ಗುರುವಾರ, ಡಿಸೆಂಬರ್ 31, 2009

ಮುತ್ತಿನ ಹಾರದ ನೂರೊಂದು ನೆನಪು

ನಿನ್ನೆ ಬೆಳಿಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಸಾವನ್ನಪ್ಪಿದ ಸುದ್ಧಿ ಕೇಳಿ ಕೆಲ ಕಾಲ ತಲೆನೇ ಓಡಲಿಲ್ಲ. ಟಿ.ವಿಯಲ್ಲಿ ಸುದ್ಧಿ ನೋಡುತ್ತಾ "ಛೇ, ಇಷ್ಟು ಬೇಗ ಹೀಗಾಗಬಾರದಿತ್ತು" ಅಂದುಕೊಂಡೆ. ಹಾಗೆಯೇ ಮನಸ್ಸು ನೆನಪಿನಾಳಕ್ಕೆ ಇಳಿದು ನಾನು ಓದಿ, ಬೆಳೆದ ಧಾರವಾಡ ಜಿಲ್ಲೆಯ ಕಲಘಟಗಿ ಅನ್ನುವ ಊರಿನಲ್ಲಿ ವಿಷ್ಣು ಸಿನೆಮಾ ನೋಡಲು ಪಟ್ಟ ಹರಸಾಹಸಗಳನ್ನು ನೆನಪಿಗೆ ತಂದಿತು.

ನನ್ನೂರಿನ ಒಂದೇ ಒಂದು ಥಿಯೇಟರ್ ಶಿವಗಂಗಾ !
ಅದು ಇಸವಿ 1990-91 ಅನ್ನಿಸುತ್ತೆ, ಮುತ್ತಿನ ಹಾರ ಚಿತ್ರ ಬಿಡುಗಡೆಯಾಗಿ ಎಲ್ಲೆಲ್ಲೂ ಅದೇ ಚಿತ್ರದ ಸುದ್ಧಿ. ನನ್ನ ಊರಲ್ಲಿ ಇದ್ದ ಒಂದೇ ಒಂದು ಥಿಯೇಟರ್ ಅಂದ್ರೆ ಶಿವಗಂಗಾ ಚಿತ್ರ ಮಂದಿರ. ಬಾಲ್ಕನಿಯ ಕಲ್ಲಿನ ಸೀಟಿಗೆ ಆಗ 5 ರೂಪಾಯಿ ಚಾರ್ಜ್. ಹೆಚ್ಚಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಬಿಡುಗಡೆಯಾದ ಆರು ತಿಂಗಳು - ಒಂದು ವರ್ಷದ ಮೇಲಷ್ಟೇ ಕನ್ನಡ ಚಿತ್ರಗಳು ನನ್ನೂರಿಗೆ ಬರ್ತಾ ಇದ್ದಿದ್ದು, ಅಂತಾದ್ರಲ್ಲಿ ಮುತ್ತಿನ ಹಾರ ಕೂಡಾ ಬೇರೆಡೆ ಬಿಡುಗಡೆಯಾದ ಆರು ತಿಂಗಳ ನಂತರ ನನ್ನೂರಿನ ಶಿವಗಂಗಾ ಚಿತ್ರ ಮಂದಿರಕ್ಕೆ ಬಂದಿತ್ತು. ಆದ್ರೆ ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ನೋಡಲು 5 ರೂಪಾಯಿ ಅಪ್ಪನ್ನ ಹತ್ತಿರ ಕೇಳಲು ಭಯ. ಆಗಾಗ ಅಮ್ಮನಿಂದ 50 ಪೈಸೆ ಚಿಕ್ಕಿ, ಕಡ್ಲಿ, ಪಾಪಡಿ, ಬೊಂಬಾಯ್ ಮೀಠಾಯಿ ತಿನ್ನಲು ಸಿಗ್ತಾ ಇತ್ತು. ದಿನವೂ 50 ಪೈಸೆ ಇಸ್ಕೊಂಡು 5 ರೂಪಾಯಿ ಒಟ್ಟುಗೂಡಿಸಲು ಕಮ್ಮಿ ಅಂದ್ರೂ 10 ದಿನ ಆದ್ರೂ ಬೇಕು. ಆದ್ರೆ ನಮ್ಮೂರಿನ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಓಡುತ್ತಾ ಇದ್ದದ್ದೇ 1 ವಾರ ಮಾತ್ರ ( ಬರೀ 25,000 ಜನಸಂಖ್ಯೆಯುಳ್ಳ ಚಿಕ್ಕ ಊರು ಅದಾಗಿದ್ದದ್ದು ಇದಕ್ಕೆ ಕಾರಣವಾಗಿತ್ತು). ಈ ಚಾನ್ಸ್ ಮಿಸ್ ಮಾಡ್ಕೊಂಡ್ರೆ ಮುತ್ತಿನ ಹಾರ ನೋಡಲು ಸಾಧ್ಯವೇ ಇಲ್ಲ ಅನ್ನಿಸ್ತಾ ಇತ್ತು. ಆಗಲೇ ಒಂದಿಬ್ರು ಗೆಳೆಯರು ಸಿನೆಮಾ ನೋಡಿ, ಅಲ್ಲಿನ ಯುದ್ಧದ ದೃಶ್ಯ, ಮಾಸ್ಟರ್ ಆನಂದನ ಅಭಿನಯ, ವಿಷ್ಣು ಅವರ ಅಭಿನಯದ ಬಗ್ಗೆ ಹೇಳಿ ನನ್ನಲ್ಲಿ ತಡೆದುಕೊಳ್ಳಲಾಗದ ಕಾತುರವಾಗಿತ್ತು. ಆಗ ನೆನಪಾದವನು ನನ್ನ ಗೆಳೆಯ ದೀಪಕ್ ರೇವಣಕರ್. ಅವ್ರ ತಂದೆ ಅಕ್ಕಸಾಲಿಗರಾಗಿದ್ದರಿಂದ ಅವನ ಹತ್ರ ನನಕ್ಕಿಂತ 4 ಪಟ್ಟು ಹೆಚ್ಚು ಪಾಕೆಟ್ ಮನಿ ಇರ್ತಾ ಇತ್ತು ( ಅಂದ್ರೆ 2 ರೂಪಾಯಿ :) ). ಅವನ ಹತ್ರ ಹೋಗಿ " ಲೇ ದೀಪ್ಯಾ,, ಒಂದು 4 ರೂಪಾಯಿ ಸಾಲ ಕೊಡಲೇ, ಮುಂದಿನ ವಾರ ಅಂದ್ರೆ ತೀರಿಸಿ ಬಿಡ್ತೆನಿ" ಅಂದೆ. ಅವನಿಗೆ ಏನ್ ಅನ್ನಿಸ್ತೋ ಒಂದೇ ಮಾತಿಗೆ ಕೊಟ್ಟು ಬಿಟ್ಟ. ಅದನ್ನೆತ್ತಿಕೊಂಡು ಶನಿವಾರ ಸಂಜೆ ಶೋಗೆ ಮುತ್ತಿನ ಹಾರ ಚಿತ್ರಕ್ಕೆ ಹೋಗೇ ಬಿಟ್ಟೆ. ಚಿತ್ರದಲ್ಲಿ ಮೇಜರ್ ಅಚ್ಚಪ್ಪನ ಮಗನ ಪಾತ್ರದಲ್ಲಿ ಮಾಸ್ಟರ್ ಆನಂದ "ವೀರರಾಜು" ಅನ್ನೋ ಪಾತ್ರ ಮಾಡಿದ್ರು. ಶತ್ರು ದೇಶದ ವಿಮಾನ ನೋಡಿ, ಅಮ್ಮ ಅನ್ನುತ್ತ ಸುಹಾಸಿನಿಯವರ ಹತ್ರ ಬರೋದ್ರೊಳಗೆ ಬಾಂಬ್ ದಾಳಿಗೆ ತುತ್ತಾಗಿ ವೀರರಾಜು ಸತ್ತಾಗ, ಅವನ ಮೃತ ದೇಹವನ್ನು ಉಸುಕಿನಲ್ಲೇ ಮಣ್ಣು ಮಾಡುವ ದೃಶ್ಯ ನೋಡಿ ಕಣ್ತುಂಬಿ ಬಂದಿತ್ತು. ಅದಾದ ಮೇಲೆ, ವಿಷ್ಣು ತನ್ನ ಮಗನ ಸಮಾಧಿಯತ್ತ ಬಂದು "ವೀರರಾಜು" ಅಂತ ಅಳೊ ದೃಶ್ಯ ನೋಡಿ ಇಡೀ ಚಿತ್ರ ಮಂದಿರ ಕಣ್ಣೀರುಗರೆದಿತ್ತು. ಅವರ ಸುಪ್ರಭಾತ, ಬಂಧನ, ಯಜಮಾನ ಮುಂತಾದ ಚಿತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಹಳ್ಳಿಜನರು ಚಕ್ಕಡಿ ಮಾಡಿಕೊಂಡು ಸೆಕೆಂಡ್ ಶೋ ಗೆ ಬರುತ್ತಿದ್ದ ದೃಶ್ಯಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.  ಇದೆಲ್ಲ ನಿನ್ನೆ ವಿಷ್ಣು ಸಾವಿನ ಸುದ್ಧಿ ಕೇಳಿದಾಗ ನೆನಪಾಯ್ತು.



ಹಲವಾರು ಬಾರಿ, ನಾಡ ಪರ ಹೋರಾಟಗಳ ವಿಷಯದಲ್ಲಿ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ಸಾಕಷ್ಟು ಅಸಮಾಧಾನವಿದ್ದರೂ, ಒಬ್ಬ ಕಲಾವಿದನಾಗಿ ವಿಷ್ಣು ಯಾವತ್ತು ನಮ್ಮೆಲ್ಲರ ನೆನಪಲ್ಲಿ ಹಚ್ಚ ಹಸಿರಾಗಿರುತ್ತಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ..

ಶನಿವಾರ, ಡಿಸೆಂಬರ್ 19, 2009

ಸ್ಟೀವ್ ಜಾಬ್ಸ್ ನಿಂದ ಕನ್ನಡಿಗರು ಕಲಿಯಬೇಕಾದ ಪಾಠ !

ಆಪಲ್ ಕಂಪನಿಯ ಐ-ಪಾಡ್, ಐ-ಫೋನ್, ಐ-ಮ್ಯಾಕ್ ಗಳ ಮೂಲಕ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅದರ CEO ಸ್ಟೀವ್ ಜಾಬ್ಸ್ ಈ ದಶಕ ಕಂಡ ಅತ್ಯುತ್ತಮ CEO ಅನ್ನುವ ಬಿರುದಿಗೆ ಪಾತ್ರವಾಗಿದ್ದಾರೆ. ಸಂಗೀತ ಕೇಳೊದು, ಫೋನ್ ಬಳಸೋದು, ಕಂಪ್ಯೂಟರ್ ಬಳಸೋದು,, ಹೀಗೆ ಎಲ್ಲ ಕೆಲಸದಲ್ಲೂ The Best  ಅನ್ನುವ ಅನುಭವ ಕೊಡುವಂತಹ ಉಪಕರಣಗಳನ್ನು ರೂಪಿಸಿದ, ಆ ಮೂಲಕ ಆಪಲ್ ಕಂಪನಿಯನ್ನು ಎಂತಹ ರಿಸೆಶನ್ ನ ಅವಧಿಯಲ್ಲೂ ಲಾಭದ ಹಾದಿಯಲ್ಲಿ ನಡೆಯುವಂತೆ ನೋಡಿಕೊಂಡ ಜಾಬ್ಸ್ ಅವರಿಗೆ ಈ ಬಿರುದು ನಿಜಕ್ಕೂ ಸೂಕ್ತ ಅನ್ನಿಸುತ್ತೆ. He deserves every bit of it !.

