೇ ಇತ್ತಿಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿರುವ ಇನ್ನೊಂದು ಅಂಶ ಹೊಸ ಬ್ಯಾಂಕ್ ಲೈಸೆನ್ಸ್ ನೀಡುವ ಕುರಿತಾದದ್ದು. ಅಂಚೆ ಇಲಾಖೆಯಿಂದ ಹಿಡಿದು, ರಿಲಾಯನ್ಸ್, ಟಾಟಾ, ಬಿರ್ಲಾವರೆಗೆ ಎಲ್ಲರೂ ಬ್ಯಾಂಕ್ ಲೈಸೆನ್ಸಿಗೆ ಅರ್ಜಿ ಹಾಕಿದ್ದಾರೆ. ಭಾರತದ ವ್ಯವಸ್ಥೆ ಯಾವತ್ತಿಗೂ ದೊಡ್ಡವರ ಪರವಿರುವ ಒಂದು ಒಲಿಗಾರ್ಕಿ (Oligarchy is a form of power structure in which power effectively rests with a small number of people. ) ಅನ್ನುವುದನ್ನು ಸಾಬೀತು ಪಡಿಸುವಂತೆ ರಿಲಾಯನ್ಸ್, ಟಾಟಾ ಬಿರ್ಲಾ ತರಹದ ದೊಡ್ಡಪ್ಪಗಳಿಗೆ ಆರ್.ಬಿ.ಐ ಬ್ಯಾಂಕ್ ಲೈಸೆನ್ಸ್ ಕೊಡಲಿ ಅನ್ನುವ ಒತ್ತಾಯ ಹಣಕಾಸು ಮಂತ್ರಿ ಚಿದಂಬರಂ ಅವರದ್ದಾಗಿದ್ದರೆ, ಭಾರತದ ಉದ್ಯಮ, ಉದ್ಯಮಶೀಲತೆ ಹೆಚ್ಚಿಸಲು ಉಳ್ಳವರಿಗಿರುವ ಹಣ, ಅಧಿಕಾರದ ಬಲವಿಲ್ಲದ ಚಿಕ್ಕ ಉದ್ಯಮಗಳು, ಸಂಸ್ಥೆಗಳು, ಉದ್ಯಮಿಗಳನ್ನು ಎತ್ತಿ ಹಿಡಿಯುವ, ಅವರ ಬೆಂಬಲಕ್ಕೆ ನಿಲ್ಲುವ ಹೆಜ್ಜೆ ಆರ್.ಬಿ.ಐ ಕೈಗೊಳ್ಳಬೇಕು ಅನ್ನುವ ಆಸೆ ರಾಜನ್ ಅವರಿಗಿದೆ ಅನ್ನುತ್ತೆ ಆ ಅಂಕಣ. ಮುಕ್ತ ಅರ್ಥ ವ್ಯವಸ್ಥೆಗೆ ತೆರೆದುಕೊಂಡ ನಂತರ ಅದರಿಂದ ಅತಿ ಹೆಚ್ಚು ಲಾಭ ಪಡೆದವರು ಯಾರು ಎಂದು ಗಮನಿಸಿದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿದ್ದ ದೊಡ್ಡ ದುಡ್ಡಿನ ಅದೇ ಗುಂಪು ಅನ್ನುವುದು ಬಹಳ ಸ್ಪಷ್ಟವಾಗಿ ಕಾಣುತ್ತೆ. ಎಲ್ಲೋ ಐಟಿ ಉದ್ಯಮದ ಇನ್-ಫೋಸಿಸ್ ತರಹದ ಕೆಲವು exceptions ಕಾಣಿಸಬಹುದು. ಆದರೆ ಬೈ ಅಂಡ್ ಲಾರ್ಜ್ ಮುಕ್ತ ಮಾರುಕಟ್ಟೆ ಭಾರತದಲ್ಲಿ ಅದೇ ಹಳೆಯ ದೊಡ್ಡ ಉದ್ಯಮಿಗಳು ಇನ್ನಷ್ಟು ದೊಡ್ಡವರಾಗಲು ಸಹಾಯ ಮಾಡಿದೆ ಹೊರತು ಚಿಕ್ಕ, ಮಧ್ಯಮ ಗಾತ್ರದ ನೂರಾರು, ಸಾವಿರಾರು ಸಂಸ್ಥೆಗಳನ್ನು ಬೆಳೆಸುವ ಉದ್ಯಮಶೀಲತೆ ತೋರಿಲ್ಲ. ಅದನ್ನು ರಾಜನ್ ಬದಲಿಸಿ ತೋರಿಸಬಲ್ಲರಾ ಕಾದು ನೋಡಬೇಕು.

ಹಿಂದಿ ಹೇರಿಕೆ ನಿಲ್ಲಲಿ
ಇದೆಲ್ಲದರ ಜೊತೆ ಆರ್.ಬಿ.ಐ ಗವರ್ನರ್ ಮಾಡಬೇಕಿರುವ ಇನ್ನೊಂದು ಮುಖ್ಯ ಕೆಲಸವೆಂದರೆ ಭಾರತದಲ್ಲಿ ಫೈನಾನ್ಶಿಯಲ್ ಇನ್-ಕ್ಲೂಶನ್ ಕೆಲಸ ಮಾಡಲು ಸಾಧ್ಯವಾಗುವಂತೆ ಭಾರತದ ಎಲ್ಲ ಭಾಶೆಗಳಲ್ಲಿ ಬ್ಯಾಂಕಿಂಗ್, ಶೇರು ಮಾರುಕಟ್ಟೆ, ವಿಮೆ ಸೇರಿದಂತೆ ಎಲ್ಲ ರಂಗದ ಚಟುವಟಿಕೆಗಳನ್ನು ನಡೆಸುವುದಕ್ಕೆ ಒತ್ತು ಕೊಡುವುದು. ಇದರ ಜೊತೆ ಹಿಂದಿ ಹೇರಿಕೆಯ ಇವತ್ತಿನ ಭಾಷಾ ನೀತಿಗೆ ರಾಜನ್ ಮೊದಲು ಎಳ್ಳು-ನೀರು ಬಿಟ್ಟು ಆಯಾ ರಾಜ್ಯದಲ್ಲಿ ಅಲ್ಲಿನ ನುಡಿಯಲ್ಲೇ ಎಲ್ಲ ಹಂತದ ಆರ್ಥಿಕ ವ್ಯವಹಾರ ನಡೆಸಲಾಗುವಂತೆ ಸ್ಥಳೀಯ ಭಾಷೆಯನ್ನು ಕಡ್ಡಾಯಗೊಳಿಸುವ ಕೆಲಸ ಮಾಡಲಿ. ಹಿಂದಿ ಹೇರಿಕೆಯನ್ನು ವಿರೋಧಿಸಿ ಭಾರತದ ಭಾಷಾ ವೈವಿಧ್ಯತೆಯನ್ನು ತಕ್ಕ ಮಟ್ಟಿಗೆ ಉಳಿಸಿದ ತಮಿಳರ ನಡುವಿಂದಲೇ ಎದ್ದು ಬಂದ ರಾಜನ್ ಆ ಕೆಲಸ ಮಾಡಲಿ. ಅದು ಅವರು ಆರ್.ಬಿ.ಐ ಗವರ್ನರ್ ಆಗಿ ಭಾರತ ಒಕ್ಕೂಟಕ್ಕೆ ನೀಡುವ ಅತಿ ದೊಡ್ಡ ಕೊಡುಗೆಯಾದೀತು.

ಬುಧವಾರ, ಅಕ್ಟೋಬರ್ 9, 2013

ಹೈದರಾಬಾದ್ ಕರ್ನಾಟಕಕ್ಕೂ ರಾಜ್ಯಪಾಲರಿಗೂ ಏನ್ ಸಂಬಂಧ?

ಹಳೆ ಮಾತು: ಇಮಾಮ್ ಸಾಬಿಗೂ ಗೋಕುಲಾಶ್ಟಮಿಗೂ ಏನ್ ಸಂಬಂಧ?
ಹೊಸ ಮಾತು: ಹೈದರಾಬಾದ್ ಕರ್ನಾಟಕಕ್ಕೂ ರಾಜ್ಯಪಾಲರಿಗೂ ಏನ್ ಸಂಬಂಧ?

ವಿಶಯ ಏನಂದ್ರೆ, ಹೈದರಾಬಾದ್ ಕರ್ನಾಟಕಕ್ಕೆ ಕೊಡಲಾಗಿರುವ 371ಜೆ ವಿಧಿಯ ಅನುಷ್ಟಾನದ ಮೇಲ್ವಿಚಾರಣೆ ನಡೆಸುವ ಅಭಿವೃದ್ದಿ ಮಂಡಳಿಗೆ ರಾಜ್ಯಪಾಲರು ಅಧ್ಯಕ್ಷರಂತೆ ! ರಾಜ್ಯಪಾಲರು ಕರ್ನಾಟಕದ ಜನರಿಂದ ಆಯ್ಕೆಯಾದವರಾ? ಹೈದರಾಬಾದ್ ಕರ್ನಾಟಕ ಭಾಗದವರಾ? ಅಲ್ಲಿಯ ಸಮಸ್ಯೆಗಳ ಬಗ್ಗೆ ಅರಿತವರಾ? ಇದಾವುದು ಅಲ್ಲದಿರುವಾಗ ಈ ಮಂಡಳಿಯ ನಾಯಕತ್ವ  ಉತ್ತರಪ್ರದೇಶದಿಂದ ಬಂದ ರಾಜ್ಯಪಾಲರಿಗೆ ಕೊಡುವುದು ಪ್ರಜಾಪ್ರಭುತ್ವದ ಅಣಕವೇ ಸರಿ. ಹೈದರಾಬಾದ್ ಕರ್ನಾಟಕದಲ್ಲಿ ಇನ್ನು ಮೇಲೆ ಕರ್ನಾಟಕ ಸರ್ಕಾರವೇನಿದ್ದರೂ ಹೆಸರಿಗೆ ಮಾತ್ರ, ಅಲ್ಲಿ ನಡೆಯೋದು ರಾಜಭವನದ ದರ್ಬಾರ್. ಅದರೊಂದಿಗೆ ಆ ಭಾಗದಲ್ಲಿ ರಾಶ್ಟ್ರಪತಿ ಆಡಳಿತ ಇನ್ನೊಂದು ಹೆಸರಲ್ಲಿ ಶುರುವಾದಂತಿದೆ.  ಒಂದು ಚೂರು ರೊಟ್ಟಿ ಎಸೆದು ಜನರನ್ನು ಮರಳು ಮಾಡಿ ಇಡೀ ಹೈದರಾಬಾದ್ ಕರ್ನಾಟಕವನ್ನು ಕೇಂದ್ರದ ಹಿಡಿತಕ್ಕೆ ತೆಗೆದುಕೊಳ್ಳುವುದು ಅಂದರೆ ಇದೇ ಏನೋ. ಸ್ವಯಂ ಆಡಳಿತದಲ್ಲಿ ನಂಬಿಕೆ ಇರುವ ಎಲ್ಲ ಕನ್ನಡಿಗರೂ  ಈ ನಾಚಿಕೆಗೇಡಿನ ವಿಷಯವನ್ನು ಖಂಡಿಸಬೇಕು.

ಮಂಗಳವಾರ, ಅಕ್ಟೋಬರ್ 8, 2013

ಡಿಯರ್ ದೆಹಲಿ, ತೆಲುಗರನ್ನು ಅವರ ಪಾಡಿಗೆ ಇರಲು ಬಿಡಿ !

ಮುಖ್ಯಮಂತ್ರಿಯಾಗಬೇಕು ಅನ್ನುವ ಹುಚ್ಚಿನ ಕೆಲವು ರಾಜಕಾರಣಿಗಳು ಹಚ್ಚಿದ ಬೆಂಕಿಗೆ ಇಡೀ ತೆಲುಗು ದೇಶವೇ ಒಡೆದ ಮನೆಯಾಗಿದೆ. ಕಳೆದ 70 ದಿನಗಳಿಂದ ಆಂಧ್ರಪ್ರದೇಶದಲ್ಲಿ ಜನಜೀವನ ದಿಕ್ಕೆಟ್ಟಿದೆ. ತೆಲಂಗಾಣದ ಪರ ವಿರೋಧವಿರುವ ಎಲ್ಲರಿಗೂ ಸಮಾಧಾನ ತರುವಂತಹ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತಹ ಯಾವುದೇ ಕ್ರಮ ಕೈಗೊಳ್ಳದೇ, 2014ರಲ್ಲಿ ತೆಲಂಗಾಣ ರಾಜ್ಯದ ಹೆಸರಲ್ಲಿ  ಎಷ್ಟು ಎಮ್.ಪಿ ಸೀಟು ಗೆಲ್ಲಬಹುದು ಅನ್ನುವ ಲೆಕ್ಕಾಚಾರದಲ್ಲಿ, ಯು.ಪಿ.ಎ ಸರ್ಕಾರ ಹೀನವಾದ ಮತ ಬ್ಯಾಂಕ್ ರಾಜಕೀಯಕ್ಕೆ ಕೈ ಹಾಕಿ ತೆಲುಗರನ್ನು ಒಡೆದು ಆಳುವ ಕೆಲಸಕ್ಕೆ ಮುಂದಾಗಿದೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತೆಲಂಗಾಣಕ್ಕೆ ಸಂಬಂಧಿಸಿದ ನಿರ್ಣಯ ಆಂಧ್ರದ ಅಸೆಂಬ್ಲಿಯಲ್ಲಿ ಪಾಸಾಗುವ ಅಗತ್ಯವಿಲ್ಲ, ಸಂಸತ್ತಿನ ಮುದ್ರೆಯಿದ್ದರೆ ಸಾಕು ಅನ್ನುವ ನಿಲುವು ವ್ಯಕ್ತಪಡಿಸಿದೆ. ಅಲ್ಲಿಗೆ ತೆಲುಗರು ಒಂದಾಗಿರಬೇಕೋ, ಒಡೆದು ಬೇರೆಯಾಗಬೇಕೋ ಅನ್ನುವ ನಿರ್ಣಯ ಕೈಗೊಳ್ಳಲು ತೆಲುಗರ ಒಪ್ಪಿಗೆಯೇ ಬೇಡ ಅನ್ನುವ ಸ್ಥಿತಿ ಕಣ್ಣೆದುರಿದ್ದು, ಇದಕ್ಕೆ ಬೆಂಬಲವಾಗಿ ಸಂವಿಧಾನದ ಆರ್ಟಿಕಲ್ 3 ನಿಂತಿದೆ ಅನ್ನುವುದು ಭಾರತ ಒಕ್ಕೂಟದ ಸಂವಿಧಾನಕ್ಕೆ ಒಕ್ಕೂಟ ಮಾದರಿಯ ತಿದ್ದುಪಡಿಯ ಅಗತ್ಯವನ್ನು ಸಾರಿ ಹೇಳುತ್ತಿದೆ.

ಏನು ಹೇಳುತ್ತೆ ಆರ್ಟಿಕಲ್ 3?
ಭಾರತ ಒಕ್ಕೂಟದಲ್ಲಿ ಹೊಸ ರಾಜ್ಯಗಳನ್ನು ಹುಟ್ಟು ಹಾಕುವುದು, ಇರುವ ರಾಜ್ಯಗಳನ್ನು ಬದಲಾಯಿಸುವುದು, ಹೊಸ ಹೆಸರಿಡುವುದು ಇತ್ಯಾದಿಗಳ ಬಗ್ಗೆ ಆರ್ಟಿಕಲ್ 3 ಮಾತನಾಡುತ್ತೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಕಾನೂನು 1947ರ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದ್ದ ಕಳವಳಗಳ ಆಧಾರದ ಮೇಲೆ ಮಾಡಿಕೊಂಡಿರುವ ಕಾನೂನಾಗಿದ್ದು, ಇವತ್ತಿಗೆ ಅದನ್ನು ಬದಲಾಯಿಸಬೇಕಾದ ಅಗತ್ಯವಿದೆ ಅನ್ನುವುದು ಕಾಣಿಸುತ್ತೆ. ಆರ್ಟಿಕಲ್ 3 ಹೀಗೆ ಹೇಳುತ್ತೆ:
Formation of new States and alteration of areas, boundaries or names of existing States: Parliament may by law
(a) form a new State by separation of territory from any State or by uniting two or more States or parts of States or by uniting any territory to a part of any State;
(b) increase the area of any State;
(c) diminish the area of any State;
(d) alter the boundaries of any State;
(e) alter the name of any State; Provided that no Bill for the purpose shall be introduced in either House of Parliament except on the recommendation of the President and unless, where the proposal contained in the Bill affects the area, boundaries or name of any of the States, the Bill has been referred by the President to the Legislature of that State for expressing its views thereon within such period as may be specified in the reference or within such further period as the President may allow and the period so specified or allowed has expired Explanation I In this article, in clauses (a) to (e), State includes a Union territory, but in the proviso, State does not include a Union territory Explanation II The power conferred on Parliament by clause (a) includes the power to form a new State or Union territory by uniting a part of any State or Union territory to any other State or Union territory

ಇದರ ಅರ್ಥ ಯಾವುದೇ ರಾಜ್ಯವನ್ನು ಒಡೆದು ಚೂರಾಗಿಸುವುದು, ಇನ್ನೊಂದಕ್ಕೆ ಸೇರಿಸುವುದು, ಹೆಸರಿಡುವುದು ಹೀಗೆ ಮನಬಂದಂತೆ ಬದಲಾಯಿಸುವ ಹಕ್ಕು ಕೇವಲ ಸಂಸತ್ತಿಗಿದೆ. ಯಾವ ರಾಜ್ಯದಿಂದ ಇನ್ನೊಂದು ರಾಜ್ಯ ಸ್ಥಾಪಿಸುವಾಗ ಮೂಲರಾಜ್ಯದ ವಿಧಾನಸಭೆಯ ಅಭಿಪ್ರಾಯ ಕೇಳಬಹುದು, ಆದರೆ ಅಲ್ಲಿ ಹೊಸ ರಾಜ್ಯಕ್ಕೆ ಒಪ್ಪಿಗೆ ಸೂಚಿಸಿ ನಿರ್ಣಯ ಪಾಸಾಗಬೇಕು ಅನ್ನುವ ಕಟ್ಟಳೆಯೇನು ಇಲ್ಲ. ಅಲ್ಲಿಗೆ ತೆಲಂಗಾಣ ರಾಜ್ಯ ಮಾಡುವ ನಿರ್ಧಾರಕ್ಕೆ ಆಂಧ್ರ ವಿಧಾನಸಭೆಯ ಅನಿಸಿಕೆ ಕೇಳುವುದು ಕೇವಲ ಕಾಟಾಚಾರವೇ ಹೊರತು ಅದರಾಚೆ ಅದಕ್ಕೆ ಯಾವುದೇ ಮಹತ್ವವಿಲ್ಲ. ಆರ್ಟಿಕಲ್ 3ರ ಈ ನಿಯಮವೇ ಯು.ಪಿ.ಎ ಸರ್ಕಾರಕ್ಕೆ ಆಂಧ್ರದಲ್ಲಿ ರೊಚ್ಚಿಗೆದ್ದಿರುವ ತೆಲುಗರ ಭಾವನೆಗಳಿಗೆ ಕವಡೆ ಕಿಮ್ಮತ್ತು ಕೊಡದೇ ಮುಂದುವರೆಯುವ ಧೈರ್ಯ ಕೊಟ್ಟಿರುವುದು. ಇದು ಎಂತಹ ಒಕ್ಕೂಟ ವಿರೋಧಿ ಕಾನೂನಲ್ಲವೇ?