ಸ್ಟೀವ್ ಜಾಬ್ಸ್ ಅವರಿಂದ ಕನ್ನಡಿಗರೆಲ್ಲರೂ ಕಲಿಲೇಬೇಕಾದ ಒಂದು ಗುಣವಿದೆ ಅಂತ ನನಗನ್ನಿಸೋದು. ಅದೇನಪ್ಪ ಅಂತಾದ್ದು ಅಂತ ಅಚ್ಚರಿ ಪಡಬೇಡಿ.  ಜೀವನದ ಎಂತಹ ಕಷ್ಟದ ಸ್ಥಿತಿಯಲ್ಲೂ ಅಳುಕದೇ, ಛಲದಿಂದ ಮುನ್ನುಗಬೇಕು, ಆ ಮೂಲಕ ಜಗತ್ತು ಬೆರಗಾಗುವಂತಹ ಸಾಧನೆ ಮಾಡಬೇಕು, ಒಟ್ಟಾರೆ, ಛಲ ಬಿಡದವನಿಗೆ ಗೆಲುವು ಕಟ್ಟಿಟ್ಟದ್ದು ಅನ್ನುವುದೇ ಆ ಗುಣ ಅನ್ನೋದು ನನ್ನ ಅನಿಸಿಕೆ. ಜಗತ್ತಿನ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಸ್ಟಾನ್ ಫರ್ಡ್ ಯುನಿವರ್ಸಿಟಿಯ ಕನವೊಕೇಶನ್ ನಲ್ಲಿ ಅವರು ನೀಡಿದ ಒಂದು ಭಾಷಣ ಇಲ್ಲಿದೆ. ಇಲ್ಲಿ ಅವರು ತಮ್ಮ ಜೀವನದಲ್ಲಿ ಬಂದ ಕಷ್ಟ, ಅವಮಾನ, ಅದನ್ನೆದುರಿಸಿದ ರೀತಿ, ಮತ್ತೆ ಗೆಲುವು ಪಡೆದ ಬಗೆ, ಹೀಗೆ ಎಲ್ಲವನ್ನೂ ಮನಸಿಗೆ ಆಪ್ತ ಎನ್ನಿಸುವಂತೆ ವಿವರಿಸಿದ್ದಾರೆ. ಯಾವಾಗ ಕೇಳಿದರೂ, ಮೈ ಮನದಲ್ಲಿ ಹೊಸ ಉತ್ಸಾಹ ಮೂಡುವಂತೆ ಮಾಡುವ ಈ ಭಾಷಣ ನಿಜಕ್ಕೂ ಸಕತ್ inspiring !



ಒಂದು ಜನಾಂಗ ಉದ್ಧಾರ ಆಗುವಲ್ಲಿ ಒಗ್ಗಟ್ಟು ಎಷ್ಟು ಮುಖ್ಯವೋ, ಸಾಧಿಸಬೇಕೆನ್ನುವ ಛಲವು ಅಷ್ಟೇ ಮುಖ್ಯ. ಏನಂತೀರಾ ಗೆಳೆಯರೇ?

ಶನಿವಾರ, ಡಿಸೆಂಬರ್ 12, 2009

ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದ್ರೆ ಉದ್ಧಾರ ಆಗ್ತೀವಾ?

ತೆಲಂಗಾಣ ಬೇರೆ ರಾಜ್ಯ ಆಗುತ್ತೆ ಅನ್ನುವ ಸುದ್ಧಿಯ ಜೊತೆಗೆ, ಇಂತಹುದೇ ಕೂಗು ಕರ್ನಾಟಕದಲ್ಲಿಯೂ ಕೇಳಿ ಬರುವುದು ಎಂದೂ, ಕೊಡಗು, ಹೈದ್ರಾಬಾದ್ ಕರ್ನಾಟಕ ಭಾಗದ ಜನರು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡ್ತಾರೆ ಅಂತಲೂ ಕನ್ನಡದ ಕೆಲವು ಮಾಧ್ಯಮಗಳಲ್ಲಿ ವರದಿ ಬರ್ತಾ ಇತ್ತು. ಅಷ್ಟೇ ಅಲ್ಲ, ದೇಶದ ಹಲವೆಡೆ, ಬೇರೆ ಬೇರೆ ದೊಡ್ಡ ರಾಜ್ಯದ ನಾಯಕರುಗಳು, ಚಿಕ್ಕ ರಾಜ್ಯಗಳು ಅಭಿವೃದ್ಧಿಗೆ sure shot ಹಾದಿ, ಜನರ ಅನುಕೂಲ (?) ಕ್ಕಾಗಿ ಇನ್ನಷ್ಟು ಚಿಕ್ಕ ರಾಜ್ಯಗಳಾಗಬೇಕು ಅಂತ ಹೇಳಿಕೆ ಕೊಡ್ತಾ ಇದ್ದಿದ್ದನ್ನು ಕಂಡೆ.  ಯು.ಪಿ/ಬಿಹಾರ್ ದಂತಹ ನೈಸರ್ಗಿಕ ಸಂಪನ್ಮೂಲದಿಂದ ತುಂಬಿರುವ ರಾಜ್ಯಗಳನ್ನು ಅಭಿವೃದ್ಧಿಯಲ್ಲಿ ಶಿಲಾಯುಗಕ್ಕೆ ತಳ್ಳಿದ, ಕೊಲೆ, ಸುಲಿಗೆ, ಭ್ರಷ್ಟಾಚಾರದಲ್ಲಿ ಮಂಚೂಣಿಗೆ ತಂದು ನಿಲ್ಲಿಸಿದ ಕೆಲವು ನಾಯಕರು ಚಿಕ್ಕ ರಾಜ್ಯಗಳ ಬಗ್ಗೆ, ಅದರಿಂದ ಆಗೋ ಲಾಭ (?)ದ ಬಗ್ಗೆ, ಒಟ್ಟಾರೆ, Small is beautiful ಅಂತ ಮಾತಾಡುವುದನ್ನು ನೋಡಿದಾಗ ನಗು ಬರ್ತಾ ಇತ್ತು.

ಹೋಗಲಿ,, ಈಗ ಕರ್ನಾಟಕಕ್ಕೆ ಹಿಂತಿರುಗೋಣ. ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದರೆ ನಿಜಕ್ಕೂ ಎಲ್ಲ ಭಾಗಗಳು ಅಭಿವೃದ್ಧಿ ಹೊಂದುತ್ತಾ? ಎಂಬ ಪ್ರಶ್ನೆ ಇಟ್ಟುಕೊಂಡು ನೋಡಿದ್ರೆ, ಖಂಡಿತವಾಗಿಯೂ ಆಗಲ್ಲ ಅನ್ನೋದೇ ನನ್ನ ಅಭಿಪ್ರಾಯ. ಹೇಗೆ ಅಂತೀರಾ?
  • ಹತ್ತತ್ತು ಬಾರಿ ಆಯ್ಕೆಯಾಗಿ ಬಂದರೂ ಹೈದ್ರಾಬಾದ್ ಕರ್ನಾಟಕಕ್ಕೆ ನಯಾ ಪೈಸೆ ಕೆಲಸ ಮಾಡದ, ಆ ಭಾಗದ ಜನರ ಕುಂದು ಕೊರತೆಗೆ ಸ್ಪಂದಿಸದ ಅಲ್ಲಿನ ಜನ ನಾಯಕರ ಕೈಗೆ ಹೈದ್ರಾಬಾದ್ ಕರ್ನಾಟಕವೆಂಬ ಹೊಸ ರಾಜ್ಯ ಮಾಡಿ ಕೊಟ್ಟರೆ ಏನಾದೀತು? ನಮ್ಮ ಧಾರವಾಡದ ಕಡೆ ಹೇಳುವಂತೆ "ಊದುದ್ ಕೊಟ್ಟು, ಬಾರ್ಸುದ್ ತಗೊಂಡಂತೆ" ಆಗುತ್ತೆ ಅಷ್ಟೇ.
  •  ಅಸ್ಸಾಂ, ಮಣಿಪುರ, ಮೀಜೊರಾಮ್, ನಾಗಾಲ್ಯಾಂಡ್ ನಂತಹ ಚಿಕ್ಕ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ಅಸ್ತಿತ್ವವೂ ಇಲ್ಲ. ದೆಹಲಿಯಲ್ಲಿ ಏನಿದ್ರೂ ದೊಡ್ಡ ರಾಜ್ಯಗಳ ಮಾತೇ ನಡೆಯೋದು. ನಿಮ್ಮ ಬಳಿ 1,2,5 ಇಲ್ಲ 10 ಎಮ್.ಪಿಗಳಿದ್ದರೆ, ದೆಹಲಿಯಲ್ಲಿರುವ ಕೇಂದ್ರ ಸರ್ಕಾರಕ್ಕೆ ನೀವು ನಗಣ್ಯ. ಅಂತಾದ್ರಲ್ಲಿ, ಕೊಡಗಿನ ಒಬ್ಬ ಎಮ್.ಪಿ, ಹೈದ್ರಾಬಾದ್ ಕರ್ನಾಟಕದ 5 ಎಮ್.ಪಿಗಳ ಕೂಗು ದೆಹಲಿಯಲ್ಲಿರುವ ದೊರೆಯ ಕಿವಿಗೆ ಎಂದಿಗಾದರೂ ಬಿದ್ದಿತಾ? 
  •  28 ಲೋಕಸಭೆ ಸದಸ್ಯರನ್ನಿಟ್ಟುಕೊಂಡೇ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ, ಯೋಜನೆಗಳನ್ನು ತಂದುಕೊಳ್ಳಲು ನಾವು ಒದ್ದಾಡುತ್ತಿರುವಾಗ, ಇನ್ನೂ ಈ ಚುಲ್ಟು ರಾಜ್ಯಗಳ ಕಥೆ ಏನಾದೀತು ಅನ್ನುವುದನ್ನು ಊಹಿಸಲು ಅಸಾಧ್ಯವೇ? 
  • ಕಾವೇರಿ ನೀರಿಗಾಗಿ, ಕೊಡಗು-ಕರ್ನಾಟಕ, ಕೃಷ್ಣಾ ನದಿ ನೀರಿಗಾಗಿ ಹೈ.ಕ - ಕರ್ನಾಟಕದ ನಡುವೆ ವಿವಾದಗಳು,ಕಿತ್ತಾಟಗಳು, ಕೋರ್ಟ್ ಮೆಟ್ಟಿಲು ಏರೋ ಪ್ರಸಂಗಗಳು ಬರಲ್ವಾ? ಈಗಲೇ ಇರೋ ವಿವಾದಗಳು ಸಾಕಾಗಿಲ್ವಾ?
  •  ಒಂದು ಭಾಷೆ ಮಾತನಾಡುವ ಜನರ ನಡುವೆ ಒಗ್ಗಟ್ಟಿನ ಅಗತ್ಯ ಇವತ್ತು ಹಿಂದೆಂದಿಗಿಂತಲೂ ಹೆಚ್ಚಿದೆ.  ಹಿಂದಿ ರಾಷ್ಟ್ರ ಭಾಷೆ ಅನ್ನುವ ಸುಳ್ಳಿನ ಮುಂದೆ, ಇವತ್ತಿಗೂ ನಮ್ಮ ಭಾಷೆಗಳು ಎರಡನೆ ದರ್ಜೆಯ ಪ್ರಜೆಗಳಂತೆ ನಲುಗುತ್ತಿವೆ. ಅದು ಅಲ್ಲದೇ, ಕಲಿಕೆಯ ಎಲ್ಲ ಹಂತದಲ್ಲೂ ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯೊಂದೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ಪರ್ಧೆಗೆ ಸಜ್ಜುಗೊಳಿಸಲು ಸಾಧ್ಯವಾಗಿಸೋದು. ಕನ್ನಡಿಗರ ಒಗ್ಗಟ್ಟು, ಕನ್ನಡಿಗರ ಒಂದು ರಾಜ್ಯವಿಲ್ಲದೇ, ಭಾಷೆಯ ಮೇಲೆ, ಅದರಿಂದ ಉದ್ಧಾರ ಆಗೋ ಬಗ್ಗೆ ಗಮನ ಕೇಂದ್ರಿಕರಿಸುವುದು ಸಾಧ್ಯವೇ?

ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರ
ಅಷ್ಟೇ ಅಲ್ಲ, ಅಭಿವೃದ್ಧಿ ಮತ್ತು ಅದರಲ್ಲಿ ಭಾಷೆಯ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಲು ಮುಖ್ಯ. ಇಲ್ಲಿ ನಾನೇನು, ಅಮೇರಿಕದಂತಹ ವಲಸಿಗರಿಂದ ಕಟ್ಟಿದ, ಚೌಕಾಕಾರದಲ್ಲಿ ಕತ್ತರಿಸಿ, ಇಂಗ್ಲಿಷ್ ಹೇರಿ ಕಟ್ಟಿದ ದೇಶದ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳುತ್ತಿರುವುದು, ಅನಾದಿ ಕಾಲದಿಂದಲೂ ಇಲ್ಲೇ ನೆಲೆಸಿ, ಇಲ್ಲಿನ ನುಡಿಯಾಡುತ್ತಿರುವ ಕನ್ನಡಿಗರ ಬಗ್ಗೆ, ಅವರ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಿದ್ದೇನೆ. ಒಡೆದು ಚೂರು ಮಾಡಿದ ಕರ್ನಾಟಕದಲ್ಲಿ ಈ ಅಭಿವೃದ್ಧಿ ಎಂದಿಗೂ ಸಾದ್ಯವಿಲ್ಲ.

ಜಗತ್ತಿನ ಒಂದು ಭಾಷೆಯಾಡುತ್ತಿದ್ದ, ಆದರೆ ಕಿತ್ತಾಡಿ ಬೇರೆಯಾಗಿದ್ದ ಜರ್ಮನ್ನರು ಬರ್ಲಿನ್ ಗೋಡೆಯನ್ನು ಒಡೆದು ಮತ್ತೆ ಒಂದಾಗಿ ಮುಂದೆ ಸಾಗುತ್ತಿರುವುದನ್ನು  ನಾವು ಒಂದೆಡೆ ನೋಡುತ್ತಿದ್ದರೆ, ಇಲ್ಲಿ, ಕೆಲವು ಭ್ರಷ್ಟ ರಾಜಕಾರಣಿಗಳ ಸಿ.ಎಮ್ ಆಗುವ ಆಸೆಗೆ, ಅವರ ಉಪವಾಸಕ್ಕೆ ಬೆದರಿ ಒಂದು ಭಾಷೆಯಾಡುವ ಜನರನ್ನು ಒಡೆಯಲು ಹೊರಡುವವರ ಕಣ್ಣಿಗೆ,  ಭಾಷೆ ಅನ್ನುವುದು ಏಳಿಗೆಯ ನಿಜವಾದ ಸಾಧನ ಅನ್ನುವುದನ್ನು ಗುರುತಿಸಲು ಆಗದ ಭೌದ್ದಿಕ ದಾರಿದ್ರ್ಯ ತೋರಿಸುತ್ತೆ.

ಕೊನೆಗೆ, The quality of life of Kannadigas who are having to contend with underdevelopment in Karnataka – whether north or south – can improve only at the dawn of appreciation for the pressing need for the unity of Kannadigas in every walk of life including politics. Any thought process which divides them makes them that much weaker.

ಮಂಗಳವಾರ, ಡಿಸೆಂಬರ್ 1, 2009

ಚಿತ್ರ ರಂಗ ಶುರುವಾಗಿ 75 ವರ್ಷ ಆಯ್ತು..ಇನ್ನೂ ಅಳ್ತಾ ಕೂರೋದ್ರಲ್ಲೇ ಸಮಾಧಾನ ಪಟ್ಕೊಂಡ್ರೆ ಹೇಗೆ ?

ಇವತ್ತು ಡೆಕ್ಕನ್ ಹೆರಾಲ್ಡ್ ಓದ್ತಾ ಇದ್ದೆ. ಒಂದು ಚಿಕ್ಕ ಸುದ್ಧಿ ಕಣ್ಣಿಗೆ ಬಿತ್ತು. ಗದಗನಲ್ಲಿ ಒಬ್ಬ ಚಲನಚಿತ್ರ ಪ್ರದರ್ಶಕರು ಹೇಳಿಕೆ ಒಂದನ್ನು ನೀಡಿ, ಎಲ್ಲ ಪ್ರದರ್ಶಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (KFCC) ಯ ಸದಸ್ಯರಾಗಬೇಕು ಅನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದುದು, ಇದನ್ನ ಈ ಕೂಡಲೇ ಹಿಂಪಡೆಯಬೇಕು ಅಂದರು. ಅದನ್ನ ನೋಡಿದಾಗ ಕರ್ನಾಟಕದ ಒಂದು ಭಾಗದ ಪ್ರದರ್ಶಕರೊಬ್ಬರು, ಕರ್ನಾಟಕದ ಚಿತ್ರಮಂಡಳಿಯ ಸದಸ್ಯತ್ವವೇ ಬೇಡ ಅಂತ ಯಾಕಂತಾರೆ ಅಂತಾ ವಿಚಾರ ಮಾಡ್ತಾ ಇದ್ದೆ.  ಯೋಚನೆ ಮಾಡಿದಾಗ, ಚಿತ್ರ ರಂಗದ ಒಂದಿಬ್ಬರು ಗೆಳೆಯರನ್ನು ಮಾತನಾಡಿಸಿದಾಗ ಕಂಡದ್ದು:


  • ಈ ಎಲ್ಲ ಪ್ರದರ್ಶಕರು  ಉತ್ತರ ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶಕರಾಗಿದ್ದು, ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶನದಿಂದ ಹಣ ಮಾಡುತ್ತಿರುವವರು. ಕನ್ನಡ ಚಿತ್ರರಂಗದ ಉಳಿವು, ಬೆಳೆವಿಗಾಗಿ  KFCC ತೆಗೆದುಕೊಳ್ಳುವ ನೀತಿ ನಿಯಮಗಳು ( ಉದಾ: ಇಷ್ಟೇ ಪ್ರತಿ ಹಿಂದಿ / ತೆಲುಗು ಚಿತ್ರಗಳನ್ನು ಪ್ರದರ್ಶಿಸಬೇಕು ಅನ್ನೋದು ಇರಬಹುದು, ಇಲ್ಲವೇ ಪ್ರದರ್ಶಕರ ಮತ್ತು ನಿರ್ಮಾಪಕರ ಮಧ್ಯ ಆದಾಯ ಹಂಚಿಕೆಗೆ ಇಂತಹದು ಅಂತ ಒಂದು ನಿಯಮದನ್ವಯ ನಡೆಯಬೇಕು ಅನ್ನೋದು ಇರಬಹುದು)  ಇವರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸುವುದರಿಂದ ಇವರು ಈ ರೀತಿ ವರ್ತಿಸುತ್ತಿದ್ದಾರೆ ಅನ್ನಿಸುತ್ತೆ.
  • ಎರಡನೆಯದಾಗಿ, ತೆಲುಗು/ಹಿಂದಿ ಚಿತ್ರರಂಗಕ್ಕೆ ಕರ್ನಾಟಕ ಅನ್ನೋದು ತಮ್ಮ core ಮಾರ್ಕೆಟ್ ಅಲ್ಲ. ಅದೇನಿದ್ದರೂ extra income. ಬಂದಷ್ಟು ಬರಲಿ ಅನ್ನೋ ಭಾವನೆ ಅವರದ್ದು. ಹೀಗಾಗಿಯೇ ತಮ್ಮ ಚಿತ್ರಗಳ ಇಲ್ಲಿನ ಪ್ರದರ್ಶಕರಿಗೆ ಕನ್ನಡ ನಿರ್ಮಾಪಕರಿಗಿಂತ ಹೆಚ್ಚು ಮಾರ್ಜಿನ್ ಕೊಡುತ್ತಾರೆ. ಆ ದುಡ್ಡಿನ ಆಸೆಗೆ ಈ ಪ್ರದರ್ಶಕರು ಈ ರೀತಿ ಈ ನೆಲದ ಕಾನೂನು ತಮಗನ್ವಯವಾಗುವುದು ಬೇಡ ಅನ್ನೋದು.

ಇಂತಹ ವಿರೋಧಕ್ಕೆಲ್ಲ ಸರ್ಕಾರ ತಲೆ ಕೆಡಿಸಿಕೊಳ್ಳಬಾರದು. ಒಂದು ದೊಡ್ಡ ಸಮುದ್ರದಲ್ಲಿ ಒಂದು ಶಾರ್ಕ್ ಮೀನು, ಒಂದು ಚಿಕ್ಕ ಮೀನು ಒಟ್ಟಿಗೆ ಇದ್ದಾಗ, ಎರಡು ಒಂದೇ, ಎರಡು ಸಮುದ್ರದ ಪ್ರಾಣಿಗಳೇ ಅಂತ ಬಿಟ್ರೆ ಏನಾಗುತ್ತೆ? ಶಾರ್ಕ್ ಮೀನು ಚಿಕ್ಕ ಮೀನನ್ನ ತಿಂದೇ ತಿನ್ನುತ್ತೆ. ಇವತ್ತು ಕರ್ನಾಟಕದಲ್ಲೂ ಇದೇ ಸ್ಥಿತಿ ಇದೆ. ಕನ್ನಡ ಚಿತ್ರರಂಗಕ್ಕೆ ತೆಲುಗು/ಹಿಂದಿ/ತಮಿಳಿನಿಂದ ತೀವ್ರ ಮಟ್ಟದ ಸ್ಪರ್ಧೆ ಇದ್ದು, ಇಲ್ಲಿ ಕನ್ನಡ ಚಿತ್ರರಂಗ ಉಳಿದು ಬೆಳೆಯಲು, ಬೇರೆ ಚಿತ್ರಗಳ ಹಾವಳಿಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಲೇಬೇಕು. ಹಾಗಾಗಿ, ಎಲ್ಲ ಪ್ರದರ್ಶಕರು KFCCಯ ವ್ಯಾಪ್ತಿಗೊಳಪಟ್ಟು, ಸರ್ಕಾರದ ನೀತಿ ನಿಯಮಗಳನ್ವಯ ನಡೆಯುವಂತೆ ಸರ್ಕಾರ/ಚಿತ್ರ ಮಂಡಳಿ ಮಾಡಬೇಕು. ಇದೇ ಸಮಯದಲ್ಲಿ KFCC ಕೂಡಾ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೇ, ಕನ್ನಡ ಚಿತ್ರರಂಗದಲ್ಲಿ ಹೊಸತನ ತುಂಬಲು, ತಾಂತ್ರಿಕವಾಗಿ ಇನ್ನಷ್ಟು ಮೇಲಕ್ಕೇರಲು, ಒಳ್ಳೆ ರೀತಿಯಲ್ಲಿ ಮಾರುಕಟ್ಟೆ ಕಲ್ಪಿಸಲು ಏನು ಮಾಡಬೇಕೋ ಅದನ್ನೆಲ್ಲ ಮಾಡಬೇಕು. ಚಿತ್ರ ರಂಗ ಶುರುವಾಗಿ 75 ವರ್ಷ ಆಯ್ತು..ಇನ್ನೂ ಅಳ್ತಾ ಕೂರೋದ್ರಲ್ಲೇ ಸಮಾಧಾನ ಪಟ್ಕೊಂಡ್ರೆ ಹೇಗೆ ? ಅಲ್ವಾ ಗೆಳೆಯರೇ?