ನಿಮ್ಮ ಮನೆಯ ಜಗಳ ನೀವು ಬಗೆಹರಿಸಿಕೊಳ್ಳಬೇಕೋ ದೂರದ ದೆಹಲಿಯೋ?

8 ಕೋಟಿ ತೆಲುಗರ ನಡುವೆ ಎದ್ದಿರುವ ವಿವಾದ ಬಗೆಹರಿಸಿಕೊಳ್ಳಲು ಅವರಿಗೆ ಸಂಬಂಧವೇ ಇರದವರು ನಿರ್ಣಯ ಕೈಗೊಳ್ಳಬಹುದು ಮತ್ತು ತೆಲುಗರ ಪ್ರತಿನಿಧಿಯಾದ ಆಂಧ್ರದ ವಿಧಾನಸಭೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಮಾಡಬಹುದು ಅನ್ನುವುದು ಪ್ರಜಾಪ್ರಭುತ್ವವನ್ನೇ ಅಣಕಿಸುವಂತಹ ಹೆಜ್ಜೆಯೇ ಸರಿ. ರಾಜ್ಯಗಳು ಭಾರತದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯ ವಿರುದ್ದ ದನಿ ಎತ್ತುತ್ತ ಹೋಗುತ್ತಿದ್ದಂತೆಯೇ ಅವರನ್ನು ಹಣಿದು ತೆಕ್ಕೆಯಲ್ಲಿಟ್ಟುಕೊಳ್ಳಲು ದೊಡ್ಡ ರಾಜ್ಯಗಳನ್ನು ಒಡೆದು ಚಿಕ್ಕದಾಗಿಸಿ ಕೇಂದ್ರದ ಬಲ ಹೆಚ್ಚಿಸಬೇಕು ಅನ್ನುವ ಚಿಂತನೆ ಬಿಜೆಪಿ, ಕಾಂಗ್ರೆಸ್ ಎರಡರಲ್ಲೂ ಇದೆ. ಹೀಗಿರುವಾಗ ದೆಹಲಿಯಲ್ಲಿ ಅಧಿಕಾರ ಹಿಡಿಯುವ ಈ ಪಕ್ಷಗಳು ಮನಸು ಮಾಡಿದರೆ ಎಲ್ಲ ಭಾಷಾವಾರು ರಾಜ್ಯಗಳನ್ನು ಒಡೆದು ಚಿಕ್ಕದಾಗಿಸಿ ದೆಹಲಿಯ ಸಾಮಂತರಾಗಿಸುವುದು ಹೆಚ್ಚು ಕಷ್ಟವೇನಲ್ಲ, ಯಾಕೆಂದರೆ 1950ರ ಸಂವಿಧಾನ ಅಂತಹದೊಂದು ಕೆಲಸಕ್ಕೆ ಅವಕಾಶವನ್ನು ಕಲ್ಪಿಸಿದೆ. ಸಂಸತ್ತಿನಲ್ಲಿರುವ ಪ್ರಾದೇಶಿಕ ಪಕ್ಷಗಳೆಲ್ಲವೂ ಈ ಬಗ್ಗೆ ಎಚ್ಚರಿಕೆಯಿಂದಿದ್ದು ರಾಜ್ಯಗಳ ಹಕ್ಕು ಉಳಿಸಿಕೊಳ್ಳಲು ಮುಂದಾಬೇಕು, ಆರ್ಟಿಕಲ್ 3ಕ್ಕೆ ತಿದ್ದುಪಡಿ ತಂದು ಯಾವುದೇ ರಾಜ್ಯದ ಸ್ವರೂಪ ಬದಲಾಯಿಸುವ ಹಕ್ಕು ಕೇವಲ ಆ ರಾಜ್ಯ ಜನರಿಗೆ, ಅವರ ಚುನಾಯಿತ ಪ್ರತಿನಿಧಿಗಳಿಗೆ ಇರುವಂತೆ ನೋಡಿಕೊಳ್ಳಬೇಕು.

ಕೊನೆಕಿಡಿ: ತೆಲುಗರ ಮಾತಿಗೆ ಬೆಲೆಯೇ ಇಲ್ಲದೇ ಬೇಕಾಬಿಟ್ಟಿ ತೆಲುಗು ದೇಶವನ್ನು ಒಡೆಯುವ ನಿರ್ಧಾರ ಕಂಡ ತೆಲುಗರಿಗೆ ಇಡೀ ಭಾರತವೇ ಅವರ ವಿರುದ್ದ ಸಂಚು ರೂಪಿಸಿದೆ ಅನ್ನಿಸಿದೆ. ಆದರೆ ತೆಲುಗರ ಮನೆಯ ವಿಷಯ ತೆಲುಗರೇ ಬಗೆಹರಿಸಿಕೊಳ್ಳಬೇಕು ಅನ್ನುವುದು ಅವರ ಪಾಲಿಗೆ ಸೆಲ್ಪ್ ರೂಲ್ ಆಗಿದ್ದು ಆ ಬಗ್ಗೆ ಭಾರತದ ಎಲ್ಲ ಭಾಷಿಕರು ಅವರ ಬೆಂಬಲಕ್ಕೆ ನಿಲ್ಲಬೇಕು.

Photo Source: https://twitter.com/Fight4UnitedAP/status/386757486994153472/photo/1 and http://dd508hmafkqws.cloudfront.net/sites/default/files/mediaimages/gallery/2013/Aug/954653_10151830224152160_457612235_n.jpg



ಬುಧವಾರ, ಜುಲೈ 10, 2013

ಆಹಾರ ಭದ್ರತೆ ಕಾಯ್ದೆ ಅನ್ನುವ ಹಸಿವಿನಾಟ !

ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆ ಸಾಕಷ್ಟು ವಸ್ತುನಿಷ್ಟವಾಗಿ ತನ್ನ ಕೆಲಸ ಮಾಡುತ್ತಿರುವ ಸಂಸ್ಥೆಗಳಲ್ಲೊಂದು. ಅಲ್ಲಿ ಹಿರಿಯ ಫೆಲೊ ಆಗಿರುವ ರಾಜೀವ್ ಕುಮಾರ್ ಅವರು ದಿ ಫೈನಾನ್ಶಿಯಲ್ ಎಕ್ಸ್-ಪ್ರೆಸ್ ಪತ್ರಿಕೆಯಲ್ಲಿ ಆಹಾರ ಭದ್ರತಾ ಕಾಯ್ದೆಯ ಬಗ್ಗೆ ಬರೆದಿದ್ದ ಒಂದು ಅಂಕಣ ಕನ್ನಡಕ್ಕೆ ಅನುವಾದ ಮಾಡಿ ನಿಮ್ಮೆದುರು ಇಡುತ್ತಿರುವೆ.
ಮೂಲ ಅಂಕಣ ಇಲ್ಲಿದೆ: Column: Hunger games
   
ಸುದ್ದಿವಾಹಿನಿಯೊಂದರ ನೇರಪ್ರಸಾರದಲ್ಲಿ ಕಾಂಗ್ರೆಸಿನ ಮುಖ್ಯ ವಕ್ತಾರ ಅಜಯ್ ಮಾಕೇನ್ ಬಡವರ ಬಗ್ಗೆ ಕಾಂಗ್ರೆಸಿಗಿರುವ ಕಾಳಜಿಯ ಬಗ್ಗೆ ಪ್ರಸ್ತಾಪಿಸುತ್ತ  2004ರಲ್ಲಿ ಆಹಾರ ಸಬ್ಸಿಡಿಯ ಗಾತ್ರ ಕೇವಲ 25,000 ಕೋಟಿ ರೂಪಾಯಿಯಾಗಿದ್ದರೆ ಯುಪಿಎ ಸರ್ಕಾರದ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಾಗ ಅದು 1,25,000 ಕೋಟಿ ರೂಪಾಯಿಗೆ ಏರಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಆಹಾರ ಸಬ್ಸಿಡಿಯ ಗಾತ್ರವನ್ನು ಐದು ಪಟ್ಟು ಹೆಚ್ಚಿಸುವುದರ ಮೂಲಕ ಬಡವರ ಬಗ್ಗೆಯಿರುವ ಕಾಳಜಿಯನ್ನು ಕಾಂಗ್ರೆಸ್ ಪಕ್ಷ ನಿಸ್ಸಂದೇಹವಾಗಿ ಸಾಬೀತು ಮಾಡಿದೆ ಅನ್ನುವುದು ಅವರ ವಾದವಾಗಿತ್ತು. ಇವತ್ತು ಭಾರತದ ರಾಜಕೀಯದಲ್ಲಿ, ಆರ್ಥಿಕ ಅಶಿಸ್ತು ಒಂದು ಮುಚ್ಚಿಡಬೇಕಾದ ವಿಷಯವಾಗಿರದೇ ಎದೆ ತಟ್ಟಿ ಹೊಗಳಿಕೊಳ್ಳುವ ವಿಷಯವಾಗಿದೆ. ಇದು ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು. ಅದಿರಲಿ, ಈ ಹೊತ್ತಲ್ಲಿ ಕೇಳಿಕೊಳ್ಳಬೇಕಿರುವ ಪ್ರಶ್ನೆ ಒಂದೇ. ಆಹಾರ ಭದ್ರತೆ ಕಾಯ್ದೆ ನಿಜಕ್ಕೂ ಬಡವರ ಸಹಾಯಕ್ಕೆ ಬರಲಿದೆಯೋ ಅಥವಾ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಲಿದೆಯೋ ಅನ್ನುವುದು. 

ಇವತ್ತು ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೂ ಆಹಾರದ ಕೊರತೆಯಿಂದ ಭಾರತೀಯರು ಹಸಿವಿನಿಂದ ಒದ್ದಾಡಿ ಸಾಯುವ ಸ್ಥಿತಿಯಲ್ಲಿಲ್ಲ ಅನ್ನುವುದು ಸಾಮಾನ್ಯ ಜ್ಞಾನ. ಹಾಗೆಂದ ಮಾತ್ರಕ್ಕೆ ಕೊರತೆಯೇ ಇಲ್ಲವೇ? ಇದೆ, ಖಂಡಿತ ಇದೆ. ಆದರೆ ಕೊರತೆ ಇರುವುದು ಹಸಿವು ಇಂಗಿಸಿಕೊಳ್ಳುವಲ್ಲಲ್ಲ, ಕೊರತೆ ಇರುವುದು ಪೌಷ್ಟಿಕಾಂಶ, ತರಕಾರಿ, ಹಣ್ಣು, ಮೊಟ್ಟೆ,ಮಾಂಸದಂತಹ ವಿಷಯದಲ್ಲಿ. ಯಾಕೆಂದರೆ ಅವುಗಳ ಬೆಲೆ ಬಡವರ ಕೈಗೆಟುಕದಷ್ಟು ಮೇಲಿದೆ. ಈ ಕೊರತೆಗೆ ಕಾರಣ ಭಾರತದಲ್ಲೆಲ್ಲೂ ಬಡವರಿಗೆ ಅಕ್ಕಿ-ಗೋಧಿಯಂತಹ ಕಾಳು ಸಿಗದಿರುವುದರಿಂದಂತೂ ಖಂಡಿತ ಅಲ್ಲ. ಹಾಗೇನಾದರೂ ಅಕ್ಕಿ-ಗೋಧಿಯಂತಹ ಆಹಾರದ ಕೊರತೆಯೇ ಇದ್ದಿದ್ದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಲಕ್ಷಾಂತರ ಟನ್ ಆಹಾರಧಾನ್ಯಗಳು ಹಾಳಾಗಿ ಹೋಗುತ್ತಿರುವ ಕಾರಣಕ್ಕೆ ಜನಪ್ರತಿನಿಧಿಗಳು ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದರು. ಆಹಾರ ನಿಗಮ ಹೆಚ್ಚಿನ ಬೆಲೆಗೆ ರೈತರಿಂದ ಧಾನ್ಯ ಕೊಳ್ಳುವ ಆಯ್ಕೆ ಕಣ್ಣೆದುರು ಇರುವಾಗ ಆಹಾರ ಧಾನ್ಯವೊಂದನ್ನು ಬಿಟ್ಟು ಇನ್ನಾವುದನ್ನು ಬೆಳೆಯುವ ಗೋಜಿಗೆ ರೈತರು ಹೋಗದಿರುವ ವಾತಾವರಣ ಹುಟ್ಟಲಿದೆ. ಈಗಾಗಲೇ ಕೃಷಿ ಕ್ಷೇತ್ರದ ಪೂರೈಕೆಯ ಕೊಂಡಿಯಲ್ಲಿರುವ ಏರುಪೇರು ಇನ್ನು ಹೆಚ್ಚುವ ಮತ್ತು  ಹೆಚ್ಚಿನ ಬೇಡಿಕೆಯಿರುವ ಆಹಾರ ಧಾನ್ಯವಲ್ಲದ ಇತರೇ ಆಹಾರಗಳ ಮೇಲಿನ ಹಣದುಬ್ಬರ ಕೈಮೀರುವ ಎಲ್ಲ ಅಪಾಯಗಳು ನಮ್ಮ ಕಣ್ಣ ಮುಂದಿವೆ. ಇದರ ನೇರ ಪರಿಣಾಮವಾಗಿ ಪೌಷ್ಟಿಕಾಂಶ, ತರಕಾರಿ, ಹಣ್ಣು, ಮೊಟ್ಟೆ,ಮಾಂಸದಂತಹ ಯಾವ ಆಹಾರಗಳ ಕೊರತೆ ಬಡವರು ಅನುಭವಿಸುತ್ತಿದ್ದರೋ ಅವರಿಗೆ ಈ ವಸ್ತುಗಳು ಇನ್ನಷ್ಟು ದುರ್ಲಭವಾಗುವುದರ ಜೊತೆ ಅಪೌಷ್ಟಿಕತೆಯ ಸಮಸ್ಯೆ ಎದುರಿಸಬೇಕಾಗಿ ಬರಬಹುದು ಮತ್ತು ಅದಕ್ಕೆ ನೇರ ಹೊಣೆ ಆಹಾರ ಭದ್ರತೆ ಕಾಯ್ದೆಯೇ ಆಗಲಿದೆ.

ಆದರೆ ಇದೊಂದೇ ಕೆಟ್ಟ ಪರಿಣಾಮವಲ್ಲ. ಆಹಾರ ಭದ್ರತೆಯ ಪರ ಇರುವ ಎಲ್ಲರಿಗೂ ತಿಳಿದಿರುವ ಒಂದು ಅಂಶವೆಂದರೆ ಭಾರತದ ಕಡು ಬಡವರು ಸಂಪೂರ್ಣವಾಗಿ ಪಡಿತರ ವ್ಯವಸ್ಥೆಯ ಆಚೆಯೇ ಇದ್ದಾರೆ ಅನ್ನುವುದು. ಹೆಚ್ಚಿನ ಪ್ರಮಾಣದ ಈ ಕಡು ಬಡವರು ಮುಕ್ತ ಮಾರುಕಟ್ಟೆಯಲ್ಲೇ ಆಹಾರ ಕೊಂಡು ತಮ್ಮ ಹೊಟ್ಟೆ ಹೊರೆಯಬೇಕಾದ ಸ್ಥಿತಿಯಲ್ಲಿದ್ದಾರೆ. ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ದಿನಗೂಲಿಗಳು ಸರ್ಕಾರದ ಭ್ರಷ್ಟಾಚಾರ ತುಂಬಿರುವ, ಸೋರಿಕೆಯೇ ತುಂಬಿರುವ ಪಡಿತರ ವ್ಯವಸ್ಥೆಯ ಆಚೆಯೇ ಇದ್ದಾರೆ. ಇಂದಿನ ಪಡಿತರ ವ್ಯವಸ್ಥೆಯು ಅಸಂಘಟಿತ ಜನರಿಗಿಂತ ಸಂಘಟಿತ ಜನರ ಪರವಾಗಿದೆ. ಈ ಕಡುಬಡವರು ತಮ್ಮ ದಿನ ನಿತ್ಯದ ಆಹಾರ ಧಾನ್ಯಗಳ ಅಗತ್ಯ ಈಡೇರಿಸಿಕೊಳ್ಳಲು ಇರುವ ಹಾದಿ ಮುಕ್ತ ಮಾರುಕಟ್ಟೆಯೊಂದೇ ಆಗಿರುವಾಗ ಆಹಾರ ಭದ್ರತೆ ಕಾಯ್ದೆಯಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಳವಾಗುವ ಬೆಲೆಯ ಹೊಡೆತಕ್ಕೆ ಸಿಲುಕಲಿದ್ದಾರೆ. ಯಾಕೆಂದರೆ ಆಹಾರ ನಿಗಮ ಹೆಚ್ಚೆಚ್ಚು ಧಾನ್ಯ ಖರೀದಿಸಿ ಗೋದಾಮಿಗೆ ಸಾಗಿಸುತ್ತಿದ್ದಂತೆಯೇ ಉಂಟಾಗುವ ಪೂರೈಕೆಯ ಕೊರತೆಯಿಂದಾಗಿ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಯೇರುವುದು ಖಚಿತ. ಇದರಿಂದ ಅತಿ ಹೆಚ್ಚು ತೊಂದರೆಗೊಳಗಾವುದು ಕಡುಬಡವರೇ ಅನ್ನುವುದು ವಾಸ್ತವ. ಪರಿಸ್ಥಿತಿ ಹೀಗಿದ್ದಾಗಲೂ ಬಡವರ ಏಳಿಗೆಗಾಗಿ ದುಡಿದಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಚಾರಕ್ಕಿಳಿಯಲಿದೆ !