ಮಂಗಳವಾರ, ಅಕ್ಟೋಬರ್ 27, 2009

ದಟ್ಸ್ ಕನ್ನಡ.ಕಾಮ್ ನಲ್ಲಿ ನಡೆದ ಚರ್ಚೆಗೆ ನನ್ನ ಉತ್ತರ ..

ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ ಅನ್ನೋ ನನ್ನ ಬರಹವೊಂದನ್ನು ಆತ್ಮೀಯರಾದ ಶಾಮ್ ಅವರು ತಮ್ಮ ಸಂಪಾದಕತ್ವದ ದಟ್ಸ್ ಕನ್ನಡದಲ್ಲಿ ಹಾಕಿದ್ದರು. ಆ ಬರಹಕ್ಕೆ ಪ್ರತಿಕ್ರಿಯೆಯಾಗಿ  ಹಿರಿಯ ಶಿಕ್ಷಕರಾದ ಶ್ರೀ ಶೇಷಗಿರಿ ಜೋಡಿದಾರ್ ಅವರು ದಟ್ಸ್ ಕನ್ನಡ ಪತ್ರಿಕೆಯಲ್ಲಿ  " ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್ " ಅನ್ನುವ ತಲೆಬರಹದಡಿ ತೂಕದ ಉತ್ತರವೊಂದನ್ನು ಕೊಟ್ಟಿದ್ದಾರೆ. ಅದನ್ನು ಓದಿ, ಶಾಮ್ ಅವರಿಗೆ ನನ್ನದೊಂದು ಪ್ರತಿಕ್ರಿಯೆ ಕಳಿಸಿದೆ. ಅದನ್ನು ಇಲ್ಲಿ ಹಾಕಿದ್ದೇನೆ.
 
ಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್ ಓದಿ ಅದಕ್ಕೆ ನನಗನಿಸಿದ ಪ್ರತಿಕ್ರಿಯೆ ನೀಡುವ ಮುನ್ನ ಇಂತಹದೊಂದು ಸಮಯೋಚಿತ ಚರ್ಚೆಗೆ ಅವಕಾಶವನ್ನಿತ್ತ ದಟ್ಸ್ ಕನ್ನಡ ಸಂಪಾದಕರಾದ ಶಾಮ್ ಅವರಿಗೂ, ಹಾಗೂ ನನ್ನಂತಹ ಕಿರಿಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ತಮ್ಮ ಯೋಚನೆ ಮತ್ತು ಸಮಯ ನೀಡಿದ ಹಿರಿಯರಾದ ಶ್ರೀ ಶೇಷಗಿರಿ ಜೋಡಿದಾರ್ ಅವರಿಗೂ ( ಅವರನ್ನು ಈ ಬರಹದಲ್ಲಿ ಮೇಷ್ಟ್ರು ಎಂದೇ ಕರೆಯುವೆ) ಮನ ತುಂಬಿ ವಂದಿಸುವೆ.

ಇದು ಸಾಹಿತ್ಯ ದೃಷ್ಟಿ ಖಂಡಿತ ಅಲ್ಲ !
ಮೊದಲಿಗೆ, ವಿಜ್ಞಾನ, ಗಣಿತ ಇತ್ಯಾದಿಗಳಲ್ಲಿ ಭಾಷೆಗಿಂತ ನಾವು ಕಲಿಯುವ ವೈಜ್ಞಾನಿಕ ಸಾರಾಂಶ ಮುಖ್ಯವೇ ವಿನಾ ಶಾಲಾಪಠ್ಯವನ್ನು ಸಾಹಿತ್ಯ ಮತ್ತು ಭಾಷೆಯ ಸೂಕ್ಷ್ಮಗಳಿಂದ ನೋಡಬಾರದು ಅನ್ನುವ ಮೇಷ್ಟ್ರ ಮಾತು ನೂರಕ್ಕೆ ನೂರು ನಿಜ. ನನ್ನ ಬರಹದಲ್ಲಿ ಪೀನ ದರ್ಪಣ, ನಿಮ್ನ ದರ್ಪಣ ಅನ್ನಲು ಉಬ್ಬುಗಾಜು, ತಗ್ಗುಗಾಜು ಅನ್ನೋದಾಗಲಿ, ಇಲ್ಲವೇ ರೇಖೆಗೆ ಗೆರೆ ಅನ್ನುವುದಾಗಲಿ, ಇಲ್ಲವೇ ಬಿಂದುವಿಗೆ ಚುಕ್ಕಿ ಅನ್ನುವುದು ಖಂಡಿತವಾಗಿಯೂ ಸಾಹಿತ್ಯದ ದೃಷ್ಟಿಯಿಂದ ನೋಡುವ ಪ್ರಯತ್ನವಲ್ಲ. ನಿಜ ಹೇಳಬೇಕು ಅಂದರೆ, ಸಾಹಿತ್ಯದ ದೃಷ್ಟಿಯಿಂದ ನೋಡುವ ನಮ್ಮ ಹೆಚ್ಚಿನ ಸಾಹಿತಿಗಳ ಬರಹದಲ್ಲಿ ನಮಗೆ ಕಾಣುವುದು ಆಡುನುಡಿಯಲ್ಲಿ ಬಳಸದ ಪದಗಳು. ಆಡುನುಡಿಯಲ್ಲಿ ಈಗಾಗಲೇ ಇರುವ, ಸುಲಭಕ್ಕೆ ಅರ್ಥವಾಗುವ, ನೆನಪಿಟ್ಟುಕೊಳ್ಳಲು ಆಗುವ ಪದಗಳ ಬಳಕೆ ಮಾಡಬೇಕು ಅನ್ನುವ ವಾದ ಹೆಚ್ಚು ವೈಜ್ಞಾನಿಕವಾದ ಹಾದಿಯೇ ಹೊರತು ಸಾಹಿತ್ಯದ ದೃಷ್ಟಿಯಿಂದ ನೋಡುವ ಪ್ರಯತ್ನ ಖಂಡಿತವಲ್ಲ.

ಗಣಿತವಷ್ಟೇ ಅಲ್ಲ, ವಿಜ್ಞಾನದಲ್ಲೂ ಈ ತೊಂದರೆಗಳಿವೆ
ಮಕ್ಕಳಿಗೆ ವಿಷಯ ಸುಲಭವಾಗಿ ಅರ್ಥವಾದರೆ ಸಾಕು ಇನ್ನೇನು ಬೇಕಿಲ್ಲ ಎನ್ನುವ ತತ್ತ್ವ ಇಲ್ಲಿ ಕಣ್ಮರೆಯಾಗಿ ಓದುವವರಿಗೆ ಮತ್ತು ಕಲಿಸುವವರಿಗೆ ಶಿಕ್ಷೆ ಕೊಡುತ್ತದೆ ಅನ್ನುವ ಮೇಷ್ಟ್ರ ಮಾತು ಎಲ್ಲರೂ ಒಪ್ಪುವಂತದ್ದು. ಮೇಷ್ಟ್ರು ಗಣಿತದ ವಿಷ್ಯದಲ್ಲಿ ನಾನು ಎತ್ತಿರುವ ಪ್ರಶ್ನೆಗಳೆಲ್ಲ ಸರಿಯಾಗಿದೆ ಆದ್ರೆ ಅವರು ಕಲಿಸುತ್ತಿರುವ ಜೀವ ವಿಜ್ಞಾನ ಅಥವಾ ಜೀವ ಶಾಸ್ತ್ರ (ಇದರಲ್ಲಿ ಯಾವುದು ಹೆಚ್ಚು ಜನರಿಗೆ ಸುಲಭವೋ ( ನೆನಪಿಡಲು, ಉಲಿಯಲು, ಬರೆಯಲು) ಅದನ್ನೇ ಬಳಸೋಣ)ದ ವಿಷಯದಲ್ಲಿ ಮಾತ್ರ ಇಂತಹ ಯಾವುದೇ ತೊಂದರೆಗಳಿಲ್ಲ ಅನ್ನುವಂತಿದೆ. 'ಪತ್ರಹರಿತ್ತು' ಪದದ ಬದಲು 'ಎಲೆ ಹಸಿರು' ಎಂದು ಹೇಳುವುದರಿಂದ ಏನುಸಾಧಿಸಿದಂತೆ ಆಗುತ್ತದೆ? ಅನ್ನುವ ಮೇಷ್ಟ್ರ ಪ್ರಶ್ನೆಗೆ ನನ್ನ ಮರು ಪ್ರಶ್ನೆ " "ಪತ್ರ ಹರಿತ್ತು" ಎಂಬ ಪದ "ಎಲೆ ಹಸಿರು" ಪದಕ್ಕಿಂತ ಯಾವ ರೀತಿಯಲ್ಲಿ ಹೆಚ್ಚು ಸೂಕ್ತವಾಗಿದೆ ಅನ್ನುವುದನ್ನು ವಿವರಿಸಿ. "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟೀತು?

ಕಲಿಕೆಗೆ ಯಾವುದು ಸುಲಭವೋ ಅದನ್ನೇ ಬಳಸೋಣ
ನಮಗೆ ಪದಕ್ಕಿಂತ ಮುಖ್ಯವಾದುದು ವಿಜ್ಞಾನದ ಪರಿಕಲ್ಪನೆಗಳು ಸುಲಭವಾಗಿ ಹಾಗು ಪರಿಣಾಮಕಾರಿಯಾಗಿ ಮಕ್ಕಳ ಮಿದುಳನ್ನು ತಲುಪಿ ಅಲ್ಲೇ ಉಳಿಯುವಂತೆ ಮಾಡುವುದು." ಅನ್ನುವ ಮೇಷ್ಟ್ರ ಮಾತು ಸಕತ್ ಸರಿಯಾಗಿದೆ. ಆದರೆ ಅವರು ಕೇಳಿರುವ "ಹೃದಯಾವರಣ" ಮತ್ತು "ಗುಂಡಿಗೆ ಸುತ್ಪೊರೆ" ಪದಗಳಲ್ಲಿ ಯಾವುದು ಹೆಚ್ಚು ಸೂಕ್ತ ಅನ್ನುವ ಪ್ರಶ್ನೆಗೆ ನನ್ನ ಉತ್ತರ ಯಾವುದು ಮಕ್ಕಳಿಗೆ ನೆನಪಿಡಲು, ಉಲಿಯಲು, ಬರೆಯಲು ಸುಲಭವಾಗುವುದೋ ಅದೇ ಅನ್ನುವುದು. ಮಕ್ಕಳಿಗೆ ಹೃದಯಾವರಣವೇ ಹೆಚ್ಚು ಸುಲಭ ಅಂದರೆ ಯಾವುದೇ ಸಂದೇಹವಿಲ್ಲದೇ ಅದನ್ನೇ ಬಳಸಬೇಕು ಅನ್ನುವುದು ನನ್ನ ನಿಲುವು. ಇನ್ನೂ karyokinesis ಮತ್ತು cytokinesis ಪದಗಳ ಬಗ್ಗೆ ಬಂದರೆ, ಈ ಪದಗಳ ಸಂಸ್ಕೃತ ಅರ್ಥವನ್ನು ಕನ್ನಡಕ್ಕೆ ನೇರವಾಗಿ ತಂದು ಹಾಕಿದ್ದಾರೆ. karyokinesis ಮತ್ತು cytokinesis ಪದಗಳು scientifically important ಮತ್ತದನ್ನು ಅದೇ ರೂಪದಲ್ಲಿ ಬಳಸುವುದು ಹೆಚ್ಚು ಸೂಕ್ತ ಎನಿಸಿದರೆ, ಯಾವುದೇ ಮಡಿವಂತಿಕೆ ಇಲ್ಲದೇ ಕನ್ನಡ ಮಾಧ್ಯಮ ಮಕ್ಕಳಿಗೂ ಅವನ್ನೇ ಹೇಳಿ ಕೊಡಬೇಕು ಅನ್ನುವುದು ನನ್ನ ನಿಲುವು. ಹೋಮೋ ಸೆಪಿಯನ್ ಮತ್ತು ವಿವೇಕಿ ಮಾನವ ಬಗೆಗಿನ ಮೇಷ್ಟ್ರ ಉದಾಹರಣೆಗೂ ಇದು ಅನ್ವಯಿಸುತ್ತೆ. ಈಗ ಬಸ್ ಅನ್ನುವ ಪದಕ್ಕೆ ನಾವು ಕನ್ನಡದ "ನಾಲ್ಕು ಚಕ್ರದ ಸಾರಿಗೆ ವಾಹನ" ಅಂತೀವಾ ಇಲ್ಲ ಸಿಂಪಲ್ ಆಗಿ ಇಂಗ್ಲಿಷಿನ ಬಸ್(ಬಸ್ಸು) ಅಂತೀವಾ? ಬಸ್ಸು ತಾನೇ? ಹೀಗೆ, ಯಾವುದು ಹೆಚ್ಚು ಪರಿಣಾಮಕಾರಿ, ಹೆಚ್ಚು ಸುಲಭ ಅದನ್ನೇ ಬಳಸಬೇಕು, ಅದು ಕನ್ನಡ ಆಗಿದ್ದರೆ ಕನ್ನಡ, ಇಂಗ್ಲಿಷ್ ಆಗಿದ್ದರೆ ಇಂಗ್ಲಿಷ್, ಸಂಸ್ಕೃತ ಆಗಿದ್ದರೆ ಸಂಸ್ಕೃತ. ಈ ಹೇಳಿಕೆ ಮೂಲಕ ನಾನು ಸಂಸ್ಕೃತ ದ್ವೇಷಿಯೂ ಅಲ್ಲ, ಪ್ರತಿಯೊಂದು ಪೂರ್ತಿ ಕನ್ನಡೀಕರಣಗೊಳ್ಳಲಿ ಅನ್ನುವ ಹುಚ್ಚು ಆಸೆಯೂ ನನಗಿಲ್ಲ ಅನ್ನುವುದನ್ನು ಹೇಳಲು ಬಯಸುತ್ತೇನೆ.


ಶಿಕ್ಷಣ ಅಂದ್ರೇನು?
ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೂತಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.

ಕೊನೆಯದಾಗಿ, ಜಗತ್ತಿನ ಯಾವುದೇ ಮುಂದುವರಿದ ದೇಶವನ್ನು ನೋಡಿದರೂ ಅದಕ್ಕೆ ಮುಖ್ಯ ಕಾರಣಗಳಲ್ಲೊಂದು ಅಲ್ಲಿನ ಅದ್ಭುತ ಕಲಿಕಾ ವ್ಯವಸ್ಥೆ. ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಮತ್ತು ಆ ಕಲಿಕೆಯಿಂದ ಒಳ್ಳೆಯ ದುಡಿಮೆ ಕಾಣ್ತಿರೋ ಆ ದೇಶಗಳು ನಮಗೆ ಮಾದರಿಯಾಗಬೇಕು. ಇದಕ್ಕೆ ಅಮೇರಿಕ-ಇಂಗ್ಲಂಡ್ ಕೂಡಾ ಹೊರತಲ್ಲ ಯಾಕೆಂದ್ರೆ ಇಂಗ್ಲಿಷ್ ಅಲ್ಲಿನವರ ತಾಯಿ ನುಡಿ !ಇಂತದೇ ಒಂದು ವ್ಯವಸ್ಥೆ ಕರ್ನಾಟಕದಲ್ಲಿ ಕನ್ನಡದಲ್ಲಿ ಆಗುವ ದಿನಗಳು ಬಂದಾಗಲೇ ನಾವು ನಿಜಕ್ಕೂ ಏಳಿಗೆ ಹೊಂದಲು ಸಾಧ್ಯವಾಗುವುದು. ಆ ದಿನಗಳು ಆದಷ್ಟು ಬೇಗ ಬರಲಿ ಎನ್ನುವ ಆಶಯದೊಂದಿಗೆ ನನ್ನ ಎರಡು ಮಾತು ಮುಗಿಸುತ್ತೇನೆ.

ಶುಕ್ರವಾರ, ಅಕ್ಟೋಬರ್ 23, 2009

ಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ :)

ಕಳೆದ ವರ್ಷ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಅಜ್ಜಿ ಮನೆಗೆ 4 ದಿನ ರಜೆ ಅಂತಾ ಹೋಗಿದ್ದೆ. ಸಂಜೆ ಊಟದ ನಂತರ ಮನೆಯಲ್ಲಿ ಮಾಮನ ಮಕ್ಕಳೆಲ್ಲ ಓದಿಕೊಳ್ತಾ ಇದ್ರು. 9ನೇ ಕ್ಲಾಸಲ್ಲಿ ಓದ್ತಾ ಇರೋ ಅನುಷಾಳಿಗೆ ಅಭ್ಯಾಸ ಎಲ್ಲ ಹೇಗ್ ನಡಿತಾ ಇದೆ, ಯಾವ ವಿಷ್ಯ ಕಷ್ಟ ಅನ್ಸುತ್ತೆ ಅಂತಾ ಕೇಳಿದೆ. ಅದಕ್ಕವಳು " ಅಣ್ಣಾ, ನನಗೆ ಗಣಿತ ಒಂದೇ ಚೂರು ಕಷ್ಟಾ" ಅಂದ್ಲು.

ಸುಮ್ಮನಿರದೇ ಇರುವೆ ಬಿಟ್ಕೊಂಡ ಅನ್ನೋ ಹಂಗೆ ನಾನು ಹೌದಾ, ಎಲ್ಲಿ ಗಣಿತದ ಪುಸ್ತಕ ತಗೊಂಡ್ ಬಾ, ಏನ್ ಕಷ್ಟ ಅನ್ಸುತ್ತೋ ಕೇಳು, ನಾನು ಹೇಳಿಕೊಡ್ತಿನಿ ಅಂದೆ. ಅವಳು ಗಣಿತದ 9ನೇ ಕ್ಲಾಸಿನ ಪುಸ್ತಕ ತಂದು ಕೇಳಿದ್ದು ಈ ಪ್ರಮೇಯದ (ಚಿತ್ರ ನೋಡಿ) ಅರ್ಥ:












ಹತ್ತು ಸಲಿ ತಲೆಕೆಳಗಾಗಿ ಓದಿದ್ರೂ ಇದರ ಅರ್ಥ ಹೊಳಿಲಿಲ್ಲ. ಆಗಲೇ ಅನ್ನಿಸಿದ್ದು, ಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿರೋದು ಅಂತ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ,, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?


ಕನ್ನಡದ ಮಕ್ಕಳು ಊರು ಹೊಡೆಯುವುದಲ್ಲೇ ತಮ್ಮ ಕಾಲ ಕಳೆಯುತ್ತಿವೆಯೇ ಹೊರತು ವಿಜ್ಞಾನ, ಗಣಿತದ ಅಂಶಗಳನ್ನು ಅರಿಯುವುದರಲ್ಲಲ್ಲ. Concave, Convex mirror ಅನ್ನು ಉಬ್ಬುಗಾಜು, ತಗ್ಗುಗಾಜು ಅಂದರೆ ಎಂತಹ ಗಮಾರನಿಗೂ ಅರ್ಥ ಆಗುತ್ತೆ, ಅದೇ ಕನ್ನಡ ಮಾಧ್ಯಮದ ಪುಸ್ತಕದಲ್ಲಿ ಪೀನ ಮಸೂರ, ನಿಮ್ನ ಮಸೂರ ಎಂದು ಹೇಳಿ ಕೊಡುತ್ತಾರೆ. ಮಕ್ಕಳಿಗೆ ಯಾವುದು ಸುಲಭವಾಗುತ್ತೆ ನೀವೇ ಒಮ್ಮೆ ಯೋಚಿಸಿ. chlorophyl ಅನ್ನುವುದನ್ನು ಪತ್ರಹರಿತ್ತು ಎಂದೆನ್ನದೇ "ಎಲೆಹಸಿರು" ಅಂದರೆ ಮಕ್ಕಳಿಗೆ ಸುಲಭವಾಗುತ್ತಾ, ಕಷ್ಟವಾಗುತ್ತ ನೀವು ಹೇಳಿ? Denominator / Nominator ಅನ್ನಲು ಮೇಲ್ ಮನೆ / ಕೆಳಮನೆ ಅನ್ನೋದು ಸುಲಭಾನಾ ಇಲ್ಲ ಭಾಜ್ಯ-ಭಾಜಕ ಅನ್ನೋದಾ? Line ಅನ್ನಲು ಗೆರೆ ಸುಲಭಾನಾ ರೇಖೆ ಅನ್ನೋದಾ? ಈ  ಪಟ್ಟಿಗೆ ಕೊನೆನೇ ಇಲ್ಲ. ಅಷ್ಟರ ಮಟ್ಟಿಗೆ ಕನ್ನಡದ ಕಲಿಕೆ ಆಡುನುಡಿಯಿಂದ, ಆದ್ದರಿಂದ ಆ ನುಡಿಯಾಡುವ ನಾಡಿಗರಿಂದ ದೂರ ಸರಿದಿದೆ.

83% ಕರ್ನಾಟಕದ ಮಕ್ಕಳು, ಹೌದು 83% ಮಕ್ಕಳು ಈಗಲೂ ಕನ್ನಡ ಮಾಧ್ಯಮದಲ್ಲೇ ಓದ್ತಾ ಇದ್ದಾರೆ.ಇಷ್ಟು ದೊಡ್ಡ ಮಟ್ಟದಲ್ಲಿ ಮಕ್ಕಳು ನಾಡಿನ ಭಾಷೆಯಲ್ಲಿ ಓದುತ್ತಿರಬೇಕಾದರೆ, ಆ ಮಕ್ಕಳ ಕಲಿಕೆ ಸುಲಭ ಆಗಿಸುವತ್ತ, ಆ ಮಕ್ಕಳ ಬುದ್ಧಿ ಚುರುಕಾಗಿಸುವತ್ತ ನಮ್ಮ ಪಠ್ಯ ಪುಸ್ತಕದಲ್ಲಿ ಒಂದಿಷ್ಟು ಬದಲಾವಣೆಗಳಾಗಬೇಕು. ಹಾಗಂತ ನಿಮಗನಿಸಲ್ವಾ ಗೆಳೆಯರೇ? ಆ ಮಕ್ಕಳ ಕಲಿಕೆ ಸುಧಾರಿಸಿದ್ರೆ ತಾನೇ ಅಲ್ಲಿಂದ ಇನ್ನೊಬ್ಬ ವಿಶ್ವೇಶ್ವರಯ್ಯ, ಇನ್ನೊಬ್ಬ ಯು.ಆರ್.ರಾವ್ ತರಹದ ವ್ಯಕ್ತಿಗಳು ಬರಲು ಸಾಧ್ಯವಾಗೋದು?

ಅದಿರಲಿ, ಈ ಮೇಲಿನ ಚಿತ್ರದಲ್ಲಿದ್ದ ಬೀಜಗಣಿತದ ಈ ಪ್ರಮೇಯ ನಿಮಗೇನಾದ್ರೂ ಅರ್ಥ ಆದ್ರೆ, ಅದನ್ನ ವಿವರಿಸಿದರೆ ನಿಮಗೊಂದು ಬಹುಮಾನ ನಾನು ಕೊಡ್ತಿನಿ. :) Are you ready ?