ಎಲ್ಲಕ್ಕಿಂತ ಅಚ್ಚರಿಯೆಂದರೆ ಇದೆಲ್ಲ ಮನ್ ಮೋಹನ್ ಸಿಂಗ್, ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಸಿ.ರಂಗರಾಜನ್ ಮತ್ತು ರಘುರಾಮ್ ರಾಜನ್ (ಐ.ಎಮ್.ಎಫ್ ನ ಮಾಜಿ ಮುಖ್ಯ ಆರ್ಥಿಕ ತಜ್ಞ) ರಂತಹ ಆರ್ಥಿಕ ಶಿಸ್ತಿನ ತಿಳುವಳಿಕೆ ಇರುವ ಜನರ ಕಣ್ಣೆದುರಲ್ಲೇ ನಡೆಯುತ್ತಿದೆ ಅನ್ನುವುದು. ಈ ಪಟ್ಟಿಗೆ ನಾನು ಚಿದಂಬರಂರಂತಹ ಅತೀ ಚಾಣಾಕ್ಷ ರಾಜಕಾರಣಿಯನ್ನು ಸೇರಿಸಲ್ಲ. ಯಾಕೆಂದರೆ ಅವರು 2008ರ ಫೆಬ್ರವರಿ ಬಜೆಟಿನಲ್ಲಿ ಸಾರ್ವಜನಿಕ ಖರ್ಚು-ವೆಚ್ಚ ಜಿಡಿಪಿಯ 3.5% ಅಂಶದಷ್ಟು ಹೆಚ್ಚಾಗಲು ಬಿಟ್ಟಿದ್ದರು ಮತ್ತು ಅದು ಅಗಾಧ ಪ್ರಮಾಣದ ವಿತ್ತೀಯ ಕೊರತೆಗೆ ಕಾರಣವಾಯಿತು. ಆದರೆ 2009ರ ಚುನಾವಣೆಯಲ್ಲಿ ಅದೇ ಯು.ಪಿ.ಎ ಕೈ ಹಿಡಿದು ಎರಡನೆಯ ಬಾರಿ ಅಧಿಕಾರದ ಗದ್ದುಗೆಗೆ ತಂದು ನಿಲ್ಲಿಸಿತು. ಆದರೆ ಆ ಆರ್ಥಿಕ ಅಶಿಸ್ತಿನ ಫಲವನ್ನು ನಾವು ಇವತ್ತಿಗೂ ಉಣ್ಣುತ್ತಿದ್ದೇವೆ. ಒಳ್ಳೆಯ ಆರ್ಥಿಕತೆಗೆ ಎಳ್ಳುನೀರು ಬಿಟ್ಟು ರಾಜಕೀಯ ಲಾಭ ಪಡೆಯುವತ್ತಲೇ ಎರಡನೆ ಯುಪಿಎ ಸರ್ಕಾರದ ಮೊದಲ ಮೂರು ವರ್ಷ ಕಳೆದು ಹೋಯಿತು. ಪರಿಣಾಮ? ಹತ್ತು ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿಗೆಯಾಗುತ್ತಿದೆ. 1991ರಿಂದ 1995ರ ನಡುವೆ ಹಣಕಾಸು ಸಚಿವಾಲಯದಲ್ಲಿ ಮನ್ ಮೋಹನ್ ಸಿಂಗ್ ಮತ್ತು ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಜೊತೆ ನಾನು ಕೆಲಸ ಮಾಡಿದ್ದೆ, ಆಗ ಅವರಿಬ್ಬರೂ ಸ್ಪರ್ಧೆಗೆ ಬಿದ್ದಂತೆ ಜನಪ್ರಿಯ ಯೋಜನೆಗಳನ್ನು ಘೋಷಿಸುವುದರಿಂದಾಗುವ ತೊಂದರೆಗಳ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆ ಎಂಬಂತೆ ಮಾತನಾಡುತ್ತಿದ್ದರು. ಎಲ್ಲ ಬಿಡಿ, ಕಮಿಶನ್ ಆಫ್ ಅಗ್ರಿಕಲ್ಚರ್ ಕಾಸ್ಟ್ ಅಂಡ್ ಪ್ರೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಗುಲಾಟಿಯವರೇ ಆಹಾರ ಭದ್ರತೆ ಕಾಯ್ದೆ ಅರ್ಥ ವ್ಯವಸ್ಥೆಯ ಮೇಲೆ, ತೆರಿಗೆ ಹಣದ ಮೇಲೆ ಉಂಟು ಮಾಡಲಿರುವ ಪರಿಣಾಮಗಳ ಬಗ್ಗೆ ಬಾರಿ ಬಾರಿ ಹೇಳಿದ್ದಾರೆ, ಆದರೆ ಅದೆಲ್ಲವೂ ಬೋರ್ಗಲ್ ಮೇಲೆ ನೀರು ಸುರಿದಂತಾಯಿತೇ ಹೊರತು ಯಾವ ಪ್ರಯೋಜನವೂ ಆಗಲಿಲ್ಲ. ಇಲ್ಲಿ ಆರ್ಥಿಕ ಶಿಸ್ತಿಗಿಂತಲೂ ಕಡುಬಡವರ ಮೇಲೆ ಉಂಟಾಗಲಿರುವ ಕೆಟ್ಟ ಪರಿಣಾಮಗಳು ಆಹಾರ ಭದ್ರತೆ ಕಾಯ್ದೆ ಪರವಾಗಿರುವವರು ಮತ್ತೊಮ್ಮೆ ಯೋಚಿಸುವಂತೆ ಮಾಡಲಿ ಎಂದು ಒತ್ತಿ ಒತ್ತಿ ಹೇಳಲು ಬಯಸುವೆ.

ಆಹಾರ ಭದ್ರತೆಯನ್ನು ಕಾನೂನಿನನ್ವಯ ಒಂದು ಹಕ್ಕಾಗಿಸಿದ ಖ್ಯಾತಿ ತನ್ನದು ಎಂದು ಸರ್ಕಾರ ಕೊಚ್ಚಿಕೊಳ್ಳುವ ಅವಕಾಶವನ್ನು ಆಹಾರ ಭದ್ರತೆ ಕಾಯ್ದೆ ಕಲ್ಪಿಸಿದೆ. ಇದು ನಿಜಕ್ಕೂ ವಿರೋಧಾಭಾಸದ ಪರಮಾವಧಿಯೆನ್ನದೇ ವಿಧಿಯಿಲ್ಲ. ಆಹಾರ ನನ್ನ ಹಕ್ಕು ಎಂದು ಹಕ್ಕು ಚಲಾಯಿಸುವ ಹಂತಕ್ಕೆ ಕಡು ಬಡವರು ಎಂದಿಗಾದರೂ ಹೋಗಬಹುದು ಎಂದು ನಿಜಕ್ಕೂ ನಾವ್ಯಾರಾದರೂ ವಾದ ಮಾಡಬಹುದೇ? ಶಿಕ್ಷಣ ಹಕ್ಕು ಕಾಯ್ದೆ ಬೀದಿ ಬದಿಯಲ್ಲಿರುವ ಮಕ್ಕಳನ್ನು, ಅಪಾಯದ ವಾತಾವರಣದಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕೆಲಸ ಬಿಡಿಸಿ ಶಾಲೆಗೆ ತರುವ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆಯೇ? ಮಾಹಿತಿ ಹಕ್ಕು ಕಾಯ್ದೆ ಸರ್ಕಾರಿ ವ್ಯವಹಾರಗಳನ್ನು ಪಾರದರ್ಶಕವಾಗಿಸುವ, ಹಗರಣ ಮತ್ತು ಕ್ರೋನಿ ಕ್ಯಾಪಿಟಲಿಸಂನಿಂದ ಮುಕ್ತಗೊಳಿಸುವ ಕೆಲಸ ಮಾಡುವಲ್ಲಿ ಗೆಲುವು ಕಂಡಿದೆಯೇ? ಯೋಗ್ಯವಾದ ಕೆಲಸಗಳನ್ನು ಹುಟ್ಟಿಸದೇ ಆರ್ಥಿಕ ಹಕ್ಕು ಕಲ್ಪಿಸುವ ಈ ಆಲೋಚನೆಗಳು ನಿಜಕ್ಕೂ ಹಿಡಿತಕ್ಕೆ ಸಿಗಲಾರದಂತವು. ಇವೆಲ್ಲವೂ ಶ್ರೇಷ್ಟ ಆರ್ಥಿಕ ತಜ್ಞರ ಕಣ್ಣಂಚಿನಲ್ಲೇ ನಡೆಯುತ್ತಿರುವುದು ನಮ್ಮ ಬಾಯಿಯನ್ನು ಕಟ್ಟಿ ಹಾಕಿದೆ.

ಕಾಂಗ್ರೆಸ್ ಪಕ್ಷ ಆಹಾರ ಹಕ್ಕು ಕಲ್ಪಿಸುವ ಈ ಹೊತ್ತಿನಲ್ಲೇ 2013ರ ಕೊನೆಯ ಮೂರು ತಿಂಗಳ ಅರ್ಥ ವ್ಯವಸ್ಥೆಯ ಬೆಳವಣಿಗೆಯ ದರ 4.8%ಕ್ಕೆ ಕುಸಿದಿದೆ. 2004ರಲ್ಲಿ ಯುಪಿಎ ಸರ್ಕಾರ ಬಂದಾಗ ಈ ದರ 8.1% ಇತ್ತು ಅನ್ನುವುದು ಈಗ ನೆನೆಯಲಷ್ಟೇ ಚೆಂದದ ವಿಷಯ. ಖಾಸಗಿ ಬಂಡವಾಳ ಹೂಡಿಕೆ ಹೆಚ್ಚು ಕಡಿಮೆ ನಿಂತು ಹೋಗಿದೆ. ಬಂಡವಾಳ ಒಳ ಹರಿವಿಗಿಂತ ಹೊರ ಹರಿವು ಹೆಚ್ಚಾಗಿದೆ. ಔದ್ಯೋಗಿಕ ಕ್ಷೇತ್ರದ ಬೆಳವಣಿಗೆ 10%ನಿಂದ 2%ಗೆ ಇಳಿದಿದೆ. ಇನ್ನೇನು ಸದ್ಯದಲ್ಲೇ ಸಾಕಷ್ಟು ಸಂಸ್ಥೆಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಕೆಲಸ ಶುರುವಾಗಲಿದೆ. ಹೊಸ ಉದ್ಯೋಗವಕಾಶಗಳು ಬತ್ತಿ ಹೋಗಿವೆ. 15 ವರ್ಷಗಳ ಆರ್ಥಿಕ ಬೆಳವಣಿಗೆಯ ನಂತರ ಕಡುಬಡವರು ಕೂಡಾ ತಲೆಯೆತ್ತಿ ಬಾಳುವತ್ತ ಹೆಚ್ಚು ಚಿಂತೆ ಮಾಡುತ್ತಿದ್ದಾರೆಯೇ ಹೊರತು ಸರ್ಕಾರ ನೀಡುವ ಪುಕ್ಕಟ್ಟೆ ಸೌಲಭ್ಯಗಳ ಬಗ್ಗೆಯಲ್ಲ ಅನ್ನುವುದು ಇವರಿಗೆ ಅರ್ಥವೇ ಆಗಿಲ್ಲ. ಪ್ರತಿ ತಿಂಗಳು ಹತ್ತು ಲಕ್ಷ ಕೆಲಸಗಳನ್ನು ಮುಂದಿನ ಹತ್ತು ವರ್ಷ ಹುಟ್ಟಿಸಿದಾಗಲಷ್ಟೇ ಅರ್ಥ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿರುವ ಯುವಕರಿಗೆ ಕೆಲಸ ಭದ್ರತೆ ಕಲ್ಪಿಸಬಹುದು ಅನ್ನುವುದು ನಮ್ಮ ನಾಯಕರಿಗೆ ಅರ್ಥವಾಗಬೇಕಿದೆ. ಉದ್ಯೋಗವಕಾಶಗಳು ಬತ್ತುತ್ತಿದ್ದಂತೆಯೇ ಈ ಯುವಕರು ನೇರವಾಗಿ ಉಗ್ರವಾದಿಗಳು, ಮೂಲಭೂತವಾದಿಗಳ ತೆಕ್ಕೆಗೆ ಬಂದು ಬೀಳಬಹುದು. ಭಾರತ ಒಕ್ಕೂಟದ ಸಾಮಾಜಿಕ ಮತ್ತು ಆರ್ಥಿಕ ಆರೋಗ್ಯವನ್ನು ಎಂದಿಗೂ ಸರಿಪಡಿಸಲಾಗದ ಇಂತಹದೊಂದು ಸಾಧ್ಯತೆ ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು.

ಯೋಜನಾ ಆಯೋಗ ಮುಚ್ಚುವುದು ಭಾರತಕ್ಕೆ ಒಳ್ಳೆಯದು

ಜುಲೈ 10ರ ಉದಯವಾಣಿಯಲ್ಲಿ ಬಂದ ಅಂಕಣ

ಶುಕ್ರವಾರ, ಮೇ 31, 2013

ಸಿಬಿಐ ಸ್ವಾಯತ್ತೆ ನೀಡಿದಾಕ್ಷಣ ಭ್ರಷ್ಟಾಚಾರ ಕಡಿಮೆಯಾಗಲ್ಲ !

CBI ಗೆ ಸ್ವಾಯತ್ತತೆ ಕೊಟ್ರೆ ಭ್ರಶ್ಟಾಚಾರ ನಿಲ್ಲುತ್ತೆ ಅನ್ನೋದು ಲೋಕಪಾಲ್ ಬಂದ ತಕ್ಷಣ ಭ್ರಶ್ಟಾಚಾರ ನಿಲ್ಲುತ್ತೆ ಅನ್ನುವಶ್ಟೇ ಪೆದ್ದು ಹೇಳಿಕೆ. ಈ ಬಗ್ಗೆ ನನ್ನ ಅಂಕಣ ಮೇ 31ರ ಉದಯವಾಣಿಯಲ್ಲಿ

ಮಂಗಳವಾರ, ಏಪ್ರಿಲ್ 23, 2013

ಮತ ಕೊಡುವ ಮುನ್ನ,, ಕೇಳಿ ಈ ಪ್ರಶ್ನೆಗಳನ್ನ..

ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲ ಪಕ್ಷಗಳು ಅಬ್ಬರದಿಂದ ಪ್ರಚಾರಕ್ಕಿಳಿದಿವೆ. ಸರಿ, ಮುಂದಿನ ಐದು ವರ್ಷ ಏನೇನ್ ಮಾಡ್ತೀವಿ ಅಂತ ಯಾರ್ ಯಾರು ಏನ್ ಹೇಳಿದ್ದಾರೆ ಅಂತ ಪ್ರತಿಯೊಬ್ಬರ ಪ್ರಣಾಳಿಕೆ ಮೇಲೂ ಕಣ್ಣಾಡಿಸಿದಾಗ ಹೆಚ್ಚಿನವುಗಳಲ್ಲಿ ಹಳೆ ಹೆಂಡ ಹೊಸ ಬಾಟ್ಲು ಅನ್ನುವಂತೆ ಅದದೇ ಹಳೆ ಭರವಸೆಗಳನ್ನೇ ಪಾಲಿಶ್ ಮಾಡಿ ಬಣ್ಣ ಹೊಡೆದು ಮುಂದೆ ಇಟ್ಟಂಗೆ ಕಾಣುತ್ತೆ. ಪಾಪುಲಿಸಂ ಅನ್ನು ಮೀರಿ ಕನ್ನಡ-ಕನ್ನಡಿಗರ ಬದುಕಿನ ವಿಷಯಗಳತ್ತ ಯಾರ್ ಏನ್ ಹೇಳಿದ್ದಾರೆ ಅಂತ ನೋಡಿದಾಗ ಇನ್ನು ನಿರಾಶೆಯಾಗುತ್ತೆ. ಹೆಚ್ಚಿನ ಪ್ರಣಾಳಿಕೆಯಲ್ಲಿ ಕನ್ನಡ ಅಂದ್ರೆ ಮತ್ತದೇ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಅದನ್ನ ಉರಸ್ತಿವಿ, ಇದನ್ನ ಮೆರೆಸ್ತಿವಿ ಅನ್ನೋ ಅದೇ ಉತ್ಸವಮೂರ್ತಿಯ ಯೋಚನೆಗಳೇ ಕಾಣುತ್ತಿವೆ. ಸಂಸ್ಕ್ರುತಿ, ಸಾಹಿತ್ಯ ಅನ್ನುವುದೆಲ್ಲ ಬೇಡ ಅಂತಲ್ಲ, ಆದರೆ ಊಟಕ್ಕೆ ಉಪ್ಪಿನಕಾಯಿಯಂತೆ ಇರಬೇಕಾದದ್ದು ಊಟಾನೇ ಆಗೋ ತರಹ ಇದ್ದರೆ ನಮ್ಮ ರಾಜಕೀಯ ನಾಯಕರಿಗೆ ಕನ್ನಡ, ಕನ್ನಡಿಗರ ಬದುಕಿನ ವಿಷಯಗಳು ಮತ ಗೆಲ್ಲುವ ದೃಶ್ಟಿಯಲ್ಲಿ ಎಶ್ಟು ಲೆಕ್ಕಕ್ಕೆ ಬಾರದಂತದ್ದು ಅನ್ನುವುದು ಕಾಣುತ್ತೆ.

ಏನಿದು ಕನ್ನಡ, ಕನ್ನಡಿಗರ ಬದುಕಿನ ವಿಷಯಗಳು?
ಎಲ್ಲ ಸರಿ, ಏನಿದು ಕನ್ನಡ, ಕನ್ನಡಿಗರ ಬದುಕಿನ ವಿಷಯಗಳು ಅನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೆ ಉತ್ತರ ಯಾವ ವಿಷಯಗಳು ನಮ್ಮ ಬದುಕನ್ನು ಕಟ್ಟಿ ಕೊಡುತ್ತವೋ, ನಮ್ಮ ಏಳಿಗೆಗೆ, ಉಳಿವಿಗೆ ಅತ್ಯಂತ ಮುಖ್ಯವಾದದ್ದೋ ಅವು ಅನ್ನಬಹುದು. ಹಾಗಿದ್ರೆ ಅಂತಹ ವಿಷಯಗಳು ಯಾವುದಪ್ಪ ಅನ್ನುವ ಪ್ರಶ್ನೆ ಯಾರಾದ್ರೂ ಕೇಳಿದ್ರೆ ಅದು ಏನ್ ತೋರಿಸುತ್ತೆ ಅಂದ್ರೆ ನಮ್ಮ ರಾಜಕೀಯದ ಡಿಸ್-ಕೋರ್ಸ್ ಎಶ್ಟರಮಟ್ಟಿಗೆ ಇಂತಹ ವಿಶಯಗಳಿಂದಾಚೆ ಪಾಪುಲಿಸ್ಟ್ ಅದ, ಯಾವುದೇ ಲಾಂಗ್ ಟರ್ಮ್ ಯೋಚನೆಯಿಲ್ಲದ ವಿಶಯಗಳತ್ತಲೇ ಗಿರಕಿ ಹೊಡೆಯುತ್ತಿದೆ ಅನ್ನುವುದು. ಅದಿರಲಿ, ಅಶ್ಟು ಮುಖ್ಯವಾದ ವಿಶಯಗಳು ಯಾವುದು ಅನ್ನುವ ಪ್ರಶ್ನೆಗೆ ಕನ್ನಡಿಗರ ಬೇಡಿಕೆ ಅನ್ನು ಹೆಸರಲ್ಲಿ ಕೆಲವೊಂದಿಷ್ಟು ಮುಖ್ಯವಾದದ್ದನ್ನು ಒಂದು ಪಟ್ಟಿ ಮಾಡಿ ಕೆಳಗೆ ಹಾಕಿದ್ದೇನೆ. ನಮ್ಮ ಪಕ್ಷಗಳಲ್ಲಿ, ಅದರಲ್ಲೂ ರಾಶ್ಟ್ರೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಇದರಲ್ಲಿನ ಯಾವೊಂದು ಅಂಶವೂ ಕಂಡಿಲ್ಲ ಅಂತಲೇ ಹೇಳಬಹುದು.