ಶುಕ್ರವಾರ, ಅಕ್ಟೋಬರ್ 16, 2009

ಕುವೆಂಪು ಅಂದ ತಕ್ಷಣ ನಮಗೆಲ್ಲ ನೆನಪಿಗೆ ಬರೋದೇನು?






ಕವಿಗಳ, ಸಾಹಿತಿಗಳ ನೆನಪಲ್ಲಿ ಬೇರೆ ಬೇರೆ ವಿಷಯಗಳಿರಬಹುದು. Atleast, ನನ್ನ ಜನರೇಶನ್ನಿನ ಹೆಚ್ಚಿನ ಹುಡುಗರಿಗೆ ಹೊಳೆಯುವ ಕೆಲವು ಅಂಶಗಳು ಅಂದರೆ,
  • ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಬಂತು.
  • ಕುವೆಂಪು ಅವರು ಕನ್ನಡದ ಎರಡನೇ ರಾಷ್ಟ್ರಕವಿ.
  • ಎಲ್ಲಾದರೂ ಇರು, ಎಂತಾದರೂ ಇರು ಅನ್ನೋ ಕನ್ನಡಿಗರಲ್ಲಿ ಕನ್ನಡತನದ ಕಿಚ್ಚು ತುಂಬೋ ಹಾಡಿನ ಸಾಲುಗಳು
  • ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಅನ್ನೋ ನಾಡಗೀತೆ.

ಗಮನಿಸಿ ನೋಡಿದರೆ, ಇವೆಲ್ಲ ನಾವು ನಮ್ಮ ಶಾಲೆಗಳಲ್ಲಿ ಕಲಿತ, ಕೇಳಿದ ಅಂಶಗಳು. ಆದರೆ ಇದೆಲ್ಲವನ್ನು ಮೀರಿ, ಕುವೆಂಪು ಒಬ್ಬ ವ್ಯಕ್ತಿಯಾಗಿ ಅವರ ಮನೆಯಲ್ಲಿ ಹೇಗಿದ್ದರು? ಅವರ ಮಕ್ಕಳೊಡನೆ ಅವರಿಗಿದ್ದ ಒಡನಾಟ ಎಂತದ್ದು? ಕುವೆಂಪು ಅವರು ಅವರ ಕಾಲದಲ್ಲಿ ಇದ್ದಂತಹ ಸಾಮಾಜಿಕ ಪಿಡುಗುಗಳ ಬಗ್ಗೆ, ಜಾತಿ, ಧರ್ಮ, ದೇವರು, ಸಮಾಜವಾದದ ಬಗ್ಗೆ, ಅಖಂಡ ಕರ್ನಾಟಕದ ಬಗ್ಗೆ ಅವರಿಗಿದ್ದ ನಿಲುವೇನು ಅನ್ನೋ ಕೂತುಹಲ ನಿಮಗಿದ್ದಲ್ಲಿ ನೀವೆಲ್ಲ ತಪ್ಪದೇ ಓದಬೇಕಾದ ಕೃತಿ ತೇಜಸ್ವಿ ಅವರು ಬರೆದ ಅಣ್ಣನ ನೆನಪು. ತೇಜಸ್ವಿ ಅವರ ಅಬಚೂರಿನ ಪೋಸ್ಟಾಫೀಸು, ಕರ್ವಾಲೋ, ಚಿದಂಬರ ರಹಸ್ಯ, ಮುಂತಾದ ಹೊತ್ತಿಗೆಗಳನ್ನು ಓದಿದವರಿಗೆ ಅವರಿಗಿದ್ದ sense of humour ಎಂತದ್ದು ಅನ್ನುವುದು ತಿಳಿದಿರುತ್ತೆ. ಅಣ್ಣನ ನೆನಪುವಿನಲ್ಲೂ ಅದು ಎದ್ದು ಕಾಣುತ್ತೆ.

ಅಣ್ಣನ ನೆನಪಿನಲ್ಲಿ ನನಗಿಷ್ಟವಾದ ಕೆಲ ಸಂದರ್ಭಗಳು, ಮಾತುಗಳು:

ತೇಜಸ್ವಿ  ಚಿಕ್ಕವರಿದ್ದಾಗ ಒಂದು ಜಾತಿ ನಾಯಿ ಸಾಕ್ತಾರೆ, ಯಾರನ್ನು ಕಂಡರೂ ಬಾಲ ಅಲ್ಲಾಡಿಸೋ ಆ ನಾಯಿನಾ ಪಳಗಿಸಿ, ಚುರುಕು ಮಾಡೋದು ಹೇಗೆ ಅನ್ನೋದು ಅವರ ತಲೆಬಿಸಿಯಾಗಿರುತ್ತೆ. ಜಾನ್ (ಜಾನಪ್ಪ) ಅನ್ನೋರು ಜಾತಿ ನಾಯಿಗೆ ಇಂಗ್ಲಿಷ್ ಮಾತ್ರ ಅರ್ಥ ಆಗುತ್ತೆ, ಹೀಗಾಗಿ ಇಂಗ್ಲಿಷ್ ಅಲ್ಲಿ ಮಾತಾಡಿ,  ಕನ್ನಡ ಅರ್ಥ ಆಗೋಕೆ ಇದು ಕಂತ್ರಿ ನಾಯಿಯಲ್ಲ ಅನ್ನೋ ಮಾತು ಆಡ್ತಾರೆ. ಅದನ್ನ ಕೇಳಿ ತೇಜಸ್ವಿ ಮತ್ತವರ ತಮ್ಮ ನಾಯಿಗೆ ಇಂಗ್ಲಿಷ್ ಅಲ್ಲಿ " ಕಮಂಡಾ, ಕಮಂಡಾ" ( come on dog)  ಅಂತ ನಾಯಿನಾ ಮಾತಾಡಿಸೋ ಪ್ರಯತ್ನದಲ್ಲಿದ್ದಾಗ ಕುವೆಂಪು ಅಲ್ಲಿಗೆ ಬರ್ತಾರೆ. ಏನ್ರೋ ಇದೆಲ್ಲ ಅಂದಾಗ, ಜಾನ್ ಹೇಳಿದ ಮಾತನ್ನ ತೇಜಸ್ವಿ ಅವರಿಗೆ ಹೇಳ್ತಾರೆ. ಇದನ್ನು ಕೇಳಿದ ಕುವೆಂಪು ಅವರಿಗೆ ಸಂಕಟ ಆಗುತ್ತೆ. ಕಂತ್ರಿ ನಾಯಿಗಳಿಗೆ ಕನ್ನಡ, ಜಾತಿ ನಾಯಿಗಳಿಗೆ ಇಂಗ್ಲಿಷ್ ಅನ್ನೋ ಆಲೋಚನೆಯ ಹಿಂದಿರುವ ಕನ್ನಡದ ಬಗೆಗಿನ ತಿರಸ್ಕಾರ ಅವರ ಮನ ನೋಯಿಸುತ್ತೆ. ಆಗ ಅವರು ಹೇಳೋ ಮಾತು, " ಪಂಪನೆನ್ನುವ ಕವಿ ಕನ್ನಡದಲ್ಲಿ ಮಹಾ ಕಾವ್ಯ ಬರೆಯುತ್ತಿದ್ದಾಗ ನಿನ್ನ ಇಂಗ್ಲಿಷ್ ದೊರೆಗಳು ಕಾಡಿನಲ್ಲಿ ತೊಗಟೆ ಸುತ್ತಿಕೊಂಡು ಕಿರಾತಕರಂತೆ ಬದುಕುತ್ತಿದ್ದರು ಅಂತ ಜಾನಪ್ಪ ಇನ್ನೊಮ್ಮೆ ಬಂದರೆ ಹೇಳಿ" ಅಂತ ಅಂದ್ರಂತೆ. ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ಕುವೆಂಪು ಅವರಿಗಿದ್ದ ಸಿಟ್ಟಿನ ಪರಿಚಯ ತೇಜಸ್ವಿಯವರಿಗಾಗುತ್ತದೆ.

ಇನ್ನೊಂದು ಸಂದರ್ಭದಲ್ಲಿ, ಕನ್ನಡದಲ್ಲಿ ಎಲ್ಲ ಹಂತದ ಕಲಿಕೆ ಬರಬೇಕು, ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಅನ್ನುತ್ತ ಅವರು ಹೇಳುವ ಇನ್ನೊಂದು ಮಾತು ಗಮನ ಸೆಳೆಯುತ್ತೆ:
ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೇರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ.

ಈ ಕಾಲದ ಹುಡುಗರು ಕನ್ನಡ ಸಾಹಿತ್ಯ ಓದಿಗೆ ದೊಡ್ಡ ನಮಸ್ಕಾರ ಹಾಕಿರುವಾಗ, ಇಂತಹ ಕೆಲವು ಕೃತಿಗಳು ಖಂಡಿತಾ ಅವರನ್ನು ಕನ್ನಡ ಪುಸ್ತಕದೆಡೆಗೆ ಸೆಳೆಯಬಲ್ಲವು. ಅಂಕಿತ ಪುಸ್ತಕದಲ್ಲಿ ಇದು one of the best seller ಅಂತಾ ಕೂಡಾ ಹೇಳಿದ್ರು. ನೀವು ಓದಿಲ್ಲ ಅಂದ್ರೆ ಖಂಡಿತ ಖರೀದಿ ಮಾಡಿ ಓದಿ, I am sure, you will enjoy it.

ಬುಧವಾರ, ಅಕ್ಟೋಬರ್ 7, 2009

ನೀನಾರಿಗಾದೆಯೋ ಓ ಕನ್ನಡಿಗ ?

ಉತ್ತರದ ನೆರೆ ನಾವೆಲ್ಲರೂ ಅಂದುಕೊಂಡದ್ದಕ್ಕಿಂತಲೂ ದೊಡ್ಡ ಮಟ್ಟದ ಹಾನಿ ಮಾಡಿದೆ.  ೨೫ ಲಕ್ಷ ಹೆಕ್ಟೆರ್ ಭೂಮಿಯಲ್ಲಿನ ಬೆಳೆ ನಾಶವಾಗಿದೆ. ಭತ್ತ, ತೊಗರಿಬೆಳೆ, ಜೋಳ, ಈರುಳ್ಳಿ, ಕಬ್ಬಿನಂತಹ ದಿನ ನಿತ್ಯದ ಅಗತ್ಯಕ್ಕೆ ಬೇಕಾದ ಬೆಳೆಗಳನ್ನು ಬೆಳೆಯುತ್ತಿದ್ದ ಕಲಬುರ್ಗಿ, ಬಿಜಾಪುರ, ಬೆಳಗಾವಿ, ರಾಯಚೂರು, ಧಾರವಾಡದ ಹೆಚ್ಚು ಕಮ್ಮಿ ಎಲ್ಲ ತಾಲೂಕಿನಲ್ಲಿಯ ಬೆಳೆಯೂ ಸಂಪೂರ್ಣ ನಾಶವಾಗಿದೆ. ಮನೆ, ಮಠ, ಹಸು-ಕರು ಹೀಗೆ ತನ್ನದೆಂದು ಇದ್ದ ಎಲ್ಲವನ್ನು ಕಳೆದುಕೊಂಡು ಬಾಳಿನ ಬೆಳಕೇ ಆರಿ ಹೋದಂತೆ ಕುಳಿತಿದ್ದಾನೆ ಅಲ್ಲಿನ ಕನ್ನಡಿಗ. ಮುಂದೇನು ಎಂಬ ದಾರಿ ಕಾಣದೇ ಆತಂಕದ ಮಡುವಿನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಆತನ ಸಹಾಯಕ್ಕೆ ಧಾವಿಸದಷ್ಟು ಕಟುಕ ಮನಸ್ಸು ಕನ್ನಡಿಗನದಾ?












ಬಿಹಾರದಲ್ಲೆಲ್ಲೋ ನೆರೆ ಬಂದರೆ, ಬೆಂಗಳೂರಿನ ಪ್ರತಿ ಕಂಪನಿಯಲ್ಲೂ ಪರಿಹಾರ ಸಂಗ್ರಹಿಸುವ ಕೆಲಸ ನಡೆಯುತ್ತೆ. ಎಷ್ಟೋ ಬಾರಿ ಅದನ್ನ ಕನ್ನಡಿಗನೇ ಮುಂದೆ ನಿಂತು ಮಾಡಿರುತ್ತಾನೆ. ತಮಿಳುನಾಡಲ್ಲಿ ಸುನಾಮಿ ಬಂದರೇ ಕನ್ನಡಿಗನೇ ಮುಂದೆ ನಿಂತು ಲಾರಿಯಲ್ಲಿ ಚಪಾತಿ ತುಂಬಿಕೊಂಡು ಹೋಗಿ ಅಲ್ಲಿನ ಸಂತ್ರಸ್ಥರ ಕಣ್ಣೀರು ಒರೆಸಲು ಮುಂದಾಗ್ತಾನೆ. ಓರಿಸ್ಸಾದಲ್ಲೆಲ್ಲೋ ಚಂಡಮಾರುತೆ ಬೀಸಿದರೆ, ಅಲ್ಲಿಗೆ ಕೂಡಲೇ ಧಾವಿಸಿ, ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗ್ತಾನೆ.  ಇವತ್ತು ಅವನ ಮನೆಗೆ ಬೆಂಕಿ ಬಿದ್ದಿದೆ, ಉಕ್ಕಿ ಬಂದ ತುಂಗೆ, ಕೃಷ್ಣೆಯರ ಅಬ್ಬರಕ್ಕೆ ತನ್ನದೆಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ಬೆತ್ತಲಾಗಿ ನಿಂತಿರುವ ಉತ್ತರದ ತನ್ನ ಅಣ್ಣ-ತಮ್ಮಂದಿರ ನೆರವಿಗೆ ಆತ ಮುಂದಾಗುತ್ತಾನಾ? ಅಥವಾ ಈಗಲೂ ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ ತನ್ನ ಪಾಡಿಗೆ ತಾನು ಇದ್ದು ಬಿಡ್ತಾನಾ? 

ಏನ್ ಗುರು ಬ್ಲಾಗಿನಲ್ಲಿ ಬಂದ ಒಂದು ಕವನವನ್ನು ಇಲ್ಲಿ ಹಾಗೇ ಹಾಕ್ತಾ ಇದೀನಿ.

ಅಂದೊಮ್ಮೆ...
ಕಾರ್ಗಿಲ್‌ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...

ಹಿಂದೊಮ್ಮೆ ...
ಲಾಥೂರ್‌, ಕಿಲಾರಿಯಲ್ಲಿ,
ಕಛ್‌, ಭುಜ್‌ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...

ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...

ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...

ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!

ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್‍ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...

ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ

ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!

ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!

ಸೋಮವಾರ, ಅಕ್ಟೋಬರ್ 5, 2009

ಇದಕ್ಕೆಲ್ಲ ಕೊನೆ ಎಂದು ?

ಕರ್ನಾಟಕದ ೧೫ಕ್ಕೂ ಹೆಚ್ಚು ಜಿಲ್ಲೆಗಳು ಹಿಂದೆಂದೂ ಕೇಳರಿಯದ ರೀತಿಯಲ್ಲಿ ನೆರೆಗೆ ತುತ್ತಾಗಿದ್ದು, ಜನ ಮನೆ ಮಠ ಎಲ್ಲ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ತಕ್ಷಣ ಸ್ಪಂದಿಸಬೇಕಾಗಿದ್ದ ರಾಜ್ಯ ಸರ್ಕಾರ ಸುತ್ತೂರು ಮಠದಲ್ಲಿ ಜನಗಳ ಸೇವೆ ಮಾಡೋದು ಹೇಗೆ ಅಂತ ಪಾಠ ಕಲಿತಾ ಇದ್ರಂತೆ. ನೆರೆ ಪೀಡಿತ ಜನರ ನೆರವಿಗೆ ಧಾವಿಸಿ, ಅವರ ಕಣ್ಣೀರು ಒರೆಸೋ practical ಕೆಲಸ ಮಾಡೋದು ಬಿಟ್ಟು, ಅದೇ ಜನಗಳ ಕಷ್ಟ ನಿವಾರಿಸೋದು ಹೇಗೆ ಅಂತ theory ಕಲಿತೀನಿ ಅಂತ ಮಠದಲ್ಲಿ ಕೂತ ಸರ್ಕಾರ, ಜನರ ನೆರವಿಗೆ ಧಾವಿಸೋ ಹೊತ್ತಿಗೆ ಅಲ್ಲಾಗಲೇ ೧೮೦ಕ್ಕೂ ಹೆಚ್ಚು ಜನರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಕಾಲಿಕ ಸಾವಿಗೀಡಾದ ನಮ್ಮ ಅಣ್ಣ-ತಮ್ಮ-ಅಕ್ಕ-ತಂಗಿಯರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸೋಣ.

ಇದೇ ವೇಳೆ, ಕೇಂದ್ರದಲ್ಲಿರುವ ಸರ್ಕಾರ ಕರ್ನಾಟಕದ ಬಗ್ಗೆ ತನಗಿರುವ ಮಲತಾಯಿ ಧೋರಣೆಯನ್ನು ಹೇಗೆ ಮುಂದುವರೆಸಿದೆ ಅನ್ನೋದನ್ನ ಇವತ್ತಿನ DNA ಮತ್ತು ಕನ್ನಡ ಪ್ರಭ ಪತ್ರಿಕೆಗಳ ವರದಿಗಳು ಹೇಳುತ್ತಿವೆ.


















ಅಲ್ಲಾ, ಇಂತಹ ಹೊತ್ತಲ್ಲೂ ಇವರಿಗೆ ರಾಜಕೀಯ ಲಾಭದ್ದೇ ಚಿಂತೆ ಅಂದ್ರೆ ಏನ್ ಹೇಳಬೇಕು. ರಾಜ್ಯದಲ್ಲಿ ೧೫ಕ್ಕೂ ಹೆಚ್ಚು ಜಿಲ್ಲೆಗಳು ನೆರೆಗೆ ತುತ್ತಾಗಿರುವುದು, ೧೮೦ಕ್ಕೂ ಹೆಚ್ಚು ಜನ ಸಾವೀಗಿಡಾಗಿ, ಆಂಧ್ರಕ್ಕಿಂತ ಅತಿ ಹೆಚ್ಚಿನ ನಷ್ಟ ಇಲ್ಲಿ ಆಗಿರುವ data ಕಣ್ಣ ಮುಂದೆ ಇದ್ದರೂ, ಆಂಧ್ರಕ್ಕೆ ಎಲ್ಲ ರೀತಿಯ ನೆರವು, ಕರ್ನಾಟಕಕ್ಕೆ ಬೇಕೋ ಬೇಡವೋ ಅನ್ನೋ ರೀತಿಯ ನೆರವು ಕೊಡ್ತಾ ಇರೋದನ್ನ ನೋಡಿದಾಗ, ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ, ಕನ್ನಡಿಗರ ಹಿತದ ಬಗ್ಗೆ ಅದೇಷ್ಟು ಕಾಳಜಿ ಇದೆ ಅನ್ನುವುದು ಗೊತ್ತಾಗಲ್ವ? ಇದೇ ಬಿ.ಜೆ.ಪಿ ಸರ್ಕಾರ ಕೇಂದ್ರದಲ್ಲಿದ್ದಿದ್ದರೆ ಪರಿಸ್ಥಿತಿ ಬೇರೆಯಾಗೇನು ಇರುತ್ತಿರಲಿಲ್ಲ. ಅವರ ಸರ್ಕಾರಕ್ಕೆ ಆಂಧ್ರದಿಂದ ಯಾರು ಸಪೋರ್ಟ್ ಕೊಡುತ್ತಿದ್ದರೋ, ಅವರ ಅಣತಿಯಂತೆ ಅವರಿಗೆ ಹೆಚ್ಚಿನ ನೆರವು ಸಿಗುತಿತ್ತು. ಕರ್ನಾಟಕಕ್ಕೆ ಯಾವತ್ತು ಚೊಂಬೇ ಗತಿ. ಇದಕ್ಕೆಲ್ಲ ಪರಿಹಾರವೆಂದರೆ, ಕರ್ನಾಟಕದ ಹಿತ ಕಾಯಬಲ್ಲ ಪ್ರಾದೇಶಿಕ ಪಕ್ಷವೊಂದರ ಉದಯ. ಅದು ಆಗೋವರೆಗೂ ಇಂತಹ ಅನ್ಯಾಯ, ಅಸಡ್ಡೆಗಳಿಗೆ ಕೊನೆಯಿಲ್ಲ ಅನ್ನಿಸುತ್ತೆ. ನೀವೇನ್ ಅಂತೀರಾ?

ಭಾನುವಾರ, ಸೆಪ್ಟೆಂಬರ್ 27, 2009

ಮನಸಾರೆ ಸವಿದೆ ಮನಸಾರೆ !

ಮನಸಾರೆ ಚಿತ್ರ ನೋಡಿದೆ. ಕನ್ನಡದಲ್ಲಿ ಇಂತಹದೊಂದು ಫ್ರೆಶ್ ಕಥೆ, ಅಷ್ಟೇ ಸೊಗಸಾದ ನಿರೂಪಣೆ, ಆ ನಿರೂಪಣೆಗೆ ಸಕತ್ ಆಗಿ ಜೊತೆ ನೀಡಿರುವ ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ, ಮನೋ ಮೂರ್ತಿ ಅವರ 3 ಹಾಡುಗಳು, ಎಲ್ಲ ಸೇರಿ ತೆರೆಯ ಮೇಲೆ ಒಂದೊಳ್ಳೆ ಅಭಿರುಚಿಯ ಚಿತ್ರವನ್ನು ಕನ್ನಡಿಗರ ಮಡಿಲಿಗೆ ಹಾಕಿದ್ದಾರೆ ಯೋಗರಾಜ್ ಭಟ್ ಅವರು.



ಇಂತಹ ಒಂದೊಳ್ಳೆ ಸ್ವಮೇಕ್ ಕಥೆಯ ಮೂಲಕ, ಬರೀ ರಿಮೇಕ್, ಅಲ್ಲೊಂಚೂರು ಇಲ್ಲೊಂಚೂರು ಕದಿಯೋದು, ವೃತ್ತಿ ಪರತೆಯಿಲ್ಲದೇ ಕಿತ್ತೋಗಿರೊ ಸಿನೆಮಾ ಮಾಡಿ ಕನ್ನಡದ ಪ್ರೇಕ್ಷಕನನ್ನ ಚಿತ್ರ ಮಂದಿರದಿಂದ ದೂರ ಮಾಡ್ತಾ ಇದ್ದ ಕೆಲವು ಕನ್ನಡ ಚಿತ್ರೋದ್ಯಮಿಗಳಿಗೆ ಚಿತ್ರ ರಂಗದಲ್ಲಿ ಗೆಲುವಿಗೆ ಬೇಕಿರುವುದು ವೃತ್ತಿಪರತೆ, ಚಿತ್ರ ನಿರ್ಮಾಣದ ಬಗ್ಗೆ ಪ್ರೀತಿ, ಯಾವ ಚಿತ್ರ ರಂಗಕ್ಕೂ ಕಮ್ಮಿ ಇಲ್ಲದಂತೆ ಕನ್ನಡ ಸಿನೆಮಾವನ್ನು ಮಾಡಿ ತೋರಿಸಬಹುದು ಅನ್ನುವ ಸ್ವಾಭಿಮಾನ ಅನ್ನುವ ಸಂದೇಶವನ್ನು ಯೋಗಿ ಸರಿಯಾಗಿ ಕಳಿಸಿದ್ದಾರೆ !