                             



ಹೇಳಿ, ಈ ಮೇಲಿನವುಗಳು ಕನ್ನಡ-ಕನ್ನಡಿಗರ ಬದುಕಿನ ವಿಶಯಗಳಲ್ಲವೇ? ಇವುಗಳಲ್ಲಿ ಯಾವುದು ಇಂದು ನಮ್ಮ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿವೆ? ಕನ್ನಡ-ಕರ್ನಾಟಕ ಕೇಂದ್ರಿತ ರಾಜಕಾರಣ ಅನ್ನುವ ಒಂದು ಸ್ಪೇಸ್ ಇವತ್ತಿಗೂ ಖಾಲಿ ಇದೆ ಮತ್ತು ಅದನ್ನು ಪ್ರಾದೇಶಿಕ ಪಕ್ಷಗಳು ಮಾತ್ರವೇ ತುಂಬಬಲ್ಲವು. ಇರುವ ಪ್ರಾದೇಶಿಕ ಪಕ್ಷಗಳು ಅವುಗಳಿಗಿರುವ ಲಿಮಿಟೇಶನ್ಸ್ ನಡುವೆಯೂ ಇಂತಹ ವಿಷಯಗಳನ್ನು ತಮ್ಮ ರಾಜಕೀಯದ ಅಜೆಂಡಾಗೆ ಸೇರಿಸಿಕೊಳ್ಳುವ ಹಾಗಾಗಬೇಕು ಮತ್ತು ಅಂತಹದೊಂದು ಒತ್ತಡ ಕರ್ನಾಟಕ ಕೇಂದ್ರಿತ ರಾಜಕಾಣದ ಅನಿವಾರ್ಯತೆ ಚೆನ್ನಾಗಿ ಮನದಟ್ಟಾಗಿರುವ ಎಲ್ಲ ಕನ್ನಡಿಗರು ತರಬೇಕು. ಅದು ಈ ಚುನಾವಣೆಯಿಂದಲೇ ಶುರುವಾಗಲಿ.

ಬುಧವಾರ, ಏಪ್ರಿಲ್ 17, 2013

ನಿಮಗೆ ಗೊತ್ತೇ? ಕರ್ನಾಟಕದ ಜನಸಂಖ್ಯೆ ವಿಪರೀತ ಕುಸಿಯಲಿದೆ !

ಮಕ್ಕಳಿರಲವ್ವ ಮನೆ ತುಂಬಾ ಅನ್ನುವ ಕಾಲ ಮತ್ತೆ ಬಂದೀತು ! ಕನ್ನಡಿಗರ ಸಂಖ್ಯೆ ಕುಸಿಯುತ್ತಿರುವ ಬಗ್ಗೆ 17 ಏಪ್ರಿಲ್ ಉದಯವಾಣಿಯಲ್ಲಿ ನನ್ನ ಅಂಕಣ

ಭಾನುವಾರ, ಮಾರ್ಚ್ 31, 2013

ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆ


ಮತ್ತೆ ಚುನಾವಣೆ ಬಂದಿದೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ  ಪ್ರಾದೇಶಿಕ ಪಕ್ಷಗಳು ದೊಡ್ಡ ಮಟ್ಟದಲ್ಲಿ ಸ್ಪರ್ಧೆಗೆ ಸಜ್ಜಾಗಿವೆ. ಕಳೆದ ಐದು ವರ್ಷದಲ್ಲಿ ರಾಜ್ಯ ರಾಜಕಾರಣ ತಲುಪಿರುವ ಸ್ಥಿತಿಯಿಂದ ಸಾಕಷ್ಟು ಜನರಿಗೆ ಚುನಾವಣಾ ವ್ಯವಸ್ಥೆಯ ಬಗ್ಗೆಯೇ ಒಂದು ರೀತಿಯಲ್ಲಿ ಭ್ರಮ ನಿರಸನವಾಗಿ ಮತದಾನದಿಂದಲೇ ದೂರ ಉಳಿಯುವ ನಿರ್ಧಾರ ಕೈಗೊಂಡರೂ ಅಚ್ಚರಿಯಿಲ್ಲ. ಆದರೆ ಸಮಸ್ಯೆಗೆ ದೂರ ಉಳಿಯುವುದು ಪರಿಹಾರವಲ್ಲವೇ ಅಲ್ಲ. ಎಂತಹುದೇ ಕೆಡುಕಿನ ಸ್ಥಿತಿಯಲ್ಲಿದ್ದರೂ ಪ್ರತಿ ಐದು ವರ್ಷಕ್ಕೊಮ್ಮೆ ಅದನ್ನು ಸರಿಪಡಿಸಿಕೊಳ್ಳಲು ಸಿಗುವ ಒಂದೇ ಒಂದು ಅಸ್ತ್ರ ಮತದಾನ. ಅದನ್ನು ಕನ್ನಡಿಗ ಅನ್ನುವ ಐಡೆಂಟಿಟಿ ಇಟ್ಟುಕೊಂಡು ಸರಿಯಾಗಿ, ಅಳೆದು, ತೂಗಿ ಚಲಾಯಿಸುವ ಹೊಣೆ ನಮ್ಮೆಲ್ಲರದ್ದು. ಇರಲಿ, ಭಾರತ ಒಕ್ಕೂಟದಲ್ಲಿ ಕರ್ನಾಟಕದ ಸಮಸ್ಯೆಗಳಿಗೆ ರಾಜಕೀಯವಾದ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡಿಗರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಮತ್ತು ಮತದಾನದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯವಾದ ಕೆಲಸ ಎಂದು ಹೇಳಲು ಮೇಲಿನ ಒಂದೆರಡು ಮಾತು ಬರೆದೆ. ಆದರೆ ಇವತ್ತು ಹೇಳ ಹೊರಟಿದ್ದು ಇನ್ನೆನೋ ಇದೆ. ಅದು ಈ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜಕೀಯವಾಗಿ ಎಂತಹ ದಿಗಿಲಿನ  ಸ್ಥಿತಿಯಲ್ಲಿದೆ, ಕನ್ನಡ-ಕರ್ನಾಟಕ-ಕನ್ನಡಿಗನ ಬದುಕಿನ ಸವಾಲುಗಳಿಗೆ ರಾಜಕೀಯವಾದ ಪರಿಹಾರ ಕಂಡುಕೊಳ್ಳುವಲ್ಲಿ ಎಷ್ಟು ಕೆಟ್ಟದಾಗಿ ಎಡವಿದ್ದೇವೆ ಮತ್ತು ಈ ಹೊತ್ತಿನಲ್ಲಿ ಇದಕ್ಕೆ ಪರಿಹಾರವಾಗಿ  ಕನ್ನಡಿಗರಲ್ಲಿ ರಾಜಕೀಯ ಪ್ರಜ್ಞೆ ಯಾಕೆ ಬೆಳೆಯಬೇಕಿದೆ? ಯಾರು ಏನೇ ಅಂದುಕೊಂಡರೂ ನಮ್ಮ ಸುತ್ತ ಮುತ್ತಲಿನ ಪ್ರತಿಯೊಂದು ವಿಷಯವನ್ನು "ಕನ್ನಡಿಗರ ಹಿತಾಸಕ್ತಿ" ಅನ್ನುವ ಕಣ್ಣಿನಿಂದ ಮಾತ್ರ ನೋಡಬೇಕಾದ ಸಂದರ್ಭ ಯಾಕೆ ಬಂದಿದೆ ಅನ್ನುವುದರ ಕುರಿತು ನನ್ನ ಅನಿಸಿಕೆ ಬರೆಯಲು ಈ ಬರಹ.

ಟಿಕೇಟ್ ಹಂಚಿಕೆಯೇ ಕನ್ನಡಿಗರ ಸಮಸ್ಯೆಯೇ?
ಚುನಾವಣೆ ಘೋಷಣೆಯಾಗಿ ಹೆಚ್ಚು ಕಮ್ಮಿ ಎರಡು ವಾರ ಆಗಿದೆ. ಈ ಎರಡು ವಾರದಲ್ಲಿ ಪತ್ರಿಕೆ, ಸುದ್ದಿವಾಹಿನಿಗಳನ್ನು ಗಮನಿಸಿದ್ದರೆ ಏನು ಕಾಣುತ್ತೆ? ಅಲ್ಲೇನಾದರೂ ಕರ್ನಾಟಕ ಕೇಂದ್ರಿತವಾಗಿ ಯಾರು ಏನು ಮಾಡುತ್ತಾರೆ? ಕನ್ನಡಿಗರ ಸಮಸ್ಯೆಗಳಿಗೆ ಯಾರ ಬಳಿ ಏನು ಪರಿಹಾರವಿದೆ ಅಂತೇನಾದ್ರೂ ಕಾಣುತ್ತಾ? ಖಂಡಿತ ಇಲ್ಲ. ಕಳೆದ ಎರಡು ವಾರದಿಂದ ಚುನಾವಣೆಗೆ ಸಂಬಂಧಿಸಿದಂತೆ ಕಾಣುತ್ತಿರುವ ಒಂದೇ ಒಂದು ಸುದ್ದಿ ಅಂದರೆ ಟಿಕೇಟ್ ಹಂಚಿಕೆ. ಹಾಗಿದ್ದರೆ ಟಿಕೇಟ್ ಹಂಚಿಕೆಯೇ ಕನ್ನಡಿಗರ ಎದುರಿರುವ ಅತಿ ದೊಡ್ಡ ಸಮಸ್ಯೆಯೇ? ಯಾಕೆ ನಮ್ಮ ರಾಜಕೀಯದ ಡಿಸ್-ಕೋರ್ಸ್ ಇಂತಹ ಸಣ್ಣ ವಿಷಯಗಳತ್ತ ಗಿರಕಿ ಹೊಡೆಯುತ್ತಿದೆ? ಕನ್ನಡಿಗರ ಮುಂದೆ ದೊಡ್ಡ ಸಮಸ್ಯೆಗಳು, ಸವಾಲುಗಳೇ ಇಲ್ಲವೇ? ರೈಲು, ರಸ್ತೆ, ಅನುದಾನ, ತೆರಿಗೆ ಹಂಚಿಕೆ, ಕಲಿಕೆ, ನೆರೆ ಪರಿಹಾರ, ಬರ ಪರಿಹಾರ, ನದಿ ನೀರಿನ ಹಂಚಿಕೆ, ಗಡಿ ವಿವಾದ ಹೀಗೆ ಕನ್ನಡಿಗರ ಬದುಕನ್ನು ನೇರವಾಗಿ ತಟ್ಟುವ ಹತ್ತಾರು ಸಮಸ್ಯೆಗಳು ಯಾಕೆ ನಮ್ಮ ಚುನಾವಣೆಯ ವೇದಿಕೆಯ ಮೇಲೆ ಈ ಹೊತ್ತಲ್ಲಿ ಅತ್ಯಂತ ಗಟ್ಟಿಯಾಗಿ ಕೇಳಿಸುತ್ತಿಲ್ಲ, ಪ್ರಸ್ತುತವಾಗಿ ಕಾಣಿಸುತ್ತಿಲ್ಲ? 
ಕಾವೇರಿ ಅನ್ಯಾಯ ಟ್ರಿವಿಯಲ್ ಆದ ವಿಷಯವೇ?
ಬಹಳ ಹಿಂದೆ ಹೋಗಬೇಕಿಲ್ಲ. ಬರೀ ಒಂದು ತಿಂಗಳ ಹಿಂದೆ ಮುಂದೆಂದೂ ಸರಿಪಡಿಸಿಕೊಳ್ಳಲಾಗದ ರೀತಿಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯ ಐತೀರ್ಪಿನಲ್ಲಾದ ಅನ್ಯಾಯವನ್ನು ಕೇಂದ್ರದ ಕಾಂಗ್ರೆಸ್ ಸರ್ಕಾರ ಗೆಜೆಟ್ಟಿನಲ್ಲಿ ಪ್ರಕಟಿಸಿದೆ. ಕಾವೇರಿ ಕೊಳ್ಳದ ಮೇಲೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗೆ ಬೀರಲಿದೆ ಅನ್ನುವ ಚಿಕ್ಕ ಕಲ್ಪನೆಯೂ ಕೊಳ್ಳದ ರೈತರಲ್ಲಿ, ಜನಸಾಮಾನ್ಯರಲ್ಲಿ ಇದ್ದಂತಿಲ್ಲ.  ಈಗಾಗಲೇ ಕೊಳ್ಳದ ರೈತರು ಕಬ್ಬು ಬೆಳೆಯಬೇಡಿ, ಅದೇ ನೀರನ್ನು ಬೆಂಗಳೂರು ಎಂಬ ವಲಸಿಗರ ಸ್ವರ್ಗಕ್ಕೆ ಮೀಸಲಿಡಿ ಅನ್ನುವ ಮಾತುಗಳು ಕೇಂದ್ರದ ಅಧಿಕಾರಿಗಳಿಂದ ಕೇಳಿಬರುತ್ತಿವೆ. ಇಂತಹ ಸಂದರ್ಭ ಬಂದಾಗಲೂ  ಕಾವೇರಿಯ ವಿಷಯದ ಬಗ್ಗೆ ರಾಜಕೀಯವಾಗಿ ಮಾತನಾಡೋದೇ ತಪ್ಪು ಅನ್ನುವ ಮಾತನ್ನು ಮಾಧ್ಯಮದ ಹಲವು ವಲಯಗಳೇ ಹೇಳಿದ್ದನ್ನು ಕಂಡೆವು. ಜೆಡಿಎಸ್ ಈ ವಿಷಯವಾಗಿ ಮಾತನಾಡಿದರೆ ಅದು ರಾಜಕೀಯ ಮಾಡುತ್ತಿದೆ ಅನ್ನುವ ಆರೋಪ ಕಂಡೆವು.  ಇಂತಹ ಬದುಕಿನ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡದೇ ಇನ್ನಾವ ವಿಷಯದಲ್ಲಿ ಮಾಡಬೇಕು? ಸಾಹಿತ್ಯ ಸಮ್ಮೇಳನದಲ್ಲಿ ಬಿಸಿಲು ಜಾಸ್ತಿ ಇತ್ತು ಅನ್ನುವ ವಿಷಯಕ್ಕೆ ರಾಜಕೀಯ ಮಾಡಬೇಕೇ? ನಮ್ಮ ರಾಜಕೀಯವಾದ ಆದ್ಯತೆಗಳಿಗೆ ಏನಾಗಿದೆ? ನಾಳೆಯ ಭವಿಷ್ಯವನ್ನೇ ನಿರ್ಧರಿಸುವಂತಹ ವಿಷಯಗಳು ಯಾಕೆ ಒಂದು ರೀತಿಯಲ್ಲಿ ಟ್ರಿವಿಯಲೈಸ್ ಆಗಿವೆ? ಕಾವೇರಿ ಅನ್ಯಾಯ ಈ ಹೊತ್ತಿನ ಚುನಾವಣೆಯ ಚರ್ಚೆಯಲ್ಲಿ ಅತ್ಯಂತ ಮುಂದಿರಬೇಕಿದ್ದ ಪ್ರಶ್ನೆಯಾಗಿತ್ತಲ್ಲವೇ?  ಹಾಗಿದ್ದರೆ ನಮ್ಮ ರಾಜಕಾರಣಿಗಳು ಇಂತಹ ಬದುಕಿನ ವಿಷಯಗಳನ್ನು ಕೈ ಬಿಟ್ಟು ಟಿಕೆಟ್ ಹಂಚಿಕೆಯ ಸುತ್ತಲೇ ತಲೆ ಕೆಡಿಸಿಕೊಳ್ಳುವಂತಾಗಲು ಕಾರಣ ಯಾರು? "ಅಯ್ಯೋ ಬಿಡಿ ಸಾರ್, ರಾಜಕಾರಣಿಗಳೆಲ್ಲ ಸರಿಯಿಲ್ಲ" ಅಂತ ಸಿನಿಕರಾಗಿ ಇದಕ್ಕೆಲ್ಲ ನಮ್ಮ ರಾಜಕಾರಣಿಗಳನ್ನು ದೂರುವುದೇ ಪರಿಹಾರವೇ? 
ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆ
ಇಲ್ಲ, ಸಮಸ್ಯೆ ಅವರಲ್ಲ. ರಾಜಕಾರಣಿಗಳು ಯಾವತ್ತು playing to the gallery ಅನ್ನುವಂತೆಯೇ ವರ್ತಿಸುವವರು, ಒಂದು ವಿಷಯ ಮುಖ್ಯವಾದದ್ದು ಎಂದು ಜನರಿಗೂ ಅನ್ನಿಸಿದೆ ಎಂದಾಗದ ಹೊರತು ಅವರೆಂದೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳರು. ಕರ್ನಾಟಕಕ್ಕೆ ಆಗುತ್ತಿರುವ ಸಾಲು ಸಾಲು ಅನ್ಯಾಯಗಳನ್ನು ಕನ್ನಡಿಗ ಅನ್ನುವ ಐಡೆಂಟಿಟಿ ಇಟ್ಟುಕೊಂಡು ನೋಡುವ ರಾಜಕೀಯ ಪ್ರಜ್ಞೆ ಇಲ್ಲದಿರುವುದು, ನಮ್ಮನ್ನು ತಟ್ಟುವ ಎಲ್ಲ ವಿಷಯಗಳಲ್ಲೂ ಕರ್ನಾಟಕದ ಹಿತಾಸಕ್ತಿ ಅನ್ನುವುದು ಎಲ್ಲಕ್ಕಿಂತ ಮುಖ್ಯವಾದದ್ದು ಅನ್ನುವ ನ್ಯಾರೆಟಿವ್ ನಮ್ಮ ಸಮಾಜದಲ್ಲಿ ಇಲ್ಲದಿರುವುದು ಇಂತಹ ವಿಷಯಗಳಿಗೆ ಸ್ಪಂದಿಸಲೇಬೇಕು ಅನ್ನುವ ಒತ್ತಡವನ್ನು ನಮ್ಮನ್ನು ಆಳುವವರ ಮೇಲೆ ತಂದಿಲ್ಲ ಅನ್ನಬಹುದು. ಜಾತಿ ರಾಜಕೀಯ, ಹಣ, ಹೆಂಡದ ಲೆಕ್ಕಾಚಾರದಲ್ಲೇ ಚುನಾವಣೆ ಗೆಲ್ಲಬಹುದು ಅಂತಿದ್ದಾಗ ಬದುಕಿನ ವಿಷಯಗಳತ್ತ ಆಳುವವರಿಗೆ ಇರಬೇಕಾದ ಗಮನ ಹೇಗೆ ತಾನೇ ಇದ್ದೀತು? ದೆಹಲಿಯವರು ಏನ್ ಅಂದ್ಕೊತಾರೆ, ಇನ್ನಾರೋ ಏನ್ ಅಂದ್ಕೊತಾರೆ ಅಂತ ಯೋಚಿಸುವುದನ್ನ ಬಿಟ್ಟು ನಮ್ಮ ಬದುಕಿನ ವಿಷಯಗಳು ಬಂದಾಗ ನಮ್ಮ ಹಿತ ಕಾಯುವ ರಾಜಕಾರಣವೇ ಸರಿಯಾದದ್ದು, 
ಕರ್ನಾಟಕ ಕೇಂದ್ರಿತ ರಾಜಕಾರಣವೇ rational ಆದದ್ದು ಅನ್ನುವ ದಿಟ ಕನ್ನಡಿಗರಲ್ಲಿ ಕಂಡಾಗಲೇ ಆಳುವವರು ನಮ್ಮ ಹೊಣೆ ಹೊತ್ತಾರು !  

ಪ್ರಾದೇಶಿಕ ಚಿಂತನೆ ಅನ್ನುವ ಸಿಸ್ಟಮಿಕ್ ಕರೆಕ್ಷನ್ !
ಇವತ್ತಿನ ಈ ಚುನಾವಣೆಯ ಸಂದರ್ಭದಲ್ಲಿ ಭಾರತ ಒಕ್ಕೂಟದಲ್ಲಿ ಕರ್ನಾಟಕಕ್ಕೆ ರೈಲು, ರಸ್ತೆ, ಅನುದಾನ, ತೆರಿಗೆ ಹಂಚಿಕೆ, ಕಲಿಕೆ, ನೆರೆ, ಬರ ಪರಿಹಾರ, ನದಿ ನೀರಿನ ಹಂಚಿಕೆ, ಗಡಿ ವಿವಾದ ಹೀಗೆ ಎಲ್ಲ ವಿಷಯಗಳಲ್ಲೂ ನ್ಯಾಯಸಮ್ಮತ ಅವಕಾಶಗಳು ಸಿಗುವಂತಾಗಲು ಕರ್ನಾಟಕ ಕೇಂದ್ರಿತವಾದ ಚಿಂತನೆ ಇರುವ ಪಕ್ಷಗಳಿಗೆ ಶಕ್ತಿ ತುಂಬುವ ಕೆಲಸ ಕನ್ನಡಿಗರು ಮಾಡಬೇಕಿದೆ. ಇಡೀ ಭಾರತ ಒಕ್ಕೂಟದ ಹೆಚ್ಚಿನ ರಾಜ್ಯಗಳಲ್ಲಿ ಅಲ್ಲಿನ ಏಳಿಗೆಗೆ ಪ್ರದೇಶದ ಆಶೋತ್ತರಗಳಿಗೆ ಸ್ಪಂದಿಸಬಲ್ಲ ಪಕ್ಷವೇ ಮುಖ್ಯ ಅನ್ನುವ ವಾದಕ್ಕೆ ಬೆಂಬಲ ಸಿಗುತ್ತಿರುವಾಗ, ಕೇಂದ್ರದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಿಂದ ಆಗಿರುವ ತೊಡಕುಗಳಿಗೆ ತಾನೇತಾನಾದ ಕರೆಕ್ಶನ್ ಅನ್ನುವಂತೆ ಪ್ರಾದೇಶಿಕ ಚಿಂತನೆ ಬಲಗೊಳ್ಳುತ್ತಿರುವಾಗ ಕರ್ನಾಟಕ ಆ ದಿಕ್ಕಿನಲ್ಲಿ ಸಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆಯ ಚರ್ಚೆಯ ಡಿಸ್-ಕೋರ್ಸ್ ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆಯನ್ನು ಕಟ್ಟಿಕೊಳ್ಳುವತ್ತ, ಕನ್ನಡಿಗ ಅನ್ನುವ ಗುರುತಿಗೆ ರಾಜಕೀಯದ ಬಲ ಪಡೆದುಕೊಳ್ಳುವತ್ತ ಸಾಗಬೇಕಿದೆ.  ಈ ನಿಟ್ಟಿನಲ್ಲಿ ಮಾಧ್ಯಮಗಳ, ಚಿಂತಕರ ಮತ್ತು ಕರ್ನಾಟಕ ಪರವಾದ ಎಲ್ಲ ಶಕ್ತಿಗಳ ಪಾತ್ರ ಹಿರಿದಿದೆ.
ಸರಣಿ ಬರಲಿದೆ: ಚುನಾವಣೆಗೆ ಇನ್ನು ಕೆಲವು ವಾರಗಳಿರುವುದರಿಂದ ಅಲ್ಲಿಯವರೆಗೆ ಕೇಂದ್ರ ರಾಜ್ಯದ ಕೊಡು-ಕೊಳ್ಳುವಿಕೆ, ಕರ್ನಾಟಕಕ್ಕಾದ ಅನ್ಯಾಯಗಳು, ಒಕ್ಕೂಟದಲ್ಲಿ ಕರ್ನಾಟಕ ಪಡೆದುಕೊಂಡಿದ್ದೇನು, ಕಳೆದುಕೊಂಡಿದ್ದೇನು ಅನ್ನುವ ಸುತ್ತ ಸರಣಿ ಬರಹಗಳನ್ನು ಬರೆಯಲಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ.

ಭಾನುವಾರ, ಮಾರ್ಚ್ 17, 2013

GST ಮತ್ತು ಒಕ್ಕೂಟ ವ್ಯವಸ್ಥೆ

ಹೆಚ್ಚಿನ ರಾಜ್ಯಗಳು ಒಪ್ಪಿಗೆ ಸೂಚಿಸುವುದರೊಂದಿಗೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಇನ್ನೇನು ಜಾರಿಗೆ ಬರುವ ದಿನಗಳು ಹತ್ತಿರದಲ್ಲಿವೆ. ಏನಿದು ಜಿ.ಎಸ್.ಟಿ, ಅದರಿಂದಾಗುವ ಲಾಭವೇನು? ಯಾಕೆ ರಾಜ್ಯಗಳು ಅದನ್ನು ವಿರೋಧಿಸುತ್ತಿವೆ, ಒಕ್ಕೂಟ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳೇನು ಅನ್ನುವುದದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಅಂಕಣ.

ಭಾರತ ಒಕ್ಕೂಟದ ತೆರಿಗೆ ವ್ಯವಸ್ಥೆಯ ಮೇಲೊಂದು ಹಕ್ಕಿ ನೋಟ
ಭಾರತದ ಸಂವಿಧಾನ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಬೇರ ಬೇರೆ ರೀತಿಯ ತೆರಿಗೆ ಸಂಗ್ರಹಿಸುವ ಅಧಿಕಾರ ನೀಡಿದೆ. ಕೇಂದ್ರ ಸರ್ಕಾರ ನೇರ ತೆರಿಗೆಗಳಾದ ಜನರ ಆದಾಯ ತೆರಿಗೆ, ಕಂಪನಿಗಳ ಕಾರ್ಪೊರೇಟ್ ತೆರಿಗೆ ಹಾಗೂ ವಾರೆ (ಇಂಡೈರೆಕ್ಟ್) ತೆರಿಗೆಗಳಾದ ಸೇವಾ ತೆರಿಗೆ, ಕಸ್ಟಮ್ಸ್ ಮತ್ತು ಒಳನಾಡ ತೆರಿಗೆ(ಎಕ್ಸೈಸ್) ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳ ತೆರಿಗೆ ವ್ಯಾಪ್ತಿಗೆ ವ್ಯಾಟ್, ಮಾರಾಟ ತೆರಿಗೆ ಮತ್ತು ಕೆಲ ಸ್ಥಳೀಯ ತೆರಿಗೆಗಳು ಬರುತ್ತವೆ. ರಾಜ್ಯವೊಂದರಿಂದ ಕೇಂದ್ರಕ್ಕೆ ಹೋಗುವ ತೆರಿಗೆಗೆ ಹೋಲಿಸಿದರೆ ರಾಜ್ಯ ಸಂಗ್ರಹಿಸುವ ತೆರಿಗೆಯ ಪ್ರಮಾಣ ಬಹಳ ಸಣ್ಣದೇ ಅನ್ನಬಹುದು. ಕೇಂದ್ರ ಸಂಗ್ರಹಿಸಿದ ತೆರಿಗೆಯಲ್ಲಿ ಕೆಲ ಪಾಲನ್ನು ರಾಜ್ಯಗಳಿಗೆ ಹಣಕಾಸು ಆಯೋಗವು ನಿರ್ಧರಿಸಿದಂತೆ ಮರಳಿ ಹಂಚಲಾಗುತ್ತದೆ. ಸಂವಿಧಾನ ಕೊಟ್ಟಿರುವ ಅವಕಾಶಗಳಡಿ ಕೇಂದ್ರ ಒಂದು ಸರಕಿನ ತಯಾರಿಕೆ ಮತ್ತು ಸೇವೆಯ ಮೇಲೆ ತೆರಿಗೆಯನ್ನು ವಿಧಿಸಬಹುದಾಗಿದ್ದರೆ, ಸರಕಿನ ಮೇಲೆ ಮಾರಾಟದ ತೆರಿಗೆ ಹಾಕುವ ಹಕ್ಕನ್ನು ರಾಜ್ಯಗಳಿಗೆ ನೀಡಿದೆ. ರಾಜ್ಯಗಳಿಗೆ ಆಮದು ಸುಂಕ ಹಾಕುವ ಅವಕಾಶವೂ ಇಲ್ಲ. ಈ ಮುಂಚಿನ ತೆರಿಗೆ ಪದ್ದತಿಯಲ್ಲಿ ಜನರು ಬೇರೆ ಬೇರೆ ಹಂತದಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಅಂದರೆ ಒಂದು ಉತ್ಪನ್ನಕ್ಕೆ ಬಳಸುವ ಮೂಲವಸ್ತುವಿನ ಖರೀದಿಯಿಂದ ಹಿಡಿದು ಉತ್ಪಾದನೆ, ಹಂಚಿಕೆ, ಸಾಗಾಟ ಕೊನೆಯಲ್ಲಿ ಗ್ರಾಹಕನಿಗೆ ಮಾರುವ ಹಂತದವರೆಗೆ ಪ್ರತಿ ಹಂತದಲ್ಲೂ ತೆರಿಗೆ ಕಟ್ಟಬೇಕಾದ ಅಗತ್ಯವಿತ್ತು. ಸರಿಯಾದ ವ್ಯವಸ್ಥೆಯಲ್ಲಿ ಉತ್ಪಾದಕನೊಬ್ಬ ಒಂದು ವಸ್ತುವಿಗೆ ತನ್ನ ಮಟ್ಟದಲ್ಲಿ ತಾನು ಸೇರಿಸಿದ ಮೌಲ್ಯ ವರ್ಧನೆಗೆ ತಕ್ಕುದಾಗಿ ತೆರಿಗೆ ಕಟ್ಟುವ ಹಾಗಿರಬೇಕಿತ್ತು. ಹಾಗಿರದೇ ಇದ್ದ ವ್ಯವಸ್ಥೆಯಿಂದಾಗಿ ಉತ್ಪಾದಕರು ಅತಿ ಹೆಚ್ಚಿನ ತೆರಿಗೆ ಕಟ್ಟುವ ಒತ್ತಡಕ್ಕೊಳಗಾಗುತ್ತಿದ್ದರು. ಇದರಿಂದ ಸಹಜವಾಗಿಯೇ ತೆರಿಗೆ ವ್ಯವಸ್ಥೆಯಿಂದಲೇ ಆಚೆ ಉಳಿಯುವ, ತೆರಿಗೆ ವಂಚಿಸುವವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಯಿತು. ವ್ಯಾಟ್ ಹೆಚ್ಚಾಗಿ ಸರಕುಗಳ ಮೇಲೆ ಹಾಕುವ ತೆರಿಗೆಯಾಗಿದ್ದರೆ ಹೊಸತಾಗಿ ಪರಿಚಯಗೊಳ್ಳುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಹೆಸರೇ ಸೂಚಿಸುವಂತೆ ಸರಕಿನೊಂದಿಗೆ ಸೇವೆಯ ಮೇಲೂ ತೆರಿಗೆ ವಿಧಿಸುವ ಅವಕಾಶ ಹೊಂದಿದೆ.

ಏನಿದು ಜಿ.ಎಸ್.ಟಿ?
ಜಿ.ಎಸ್.ಟಿ ಒಂದು ತೆರಿಗೆ ಸುಧಾರಣೆಯಲ್ಲಿನ ಮಹತ್ವದ ಕ್ರಮವೆಂದೇ ಬಿಂಬಿತವಾಗಿದೆ. 1991ರಿಂದಾಚೆ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳಲ್ಲಿ ಅತ್ಯಂತ ಮಹತ್ವದ್ದು ಕೂಡ ಅನ್ನಿಸಿಕೊಂಡಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿರುವ ಹತ್ತಾರು ಗೋಜಲಿನ ವಾರೆ ತೆರಿಗೆಗಳ ಜಾಗದಲ್ಲಿ ಈ ಎಲ್ಲ ತೆರಿಗೆಗಳನ್ನು ಒಂದಾಗಿಸಿದ ಹೊಸತೊಂದು ತೆರಿಗೆ ಮಾದರಿ ಜಿ.ಎಸ್.ಟಿ ಅನ್ನಬಹುದು. ಆರ್ಥಿಕ ತಜ್ಞ ವಿಜಯ್ ಕೇಲ್ಕರ್ ಮುಂದಾಳತ್ವದ ಸಮಿತಿ ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದಾಗಿಸಿ ದೇಶಕ್ಕೆ ಒಂದೇ ಜಿ.ಎಸ್.ಟಿ ತರುವ ಪ್ರಸ್ತಾವನೆಯನ್ನು ಮುಂದೆ ತಂದಿದ್ದರು. ಆ ಪ್ರಸ್ತಾವನೆಯಂತೆ ಎಲ್ಲ ತೆರಿಗೆಗಳನ್ನು ಕೇಂದ್ರವೇ ಸಂಗ್ರಹಿಸಿ ಆನಂತರ ರಾಜ್ಯಗಳಿಗೆ ಸೂತ್ರವೊಂದರ ಅನ್ವಯ ಹಂಚುವ ಸಲಹೆ ನೀಡಿದ್ದರು. ಮೊದಲೇ ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿರುವ ರಾಜ್ಯಗಳು ತಮ್ಮ ಕೈಯಲ್ಲಿನ ಚಿಕ್ಕ ಪುಟ್ಟ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಕಿತ್ತುಕೊಳ್ಳುವ ಕೇಂದ್ರದ ನಡೆಯನ್ನು ಸಹಜವಾಗಿಯೇ ವಿರೋಧಿಸಿದ್ದರ ಪರಿಣಾಮವಾಗಿ ಈಗ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಇಬ್ಬಗೆಯ (ಡ್ಯುಯಲ್ ) ಜಿ.ಎಸ್.ಟಿ ತೆರಿಗೆಯನ್ನು ತರುವ ಪ್ರಯತ್ನ ನಡೆಯುತ್ತಿದೆ. ಈ ಸುಲಭವಾದ ತೆರಿಗೆ ಪದ್ದತಿಯಿಂದ ಭಾರತ ಒಕ್ಕೂಟದ ಜಿ.ಡಿ.ಪಿ ಕಡಿಮೆಯೆಂದರೂ 1.5% ಏರಿಕೆ ಕಾಣುವ ನಿರೀಕ್ಷೆಯನ್ನು ಆರ್ಥಿಕ ತಜ್ಞರು ವ್ಯಕ್ತ ಪಡಿಸುತ್ತಾರೆ. ಸರಿ ಸುಮಾರು 75.000 ಕೋಟಿ ರೂಪಾಯಿಯಷ್ಟು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸುವ ಸಾಧ್ಯತೆ ಇದೆ ಅನ್ನುತ್ತಾರೆ ಪರಿಣಿತರು.

ಯಾರಿಗೆ ಏನು ಲಾಭ?

ಜಿ.ಎಸ್.ಟಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಯಾವುದೇ ವಸ್ತುವಿನ ಮೇಲಿನ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿ ತೆರಿಗೆಯನ್ನು ಮಾರಾಟದ ಹಂತದಲ್ಲಿ (ಪಾಯಿಂಟ್ ಆಫ್ ಸೇಲ್) ಸಂಗ್ರಹಿಸಲಾಗುವುದು. ಉತ್ಪಾದನೆಗೆ ತಗಲಿರುವ ವೆಚ್ಚದ ಮೇಲೆ ಈ ಎರಡೂ ತೆರಿಗೆಗಳನ್ನು ವಿಧಿಸಲಾಗುವುದು. ಈ ಮೊದಲಿನ ವ್ಯವಸ್ಥೆಯಲ್ಲಿದ್ದ ಪರೋಕ್ಷ ತೆರಿಗೆಗಳಾದ ಸೇವಾ ತೆರಿಗೆ, ಮಾರಾಟ ತೆರಿಗೆ, ಒಳಬರುವ ತೆರಿಗೆ, ಒಳನಾಡ ತೆರಿಗೆ, ಸೆಸ್, ಸರ್ಚಾರ್ಜ್, ವ್ಯಾಟ್, ರಾಜ್ಯ-ರಾಜ್ಯಗಳ ನಡುವಿನ ಮಾರಾಟ ತೆರಿಗೆ ಎಲ್ಲದರ ಜಾಗದಲ್ಲಿ ಕೇವಲ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿಗಳು ಮಾತ್ರ ಅನ್ವಯಿಸಲಿವೆ. ಹತ್ತಾರು ಗೋಜಲಿನ ತೆರಿಗೆಗಳು ದೂರವಾಗುವುದರಿಂದ ಗ್ರಾಹಕರಿಗೆ ನೇರವಾಗಿ ಅದರ ಲಾಭ ದೊರಕಲಿದೆ. ಕಡಿಮೆಯಾದ ಬೆಲೆಯಿಂದ ಹೆಚ್ಚುವ ಕೊಳ್ಳುವಿಕೆಯಿಂದ ಕಂಪನಿಗಳಿಗೂ ಹೆಚ್ಚಿನ ವ್ಯಾಪಾರದಿಂದ ಲಾಭವಾಗಲಿದೆ. ಜೊತೆಯಲ್ಲೇ ಉತ್ಪಾದಕರಿಗೆ ತಗಲುವ ತೆರಿಗೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಡಿಮೆಯಾಗುವುದರಿಂದ ಅವರು ತೆರಿಗೆ ಕದಿಯದೇ ತೆರಿಗೆ ಕಟ್ಟುವ ಪ್ರಮಾಣವೂ ಏರಲಿದೆ ಅನ್ನುವುದು ಬಲ್ಲವರ ಅಂಬೋಣ.