ಚಿತ್ರದ ವಿಶೇಷತೆಗಳು
  1. ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ. ಅಂಬಾರಿ, ಇಂತಿ ನಿನ್ನ ಪ್ರೀತಿಯ ನಂತರ ಸತ್ಯಾ ಅವರ ಕ್ಯಾಮರಾ ಕೈ ಚಳಕ ಇಲ್ಲಿ ಎದ್ದು ಕಾಣುತ್ತೆ. "ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ", " ನಾ ನಗುವ ಮೊದಲೇನೇ" ಹಾಡುಗಳ ಒಂದೊಂದು ಫ್ರೇಮ್ ಅಲ್ಲೂ ಅವರ ಪ್ರತಿಭೆ ಎದ್ದು ಕಾಣುತ್ತೆ
  2. ಅಯ್ಯೋ ಬಿಡಪ್ಪ ಮನೋ ಮೂರ್ತಿಯವರ ಸಂಗೀತದಲ್ಲಿ ಹೊಸತೆನಿಲ್ಲ, ಅದೇ ರಾಗ, ಅದೇ ಟ್ಯೂನ್ ಅನ್ನೋ ಆಪಾದನೆಯನ್ನು ಹೋಗಲಾಡಿಸುವಂತೆ, "ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳುತಿದೆ", " ನಾ ನಗುವ ಮೊದಲೇನೇ" ಹಾಡುಗಳು ಬಂದಿವೆ. ಚಿತ್ರ ಮಂದಿರದಿಂದ ಆಚೆ ಬಂದ ಮೇಲೆ ಈ ಹಾಡುಗಳನ್ನು ಪದೇ ಪದೇ ಗುನುಗುವಂತಾಗದಿದ್ದರೆ ಹೇಳಿ. ಮುಂಗಾರು ಮಳೆ, ಮಿಲನದ ನಂತರ ಮನೋ ಅವರ ಬೆಸ್ಟ್ ಕಂಪೋಸಿಶನ್ಸ್ ಈ ಚಿತ್ರದಲ್ಲಿವೆ.
  3. ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ದಿಗಂತ್-ಐಂದ್ರಿತಾ ಜೋಡಿ ಭಟ್ಟರ ಆಯ್ಕೆಯನ್ನು ಸಮರ್ಥಿಸುವಂತೆ ನಟಿಸಿದ್ದಾರೆ. ದಿಗಂತ್ ಸೊಲೊ ಹೀರೊ ಆಗಿ ಗೆದ್ದಿದ್ದಾರೆ ಎಂದೇ ಹೇಳಬಹುದು. ಇಂಟರವಲ್ ಆದ ಮೇಲೆ, ಅವರ ಕೆಲವು ಡಯಲಾಗ್ ಗಳಲ್ಲಿ ಮುಂಗಾರು ಮಳೆ ವಾಸನೆ ಬಡಿದರೂ ಅದು Enjoyable !. ಇನ್ನೂ ಐಂದ್ರಿತಾ " ನೀವು ಮೋಸ ಮಾಡಲ್ಲಾ ತಾನೇ? " ಅನ್ನೋ ದೃಶ್ಯದಲ್ಲಿ ನಿಮ್ಮ ಮನಸ್ಸಿಗೆ ಹತ್ರ ಆಗ್ತಾಳೆ :) ಇಂಟರವಲ್ ಆದ ಮೇಲಿನ ಭಾಗ ಒಂಚೂರು ಸ್ಲೋ, ಆದ್ರೆ ನಿಮಗೆ ಹಾಗನ್ನಿಸುವ ಮುನ್ನವೇ ಭಟ್ರ ಕಥೆಗೊಂದು ಟ್ವಿಸ್ಟ್ ಕೊಟ್ಟು ಬಿಡ್ತಾರೆ ಅನ್ನೋದು ವಿಶೇಷ.
  4. ಚಿತ್ರಕ್ಕೆ ಅದ್ಭುತವಾದ screen play ಹೆಣೆದಿರುವ ಅಪ್ಪಟ ಕನ್ನಡದ ಪ್ರತಿಭೆ ಪವನ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕು. "ಡಾಲರ್ಸ್ ಡೋಂಟ್ ವರ್ಕ್" ಅನ್ನೋ ಹುಚ್ಚು ಟೆಕ್ಕಿ ಪಾತ್ರದಲ್ಲಿ  ಅಭಿನಯಿಸಿರುವ ಪವನ್ ಕುಮಾರ್ ತರಹದ ಪ್ರತಿಭೆಗಳು ಇನ್ನಷ್ಟು ಬರಬೇಕು.
  5. ಈ ಚಿತ್ರದ ಎಲ್ಲಕ್ಕಿಂತ ದೊಡ್ಡ ವಿಶೇಷ ಅಂದರೆ, ಶಂಕರಪ್ಪ ಪಾತ್ರದಲ್ಲಿ ಅಭಿನಯಿಸಿರುವ ಬಾಗಲಕೋಟೆಯ ರಾಜು ತಾಳಿಕೋಟಿ. ಕಲಿಯುಗದ ಕುಡುಕ ಅನ್ನೋ ಹಾಸ್ಯ ನಾಟಕದ ಕ್ಯಾಸೆಟ್ ಮೂಲಕ ಉತ್ತರ ಕರ್ನಾಟಕದ ತುಂಬೆಲ್ಲ ಖ್ಯಾತಿ ಪಡೆದ ಈ ಕಲಾವಿದನನ್ನು ಭಟ್ಟರು ಬಳಸಿದ ಪರಿ ಸಕತ್ !! ಅಚ್ಚ ಧಾರವಾಡ ಕನ್ನಡದಲ್ಲಿ ಇವರು ನೀಡುವ ನಗೆ ಗುಳಿಗೆಗೆ ಚಿತ್ರ ಮಂದಿರದಲ್ಲಿದ್ದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಅವನೌನ್, ಅವರ timing, ಅವರ body language, ಅವರ ಡಯಲಾಗ್ ನಡು ಟಾಯ್ಮ್ ಹೋಗಿದ್ದೇ ಗೊತ್ತಾಗಲಿಲ್ಲ ನೋಡ್ರಿ .. :)
  6. ಉತ್ತರ ಕರ್ನಾಟಕ ಭಾಗದಲ್ಲಿನ ಕನ್ನಡವನ್ನು ಚಿತ್ರದ ಮೂಲಕ ಇಡೀ ನಾಡಿಗೆ ಪರಿಚಯಿಸುವ ಭಟ್ಟರ ಪ್ರಯತ್ನ ಹೊಗಳಿಕೆಗೆ ಅರ್ಹವಾದದ್ದು. ನಮ್ಮ ನೆಲದ ಚಿತ್ರಗಳಲ್ಲಿ ಕರ್ನಾಟಕದ ಕನ್ನಡದ ಎಲ್ಲ ಸೊಗಡುಗಳ ಬಳಕೆಯೂ ಆಗಬೇಕು, ಆ ಮೂಲಕ ಎಲ್ಲರ ಕನ್ನಡದ ಪರಿಚಯವೂ ನಾಡಿನ ಎಲ್ಲ ಕನ್ನಡಿಗರಿಗೂ ಆಗಬೇಕು. ರಾಷ್ಟ್ರ ಪ್ರಶಸ್ತಿ ವಿಜೇತ ಗುಲಾಬಿ ಟಾಕೀಸ್ ಚಿತ್ರದಲ್ಲಿ  ಕುಂದಾಪುರ ಕನ್ನಡದ  ಬಳಕೆಯೂ ಹೊಗಳಿಕೆಗೆ ಪಾತ್ರವಾದದ್ದು . ನಾಡಿನ ಎಲ್ಲ ಜನರ ಆಡು ಭಾಷೆಯನ್ನು ಸಿನೆಮಾ ಮೂಲಕ ಎಲ್ಲರಿಗೂ ಪರಿಚಯಿಸುವುದು ನಾಡಿಗರ ನಡುವೆ ಒಗ್ಗಟ್ಟು ಹೆಚ್ಚಲು ಸಹಕಾರಿ ಎನ್ನುವುದು ನನ್ನ ಅನಿಸಿಕೆ.
    ಇನ್ನೂ, captain of the ship, ಯೋಗರಾಜ್ ಭಟ್ ಅವರ ಬಗ್ಗೆ ಏನ್ ಹೇಳಲಿ. ಗಾಳಿಪಟದಲ್ಲಿ, ಸ್ವಲ್ಪ ಮಟ್ಟಿಗೆ ಮುಂಗಾರುಮಳೆಯ ಹ್ಯಾಂಗ್ ಒವರ್ ಇತ್ತು. ತಮ್ಮ ಹಿಂದಿನ ಎರಡು ಚಿತ್ರಗಳಿಗಿಂತ ಭಿನ್ನವಾಗಿ, ಹುಚ್ಚಾಸ್ಪತ್ರೆಯಲ್ಲೇ ಹೆಚ್ಚು ಕಮ್ಮಿ ನಡೆಯುವ ಒಂದು ಚಿತ್ರದಲ್ಲಿ ಎಲ್ಲೂ ಹದ ತಪ್ಪದಂತೆ, ಥಿಯೇಟರ್ ನಲ್ಲಿ ಕುಳಿತಿರೋರು ಬೋರಾಗಿ ವಾಚ್ ನೋಡದಂತೆ ಕಟ್ಟಿ ಕೂಡಿಸುವುದ್ರಲ್ಲಿ ಭಟ್ಟರು ಯಶಸ್ವಿಯಾಗಿದ್ದಾರೆ. ಆ ಮೂಲಕ ಭಟ್ಟರ success fluke ಅಲ್ಲ ಅನ್ನುವುದನ್ನ ಸಾಬೀತು ಮಾಡಿದ್ದಾರೆ.

    ಇನ್ನೇನ್ ಯೋಚನೆ ಮಾಡ್ತಾ ಇದ್ದಿರಾ? ಮನೆ ಮಂದಿಯನ್ನೆಲ್ಲ ಕರ್ಕೊಂಡು ಹೋಗಿ ಚಿತ್ರಮಂದಿರದಲ್ಲಿ ಮನಸಾರೆ ಚಿತ್ರವನ್ನು ಮನಸಾರೆ ಆನಂದಿಸಿ. ನಮ್ಮತನ ಹೊಂದಿರುವ ಒಂದೊಳ್ಳೆ ಚಿತ್ರವನ್ನು ಬೆನ್ನು ತಟ್ಟಿ, ಸೋಲಿನಿಂದ ಕಂಗೆಟ್ಟಿರುವ ಕನ್ನಡ ಚಿತ್ರ ರಂಗಕ್ಕೆ ಹೊಸ ಉಸಿರು ತುಂಬೋ ಕೆಲಸ ಮಾಡಿ.

    ನನ್ನ ರೇಟಿಂಗ್: 8/10

    ಇನ್ನಷ್ಟು ರೆವ್ಯೂಗಳು:
    Yogaraj Bhat strikes again with Manasaare
    http://movies.rediff.com/review/2009/sep/25/south-kannada-movie-review-manasaare.htm

    ಮನಸಿರೋರು ಮನಸಾರೆ ಸವಿಯಿರಿ 'ಮನಸಾರೆ'
    http://thatskannada.oneindia.in/movies/review/2009/09/25-manasaare-kannada-movie-review.html