ಇಷ್ಟೆಲ್ಲ ಲಾಭವಿದ್ದರೂ ರಾಜ್ಯಗಳ ವಿರೋಧವೇಕೆ?
ಎಲ್ಲವೂ ರಂಗು ರಂಗಾಗಿ ಕಂಡರೂ ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷವೆನ್ನದೇ ಹಲವಾರು ರಾಜ್ಯಗಳು ಜಿ.ಎಸ್.ಟಿಯನ್ನು ವಿರೋಧಿಸುತ್ತ ಬಂದಿವೆ. ಹಲವು ಹಂತದ ಕೊಡುಕೊಳ್ಳುವಿಕೆಯ ನಂತರ ರಾಜ್ಯಗಳ ಪಟ್ಟು ಸಡಿಲಿಸದ ಹೋರಾಟದ ಫಲವಾಗಿ ಕೇಂದ್ರ ಇಂದು ರಾಜ್ಯಗಳ ಕಾಳಜಿಯನ್ನು ಪರಿಹರಿಸುವತ್ತ ಗಮನ ಹರಿಸಿದೆ ಮತ್ತು ಅದರಿಂದಾಗಿ ಜಿ.ಎಸ್.ಟಿ ಜಾರಿಗೆ ದಿನ ಹತ್ತಿರದಲ್ಲಿವೆ ಎಂಬಂತೆ ಕಾಣುತ್ತಿದೆ. ಹಾಗಿದ್ದರೆ ರಾಜ್ಯಗಳು ವಿರೋಧ ಮಾಡಿದ್ದಾದರೂ ಯಾವ ಕಾರಣಕ್ಕೆ ಅನ್ನುವುದನ್ನು ನೋಡಿದಾಗ ಕಾಣುವ ಮುಖ್ಯ ಅಂಶಗಳು.
  • ಈ ಸದ್ಯಕ್ಕೆ ರಾಜ್ಯಗಳು ಸಂಗ್ರಹಿಸುತ್ತಿರುವ ಹಲವು ತೆರಿಗೆಗಳಿಗೆ ಜಿ.ಎಸ್.ಟಿ ಕತ್ತರಿ ಹಾಕಲಿದೆ. ಇದರಿಂದ ತೆರಿಗೆ ಸಂಗ್ರಹ ವಿಷಯದಲ್ಲಿನ ಸ್ವಾಯತ್ತತೆ ಕಳೆದುಕೊಳ್ಳುವ ಆತಂಕ ರಾಜ್ಯಗಳದ್ದಾಗಿದೆ.


  • ಇಲ್ಲಿಯವರೆಗೆ ರಾಜ್ಯಗಳು ಸಂಗ್ರಹಿಸುತ್ತಿದ್ದ ಕೇಂದ್ರ ಮಾರಾಟ ತೆರಿಗೆ (ಸಿ.ಎಸ್.ಟಿ) ಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದರಿಂದ ರಾಜ್ಯಗಳ ತೆರಿಗೆ ಸಂಗ್ರಹಕ್ಕೆ ದೊಡ್ಡ ಹೊಡೆತ ಬೀಳಲಿದೆ.
  • ಕಾಳು ಕಡಿ ಖರೀದಿ ಮೇಲಿನ ತೆರಿಗೆಯನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರುವುದರಿಂದಾಗಿ ಕೆಲ ರಾಜ್ಯಗಳಿಗೆ ತೆರಿಗೆ ಕೊರತೆಯಾಗಲಿದೆ. ಪಂಜಾಬ್ ರಾಜ್ಯ ತನಗೆ ವರ್ಷಕ್ಕೆ 1500 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದಿದೆ.


  • ಜಿ.ಎಸ್.ಟಿ ತೆರಿಗೆಯ ಮಿತಿಯನ್ನು ಕೇಂದ್ರ 20%ಗೆ ನಿಕ್ಕಿ ಮಾಡಿದ್ದರೆ ಕರ್ನಾಟಕ ರಾಜ್ಯ ಈ ಮಿತಿಯನ್ನು 24-26%ವರೆಗೆ ನಿಗದಿ ಮಾಡುವ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿದೆ.
  • ಎಲ್ಲ ರಾಜ್ಯಗಳು ಜಿ.ಎಸ್.ಟಿ ಕೆಳಗೆ ಕೇಂದ್ರ ತರಲು ಬಯಸಿರುವ ಡಿಕ್ಲರ್ಡ್ ಗೂಡ್ಸ್ (ಘೋಷಿತ ಸರಕು) ಅನ್ನುವ ವಿಷಯವನ್ನು ವಿರೋಧಿಸಿವೆ. ಹತ್ತಿ, ಎಣ್ಣೆ, ಸಕ್ಕರೆ, ಬಟ್ಟೆ, ಕಬ್ಬಿಣ, ಸ್ಟೀಲ್, ಬೇಳೆ ಕಾಳು, ತಂಬಾಕು, ಎಲ್.ಪಿ.ಜಿ ಮುಂತಾದವುಗಳನ್ನು ಘೋಷಿತ ಸರಕಿನ ವ್ಯಾಪ್ತಿಗೆ ತರಲು ಕೇಂದ್ರ ತಂತ್ರ ರೂಪಿಸಿತ್ತು. ಒಮ್ಮೆ ಘೋಷಿತ ಸರಕು ಎಂದು ನಿರ್ಣಯವಾದರೆ ಆ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇವಲ ಕೇಂದ್ರಕ್ಕೆ ಮಾತ್ರ ದಕ್ಕಲಿದೆ. ಇದನ್ನು ಎಲ್ಲ ರಾಜ್ಯಗಳು ವಿರೋಧಿಸಿವೆ.
  • ತೈಲ ಉತ್ಪನ್ನಗಳನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಲು ಕೇಂದ್ರ ಮುಂದಾಗಿದ್ದನ್ನು ರಾಜ್ಯಗಳು ವಿರೋಧಿಸಿವೆ. ರಾಜ್ಯಗಳ 22%ಕ್ಕೂ ಅಧಿಕ ಆದಾಯ ಈ ಒಂದೇ ಮೂಲದಿಂದ ಬರುತ್ತಿರುವಾಗ ಇದರ ಮೇಲೆ ಸೂಕ್ತವೆನಿಸುವ ತೆರಿಗೆ ವಿಧಿಸುವ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಕೇಂದ್ರ ಮಾಡುತ್ತಿದೆ ಎಂದು ರಾಜ್ಯಗಳು ದೂರಿದ್ದವು.
  • ಕೇಂದ್ರ-ರಾಜ್ಯ-ರಾಜ್ಯಗಳ ನಡುವಿನ ತೆರಿಗೆ ತಕರಾರುಗಳನ್ನು ಬಗೆಹರಿಸಲು ಜಿ.ಎಸ್.ಟಿ ಯೊಡನೆ ಶುರು ಮಾಡಬೇಕೆಂದಿದ್ದ ಡಿಸ್ಪ್ಯೂಟ್ ಸೆಟ್ಲಮೆಂಟ್ ಅತಾರಿಟಿ ಒಂದು ಸಂವಿಧಾನಿಕ ಸ್ಥಾನಮಾನ ಹೊಂದುವ ವ್ಯವಸ್ಥೆಯಾಗುವುದರಿಂದ ತಕರಾರು ಬಗೆಹರಿಸಲು ಮಧ್ಯಸ್ತಿಕೆಗಿಂತ ತನ್ನ ಅಭಿಪ್ರಾಯಗಳನ್ನೇ ರಾಜ್ಯಗಳ ಮೇಲೆ ಹೇರುವಂತಹ ವ್ಯವಸ್ಥೆ ಇದಾಗಬಹುದು ಅನ್ನುವ ಆತಂಕ ರಾಜ್ಯಗಳಲ್ಲಿದ್ದು ಹೆಚ್ಚಿನ ಎಲ್ಲ ರಾಜ್ಯಗಳು ಇದನ್ನು ವಿರೋಧಿಸಿವೆ.
ಕೇಂದ್ರ ತನ್ನ ಜಿಗುಟುತನ ಬಿಡಲಿ
ಹಿಂದಿನಿಂದಲೂ ರಾಜ್ಯಗಳನ್ನು ತನ್ನ ಅಡಿಯಾಳೆಂಬಂತೆ ನೋಡಿಕೊಂಡು ಬಂದಿರುವ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ರಾಜ್ಯಗಳು ತಮ್ಮ ಹಕ್ಕಿಗಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಮೂಲಕ ಭಾರತ ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಒಂದು ಕೇಂದ್ರಿಕೃತ ವ್ಯವಸ್ಥೆಯಲ್ಲ ಅನ್ನುವ ಸಂದೇಶವನ್ನು ಕೊಟ್ಟಿವೆ. ಲೋಕಪಾಲ್ ವ್ಯಾಪ್ತಿಗೆ ಲೋಕಾಯುಕ್ತರನ್ನು ತರುವ ಪ್ರಯತ್ನ, ಉಗ್ರರ ವಿರುದ್ದದ ಹೋರಾಟದಲ್ಲಿ ರಾಜ್ಯಗಳ ಅನಿಸಿಕೆಯನ್ನೇ ಕೇಳದೇ ಎನ್.ಸಿ.ಟಿ.ಸಿ ಮಾಡಲು ಹೊರಟಿದ್ದು, ಆರ್.ಪಿ.ಎಫ್ ಬಿಲ್ ಮೂಲಕ ರೈಲ್ವೆ ಪೋಲಿಸರಿಗೆ ರಾಜ್ಯ ಪೋಲಿಸರ ಕೈಯಲ್ಲಿದ್ದ ಅಧಿಕಾರವನ್ನು ಕೊಡುವ ಪ್ರಯತ್ನ ಹೀಗೆ ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿ ನಡೆದುಕೊಂಡಿದ್ದನ್ನು ಪ್ರಾದೇಶಿಕ ಪಕ್ಷಗಳ ಆಳ್ವಿಕೆಯ ಹಲವಾರು ರಾಜ್ಯಗಳು ಉಗ್ರವಾಗಿ ವಿರೋಧಿಸಿದ್ದರ ಪರಿಣಾಮವಾಗಿ ಇಂದು ರಾಜ್ಯಗಳ ಸ್ವಾಯತ್ತತೆ ಕಾಯ್ದುಕೊಳ್ಳುವಲ್ಲಿ ಸಹಾಯವಾಗಿದೆ. ಜಿ.ಎಸ್.ಟಿ ವಿಷಯದಲ್ಲೂ ಕೇಂದ್ರ ತನ್ನ ಜಿಗುಟುತನ ಬಿಟ್ಟು ಎಲ್ಲ ರಾಜ್ಯಗಳ ಆತಂಕಗಳನ್ನು ದೂರ ಮಾಡಿ ಮುಂದಿನ ಹೆಜ್ಜೆ ಇಡಲಿ. ಹಾಗೆಯೇ, ರಾಜ್ಯಗಳ ಪರ ಧ್ವನಿ ಎತ್ತುವ ಕೆಲಸವನ್ನು ಕೇವಲ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಹೊರ ಗುತ್ತಿಗೆ ಕೊಟ್ಟಂತೆ ವರ್ತಿಸುವ ಬದಲು ಕರ್ನಾಟಕ ಸರ್ಕಾರವೂ ಒಕ್ಕೂಟದಲ್ಲಿ ತನ್ನ ನ್ಯಾಯಯುತ ಹಕ್ಕಿಗಾಗಿ ದನಿ ಎತ್ತಲಿ.

ಬುಧವಾರ, ಮಾರ್ಚ್ 13, 2013

ಜಿ.ಎಸ್.ಟಿ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳು

Goods and Services Act and it's impact on Federalism. My column in 13th March Kannada Prabha.. 

ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ Vs ಮಾರುಕಟ್ಟೆ ಆಧಾರಿತ ಸಮಾಜ

ಮೈಕಲ್ ಸ್ಯಾಂಡೆಲ್ ನಮ್ಮ ನಡುವಿನ ಅಪರೂಪದ ರಾಜಕೀಯದ ಫಿಲಾಸಫರ್ ಗಳಲ್ಲಿ ಒಬ್ಬರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ "ಜಸ್ಟಿಸ್" ಅನ್ನುವ ಕೋರ್ಸ್ ಕಲಿಸುವ ಇವರು ತಮ್ಮ "ವಾಟ್ ಮನಿ ಕಾಂಟ್ ಬಯ್ - ದಿ ಮಾರಲ್ ಲಿಮಿಟ್ಸ್ ಆಫ್ ಮಾರ್ಕೆಟ್" ಅನ್ನುವ ಹೊತ್ತಗೆಯ ಮೂಲಕ ಮುಕ್ತ ಮಾರುಕಟ್ಟೆಯ ಈ ಸಂದರ್ಭದಲ್ಲಿ ನೈತಿಕವಾದದ ಒಂದು ಬಹು ದೊಡ್ಡ ಪ್ರಶ್ನೆಯೊಂದನ್ನು ನಮ್ಮ ಮುಂದಿರಿಸಿದ್ದಾರೆ. ಅದು "ಮಂದಿಯಾಳ್ವಿಕೆಯ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಸರಿಯಾದ ಪಾತ್ರ ಏನಾಗಿರಬೇಕು? ಹಣದಿಂದ ಕೊಳ್ಳಲಾಗದ, ನೈತಿಕತೆಯ ನೆಲೆಗಟ್ಟಿನಲ್ಲಿ ಮಾತ್ರ ನೋಡಬಹುದಾದ ವಿಷಯಗಳಲ್ಲಿ ಮಾರುಕಟ್ಟೆಯ ತಲುಪಿಗೆ ಎಲ್ಲಿ ಮತ್ತು ಯಾಕೆ ಗೆರೆ ಎಳೆಯಬೇಕಿದೆ ಅನ್ನುವುದರ ಬಗ್ಗೆ ಹತ್ತಾರು ಉದಾಹರಣೆಗಳ ಸಮೇತ ಅಮೇರಿಕದ ಸಮಾಜದಲ್ಲಾಗುತ್ತಿರುವ ಚರ್ಚೆ, ತಲ್ಲಣಗಳಿಗೆ ಕನ್ನಡಿ ಹಿಡಿಯುವ ಕೆಲಸ ಈ ಹೊತ್ತಗೆಯ ಮೂಲಕ ಮಾಡಿದ್ದಾರೆ. ಮಾರುಕಟ್ಟೆಯ ವ್ಯವಸ್ಥೆಯತ್ತ ದಾಪುಗಾಲಿಡುತ್ತಿರುವ ಭಾರತ ಮತ್ತು ಕರ್ನಾಟಕದ ವ್ಯವಸ್ಥೆಗಳಿಗೂ ಅರೆಗಳಿಗೆ ನಿಂತು ನೋಡುವ ಪಾಠಗಳು ಈ ಹೊತ್ತಗೆಯಲ್ಲಿವೆ ಅನ್ನಬಹುದು.



ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಗೂ ಮಾರುಕಟ್ಟೆ ಆಧಾರಿತ ಸಮಾಜಕ್ಕೂ ವ್ಯತ್ಯಾಸವಿದೆ
ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಅಮೇರಿಕಕ್ಕೆ ತಂದು ಕೊಟ್ಟಿರುವ ಅನುಕೂಲಗಳು, ಲಾಭಗಳು, ಉದ್ಯಮಶೀಲತೆ ಮತ್ತು ಸ್ಪರ್ಧಾತ್ಮಕ ಗುಣಗಳಾವದನ್ನು ಸ್ಯಾಂಡೆಲ್ ಅಲ್ಲಗಳೆಯುವುದಿಲ್ಲ. ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ  ಜಗತ್ತಿನ ಹಲವೆಡೆ ಸಿರಿವಂತಿಕೆ, ಏಳಿಗೆಯನ್ನು ತಂದಿದೆ ಆದರೆ ಇಂದು ನಾವು ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯಿಂದ ಮಾರುಕಟ್ಟೆ ಆಧಾರಿತ ಸಮಾಜದೆಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ಇದು ಅಪಾಯಕಾರಿ ಎಂದು ಸ್ಯಾಂಡೆಲ್ ವಾದಿಸುತ್ತಾರೆ. ಹಾಗಿದ್ದರೆ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಗೂ, ಸಮಾಜಕ್ಕೂ ಏನಿದೆ ಅಂತರ ಅನ್ನುವ ಪ್ರಶ್ನೆ ಏಳುತ್ತೆ. ಅದಕ್ಕೆ ಸ್ಯಾಂಡೆಲ್ ಕೊಡುವ ಉತ್ತರ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಉತ್ಪಾದಕತೆ ಹೆಚ್ಚಿಸಲು, ಆರ್ಥಿಕ ಏಳಿಗೆ ಸಾಧಿಸಲು ಇರುವ ಅತ್ಯಂತ ಮಹತ್ವದ ಮತ್ತು ಪರಿಣಾಮಕಾರಿಯಾದ ಸಾಧನ ಆದರೆ ಮಾರುಕಟ್ಟೆ ಆಧಾರಿತ ಸಮಾಜ ಹಾಗಲ್ಲ, ಅಲ್ಲಿ ಹಣವೊಂದಿದ್ದರೆ ಸಾಕು  ಸರಿ ತಪ್ಪುಗಳ ಪ್ರಶ್ನೆಗಳೇ ಇಲ್ಲದೆ ಎಲ್ಲವೂ ಕೊಳ್ಳಲು ಸಿಗುತ್ತೆ. ಆರೋಗ್ಯ, ಕಲಿಕೆ, ಸಾರ್ವಜನಿಕ ಸುರಕ್ಷತೆ, ಪರಿಸರದ ಉಳಿವಿನಂತಹ ಸಮಾಜವೆಲ್ಲವನ್ನೂ ತಟ್ಟುವಂತಹ ವಿಷಯಗಳ ಹಂಚಕೆ ಹೇಗಾಗಬೇಕು ಅನ್ನುವುದನ್ನು ಮಾರುಕಟ್ಟೆಯೇ ನಿರ್ಧರಿಸುವ ಮಾದರಿ ಇಲ್ಲಿದೆ. ಸಮಾಜದ ಎಲ್ಲ ಹಂತದ ಎಲ್ಲ ವಿಷಯಗಳನ್ನೂ ಮಾರುಕಟ್ಟೆಯೇ ನಿರ್ಧರಿಸುವಂತಾದಾಗ ಮಾರುಕಟ್ಟೆಯಾಚೆಗಿನ ನೈತಿಕವಾದ, ಮಾನವೀಯವಾದ ಮೌಲ್ಯಗಳು ಮೂಲೆ ಸೇರಿ, ದುಡ್ಡಿದ್ದವರಿಗೆ ಎಲ್ಲವೂ ಸಿಗುತ್ತೆ, ಆದರೆ ದುಡ್ಡಿಲ್ಲದವರಿಗೆ ಏನು ದೊರೆಯದು ಅನ್ನುವಂತಹ ವ್ಯವಸ್ಥೆ ಜಾರಿಗೆ ಬಂದುಬಿಡುವ ಆತಂಕ ಅಮೇರಿಕ ಎದುರಿಸುತ್ತಿದೆ ಎಂದು ಸ್ಯಾಂಡೆಲ್ ಕಳವಳ ತೋರುತ್ತಾರೆ.


ತಮ್ಮ ಮಾತನ್ನು ಸಮರ್ಥಿಸಲು ಅವರು ಕೆಲವು ಎತ್ತುಗೆಗಳನ್ನು ಕೊಡುತ್ತಾರೆ. ಅಮೇರಿಕದ ಹಲವಾರು ರಾಜ್ಯಗಳಲ್ಲಿ ಶಾಲೆ ಮಕ್ಕಳು ತಮ್ಮ ಹೋಂ ವರ್ಕ್ ಮಾಡಿದರೆ, ಒಳ್ಳೆಯ ಫಲಿತಾಂಶ ತೋರಿದರೆ ಅವರಿಗೆ ಹಣದ ಪ್ರೋತ್ಸಾಹ ನೀಡುವ ಪದ್ದತಿ ಜಾರಿಗೆ ಬಂದಿದೆ. ಇನ್ನು ಕೆಲವು ಶಾಲೆಗಳಲ್ಲಿ ಓದುವ ಪ್ರತಿ ಹೊತ್ತಗೆಗೂ ಮಗುವಿಗೆ ಎರಡು ಡಾಲರ್ ಹಣ ಉತ್ತೇಜನದ ರೂಪದಲ್ಲಿ ಕೊಡುವ ಪದ್ದತಿ ಜಾರಿಗೆ ಬಂದಿದೆ. ಮಕ್ಕಳಿಗೆ ಕಲಿಯಲು ಹಣದ ಆಸೆ ತೋರಿಸುವಂತದ್ದು ಕೆಟ್ಟ ಪಾಟವನ್ನು ಕಲಿಸುತ್ತದೆ. ಓದುವುದು ಒಂದು ಸಾರ್ಥಕತೆ ನೀಡುವ, ಮನೋವಿಕಾಸದ ಹಾದಿಯೆಂದು ನೋಡದೇ ಹಣ ಮಾಡಲು ಇರುವ ಒಂದು ಕೆಲಸ ಅನ್ನುವ ಭಾವ ಮಕ್ಕಳಲ್ಲಿ ಬಿತ್ತುವ ಎಲ್ಲ ಅಪಾಯವಿದೆ ಅನ್ನುತ್ತಾರೆ ಸ್ಯಾಂಡೆಲ್. ಇನ್ನೊಂದು ಉದಾಹರಣೆಯಾಗಿ ಅಲ್ಲಿನ ಕೆಲ ಆಸ್ಪತ್ರೆಗಳಲ್ಲಿ ಸರದಿಯಲ್ಲಿ ಮೊದಲು ಬಂದ ರೋಗಿಯ ಬದಲು ಹಣ ತೆತ್ತು ಸರದಿ ಮುರಿದು ಬರುವ ರೋಗಿಗಳಿಗೆ ಆದ್ಯತೆ ನೀಡುವಂತಹ ಬೆಳವಣಿಗೆಗಳನ್ನ ಸ್ಯಾಂಡೆಲ್ ಎತ್ತಿ ತೋರುತ್ತಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಅನ್ನುವುದು ಸರದಿ ಧರ್ಮ. ಆದರೆ ಕೊಂಚ ಹಣ ತೆತ್ತರೆ ಸರದಿ ಮುರಿವ ಹಕ್ಕು ಸಿಗುವಂತಾದರೆ ಅಷ್ಟೊತ್ತು ಸರದಿಯಲ್ಲಿ ಕಾದ, ಆದರೆ ಹಣ ಕೊಡಲಾಗದ ವ್ಯಕ್ತಿಯ ಮನದಲ್ಲಿ ನಾವು ಯಾವ ಭಾವನೆಯನ್ನು ತುಂಬುತ್ತಿದ್ದೇವೆ? ಅಮೇರಿಕದ ಸಾಮಾಜಿಕ ಜೀವನದೆಲ್ಲೆಡೆ ಸರದಿಯಲ್ಲಿ ನಿಲ್ಲುವ ಸಂಸ್ಕಾರದ ಜಾಗದಲ್ಲಿ ಹಣದ ಸಂಸ್ಕಾರ ಬಂದು ನೆಲೆ ಕಾಣುತ್ತಿದೆ. ಇದು ಸಮಾನತೆಯ ನೆಲೆಯ ಸಮಾಜದ ಆರೋಗ್ಯದ ಕಣ್ಣಿನಿಂದ ಎಷ್ಟು ಸರಿ ಅನ್ನುವ ನೈತಿಕವಾದವನ್ನು ಅವರು ಮಂಡಿಸುತ್ತಾರೆ.

ಸಮಾಜದೊಳಿತು ಅನ್ನುವ ಮೌಲ್ಯ ಹಣ ಕೊಂಡುಕೊಳ್ಳಲಾಗದ್ದು
ಇಡೀ ಸಮಾಜಕ್ಕೆ ಒಳಿತಾಗುವಂತದ್ದನ್ನು ಮಾರುಕಟ್ಟೆಯ ಕಟ್ಟಳೆಗಳಿಂದ ಅಳೆದಾಗ ಅದರ ಪರಿಣಾಮ ಕೆಡುಕಾಗುತ್ತೆ ಅನ್ನಲು ಇನ್ನೊಂದು ಎತ್ತುಗೆಯಾಗಿ ಸ್ವೀಜರ್ ಲ್ಯಾಂಡಿನ ಹಳ್ಳಿಯೊಂದರಲ್ಲಿ ಅಣು ಕಸ ಎಸೆಯುವ ತಾಣವೊಂದನ್ನು ಮಾಡಲು ಹೊರಟಾಗ ಕಾಸರಿಗರು ಕೈಗೊಂಡ ಸಮೀಕ್ಷೆಯೊಂದನ್ನು ಅವರು ತಿಳಿಸುತ್ತಾರೆ. ಬಹು ಜನರಿಗೆ ಒಳಿತು ಮಾಡುವ ಈ ತಾಣವನ್ನು ನಿಮ್ಮ ಹಳ್ಳಿಯಲ್ಲಿ ಶುರು ಮಾಡಲು ನೀವು ಒಪ್ಪುತ್ತೀರಾ ಅಂದಾಗ ಅಲ್ಲಿನ 51% ಜನರು ಎಲ್ಲ ಜನರ ಒಳಿತಿಗಾಗಿ ಇದನ್ನು ಒಪ್ಪುತ್ತೇವೆ ಎಂದರು. ಇದಾದ ಮೇಲೆ ಕಾಸರಿಗರು ಒಪ್ಪಿಗೆ ಸೂಚಿಸಿದವರಿಗೆ ಪ್ರತಿ ವರ್ಷ ಇಂತಿಷ್ಟು ಹಣ ಸಂದಾಯ ಮಾಡಲಾಗುವುದು, ಇದಕ್ಕೆ ಒಪ್ಪಿಗೆಯಿದೆಯೇ ಎಂದು ಅದೇ ಪ್ರಶ್ನೆಯನ್ನು ಹಣದ ಆಮಿಷದೊಂದಿಗೆ ಕೇಳಿದಾಗ ಈ ತಾಣ ತಮ್ಮ ಹಳ್ಳಿಗೆ ಬರಲಿ ಎಂದವರ ಸಂಖ್ಯೆ 25%ಕ್ಕೆ ಕುಸಿಯಿತಂತೆ. ಈ ವಿಷಯದಲ್ಲಿ ಯಾವಾಗ ಮಾರುಕಟ್ಟೆ ಮೌಲ್ಯ ಒಳಬಂತೋ  ಸಮಾಜದೊಳಿತಿಗೆ ತ್ಯಾಗ ಮಾಡಲು ಸಿದ್ದರಾಗಿದ್ದ ಜನರ ವರ್ತನೆಯಲ್ಲಿ ಹಟಾತ್ ಬದಲಾವಣೆಯಾಯಿತು. ಸಮಾಜದೊಳಿತು ಅನ್ನುವ ಮೌಲ್ಯ ಹಣ ಕೊಂಡುಕೊಳ್ಳಲಾಗದ್ದು ಮತ್ತು ಅಂತಹ ಸಾಮಾಜಿಕ ಮೌಲ್ಯಗಳು ನಿರ್ಧರಿಸಬೇಕಾದ ವಿಷಯಗಳಲ್ಲಿ ಮಾರುಕಟ್ಟೆ ಮೌಲ್ಯಗಳು ಒಳಬರದಿರವುದೇ ಒಳಿತು ಅನ್ನುವ ಅಭಿಪ್ರಾಯವನ್ನು ಸ್ಯಾಂಡೆಲ್ ವ್ಯಕ್ತಪಡಿಸುತ್ತಾರೆ. ಇಂತಹ ನೂರಾರು ಉದಾಹರಣೆಗಳನ್ನು ಈ ಹೊತ್ತಗೆಯುದ್ದಕ್ಕೂ ಅವರು ನೀಡುತ್ತಾರೆ. ಮುಕ್ತ ಮಾರುಕಟ್ಟೆಯಾಧಾರಿತ ಅರ್ಥ ವ್ಯವಸ್ಥೆಗೂ  ಮುಕ್ತ ಮಾರುಕಟ್ಟೆಯಾಧಾರಿತ ಸಮಾಜಕ್ಕೂ ನಡುವಿನ ತೆಳು ಗೆರೆಯನ್ನು ನಾವು ಕಂಡುಕೊಳ್ಳದಿದ್ದರೆ ಹಣವೊಂದೇ ಎಲ್ಲವನ್ನೂ ನಿರ್ಧರಿಸುವ ಸಾಮಾಜಿಕ, ನೈತಿಕ ಮತ್ತು ಮಾನವೀಯ ಮೌಲ್ಯಗಳು ಬಲಗುಂದುವ ಸಮಾಜವಾಗಿ ಅಮೇರಿಕ ಬದಲಾಗುತ್ತೆ ಅನ್ನುವ ಆತಂಕದೊಂದಿಗೆ ಅವರ ಹೊತ್ತಗೆ ಮುಗಿಯುತ್ತೆ. ಅಂತಹದೊಂದು ಪಲ್ಲಟ ಜರುಗುತ್ತಿರುವ ಕನ್ನಡ ಸಮಾಜಕ್ಕೂ ಇಲ್ಲಿ ಕೆಲ ಪಾಠಗಳಿವೆ ಅನ್ನಿಸದೇ ಇರದು.

ಈ ಹೊತ್ತಗೆಯ ಬಗ್ಗೆ ನನ್ನ ಎರಡು ಮಾತುಗಳು ವಿಜಯ ಕರ್ನಾಟಕದ ರವಿವಾರದ  "ನಾನು ಓದುತ್ತಿರುವ ಹೊತ್ತಗೆ" ವಿಭಾಗದಲ್ಲಿ ಪ್ರಕಟಗೊಂಡಿದೆ. ಅದು ಇಲ್ಲಿದೆ:

ಶನಿವಾರ, ಮಾರ್ಚ್ 9, 2013

ವೈವಿಧ್ಯತೆಯ ಸಮಾಧಿ ಮೇಲೆ UPSC ಕಟ್ಟಲು ಹೊರಟ ಎಲೈಟ್ ವ್ಯವಸ್ಥೆ

ಯು.ಪಿ.ಎಸ್.ಸಿ ತನ್ನ ಪರೀಕ್ಷಾ ನಿಯಮಾವಳಿಗಳನ್ನು ಬದಲಾಯಿಸಿದ್ದು, ಅದಕ್ಕೆ ಮಾನ್ಯ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿರುವ ಸುದ್ದಿಯಿದೆ. ಈ ಬದಲಾವಣೆಗಳನ್ನು ಹಲವಾರು ರಾಜ್ಯಗಳು ವಿರೋಧಿಸಿವೆ. ಈ ಬದಲಾವಣೆಗಳೇನು ಮತ್ತು ರಾಜ್ಯಗಳು ಯಾಕೆ ವಿರೋಧಿಸಿವೆ ಎಂದು ಯು.ಪಿ.ಎಸ್.ಸಿ ಮಿಂಬಲೆ ತಾಣ (ಪುಟ 12)  ನೋಡಿದಾಗ ಕಂಡಿದ್ದು ನಿಜಕ್ಕೂ ಅಚ್ಚರಿ ತರುವಂತದ್ದು. ಭಾರತದ ವೈವಿಧ್ಯತೆಯನ್ನು ಶವಪೆಟ್ಟಿಗೆಯೊಳಗೆ ಕೂರಿಸಿ ಪೆಟ್ಟಿಗೆಗೆ ಹೊಡೆಯುತ್ತಿರುವ ಮೊಳೆಗೆ ಇನ್ನೊಂದು ಮೊಳೆ ಸೇರ್ಪಡೆಯಾಗಿದೆ. ಯು.ಪಿ.ಎಸ್.ಸಿಯ  ಬದಲಾದ ನಿಯಮಗಳು ಮತ್ತು ಕನ್ನಡಿಗನೊಬ್ಬನ ಮೇಲೆ ಅದರ ಪರಿಣಾಮಗಳು ಇಂತಿವೆ:




  1. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಪದವಿ ಪಡೆದವರು ಮಾತ್ರ ಮುಖ್ಯ ಪರೀಕ್ಷೆಯಲ್ಲಿ  ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಮುಖ್ಯ ಪರೀಕ್ಷೆ ಬರೆಯಬಹುದು. ಹಿಂದಿನಂತೆ ಯಾವುದೇ ಮಾಧ್ಯಮದಲ್ಲಿ, ಯಾವ ವಿಷಯವನ್ನೇ ಓದಿದ್ದರೂ ಐಚ್ಛಿಕ ವಿಷಯವಾಗಿ ಅಭ್ಯರ್ಥಿಯ ತಾಯ್ನುಡಿಯಲ್ಲಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳಲಾಗದು. ಆದರೆ ಈ ನಿಯಮ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿರುವ ಗಣಿತ, ಅರ್ಥಶಾಸ್ತ್ರ, ಇಂಜಿನಿಯರಿಂಗ್ ಮುಂತಾದ ವಿಷಯಗಳಿಗೆ ಅನ್ವಯಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರತಿಭೆಗಳು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಾಹಿತ್ಯದ ವಿಷಯಕ್ಕೆ ಮಾತ್ರ ರೂಪಿಸಲಾಗಿದೆ. ಕನ್ನಡದಂತಹ ನುಡಿಯಲ್ಲಿ ಲಭ್ಯವಿದ್ದಿದ್ದೇ ಸಾಹಿತ್ಯದಂತಹ ವಿಷಯಗಳು. ಈಗ ಕೇವಲ ಸಾಹಿತ್ಯ ಓದಿದವರಿಗೆ ಮಾತ್ರ ಅದನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬಹುದು ಅನ್ನುವ ಮೂಲಕ ಇಂಜಿನಿಯರಿಂಗ್, ಕಾನೂನು, ವೈದ್ಯಕೀಯ ಪದವಿ ಪಡೆದು ಕನ್ನಡ ಸಾಹಿತ್ಯ ಆಯ್ದುಕೊಂಡು ಪರೀಕ್ಷೆ ಬರೆಯುತ್ತಿದ್ದ ಕನ್ನಡಿಗರಿಗೆ ಮೋಸವಾಗಲಿದೆ. ಇದೇ ಪಾಡು ಇತರೆ ಭಾಷಿಕರದ್ದು ಆಗಲಿದೆ.
  2. ಯಾವ ಮಾಧ್ಯಮದಲ್ಲಿ  ಅಭ್ಯರ್ಥಿಯ ಡಿಗ್ರಿ ಆಗಿದೆಯೋ ಅದೇ ಮಾಧ್ಯಮದಲ್ಲಿ ಆತ ಪರೀಕ್ಷೆ ಬರೆಯಬೇಕು. ಅಂದರೆ ಇಂಗ್ಲಿಶ್ ಮಾಧ್ಯಮದಲ್ಲಿ ಡಿಗ್ರಿ ಓದಿದ ಕನ್ನಡಿಗನೊಬ್ಬ ಕನ್ನಡ ಭಾಷೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತಿಲ್ಲ. ಕರ್ನಾಟಕದಿಂದ ಇತ್ತಿಚೆಗೆ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಬಹಳಷ್ಟು ಜನರು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನು ವೃತ್ತಿಯಿಂದ ಬಂದವರು ಮತ್ತು ತಮ್ಮ ಡಿಗ್ರಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದವರು, ಆದರೆ ಅವರಾರು ಈ ನಿಯಮದ ದೆಸೆಯಿಂದ ಬಯಸಿದರೂ ಕನ್ನಡದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲಾರರು.
  3. ಒಬ್ಬ ಕನ್ನಡ ಮಾಧ್ಯಮದಲ್ಲಿ ಓದಿದದವನು ಕನ್ನಡದಲ್ಲೇ ಪರೀಕ್ಷೆಯ ಆಯ್ಕೆ ಕೈಗೊಂಡಾಗಲೂ ಅವನೊಂದಿಗೆ ಕೊನೆ ಪಕ್ಷ 25 ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಿಗಬೇಕು. ಇಲ್ಲದಿದ್ದಲ್ಲಿ ಅವನಿಗೆ ಕೊಟ್ಟ ಕನ್ನಡ ಆಯ್ಕೆಯನ್ನು ಹಿಂಪಡೆದು ಅವರು ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು ಅನ್ನುವ ನಿಯಮ ರೂಪಿಸಲಾಗಿದೆ. 
  4. ಕನ್ನಡದಲ್ಲಿ ಪರೀಕ್ಷೆ ಬರೆಯುವವನು ತನ್ನ ಉತ್ತರದಲ್ಲಿ ಬರುವ ತಾಂತ್ರಿಕ ಶಬ್ದಗಳಿಗೆ ಬ್ರಾಕೆಟ್ಟಿನಲ್ಲಿ ಇಂಗ್ಲಿಷಿನಲ್ಲಿ ವಿವರಣೆ ಬರೆಯಬಹುದು. ಆದರೆ ಅಭ್ಯರ್ಥಿ ಈ ಆಯ್ಕೆಯನ್ನು ಸರಿಯಾಗಿ ಬಳಸದಿದ್ದರೆ ಅಂಕ ಕಡಿತಗೊಳಿಸಲಾಗುವುದು ಅನ್ನುವ ಮೂಲಕ ಇಂಗ್ಲಿಷ್ ಮತ್ತು ಹಿಂದಿಯೇತರ ನುಡಿಗಳಲ್ಲಿ ಪರೀಕ್ಷೆ ಬರೆಯುವುದು ಒಂದು ರೀತಿಯಲ್ಲಿ ರಿಸ್ಕ್ ಅನ್ನುವ ಭಾವನೆಯನ್ನು ಅಭ್ಯರ್ಥಿಗಳಲ್ಲಿ ತರುವ ನಿಯಮ ರೂಪಿಸಲಾಗಿದೆ.
  5. ಸಾಹಿತ್ಯದ ವಿಷಯವೊಂದನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನೀಡಲಾಗುವುದು ಅನ್ನುವ ನಿಯಮ ರೂಪಿಸಲಾಗಿದೆ. ಅಲ್ಲಿಗೆ ಇನ್ನುಳಿದ ಭಾಷೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಸಂದೇಶವನ್ನು ಎಲ್ಲ ಭಾಷೆಗಳನ್ನು ಸಮಾನವೆಂದು ಕಾಣಬೇಕಾದ ಕೇಂದ್ರದ ವ್ಯವಸ್ಥೆಯೇ ನೀಡುತ್ತಿದೆ.
  6. ಮುಖ್ಯ ಪರೀಕ್ಷೆಯಲ್ಲಿ ಎರಡು ಐಚ್ಛಿಕ ವಿಷಯಗಳು ಸೇರಿದಂತೆ ಏಳು ಪತ್ರಿಕೆಗಳಿವೆ. ಅದರಲ್ಲಿ ಇಂಗ್ಲಿಷ್ ಜ್ಞಾನವನ್ನು ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯೂ ಒಂದು. ಇನ್ನು ಮುಂದೆ ಈ ಏಳರಲ್ಲೂ ಪಡೆದ ಅಂಕಗಳನ್ನು ಒಟ್ಟು ಮಾಡಿ ರಾಂಕ್ ಪಟ್ಟಿ ನೀಡಲಾಗುವುದು.ಈ ಮುಂಚೆ ಇಂಗ್ಲಿಷ್ ಮತ್ತು ಒಂದು ಐಚ್ಛಿಕ ವಿಷಯದಲ್ಲಿ ಅರ್ಹತೆ ಪಡೆಯಬೇಕಾಗಿದ್ದರೂ ಅಂತಿಮ ಆಯ್ಕೆಯಲ್ಲಿ ಈ ವಿಷಯಗಳ ಅಂಕಗಳನ್ನು ಲೆಕ್ಕಕ್ಕೆ ಪಡಯುತ್ತಿರಲಿಲ್ಲ. ಆದರೆ ಈಗ ಇಂಗ್ಲಿಷಿನಲ್ಲಿನ ಅಂಕವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದಾಗಿ ಇಂಗ್ಲಿಶ್ ಮೇಲೆ ಹಿಡಿತ ಸಾಧಿಸುವವರಿಗೆ ಸಹಜವಾಗಿ ಮೇಲುಗೈ ದೊರೆಯುತ್ತದೆ.
  7. ಯಾವುದೇ ಒಂದು ಇಲ್ಲವೇ ಎಲ್ಲ ವಿಷಯಗಳಲ್ಲೂ ಅರ್ಹತಾ ಅಂಕವನ್ನು  ತನಗೆ ತೋಚಿದಂತೆ ನಿರ್ಧರಿಸುವ ಹಕ್ಕು ಯು.ಪಿ.ಎಸ್.ಸಿ ಪಡೆದುಕೊಂಡಿದೆ. ಇದರರ್ಥ ಎಲ್ಲ ವಿಷಯಗಳಲ್ಲೂ ಚೆನ್ನಾಗಿ ಸಾಧನೆ ಮಾಡಿದರೂ ಇಂಗ್ಲಿಷಿನಲ್ಲಿ ಅಂಕ ಕಡಿಮೆ ಪಡೆದ ಕನ್ನಡಿಗನೊಬ್ಬ ಅದೇ ಕಾರಣಕ್ಕೆ ಆಯ್ಕೆಯಾಗಲು ಸಾಧ್ಯವೇ ಇಲ್ಲದ ಸ್ಥಿತಿ ಬಂದಿದೆ.
ಇಂಗ್ಲಿಶ್ ಮತ್ತು ಹಿಂದಿ ಬಲ್ಲವರಷ್ಟೇ ನಡೆಸುವ ನಿಯಂತ್ರಿಸುವ ಎಲೈಟ್ ವ್ಯವಸ್ಥೆ ಕಟ್ಟುವ ಕೆಲಸ !
ಪ್ರಿಲಿಮ್ಸ್ ಹಂತದಲ್ಲಿ ಇದ್ದ ಐಚ್ಛಿಕ ವಿಷಯಗಳ ಆಯ್ಕೆಯನ್ನು ಎರಡು ವರ್ಷದ ಹಿಂದೆ ರದ್ದು ಮಾಡಿದ್ದ ಯು.ಪಿ.ಎಸ್.ಸಿ ಅದರ ಜಾಗದಲ್ಲಿ ಇಂಗ್ಲಿಶ್ ಅಪ್ಟಿಟ್ಯೂಡ್ ಪರೀಕ್ಷೆಯನ್ನು ಸೇರಿಸಿತ್ತು, ಇದರಿಂದಾಗಿ ತಾಯ್ನುಡಿಯಲ್ಲಿ ಕಲಿತ ಹಲವರು ಇಂಗ್ಲಿಶ್ ಚೆನ್ನಾಗಿ ಬಾರದ ಕಾರಣಕ್ಕೆ ಪ್ರಿಲಿಮ್ಸ್ ಹಂತವನ್ನೇ ದಾಟುವುದು ಕಷ್ಟವಾಗಿತ್ತು. ಈಗ ಮುಖ್ಯ ಪರೀಕ್ಷೆಯಲ್ಲಿ ಮಾಡಿರುವ ಈ ಬದಲಾವಣೆಗಳು ಹಿಂದಿ/ಇಂಗ್ಲಿಶ್ ಬಾರದ ಭಾರತೀಯರನ್ನು ಯು.ಪಿ.ಎಸ್.ಸಿಯಿಂದ ಹೆಚ್ಚು ಕಡಿಮೆ ಆಚೆ ತಳ್ಳುವಂತಿದೆ. ಆ ಮೂಲಕ ಕೇಂದ್ರದ ವ್ಯವಸ್ಥೆಯೆಲ್ಲವನ್ನು ಕೇವಲ ಇಂಗ್ಲಿಶ್ ಮತ್ತು ಹಿಂದಿ ಬಲ್ಲವರಷ್ಟೇ ನಡೆಸುವ ನಿಯಂತ್ರಿಸುವ ಎಲೈಟ್ ವ್ಯವಸ್ಥೆ ಕಟ್ಟುವ ಕೆಲಸವಾಗುತ್ತಿದೆ. ಇದು ಸಂವಿಧಾನದಲ್ಲಿ ಇರುವ ಸಮಾನ ಅವಕಾಶದ ಆಶಯಗಳಿಗೆ ವಿರುದ್ಧವಾದುದಾಗಿದೆ. ಹಿಂದಿ/ಇಂಗ್ಲಿಷ್ ಎರಡೇ ಭಾಷೆ ಬಲ್ಲವರು ನಾಳೆ ಕರ್ನಾಟಕದ ಸೇವೆಗೆ ನಿಯುಕ್ತರಾದಾಗ ಅವರು ಕನ್ನಡದಲ್ಲಿ ಆಡಳಿತ ಅನುಷ್ಟಾನ ಮಾಡಲಿ ಅನ್ನುವುದು ತಿರುಕನ ಕನಸು ಅನ್ನಿಸುವುದಿಲ್ಲವೇ? ಜನರ ನುಡಿಯಲ್ಲಿ ಆಡಳಿತ ರೂಪಿಸಲು ಸಾಧ್ಯವೇ ಇಲ್ಲದ ಅಧಿಕಾರಿಗಳನ್ನು ಹೊಂದಿದ ಮೇಲೆ ಆ ವ್ಯವಸ್ಥೆ ಜನರಿಂದ ಇನ್ನಷ್ಟು ದೂರಕ್ಕೆ ಹೋಗುವುದಿಲ್ಲವೇ? ಅಲ್ಲಿಗೆ ಪ್ರಜಾಪ್ರಭುತ್ವವೇ ಬಲಹೀನಗೊಂಡಂತಾಗುವುದಿಲ್ಲವೇ? ಈ ಬಗ್ಗೆ ಚುನಾವಣೆಯಲ್ಲಿ ಮುಳುಗಿರುವ ನಮ್ಮನ್ನಾಳುವ ದೊರೆಗಳು ಇತರೆ ರಾಜ್ಯಗಳ ಜೊತೆ ಸೇರಿ ದನಿ ಈ ಹಿಂದಿ ಅಧಿಕಾರಶಾಹಿಯ ವಿರುದ್ದ ದನಿ ಎತ್ತಲಿ. ಸಂಸತ್ತಿನಲ್ಲಿ ಮೌನ ವೃತ ಆಚರಿಸುವ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ಸಂಸದರು ಬಾಯಿ ಬಿಟ್ಟು ಈ ಅನ್ಯಾಯದ ಬಗ್ಗೆ ಪ್ರತಿಭಟಿಸಿ ಕನ್ನಡದ ಅಭ್ಯರ್ಥಿಗಳ ಹಿತ ಕಾಯಲಿ ಅಥವಾ ಅದಕ್ಕೂ ಇವರ ಹೈಕಮಾಂಡಿನ ಅಪ್ಪಣೆ ಸಿಗಬೇಕೊ ಗೊತ್ತಿಲ್ಲ.

ಮಂಗಳವಾರ, ಜನವರಿ 15, 2013

ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ - ಸಂವಿಧಾನ ತಿದ್ದುಪಡಿಯಾಗಲಿ

ಸರೋಜಿನಿ ಮಹಿಷಿ ವರದಿ ಅನುಷ್ಟಾನ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು ಅನ್ನುವ  ಬೇಡಿಕೆಗೆ ಸಂವಿಧಾನದಲ್ಲಿ ಯಾವುದೇ ಮಾನ್ಯತೆಯಿಲ್ಲ ಆದ್ದರಿಂದ ಇದು ಕಾನೂನು ಬಾಹಿರವೂ, ದೇಶದ ಹಿತಾಸಕ್ತಿಗೆ ವಿರೋಧವಾದುದು ಎಂದು ಮಾನ್ಯ ನ್ಯಾಯಮೂರ್ತಿಗಳು ಅನಿಸಿಕೆ ವ್ಯಕ್ತಪಡಿಸಿರುವ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ವರದಿಗಳಿವೆ. ಹಾಗಿದ್ದರೆ ಇಂತಹ ಬೇಡಿಕೆಗಳು ಪ್ರಜಾಸತ್ತಾತ್ಮಕವಾದ, ನ್ಯಾಯಯುತವಾದ ಬೇಡಿಕೆ ಅಲ್ಲವೇ ಅನ್ನುವುದನ್ನು ನೋಡಬೇಕಿದೆ. 
ಉದ್ಯೋಗದಲ್ಲಿ ಆದ್ಯತೆ ಬೇಡಿಕೆ ತಪ್ಪೇ?
ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಸ್ಥಾಪನೆಯ ಉದ್ದೇಶವೇ ಭಾಷೆ, ಆಚರಣೆ, ಸಂಸ್ಕ್ರುತಿ, ಆಸೆ, ಆಶೋತ್ತರಗಳಲ್ಲಿ ವೈವಿಧ್ಯತೆ ಹೊಂದಿರುವ ಈ ಒಕ್ಕೂಟದಲ್ಲಿ ಎಲ್ಲ ಭಾಷಿಕರು ಸಮಾನತೆಯ ನೆಲೆಯಲ್ಲಿ, ಸಮಾನ ಗೌರವದೊಂದಿಗೆ ಬದುಕು ಕಟ್ಟಿಕೊಳ್ಳುವಂತಾಗಬೇಕು ಅನ್ನುವ ಸಂವಿಧಾನದ ಆಶಯದೊಂದಿಗೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಭಾಷಿಕರ ಬದುಕಿನ ಹಕ್ಕನ್ನು ರಕ್ಷಿಸಿಕೊಳ್ಳುವ, ಕಟ್ಟಿಕೊಳ್ಳುವ ಎಲ್ಲ ಹಕ್ಕು ಅಲ್ಲಿನ ರಾಜ್ಯ ಸರ್ಕಾರಕ್ಕಿದೆ. ಕರ್ನಾಟಕದ ಕನ್ನಡಿಗರ ಬದುಕು ಹಸನಾಗಲಿ ಎಂದೇ ರಾಜ್ಯ ಸರ್ಕಾರ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಭೂಮಿ, ವಿದ್ಯುತ್, ನೀರು ಹಾಗೂ ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳನ್ನು ಉದ್ಯಮಿಗಳಿಗೆ ನೀಡಿದೆ. ಈ ಉದ್ದಿಮೆಗಳ ಸ್ಥಾಪನೆಗಾಗಿಯೇ ಇಲ್ಲಿನ ಸ್ಥಳೀಯರು ಹತ್ತಾರು ತ್ಯಾಗಗಳನ್ನು ಮಾಡಿದ್ದಾರೆ. ಹೀಗಿರುವಾಗ ಇದರ ಫಲವಾಗಿ ಹುಟ್ಟುವ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಲಿ ಅನ್ನುವುದು ಅತ್ಯಂತ ನ್ಯಾಯಯುತವೂ, ಪ್ರಜಾಸತ್ತಾತ್ಮಕವಾದ ಬೇಡಿಕೆಯೇ ಅನ್ನಬಹುದು. ಇವತ್ತು ಕರ್ನಾಟಕದಲ್ಲಿ ಹಲ ಮೇಲ್ವರ್ಗದ ಜನರನ್ನು ಬಿಟ್ಟರೆ ಉಳಿದ ಬಹುಸಂಖ್ಯಾತರಿಗೆ ಶಿಕ್ಷಣ, ಉದ್ಯೋಗದ ವಿಷಯದಲ್ಲಿ ಸಾಮಾಜಿಕ ಸ್ತರದಲ್ಲಿ ಮೇಲೆ ಬರಲು ಸಹಾಯವಾಗಲು ಇಂತಹ ನಿಯಮಗಳನ್ನು ರೂಪಿಸುವುದರಲ್ಲಿ ತಪ್ಪೂ ಇಲ್ಲ. ಇವತ್ತಿನ ಭಾರತದ ಸಂವಿಧಾನದಲ್ಲಿ ಇಂತಹ ಬೇಡಿಕೆಗೆ ಮನ್ನಣೆ ಇಲ್ಲದಿದ್ದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯರ ಬದುಕಿನ ಹಕ್ಕಿನ ರಕ್ಷಣೆಗೆ ಅವಕಾಶ ಕಲ್ಪಿಸುವುದು ಸರಿಯಾದ ಹಾದಿಯಾಗಿದೆ. 
ಈ ಬಗ್ಗೆ ಗಮನ ಹರಿಸಲು ಹಲ ಕಾರಣಗಳೂ ಇವೆ!
ಇಂತಹದೊಂದು ತಿದ್ದುಪಡಿಗೆ ಬೇಕಿರುವ ಬೆಂಬಲವನ್ನು ರಾಜಕೀಯ ನೆಲೆಯಲ್ಲಿ ಕಟ್ಟಿಕೊಳ್ಳುವತ್ತ ಕನ್ನಡಿಗರು, ಕನ್ನಡಿಗರನ್ನು ಆಳುವವರು ತುರ್ತು ಗಮನ ಹರಿಸಲು ಬಹಳ ಮಹತ್ವದ ಹಲ ಕಾರಣಗಳೂ ಇವೆ. ಕರ್ನಾಟಕ ಸ್ವಾತಂತ್ರ್ಯ ಪೂರ್ವದ ಅವಧಿಯಿಂದಲೂ ಶಿಕ್ಷಣ, ಔದ್ಯೋಗಿಕರಣದಂತಹ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದ್ದ ರಾಜ್ಯವಾಗಿದೆ. ಇಲ್ಲಿನ ಜನಸಂಖ್ಯೆಯ ಸಾಂದ್ರತೆಯೂ ಬಹಳ ಚಿಕ್ಕದಿದೆ. ಎಷ್ಟು ಚಿಕ್ಕದು ಅಂದರೆ ಕೆಲ ಯೂರೋಪಿನ ದೇಶಗಳಿಗೆ ಹೋಲಿಸುವಷ್ಟು ಚಿಕ್ಕದು. 2001ರ ಜನಗಣತಿಯ ಪ್ರಕಾರ ಚದರ ಕಿಲೋ ಮೀಟರಿಗೆ ಕೇವಲ 252 ಜನರು ಕರ್ನಾಟಕದಲ್ಲಿದ್ದರೆ, ಈ ಪ್ರಮಾಣ ಜನಸಂಖ್ಯೆಯ ಸಮಸ್ಯೆಯಿಂದ ಬಳಲುತ್ತಿರುವ ಉತ್ತರದ ಹಲವು ರಾಜ್ಯಗಳಲ್ಲಿ ಎರಡರಿಂದ ಐದು ಪಟ್ಟು ಹೆಚ್ಚಿದೆ. ಭಾರತ ಒಂದು ಒಕ್ಕೂಟ ವ್ಯವಸ್ಥೆಯಾದರೂ ಅನಿಯಂತ್ರಿತ ವಲಸೆ ನಿಯಂತ್ರಣಕ್ಕೆ ಯಾವುದೇ ಕಾನೂನು ಇಲ್ಲದಿರುವುದರಿಂದ ಆರ್ಥಿಕ ಚಟುವಟಿಕೆಗಳಲ್ಲಿ ಮುಂದಿರುವ, ಆದರೆ ಜನಸಾಂದ್ರತೆ ಅಷ್ಟಾಗಿ ಇಲ್ಲದಿರುವ ಕರ್ನಾಟಕದಂತಹ ರಾಜ್ಯಗಳಿಗೆ ಕೋಡಿ ಬಿದ್ದ ಕೆರೆಯಂತೆ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಂದ ವಲಸೆ ಹರಿದು ಬರುತ್ತಿದೆ ಮತ್ತು ಕರ್ನಾಟಕದ ಜನಲಕ್ಷಣ ತೀವ್ರ ಗತಿಯಲ್ಲಿ ಬದಲಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯರ ಬದುಕಿನ ರಕ್ಷಣೆಗೆ ಬೇಕಿರುವ ಯಾವುದೇ ಕಾನೂನಿನ ಬಲವೂ ಇಲ್ಲದಿದ್ದರೆ ಇನ್ನು ಕೆಲವೇ ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡಿಗರ ಪಾಡು ಇನ್ನಷ್ಟು ಹೀನಾಯವಾಗುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯದಲ್ಲಿ ಹುಟ್ಟುವ ಉದ್ಯೋಗದಲ್ಲಿ ಅಲ್ಲಿನ ಸ್ಥಳೀಯರಿಗೆ ಆದ್ಯತೆ ಕೊಡುವಂತೆ ಸಂವಿಧಾನ ತಿದ್ದುಪಡಿಯಾಗುವುದು ಅತ್ಯಂತ ಪ್ರಜಾಸತ್ತಾತ್ಮಕವಾದ ಬೇಡಿಕೆಯಾಗಿದೆ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವ ಸಂದರ್ಭದಲ್ಲಿ ಹೈಕಮಾಂಡ್ ಅಣತಿಯಂತೆ ನಡೆಯುವ ರಾಷ್ಟ್ರೀಯ ಪಕ್ಷಗಳಿಗೆ ಆಗದಿದ್ದರೂ ಕೊನೆಯ ಪಕ್ಷ ಮೂರು ಪ್ರಾದೇಶಿಕ ಪಕ್ಷಗಳಾದರೂ ಈ ಬೇಡಿಕೆಗೆ ರಾಜಕೀಯವಾದ ಪರಿಹಾರ ಕಂಡುಹಿಡಿಯುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸುವಂತಾಗಬೇಕು. ಒಕ್ಕೂಟ ಮಟ್ಟದಲ್ಲಿ ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸುವಂತಾಗಬೇಕು ಮತ್ತು ಈ ನಿಟ್ಟಿನಲ್ಲಿ ಇತರ ರಾಜ್ಯದ ಪಕ್ಷಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಇನ್ನೆರಡು ದಶಕಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕನ್ನಡಿಗರ ಬಲ ಇನ್ನಷ್ಟು ಕುಗ್ಗುವುದನ್ನು ತಡೆಯಲಾಗದು.